Friday, 13 April 2018

visuddhi magga ವಿಶುದ್ಧಿಮಾರ್ಗದ ಸಮಾಧಿ ಭಾಗದಲ್ಲಿ ಅಧ್ಯಾಯ 11 ಸಮಾಧಿ ನಿದ್ದೇಸ

ಅಧ್ಯಾಯ 11ಸಮಾಧಿ ನಿದ್ದೇಸಆಹಾರ ಪಟಿಕ್ಕುಲ ಭಾವನಾ (ಆಹಾರದ ಕುರಿತು ಪ್ರತಿಕೂಲ ಧ್ಯಾನ):

ಆಹಾರ ಪ್ರತಿಕೂಲ ಭಾವನವು ಅರುಪ್ಪ (ಅರೂಪ) ಸ್ಥಿತಿಗಳ ನಂತರ ಬರುವುದು. ಯಾವುದು ಪೋಷಿಷುವುದೋ ಅದೇ ಪೋಷಕಾಂಶ ಅಥವಾ ಆಹಾರವಾಗಿದೆ. ನಾಲ್ಕು ವಿಧವಾದ ಆಹಾರಗಳಿವೆ. (ಅ) ಭೌತಿಕ ಆಹಾರ 
(ಆ) ಸ್ಪಶರ್ಿಕ ಆಹಾರ (ಪಸ್ಸ) ಇ) ಇಚ್ಛೆಯ ಆಹಾರ (ಚೇತನಾ) (ಈ) ಅರಿವಿನ ಆಹಾರ (ವಿಞ್ಞಾನ).
ಇಲ್ಲಿ ಯಾವುದು ಪೋಷಿಸುತ್ತದೆ? ಭೌತಿಕ ಆಹಾರವು ಕಾಯವನ್ನು ಎಂಟು ರೀತಿಯಲ್ಲಿ ಪೋಷಿಸುತ್ತದೆ. ಪಸ್ಸವು (ಸ್ಪರ್ಶ) 3 ವಿಧವಾದ ವೇದನೆಗಳನ್ನು (ಸುಖ, ದುಃಖ, ಸುಖ-ದುಃಖ) ಪೋಷಿಸುತ್ತದೆ.
ಇಚ್ಛೆಯು (ಚೇತನಾ) 3 ವಿಧದ ಭವ ಪಟಿಸಂದಿಯನ್ನು (ಪುನರ್ಜನ್ಮದ ಸರಪಳಿಯನ್ನು) ಪೋಷಿಸುತ್ತದೆ.
ವಿಞ್ಞಾನವು (ಅರಿವು) ಪುನರ್ಜನ್ಮ ತಾಳುವ ನಾಮರೂಪವನ್ನು ಪೋಷಿಸುತ್ತದೆ.
ಯಾವಾಗ ಭೌತಿಕ ಪೋಷಣೆಯಿರುವುದೋ ಆಗ ಅಂಟುವಿಕೆಯಿರುತ್ತದೆ. ಅದರಿಂದಾಗಿ ಅಪಾಯವುಂಟಾಗುತ್ತದೆ. ಎಲ್ಲಿ ಪೋಷಣೆಯಿರುವುದೋ ಅಲ್ಲಿ ಸ್ಪರ್ಶವಿದ್ದೇ ಇರುತ್ತದೆ, ಸಾನಿಧ್ಯವಿರುತ್ತದೆ. ಅದರಿಂದಾಗಿ ಅಪಾಯ ಇದ್ದೇ ಇರುತ್ತದೆ. ಎಲ್ಲಿ ಪೋಷಣೆಯಿರುತ್ತದೋ ಅಲ್ಲಿ ಇಚ್ಛೆಯು ಉಂಟಾಗುವುದು. ಹೀಗಾಗಿ ಅಲ್ಲಿ ಅಪಾಯವಿರುತ್ತದೆ. ಎಲ್ಲಿ ವಿಜ್ಞಾನ ಇರುತ್ತದೋ ಅಲ್ಲಿ ಪತಿಸಂಧಿಯು ಇರುತ್ತದೆ. ಪರಿಣಾಮವಾಗಿ ಅಪಾಯವು ಇರುತ್ತದೆ. ಭೌತಿಕ ಆಹಾರವು ಮಗುವಿನ ಮಾಂಸದಂತೆ ಅಪಾಯಕಾರಿ, ಸ್ಪರ್ಶವು ಎಚ್ಚರಹೀನ ಹಸುವಿನಂತೆ ಅಪಾಯಕಾರಿ, ಚೇತನಾವು ಕೆಂಡಗಳಂತೆ ಅಪಾಯಕಾರಿ, ವಿಜ್ಞಾನವು ನೂರು ಈಟಿಗಳಂತೆ ಅಪಾಯಕಾರಿ.
ಆದರೆ ಇಲ್ಲಿ ಭೌತಿಕ ಆಹಾರದ ಅಪಾಯ ಚಿಂತನೆ ಮಾಡಲಾಗಿದೆ. ಭೌತಿಕ ಆಹಾರವನ್ನು ತಿನ್ನಬಹುದು, ಕುಡಿಯಬಹುದು, ಅಗಿಯಬಹುದು ಮತ್ತು ಆಸ್ವಾದಿಸಬಹುದು. ಈ ಅರ್ಥದಲ್ಲಿ ಅದನ್ನು ಆಹಾರ ಎನ್ನಲಾಗಿದೆ.

ಆಹಾರ ಪ್ರತಿಕೂಲ ಸನ್ನಾ


ನಿಬ್ಬಾಣಕ್ಕೆ ತನ್ನ ಜೀವನವನ್ನು ಮೀಸಲಾಗಿಟ್ಟ ಭಿಕ್ಷುವು ಆಹಾರದಂತಹ ಪ್ರಮುಖ ವಿಷಯದಲ್ಲೂ ಅತ್ಯಂತ ಜಾಗರೂಕತೆಯಿಂದ ಅರಿತು ಆಹಾರ ಸೇವಿಸಬೇಕಾಗುತ್ತದೆ. ಇಲ್ಲದೆ ಇದ್ದರೆ ಆತನು ಆಹಾರಕ್ಕೆ ಅಂಟಿ ತಿಂಡಿಪೋತನಾಗಿ, ಸೋಮಾರಿಯಾಗಿ, ಇಂದ್ರೀಯಗಳ ಜಾಲದಲ್ಲಿ ಬಿದ್ದು ಹಾಳಾಗಬೇಕಾಗುತ್ತದೆ. ಆತ ಆಹಾರ ಸೇವಿಸುವುದೇ ದೇಹವು ಜೀವಂತವಾಗಿರಿಸಲು, ವೇದನೆಗಳನ್ನು ದಮಿಸಲು, ಅತೃಪ್ತಿಯನ್ನು ಅಂತ್ಯ ಮಾಡಲು, ಜೀವನ ಪರಿಶುದ್ಧನಾಗಲು ಹೊರತು ರುಚಿಯ ಆನಂದಕ್ಕಾಗಿ ಅಲ್ಲ, ಸಂತೋಷಕ್ಕಾಗಿ ಅಲ್ಲ, ದೇಹ ಪುಷ್ಠತೆಗಾಗಿ ಅಲ್ಲ, ದೇಹದಾಡ್ರ್ಯತೆಗಾಗಿ ಅಲ್ಲ.
ಈ ಧ್ಯಾನವು ಯಾರು ಆಹಾರದಲ್ಲಿ ಅತಿ ಅಂಟಿರುವರೋ ಅವರಿಗಾಗಿಯೇ ಇದೆ. ಈ ರೀತಿಯಲ್ಲಿ ಅವರು ಆಹಾರ ಪ್ರತಿಕೂಲಸನ್ಯಾ ಬೆಳೆಸಿ ಆಹಾರದ ಚಟದಿಂದ ಮುಕ್ತರಾಗಬೇಕಾಗುತ್ತದೆ.
ಈ ಧ್ಯಾನದಿಂದ ಸಿಗುವ ಲಾಭಗಳೆಂದರೆ ಆಹಾರ ನಿಜಸ್ವರೂಪ ಅರಿಯುತ್ತಾನೆ. ಐದು ರೀತಿಯ ರಾಗಗಳನ್ನು ಅರಿಯುತ್ತಾನೆ. ಭೌತಿಕ ರಾಶಿಯಿನ್ನು ಅರಿಯುತ್ತಾನೆ. ಅಶುಭಾ ಸನ್ಯಾ ಪಡೆಯುತ್ತಾನೆ. ಆಂತರಿಕ ದೇಹದ ಜಾಗರೂಕತೆಯ ಅರಿವು ಪಡೆಯುತ್ತಾನೆ. ಆಹಾರ ಲಾಲಸೆಯಿಂದ ಮುಕ್ತನಾಗುತ್ತಾನೆ. ವಿಮುಕ್ತಿಗೆ ಹತ್ತಿರವಾಗುತ್ತಾನೆ.
ಇಲ್ಲಿ ಧ್ಯಾನಿಯು ಏಕಾಂತ ಸ್ಥಳಕ್ಕೆ ತೆರಳಿ, ಪದ್ಮಾಸನದಲ್ಲಿ ಕುಳಿತು ಎಲ್ಲಾ ರೀತಿಯ ಯೋಚನೆಗಳಿಂದ ಮುಕ್ತವಾಗಿ, ತಾನು ಆಗಿದ, ನೆಕ್ಕಿದ, ತಿಂದ, ಕುಡಿದ ಆಹಾರದ ಬಗ್ಗೆ ಹೀಗೆ ಪುನರ್ ಅವಲೋಕನ ಮಾಡುತ್ತಾನೆ.
ಇಂಥ ಕಡೆ ನಾನು ನಾನಾರೀತಿಯ ರುಚಿಕರವಾದ ಆಹಾರವನ್ನು ಸೇವಿಸಿದೆ. ಆಹಾರವು ಜನರನ್ನು ಆನಂದಿಸುತ್ತದೆ. ಅವುಗಳ ಬಣ್ಣ, ಆಕಾರ, ಸ್ಪರ್ಶ, ರುಚಿ, ಸುಗಂಧವೆಲ್ಲಾ ಚೆನ್ನಾಗಿಯೇ ಇರುತ್ತದೆ. ಆದರೆ ದೇಹವನ್ನು ಪ್ರವೇಶಿಸಿದ ಬಳಿಕ ಅವು ಬಣ್ಣಗೆಡುತ್ತದೆ, ವಿಕಾರವಾಗುತ್ತದೆ, ಸ್ಪಶರ್ಿಸಲು ಅಸಹ್ಯವಾಗುತ್ತದೆ. ಅಸಹ್ಯ ರುಚಿಯಿಂದ ಕೂಡಿರುತ್ತದೆ, ಹಾಗು ದುನರ್ಾತ ಬೀರುತ್ತದೆ. ಅಶುಚಿಯಾಗಿರುತ್ತದೆ, ಕೊಳೆತ ರೀತಿಯಲ್ಲಿ ಇರುತ್ತದೆ ಎಂದು ಚಿಂತಿಸುತ್ತಾನೆ.
ಆಹಾರದ ಸಂಪಾದನೆಗಾಗಿ ಮಾನವ ಕೊಲ್ಲುತ್ತಾನೆ. ಕಳ್ಳತನ ಮಾಡುತ್ತಾನೆ, ಸುಳ್ಳು ಹೇಳುತ್ತಾನೆ, ಮೋಸ ಮಾಡುತ್ತಾನೆ, ಬೀದಿ ಬೀದಿ ಅಲೆಯುತ್ತಾನೆ, ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು!
ಆಹಾರವು ಹಾಗೇ ತಿನ್ನುತ್ತಾರೆ. ಅಥವಾ ಬೇಯಿಸಿ ತಿನ್ನುತ್ತಾರೆ. ಸರಿಯಾಗಿ ಸಿದ್ಧಪಡಿಸದಿದ್ದರೆ ಅಥವಾ ಯಾವುದಾದರೂ ಒಂದು ಹೆಚ್ಚಾಗಿ ತಿಂದರೂ, ಕಡಿಮೆ ತಿಂದರೂ ರೋಗ ಬರುತ್ತದೆ. ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು.
ಅಗಿದಮೇಲೆ ಆಹಾರ ಚೆನ್ನಾಗಿ ಕಾಣಿಸುವುದಿಲ್ಲ, ದುವರ್ಾಸನೆಯಿಂದ ಕೂಡುತ್ತದೆ. ಅದನ್ನು ಪುನಃ ಕೈಯಲ್ಲಿ ಯಾರೂ ಸ್ಪಶರ್ಿಸುವುದಿಲ್ಲ. ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು.
ದೇಹವನ್ನು ಒಳಹೊಕ್ಕ ಆಹಾರವು ವಾಂತಿಯಿಂದ ಹೊರಬಿದ್ದರೆ, ಆ ದೃಶ್ಯವು ಬೀಭತ್ಸವಾಗಿರುತ್ತದೆ, ಆ ಶಬ್ದವು ಅಸಹನೀಯವಾಗಿರುತ್ತದೆ. ದುವರ್ಾಸನೆಯಿಂದ ಕೂಡಿದ ಅದನ್ನು ಯಾರಾದರೂ ಸ್ಪಶರ್ಿಸುವರೇ? ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟಾವಾದುದು!.
ಆಹಾರ ಸೇವಿಸುವಾಗ ಆನಂದದಿಂದ ಜೊತೆಗೂಡಿ ಸೇವಿಸುತ್ತಾರೆ. ಆದರೆ ವಿಸಜರ್ಿಸುವಾಗ ಒಂಟಿಯಾಗಿ ಅಸಹ್ಯಪಟ್ಟು ವಿಸಜರ್ಿಸಬೇಕಾಗುತ್ತದೆ. ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು!
ನಮ್ಮ ಆಹಾರ ದೇಹವನ್ನು ಒಳಹೊಕ್ಕಿದ ಮೇಲೆ ಕೆಲವು ಭಾಗ ಜಂತುಗಳು, ಸೂಕ್ಷ್ಮಾಣುಜೀವಿಗಳು ಸೇವಿಸುತ್ತದೆ. ಕೆಲವು ಭಾಗದಿಂದ ಉಷ್ಣ ಉತ್ಪತ್ತಿಯಾಗುತ್ತದೆ. ಕೆಲವು ಭಾಗದಿಂದ ದೇಹ ಶಕ್ತಿ ಪಡೆದರೆ, ಶರೀರ ರಚನೆಯಾದರೆ ಮಿಕ್ಕ ಭಾಗವು ವಿಸರ್ಜನೆಯಾಗಿ ಹೊರಬೀಳುತ್ತದೆ. ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು.
ಅಹಾರದ ಸೇವನೆಯ ನಂತರ ನವ ದ್ವಾರಗಳಿಂದ ಅಸಹ್ಯಗಳು ಸ್ರವಿತವಾಗುತ್ತದೆ. ಸದಾ ದೇಹವನ್ನು ಶುಚಿಯಾಗಿಡಬೇಕಾಗುತ್ತದೆ. ಆದ್ದರಿಂದ ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು.
...ಹೀಗೆಲ್ಲಾ ಚಿಂತಿಸುತ್ತಾ ಆತನು ಪಂಚನಿವರಣಗಳಿಂದ ಮುಕ್ತನಾಗುತ್ತಾನೆ. ಹಾಗು ಧ್ಯಾನಗಳಿಂದ ಕೂಡಿ ಆತನು ಸಾಮಿಪ್ಯ ಸಮಾಧಿ ಪಡೆಯುತ್ತಾನೆ.
ಇಲ್ಲಿ ಧ್ಯಾನಿಯು ಏಕಾಂತದಲ್ಲಿ ಪದ್ಮಾಸೀನನಾಗಿ ಈ 10 ರೀತಿಯಲ್ಲಿ ಚಿಂತನೆ ಮಾಡುವುದು.

ಅ) ಆಹಾರಕ್ಕೆ ಹೊರಡುವಾಗ: ಇಲ್ಲಿ ಹೇಗೆ ನರಿಯ ಸ್ಮಶಾನಕ್ಕೆ ಆಹಾರಕ್ಕೆ ಹೋಗುವುದೋ ಹಾಗೆಯೇ ಭಿಕ್ಷುವು ಸಹಾ ಸುಂದರವಾದ ವಿಹಾರ, ಬೋಧಿವೃಕ್ಷದಂತಹ ಪವಿತ್ರ ಸ್ಥಳಗಳನ್ನು ಬಿಟ್ಟು ಅಶುಚಿಯಾದ ಆಹಾರಕ್ಕಾಗಿ ಹೊರಡಬೇಕಾಗುತ್ತದೆ. ದಾರಿಯಲ್ಲಿ ಕಂಡಂತಹ ಪ್ರತಿ ಅಶುಚಿಯನ್ನು ನೆನಪಿಗೆ ತಂದುಕೊಳ್ಳುತ್ತಾನೆ. ಉದಾಹರಣೆಗೆ: ಹಳ್ಳಿಯ ದ್ವಾರದ ಅಶುಚಿ, ಪ್ರಾಣಿಗಳ ಅಶುಚಿ, ದುನರ್ಾತ ಇತ್ಯಾದಿ ನೆನಪಿಗೆ ತಂದುಕೊಂಡು ನಿಜಕ್ಕೂ ಆಹಾರವು ಅಸಹ್ಯ ಎಂದು ಸ್ಪಷ್ಟೀಕರಿಸುವುದು.
ಆ) ಆಹಾರಕ್ಕೆ ಅಲೆದಾಡುವಾಗ: ಆಹಾರಕ್ಕಾಗಿ ಚಳಿಯೆನ್ನದೆ, ಬಿಸಿಲೆನ್ನದೆ ಅಲೆದಾಡಬೇಕಾಗುತ್ತದೆ. ಮಳೆಯಲ್ಲಿ ನೆನೆಯಬೇಕಾಗುತ್ತದೆ. ಕೆಲವರು ಆಹಾರ ನೀಡುವರು, ಕೆಲವರು ನೀಡದೆ ನಿರಾಕರಿಸುವರು. ಮುಂದೆ ಹೋಗಿ ಭಂತೆ ಎನ್ನುವರು, ಕೆಲವರು ನೋಡಿಲ್ಲದಂತೆ, ಕೇಳಿಲ್ಲದಂತೆ ವತರ್ಿಸಿದರೆ ಮತ್ತೆ ಕೆಲವರು ಮುಂದೆ ಹೋಗು ಬೋಳುತಲೆಯವ ಎನ್ನುವರು. ಧ್ಯಾನಿಯು ಧ್ಯಾನದ ವೇಳೆಯಲ್ಲಿ ಈ ಎಲ್ಲವನ್ನು ನೆನೆಯುತ್ತಾ ಓಹ್! ನಿಜಕ್ಕೂ ಆಹಾರವು ಅಸಹ್ಯಕರ ಎಂದು ಸ್ಪಷ್ಟೀಕರಿಸುತ್ತಾನೆ.
ಇ) ಆಹಾರ ಬಳಕೆ: ಇನ್ನು ಆಹಾರವನ್ನು ತಿನ್ನುವಾಗ ಬೆವರಿನ ಸೇರುವಿಕೆ, ಆಹಾರವನ್ನು ಕಲಿಸುವಾಗಿನ ಅಸಹ್ಯತೆ, ಅಗಿದು ನುಣ್ಣಗೆ ಮಾಡಿ ತಿನ್ನುವುದನ್ನು ಹೊರತೆಗೆದರೆ ಪುನಃ ಅದನ್ನು ತಿನ್ನಲಾರೆವು. ಹೀಗೆಲ್ಲಾ ಧ್ಯಾನದಲ್ಲಿ ಚಿಂತನೆ ಮಾಡುತ್ತಾ ನಿಜಕ್ಕೂ ಆಹಾರ ಅಸಹ್ಯಕರ ಎಂದು ಸ್ಪಷ್ಟೀಕರಿಸುವುದು.
ಈ) ಸ್ರವಿಸುವಿಕೆ: ಬುದ್ಧರು, ಪಚ್ಚೇಕಬುದ್ಧರು ಮತ್ತು ಚಕ್ರಚಾಲನೆ ಮಾಡುವ ಚಕ್ರವತರ್ಿ ಈ ಮೂವರಿಗೆ ನಾಲ್ಕುರೀತಿಯ ಸ್ರವಿಕೆ (ಪಿತ್ತ, ಕಫ, ಕೀವು ಮತ್ತು ರಕ್ತ) ಗಳಲ್ಲಿ ಒಂದು ಮಾತ್ರ ಆಗುವುದು. ಆದರೆ ಪುಣ್ಯಹೀನರಿಗೆ ನಾಲ್ಕು ಬಗೆಯ ಸ್ರವಿಕೆಗಳಾಗುವುವು. ಹೀಗಾಗಿ ಆಹಾರ ತಿನ್ನಿವುದರ ಈ ಪರಿಣಾಮಗಳನ್ನು ಚಿಂತನೆ ಮಾಡುತ್ತಾ ನಿಜಕ್ಕೂ ಆಹಾರ ಅಸಹ್ಯಕರ ಎಂದು ನಿಶ್ಚಯಿಸುವುದು.
ಉ) ಪಾತ್ರೆಯಂತೆ: ತಿಂದ ಆಹಾರವು ಚಿನ್ನದ ಪಾತ್ರೆಗಾಗಲಿ ಅಥವಾ ಬೆಳ್ಳಿಯ ಪಾತ್ರೆಗಾಗಲಿ ಹೋಗುವುದಿಲ್ಲ. ಬದಲಾಗಿ ಜೀಣರ್ಾಂಗ ವ್ಯೂಹದಲ್ಲಿ ಒಳಗೆ ಹೋಗುವುದು. ಅದು ವಷರ್ಾನುಗಟ್ಟಲೇ ಅಶುಚಿಯಾಗಿಯೇ ಇರುವುದು. ಆದ್ದರಿಂದಾಗಿ ನಿಜಕ್ಕೂ ಆಹಾರ ಅಸಹ್ಯಕರ ಎಂದು ನಿರ್ಧರಿಸುವುದು.
ಊ) ಅಜೀರ್ಣಯುತ ಆಹಾರ ಅಥವಾ ಬೆಂದಿಲ್ಲದ ಆಹಾರ: ಬೆಂದಿಲ್ಲದ ಆಹಾರ ಸೇವಿಸಿದಾಗ ಅದು ದೀರ್ಘಕಾಲದವರೆಗೆ ಜೀರ್ಣವಾಗದೆ ನಾನಾರೀತಿಯ ನೋವುಗಳನ್ನು, ದುವರ್ಾಸನೆಗಳನ್ನು ಸೃಷ್ಟಿಮಾಡುತ್ತವೆ. ಶರೀರದ ಹೊರಗೆಯೇ ಅವು ಕೊಳೆತು ನಾನಾರೀತಿಯ ಅಸಹ್ಯಗಳನ್ನು ಸೃಷ್ಟಿಸುವವು. ಇನ್ನು ಅವು ಒಳಗಿದ್ದು ಸೃಷ್ಟಿಸುವ ಭೀಭತ್ಸವನ್ನು ಯೋಚಿಸುತ್ತಾ ಅಹಾರವು ಅಸಹ್ಯಕರ ಎಂದು ಸ್ಪಷ್ಟವಾಗಿ ಅರಿಯುತ್ತಾನೆ.
ಋ) ಜೀಣರ್ಾಹಾರ: ಆಹಾರವು ಜೀರ್ಣವಾದ ನಂತರ ಅದು ಚಿನ್ನವಾಗುವುದಿಲ್ಲ ಅಥವಾ ಮುತ್ತುರತ್ನ, ರಜತವಾಗುವುದಿಲ್ಲ. ಬದಲಾಗಿ ನೊರೆ, ಗುಳ್ಳೆಕಾರಕ ಮಲವಾಗಿ ನಿಮರ್ಿತವಾಗುತ್ತದೆ. ಹೀಗಾಗಿ ಆಹಾರವು ಅಸಹ್ಯಕರ.
ಎ) ಪರಿಣಾಮ: ಅಹಾರವನ್ನು ಸರಿಯಾಗಿ ಬೇಯಿಸಿದರೆ, ಸಮತೋಲಿತ ಆಹಾರ ಸೇವಿಸಿದರೆ, ದೇಹದ ಸವರ್ಾಂಗಕ್ಕೂ ಬೆಳವಣಿಗೆ ಪೋಷಣೆಯಾಗುವುದು. ಆದರೆ ಕೆಟ್ಟದಾಗಿ ಬೇಯಿಸಿದಾಗ ಅದು ನಾನಾವಿಧವಾದ ರೋಗಗಳನ್ನು ತರಿಸಬಲ್ಲದು, ಇದು ಫಲವಾಗಿದೆ. ಆದ್ದರಿಂದ ಆಹಾರವು ಅಸಹ್ಯಕರವಾಗಿದೆ.
ಏ) ಹೊರಹರಿತ: ಆಹಾರ ಸೇವನೆಯ ನಂತರ ಒಂದು ಬಾಗಿಲಿನಿಂದ ಮತ್ತೊಂದು ಬಾಗಿಲಿಗೆ ಹೋಗುವಂತೆ ಶರೀರದ ಒಳಗೆ ಆಹಾರವು ಸಾಗುತ್ತಿರುತ್ತದೆ. ನಂತರ ಕೊನೆಗೆ ಮಲಮೂತ್ರವಾಗಿ ಹೊರಹಾಕಲ್ಪಡುವುದು. ಆದ್ದರಿಂದ ಆಹಾರವು ಅಸಹ್ಯಕರ.
ಐ) ಅಂಟುವಿಕೆಯ ಅಸಹ್ಯ: ಆಹಾರ ತಿನ್ನುವಾಗ ಚೆನ್ನಾಗಿಯೇ ಇರುತ್ತದೆ. ಆದರೆ ತಿಂದನಂತರ ಅಂಟಿಕೊಂಡಂತಹ ಕೈಯನ್ನು ತುಟಿ, ನಾಲಿಗೆ, ಹಲ್ಲು, ಬಾಯಿ, ಗಂಟಲನ್ನು ಚೆನ್ನಾಗಿ ಪದೇ ಪದೇ ತೊಳೆಯುತ್ತೇವೆ. ನಂತರ ವಾಸನೆ ಹೋಗಲಾಡಿಸಲು ಸಹಾ ತೊಳೆಯುತ್ತೇವೆ. ಆ ಅಹಾರವು ಕಾಲನಂತರ ನವರಂಧ್ರಗಳಿಂದ ಭಿನ್ನರೀತಿಯಲ್ಲಿ ಸ್ರವಿಕೆಯಾಗುವುದು. ಆದ್ದರಿಂದ ಆಹಾರವು ಅಸಹ್ಯಕರ.

ಹೀಗೆ ಈ 10 ರೀತಿಯಲ್ಲಿ ಆಹಾರವು ಅಸಹ್ಯಕರವೆಂದು ಧ್ಯಾನಿಯು ಚಿಂತನೆ ಮಾಡುತ್ತಾನೆ. ಪದೇಪದೇ ಅಸಹ್ಯತೆಯನ್ನೇ ಏಕಾಗ್ರಗೊಳಿಸುತ್ತಾನೆ. ಹೀಗೆಯೇ ಅಭ್ಯಾಸಿಸುತ್ತಾ, ನಿವರಣಗಳಿಂದ ಮುಕ್ತನಾಗಿ, ಉಪಚರ ಸಮಾಧಿಯನ್ನು ಪಡೆಯುತ್ತಾನೆ. ಹೀಗೆ ಆಹಾರವನ್ನು ಪ್ರತಿಕೂಲವಾಗಿ ಭಾವಿಸಿ ಅಸಹ್ಯತೆಯನ್ನು ಸಾಕ್ಷಾತ್ಕರಿಸುವುದರಿಂದಾಗಿ ಈ ಧ್ಯಾನ ಪದ್ಧತಿಗೆ ಆಹಾರ ಪಟಿಕ್ಕೂಲ ಭಾವನ ಎನ್ನುತ್ತಾರೆ.

ಆಹಾರ ಪಟಿಕ್ಕೂಲ ಭಾವನದ ಲಾಭಗಳು:

* ಜಿಹ್ವಾ ಲಾಲಸೆಯಿಂದ ಮುಕ್ತನಾಗುತ್ತಾನೆ.
* ಕೇವಲ ಜೀವಿಸುವುದಕ್ಕಾಗಿ ಮಾತ್ರ ಆಹಾರವೆಂಬ ತತ್ವದಂತೆ ಜೀವಿಸುತ್ತಾನೆ.
* ಇದೇರೀತಿಯಲ್ಲಿ ಇತರ ಇಂದ್ರೀಯಗಳ ಬಗ್ಗೆಯು ಜಿಗುಪ್ಸಕರ ಭಾವನೆ ವೃದ್ಧಿಯಾಗಿ ಅತನಲ್ಲಿ ಲೋಭ ಕ್ಷೀಣಿಸುತ್ತಾ ಹೋಗುತ್ತದೆ. ಆತನು ರೂಪಖಂಧವನ್ನು ಹಾಗು ಪಂಚೇಂದ್ರಿಯಗಳ ಅಪಾಯವನ್ನು ಸ್ಪಷ್ಟವಾಗಿ ಅರಿಯುತ್ತಾನೆ.
* ಅಶುಭಾ ಧ್ಯಾನಗಳಲ್ಲಿ ಅಶುಭ ನಿಮಿತ್ತಗಳಲ್ಲಿ ಸ್ಥಿರವಾಗುತ್ತಾನೆ.
* ಈ ಜನ್ಮದಲ್ಲಿ ಮುಕ್ತನಾಗದೆ ಹೋದರೂ ಸುಗತಿ ಪಡೆಯುತ್ತಾನೆ.
ಇಲ್ಲಿಗೆ ಆಹಾರ ಪ್ರತಿಕೂಲಸಞ್ಞ ಮುಗಿಯಿತು.
****************************************************************************

ಚತುಧಾತುವವತ್ಥಾನ ಭಾವನ:


ಈಗ ಚತುಧಾತುವವತ್ಥನ ಭಾವನದ ಬಗ್ಗೆ ವಿವರಣೆಯಿದೆ. ಈ ಧ್ಯಾನವು ಆಹಾರ ಪಟಿಕ್ಕೂಲ ಭಾವನದ ನಂತರ ಬರುವುದು. ಚತುಧಾತು ಎಂದರೆ ನಾಲ್ಕು ಧಾತುಗಳು ಎಂದರ್ಥ. ಹಾಗು ವವತ್ಥಾನ ಎಂದರೆ ವಿವರಣೆ, ಸ್ಪಷ್ಟೀಕರಣೆ, ವಿಶ್ಲೇಷಣೆ ಎಂದರ್ಥವಾಗಿದೆ. ಅಂದರೆ: ನಾಲ್ಕು ಧಾತುಗಳ ಬಗ್ಗೆ ವಿಶ್ಲೇಷಣೆ ಎಂದರ್ಥವಾಗಿದೆ.
ಈ ಧ್ಯಾನದ ಬಗ್ಗೆ ತಿಪಿಟಕಗಳಲ್ಲಿ ಎರಡುರೀತಿ ವಿವರಣೆಯಿದೆ. ಒಂದು ಸಂಕ್ಷಿಪ್ತವಾಗಿ ಮತ್ತು ಇನ್ನೊಂದು ವಿವರವಾಗಿ.
ಮಹಾಸತಿಪಟ್ಠಾನದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದರೆ, ಮಹಾಹತ್ಥಿಪಾಲೋಪಮ ಸುತ್ತ ಹಾಗು ರಾಹುಲೋವಾದ ಸುತ್ತ ಮತ್ತು ಧಾತುವಿಭಂಗ ಸುತ್ತದಲ್ಲಿ ವಿವರವಾಗಿ ಸ್ಪಷ್ಟೀಕರಿಸಲ್ಪಟ್ಟಿದೆ.
ಚತುಧಾತುವವಥ್ಥನ (ಧಾತುಗಳ ವಿಶ್ಲೇಷಣಾ ಧ್ಯಾನ)
ಇಲ್ಲಿ ಸಾಧಕನು (ಭಿಕ್ಷುವು) ತನ್ನ ಶರೀರವನ್ನು ಯಥಾಭೂತವಾಗಿ ಅದು ಹೇಗಿದೆಯೋ ಹಾಗೆ ಅರಿಯುತ್ತಾನೆ. ದೇಹವು ನಾಲ್ಕು ಮಹಾಭೂತಗಳಾದ ಪೃಥ್ವಿ, ಜಲ, ವಾಯು, ಅಗ್ನಿಗಳಿಂದಾದ ರೂಪವಷ್ಟೇ ಹೊರತು ಇದು ನನ್ನದಲ್ಲ, ನಾನಲ್ಲ ಮತ್ತು ನನ್ನ ಆತ್ಮವಲ್ಲ ಎಂದು ಯತಾರ್ಥವಾಗಿ ಅರಿಯುತ್ತಾನೆ. ನಾಲ್ಕು ಧಾತುಗಳ ಯತಾರ್ಥ ಅರಿಯುವಿಕೆಯು ಈ ಧ್ಯಾನದ ಲಕ್ಷಣವಾಗಿದೆ. ಇಲ್ಲಿ ಶೂನ್ಯತೆಯನ್ನು ಅರ್ಥಮಾಡಿಕೊಳ್ಳುವಿಕೆಯೇ ಕ್ರಿಯೆಯಾಗಿದೆ. ಇದು ನಾನು ಅಥವಾ ಆತ್ಮದ ಯೋಚನೆಗಳಿಂದ ವಿಮುಕ್ತವಾದಾಗ ವ್ಯಕ್ತವಾಗುತ್ತದೆ. ಈ ಧ್ಯಾನವು ಬುದ್ಧಿವಂತರಿಗೆ ನೀಡಲಾಗುತ್ತದೆ.
ಈ ಧ್ಯಾನದ ಲಾಭಗಳೆಂದರೆ : ಭಿಕ್ಷುವು ಭಯದಿಂದ, ಪ್ರಾಪಂಚಿಕತೆಯಿಂದ, ಅತೃಪ್ತಿಯಿಂದ, ಪ್ರಿಯ ಮತ್ತು ಅಪ್ರಿಯ ಇಂದ್ರಿಯ ಸುಖಗಳಿಂದ, ಸ್ತ್ರೀ ಅಥವಾ ಪುರುಷ ಎಂಬ ಗ್ರಹಿಕೆಗಳಿಂದ ಮುಕ್ತನಾಗುತ್ತಾನೆ. ಪ್ರಜ್ಞಾವಂತನಾಗುತ್ತಾನೆ. ಸೋತಪನ್ನ ಸ್ಥಿತಿಗೆ ಹತ್ತಿರವಾಗುತ್ತಾನೆ. ಮಾನಸಿಕ ಸ್ಥಿತಿಗಳು, ಸ್ವಚ್ಛವಾಗುತ್ತದೆ. ತನ್ನ ಶರೀರವನ್ನು ಪೂರ್ಣ ಹತೋಟಿಯಲ್ಲಿ ಇಡುತ್ತಾನೆ.

ಧ್ಯಾನ ವಿಧಾನ : 

ಇಲ್ಲಿ ಭಿಕ್ಷುವು ನಿಶ್ಶಬ್ದ, ನಿರ್ಜನ ಏಕಾಂತ ಸ್ಥಳದಲ್ಲಿ ನೆಲೆಸಿ ಪದ್ಮಾಸನದಲ್ಲಿ ಕುಳಿತು, ಅಕುಶಲ ಸ್ಥಿತಿಗಳಿಂದ ಮುಕ್ತನಾಗಿ ಈ ರೀತಿ ಚಿಂತನೆ ಮಾಡುತ್ತಾನೆ. ಈ ಶರೀರವು ಕೇವಲ 4 ಧಾತುಗಳಿಂದ ಆಗಿದೆ. ಅವೆಂದರೆ ಘನ (ಪೃಥ್ವಿ), ದ್ರವ (ಜಲ) ಅನಲ (ವಾಯು) ಮತ್ತು ಉಷ್ಣ (ತೇಜೋ) ಹೀಗಾಗಿ ಇದು ಕೇವಲ ಧಾತುಗಳಿಂದ ಕೂಡಿದ್ದು, ಇಲ್ಲಿ ಯಾವ ಜೀವಿಯಾಗಲಿ, ಆತ್ಮವಾಗಲಿ ಇಲ್ಲ. ಇದು ನನ್ನದಲ್ಲ ಹಾಗು ನಾನು ಅಲ್ಲ ಎಂದು ಚಿಂತಿಸುತ್ತಾನೆ.
ಭಿಕ್ಷುಗಳೇ, ನುರಿತ ಕಟುಕನೊಬ್ಬನು ಹಸುವನ್ನು ಕೊಂದು ದಾರಿಯ ಬದಿಯಲ್ಲಿ ತುಂಡು ತುಂಡಾಗಿ ಮಾಂಸವನ್ನು ಇಟ್ಟಿರುತ್ತಾನೆ. ಹಾಗೆಯೇ ಭಿಕ್ಷುಗಳೇ ನೀವು ಸಹಾ ಈ ದೇಹವನ್ನು ಮಾನಸಿಕವಾಗಿ ವಿಭಜಿಸಿ ಇದು ಘನದಾತು, ಇದು ದ್ರವಧಾತು, ಇದು  ತೇಜೋ ಧಾತು ಮತ್ತು ಇದು ಅನಿಲಧಾತು ಎಂದು ವಿಭಜಿಸಿ ವಿಶ್ಲೇಷಿಸಿ.
ನಮ್ಮ ಶರೀರದಲ್ಲಿರುವ ಘನಧಾತುಗಳೆಂದರೆ ತಲೆಗೂದಲು, ತಲೆ, ಉಗುರು, ಹಲ್ಲುಗಳು, ಚರ್ಮ, ಮಾಂಸ, ಸ್ನಾಯು, ನಾಡಿಗಳು, ನರಗಳು, ಮೂಳೆಗಳು, ಅಸ್ತಿಮಚ್ಚೆ. ಮೂತ್ರಪಿಂಡ, ಹೃದಯ, ಶ್ವಾಸಕೋಶ, ವಪೆ, ಕರುಳು, ಗಂಟಲು, ಮೆದುಳು, ಮಲ ಇತ್ಯಾದಿ.
ನಮ್ಮ ಶರೀರದಲ್ಲಿರುವ ದ್ರವಧಾತುಗಳೆಂದರೆ - ಪಿತ್ತರಸ, ಜೊಲ್ಲು, ಕೀವು, ರಕ್ತ, ಬೆವರು, ಕೊಬ್ಬು ಕಣ್ಣೀರು, ತೈಲ, ಮೂಗಿನ ಸ್ರಾವ, ಮೂತ್ರ ಇತ್ಯಾದಿ.
ನಮ್ಮ ಶರೀರದಲ್ಲಿರುವ ಉಷ್ಣತೆಯೆಂದರೆ ಸಾಧಾರಣ ತಾಪ, ಜ್ವರದ ತಾಪ, ಆಹಾರದಿಂದಾದ ತಾಪ, ಮನಸ್ಸಿನ ಒತ್ತಡದಿಂದ ತಾಪ ಇತ್ಯಾದಿ.
ನಮ್ಮ ಶರೀರದಲ್ಲಿರುವ ವಾಯುವೆಂದರೆ ನಮ್ಮ ದೇಹದಲ್ಲಿ ಮೇಲ್ಮುಖವಾಗಿ ಹರಿಯುವ ವಾಯು, ಕೆಳಮುಖವಾಗಿ ಹರಿಯುವ ವಾಯು, ಕಿಬ್ಬೊಟ್ಟಯಲ್ಲಿರುವ ವಾಯು, ಬೆನ್ನನಲ್ಲಿರುವ ವಾಯು, ಶ್ವಾಸಕೋಶದಲ್ಲಿರುವ ವಾಯು, ಅಂಗಗಳಿರುವ ವಾಯು ಉಶ್ವಾಸ ಮತ್ತು ನಿಶ್ವಾಸ.
ಹೀಗೆ ನಮ್ಮ ಶರೀರದಲ್ಲಿ ಕೇವಲ 4 ಧಾತುಗಳಿವೆ ಹೊರತು ಆತ್ಮವಿಲ್ಲ. ಹಾಗು ಈ ಶರೀರ ನಮ್ಮದಲ್ಲ ಹಾಗು ನಾನು ಅಲ್ಲ ಎಂದು ಯತಾರ್ಥವಾಗಿ ಅರಿಯುತ್ತಾರೆ.
ಹಾಗೆಯೇ ಆತನು ಈ ಶರೀರದ ಅಂಗಗಳು ಎಲ್ಲೆಲ್ಲಿವೆ, ಅವುಗಳ ರಚನೆ ಹೇಗಿದೆ. ಆವುಗಳ ಧಾತುಗಳು ಅವುಗಳ ಕಾರ್ಯ, ಅವುಗಳ ಲಕ್ಷಣ ಗಮನಿಸುತ್ತಾ ಇಲ್ಲಿ ಯಾವುದು ನಾನಲ್ಲ, ನನ್ನ ಆತ್ಮವಲ್ಲ, ನಾನಲ್ಲ ಎಂದು ಅರಿಯುತ್ತಾನೆ.
ಈ ಶರೀರವು ಹಿಂದಿನ ಜನ್ಮದ ಕರ್ಮದ ಅನಾಸಾರವಾಗಿ ಮತ್ತು ಚಿತ್ತದಿಂದ ಉತ್ಪತ್ತಿಯಾಗಿದೆ ಹಾಗು ಉಷ್ಣತೆಯಿಂದ ಮತ್ತು ಆಹಾರದಿಂದ ಇವು ರಚಿತವಾಗಿದೆ ಎಂದು ಅರಿಯುತ್ತಾನೆ.
ಇಡೀ ಶರೀರ ಅಷ್ಟೇ ಅಲ್ಲ, ಇಡೀ ಬ್ರಹ್ಮಾಂಡವು ಈ ನಾಲ್ಕು ಮಹಾಧಾತುಗಳಿಂದ ರೂಪಿತವಾಗಿವೆ ಎಂದು ಅರಿಯುತ್ತಾನೆ.
ಈ ಧಾತುಗಳು ಸ್ತ್ರೀಯು ಅಲ್ಲ, ಪುರುಷನು ಅಲ್ಲ. ಕೇವಲ ಧಾತುಗಳಾಗಿವೆ ಎಂದು ಅರಿಯುತ್ತಾನೆ.
ಆತ ಧಾತುಗಳನ್ನು ಸ್ಪಷ್ಟವಾಗಿ ಅರಿಯುತ್ತಾನೆ. ಹೇಗೆಂದರೆ : ಪೃಥ್ವಿಯು (ಘನವು ಕಠಿಣವಾದ ಲಕ್ಷಣವನ್ನು ಹೊಂದಿದೆ. ಅದರ ಕ್ರಿಯೆಯು ಸ್ಥಾಪಿಸುವುದಾಗಿದೆ. ಅದು ಪಡೆಯುವಿಕೆಯಿಂದ ವ್ಯಕ್ತವಾಗುತ್ತದೆ ಅಷ್ಟೇ. (ಜಲ/ದ್ರವ)ವು ಹರಿಯುವ ಲಕ್ಷಣವನ್ನು ಹೊಂದಿದೆ. ಇದರ ಕ್ರಿಯೆಯು ಏನೆಂದರೆ ತೀವ್ರತೆ ಉಂಟುಮಾಡುವುದು. ಇದು ಅಂಟುವಿಕೆಯಿಂದ ವ್ಯಕ್ತವಾಗುತ್ತದೆ. ತೇಜೋದಾತುವು ಉಷ್ಣತೆಯ ಲಕ್ಷಣ ಹೊಂದಿದೆ. ಇದರ ಕ್ರಿಯೆ ಏನೆಂದರೆ ನಿರ್ವಹಣೆ ಮಾಡುವುದು (ಪೋಷಣೆ ಮಾಡುವುದು). ವಾಯು ಧಾತುವು ಉಬ್ಬುವಿಕೆಯ ಲಕ್ಷಣ ಹೊಂದಿದೆ. ಇದರ ಕ್ರಿಯೆ ಚಲನೆಯಾಗಿದೆ. ಇದು ಸಾಗಿಸುವಿಕೆಯಿಂದ ವ್ಯಕ್ತವಾಗುತ್ತದೆ.
ಪೃಥ್ವಿ ದ್ವಾರವು ಎತ್ತಿಹಿಡಿಯುತ್ತದೆ
ಅಪೋಧಾತುವು ಹರಿಯುತ್ತದೆ
ತೇಜಧಾತುವು ಮೇಲ್ಮುಖವಾಗಿ ಹೋಗುವಂತೆ ಮಾಡುತ್ತದೆ.
ವಾಯು ಉರುಳುವಂತೆ ಮಾಡುತ್ತದೆ.
ದೇಹವನ್ನು ರೂಪಖಂಧವೆನ್ನುತ್ತಾರೆ. ಅಂದರೆ ಧಾತುಗಳ ರಾಶಿಯಾಗಿದೆ. ಅಂದರೆ ಪೃಥ್ವಿರಾಶಿ, ಅಪೋರಾಶಿ, ತೇಜೋರಾಶಿ ಮತ್ತು ವಾಯುರಾಶಿ. ಪ್ರತಿ ರಾಶಿಯಲ್ಲಿ ಮತ್ತು ತತ್ವಗಳು ಇರುತ್ತದೆ. ಆದರೆ ಒಂದು ಮಾತ್ರ ಪ್ರಾಬಲ್ಯ ವಹಿಸಿರುವಾಗ ಅದರದೇ ಹೆಸರು ನೀಡಲಾಗುತ್ತದೆ. ಉದಾಹರಣೆಗೆ ಪೃಥ್ವಿ ರಾಶಿಯಲ್ಲಿ ಪೃಥ್ವಿಯು ಪ್ರಾಬಲ್ಯ ವಹಿಸಿರುತ್ತದೆ. ಹಾಗೆಯೇ ಅಪೋ, ತೇಜೋ ಮತ್ತು ವಾಯುಗಳು ಸಹ ಇರುತ್ತದೆ.
ಈ ನಾಲ್ಕು ಬೇರೆಯಾಗದು, ಜೊತೆಯಲ್ಲೇ ಇರುತ್ತದೆ. ಒಂದಕ್ಕೊಂದು ಆಧಾರವಾಗಿ, ಒಂದಕ್ಕೊಂದು ನಿವರ್ಾಹಕವಾಗಿ, ಸಹಾಯಕವಾಗಿ ಇರುತ್ತವೆ.
ಆತನು ಮುಂದೆ ಇವುಗಳಲ್ಲಿ ಸಾಮಿಪ್ಯತೆ ಮತ್ತು ವಿರುದ್ಧತೆ ಗಮನಿಸುತ್ತಾನೆ. ಹೇಗೆಂದರೆ ಪೃಥ್ವಿ ಮತ್ತು ಅಪೋಗಳಿಗೆ ತೂಕವಿರುತ್ತದೆ, ಆದ್ದರಿಂದ ಅವು ಸಾಮಿಪ್ಯ, ತೇಜೋ ಮತ್ತು ವಾಯುಗಳು ಹಗುರವಾಗಿರುತ್ತದೆ. ಇವು ಸಹಾ ಸಾಮಿಪ್ಯತೆ ಹೊಂದಿರುತ್ತದೆ. ಜಲ ಮತ್ತು ತೇಜೋಗಳು ವಿರುದ್ಧವಾಗಿರುತ್ತದೆ. ಅನ್ಯೋನ್ಯತೆಯಲ್ಲಿ ಪ್ರಥ್ವಿ ಮತ್ತು ಅಪೋ ವಿರುದ್ಧವಾಗಿರುತ್ತದೆ. ಪೃಥ್ವಿ ಮತ್ತು ವಾಯು ವಿರುದ್ಧವಾಗಿದೆ. ಈ ರೀತಿಯಲ್ಲಿ ಆತನು ಇವುಗಳ ಸಾಮಿಪ್ಯ ಮತ್ತು ವಿರುದ್ಧತೆ ಅರಿಯುತ್ತಾನೆ.
ಹೇಗೆ ಗೊಂಬೆಯೊಂದಕ್ಕೆ ಚಲನೆ, ಮಾತನಾಡುವಿಕೆ ಎಲ್ಲವನ್ನು ಸಿದ್ಧಪಡಿಸಿದರೆ ಅದಕ್ಕೆ ಆತ್ಮವಿಲ್ಲವೋ, ಹಾಗೆಯೇ ಧಾತುಗಳಿಂದ ದೇಹಕ್ಕೆ ಆತ್ಮವಿಲ್ಲ. ಕೇವಲ ಕ್ರಿಯೆಗಳು ಜರುಗುತ್ತವೆ. ನಾನು ಎಂಬುದೇ ಇಲ್ಲ. ಇನ್ನೂ ನನ್ನದೆಲ್ಲಿ? ಹೀಗೆ ಆತನು ವಿಶ್ಲೇಷಿಸುತ್ತಾನೆ. ಹೀಗೆಯೇ ಧ್ಯಾನಿಸುತ್ತಾ ಆತನು ಪಂಚನಿವರಣಗಳಿಂದ ಮುಕ್ತನಾಗಿ ಮತ್ತು ಧ್ಯಾನಗಳಿಂದ ಕೂಡಿ ಸಾಮಿಪ್ಯ ಸಮಾಧಿ ಪಡೆಯುತ್ತಾನೆ. ಅಥವಾ ಸೋತಪನ್ನ ಸ್ಥಿತಿಗೆ ಸಮೀಪವಾಗಿರುತ್ತಾನೆ.
ಇಲ್ಲಿಗೆ ಧಾತು ವಿಶ್ಲೇಷಣೆ ಸಂಕ್ಷಿಪ್ತವಾಗಿ ಮುಗಿಯಿತು ಇಲ್ಲಿಗೆ ಆಹಾರ ಪತಿಕೂಲಸನ್ಯಾ ಸಮಾಧಿ ಮುಗಿಯಿತು.


ಧಾತು ವಿಶ್ಲೇಷಣೆ ಸಮಾಧಿಯ ಮಹತ್ತರ ಲಾಭಗಳು ಯಾವುವು ?

:
ಹೀಗೆ ಧ್ಯಾನಿಯು ಧಾತುಗಳ ಬಗ್ಗೆ ಗಮನನೀಡುತ್ತಾ ಹೋದಾಗ ಧಾತುಗಳ ಸ್ಪಷ್ಟತೆ ಆತನಿಗೆ ತಿಳಿಯುವುದು. ಇದೇ ಧ್ಯಾನದಲ್ಲಿ ಆತನಿಗೆ ಸಾಮೀಪ್ಯ ಸಮಾದಿಯು ಸಿಗುವುದು.
ಯಾವ ಧ್ಯಾನಿಯು ಈ ನಾಲ್ಕು ಧಾತು ವಿಶ್ಲೇಷಣೆಯಲ್ಲಿ ತೊಡಗುವನೋ ಆತನಲ್ಲಿ ಜೀವಿಗಳ ಬಗ್ಗೆ ಆತ್ಮಗ್ರಹಿಕೆಯು ತೊಡೆದುಹೋಗುತ್ತದೆ. ಆತನು ಶೂನ್ಯತೆಯೇ ಕಾಣುತ್ತಾನೆ. ಆತನು ಶರೀರದಲ್ಲಿ ಯಾವುದೇ ರೀತಿಯಲ್ಲಿಯೂ ಆಸಕ್ತಿ ತಾಳದೆ, ಜೀವಿಗಳ ಭಿನ್ನತೆ, ಸಾಮ್ಯತೆ ಸ್ಪಷ್ಟವಾಗಿ ಅರಿಯುತ್ತಾನೆ. ಜೀವಿಗಳ ಬಗ್ಗೆ ತೊಡೆದುಹೋಗಿ ಕೇವಲ ಧಾತುಗಳೇ ಆತನಿಗೆ ಕಾಣಿಸುತ್ತದೆ. ಹೀಗಾಗಿ ಆತನಲ್ಲಿ ಭಯ, ಲೋಭ, ಬೇಸರವೂ ಅಳಿದುಹೋಗುವುದು. ಆತನಲ್ಲಿ ಪ್ರಿಯ-ಅಪ್ರಿಯ ಅಪೇಕ್ಷೆಗಳು ಇಲ್ಲದಂತಾಗುತ್ತವೆ. ಮುಕ್ತನಾಗದಿದ್ದರೆ ಸುಗತಿಯಂತು ಖಂಡಿತ ಪಡೆಯುತ್ತಾನೆ.
ಚತುಧಾತುವವತ್ಥಾನ ಸದಾ ಪ್ರಜ್ಞಾವಂತನ ವಿಹಾರ ಸ್ಥಾನ. ಇದೇ ಉದಾತ್ತ ಧ್ಯಾನಿಸಿಂಹನ ನೆಚ್ಚಿನ ಆಟದ ಮೈದಾನ.
ಇದು ಚತುವವತ್ಥಾನ ಭಾವನದ ಸಂಕ್ಷಿಪ್ತ ವಿವರಣೆಯಾಗಿದೆ.
ಸಮಾಧಿ ವಿಕಾಸದ ಪರಿಸಮಾಪ್ತಿ
ಇಲ್ಲಿಗೆ ಸಮಾಧಿಯನ್ನು ಹೇಗೆ ವಿಕಸಿಸಬೇಕು ಎಂಬ ವಿಷಯದ ಎಲ್ಲಾ ಧ್ಯಾನಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಸಮಾಧಿ ಎಂದರೇನು? ಇತ್ಯಾದಿ ಪ್ರಕರಣಗಳಿಗೆಲ್ಲಾ ಉತ್ತಮವಾಗಿ ಸ್ಪಷ್ಟೀಕರಣ ನೀಡಲಾಗಿದೆ.

ಸಮಾಧಿಯ ಮಹತ್ತರ ಲಾಭಗಳು:

8. ಧ್ಯಾನಭಿವೃದ್ಧಿಯ ಲಾಭಗಳೇನು? ಐದು ವಿಧದ ಲಾಭಗಳಿವೆ:
ಅ) ಇಲ್ಲೇ ಈಗಲೇ ಸುಖಮಯವಾಗಿ ವಿಹರಿಸುವಿಕೆ: ಅಂದರೆ ಮಾನಸಿಕ ನೆಮ್ಮದಿ, ಸಮಾಧಾನ, ಒತ್ತಡ ಮುಕ್ತ ಸುಖವನ್ನು ಗಳಿಸುತ್ತಾನೆ. ನಾವು ಸಮಾದಿ ಸುಖದಲ್ಲಿ ಇಡೀದಿನ ನೆಲೆಸುತ್ತೇವೆ ಎಂದು ಅರಹಂತರು ಹೇಳಿಕೊಳ್ಳುತ್ತಾರೆ.
ಆ) ಪ್ರಜ್ಞಾವನ್ನು ಸಂಪಾದಿಸುವಿಕೆ: ಇದಕ್ಕೆ ಸಂಬಂಧಿಸಿದಂತೆ ಭಗವಾನರು ಹೀಗೆ ಹೇಳಿರುವರು: ಭಿಕ್ಷುಗಳೇ, ಸಮಾಧಿಯನ್ನು ಅಭಿವೃದ್ಧಿಗೊಳಿಸಿ, ಯಾವ ಭಿಕ್ಷುವು ಸಮ್ಮಾಸಮಾದಿಯಲ್ಲಿರುವನೋ ಆತನು ಯೋಗ್ಯವಾಗಿ ಅರ್ಥಮಾಡಿಕೊಳ್ಳಬಲ್ಲವನಾಗುತ್ತಾನೆ.
ಇ) ಆತನು ಅಭಿಜ್ಞಾ ಸಂಪನ್ನನಾಗಬಲ್ಲನು: ಅಂದರೆ ಅಭಿಜ್ಞಾದಂತಹ ಶ್ರೇಷ್ಠ ವಿಸ್ಮಯಕಾರಿ ಬಲಗಳನ್ನು ಪಡೆಯಬಲ್ಲನು. ಅಂದರೆ ಯಾರು ಅಷ್ಟಸಮಾಪತ್ತಿಗಳನ್ನು ಪ್ರಾಪ್ತಿಮಾಡಿರುತ್ತಾನೋ ಆತನು ಅಭಿಜ್ಞಾಗಳ ಕಡೆ ಗುರಿಯಾಗಿಸಿ ವೀಕ್ಷಿಸುವಂತಹ ಸಾಮಥ್ರ್ಯ ಪಡೆಯುತ್ತಾನೆ. ಆತನು ಕೆಲ ವಿಶೇಷ ಧ್ಯಾನ ಕೌಶಲ್ಯಗಳಿಂದಾಗಿ ಹಲವರು ಶರೀರಗಳನ್ನು ಪಡೆಯಬಲ್ಲನು. ಪರರ ಚಿತ್ತವನ್ನು ಓದಬಲ್ಲನು. ಇತ್ಯಾದಿ ಅಭಿಜ್ಞಾ ಶಕ್ತಿ ಪಡೆಯುತ್ತಾನೆ.
ಈ) ಬ್ರಹ್ಮಲೋಕಗಳಲ್ಲಿ ಉಗಮಿಸಬಲ್ಲನು: ಇಲ್ಲಿ ಧ್ಯಾನಿಯು ತನ್ನ ಧ್ಯಾನಕ್ಕೆ ಅನುಸಾರವಾಗಿ ನಿಧನದ ನಂತರ ಬ್ರಹ್ಮಲೋಕಗಳಲ್ಲಿ ನಿದರ್ಿಷ್ಟ ಹಂತಗಳಲ್ಲಿ ಉಗಮಿಸಿ ಸ್ಥಾನವನ್ನು ಪಡೆಯಬಲ್ಲನು.
ಉ) ನಿಬ್ಬಾಣಪ್ರಾಪ್ತಿ: ಅಂದರೆ ಯಾವ ಆರ್ಯರು ಅಷ್ಟ ಸಮಾಪತ್ತಿಗಳನ್ನು ಪಡೆದಿರುವರೋ ಅವರು ಇಚ್ಛಿಸಿದಲ್ಲಿ ಏಳು ದಿನಗಳ ಕಾಲ ನಿರೋಧ ಸಮಾಪತ್ತಿ ಸ್ಥಿತಿಯಲ್ಲಿ (ನಿಬ್ಬಾಣ ಸುಖದಲ್ಲಿ) ನಿರಂತರ ಇರಬಲ್ಲರು. ಇದಕ್ಕೆ ನಿರೋಧ ಲಾಭವೆನ್ನುವರು. ಇದು ಧ್ಯಾನದಲ್ಲಿನ ಪರಮೋಚ್ಛ ಲಾಭವಾಗಿದೆ.

ಈ ರೀತಿಯಾಗಿ ಸಮಾಧಿಗಳಲ್ಲಿ 5 ವಿಧದ ಸುಖಗಳಿವೆ.

ಆದ್ದರಿಂದ ಪ್ರಜ್ಞಾವಂತನು ನಿಷ್ಠೆಯಲ್ಲಿ ಶಿಥಿಲನಾಗದೇ, ನಿರಂತರ ಧ್ಯಾನದಲ್ಲಿಯೇ ಅವಿಶ್ರಾಂತವಾಗಿ ತೊಡಗಿಸಿಕೊಂಡು ಶುಭ್ರವಾಗಲಿ ಕಶ್ಮಲರಹಿತನಾಗುತ್ತಲೇ ಹಾಗೆಯೇ ಗಳಿಸಲಿ ಇಚ್ಛಾಯುತ ಪರಮ ಲಾಭಗಳನ್ನು.
ಇಲ್ಲಿಗೆ ಸಮಾಧಿ ಭಾಗ ಮುಗಿಯಿತು.
*****                                             ******                                                            *****

ಸಜ್ಜನ ಆನಂದಕ್ಕಾಗಿ ರಚಿಸಲ್ಪಟ್ಟಂತಹ ವಿಶುದ್ಧಿಮಾರ್ಗದ ಸಮಾಧಿ ಭಾಗದಲ್ಲಿ 11ನೇ ಅಧ್ಯಾಯವಾದಂತಹ ಸಮಾಧಿ ನಿದ್ದೇಸವು ಮುಗಿಯಿತು.
ಮೊದಲಿಗೆ ಶೀಲನಿದ್ದೆಸವು, ಎರಡನೆಯದು ಧುತಂಗ ನಿದ್ದೆಸವಾಗಿ,
ತೃತೀಯವು ಕಮ್ಮಟ್ಠಾನ ಗ್ರಹಣ ನಿದ್ದೆಸವಾಗಿದ್ದು, ನಾಲ್ಕನೆಯ ಪಠವಿ ಕಸಿಣ ನಿದ್ದೆಸವು,
ಐದನೆಯದು ಉಳಿದ ಕಸಿಣಗಳಾದರೆ, ಆರನೆಯದೇ ಅಶುಭ ನಿದ್ದೇಸವಾದರೆ,
ಏಳನೆಯದು ಆರು ಅನುಸ್ಸತಿಗಳು, ಎಂಟನೆಯದೇ ಶೇಷ ಅನುಸ್ಸತಿ,
ಒಂಬತ್ತನೆಯದು  ಬ್ರಹ್ಮವಿಹಾರಗಳಾದರೆ ಹತ್ತನೆಯದೇ ಅರೂಪ್ಪ ನಿದ್ದೇಸವಾಗಿತ್ತು.
ಪಟಿಕ್ಕೂಲಸಞ್ಞಾ, ಧಾತುವವತ್ಥಾನ ನಿದ್ದೇಸವೇ ಹನ್ನೊಂದನೆಯ ಪರಿಚ್ಛೇದವಾಗಿತ್ತು.

ಇಲ್ಲಿಗೆ ವಿಸುದ್ಧಿ ಮಾಗ್ಗದ ಪ್ರಥಮ ಭಾಗ ಮುಗಿಯಿತು 

visuddhi magga ವಿಶುದ್ಧಿ ಮಗ್ಗದ, ಸಮಾಧಿ ಭಾಗದ ಅಧ್ಯಾಯ 10 ಅರೂಪ ನಿದ್ದೇಸ

ಅಧ್ಯಾಯ 10ಅರೂಪ ನಿದ್ದೇಸ1. ಆಕಾಶನಂಚಾಯತನ


ಈ ನಾಲ್ಕು ಅರೂಪ ಧ್ಯಾನಗಳು ನಾಲ್ಕು ಬ್ರಹ್ಮವಿಹಾರದ ನಂತರ ಬರುವುವು. ಯಾರು ನಾಲ್ಕು ಅರೂಪಗಳನ್ನು ಸಿದ್ಧಿಸಬೇಕೆಂದು ಇರುವನೋ ಆತನು ಭೌತಿಕ ಜಗತ್ತಿನಿಂದ ವಿರಕ್ತನಾಗಿರುತ್ತಾನೆ. ಈ ಘನ ಭೌತಿಕ ಜಗತ್ತಿನ ಕಾರಣದಿಂದಲೇ ಈ ಜಗಳಗಳು, ಹೊಡೆದಾಟಗಳು, ಯುದ್ಧಗಳು, ವಿವಾದಗಳು, ರೋಗಗಳು ಇವೆಲ್ಲವೂ ಸಂಭವಿಸುವುವು. ಈ ಭೌತಿಕತೆ ಇಲ್ಲದಿದ್ದರೆ ಇವ್ಯಾವುದೂ ಇರಲಾರದು. ಆದ್ದರಿಂದಾಗಿ ಅರೂಪ ಸ್ಥಿತಿಯಲ್ಲಿ ಇಂತಹದು ಯಾವುದು ಇಲ್ಲದ ಕಾರಣ ಅದು ಶ್ರೇಷ್ಠವೇ ಆಗಿರುತ್ತದೆ ಎಂದು ಸ್ಪಷ್ಟವಾಗಿ ಚಿಂತನೆ ಮಾಡುತ್ತಾ ಆತನು ಎಲ್ಲಾ ಭೌತಿಕತೆಯ ರೂಪಗಳಿಂದ ವಿರಕ್ತನಾಗುತ್ತಾನೆ, ವಿರಾಗನಾಗುತ್ತಾನೆ. ಪರಿಮಿತ ಆಕಾಶವನ್ನು ಬಿಟ್ಟು ಉಳಿದ ರೀತಿಯ ಯಾವುದೇ ಕಸಿಣಾ ಧ್ಯಾನದಲ್ಲಿ ಚತುರ್ಥ ಧ್ಯಾನ ಪ್ರಾಪ್ತಿ ಮಾಡುತ್ತಾನೆ. 
ಆತನು ಬೌತಿಕತೆಯನ್ನು ಚತುರ್ಥ ಧ್ಯಾನದಲ್ಲಿ ಅತಿಕ್ರಮಿಸಿದ್ದರೂ, ಕಸಿಣಾದ ಸೂಕ್ಷ್ಮ ಭೌತಿಕತೆಯನ್ನು ಸಹಾ ಮೀರಲು ನಿಶ್ಚಯಿಸುತ್ತಾನೆ. ಭಿಕ್ಷುವಿಗೆ ಕಸಿಣಾದ ಪತಿಭಾಗವೂ ಸಹ ರೂಪವಾಗಿ (ಭೌತಿಕವಾಗಿ) ಗೋಚರಿಸಿ, ಆತನು ಕಸಿಣಾದ ಭೌತಿಕತೆಯಿಂದಲೂ ಸಹಾ ವಿರಕ್ತ ವಿರಾಗವುಳ್ಳವನಾಗಿ, ಆತನು ಚತುರ್ಥ ಧ್ಯಾನದಲ್ಲಿ ಈಗಾಗಲೇ ಐದು ವಿಧಗಳಿಂದಾಗಿ ಪ್ರಾವಿಣ್ಯತೆ ಗಳಿಸಿರುತ್ತಾನೆ. ಝಾನಗಳ ಅಪಾಯ ಈ ರೀತಿ ಗ್ರಹಿಸುತ್ತಾನೆ. ಇದರಿಂದಾಗಿ ನಾನು ವಿಕಷರ್ಿಸುತ್ತಿರುವ ಭೌತಿಕತೆಯೇ ದೊರಕುವುದು, ಇದಕ್ಕೆ ಆನಂದವೇ ಸನಿಹ ಶತ್ರುವಾಗಿದೆ. ಶಾಂತ ಸ್ಥಿತಿಗಳಿಗೆ ಹೋಲಿಸಿದರೆ, ಇವು ಸಹಾ ಸ್ಥೂಲವಾಗಿಯೇ ಇವೆ. ಆದರೂ ಸಹಾ ಎರಡುರೀತಿಯ ಝಾನಗಳಿಗೂ ಎರಡು ಝಾನಂಗಗಳು ಒಂದೇ ಆಗಿವೆ. ಅವೆಂದರೆ ಉಪೇಕ್ಖಾ ಹಾಗು ಏಕಾಗ್ಗತಾ.
ಹೀಗೆ ರೂಪ ಝಾನದಲ್ಲಿ ಅಪಾಯ ಕಾಣುತ್ತಾ ಅದರಿಂದ ಅಂಟುವಿಕೆ ಕಳಚುತ್ತಾ ಆತನು ಅನಂತವಾದ ಆಕಾಶದ ಆಧಾರದಲ್ಲಿ ಗಮನ ನೀಡಿದಾಗ ಅವು ಶಾಂತವಾಗಿ ಕಾಣುತ್ತದೆ. ಹೀಗೆಯೇ ಅನಂತ ಆಕಾಶದತ್ತ ವಾಲುತ್ತಾ ರೂಪ ಝಾನದಿಂದ ಮುಕ್ತನಾಗುತ್ತಾನೆ. ಅಂತಹ ಸ್ಥಿತಿಗೆ ಆಕಾಶ ಸ್ಪಶರ್ಿತ ಕಸಿಣಾವೆಂತಲೂ ಅಥವಾ ಕಸಿಣಾದಿಂದ ಮುಕ್ತವಾದ ಆಕಾಶವೆಂತಲೂ ಕರೆಯುತ್ತಾರೆ. ಇವೆರಡೂ ಒಂದೇ ಆಗಿವೆ.
ನಂತರ ನಿರಂತರವಾದ ಆಕಾಶ ಗಮನಿಸುವಿಕೆಯಿಂದಾಗಿ ನಿವರಣಗಳು ದಮನವಾಗಿ, ಸ್ಮೃತಿಯು ಸ್ಥಾಪಿತವಾಗಿ ಆಳವಾದ ಅರೂಪ ಸಮಾಧಿಯು ದೊರೆಯುತ್ತದೆ.
ಇಲ್ಲೊಂದು ವ್ಯತ್ಯಾಸವಿರುವುದು. ಅರೂಪ ಚಿತ್ತವು ಸ್ಥಾಪಿಸುವಾಗ, ಭಿಕ್ಷುವು ಹಿಂದಿನ ಕಸಿಣ ಮಂಡಲವನ್ನು ನೆನಪಿಗೆ ತಂದುಕೊಂಡು ಪಾಲನೆ ಮಾಡುತ್ತಾನೆ. ಆಗ ಆತನಿಗೆ ಆಕಾಶಕ್ಕೆ ಅಡ್ಡಿಯಾಗಿದ್ದ ರೇಷ್ಮೆಯ ವಸ್ತ್ರದಂತೆ ಹಿಂದಿನ ಝಾನವು ಕಾಣಿಸುವುದು.
ಭಗವಾನರು ಪ್ರಥಮ ಝಾನಕ್ಕೆ ಶಬ್ದವೇ ಮುಳ್ಳು ಎಂದಿದ್ದಾರೆ. ಆದರೆ ಅರೂಪ ಸಮಾಧಿಗಳು ಸಕಲ ಇಂದ್ರಿಯಗಳ ವಿಷಯಗಳಿಂದ ಅತೀತವಾಗಿರುತ್ತದೆ.
ಉದಾಹರಣೆಗೆ ಒಮ್ಮೆ ಸಿದ್ಧಾರ್ಥ ಗೌತಮರ ಗುರುಗಳಾಗಿದ್ದಂತಹ ಆಲಾರಕಲಾಮರು ಧ್ಯಾನಸ್ಥರಾಗಿದ್ದಾಗ ಅವರ ಮುಂದೆಯೇ 500 ಎತ್ತಿನ ಬಂಡಿಗಳು ಹಾದುಹೋದರೂ ಅವರಿಗೆ ಆ ದೃಶ್ಯಗಳಾಗಲಿ ಅಥವಾ ಆ ಶಬ್ದಗಳಾಗಲೀ ಯಾವುದೂ ಕೇಳಿಸಲಿಲ್ಲ. ಇದು ಅರೂಪ ಝಾನಗಳ ಪ್ರಾಬಲ್ಯತೆಗೆ ಸಾಕ್ಷಿಯಾಗಿದೆ. ಈ ಸ್ಥಿತಿಗಳಲ್ಲಿ ಆತನು ನಾಲ್ಕು ಬಗೆಯ ಗ್ರಹಿಕೆಗಳಿಂದ (8 ಬಗೆಯ ಇಂದ್ರಿಯ ಗ್ರಹಿಕೆ ಮತ್ತು ಅಕುಶಲ ಗ್ರಹಿಕೆಗಳಿಂದ 11 ಬಗೆಯ ಕುಶಲ ವಿಪಾಕದ, 2 ಬಗೆಯ ಅಕುಶಲ ವಿಪಾಕದ ಮತ್ತು 11 ಬಗೆಯ ಕ್ರಿಯಾ ಗ್ರಹಿಕೆಗಳಿಂದ) ಮುಕ್ತನಾಗಿರುತ್ತಾನೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ಭೌತಿಕತೆಯ ಸಂಜ್ಞೆಗಳನ್ನು ದಾಟುತ್ತಾ ರೂಪ ಕ್ಷೇತ್ರವನ್ನು ತ್ಯಜಿಸುತ್ತಾ, ಎಲ್ಲಾಬಗೆಯ ಇಂದ್ರೀಯ ಕ್ಷೇತ್ರದ ಚಿತ್ತಗಳ ಬಗ್ಗೆ ಯಾವುದೇ ಗಮನ ನೀಡದೆ, ಗ್ರಹಿಕೆಗಳ ಇಲ್ಲದಿರುವಿಕೆಯಾಗಿರುತ್ತದೆ.  ಅನಂತ ಆಕಾಶವೆಂದು ಏತಕ್ಕೆ ಹೇಳುತ್ತೇವೆ ಎಂದರೆ ಅದಕ್ಕೆ ಆದಿಯಾಗಲಿ, ಅಂತ್ಯವಾಗಲಿ ಇಲ್ಲದಿರುವುದರಿಂದಾಗಿ. ಗಡಿಯಿಲ್ಲದಿರುವಿಕೆಯಿಂದಾಗಿ ಆಕಾಶಕ್ಕೆ ಅನಂತ ಆಕಾಶವೆಂದು ಹೇಳುತ್ತಾರೆ. ಇಂತಹ ಧ್ಯಾನ ವಿಷಯದಲ್ಲಿ ಧ್ಯಾನಿಯ ಚಿತ್ತವು ನೆಲೆಸುತ್ತದೆ, ವಿಹರಿಸುತ್ತದೆ, ಹಾಗೆಯೇ ಅನಂತವಾಗಿ ಚಿತ್ತವನ್ನು ಪ್ರಸರಿಸಿ ವಿಕಾಸಿಸುವುದರಿಂದಾಗಿ ಹಾಗು ಪ್ರವೇಶಿಸಿ ವಿಹರಿಸಿ ಅನಂತ ಆಕಾಶದ ಆಧಾರದಲ್ಲೇ ನೆಲೆಸಿರುವುದರಿಂದಾಗಿ ಇದಕ್ಕೆ ಆಕಾಶನಂಚಾಯತನ ಎನ್ನುತ್ತಾರೆ.
ಆಕಾಶನಂಚಾಯತನ :
ಇಲ್ಲಿ ಸಾಧಕನು 9 ಕಸಿನಾಗಳು ಪರಿಮಿತ ಆಕಾಶದ ಹೊರತು ಚತುರ್ಥ ಧ್ಯಾನ ಪ್ರಾಪ್ತಿ ಮಾಡಿದ ನಂತರ ಅಥವಾ ಅನಾಪಾನಾಸತಿಯಲ್ಲಿ ಚತುರ್ಥ ಧ್ಯಾನ ಪ್ರಾಪ್ತಿ ಮಾಡಿದ ನಂತರ ಅಥವಾ ಬ್ರಹ್ಮ ವಿಹಾರದ ಉಪೇಖ್ಖಾ ಧ್ಯಾನದ ಪ್ರಾಪ್ತಿಯ ನಂತರ 5 ವಿಧದಲ್ಲಿ ಧ್ಯಾನ ಪ್ರವೀಣನಾಗುತ್ತಾನೆ. (ಅಂದರೆ ಲಕ್ಷ ನೀಡುವಿಕೆ, ಪ್ರವೇಶ ಮಾಡುವಿಕೆ, ಸ್ಥಿರವಾಗಿ ನೆಲೆಸುವಿಕೆ, ಕ್ಷಿಪ್ರವಾಗಿ ಹೊರಬರುವಿಕೆ ಮತ್ತು ಪುನರ್ ಅವಲೋಕನ ಮಾಡುವಿಕೆ) ನಂತರ ಆತನಿಗೆ ರೂಪ ಝಾನವು ಸ್ಥೂಲವಾಗಿ ಕಂಡುಬರುತ್ತದೆ. ಆತನು ಅದನ್ನು ದಾಟಲು ಇಚ್ಛಿಸುತ್ತಾನೆ. ಆತನಿಗೆ ರೂಪ ಝಾನವು ಸ್ಥೂಲವಾಗಿ ಕಂಡುಬರುತ್ತದೆ. ಆತನು ಅದನ್ನು ದಾಟಲು ಇಚ್ಛಿಸುತ್ತಾನೆ. ಆತನಿಗೆ ಈ ರೀತಿಯ ಅರಿವು ಬರುತ್ತದೆ ಈ ದೇಹದಿಂದಲೇ (ರೂಪದಿಂದಲೇ) ನಾನಾರೀತಿಯ ಹೋರಾಟಗಳು, ವಿವಾದಗಳು, ಪಾಪಗಳು ಉಂಟಾಗುತ್ತವೆ. ರೂಪವಿಲ್ಲದಿದ್ದರೆ ಇದ್ಯಾವುದು ಇರುವುದಿಲ್ಲ.
ದೇಹವಿದ್ದರೆ ನಾನಾ ರೊಗಗಳು, ಮುಪ್ಪು, ಮರಣಗಳಿಗೆ ಸಿಲುಕುತ್ತಲೆ ಇರಬೇಕಾಗುತ್ತದೆ. ಶೀತೋಷ್ಣ, ಹಸಿವು, ಬಾಯಾರಿಕೆ ಇತ್ಯಾದಿ ತೊಂದರೆ ಇದ್ದೇ ಇರುತ್ತದೆ. ಆದರೆ ರೂಪದ ಗ್ರಹಿಕೆಗಳನ್ನು ಮೀರಿದಾಗ, ಆತನಿಗೆ ಇನ್ನಾವುದು ತೊಂದರೆ ಇರುವುದಿಲ್ಲ ಎಂದು ಚಿಂತಿಸುತ್ತಾ ಆತನು ದೇಹತೀತ ಧ್ಯಾನವಾದ ಹಾಗು ರೂಪ ಶಬ್ದ, ವಾಸನೆ, ರುಚಿ ಮತ್ತು ಸ್ಪರ್ಶಗಳಿಗೆ ಅತೀತವಾದ ಅರೂಪ ಝಾನ ಮಾಡಲು ನಿರ್ಧರಿಸುತ್ತಾನೆ. ಮೊದಲನೆಯ ಸಮಾಧಿಯಲ್ಲಿ ಶಬ್ದವು ನಿಲ್ಲುತ್ತದೆ, ನಾಲ್ಕನೆಯ ಸಮಾದಿಯಲ್ಲಿ ಉಸಿರಾಟ ನಿಲ್ಲುತ್ತದೆ. ಆದರ ಅರೂಪ ಝಾನದಲ್ಲಂತು ಎಲ್ಲಾ ವಿಧವಾದ ರೂಪ ಮೀರಿ ರೂಪತೀತ (ದೇಹತೀತ ಮತ್ತು ಇಂದ್ರಿಯಾತೀತ) ಕ್ಷೇತ್ರಕ್ಕೆ ಹೋಗುತ್ತಾನೆ.
ಇಂದ್ರಿಯ ವಲಯದ ಮಾನವ ಪ್ರಥಮ ಸಮಾಧಿಗೆ ಹೊರಟಾಗ ಆತನು ರೂಪ ಧ್ಯಾನದ ಬ್ರಹ್ಮಾ ವಲಯದಲ್ಲಿ ಪ್ರವೇಶಿಸುತ್ತಾನೆ. ಈಗ ಆತನು ಆ ರೂಪವಲಯವನ್ನು ದಾಟಿ ಅರೂಪ ವಲಯಕ್ಕೆ ಪ್ರವೇಶಿಸುತ್ತಾನೆ. ಈ ಸ್ಥಿತಿಯಲ್ಲಿರುವವರು ದೇಹದ ಎಲ್ಲಾ ವಿಧವಾದ ಸಂಪರ್ಕ ಕಡಿದುಕೊಳ್ಳುತ್ತಾರೆ. ಹೇಗೆ ಸರ್ಪಕ್ಕೆ ಭಯಪಡುವ ಮನುಷ್ಯ ಹಗ್ಗವನ್ನು ಕಂಡು ಬೆಚ್ಚಿಬಿದ್ದು ಅಲ್ಲಿಂದ ವಿಮುಖವಾಗುವಂತೆ ಆತನು ಚತುರ್ಥ ಧ್ಯಾನದಿಂದ ಮೀರಿಹೋಗಲು ಇಚ್ಛಿಸುತ್ತಾನೆ.
ಆತನು 4ನೆಯ ಧ್ಯಾನದ ಪುನರ್ ಅವಲೋಕನ ಮಾಡಿದಾಗ ಆತನಿಗೆ ಚತುರ್ಥ ಧ್ಯಾನವು ಸ್ಥೂಲವಾಗಿ ಕಂಡುಬರುತ್ತದೆ. ಹಾಗೂ ಆಕಾಶದ ಅನಂತತೆಯು ಸೂಕ್ಷ್ಮವಾಗಿ, ಶಾಂತಿಯಾಗಿ ಕಂಡುಬರುತ್ತದೆ. ಆಗ ಆತನು ರೂಪದ ಚಿಹ್ನೆ (ರೂಪನಮಿತ್ತಗಳಿಂದ) ಹೊರಬರಲು ಯತ್ನಿಸುತ್ತಾನೆ. ಚತುರ್ಥ ಸಮಾಧಿಯಲ್ಲಿ ಗಮನ ನೀಡದೆ ಆಕಾಶದಲ್ಲಿ ಗಮನ ನೀಡಿದ್ದರಿಂದಾಗಿ ಆತನು ಝಾನ ಸಾಧಿಸುತ್ತಾನೆ ಅಥವಾ ರೂಪಚಿಹ್ನೆಗಳೆಲ್ಲವೂ ಮೀರಿ ಬರಿದು ಮಾಡಿದ್ದರಿಂದಾಗಿ ಆಕಾಶವು ಉಳಿಯುತ್ತದೆ. ಮತ್ತೆ ಮತ್ತೆ ಪ್ರಯತ್ನಿಸಿದ್ದರಿಂದ ಸ್ಮೃತಿಯು ಮನವು ಏಕಾಗ್ರವಾಗಿ ಅರೂಪ ಝಾನವು ಸ್ಥಾಪಿಸಲ್ಪಡುತ್ತದೆ.
ರೂಪಚಿಹ್ನೆಗಳನ್ನು (ನಿಮಿತ್ತಗಳನ್ನು) ಪೂರ್ಣವಾಗಿ ಬರಿದು ಮಾಡಿ ಆಕಾಶ ಸಾದಿಸಿ, ಅಥವಾ ಆಕಾಶವನ್ನು ಸ್ಥಾಪಿಸಿ ರೂಪನಿಮತ್ತಗಳನ್ನು ಮೀರಿ, ಆತನು ಆಕಾಶ ಅನಂತ ಆಯಾತನ ಸ್ಥಿತಿ ಪ್ರವೇಶಿಸುತ್ತಾನೆ. (ಆಗ ಆತನಲ್ಲಿ ರೂಪದ ಗ್ರಹಿಕೆಗಳು ಮಾತ್ರವಲ್ಲ, ರೂಪದ ಸಂಖಾರಗಳು, ರೂಪದ ವೇದನೆಗಳು ಹಾಗು ರೂಪದ ವಿನ್ಯಾಸವು ಸಹಾ ಅಳಿಯುತ್ತದೆ). ಕೇವಲ ಅರೂಪ ಗ್ರಹಿಕೆ ಸ್ಥಾಪಿತವಾಗುತ್ತದೆ. ಕಸಿನಾದಿಂದ ಅರೂಪ ಸಾಧಿಸುವಾಗ ಆತನು ಎಲ್ಲಾ ಮಹಾಭೂತಗಳ ಅಥವಾ ಎಲ್ಲಾ ವರ್ಣಗಳ ನಿಮಿತ್ತಗಳನ್ನು ಮೀರುತ್ತಾನೆ. ಬ್ರಹ್ಮವಿಹಾರದಿಂದ ಅರೂಪ ಸಾಧಿಸುವಾಗ ಎಲ್ಲಾ ವ್ಯಕ್ತಿಗಳ ನಿಮಿತ್ತವನ್ನು ಮೀರುತ್ತಾನೆ. ಅನಾಪಾಸತಿಯಿಂದ ಅರೂಪ ಸಾಧಿಸುವಾಗ ಆತನು ದೇಹದ ಸ್ಪರ್ಶಗಳನ್ನು, ನಿಮಿತ್ತಗಳನ್ನು ಮೀರುತ್ತಾನೆ. ಹಾಗು ಉಳಿದಿರುವ ಆಕಾಶ (ಶೂನ್ಯತೆ), ಆತನು ತನ್ನ ಚಿತ್ತವನ್ನು ಆ ಅಕಾಶದಲ್ಲಿ ನೆಲೆಸಿ, ಅದನ್ನು ಅನಂತವಾಗಿ ಹರಡಿಸುತ್ತಾನೆ (ಪ್ರಸರಿಸುತ್ತಾನೆ). ಆತನು ಈ ರೀತಿಯ ಅನಂತ ಆಕಾಶದ ಸ್ಥಿತಿಯಲ್ಲಿ ವಿಹರಿಸುತ್ತಾನೆ. ಆಯಾತನ ಎಂದರೆ ಆಧಾರ ಎಂದರ್ಥ. ಒಟ್ಟಾರೆ ಹೇಳುವುದಾದರೆ ಆನಂತ ಆಕಾಶದ ಆಧಾರದಲ್ಲಿ ವಿಹರಿಸುತ್ತಾನೆ ಎಂದರ್ಥ. ಆದ್ದರಿಂದ ಈ ಸ್ಥಿತಿಗೆ ಆಕಾಶ ಅನಂತ ಆಯಾತನ ಎನ್ನುತ್ತಾರೆ ಅಥವಾ ಆಕಾಶನಂಚಾಯತನ ಎನ್ನುತ್ತಾರೆ. ಈ ರೀತಿಯಾಗಿ ಆತನು ಆಕಾಶ ಅನಂತ ಆಯಾತನ ಝಾನದಲ್ಲಿ ವಿಹರಿಸುತ್ತಾನೆ.

2. ವಿನ್ಯಾನಂಚಯಾತನ 


ಆಕಾಶ ಸಂಚಾಯತನದ ಧ್ಯಾನದಲ್ಲಿ 5 ರೀತಿ ಪ್ರವೀಣ್ಯತೆಯನ್ನು ಗಳಿಸುತ್ತಾನೆ. (ಅಂದರೆ ಲಕ್ಷ ನೀಡುವಿಕೆ, ಕ್ಷಿಪ್ರವಾಗಿ ಪ್ರವೇಶ, ದೀರ್ಘಕಾಲ ನೆಲೆಸುವಿಕೆ, ಕ್ಷಿಪ್ರ ಕಾಲದಲ್ಲಿ ಹೊರಬರುವಿಕೆ ಮತ್ತು ಪುನರ್ ಅವಲೋಕನ ಮಾಡುವಿಕೆ) ಆಗ ಆತನಗೆ ಆಕಾಶನಂಚಾಯಾತನವು ಸ್ಥೂಲವಾಗಿ ಕಂಡುಬರುತ್ತದೆ. ಅದನ್ನು ಮೀರಿದ ಸ್ಥಿತಿಯಾದ ವಿನ್ಯಾನಂಚಯಾನವೇ ಸೂಕ್ಷ್ಮವಾಗಿ, ಶಾಂತವಾಗಿ, ಕಂಡುಬರುತ್ತದೆ. ಆಗ ಆತನು ಆಕಾಶವನ್ನು ಮೀರಲು ಯತ್ನಿಸುತ್ತಾನೆ. ಆಕಾಶದ ನಿಮಿತ್ತಗಳನ್ನು ಮೀರಿದಾಗ ಆತನಲ್ಲಿ ವಿನ್ಯಾಸ (ವಿಞ್ಞಾನ = ಅರಿವು) ಉಳಿಯುತ್ತದೆ. ಅದನ್ನು ಏಕಾಗ್ರತೆಯಿಂದ ಅನಂತವಾಗಿ ಪ್ರಸರಿಸಿದಾಗ ಆಗ ಅದು ವಿನ್ಯಾನ + ಅನಂತ + ಆಯತನ = ವಿನ್ಯಾನಂಚಯಾತನ ಆಗುತ್ತದೆ. ಅಂದರೆ ಆತನು ಇಲ್ಲಿ ಆಕಾಶ ಅನಂತತೆಯನ್ನು ಪೂರ್ಣವಾಗಿ ಮೀರಿಹೋಗಿ ಅನಂತ ವಿನ್ಯಾನವನ್ನು ಸ್ಥಾಪಿಸುತ್ತಾನೆ. ಆತನು ಅದರಲ್ಲಿ ಪ್ರವೇಶಿಸಿ ಅದರಲ್ಲೇ ವಿಹರಿಸುತ್ತಾನೆ.

3. ಅಕಿಂಚಾಯಾತನ :


ನಂತರ ಭಿಕ್ಷುವು ವಿನ್ಯಾನಂಚಯಾತನ ಧ್ಯಾನದಲ್ಲಿ 5 ರೀತಿ ಪ್ರಾವಿಣ್ಯತೆ ಗಳಿಸುತ್ತಾನೆ. ಆಗ ಆತನು ಈ ಧ್ಯಾನವನ್ನು ಪುನರ್ ಅವಲೋಕನ ಮಾಡಿದಾಗ ಆತನಿಗೆ ವಿನ್ಯಾನಂಚಯಾತನವು ಸ್ಥೂಲವಾಗಿ ಕಂಡುಬರುತ್ತದೆ.  ಅದನ್ನು ಮೀರಿದ ಸ್ಥಿತಿಯಾದ ಅಕಿಂಚಾಯಾತನದ (ಶೂನ್ಯ) ಸೂಕ್ಷ್ಮತೆಯ ಸುಳಿವು ಸಿಗುತ್ತದೆ. ಆಗ ಆತನಿಗೆ ಅಕಿಂಚ (ಏನೂ ಇಲ್ಲ) ಆಯಾತನ ಸ್ಥಿತಿಯೇ ಸೂಕ್ಷ್ಮವಾಗಿ ಶಾಂತವಾಗಿ ಕಂಡುಬರುತ್ತದೆ. ಆಗ ಆತನು ವಿನ್ಯಾನಂಚಯಾತನವನ್ನು ಮೀರಲು ನರಂತರ ಯತ್ನಿಸುತ್ತಾನೆ. ವಿನ್ಯಾನದ (ಅರಿವಿನ) ನಿಮಿತ್ತ ಮೀರಿದಾಗ ಆತನಲ್ಲಿ ಏನೂ ಇಲ್ಲವೆಂಬ ಶೂನ್ಯಸ್ಥಿತಿಯು ಉಳಿಯುತ್ತದೆ. ಇದು ಅನಂತ ಅರಿವಿಗಿಂತ ಅಪಾರವಾಗಿ ಸೂಕ್ಷ್ಮತೆಯುಳ್ಳದ್ದು ಹಾಗು ಶ್ರೇಷ್ಠಕರವಾಗಿರುತ್ತದೆ. ಈ ಸ್ಥಿತಿಯು ಅವನಿಗೆ ವಿನ್ಯಾನಂಚಯಾತನವನ್ನು ಪೂರ್ಣವಾಗಿ ಮೀರಿದ್ದರಿಂದಾಗಿ ಏನೂ ಇಲ್ಲದ ಸ್ಥಿತಿಯು ಪ್ರಾಪ್ತಿಯಾಗಿರುತ್ತದೆ. ಆತನು ಅರಿವನ್ನು ಇಲ್ಲದಂತೆ ಮಡಿದ್ದಾನೆ. ಆತನು ಕೇವಲ ಏನೂ ಇಲ್ಲ ಸ್ಥಿತಿಯೇ ಗೋಚರಿಸುತ್ತದೆ. ಆಲ್ಲಿ ಆತನು ಹಿಡಿಯುವಂತಹುದು ಏನೂ ಇರುವುದಿಲ್ಲ. ಆತನು ಅರಿವನ್ನು ಇಲ್ಲದಂತೆ, ಗಮನಿಸದಂತೆ, ನೆನಪಿಸದಂತೆ ಮಾಡಿ ಏನೂ ಇಲ್ಲದಂತಹ ಶೂನ್ಯದಲ್ಲಿ ಪ್ರವೇಶಿಸಿ ದೀರ್ಘಕಾಲ ನೆಲೆಸುತ್ತಾನೆ. ಈ ಸ್ಥಿತಿಗೆ ಈ ಹೆಸರು ಬರಲು ಕಾರಣ ಏನೆಂದರೆ ಅಕಿಂಚ ಎಂದರೆ ಏನೂ ಇಲ್ಲ ಏನೂ ಇಲ್ಲದ ಸ್ಥಿತಿಯ ಆಧಾರವುಳ್ಳದರಿಂದ ಇದಕ್ಕೆ ಅಕಿಂಚಾಯಾತನ ಎನ್ನುತ್ತಾರೆ. ಈ ರೀತಿಯಲ್ಲಿ ಆತನು ಅಕಿಂಚಾಯಾತನದಲ್ಲಿ ವಿಹರಿಸುತ್ತಾನೆ.

4. ನೇವಸನ್ಯಾನಸನ್ನಾಆಯಾತನ :


ಆತನು ಅಕಿಂಚಯಾತನದಲ್ಲಿ 5 ರೀತಿಯ ಧ್ಯಾನ ಪ್ರವೀಣನಾಗುತ್ತಾನೆ. ಅನಂತರ ಆತನು ಅದರಿಂದ ಹೊರಬಂದು ಅದನ್ನು ಪುನರ್ ಅವಲೋಕಿಸುತ್ತಾನೆ. ಆಗ ಆತನಿಗೆ ಅಕಿಂಚಾಯಾತನವು ಸಹಾ ಸ್ಥೂಲವಾಗಿ ಕಾಣಿಸುತ್ತದೆ ಮತ್ತು ಗ್ರಹಿಕೆಯೆ ಇಲ್ಲದಂತಹ ಸ್ಥಿತಿಯು ಇನ್ನೂ ಸೂಕ್ಷ್ಮವಾಗಿ ಕಂಡುಬರುತ್ತದೆ ಮತ್ತು ಶಾಂತವಾಗಿ ಕಂಡುಬರುತ್ತದೆ. ಆಗ ಆತನಿಗೆ ಗ್ರಹಿಕೆಯೇ ರೋಗ, ಗ್ರಹಿಕೆಯು ಹುಣ್ಣು, ಗ್ರಹಿಕೆಯೇ ಅಪಾಯ ಎಂಬ ಜ್ಞಾನೋದಯವಾಗಿ ಆತನು ಅಕಿಂಚಯಾತನವನ್ನು ಮೀರಲು ಸತತವಾಗಿ ಯತ್ನಿಸುತ್ತಾನೆ. ಅದರ ಅಂಟುವಿಕೆಯಿಂದ ಪೂರ್ಣವಾಗಿ ವಿಮುಖವಾದ ನಂತರ ಆತನು ನೇವಸನ್ಯಾನಸನ್ನಾ ಆಯಾತನ ಸ್ಥಿತಿಯಲ್ಲಿ ಗಮನವಿಟ್ಟು ಅಕಿಂಚಾಯಾತನವನ್ನು ಮೀರಿ ಹೋಗುತ್ತಾನೆ. ನೇವಸನ್ಯಾನಸನ್ನಾ ಆಯಾತನವೆಂದರೆ ಗ್ರಹಿಕೆ ಇಲ್ಲ, ಗ್ರಹಿಕೆ ಇಲ್ಲದೆಯೂ ಇಲ್ಲ ಎಂಬ ಸ್ಥಿತಿ. ಅಂದರೆ ಈ ಸ್ಥಿತಿಯಲ್ಲಿ ಗ್ರಹಿಕೆಯನ್ನು ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಮೀರಿಹೋಗುತ್ತಾರೆ. ಅಂದರೆ ಸ್ಥೂಲ ಗ್ರಹಿಕೆಗಳು ಇಲ್ಲವಾಗಿ, ಸೂಕ್ಷ್ಮ ಗ್ರಹಿಕೆಗಳು ಇರುತ್ತದೆ. ಇಲ್ಲ ಕೇವಲ ಗ್ರಹಿಕೆ ಮಾತ್ರ ವೇದನೆಗಳಲ್ಲು ಇದೇರೀತಿ ಭಾವಿಸಬೇಕು, ಹಾಗೆಯೇ ವಿನ್ಯಾನ ಮತ್ತು ಸ್ಪರ್ಶಗಳು ಸಹಾ. ಈ ಸ್ಥಿತಿಯನ್ನು ಈ ರೀತಿ ಉದಾಹರಿಸಬಹುದು. ಒಂದು ಪಾತ್ರೆಯಲ್ಲಿ ಎಣ್ಣೆಯಿರುತ್ತದೆ. ಅದನ್ನು ಚೆಲ್ಲುತ್ತೇವೆ. ಆಗ ಅದರಲ್ಲಿ ಎಣ್ಣೆ ಇರುವುದಿಲ್ಲ. ಆದರೂ ಮುಟ್ಟಿದಾಗ ಅಲ್ಲಿ ಸೂಕ್ಷ್ಮವಾಗಿ ಎಣ್ಣೆಯು ಪಾತ್ರೆಗೆ ಅಂಟಿರುತ್ತದೆ. ಅದೇ ರೀತಿಯಲ್ಲಿ ಭಿಕ್ಷುವು ತನ್ನ ಸ್ಥಿತಿಯಾದ ಗ್ರಹಿಕೆ ಇಲ್ಲ, ಹಾಗು ಗ್ರಹಿಕೆ ಇಲ್ಲದೆಯೂ ಇಲ್ಲ ಹೀಗೆ ಇರುತ್ತದೆ. ಆತ ಇದರಲ್ಲಿ ಲಕ್ಷ್ಯಕೊಟ್ಟು ಕ್ಷಿಪ್ರವಾಗಿ ಪ್ರವೇಶಿಸುತ್ತಾನೆ. ಹಾಗೆಯೇ ದೀರ್ಘಕಾಲ ಅದರಲ್ಲಿ ನೆಲೆಸುತ್ತಾನೆ. ಹಾಗೆಯೇ ಕ್ಷಿಪ್ರವಾಗಿ ಹೊರಗೆ ಬರುತ್ತಾನೆ. ಅದರ ಪುನರ್ ಅವಲೋಕನ ಮಾಡುತ್ತಾನೆ. ಆತ ಈ ರೀತಿಯಲ್ಲಿ ವಿಹರಿಸುತ್ತಾನೆ.
ಈ ಅರೂಪ ಧ್ಯಾನಗಳ ಪ್ರತಿಸ್ಥಿತಿಯಲ್ಲೂ ಏಕಾಗ್ರತೆ ಮತ್ತು ಸಮಚಿತ್ತತೆಯಿರುತ್ತದೆ. ಹಾಗು ಇವುಗಳು ಪ್ರತಿಯೊಂದು ಅನಂತವಾಗಿರುತ್ತದೆ. ಆದರೆ ಒಂದಕ್ಕಿಂತ ಮತ್ತೊಂದು ಸೂಕ್ಷ್ಮವಾಗಿರುತ್ತದೆ.
ಇಲ್ಲಿಗೆ ಅರೂಪ ಝಾನ ಮುಗಿಯಿತು.

ಸಜ್ಜನರ ಆನಂದಕ್ಕಾಗಿ ರಚಿಸಲ್ಪಟ್ಟಿರುವ ವಿಶುದ್ಧಿ ಮಗ್ಗದ, ಸಮಾಧಿ ಭಾಗದ ಹತ್ತನೆ ಅಧ್ಯಾಯವಾದ ಅರೂಪ ನಿದ್ದೆಸವು ಇಲ್ಲಿಗೆ ಸಂಕ್ಷಿಪ್ತವಾಗಿ ಮುಗಿಯಿತು 

Thursday, 12 April 2018

visuddhi magga ವಿಶುದ್ಧಿಮಾರ್ಗದ ಸಮಾಧಿ ಭಾಗದ ಅಧ್ಯಾಯ 9 ಬ್ರಹ್ಮವಿಹಾರ ನಿದ್ದೇಸ

ಅಧ್ಯಾಯ 9

ಬ್ರಹ್ಮವಿಹಾರ ನಿದ್ದೇಸ

1. ಮೆತ್ತ (ಮೈತ್ರಿ)


ಬ್ರಹ್ಮ ಎಂದರೆ ಶ್ರೇಷ್ಠ ಎಂದರ್ಥ. ಅತ್ಯುತ್ತಮ ಎಂದೂ ಅರ್ಥವಿದೆ. ವಿಹಾರ ಎಂದರೆ ವಿಹರಿಸುವುದು, ನೆಲೆಸುವುದು ಮತ್ತು ಬ್ರಹ್ಮ ದೇವತೆಗಳ ಮನಸ್ಸು. ಇದೇ ರೀತಿಯಲ್ಲಿ ವತರ್ಿಸುವುದರಿಂದ ಇದನ್ನು ಬ್ರಹ್ಮವಿಹಾರ ಎನ್ನುತ್ತಾರೆ.
ಇವು ನಿಜವಾಗಿ ಮನುಷ್ಯನನ್ನು ಮಾನವನನ್ನಾಗಿ ಮಾಡುತ್ತದೆ ಅಷ್ಟೇ ಅಲ್ಲದೆ, ಅವನನ್ನು ಬ್ರಹ್ಮತ್ವಕ್ಕೆ ಕರೆದೊಯ್ಯುತ್ತದೆ. ಇವನ್ನು ಸೀಮಾತೀತವಾದುದು ಮತ್ತು ಅಳೆಯಲಾಗದಂತಹುದು ಎನ್ನುತ್ತಾರೆ. ಇವು ನಾಲ್ಕು ಇರುವುದರಿಂದ 4 ಬ್ರಹ್ಮವಿಹಾರ ಎನ್ನುತ್ತಾರೆ.
1. ಮೆತ್ತಾ  2. ಕರುಣಾ  3. ಮುದಿತಾ   4. ಉಪೇಕ್ಖಾ.
ಇದು ನಿಜಮಿತ್ರನ ಲಕ್ಷಣ ಹೊಂದಿರುವುದರಿಂದ ಇದನ್ನು ಮೆತ್ತ ಎನ್ನುತ್ತಾರೆ. ಮೃದುತೆ ಹೊಂದಿರುವುದರಿಂದ ಮೆತ್ತಾ ಎನ್ನುತ್ತಾರೆ.
ಮೆತ್ತಾದ ಲಕ್ಷಣ ಏನೆಂದರೆ ಪರಹಿತ, ಪರಸುಖ ಕಾಮನ, ಅಂದರೆ ಸರ್ವರ ಹಿತ ಬಯಸುವಿಕೆಯಾಗಿದೆ. ಇದರ ಕ್ರಿಯೆ ಏನೆಂದರೆ ಸರ್ವರ ಕ್ಷೇಮವನ್ನು ಆಯ್ಕೆ ಮಾಡುವುದು. ಇದರ ತತ್ಕ್ಷಣದ ಕಾರಣ ಪ್ರಿಯರಾದವರನ್ನು ನೋಡುವುದು. ಇದರ ಶತ್ರು ದ್ವೇಷವಾಗಿದೆ, ಅದನ್ನು ಜಯಿಸಿದಾಗಲೇ ಮೆತ್ತ ಭಾವನದಲ್ಲಿ ವಿಜಯಿಯಾಗುತ್ತದೆ. ಮೆತ್ತಾದ ಪರೋಕ್ಷ ಶತ್ರು ಪ್ರೇಮ ಮತ್ತು ವಾತ್ಸಲ್ಯವಾಗಿದೆ. ಈ ಪರೋಕ್ಷ ಶತ್ರುವಿನಿಂದ ಸೋಲುವ ಸಾಧ್ಯತೆಯು ಇರುತ್ತದೆ. ಮೆತ್ತಾ ಧ್ಯಾನವು ಜಯಶಾಲಿಯಾಗಬೇಕಾದರೆ ಮೊದಲು ದ್ವೇಷವನ್ನು, ಕ್ರೋಧವನ್ನು ಜಯಿಸಬೇಕು.

ದ್ವೇಷ ಜಯಕ್ಕೆ ಸಹಾಯಕಾರಿ ಗಾಥೆಗಳು :

1. ಸಹನೆಗಿಂತ ಮಿಗಿಲಾದ ಶಿಸ್ತಿನ ನಿಯಮವಿಲ್ಲ, ಸಹನೆಯು ತಪಗಳಲ್ಲೇ ಶ್ರೇಷ್ಠವಾದುದು. ಸಹನೆಗಿಂತ ಮಿಗಿಲಾದ ಶ್ರೇಷ್ಠತ್ವ ಇನ್ನೊಂದಿಲ್ಲ. ಯಾರ ಬಲವು ಸಹನೆಯೋ ಆತನೇ ಶ್ರೇಷ್ಠ (ಬ್ರಾಹ್ಮಣ) ಎಂದೆಲ್ಲಾ ಸಹನೆಯ ಬಗ್ಗೆ ಮೌಲ್ಯ ಅರಿತು ಸಹನಶೀಲರಾಗುವುದು.
2. ಬುದ್ಧರ ವಾಣಿಯನ್ನು ನೆನೆಯುತ್ತಾ ಸಾಧಕರೇ, ನಿಮ್ಮನ್ನು ಡಕಾಯಿತರು ಗರಗಸದಿಂದ ತುಂಡು ತುಂಡಾಗಿ ಕತ್ತರಿಸಿದರೂ, ಯಾರ ಮನಸ್ಸು ದ್ವೇಷದಿಂದ ಕೂಡಿಲ್ಲವೊ, ಆತನು ಮಾತ್ರ ನನ್ನ ಬೋಧನೆ ಪಾಲಿಸುತ್ತಿದ್ದಾನೆ ಮತ್ತು ನೀವೇನಾದರೂ ಈಗ ಕೋಪ ಹೊಂದಿದ್ದೇ ಆದರೆ, ನೀವು ನನ್ನ ಬೋಧನೆ ಅನುಸರಿಸುತ್ತಿಲ್ಲ. ಕೋಪಿಯನ್ನು ಕೋಪದಿಂದ ಜಯಿಸಲು ಹೋದರೆ ನೀವೇ ಪರಮ ನೀಚರಾಗುವಿರಿ ಮತ್ತು ಜಯಿಸಲು ಕಠಿಣವಾದ ನಿಜ ಯುದ್ಧದಲ್ಲಿ ಸೋಲುವಿರಿ. ನಿಮ್ಮ ಶತ್ರು ಆನಂದ ತಾಳುವ ಕಾರ್ಯ ಮಾಡುತ್ತಿದ್ದೀರಿ. ನೀವು ಮರದ ತುಂಡಿನ ಸಮಾನರಾಗುವಿರಿ.
3. ನಾವು ಪರರಿಗೆ ಏನನ್ನು ಇಚ್ಛಿಸುತ್ತೇವೆಯೋ ಅವೆಲ್ಲಾ ನಮಗೆ ಮರಳಿ ದೊರೆಯುತ್ತವೆ. ಚಂಡಿನಂತೆ ಪುಟಿಯುತ್ತವೆ. ಪರರಿಗೆ ಕೆಟ್ಟದ್ದನ್ನು ಇಚ್ಛಿಸಿದರೆ ನಮಗೆ ಕೆಟ್ಟದಾಗುತ್ತದೆ. ಎಂದು ಕರ್ಮ ನಿಯಮ ಅರಿಯುವುದು.
4. ಮಾನವರಲ್ಲಿ ಏನಾದರೂ ಒಂದು ಒಳ್ಳೆಯ ಗುಣ ಇದ್ದೇ ಇರುತ್ತದೆ. ಅದನ್ನು ನೆನೆಯುತ್ತಾ ಮೈತ್ರಿಯನ್ನು ತೋರಿ.
5. ಏನೂ ಒಳ್ಳೆಯ ಗುಣವಿಲ್ಲದಿದ್ದರೆ ಆತನ ಮುಂದಿನ ಗತಿ ಅತ್ಯಂತ ಭೀಕರ ಎಂಬುದು ತಿಳಿದು ಆತನಲ್ಲಿ ಮೈತ್ರಿಯನ್ನು ತೋರಿ.
6. ಈ ಕೋಪದಿಂದ ನಮ್ಮ ಸದ್ಗುಣದ ಬೇರುಗಳೆಲ್ಲಾ ಅಲ್ಲಾಡುತ್ತವೆ. ಅಲ್ಪಕ್ಕಾಗಿ ಅಪಾರ ಪುಣ್ಯ ಸಂಪತ್ತು ಕಳೆಯಲು ನಾವು ಮೂರ್ಖರಾಗಬೇಕೆ?
7. ಪರರು ನೀಚ ಕೃತ್ಯ ಮಾಡುತ್ತಿದ್ದಾರೆ. ಅವರಂತೆ ನೀವು ವತರ್ಿಸಿ ಆತನ ಹಿಂಬಾಲಕ ಅಥವಾ ತದ್ರೂಪಿ ಆಗಲು ಬಯಸುವಿರಾ?
8. ಯಾವ ಕೋಪದ ಕಾರಣ ಪರರು ನೀಚರಾಗುತ್ತಾರೋ ಅಂತಹ ಕೋಪವನ್ನು ನವು ದಮನಿಸಬಾರದೇಕೆ?
9. ಅವರು ಮಾಡಿದ ಕರ್ಮಕ್ಕೆ ಅವರಿಗೆ ಫಲ ದೊರೆಯುತ್ತದೆ.  ನೀವೇನಾದರೂ ಮಧ್ಯೆ ಪ್ರವೇಶಿಸಿದರೆ ನೀವು ಕರ್ಮ ಫಲದಲ್ಲಿ ಭಾಗಿಯಾಗುತ್ತೀರಿ.
10. ದ್ವೇಷಿಯು ಸದ್ಗುಣವನ್ನು ಹಿಡಿಯಲಾರ. ಆತನಿಗೆ ಸತ್ಯ ನೋಡುವ ಬಯಕೆಯು ಇಲ್ಲ. ಯಾವಾಗ ದ್ವೇಷವು ಮಾನವನ ಮನಸ್ಸನ್ನು ಆವರಿಸುವುದೋ ಆಗ ಬಲಿಷ್ಠವಾದ ಕತ್ತಲೆಯು, ಅಜ್ಞಾನವು ಆಳ್ವಿಕೆ ನಡೆಸುತ್ತದೆ.
11. ಅತ್ಯಂತ ಕಡುಕಷ್ಟದ ಪರಿಸ್ಥಿತಿಯಲ್ಲೂ ಬೋಧಿಸತ್ವರು ಕೋಪಿಸಲಿಲ್ಲ, ಹಿಂಸಿಸಲಿಲ್ಲ. ಆದರ್ಶವಾಗಿ ಅವರನ್ನು ಮುಂದಿಟ್ಟು ನಾನು ಮೈತ್ರಿ ಪಾಲಿಸುವೆ.
12. ಯಾರು ದ್ವೇಷಿಯನ್ನು ದ್ವೇಷದಿಂದ ಪರಿವರ್ತನೆ ಮಾಡುವನೋ ಆತ ಮೊದಲನೆಯವನಿಗಿಂತ ನೀಚ. ಯಾರು ದ್ವೇಷಿಗೆ ದ್ವೇಷ ತೋರುವುದಿಲ್ಲವೋ ಆತ ಕಠಿಣವಾದ ಯುದ್ಧದಲ್ಲಿ ಜಯಶಾಲಿಯಾಗಿದ್ದಾನೆ.
13. ಪ್ರತಿಯೊಬ್ಬರು ಒಂದಲ್ಲ ಒಂದು ಜನ್ಮದಲ್ಲಿ ನಮಗೆ ತಂದೆ-ತಾಯಿಯರು, ಸೋದರ ಸೋದರಿಯರು ಹಾಗು ಮಕ್ಕಳಾಗಿದ್ದಾರೆ. ಆದ್ದರಿಂದ ಯಾರ ಮೇಲೆ ಕೋಪಿಸಲಿ.
14. ಯಾವ ಮಾನವ ಯತಾರ್ಥವನ್ನು ನೋಡುತ್ತಾನೋ, ಆತನು ದ್ವೇಷವನ್ನು ದಮಿಸುತ್ತಾನೆ. ಆದ್ದರಿಂದ ನೀವು ಎಲ್ಲಾ ಕುಶಲಕರ್ಮ ಮಾಡುತ್ತಾ ಇರಿ. ಅದರಿಂದಾಗಿ ನೀವು ಪಶ್ಚಾತ್ತಾಪ ಪಡುವುದಿಲ್ಲ.
15. ಯಾರಿಗೆ ನಾನು ಕೋಪಿಸಲಿ, ಕೈಗೆ, ಕಾಲಿಗೆ, ಕಣ್ಣಿಗೆ, ನಾಲಿಗೆಗೆ, ಆತನ ಇಚ್ಛೆಗೆ, ಆತನ ಕೋಪಕ್ಕೆ? ಯಾರೊಂದಿಗೆ ನಾನು ಕೋಪಿಸಲಿ, ಬಿಡದೇಹವು ಅವನಲ್ಲ, ಪೂರ್ಣ ದೇಹವೂ ಅವನಲ್ಲ.
16. ಕೋಪದಿಂದ ದ್ವೇಷವು ನಾಶವಾಗಲಾರದು. ಅಕ್ರೋಧದಿಂದ ಮಾತ್ರ ನಾಶವಾಗುತ್ತದೆ. ಇದೇ ಸನಾತನ ನಿಯಮವಾಗಿದೆ.
ಇತ್ಯಾದಿ ಗಾಥೆಗಳೊಂದಿಗೆ ಹೀಗೆಯೇ ಕೋಪವನ್ನು ಧಮಿಸಿ ಸಹನೆಯನ್ನು ಸ್ಥಾಪಿಸಬೇಕು.
ಮೈತ್ರಿ ಧ್ಯಾನವು ಕೆಲವರ ಮೇಲೆ ಮಾಡಬಾರದು. ಅವರೆಂದರೆ : 1. ಪುರುಷರಾಗಿದ್ದರೆ ಸ್ತ್ರೀಯ ಮೇಲೆ, ಸ್ತ್ರೀಯಾಗಿದ್ದರೆ ಪುರುಷನ ಮೆಲೆ 2. ಸತ್ತಿರುವವರ ಮೇಲೆ. ಏಕೆಂದರೆ:
1. ವಿರುದ್ಧ ಲಿಂಗದವರ ಮೇಲೆ ಮಾಡಿದರೆ ಅವರಲ್ಲಿ ಕಾಮವು ಉದಯಿಸಬಹುದು, ಪ್ರೇಮವು ಉದಯಿಸಬಹುದು ಆಗ ಅದು ಮೈತ್ರಿಧ್ಯಾನ ಅನಿಸುವುದಿಲ್ಲ. ಆದ್ದರಿಂದ ಸ್ತ್ರೀಯ ಮೇಲೆ ಅಥವಾ ಸ್ತ್ರೀಯು ಪುರುಷನ ಮೇಲೆ ಮಾಡಬಾರದು. 2. ಇನ್ನು ಸತ್ತಿರುವವರ ಮೇಲೆ ಮಾಡಿದರೆ ಅವರ ಅಸ್ತಿತ್ವವು ಬದಲಾಗಿರುತ್ತದೆ. ಅದು ಗುರಿಯನ್ನು ತಲುಪದು, ಅದರಿಂದ ಧ್ಯಾನವು ಸಿದ್ಧಿಯಾಗದು.
ಮತ್ತು ಮೈತ್ರಿಯನ್ನು ಮೊದಲು ನಿಮ್ಮ ಮೇಲೆಯೇ ಪ್ರಸರಿಸಬೇಕು. ಹೇಗೆಂದರೆ ನಿಮ್ಮ ದೀಪ ಉರಿದಾಗ ಮಾತ್ರ ನೀವು ಪರರ ದೀಪಗಳನ್ನು ಉರಿಸುವಿರಿ. ಭಗವಾನರು ತಮ್ಮ ದಿವ್ಯದೃಷ್ಟಿಯಲ್ಲಿ ಜೀವಿಗಳಲ್ಲೆಲ್ಲಾ ವೀಕ್ಷಿಸಿ ಈ ರೀತಿ ಹೇಳುತ್ತಾರೆ:
ನಾನು ನನ್ನ ಮನಸ್ಸಿನಿಂದ ಎಲ್ಲಾ ದಿಕ್ಕುಗಳಲ್ಲಿಯೂ ಹೋಗಿದ್ದೇನೆ. ಆದರೆ ನನಗೆ ನನಗಿಂತ ಪ್ರಿಯರು ನನಗೆ ಯಾರು ಕಾಣಲಿಲ್ಲ. ಹಾಗೆಯೇ ಪರಜೀವಿಗಳು ಸಹಾ ತಮ್ಮನ್ನೇ ಹೆಚ್ಚು ಪ್ರೀತಿಸುತ್ತವೆ. ಯಾರು ನಿಜವಾಗಿ ತಮ್ಮನ್ನು ಪ್ರೀತಿಸುವರೊ ಅವರು ಪರರಲ್ಲಿಯೂ ತಮ್ಮನ್ನೇ ಕಂಡು ಯಾರನ್ನೂ ಹಿಂಸಿಸುವುದಿಲ್ಲ ಆದ್ದರಿಂದ ತಮ್ಮ ಮೇಲೆಯೇ ಮೊದಲು ಮೈತ್ರಿ ಪ್ರಸರಿಸಬೇಕು.

ಮೆತ್ತಾ ಧ್ಯಾನ :
ಮೊದಲು ಕನ್ನಡಿಯಲ್ಲಿ ಅಥವಾ ಕೊಳದಲ್ಲಿ ತನ್ನ ಪ್ರಶಾಂತ ಮುಖವನ್ನು ನೋಡಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಂತರ ಆತನು ಏಕಾಂತದಲ್ಲಿ ನಿರ್ಜನ ನಿಶ್ಶಬ್ದ ವಾತಾವರಣದಲ್ಲಿ ಪದ್ಮಾಸನದಲ್ಲಿ ಕುಳಿತು, ಅಕುಶಲವಾದ ಮತ್ತು ಆಸೆಗಳಿಂದ ಕೂಡಿದ ಹಾಗು ದ್ವೇಷದಿಂದ ಕೂಡಿದ ಎಲ್ಲಾರೀತಿಯ ಯೋಚನೆಗಳಿಂದ ಮುಕ್ತನಾಗಬೇಕು. ನಂತರ ತನ್ನ ಮುಖವನ್ನು ಪ್ರಶಾಂತ ಮುಖವನ್ನು ನೆನಪಿಸಿಕೊಳ್ಳಬೇಕು. ಹಾಗೆಯೇ ಆ ನಗುಮುಖವನ್ನು ನೆನೆಸಿಕೊಳ್ಳುತ್ತಾ ನಾನು ಸುಖಿಯಾಗಿರಲಿ, ನಾನು ದುಃಖದಿಂದ ಮುಕ್ತನಾಗಲಿ, ನಾನು ದ್ವೇಷದಿಂದ ಮುಕ್ತನಾಗಲಿ, ನಾನು ಹಿಂಸಾ ಭಾವನೆಯಿಂದ ಮುಕ್ತನಾಗಲಿ, ನಾನು ನೋವುಗಳಿಂದ ಮುಕ್ತನಾಗಲಿ, ನಾನು ಸದಾ ಸುಖಿಯಾಗಿರಲಿ ಎಂದು ಸ್ವಹಾರೈಕೆ ಮಾಡಿಕೊಳ್ಳಬೇಕು. ಇದನ್ನೇ ನಿರಂತರ ಕೆಲಕಾಲ ಅಥವಾ 20 ರಿಂದ 25 ಸಲ ಕನಿಷ್ಠಪಕ್ಷ ಹೇಳಿಕೊಳ್ಳಬೇಕು. ಇದು ಜಪದ ರೀತಿ ಇರಬಾರದು, ಅತ್ಯಂತ ನೈಜವಾಗಿ, ಹೃತ್ಫೂರ್ವಕವಾಗಿ, ಆನಂದವಾಗಿ ಮಾಡಬೇಕು.
ನಂತರ ಪೂಜ್ಯರಾದವರನ್ನು ಆಯ್ಕೆ ಮಾಡಬೇಕು ಅಥವಾ ಗುರುಗಳನ್ನು ಅಥವಾ ಭಿಕ್ಷುಗಳನ್ನು ಆಯ್ಕೆ ಮಾಡಿಕೊಂಡು ಅವರ ನಿರ್ಮಲವಾದ, ಮುಗ್ಧವಾದ, ಆನಂದಭರಿತ ಮುಖವನ್ನು ಸ್ಪಷ್ಟ ನೆನಪು ಮಾಡುತ್ತಾ, ಈ ಪೂಜ್ಯರು ಸುಖಿಯಾಗಿರಲಿ ಮತ್ತು ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗಲಿ, ಹಾಗು ಎಲ್ಲಾ ರೀತಿಯ ಚಿತ್ತ ಕ್ಲೇಷಗಳಿಂದ ಮುಕ್ತರಾಗಲಿ ಎಂದು ಹೃತ್ಪೂರ್ವಕವಾಗಿ ನಿರಂತರ ಹಾರೈಸಬೇಕು.
ಅನಂತರ ತಂದೆ ನಂತರ ತಾಯಿಯನ್ನು ಆಯ್ಕೆ ಮಾಡಿಕೊಂಡು ಅವರ ಸಂತೋಷದ ಅಥವಾ ಆನಂದದ ಮುಖವನ್ನು ನೆನೆಯುತ್ತಾ ಈ ನನ್ನ ತಂದೆ ಅಥವಾ ತಾಯಿಯು ಸದಾ ಸುಖಿಯಾಗಿರಲಿ ಹಾಗು ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗಲಿ, ಎಲ್ಲಾ ರೀತಿಯ ದ್ವೇಷದಿಂದ ಮುಕ್ತರಾಗಲಿ, ಅವರ ಮನಸ್ಸು ಆನಂದದಿಂದ ಇರಲಿ ಎಂದು ಹೃತ್ಫೂರ್ವಕವಾಗಿ ನಿರಂತರ ಹಾರೈಸಬೆಕು.
ನಂತರ ಕುಟುಂಬದ ಸದಸ್ಯರನ್ನು ಅಥವಾ ಮಿತ್ರರನ್ನು ಒಬ್ಬೊಬ್ಬರಾಗಿ ನೆನೆಯುತ್ತ ಇವರು ಸದಾ ಸುಖಿಗಳಾಗಿರಲಿ ಹಾಗು ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗಲಿ, ಇವರು ದ್ವೇಷದಿಂದ ಮುಕ್ತರಾಗಲಿ, ಹಾಗು ಕ್ಲೇಷಗಳಿಂದ ಮುಕ್ತರಾಗಲಿ ಎಂದು ಹಾರೈಸಬೇಕು.
ನಂತರ ಅತ್ಯಂತ ಪ್ರೀತಿಪಾತ್ರರನ್ನು ನೆನೆಯುತ್ತ ಇವರು ಸದಾ ಸುಖಿಯಾಗಿರಲಿ ಮತ್ತು ಇವರ ಮನವು ಆನಂದದಿಂದ ತುಂಬಿರಲಿ, ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗಲಿ. ಇವರು ದ್ವೇಷದಿಂದ ಮುಕ್ತರಾಗಲಿ ಎಂದು ಹಾರೈಸಬೇಕು.
ನಂತರ ಪರಿಚಯವುಳ್ಳವರನ್ನು ನೆನೆಯುತ್ತಾ ಹೀಗೆಯೇ ಹಾರೈಸಬೇಕು.
ನಂತರ ನಮ್ಮ ಮೇಲೆ ದ್ವೇಷವಿರುವ ಅಥವಾ ನಾವು ದ್ವೇಷಿಸುವಂತಹ ವ್ಯಕ್ತಿಗಳನ್ನು ನೆನೆಯುತ್ತಾ ಹೀಗೆಯೇ ಹಾರೈಸಬೇಕು. ದ್ವೇಷಿಯನ್ನು ಸಹಾ ಅತ್ಯಂತ ಹೃತ್ಫೂರ್ವಕವಾಗಿ ಹಾರೈಸುತ್ತಾ ಆತನ ಮೇಲಿನ ದ್ವೇಷವನ್ನು ವಿಶೇಷವಾಗಿ ನಾಶಮಾಡಬೇಕು.
ಕೆಲವೊಮ್ಮೆ ಕಷ್ಟವಾದರೆ ಅತ್ಯಂತ ಪ್ರೀತಿಪಾತ್ರರನ್ನು ನೆನೆಯುತ್ತಾ ಮೈತ್ರಿ ಪ್ರಸಾರ ಮಾಡಿ ನಂತರ ಅದೇ ರೀತಿಯಾದ ಸಿಹಿ ಮನಸ್ಸಿನಿಂದ, ಮೃದು ಮನಸ್ಸಿನಿಂದ ದ್ವೇಷಿಯ ಮೇಲೆ ಮೈತ್ರಿಧ್ಯಾನ ಮಾಡಬೆಕು.
ಈ ರೀತಿಯಾಗಿ ಆತನು ಸರ್ವರ ಮೇಲೂ ಸಮಾನವಾಗಿ, ಪೂರ್ಣವಾಗಿ, ಪರಿಶುದ್ಧವಾಗಿ ಅದೇರೀತಿಯ ಮಧುರ ಮೌನದಿಂದ ಕೂಡಿರುವವನಾಗಿ ಎಲ್ಲರಲ್ಲೂ ತನನ್ನೇ ಕಾಣುತ್ತಾನೆ. ಅಥವಾ ತನ್ನ ಪ್ರೀತಿ ಪಾತ್ರರನ್ನು ಕಾಣುತ್ತಾನೆ. ಯಾರಲ್ಲೂ ಕೋಪವಿಲ್ಲ, ಎಲ್ಲರ ಕ್ಷೇಮವನ್ನೇ ಹಾರೈಸುತ್ತಾರೆ. ಒಂದುವೇಳೆ ನಿಮ್ಮಲ್ಲಿ ಕೋಪವಿದೆ ಎಂದರೆ ನೀವು ಶಾಶ್ವತವಾಗಿ ಕೋಪವಿಲ್ಲದಂತೆ ಮಾಡಿಕೊಳ್ಳಬೇಕು.
ನಂತರ ಸರ್ವಜೀವಿಗಳ ಮೇಲೆ ಮಾಡಬೇಕು ಎಲ್ಲಾ ಜೀವಿಗಳು ಸುಖಿಯಾಗಿರಲಿ, ಸುಖಯುತ ಮನಸ್ಸಿನಿಂದ ಕೂಡಿರಲಿ, ಅವು ಎಲ್ಲಾ ವಿಧವಾದ ದುಃಖಗಳಿಂದ ಮುಕ್ತರಾಗಲಿ, ಅವು ಎಲ್ಲಾ ವಿಧವಾದ ದ್ವೇಷದಿಂದ ಮುಕ್ತರಾಗಲಿ ಎಂದು ಹಾರೈಸಬೇಕು.

2ನೇಯ ಪಯರ್ಾಯ ವಿಧಾನ : 

ಮೆತ್ತಾ ಸುಖದಲ್ಲಿ ಈ ರೀತಿಯ ಧ್ಯಾನ ಕ್ರಮವಿದೆ. ಇಲ್ಲಿ ನೀವು ಈ ರೀತಿಯಲ್ಲಿ ಧ್ಯಾನ ಮಾಡಬೇಕು. ಹಾಗು ಇದೇರೀತಿ ನಿರಂತರ ಹಾರೈಕೆ ಮಾಡಬೇಕು.
ಎಲ್ಲಾ ಜೀವಿಗಳು ಸುಖಿಯಾಗಿರಲಿ ಮತ್ತು ಕ್ಷೇಮವಾಗಿರಲಿ ಹಾಗು ಅವರ ಮನಗಳು ಸುಖದಿಂದ ಸದಾ ತುಂಬಿರಲಿ.
ಯಾವೆಲ್ಲಾ ಜೀವಿಗಳು ಇವೆಯೋ ಅವು ದುರ್ಬಲವಾಗಿರಲಿ ಅಥವಾ ಬಲಿಷ್ಠವಾಗಿರಲಿ, ಕಿರಿದಾಗಿರಲಿ ಅಥವಾ ದಪ್ಪವಾಗಿರಲಿ ಅಥವಾ ತೆಳುವಾಗಿರಲಿ ಅಥವಾ ಶ್ರೇಷ್ಠವಾಗಿರಲಿ, ಚಿಕ್ಕದಾಗಿರಲಿ ಅಥವಾ ಮಧ್ಯಮ ಪ್ರಮಾಣದವು ಆಗಿರಲಿ.
ಗೋಚರವಾಗಿರಲಿ ಅಥವಾ ಅದೃಶ್ಯವಾಗಿರಲಿ, ಹತ್ತಿರ ಜೀವಿಗಳಾಗಲಿ ದೂರದ ಜೀವಿಗಳಾಗಲಿ, ಹುಟ್ಟಿರುವ ಜೀವಿಗಳಾಗಲಿ ಅಥವಾ ಮುಂದೆ ಹುಟ್ಟುವ ಜೀವಿಗಳಾಗಲಿ ಅವೆಲ್ಲಾ ಜೀವಿಗಳ ಹೃದಯ (ಮನಸ್ಸು) ಸುಖದಿಂದ, ಆನಂದದಿಂದ ತುಂಬಿರಲಿ.
ಒಬ್ಬನು ಮತ್ತೊಬ್ಬನನ್ನು ಹಿಂಸಿಸದಿರಲಿ, ಇನ್ನೊಬ್ಬನನ್ನು ಯಾವ ಕಾರಣಕ್ಕೂ ಕೀಳಾಗಿ ಕಾಣದಿರಲಿ (ಅಸಹ್ಯ ಪಡದಿರಲಿ), ಎಂದಿಗೂ ದ್ವೇಷದಿಂದ ಮತ್ತು ಕೋಪದಿಂದ ಇರದಿರಲಿ. ಯಾರೂ ಪರರ ನೋವನ್ನು ಬಯಸದಿರಲಿ. ಹೇಗೆ ತಾಯಿಯು ತನ್ನ ಏಕಮಾತ್ರ ಪುತ್ರನನ್ನು ತನ್ನ ಎಲ್ಲಾ ಶಕ್ತಿಮೀರಿ ರಕ್ಷಿಸುವಳೋ (ಪ್ರಾಣ ಕೊಟ್ಟಾದರೂ) ಅದೇರೀತಿಯಲ್ಲಿ ಅಸೀಮ ಮೈತ್ರಿಯಿಂದ ಸರ್ವಜೀವಿಗಳ ಮೇಲೆ ಮೈತ್ರಿ ಪ್ರಸರಿಸಲಿ.
ಹೀಗೆ ಒಬ್ಬನು ಇಡೀ ವಿಶ್ವಕ್ಕೆ (ಬ್ರಹ್ಮಾಂಡಕ್ಕೆ) ತಡೆಯಿಲ್ಲದೆ, ಸರ್ವರನ್ನು ಹಾರೈಸುವ ಮನಸ್ಸಿನಿಂದ ಕೂಡಿರಲಿ, ಮೇಲೆ ಹಾರೈಸಲಿ, ಕೆಳಗೆ ಹಾರೈಸಲಿ, ಸುತ್ತಲು ಹಾರೈಸಲಿ ಅವರು ದ್ವೇಷವಿಲ್ಲದೆ, ಕೋಪವಿಲ್ಲದೆ ಮತ್ತು ಶೋಕವಿಲ್ಲದೆ ಎಲ್ಲಾ ದಿಕ್ಕುಗಳಲ್ಲೂ ಪ್ರಸರಿಸಲಿ.
ಸಾಧಕನು ಈ ರೀತಿಯಾದ ಚಿತ್ತದಿಂದ ಆತನು ನಿಂತಿರಲಿ, ನಡೆಯುತ್ತಿರಲಿ, ಕುಳಿತಿರಲಿ ಅಥವ ಮಲಗಿರಲಿ ಆತನು ಸದಾ ಈ ರೀತಿಯ ಚಿತ್ತದಿಂದಲೇ ಕೂಡಿರಲಿ. ಎಲ್ಲಿಯವರೆಗೆ ಆತ ಜಾಗ್ರತನೋ, ಅಲ್ಲಿಯವರೆಗೆ ಹೀಗೆಯೇ ಸಾಧನೆ ಮಾಡುವುದಕ್ಕೆ ಅವರು ಬ್ರಹ್ಮವಿಹಾರ ಎನ್ನುತ್ತಾರೆ.

3ನೇಯ ಪಯರ್ಾಯ ವಿಧಾನ :

ಇಲ್ಲಿ ಆತನು ಈ ರೀತಿ ಮೈತ್ರಿಯನ್ನು ಧ್ಯಾನಿಸುತ್ತಾನೆ.
1. ಎಲ್ಲಾ ಜೀವಿಗಳು ದ್ವೇಷದಿಂದ, ಶೋಕದಿಂದ, ನೋವಿನಿಂದ ಮುಕ್ತರಾಗಲಿ ಹಾಗು ಸದಾ ಸುಖದಿಂದ ಇರುವಂತಾಗಲಿ.
2. ಉಸಿರಾಡುವಂತಹ ಎಲ್ಲಾ ಜೀವಿಗಳು ದ್ವೇಷದಿಂದ, ಶೋಕದಿಂದ, ನೋವಿನಿಂದ ಮುಕ್ತರಾಗಲಿ ಹಾಗು ಸದಾ ಸುಖದಿಂದ ಇರುವಂತಾಗಲಿ.
3. ಎಲ್ಲಾ ಪ್ರಾಣಿಗಳು ದ್ವೇಷದಿಂದ, ಶೋಕದಿಂದ, ನೋವಿನಿಂದ ಮುಕ್ತರಾಗಲಿ ಹಾಗು ಸದಾ ಸುಖದಿಂದ ಇರುವಂತಾಗಲಿ.
4. ಎಲ್ಲಾ ವ್ಯಕ್ತಿಗಳು ದ್ವೇಷದಿಂದ, ಶೋಕದಿಂದ, ನೋವಿನಿಂದ ಮುಕ್ತರಾಗಲಿ ಹಾಗು ಸದಾ ಸುಖದಿಂದ ಇರುವಂತಾಗಲಿ.
5. ಯಾವುವೆಲ್ಲಾ ತಾನು ಎಂಬ ಭಾವನೆ ಹೊಂದಿವೆಯೋ ಅವೆಲ್ಲಾ ಜೀವಿಗಳು ದ್ವೇಷದಿಂದ, ಶೋಕದಿಂದ, ನೋವಿನಿಂದ ಮುಕ್ತರಾಗಲಿ ಹಾಗು ಸದಾ ಸುಖದಿಂದ ಇರುವಂತಾಗಲಿ.

4ನೇಯ ಪಯರ್ಾಯ ವಿಧಾನ :

ಇಲ್ಲಿ ಆತನು ಈ ರೀತಿ ಮೈತ್ರಿಯನ್ನು ಧ್ಯಾನಸುತ್ತಾರೆ.
1. ಎಲ್ಲಾ ಸ್ತ್ರೀಯರು ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
2. ಎಲ್ಲಾ ಪುರುಷರು ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
3. ಎಲ್ಲಾ ಆರ್ಯರು (ಶ್ರೇಷ್ಠರು) ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
4. ಎಲ್ಲಾ ಅನಾರ್ಯರು (ಶ್ರೇಷ್ಠರಲ್ಲದಂತಹ) ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
5. ಎಲ್ಲಾ ದೇವತೆಗಳು ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
6. ಎಲ್ಲಾ ಮಾನವರು ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
7. ಎಲ್ಲಾ ದುರ್ಗತಿಯ ಜೀವಿಗಳು ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.

5ನೇಯ ಪಯರ್ಾಯ ವಿಧಾನ :

ಇಲ್ಲಿ ಆತನು ಈ ರೀತಿ ಮೈತ್ರಿಯನ್ನು ಧ್ಯಾನಿಸುತ್ತಾನೆ :
1. ಪೂರ್ವ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
2. ಪಶ್ಚಿಮ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
3. ಉತ್ತರ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
4. ದಕ್ಷಿಣ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
5. ಊದ್ರ್ವ ದಿಕ್ಕಿನಲ್ಲಿರುವ (ಮೇಲೆ) ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
6. ಅಧೋ ದಿಕ್ಕಿನಲ್ಲಿರುವ (ಕೆಳಗೆ) ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.

6ನೇಯ ಮಿಶ್ರಣ ವಿಧಾನ ಇಲ್ಲಿ ಹೀಗೆ ಧ್ಯಾನಿಸುತ್ತಾನೆ.

ಪೂರ್ವ ದಿಕ್ಕಿನಲ್ಲಿರುವ ಎಲ್ಲಾ ಆರ್ಯರು ದುಃಖದಿಂದ ಮುಕ್ತರಾಗಿ ಸದಾ ಸುಖಿಯಾಗಿರಲಿ
ಪಶ್ಚಿಮ ದಿಕ್ಕಿನಲ್ಲಿರುವ ಎಲ್ಲಾ ದೇವತೆಗಳು ದುಃಖದಿಂದ ಮುಕ್ತರಾಗಿ ಸದಾ ಸುಖಿಯಾಗಿರಲಿ
ಉತ್ತರ ದಿಕ್ಕಿನಲ್ಲಿರುವ ಎಲ್ಲಾ ಮಾನವರು ದುಃಖದಿಂದ ಮುಕ್ತರಾಗಿ ಸದಾ ಸುಖಿಯಾಗಿರಲಿ
ಹೀಗೆಯೇ ಎಲ್ಲಾ ದಿಕ್ಕುಗಳು ಮತ್ತು 4ನೆಯ ವಿಧಾನದ 7 ಗುಂಪುಗಳನ್ನು ಮಿಶ್ರಣ ಮಾಡಿ ಧ್ಯಾನಿಸಬೆಕು.
ಈ ರೀತಿಯಲ್ಲಿ ಆತನು ಮೈತ್ರಿಭರಿತನಾಗಿ ಪ್ರತಿ ದಿಕ್ಕುಗಳಲ್ಲಿ ಮೈತ್ರಿ ಪ್ರಸರಿಸುತ್ತಾ, ಹಾರೈಸುತ್ತಾ ವಿಹರಿಸುವನು. ಎಲ್ಲೆಲ್ಲೂ ಸಮನಾಗಿ, ಸರ್ವಜೀವಿಗಳ ಮೇಲೆ ಇಡೀ ಬ್ರಹ್ಮಾಂಡದ ಮೇಲೆ ಮೈತ್ರಿಚಿತ್ತದವನಾಗಿ, ಅಳತೆಯಿಲ್ಲದ ರೀತಿ ಪ್ರಸರಿಸಿ, ಅಸೀಮವಾಗಿ, ಯಾವುದೇ ರೀತಿ ಶತ್ರುತ್ವವಿಲ್ಲದೆ, ಯಾವುದೇ ರೀತಿಯ ಶೋಕವಿಲ್ಲದೆ ನೆಲಸುತ್ತಾನೆ. ಎಲ್ಲಾ ಜೀವಿಗಳ ಮೇಲೆ, ಎಲ್ಲಾ ಪ್ರಾಣಿಗಳ ಮೇಲೆ, ಎಲ್ಲಾ ಕೀಟಗಳ ಮೇಲೆ, ನಾನು, ನನ್ನದು ಎಂದು ಭಾವಿಸುವ ಎಲ್ಲಾ ಜೀವಿಗಳ ಎಲ್ಲರ ಮೇಲೆ ಯಾವುದೇ ರೀತಿಯ ಬೇಧಭಾವವಿಲ್ಲದ ಸಮನಾಗಿ ಮೈತ್ರಿಧ್ಯಾನ ಮಾಡಿದಾಗ ಆತನಿಗೆ ಪ್ರಥಮ ಧ್ಯಾನ ಲಭಿಸುತ್ತದೆ.
ಆತನು ನಾಲ್ಕು ರೀತಿಯಲ್ಲಿ ಪ್ರಥಮ ಸಮಾಧಿ ಪಡೆಯಬಹುದು.
1. ಎಲ್ಲಾ ಜೀವಿಗಳೂ ದ್ವೇಷದಿಂದ ಮುಕ್ತರಾಗಲಿ
2. ಎಲ್ಲಾ ಜೀವಿಗಳೂ ಶೋಕದಿಂದ ಮುಕ್ತರಾಗಲಿ
3. ಎಲ್ಲಾ ಜೀವಿಗಳೂ ನೋವಿನಿಂದ ಮುಕ್ತರಾಗಲಿ
4. ಎಲ್ಲಾ ಜೀವಿಗಳೂ ಸದಾ ಸುಖಿಯಾಗಿ ಇರುವಂತಾಗಲಿ.
ಈ ರೀತಿಯಲ್ಲಿ ಒಂದೊಂದೇ ವಾಕ್ಯದಲ್ಲೂ ಸಮಾಧಿಗಳಿಸಬಹುದು. ಮಿಶ್ರಣ ವಿಧಾನದಲ್ಲಿ ಆತನು 528 ರೀತಿಯಲ್ಲಿ ಮೈತ್ರಿಧ್ಯಾನ ಆಚರಿಸಿ ಧ್ಯಾನ ಲಾಭಗಳನ್ನು ಪಡೆಯಬಹುದು.
ಹಾಗೆಯೇ ಮುಂದುವರೆದು ತೃತೀಯ ಧ್ಯಾನದ ಹಂತಗಳನ್ನು ಮುಟ್ಟಬಹುದು. ಶುಭ ವಿಮೋಕ್ಷಗಳಲ್ಲಿ ಮೈತ್ರಿ ಧ್ಯಾನವು ಶ್ರೇಷ್ಠವಾದುದು ಎನ್ನುತ್ತಾರೆ.
ಹೀಗೆ ಓ ಭಿಕ್ಷುಗಳೇ ಈ ರೀತಿ ಮೈತ್ರಿ ಧ್ಯಾನದಿಂದ ಚಿತ್ತವಿಮುಕ್ತಿ ಪಡೆಯುತ್ತ, ಅಭಿವೃದ್ಧಿಗೊಳಿಸುತ್ತಾ ಬೆಳವಣಿಗೆ ಮಾಡುತ್ತಾ, ಈ ಮೈತ್ರಿ ಧ್ಯಾನವನ್ನೇ ವಾಹನದಂತೆ ಬಳಸುತ್ತಾ (ಅಂದರೆ ಧ್ಯಾನದಲ್ಲಿ ಅತ್ಯಂತ ಹಿಡಿತವಿಟ್ಟಿರುವ) ಚೆನ್ನಾಗಿ ಸ್ಥಾಫಿಸಿ ಮತ್ತು ದೃಢವಾಗಿ ಪ್ರತಿಷ್ಠಾಪಿಸಿ (ಅಂದರೆ ಯಾವುದರಿಂದಲೂ ಅಲ್ಲಾಡುವ) ಶ್ರೇಷ್ಠತ್ವವನ್ನು ಪಡೆಯುತ್ತಾ, ಪರಿಪೂರ್ಣತೆಯನ್ನು ಸಾಧಿಸಿದಾಗ ಆತನು ಹನ್ನೊಂದು ಲಾಭಗಳನ್ನು ಪಡೆಯುತ್ತಾನೆ.

ಮೈತ್ರಿಯ ಧ್ಯಾನದಿಂದ ಸಿಗುವಂತಹ 11 ಮಹತ್ತರ ಲಾಭಗಳು :

1. ಆತನು ಸುಖವಾಗಿ ನಿದ್ರಿಸುತ್ತಾನೆ : ಹೇಗೆಂದರೆ ಧ್ಯಾನದಲ್ಲಿ ಪ್ರವೇಶಿಸುವಂತೆ ಹಾಗು ಕ್ಷಿಪ್ರವಾಗಿ ನಿದ್ರಾ ಸ್ಥಿತಿಯಲ್ಲಿರುತ್ತಾನೆ.
2. ಆತನು ಸುಖವಾಗಿ ಎಚ್ಚೆತ್ತುಕೊಳ್ಳುತ್ತಾನೆ : ಕಮಲವು ಅರಳುವಂತೆ ಯಾವುದೇ ರೀತಿ ಬಾಧೆಯಿಲ್ಲದೆ ಎಚ್ಚರಗೊಳ್ಳುತ್ತಾನೆ.
3. ಆತನು ಯಾವುದೇ ರೀತಿ ಕೆಟ್ಟ ಸ್ವಪ್ನಗಳನ್ನು ಕಾಣುವುದಿಲ್ಲ : ಡಕಾಯಿತರು, ಪ್ರಾಣಿಗಳು, ನಷ್ಟದ ಇನ್ನಿತರೆ ಯಾವುದೇ ಚಿಂತಕೃತ, ಭಯಯುತ, ಕೋಪವುಳ್ಳ, ರಾಗವುಳ್ಳ ಯಾವುದೇ ಸ್ವಪ್ನಗಳನ್ನು ಕಾಣುವುದಿಲ್ಲ. ಬದಲಾಗಿ ಸದಾ ಪವಿತ್ರತೆಯ ಶುಭ ಸ್ವಪ್ನಗಳನ್ನು ಕಾಣುತ್ತಾನೆ. ಹೇಗೆಂದರೆ ಪೂಜಿಸುವಂತಹ, ದಾನ ನೀಡುತ್ತಿರುವಂತಹ, ಮೈತ್ರಿಯುತ ಸನ್ನಿವೇಶ, ಸ್ತೂಪಗಳು, ಚೈತ್ಯಗಳು, ಇನ್ನಿತರ ಶುದ್ಧ ಸ್ವಪ್ನಗಳನ್ನು ಕಾಣುತ್ತಾನೆ.
4. ಮಾನವರಿಗೆ ಪ್ರಿಯನಾಗುತ್ತಾನೆ : ಅತ್ಯಂತ ಜನಪ್ರಿಯನಾಗುತ್ತಾನೆ, ಜನರು ಆತನನ್ನು ಆಭರಣದಂತೆ, ಕಿರೀಟದಂತೆ ಇಷ್ಟಪಡುತ್ತಾರೆ.
5. ಮನುಷ್ಯರಲ್ಲದವರಿಗೂ ಪ್ರಿಯನಾಗುತ್ತಾನೆ : ಮನುಷ್ಯರಲ್ಲದ ಜೀವಿಗಳಾದ, ಪ್ರಾಣಿಗಳು, ಪ್ರೇತಗಳು, ಅಸುರರಿಗೂ ಇಷ್ಟವಾಗುತ್ತಾನೆ. ಏಕೆಂದರೆ ಆತನಲ್ಲಿ ದ್ವೇಷವಿರುವುದಿಲ್ಲ ಹಾಗು ಹಾರೈಕೆಯಿಂದ ಕೂಡಿರುತ್ತಾನೆ.
6. ದೇವತೆಗಳು ರಕ್ಷಿಸುತ್ತಾರೆ : ದೇವತೆಗಳು ಸಹಾ ಆತನಿಗೆ ಪ್ರೀತಿಸಿ, ತಂದೆಯಂತೆ, ತಾಯಿಯಂತೆ ಕಾಪಾಡುವರು.
7. ಬೆಂಕಿ, ವಿಷ, ಶಸ್ತ್ರಗಳು ಆತನ ಮೇಲೆ ಯವುದೇ ಪರಿಣಾಮ ಬೀರುವುದಿಲ್ಲ. ಉದಾ: ಬುದ್ಧರು ನಾಲಾಗಿರಿ ಆನೆಯಿಂದ ಪಾರಾಗಿದ್ದು, ಸಾಮಾವತಿಯು ಬಾಣದಿಂದ ಪಾರಾಗಿದ್ದು, ಉತ್ತರಳಿಗೆ ಬಿಸಿ ಎಣ್ಣೆಯು ಸಹಾ ಏನೂ ಮಾಡಲಿಲ್ಲ.
8. ಆತನ ಮನಸ್ಸು ಅತ್ಯಂತ ವೇಗದಲ್ಲಿ ಏಕಾಗ್ರತೆ ಪಡೆಯತ್ತದೆ; ಆತ ಸುಲಭವಾಗಿ ಧ್ಯಾನದಲ್ಲಿ ಪ್ರವೇಶಿಸಬಲ್ಲ.
9. ಆತನ ಮುಖಾರವಿಂದವು ಅತ್ಯಂತ ತೇಜಸ್ಸಿನಿಂದ ಕೂಡಿರುತ್ತದೆ. ಮೈತ್ರಿವಂತನು ಅತ್ಯಂತ ಮುಗ್ಧವಾಗಿ, ಸುಂದರವಾಗಿ ಕಾಣುತ್ತಾನೆ.
10. ಯಾವುದೇ ಧ್ವಂದ್ವವಿಲ್ಲದೆ ಸಾಯುತ್ತಾನೆ : ಆತನು ಪಶ್ಚಾತ್ತಾಪವಿಲ್ಲದೆ, ನೋವಿಲ್ಲದೆ, ಶಾಂತವಾಗಿ, ಮೋಹವಿಲ್ಲದೆ, ಭಯವಿಲ್ಲದೆ, ಸಂಶಯವಿಲ್ಲದೆ, ನಿದ್ರಿಸುವಂತೆ ಮೃತ್ಯು ಪಡೆಯುತ್ತಾನೆ.
11. ಬ್ರಹ್ಮಲೋಕ ಪ್ರಾಪ್ತಿ : ಒಂದುವೇಳೆ ಆತನು ಅರಹಂತನಾಗದಿದ್ದರೆ, ಅಥವಾ ಯಾವುದೇ ಆರ್ಯ ಸ್ಥಿತಿಯನ್ನು ಮುಟ್ಟದಿದ್ದರೂ ಸಹಾ ಬ್ರಹ್ಮಲೋಕ ಪ್ರಾಪ್ತಿ ಮಾಡುತ್ತಾನೆ.
ಈ ರೀತಿಯಲ್ಲಿ ಮೈತ್ರಿ ಧ್ಯಾನವು ಇಲ್ಲಿಗೆ ಮುಗಿಯಿತು.

ಯಾವಾಗ ನಾವು ದ್ವೇಷಿಸುವವನ ಬಗ್ಗೆ ಮನಸ್ಸು ಮೈತ್ರಿಯುತವಾಗಿ ಪರಿವತರ್ಿತವಾಗುವುದೋ ಆಗ ಆತನಿಗೆ ಆಗುವ ವ್ಯಕ್ತಿಯ ಮೇಲೆಯೇ ಧ್ಯಾನ ಮಾಡಲು ಕಷ್ಟವಿರುವುದಿಲ್ಲ. ಆಗ ಆತನು ಪ್ರಿಯವಾದವರ ಮೇಲೆ ಅತ್ಯಂತ ಪ್ರಿಯರಾದವರ ಮೇಲೆ, ತಟಸ್ಥರ (ಪರಾಜಯಸ್ಥರ) ಮೇಲೆಯು ಸಮಾನವಾದ ಮೈತ್ರಿಯನ್ನು ಮಾಡಲು ಶಕ್ಯನಾಗುತ್ತಾನೆ.
ಉದಾಹರಣೆಗೆ: ನಾವು ಅತ್ಯಂತ ಪ್ರಿಯರಾದವರು, ಪ್ರಿಯರಾದವರು, ತಟಸ್ಥರು ಹಾಗು ಶತ್ರುಗಳು ಒಂದೇ ಸ್ಥಳದಲ್ಲಿ ಇರುತ್ತೇವೆ, ಆಗ ಡಕಾಯಿತರು ಬಂದು ಹೀಗೆ ಆಜ್ಞಾಪಿಸುತ್ತಾರೆ ಭಂತೆ, ನಮಗೆ ಇವರನ್ನು ನೀಡಿ. ಆಗ ಅವರು ಏಕೆ? ಎಂದು ಪ್ರಶ್ನಿಸಿದಾಗ, ನಾವು ಅವರನ್ನು ಕೊಂದು ರಕ್ತವನ್ನು ಪೂಜೆಗೆ ಅಪರ್ಿಸುವೆವು. ಆಗ ಏನಾದರೂ ಇವರನ್ನು ತೆಗೆದುಕೊಂಡು ಹೋಗಿ ಅಥವಾ ಅವರನ್ನು ತೆಗೆದುಕೊಂಡು ಹೋಗಿ ಅಥವಾ ನನ್ನನ್ನೇ ತೆಗೆದುಕೊಂಡು ಹೋಗಿ, ಅವರನ್ನು ಬಿಡಿ ಎಂದು ಯಾವರೀತಿ ಹೇಳುವರೂ ಸಹಾ. ಅಥವಾ ಹಾಗೆ ಯೋಚಿಸಿದರೂ ಸಹಾ ಆತನ ತಡೆಗಳು ಕತ್ತರಿಸಿಹೋಗಿಲ್ಲ ಎಂದರ್ಥ. ಏಕೆಂದರೆ ಮೈತ್ರಿಯೆಂದರೆ ಸರ್ವರ ಸುಖಹಿತಭಾವವಾಗಿದೆ. ಯಾರನ್ನು ಬಿಡುವ ಹಾಗಿಲ್ಲ. ಪರರನ್ನು ಅಥವಾ ತನ್ನನ್ನು ಸಹಾ. ಎಲ್ಲರಿಗೂ ಸಮಾನವಾಗಿ, ಗಾಢವಾಗಿ, ನಿರ್ಮಲವಾಗಿ ಹಾರೈಸುವ ಮನವಿರಬೇಕು.
ಈ ರೀತಿಯ ಭೇದಭಾವದ ತಡೆಗಳಿಂದ ಮುಕ್ತನಾದಾಗಲೇ ಆತನಿಗೆ ನಿಮಿತ್ತ ಹಾಗು ಸಮಾಧಿಯು ಸಿಗುವುದು. ಕಸಿಣದಲ್ಲೇ ವಿವರಿಸಿರುವಂತೆಯೇ ಆತನ ಪ್ರಕ್ರಿಯೆ ಸಾಗುತ್ತದೆ. ನಂತರ ಆತನಿಗೆ ಪ್ರಥಮ ಧ್ಯಾನವು ಸಿಗುವುದು. ನಂತರ ಹಗೆಯೇ ತೃತೀಯ ಸಮಾದಿಯು ಸಿಗುವುದು.
ಇಲ್ಲಿಗೆ ಮೆತ್ತಾ ಭಾವನೆಯ ವಿತರಣೆ ಮುಗಿಯಿತು.

******************************************************************************

ಕರುಣಾ ಧ್ಯಾನ

ಈ ಶರೀರದ ಮಾಂಸ, ರಕ್ತ ಮತ್ತು ನನ್ನ ಸರ್ವಸ್ವವೆಲ್ಲವೂ ಜಗತ್ತಿನ ಹಿತಕ್ಕಾಗಿ ಮತ್ತು ಜಗತ್ತಿನ ಕ್ಷೇಮಕ್ಕಾಗಿಯೇ ಇದೆ - ಶ್ರೀ ಸಂಘ ಬೋಧಿ

ಇಂದು ಈ ಜಗತ್ತಿಗೆ ಅತ್ಯಂತ ಕರುಣಾಭರಿತ ಸ್ತ್ರೀಯರು ಮತ್ತು ಪುರುಷರು ಬೇಕಾಗಿದ್ದಾರೆ. ಅವರು ಇಲ್ಲಿರುವ ಕ್ರೌರ್ಯ ಮತ್ತು ಹಿಂಸೆಯನ್ನು ಹಾಗು ದುಃಖವನ್ನು ಈ ಭೂಮಿಯಿಂದಲೇ ತೆಗೆದುಹಾಕಬೇಕಾಗಿದೆ - ಪರಮ ಪೂಜ್ಯ ನಾರದ ಥೇರ


ಬುದ್ಧ ಭಗವಾನರು ಪ್ರತಿದಿನವೂ ಕೇವಲ ಒಂದು ಗಂಟೆ ಮಾತ್ರ ನಿದ್ರಿಸುತ್ತಿದ್ದರು. ಅದು 3 ರಿಂದ 4 ಗಂಟೆಯವರೆಗೆ ನಂತರ ಅವರು 4 ರಿಂದ 5ರತನಕ ನಿಬ್ಬಾಣದ ಸುಖದಲ್ಲಿ ತಲ್ಲೀನರಾಗುತ್ತಿದ್ದರು. ನಂತರ 5 ರಿಂದ 6ರತನಕ ಮಹಾ ಕರುಣಾ ಸಮಾಪತ್ತಿಯಲ್ಲಿದ್ದು ಸರ್ವಜೀವಿಗಳ ದುಃಖ ವಿಮುಕ್ತತೆಗೆ ಧ್ಯಾನಿಸುತ್ತಿದ್ದರು. ತಮ್ಮ ಬುದ್ಧ ಚಕ್ಷುವಿನಿಂದ ಯಾರ್ಯಾರಿಗೆ ಸಹಾಯ ಮಾಡಬಹುದೆಂದು ಅರಿತು ಅವರಿಗೆ ಸಹಾಯ ಮಾಡುತ್ತಿದ್ದರು.
ಶ್ರೇಷ್ಠ ಭಿಕ್ಷುಗಳಾದ, ಸಾರಿಪುತ್ರರು, ಮೊಗ್ಗಾಲಾನರು, ಕಶ್ಯಪರು ಇನ್ನು ಮುಂತಾದವರು ರಾಜ ಮಹಾರಾಜರು ಬುದ್ಧರಲ್ಲಿಗೆ ಹುಡುಕಿಕೊಂಡು ಬರುತ್ತಿದ್ದರು. ಆದರೆ ಬುದ್ಧ ಭಗವಾನರು ತಮ್ಮ ಕರುಣೆಯಿಂದ ಪಾಪಿಗಳಾದ ಅಂಗುಲಿಮಾಲಾ, ಅಳವಕ, ಡಕಾಯಿತರು, ದುಃಖಿತರು, ಬೇಟೆಗಾರರು, ಕಷ್ಟದಲ್ಲಿದ್ದ ಇನ್ನಿತರರ ಬಳಿಗೆ ತಾವೇ ಹೋಗಿ ಅವರನ್ನು ಸರಿಪಡಿಸುತ್ತಿದ್ದರು. ಅವರ ಕರುಣೆ ಅನುಪಮವಾಗಿತ್ತು.
ಬೋಧಿಸತ್ತ ಮುಂದೆ ಬುದ್ಧರಾಗಿದ್ದು ಈ ಕರುಣಾ ಬಲದಿಂದಲೇ. ಈ ರೀತಿ ಕರುಣೆಯಿಂದ ಮಾನವ ಬ್ರಹ್ಮನೂ ಅಗಬಲ್ಲ, ಹಾಗೆಯೇ ಬುದ್ಧರೂ ಆಗಬಲ್ಲ. ಅಂತಹ ಅಗಾಧಶಕ್ತಿ, ಕರುಣೆಗೆ ಇದೆ. ಕರುಣೆಯ ಪರಿಪೂರ್ಣತೆಯನ್ನು ಬುದ್ಧರು ಹೊಂದಿರುವದರಿಂದಾಗಿ ಅವರನ್ನು ಮಹಾ ಕಾರುಣಿಕನಾಥ ಎನ್ನುತ್ತಾರೆ. ನಿವೇನಾದರು ಬುದ್ಧರ ಬೋಧನೆಯಿಂದ ಕರುಣೆಯನ್ನು ತೆಗೆದರೆ ಅಥವಾ ವಿರಾಗವನ್ನು ತೆಗೆದರೆ ಅಥವಾ ಪ್ರಜ್ಞಾವನ್ನು ತೆಗೆದರೆ ನೀವು ಬೌದ್ಧ ಧರ್ಮದ ಹೃದಯವನ್ನೇ ಅಥವಾ ಪ್ರಾಣವನ್ನೇ ತೆಗೆದಂತಾಗುತ್ತದೆ. ಸಕಲ ಸದ್ಗುಣಗಳಿಗೆ ಕರುಣೆಯೇ ಆಧಾರ. ಅಷ್ಟೇ ಏಕೆ, ಬೌದ್ಧತ್ವದ ಗುರಿ ಇಟ್ಟಿರುವ ಬೋಧಿಸತ್ತರಿಗಂತೂ ಕರುಣೆಯೇ ಸರ್ವಸ್ವವಾಗಿರುತ್ತದೆ. ಕರುಣೆಯಿಲ್ಲದೆ ಪರಿಪೂರ್ಣತೆಯೇ ಇಲ್ಲ.
ಲೋಕದಲ್ಲಿ ಜೀವಗಳಾಗಲಿ ಅಥವಾ ಮಾನವರಾಗಲಿ ದುಃಖದಲ್ಲಿದ್ದಾಗ, ನೋವಿನಲ್ಲಿದ್ದಾಗ, ಭೀತಿಯಲ್ಲಿದ್ದಾಗ, ಕಷ್ಟದಲ್ಲಿದ್ದಾಗ ಅವರನ್ನು ಕಂಡು ಅಥವಾ ಅವರ ಬಗ್ಗೆ ಕೇಳಿ ಹೃದಯವು ಕಂಪಿಸಿದರೆ ಅವರ ದುಃಖ ವಿಮುಕ್ತಿ ಬಯಸಿದರೆ, ಆ ಭಾವವೇ ಕರುಣೆಯಾಗಿ, ಇದರ ಸಮಾನಾರ್ಥಕ ಪದಗಳೆಂದರೆ ಅನುಕಂಪ, ಮಮತೆ, ಮರುಕ, ದಯೆ ಇತ್ಯಾದಿ. ಇದರ ಪ್ರಧಾನ ಲಕ್ಷಣವೇನೆಂದರೆ ಪರರ ದುಃಖವು ಇಲ್ಲದಂತಾಗಲಿ ಎಂದು ಬಯಸುವುದು. ಇದರ ನೇರ ಶತ್ರುವು ಹಿಂಸಾಭಾವನೆಯಾದರೆ ಆದರೆ ಪರೋಕ್ಷ ಶತ್ರು. ದೋಮನಸ್ಸು (ದುಃಖಿತ ಮನಸ್ಸು) ಆಗಿದೆ.
ಪರರ ದುಃಖವನ್ನು ಕಂಡು ಸತ್ಪುರುಷರ ಹೃದಯವು (ಕಂಪನ) ಕಂಪಿತವಾಗಿ, ದುಃಖವಿಮುಕ್ತಿಗೆ ಚಾಲನೆಯಾಗಿ (ಕರೋತಿ) ಈ ರೀತಿಯಾಗಿ ಇದನ್ನು ಕರುಣೆ ಅಥವಾ ಅನುಕಂಪ ಎನ್ನುತ್ತಾರೆ. ಪರರ ದುಃಖ ವಿಮುಕ್ತಿಗೆ ಶ್ರಮಿಸುವುದರಿಂದ (ಕಿರಿಯಾತಿ) ಇದನ್ನು ಕರುಣಾ ಎನ್ನುತ್ತಾರೆ. ಪರರ ದುಃಖವನ್ನು ಸಹಿಸದೆ ಇರುವುದೇ ಇದರ ಕ್ರಿಯೆಯಾಗಿದೆ. ಕರುಣೆಯು ಕಾರ್ಯರಹಿತತೆಯಿಂದ ವ್ಯಕ್ತವಾಗುತ್ತದೆ. ಇದರ ತತ್ಕ್ಷಣದ ಕಾರಣವೇನೆಂದರೆ ಪರ ದುಃಖಿತರನ್ನು ನೋಡುವುದು ಅಥವಾ ಕೇಳುವುದು ಅಥವಾ ಅದರ ಬಗ್ಗೆ ಚಿಂತಿಸುವುದು. ಕ್ರೂರತ್ವ ಅಂತ್ಯವಾದಾಗ ಕರುಣೆಯು ಜಯಿಸುತ್ತದೆ. ಶೋಕವು ಕರುಣೆಯಲ್ಲ, ಶೋಕವು ಕರುಣೆಯಂತೆ ಕಾಣುತ್ತದೆ ಅಷ್ಟೇ. ಕರುಣೆಯ ಪೂರ್ಣತೆಗಾಗಿ ಶೋಕವನ್ನು ಗೆಲ್ಲುವುದು ಅತ್ಯಗತ್ಯವಾಗಿದೆ. ಕರುಣೆಯೆಂದರೆ ಗೋಳಾಡುವುದಲ್ಲ. ಅವರ ದುಃಖ ವಿಮುಕ್ತಿಯನ್ನು ಪ್ರಬಲವಾಗಿ ಬಯಸುವುದು ಮತ್ತು ಅದಕ್ಕೆ ಕ್ರಿಯೆಯಲ್ಲಿ ಆಚರಣೆಗೆ ತುರುವುದು. ನಿಯಂತ್ರಣದಿಂದ ಕರುಣೆ ಇರುತ್ತದೆ ಹೊರತು ಬೇಕಾದಂತೆ ನಿಯಂತ್ರಣ ತಪ್ಪುವುದಲ್ಲ. ಕರುಣೆಯು ಪ್ರಜ್ಞಾದ ಸಂಗಡ ಇರುತ್ತದೆ. ಪ್ರಜ್ಞಾದಿಂದ ಪರರ ದುಃಖ ಅರಿವಾಗುತ್ತದೆ. ಕರುಣೆಯಿಂದಾಗಿ ಅದನ್ನು ನಿವಾರಿಸಲು ಪ್ರಯತ್ನಿಸುತ್ತೇವೆ. ಪ್ರಜ್ಞಾದಿಂದ ಯೋಗ್ಯ ಪರಿಹಾರ ಸಿಗುತ್ತದೆ. ಕರುಣೆಯಿಂದ ಅದನ್ನು ಆಚರಣೆಯಲ್ಲಿ ಪರಿಹರಿಸುತ್ತೇವೆ. ಪ್ರಜ್ಞಾರಹಿತ ಕರುಣೆ ಅಪಾಯಕಾರಿ, ಕರುಣಾರಹಿತ ಪ್ರಜ್ಞಾವು ಅಪೂರ್ಣ.

ಕರುಣಾಧ್ಯಾನ ವಿಧಾನ :

ಇಲ್ಲಿ ಸಾಧಕನು ನಿಶ್ಶಬ್ದ ನಿರ್ಜನ ವಾತಾವರಣದಲ್ಲಿ ಪದ್ಮಾಸನದಲ್ಲಿದ್ದು ಬೆನ್ನನ್ನು ನೇರವಾಗಿಟ್ಟುಕೊಂಡು ಅಕುಶಲ ಯೋಚನೆಗಳೆಲ್ಲವನ್ನೂ ದ್ವೇಷದ, ಹಿಂಸೆಯ ಇನ್ನಿತರ ಎಲ್ಲಾ ಪಾಪಯುತ ಯೋಚನೆಗಳಿಂದ ಮುಕ್ತವಾಗಿ ನಂತರ ತಾನು ದಾರಿಯಲ್ಲಿ, ಅಥವಾ ವಾಯು ವಿಹಾರದ ಸ್ಥಳದಲ್ಲಿ ಕಂಡಂತಹ ದುಃಖಿತರನ್ನು, ಶೋಕ ಪೀಡಿತರನ್ನು ಭಯ ಪೀಡಿತರನ್ನು, ರೋಗಿಗಳನ್ನು, ಮಾನಸಿಕ ಅಸ್ವಸ್ಥರನ್ನು, ಭಿಕ್ಷುಕರನ್ನು, ನೋವಿನಿಂದ ಕೂಡಿದವರನ್ನು, ಅಳುತ್ತಿರುವವರನ್ನು, ಒಬ್ಬೊಬ್ಬರಾಗಿ ನೆನೆಯುತ್ತಾನೆ. ಹಾಗಿ ಈ ರೀತಿ ಹಾರೈಸುತ್ತಾನೆ ಓಹ್! ಈತನು ದುಃಖದಿಂದ ಮುಕ್ತನಾಗಲಿ ಹಾಗು ಹಿಂಸಾ ಭಾವನೆಯಿಂದ ಮುಕ್ತನಾಗಲಿ ಅಥವಾ ಈತನು ರೋಗದಿಂದ ಮುಕ್ತನಾಗಲಿ ಹಾಗು ಭಯದಿಂದ ಮುಕ್ತನಾಗಲಿ ಅಥವಾ ಈತನು ನೋವಿನಿಂದ ಮುಕ್ತನಾಗಲಿ ಮತ್ತು ಎಲ್ಲಾ ದುಃಖಗಳಿಂದ ಮುಕ್ತನಾಗಲಿ, ಇವರು ನಷ್ಟದಿಂದ ಮುಕ್ತರಾಗಲಿ ಹಾಗು ಎಲ್ಲಾ ರೀತಿಯ ಶೋಕಗಳಿಂದ ಮುಕ್ತರಾಗಲಿ. ಈ ರೀತಿಯಾಗಿ ಒಬ್ಬರನ್ನು ತೆಗೆದುಕೊಂಡು ಅದರ ಬಗ್ಗೆ ಅವರ ದುಃಖ ನಿವಾರಣೆಯಾಗಲಿ ಎಂದು ಪ್ರಬಲವಾಗಿ ಹಾರೈಸಬೇಕು. ಇವರು ಎಲ್ಲಾ ದುಃಖಗಳಿಂದ ಮುಕ್ತರಾಗಲಿ ಹಾಗು ದುಃಖಕ್ಕೆ ಕಾರಣವಾದಂತಹ ಜನ್ಮದಿಂದ ಮುಕ್ತರಾಗಲಿ ಈ ವ್ಯಕ್ತಿಯು ಹಿಂಸಾ ಭಾವನೆಯಿಂದ ಮುಕ್ತರಾಗಲಿ ಈ ರೀತಿ ಧ್ಯಾನಿಸಬೇಕು.
ನಂತರ ಪ್ರಿಯರಾದವರನ್ನು ನೆನಪಿಗೆ ತಂದು ಓಹ್! ಅವರು ತಮ್ಮ ರೋಗದಿಂದ ಮುಕ್ತರಾಗಲಿ, ಅವರು ತಮ್ಮ ಎಲ್ಲಾ ದುಃಖ ದೌಭರ್ಾಗ್ಯಗಳಿಂದ ಮುಕ್ತರಾಗಲಿ ಎಂದು ಹಾರೈಸಬೆಕು.
ನಂತರ ಪಾಪಿಗಳನ್ನು ಮತ್ತು ದ್ರೋಹಿಗಳನ್ನು ನೆನಪಿಗೆ ತಂದು ಓಹ್! ಈತನು ತನ್ನ ದ್ವೇಷಗಳೆಲ್ಲದರಿಂದ, ತನ್ನ ಹಿಂಸಾಬೋಧನೆಯಿಂದ ಪೂರ್ಣವಾಗಿ ವಿಮುಕ್ತನಾಗಲಿ. ಈತನು ತನ್ನೆಲ್ಲಾ ದುಃಖಗಳಿಂದ ಮುಕ್ತನಾಗಲಿ, ಎಲ್ಲಾ ರೀತಿಯ ನೋವುಗಳಿಂದ ಮುಕ್ತನಾಗಲಿ. ಈತ ಜನ್ಮದಿಂದಲೇ ಮುಕ್ತನಾಗಲಿ. ನಂತರ ಹೀಗೆಯೇ ಪರಿಚಯಸ್ಥರ ಮೇಲೆ ಮಾಡಿ.
ನಂತರ ಕೊನೆಗೆ ತನ್ನಮೇಲೆ ನಾನು ನನ್ನ ಎಲ್ಲಾ ದುಃಖಗಳಿಂದ ಮುಕ್ತನಾಗಲಿ, ನಾನು ಪರರ ದುಃಖವನ್ನು ನಿವಾರಿಸುವಂತಾಗಲಿ ಎಂದು ಹಾರೈಸಬೇಕು. ಈ ರೀತಿಯಾಗಿ ಯಾರಲ್ಲೂ ಬೇಧಭಾವವಿಲ್ಲದೆ ಸರ್ವರಲ್ಲೂ ಸಮಾನವಾಗಿ ಕರುಣೆಯನ್ನು ಪ್ರಸರಿಸಿ. ಕೊನೆಗೆ
ಸರ್ವಜೀವಿಗಳು ದುಃಖದಿಂದ ಮುಕ್ತರಾಗಲಿ
ಸರ್ವಜೀವಿಗಳು ಶೋಕದಿಂದ ಮುಕ್ತರಾಗಲಿ
ಸರ್ವಜೀವಿಗಳು ನೋವಿನಿಂದ ಮುಕ್ತರಾಗಲಿ
ಸರ್ವಜೀವಿಗಳು ರೋಗದಿಂದ ಮುಕ್ತರಾಗಲಿ
ಸರ್ವಜೀವಿಗಳು ದುಃಸ್ಥಿತಿಗಳಿಂದ ಮುಕ್ತರಾಗಲಿ
ಸರ್ವಜೀವಿಗಳು ದೌಭರ್ಾಗ್ಯಗಳಿಂದ ಮುಕ್ತರಾಗಲಿ
ಎಂದು ಹಾರೈಸುವುದು. ಮೆತ್ತಾ ಧ್ಯಾನದಂತೆ ಪಯರ್ಾಯ ವಿಧಾನಗಳನ್ನು ಅನುಸರಿಸುವುದು. ಆದರೆ ಮೊದಲಿಗೆ ದುಃಖಿತರ ಮೇಲೆಯೇ ಮಾಡಬೇಕು.
ಇಲ್ಲಿಗೆ ಕರುಣಾ ಧ್ಯಾನ ಮುಗಿಯಿತು.
*********************************************************************************

ಮುದಿತಾ ಧ್ಯಾನ


ಮುದಿತಾ ಧ್ಯಾನವನ್ನು, ಆನಂದ ಧ್ಯಾನವೆಂತಲೂ, ಕರೆಯುತ್ತಾರೆ. ಇದು ಮೋದದಿಂದ (ಆನಂದದಿಂದ) ಕೂಡಿರುವುದರಿಂದ ಅಥವಾ ಆನಂದವಾಗುವ ಕಾರ್ಯವನ್ನು ಮಾಡುವುದರಿಂದ (ಮೋದನೆ) ಇದನ್ನು ಮುದಿತಾ ಎನ್ನುತ್ತಾರೆ (ಆನಂದ)
ಇದರ ಪ್ರಧಾನ ಲಕ್ಷಣವೆಂದರೆ ಪರರ ಉನ್ನತಿಯಲ್ಲಿ ಆನಂದಿಸುವುದು. ಇದರ ಕ್ರಿಯೆ ಏನೆಂದರೆ ಅಸೂಯೆ ತಾಳದೆ ಇರುವುದು. ಇದು ಬೇಸರವನ್ನು ಮತ್ತು ಅಸೂಯೆಯನ್ನು ತೆಗೆಯುವುದರಿಂದಾಗಿ ವ್ಯಕ್ತವಾಗುತ್ತದೆ. ಇದರ ತತ್ಕ್ಷಣದ ಕಾರಣ ಏನೆಂದರೆ ಉನ್ನತ ಜನರ ಯಶಸ್ಸನ್ನು ಕಾಣುವುದು ಮತ್ತು ಕೇಳುವುದು ಹಾಗು ಯೋಚಿಸುವುದಾಗಿದೆ. ಇದರ ಸಿದ್ಧಿಯ ಯಶಸ್ಸು ಅಸೂಯೆ ಮತ್ತು ಬೇಸರವನ್ನು ನಾಶಮಾಡುವುದರಲ್ಲಿದೆ. ಆದರೆ ಪ್ರಾಪಂಚಿಕ ಸಂತೋಷ, ಹಾಸ್ಯ, ಮೋಜು ಇದರ ಪರೋಕ್ಷ ಶತ್ರುವಾಗಿದೆ. ಅದನ್ನು ನಿವಾರಿಸಿದಾಗ ಇದು ಜಯವನ್ನು ಕಾಣುತ್ತದೆ.
ಈ ಧ್ಯಾನವನ್ನು ಆನಂದದ ಸ್ಥಿತಿ ಸ್ಥಾಪಿಸಲು ಹಾಗು ಅಸೂಯೆಯನ್ನು ಅಂತ್ಯ ಮಾಡಲು ಧ್ಯಾನಿಸುತ್ತಾರೆ. ಮೆತ್ತಾ ಕರುಣಾದ ಸಿದ್ಧಿಯು ಸುಲಭ. ಆದರೆ ಮುದಿತಾ ಸ್ಥಾಪನೆಗೆ ಅಪಾರ ಇಚ್ಛಾಶಕ್ತಿ ಮತ್ತು ಶ್ರಮದ ಅಗತ್ಯವಿದೆ. ಏಕೆಂದರೆ ಮಾನವನಲ್ಲಿ ಸ್ವಾರ್ಥದಿಂದ ಕೇವಲ ತಾನು, ತನ್ನ ಕುಟುಂಬ, ತನ್ನವರು ಈ ಸೀಮೆಯನ್ನು ಇರಲು ಇಚ್ಛಿಸುತ್ತಾರೆ. ಈ ಪರಿಧಿ ದಾಟಲು ಇಚ್ಛಿಸುವುದೇ ಇಲ್ಲ. ನಾವು ಇಂದು ಎಲ್ಲಾ ಕ್ಷೇತ್ರದಲ್ಲೂ ಅಸೂಯೆ ಕಾಣುತ್ತೇವೆ. ವಿದ್ಯಾಭ್ಯಾಸ, ಕ್ರೀಡಾರಂಗ, ವೃತ್ತಿರಂಗ, ವ್ಯಾಪಾರ, ರಾಜಕೀಯ, ಭಾಷೆ, ದೇಶ ಮಟ್ಟದಲ್ಲಿ ಅಷ್ಟೇ ಏಕೆ, ಧರ್ಮಗಳಲ್ಲಿ ಸಹಾ ಒಬ್ಬರ ಉನ್ನತಿ ಇನ್ನೊಬ್ಬರು ಸಹಿಸಲಾರರು. (ಸಾಕ್ರಟೀಸ್, ಕ್ರಿಸ್ತ, ಗಾಂಧಿ ಇವರೆಲ್ಲಾ ಬಲಿಯಾಗಿದ್ದು, ಅಸೂಯೆಯಿಂದಲೇ ಅಲ್ಲವೇ). ಅಸೂಯೆಯು ಅತ್ಯಂತ ಹೇಯವಾದಿ ಗುಣವಾಗಿದೆ. ಇದು ಮಾನವನನ್ನು ಸಂಕುಚಿತನನ್ನಾಗಿ ಮಾಡುತ್ತದೆ. ಅವನಗೆ ನಿಜವಾದ ಯಶಸ್ಸಿನ ರುಚಿ ಅನುಭವಿಸಲು ಬಿಡುವುದಿಲ್ಲ. ಆತನಿಗೆ ದಿವ್ಯವಾದ ಶ್ರೇಷ್ಠವಾದ ಆನಂದದ ಸವಿಯು ಸೇವಿಸದಂತೆ ಮಾಡುತ್ತದೆ. ಇನ್ನೊಬ್ಬರನ್ನು ಅಸೂಯೆಯಿಂದ ಕಾಣುತ್ತಾ ತಾವೇ ತಮ್ಮ ಕ್ಷೇತ್ರದಲ್ಲಿ ಕುಸಿಯುತ್ತಿರುತ್ತಾರೆ. ನಿಜವಾದ ಉನ್ನತಗಾಮಿಯು ಪರರನ್ನು ನ್ಯಾಯವಾದ ರೀತಿಯಲ್ಲಿ, ಇನ್ನಷ್ಟು ಪರಿಶ್ರಮದಿಂದ, ಸೃಜನಶೀಲತೆಯಿಂದ ಪರರನ್ನು ದಾಟಿ ಅಭಿವೃದ್ಧಿ ಹೊಂದುತ್ತಾನೆಯೇ ಹೊರತು ಪರರ ಪ್ರತಿಭೆಗಳನ್ನು ಚಿವುಟಿ, ಅವರಿಗೆ ಅಡ್ಡಿಯುಂಟು ಮಾಡಿ ಕೃತಿಮತೆಯ ಯಶಸ್ಸಿನಲ್ಲಿ ಆನಂದಿಸಲಾರ.
ಅಸೂಯೆ ನಾಶದ ಮಾರ್ಗವಾಗಿರುವ ಮುದಿತಾದ (ಅಭಿನಂದನಾ ಆನಂದ) ಧ್ಯಾನವಿಧಾನ ಹೀಗಿದೆ :
ಇಲ್ಲಿ ಸಾಧಕನು ನಿರ್ಜನ ನಿಶ್ಶಬ್ದ ವಾತಾವರಣದಲ್ಲಿ, ಪದ್ಮಾಸನದಲ್ಲಿ ಕುಳಿತು, ಪಾಪಯುತವಾದ ಅಕುಶಲವಾದ ಎಲ್ಲಾ ರೀತಿಯ ಯೋಚನೆಗಳಿಂದ ಮುಕ್ತನಾಗುತ್ತಾನೆ. ನಂತರ ಆತನು ತನಗೆ ಅತ್ಯಂತ ಪ್ರೀತಿ ಪಾತ್ರರನ್ನು ನೆನಪಿಸಿಕೊಳ್ಳುತ್ತಾನೆ. ಅತ್ಯಂತ ಪ್ರೀತಿ ಪಾತ್ರರೆಂದರೆ, ದಿನೇ ದಿನೇ ಉನ್ನತಿ ಹೊಂದುತ್ತಿರುವ ಮಗುವು ಆಗಬಹುದು ಅಥವಾ ಯಾರನ್ನು ನಾವು ನೋಡಿ ಮೊದಲು ಆನಂದಿತರಾಗಿ ನಕ್ಕು ನಂತರ ಮಾತನಾಡಿಸುತ್ತೇವೆಯೋ ಅಂತಹವರನ್ನು ನೆನೆಯುತ್ತಾ ಓಹ್ ಇವರು ಇನ್ನೂ ಸುಖಿಯಾಗಿರಲಿ, ಇನ್ನೂ ಉನ್ನತಿ ಹೊಂದಲಿ ಎಂದು ಹಾರೈಸುತ್ತಾ ಆನಂದ ಭಾವ ತಾಳಬೇಕು. ಅಥವಾ ಇವನು ಹಿಂದೆ ಉನ್ನತಿ ಹೊಂದಿದ್ದನು, ಹೀಗೆಯೇ ಈಗಲೂ ಮತ್ತು ಮುಂದೆಯು ಉನ್ನತಿ ಹೊಂದಲಿ ಎಂದು ಅಥವಾ ಈತನು ಮುಂದೆಯಾದರೂ ಇನ್ನೂ ಸುಖಿಯಾಗಿರಲಿ, ಇನ್ನೂ ಉನ್ನತಿ ಹೊಂದಲಿ.
ಓಹ್ ಆತನ ಮುಂದೆ ಅತ್ಯಂತ ಶ್ರೀಮಂತನಾಗಲಿ ಎಂದೂ
ಓಹ್ ಆತ ಮುಂದೆ ಅತ್ಯಂತ ಆರೋಗ್ಯವಂತ/ಸುಂದರನಾಗಲಿ
ಈ ಕ್ಷೇತ್ರದಲ್ಲಿ ಯಶಸ್ವಿಯಾಗಲಿ/ಅಗ್ರನಾಗಲಿ
ಓಹ್ ಆತ ಮುಂದೆ ಅತ್ಯಂತ ಬಲಿಷ್ಠನಾಗಲಿ
ಓಹ್ ಆತ ಮುಂದೆ ಅತ್ಯಂತ ಶೀಲವಂತನಾಗಲಿ
ಓಹ್ ಆತ ಮುಂದೆ ಅತ್ಯಂತ ಸಮಾಧಿವಂತನಾಗಲಿ
ಓಹ್ ಆತ ಮುಂದೆ ಅತ್ಯಂತ ಪ್ರಜ್ಞಾವಂತನಾಗಲಿ
ಓಹ್ ಆತ ಮುಂದೆ ಅತ್ಯಂತ ಹೃದಯವಂತನಾಗಲಿ
ಓಹ್ ಆತ ಮುಂದೆ ಅತ್ಯಂತ ವಿಮುಕ್ತನಾಗಲಿ
ಓಹ್ ಆತ ಮುಂದೆ ಅತ್ಯಂತ ಸುಖಿಯಾಗಿಯೇ ಇರಲಿ
ಓಹ್ ಆತ ಮುಂದೆ ಸದಾ ಅಭಿವೃದ್ಧಿಶೀಲನಾಗಲಿ
ಈ ರೀತಿ ಮುದಿತಾ ಧ್ಯಾನ ಮಾಡುತ್ತಾ, ನಂತರ ಆತನು ಪ್ರಿಯರಾದವರನ್ನು, ನಂತರ, ತಟಸ್ಥ ವ್ಯಕ್ತಿಗಳನ್ನು, ನಂತರ ದ್ವೇಷಿಸುವವರನ್ನು, ನಂತರ ಅಸೂಯೆಪಡುವವರನ್ನು, ನಂತರ ತನ್ನ ಮೆಲೆ ಪ್ರಸರಿಸಲಿ, ನಂತರ ಸರ್ವ ಜೀವಿಗಳ ಮೆಲೆ ಪ್ರಸರಿಸಲಿ, ಸರ್ವದಿಕ್ಕುಗಳಲ್ಲಿ ಪ್ರಸರಿಸಲಿ, ಮೆತ್ತಾ ಧ್ಯಾನದಂತೆ ಬೇಧಭಾವವಿಲ್ಲದೆ ಸರ್ವರ ಮೇಲೆ ಪ್ರಸರಿಸುವುದರಿಂದಾಗಿ ನಿವರಣಗಳಿಂದ ಮುಕ್ತನಾಗುತ್ತಾರೆ. ನಂತರ ಹಾಗೆಯೇ ತ್ರಿತೀಯ ಧ್ಯಾನದವರೆಗೂ ಆತನು ತಲುಪುತ್ತಾನೆ. ಅಲ್ಲಿಂದ ಆತನು ನೇರವಾಗಿ ವಿನ್ಯಾನನಂಚ ಯಾತನ ಸ್ಥಿತಿಗೆ ತಲುಪಬಹುದು ಅದಕ್ಕೆ ಈ ಧ್ಯಾನ ಶ್ರೇಷ್ಠವಾದ ಆಧಾರವಾಗಿದೆ.
ಮುದಿತಾ ಧ್ಯಾನದ ಲಾಭಗಳು ಮೆತ್ತಾ ಧ್ಯಾನದಂತೆಯೆ ಅಗಿರುತ್ತದೆ.
ಇಲ್ಲಿಗೆ ಮುದಿತಾ ಧ್ಯಾನವು ಮುಗಿಯಿತು.

*********************************************************************************

ಉಪೇಖ್ಖಾ (ಉಪೇಕ್ಷಾ) ಧ್ಯಾನ


ಮಾನವ ಶಾಂತಿ ಅಪೇಕ್ಷೆಯಿಂದಲೇ ಪ್ರಾರಂಭದಲ್ಲಿ ಧರ್ಮದ ಬಳಿಗೆ ಬರುತ್ತಾನೆ. ಜೀವನದಲ್ಲಿ ಈ ಶಾಂತಿಯು ಸಮಚಿತ್ತತೆಯಿಂದ ಲಭಿಸುತ್ತದೆ. ಜೀವನದಲ್ಲಿ ಲಾಭ, ನಷ್ಟ, ಜಯ, ಪರಾಜಯ, ನಿಂದೆ, ಸ್ತುತಿ, ಸುಖ-ದುಃಖಗಳು ಬರುತ್ತವೆ, ಇರುತ್ತವೆ. ಹಾಗೆಯೇ ಸಮಚಿತ್ತತೆಯನ್ನು ಲೋಭ, ದ್ವೇಷ, ಭಯ, ಚಿಂತೆಗಳು ಸಹಾ ಕದಡುತ್ತದೆ. ಈ ಎಲ್ಲಾ ಕ್ಲೇಶಗಳನ್ನು ಸುಖ-ದುಃಖಗಳನ್ನು ಮೀರಿದ ಸ್ಥಿತಿಯೇ ಸಮಚಿತ್ತತೆ ಆಗಿದೆ. ಇದು ಪಾಲಿಸಲು ಅತ್ಯಂತ ಕಠಿಣವು, ಅಷ್ಟೇ ಪ್ರಾಧಾನ್ಯತೆವುಳ್ಳದ್ದು ಆಗಿದೆ.
ಸಮಚಿತ್ತತೆಯಿಂದ ಕೂಡಿದವನು ಅಭಯನು, ಅಶೋಕನು, ಅದ್ವೇಷಿಯು ಹಾಗೆಯೇ ಅಲೋಭಿಯು ಮತ್ತು ಅಮೋಹಿಯು ಆಗಿರುತ್ತಾನೆ. ಅದರಿಂದಾಗಿ ಇದು ಮಹತ್ತರವಾದ ಗುಣವಾಗಿದೆ. ಮಾನವನಿಗೆ ಸದಾ ಪ್ರಿಯ ಮತ್ತು ಅಪ್ರಿಯ ಬಯಕೆಗಳಿರುತ್ತದೆ. ಅದರಲ್ಲು ಪ್ರಿಯ ವ್ಯಕ್ತಿಗಳು ಮತ್ತು ಅಪ್ರಿಯ ವ್ಯಕ್ತಿಗಳು ಎಂಬ ಬಂಧನವಿದ್ದು, ಇದರಿಂದಾಗಿ ಆತನು ಪ್ರಿಯ ವ್ಯಕ್ತಿಗಳ ವಿಯೋಗದಿಂದ ದುಃಖಿತನಾಗುತ್ತಾನೆ. ಹಾಗೆಯೇ ಅಪ್ರಿಯ ವ್ಯಕ್ತಿಗಳ ಸಮಾಗಮದಿಂದ ಭಯ ಅಥವಾ ದ್ವೇಷವುಳ್ಳವನು ಆಗುತ್ತಾನೆ. ಯಾವಾಗ ಆತನಲ್ಲಿ ಈ ಪ್ರಿಯ ವ್ಯಕ್ತಿಗಳು ಮತ್ತು ಅಪ್ರಿಯ ವ್ಯಕ್ತಿಗಳು ಎಂಬ ಬಾಂಧವ್ಯ ಸಮಚಿತ್ತತೆಯಿಂದಾಗಿ ಅಳಿದು ಹೋಗುತ್ತದೋ ಸರ್ವರನ್ನು ಶಾಂತವಾಗಿ ಕಾಣುತ್ತಾನೆ. ವ್ಯಕ್ತಿಗಳ ಬಂಧನದಿಂದ ಮುಕ್ತನಾಗುತ್ತಾನೆ. ಸರ್ವರನ್ನು ಸಮಭಾವದಿಂದ ಕಾಣುತ್ತಾನೆ. ನ್ಯಾಯಪರತೆ ಹೊಂದುತ್ತಾನೆ. ಆಸಕ್ತಿಯನ್ನು ವಜರ್ಿಸಿ ನೋಡುವುದರಿಂದ (ಉಪೇಖ್ಖತ್ತಿ) ಮತ್ತು ತಟಸ್ಥತೆ ಹೊಂದಿರುವುದರಿಂದಾಗಿ ಇದನ್ನು ಉಪೇಖ್ಖಾ ಎನ್ನುತ್ತಾರೆ.
ಉಪೇಖ್ಖಾದ ಲಕ್ಷಣವೇನೆಂದರೆ ಜೀವಿಗಳ ಬಗ್ಗೆ ತಟಸ್ಥತೆ. ಇದರ ಕಾರ್ಯ ಏನೆಂದರೆ ಎಲ್ಲಾ ಜೀವಿಗಳನ್ನು ಸಮಭಾವದಿಂದ ನೋಡುವುದು. ಇದು ರಾಗ ಮತ್ತು ದ್ವೇಷಗಳು (ಪ್ರಿಯ ಮತ್ತು ಅಪ್ರಿಯ ಬಯಕೆಗಳು) ಶಾಂತವಾಗುವುದರಿಂದ ವ್ಯಕ್ತವಾಗುತ್ತದೆ. ಇದರ ತತ್ಕ್ಷಣದ ಕಾರಣ ಏನೆಂದರೆ ಜೀವಿಗಳ ಸುಖದುಃಖಕ್ಕೆ ಆ ಜೀವಿಗಳೇ ಕಾರಣ ಎಂದು ಸ್ಪಷ್ಟವಾಗಿ ಅರಿಯುವುದು. ಉಪೇಖ್ಖಾವು ಅಪ್ರಿಯ ಮತ್ತು ಪ್ರಿಯ ಯೋಚನೆಗಳು ಸ್ತಬ್ದವಾದಾಗ ಜಯಶಾಲಿಯಾಗುತ್ತದೆ. ಆದರೆ ಅಲಕ್ಷಬಾರದ ಪ್ರಾಪಂಚಿಕ ವಿಷಯಗಳಲ್ಲಿ ಉಪೇಕ್ಷೆ ತಾಳಿದಾಗ ಸೋಲುತ್ತದೆ.

ಉಪೇಖ್ಖಾ ಧ್ಯಾನ ವಿಧಾನ :

ಯಾರು ಬ್ರಹ್ಮವಿಹಾರದ ಉಪೇಖ್ಖಾ ಧ್ಯಾನದಲ್ಲಿ ತಲ್ಲೀನನಾಗಲು ಬಯಸುವನೋ ಆತನು ಮೊದಲು ಮೆತ್ತಾದಲ್ಲಿ ಆಗಲಿ, ಅಥವಾ ಕರುಣಾದಲ್ಲಿ ಆಗಲಿ ಅಥವಾ ಮುದಿತಾದಲ್ಲಿ ಆಗಲಿ ತೃತೀಯ ಸಮಾಧಿ ಪಡೆದಿರಬೇಕು. ಅನಂತರ ಆತನು ತೃತೀಯ ಸಮಾಧಿಯಿಂದ ನಿರ್ಗಮಿಸಿ ಅದರ ಪುನರ್ ಅವಲೋಕನ ಮಾಡಬೇಕು. ಹಾಗೆ ಮಾಡಿದಾಗ ಆತನಿಗೆ ಜೀವಿಗಳಿಗೆ ಅಂಟುವಿಕೆ ದುಃಖದ ರೀತಿ ಭಾಸವಾಗುತ್ತದೆ. ಹಾಗು ಆನಂದಕ್ಕಿಂತ, ಸುಖಕ್ಕಿಂತ, ಆನಂದ ಮೀರಿದ, ಸುಖವನ್ನು ಮೀರಿದ ಸಮಚಿತ್ತತೆಯು ಇಷ್ಟವಾಗುತ್ತದೆ. ಆಗ ಆತನು ಸಮಚಿತ್ತತೆಯಿಂದ ಕೂಡಿದ ಮನದಿಂದ ತಟಸ್ಥ ವ್ಯಕ್ತಿಯ ಬಗ್ಗೆ ಕೇಂದ್ರೀಕೃತಗೊಳ್ಳುತ್ತಾನೆ. ಬಹುಕಾಲ ಹೀಗೆ ಇದ್ದು ನಂತರ ಆತನು ಪ್ರಿಯ ವ್ಯಕ್ತಿಯ ಬಗ್ಗೆ ಸಮಚಿತ್ತತೆಯಿಂದ ಕೂಡಿ ಬಹುಕಾಲ ನೆಲೆಸುತ್ತಾನೆ. ನಂತರ ದ್ವೇಷಿಸುವವನನ್ನು ನೆನಪು ಮಾಡುತ್ತಾ ಆತನ ಬಗ್ಗೆಯು ಸಮಚಿತ್ತತೆಯನ್ನು ಪ್ರಸಾರ ಮಾಡುತ್ತಾನೆ. ನಂತರ ಎಲ್ಲಾ ಜೀವಿಗಳ ಮೇಲೆ ಸಮಚಿತ್ತತೆ ಪ್ರಸರಿಸುತ್ತಾನೆ. ಹಾಗೆಯೇ ಪೂರ್ವ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳ ಬಗ್ಗೆ ಸಮಚಿತ್ತತೆ ಪ್ರಸರಿಸುತ್ತಾನೆ. ನಂತರ ಪಶ್ಚಿಮ, ಉತ್ತರ, ದಕ್ಷಿಣ ಊದ್ರ್ವ, ಅದೋ ಹೀಗೆ ಎಲ್ಲಾ ಜೀವಿಗಳ ಮೇಲೆ ಸಮಭಾವದಿಂದ, ಸಮಚಿತ್ತತೆಯಿಂದ ಸಮಚಿತ್ತತೆಯನ್ನು ಪ್ರಸರಿಸುತ್ತಾನೆ.
ದಿಕ್ಕಿನ ಮೂಲಕ ಆತನು ಸಮಚಿತ್ತತೆಯನ್ನು ಹೇಗೆ ಪ್ರಸರಿಸುತ್ತಾನೆ ಎಂದರೆ ಮೊದಲು 1 ಅಥವಾ 2 ಮನೆಗಳು, ನಂತರ 15 ಮನೆಗಳು, ಹಾಗೆಯೇ ಒಂದು ಬೀದಿ, ಅರ್ಧ ಹಳ್ಳಿ, ಜಿಲ್ಲೆ, ರಾಜ್ಯ, ದೇಶ, ಖಂಡ, ಪೃಥ್ವಿ, ಸೌರವ್ಯೂಹ ಹಾಗೆಯೇ ಇಡೀ ಬ್ರಹ್ಮಾಂಡವನ್ನು ಆತನು ಸಮಚಿತ್ತತೆಯಿಂದ ಪ್ರಸರಿಸುತ್ತಾನೆ. ಚತುರ್ಥ ಧ್ಯಾನ ಪ್ರಾಪ್ತಿಯಾಗಿ ನಂತರ ಆತನು ಅದರ ಸಹಾಯದಿಂದ ನೇರವಾಗಿ ಅಕಿಂಚಾಯಾತನ ಅರೂಪ ಸಮಾಧಿ ಪಡೆಯುತ್ತಾನೆ.

ಬುದ್ಧ ಘೋಷರವರ ಪ್ರಕಾರ ನಾಲ್ಕು ಬ್ರಹ್ಮವಿಹಾರಗಳು ಪೂರ್ಣತೆಯಿಂದ ದಶಪಾರಮಿಗಳು ಪೂರ್ಣವಾಗುತ್ತದೆ.

ಬ್ರಹ್ಮವಿಹಾರದ ಲಕ್ಷಣಾಧಿಗಳು:

ಮೆತ್ತಾ: ಮೆತ್ತಾದ ಲಕ್ಷಣವೇನೆಂದರೆ ಜೀವಿಗಳ ಕ್ಷೇಮಾಭಿವೃದ್ಧಿಯನ್ನು ಉತ್ತೇಜಿಸುವುದು. ಮೆತ್ತಾದ ಕ್ರಿಯೆ ಏನೆಂದರೆ ಕ್ಷೇಮಕ್ಕಾಗಿಯೇ ಆದ್ಯತೆ ನೀಡುವುದು. ಇದು ವ್ಯಕ್ತವಾಗುವುದು ಕೆರಳಿಕೆಯಿಂದ ಮುಕ್ತರಾದಾಗಲೇ. ಹಾಗು ಇದಕ್ಕೆ ತತ್ಕ್ಷಣದ ಕಾರಣವೇನೆಂದರೆ ಜೀವಿಗಳಲ್ಲಿ ಪ್ರೀತಿಪಾತ್ರತೆ ಗಮನಿಸಿದಾಗ ಅಥವಾ ನೆನೆದಾಗಲು ಉಂಟಾಗುವುದು. ಮೆತ್ತಾವು ಯಶಸ್ವಿಯಾಗುವುದು. ದ್ವೇಷವು ವಜ್ರ್ಯವಾದಾಗಲೇ ಹಾಗು ಸ್ವಾರ್ಥಯುತ ಪ್ರೇಮ ಅಥವಾ ವಾತ್ಸಲ್ಯ ನುಸುಳಿದಾಗ ಇದಕ್ಕೆ ಸೋಲು ಉಂಟಾಗುತ್ತದೆ.
ಕರುಣೆ: ಕರುಣೆಯ ಲಕ್ಷಣವೇನೆಂದರೆ ದುಃಖವನ್ನು ಶಮನಗೊಳಿಸುವುದನ್ನು ಉತ್ತೇಜನ ಮಾಡುವುದು. ಇದರ ಕ್ರಿಯೆಯೇನೆಂದರೆ ಪರರ ದುಃಖಗಳನ್ನು ಸಹಿಸದೆ ಇರುವುದು. ಇದು ಕ್ರೌರ್ಯ ನಶಿಸಿದಾಗ ವ್ಯಕ್ತವಾಗುವುದು. ದುಃಖಿತರನ್ನು ಕಾಣುವುದೇ ತತ್ಕ್ಷಣದ ಕಾರಣವಾಗಿದೆ. ಇದು ಕ್ರೌರ್ಯ ನಶಿಸಿದಾಗ ಯಶಸ್ವಿಯಾಗುವುದು. ಶೋಕದಲ್ಲಿದ್ದರೆ ಸೋಲುವುದು.
ಮುದಿತಾ: ಮುದಿತಾದ ಲಕ್ಷಣವೇನೆಂದರೆ ಪರರ ಯಶಸ್ಸನ್ನು ಆನಂದಿಸುವುದು. ಇದರ ಕ್ರಿಯೆ ಏನೆಂದರೆ ಅಸೂಯೆಯನ್ನು ದಮಿಸುವುದು. ಇದು ವ್ಯಕ್ತವಾಗುವುದು ಅಸೂಯೆಯ ನಾಶವಾದಾಗಲೇ. ಇದರ ತತ್ಕ್ಷಣದ ಕಾರ್ಯ ಜೀವಿಗಳ ಯಶಸ್ಸು ಕಾಣುವುದು. ಇದು ಯಶಸ್ಸು ಪಡೆಯುವುದು ಅಸೂಯೆಯು ನಶಿಸಿದಾಗಲೇ. ಆದರೆ ಸೋಲುವುದು ಮೋಜು ಅಥವಾ ನಲಿವಿನಿಂದ.
ಉಪೇಕ್ಖಾ: ಉಪೇಕ್ಖಾದ (ಉಪೇಕ್ಷೆ) ಲಕ್ಷಣವೇನೆಂದರೆ ಜೀವಿಗಳ ಬಗೆಗಿನ ತಟಸ್ಥತೆಯನ್ನು ಉತ್ತೇಜಿಸುವುದು. ಇದರ ಕ್ರಿಯೆಯೇನೆಂದರೆ ಜೀವಿಗಳಲ್ಲಿ ಸಮಾನ ಮನೋಭಾವದಿಂದ ನೋಡುವುದು. ಇದು ವ್ಯಕ್ತವಾಗುವುದು ಅಸಮಾಧಾನ ಹಾಗು ಸಮ್ಮತಿಗಳನ್ನು ಶಾಂತಗೊಳಿಸಿದಾಗಲೇ. ಇದರ ತತ್ಕ್ಷಣದ ಕಾರ್ಯವೇನೆಂದರೆ ಜೀವಿಗಳಲ್ಲಿ ತಮ್ಮ ಕರ್ಮಗಳಿಗೆ ತಾವೇ ಹೊಣೆಗಾರರು, ಪಾಲುದಾರರು ಎಂದು ನೋಡುವುದರಿಂದಾಗಿ, ಇದು ಯಶಸ್ವಿಯಾಗುವುದು ಪಕ್ಷಾತೀತ ಅಥವಾ ರಾಗ-ದ್ವೇಷಗಳು ಮೀರಿದಾಗಲೇ (ಸಮ್ಮತಿ ಮತ್ತು ಅಸಮಾಧಾನ) ಹಾಗು ಸಮಚಿತ್ತತೆ ಸಾಧಿಸಿದಾಗಲೇ. ಆದರೆ ಸೋಲುವುದು ಪ್ರಜ್ಞಾರಹಿತ ತಟಸ್ಥೆ ತೋರಿದಾಗ ಮಾತ್ರವೇ.
ಬ್ರಹ್ಮವಿಹಾರದ ಉದ್ದೇಶ: ಬ್ರಹ್ಮವಿಹಾರದ ಸಾಮಾನ್ಯ ಉದ್ದೇಶವೇನೆಂದರೆ, ಅತ್ಯುತೃಷ್ಟವಾದುದರಲ್ಲಿ, ದಿವ್ಯವಾದುದರಲ್ಲಿ, ಅಂತಹ ಆನಂದ ಹಾಗು ಪ್ರಜ್ಞಾಯುತ ಸ್ಥಿತಿಗಳಲ್ಲಿ ನೆಲೆಸಿ ವಿಹರಿಸುವುದಾಗಿದೆ. ಪ್ರತ್ಯೇಕವಾಗಿ ಹೇಳುವುದಾದರೆ ಮೆತ್ತಾ ಧ್ಯಾನದ ಉದ್ದೇಶವು ದ್ವೇಷವನ್ನು ಅಳಿಸಿಹಾಕುವುದು. ಕರುಣಾ ಧ್ಯಾನದ ಉದ್ದೇಶವು ಕ್ರೌರ್ಯವನ್ನು ಅಳಿಸಿಹಾಕುವುದು. ಮುದಿತಾ ಧ್ಯಾನದ ಉದ್ದೇಶವು ಅಸೂಯೆಯನ್ನು ಅಳಿಸಿಹಾಕುವುದು. ಉಪೇಕ್ಖಾ ಧ್ಯಾನದ ಉದ್ದೇಶವು ರಾಗ-ದ್ವೇಷವನ್ನು ಅಳಿಸಿಹಾಕುವುದು.
ಪ್ರಕ್ರಿಯೆ: ಧ್ಯಾನ ಮಾಡಬೇಕೆನ್ನುವ ಇಚ್ಛೆಯಿಂದ ಈ ಪ್ರಕ್ರಿಯೆ (ಧ್ಯಾನ) ಆರಂಭವಾಗುವುದು, ಅಡ್ಡಿಗಳ (ನಿವರಣ) ನಿವಾರಣೆಯಿಂದ ಮದ್ಯಮಾವಸ್ಥೆ ತಲುಪುವುದು, ಸಮಾಧಿಪ್ರಾಪ್ತಿಯಿಂದ ಅಂತ್ಯವಾಗುವುದು.
ಈ ಬ್ರಹ್ಮವಿಹಾರದ ಧ್ಯಾನಗಳ ಧ್ಯಾನವಸ್ತು ಒಂದು ಜೀವಿಯಾಗಬಹುದು ಅಥವಾ ಹಲವಾರು ಜೀವಿಗಳಾಗಬಹುದು. ಈ ಧ್ಯಾನದಲ್ಲಿ ಕಸಿಣದಂತೆ ಪತಿಭಾಗ ನಿಮಿತ್ತದ ವಿಸ್ತರಣೆಯಿಲ್ಲ. ಬದಲಾಗಿ ಮೈತ್ರಿಯ (ಇತ್ಯಾದಿ) ಪ್ರಸರಣೆ ವಿಸ್ತಾರವಾಗುತ್ತಾ ಹೋಗುತ್ತದೆ. ಹೇಗೆಂದರೆ ಒಬ್ಬ ವೃತ್ತಿಯಿಂದ, ಊರು, ದೇಶ, ವಿಶ್ವ, ಬ್ರಹ್ಮಾಂಡ ಹೀಗೆಯೇ ಸಾಗುತ್ತದೆ.
ಬ್ರಹ್ಮವಿಹಾರದಿಂದ ಬುದ್ಧತ್ವ:
ಮಹಾಬೋಧಿಸತ್ವರು ಜೀವಿಗಳ ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡಿ, ಜೀವಿಗಳ ದುಃಖ ಇಷ್ಟಪಡುವುದಿಲ್ಲ. ಅವರು ಜೀವಿಗಳಲ್ಲಿ ಭೇದಭಾವ ಇಡದೆ ಎಲ್ಲಾ ಜೀವಿಗಳಿಗೂ ದಾನ, ಸಹಾಯ ಮಾಡುತ್ತಲೇ ಇರುತ್ತಾರೆ. ಅದೇ ಅವರ ಆನಂದಕ್ಕೆ ಪ್ರಧಾನಮೂಲವಾಗಿರುತ್ತದೆ. ಅವರಲ್ಲಿ ಇದನ್ನು ಈತನಿಗೆ ನೀಡಬೇಕು, ಈತನಿಗೆ ನೀಡಬಾರದು ಎಂಬ ಭೇದಭಾವವಿರುವುದಿಲ್ಲ. ಹಾಗೆಯೇ ಜೀವಿಗಳಿಗೆ ಹಿಂಸೆ ತಡೆಯುವುದಕ್ಕೋಸ್ಕರವಾಗಿ ಅವರು ಶೀಲಗಳನ್ನು ಅಭ್ಯಾಸ ಮಾಡುತ್ತಿರುತ್ತಾರೆ. ಹಾಗೆಯೇ ಜೀವಿಗಳ ಹಿತಕ್ಕಾಗಿ ಹಾಗು ಶೀಲಗಳನ್ನು ಪೂರ್ಣಗೊಳಿಸಲು ತ್ಯಾಗವನ್ನು ಅಭ್ಯಾಸಿಸುತ್ತಾರೆ. ಜೀವಿಗಳಿಗೆ ಯಾವುದು ಒಳಿತು ಹಾಗು ಕೆಡಕು ಎಂಬುದರ ಬಗ್ಗೆ ಗೊಂದಲ ಉಂಟಾಗದಿರಲು ಅವರು ಪ್ರಜ್ಞಾವನ್ನು ಪರಿಶುದ್ಧಗೊಳಿಸುತ್ತಾರೆ. ಅವರ ಹೃದಯದಲ್ಲಿ ಜೀವಿಗಳ ಬಗ್ಗೆ ಅಪಾರವಾದ ಕಾಳಜಿಯಿದ್ದು ಅದಕ್ಕಾಗಿ ಅವರು ನಿರಂತರವಾಗಿ ಪ್ರಯತ್ನಶೀಲತೆಯನ್ನು ಚಾಲನೆ ನೀಡುತ್ತಾ ಮಹತ್ತರವಾದ ಸಾಹಸಗಳನ್ನು ಮಾಡುತ್ತಾರೆ. ಹಾಗೆಯೇ ಅವರು ಜೀವಿಗಳ ಹಲವಾರು ಬಗೆಯ ಪಾಪಗಳನ್ನು, ತಪ್ಪುಗಳನ್ನು, ಕ್ಷಮಯುತವಾಗಿ ಸಹಿಸುತ್ತಾರೆ. ನಾವು ನಿನಗೆ ಇದನ್ನು ನೀಡುವೆವು, ನಿನಗಾಗಿ ಇದನ್ನು ಮಾಡುವೆವು ಎಂದು ನುಡಿದ ಆತನಿಗೆ ವಚನಭಂಗ ಮಾಡುವುದಿಲ್ಲ. ಸತ್ಯಸಂಧತೆಯಿಂದಲೇ ಕೂಡಿರುತ್ತಾರೆ. ಅವರು ಪರಹಿತ ಪರಸುಖಕಾಮನೆಯಲ್ಲಿ ಅಚಲವಾಗಿ ದೃಢನಿಧರ್ಾರದಿಂದಲೇ ಕೂಡಿರುತ್ತಾರೆ. ಅವರು ಅಚಲ ಮೆತ್ತಾವನ್ನು ತಮ್ಮ ಮುಂದೆಯೇ ಇರುವಂತೆ ನೋಡಿಕೊಳ್ಳುತ್ತಾರೆ. ಅದರ ಸಮಚಿತ್ತತೆಯನ್ನು ಸಾಧಿಸಿರುವುದರಿಂದಾಗಿ ಯಾವುದೇ  ನಿರೀಕ್ಷಣೆಗಳಾಗಲಿ, ಪಾರಿತೋಷಕಗಳಾಗಲಿ ಇಟ್ಟಿರುವುದಿಲ್ಲ. ಈ ರೀತಿಯಾಗಿ ದಶಪಾರಮಿಗಳನ್ನು ಪರಿಪೂರ್ಣಗೊಳಿಸಿರುತ್ತಾರೆ. ಹೀಗಾಗಿ ಬ್ರಹ್ಮವಿಹಾರವು ಎಲ್ಲಾ ಸದ್ಗುಣ ಸ್ಥಿತಿಗಳನ್ನು ಪೂರ್ಣಗೊಳಿಸುತ್ತದೆ. ಹೇಳುವುದಾದರೆ, ದಶಬಲಗಳು, ನಾಲ್ಕುರೀತಿಯ ಅಭಯಗಳು, ಆರುಬಗೆಯ ಅಭಿಜ್ಞಾಗಳು ಮತ್ತು ಸಮ್ಮಾಸಂಬುದ್ಧರ 18 ಸ್ಥಿತಿಗಳು ಇವೆಲ್ಕಕ್ಕೂ ಬ್ರಹ್ಮವಿಹಾರವೇ ಆಧಾರವಾಗಿದೆ. ಹೀಗಾಗಿ ದಾನದಿಂದ ಆರಂಭಿಸಿ ಎಲ್ಲಾ ಸದ್ಗುಣ ಪಾರಮಿಗಳೆಲ್ಲವನ್ನು ಅವರು ಪರಿಪೂರ್ಣಗೊಳಿಸುತ್ತಾರೆ.

ಸಜ್ಜನರ ಆನಂದಕ್ಕಾಗಿ ರಚಿಸಲ್ಪಟ್ಟಿರುವ ವಿಶುದ್ಧಿಮಾರ್ಗದ ಸಮಾಧಿ ಭಾಗದ
9ನೇ ಅಧ್ಯಾಯವಾದ ಬ್ರಹ್ಮವಿಹಾರ ನಿದ್ದೇಸ ಮುಗಿಯಿತು 

visuddhi magga ವಿಶುದ್ಧಿಮಾರ್ಗದ ಸಮಾಧಿಯ ಅಧ್ಯಾಯ 8 ಅನುಸ್ಸತಿ ಕಮಟ್ಠಾನ ನಿದ್ದೇಸ

ಅಧ್ಯಾಯ 8ಅನುಸ್ಸತಿ ಕಮಟ್ಠಾನ ನಿದ್ದೇಸ7. ಮರಣಾನುಸ್ಸತಿ

ಈಗ ಮರಣಾನುಸ್ಸತಿಯ ವಿವರಣೆ.
ಇಲ್ಲಿ ಮರಣವು ಒಂದು ಭವದ (ಜೀವನದ/ಜನ್ಮದ) ಜೀವಿತೇಂದ್ರಿಯದ ಭಂಗವಾಗಿದೆ. ಆದರೆ ಇಲ್ಲಿ ಮರಣವೆಂದರೆ ಅರಹಂತರ ದುಃಖದ ಕತ್ತರಿಸುವಿಕೆಯಲ್ಲ ಅಥವಾ ಚಿತ್ತದ ಕ್ಷಣಿಕ ಅಳಿಯುವಿಕೆಯೂ ಅಲ್ಲ. ಅಥವಾ ಕ್ಷಣಿಕ ಸಂಖಾರಗಳ ಅಳಿಯುವಿಕೆಯಲ್ಲ. ಅಥವಾ ಸತ್ತವರ ಅಥವಾ ಸತ್ತ ಲೋಹ ಎಂಬರ್ಥದಲ್ಲಿಯೇ ಇಲ್ಲಿ ಬಳಕೆಯಾಗಿಲ್ಲ.
ಇಲ್ಲಿ ಮರಣವು ಎರಡು ವಿಧದಿಂದ ಕೂಡಿರುತ್ತದೆ. ಅಂದರೆ ಕಾಲ ಮರಣ, ಅಕಾಲ ಮರಣ. ಕಾಲ ಮರಣವು ಪುಣ್ಯದ ಕ್ಷಯದಿಂದಲು ಅಥವಾ ಜೀವಿತಾವಧಿಯ ಅಂತ್ಯದಿಂದಲು ಅಥವಾ ಎರಡರಿಂದಲೂ ಆಗುವುದು. ಅಕಾಲ ಮರಣವು ಕಮ್ಮದಿಂದಾಗಿ ಜೀವಿತೀಂದ್ರಿಯದ ಭಂಗವಾಗಿ ಆಗುವುದು.
ಪುಣ್ಯ ಕ್ಷಯವಾಗುವ ಮರಣದಲ್ಲಿ ಪುನರ್ಜನ್ಮಕಾರಕ ಕಮ್ಮವು ಫಲಿತವಾಗುವಿಕೆಯಿಂದ ಬರುವುದು. ಆಗ ಜೀವಿತದಲ್ಲಿ ಇರಬೇಕಾದ ಸಕಲ ಸಹಾಯಕ ಸ್ಥಿತಿಗಳೆಲ್ಲವೂ ಇದ್ದರೂ ಸಾವು ಬರುವುದು. ಜೀವಿತದ ಕಾಲಾವಧಿ ಕ್ಷಯದಿಂದ ಉಂಟಾಗುವ ಮರಣವು ಸಮಾನ್ಯವಾಗಿ ನಾವು ಗಮನಿಸುವಂತಹುದ್ದಾಗಿದೆ. ಸಾಧಾರಣವಾಗಿ ನೂರು ವರ್ಷವನ್ನು ಇದಕ್ಕೆಂದು ಪರಿಗಣಿಸಲ್ಪಡುತ್ತಾರೆ. ಅಕಾಲ ಮರಣದಲ್ಲಿ ಕಮ್ಮದಿಂದಾಗಿ ಜೀವಿತದ ಮುಂದುವರಿಕೆಗೆ ತೀಕ್ಷ್ಣ ಭಂಗವಾಗಿ ಅದೇ ಕ್ಷಣದಲ್ಲಿ ಅಳಿಯುವಂತಾಗುತ್ತದೆ. ಉದಾ: ಕಲಾಬು ರಾಜ ಇತ್ಯಾದಿ. ಅಥವಾ ಕೆಲವರ ಮರಣವು ಶಸ್ತ್ರಗಳ ಹೊಡೆತದಿಂದಾಗುತ್ತದೆ. ಇವೆಲ್ಲಕ್ಕೂ ಹಿಂದಿನ ಕಮ್ಮವೇ ಕಾರಣವಾಗಿರುತ್ತದೆ. ಇವೆಲ್ಲವೂ ಜೀವಿತೀಂದ್ರಿಯದ ಭಂಗದಲ್ಲಿ ಪಾತ್ರವಹಿಸುತ್ತವೆ. ಆದ್ದರಿಂದಾಗಿ ಮರಣಾನುಸ್ಸತಿ ಎಂದರೆ ಜೀವಿತೀಂದ್ರಿಯದ ಭಂಗದಲ್ಲಿ ಪಾತ್ರವಹಿಸುತ್ತವೆ. ಆದ್ದರಿಂದಾಗಿ ಮರಣಾನುಸ್ಸತಿ ಎಂದರೆ ಜೀವಿತೀಂದ್ರಿಯದ ಭಂಗದ ಕುರಿತ ಚಿಂತನೆಯೇ ಆಗಿದೆ.

ಮರಣಾನುಸ್ಸತಿ ಧ್ಯಾನ ವಿಧಾನ: 

ಯಾರು ಈ ಧ್ಯಾನವನ್ನು ಮಾಡಲು ಇಚ್ಛಿಸುವನೋ ಆತನು ಏಕಾಂತದಲ್ಲಿ ಹೋಗಿ ಈ ರೀತಿಯಾಗಿ ಚಿಂತನೆ ಮಾಡಬೇಕು: ಮರಣವು ಸಂಭವಿಸುತ್ತದೆ, ಜೀವಿತಿಂದ್ರಿಯ ಭಂಗವಾಗಲಿದೆ ಅಥವಾ ಮರಣ, ಮರಣ, ಮರಣ ನಿಶ್ಚಿತ, ಜೀವಿತ ಅನಿಶ್ಚಿತ.
ನೆನಪಿರಲಿ, ಅಪ್ರಾಜ್ಞರ ರೀತಿಯಲ್ಲಿ ಈ ಧ್ಯಾನವನ್ನು ಮಾಡಕೂಡದು. ಉದಾ: ತಾಯಿಯು ತನ್ನ ಪುತ್ರನನ್ನು ಕುರಿತು ಧ್ಯಾನಿಸಿ ಶೋಕ ಭರಿತವಾಗುವುದು ಅಥವಾ ಶತ್ರುವಿನ ಸಾವನ್ನು ಚಿಂತಿಸಿ ಆನಂದಿಸುವುದು, ಈ ರೀತಿಯ ಭಾವಾವೇಷವು ಧ್ಯಾನವೆನಿಸಿಕೊಳ್ಳುವುದಿಲ್ಲ (ಧ್ಯಾನದಲ್ಲಿ ಲೋಭ, ದ್ವೇಷ, ಭಯ, ಶೋಕವಿರಲಾರದು). ಹೀಗೆ ಧ್ಯಾನಿಸಿದರೆ ಪ್ರಯತ್ನಶೀಲತೆಯ ಅಥವಾ ವಿರಾಗದ ಸಂವೇಗವೂ ಉಂಟಾಗುವುದಿಲ್ಲ. ಅಥವಾ ತನ್ನ ಸಾವು ಮುಂದಿದೆ ಎಂದು ಚಿಂತೆ, ಖಿನ್ನತೆಯನ್ನುಂತು ಮಾಡಲಾರದು. ಈ ರೀತಿಯ ಅಪ್ರಾಜ್ಞತೆಯ ಚಿಂತನೆಯಿಂದಾಗಿ ಲಾಭಕ್ಕಿಂತ ಹಾನಿಯೇ ಹೆಚ್ಚಾಗುವ ಸಾಧ್ಯತೆಯಿರುತ್ತದೆ.
ಇವೆಲ್ಲದರಲ್ಲಿ ಸ್ಮೃತಿಯಾಗಲಿ ಅಥವಾ ವಿರಿಯ (ಪ್ರಯತ್ನ) ಸಂವೇಗವಾಗಲಿ ಅಥವಾ ಜ್ಞಾನವಾಗಲಿ ಸಿಲಾರದು. ಆದ್ದರಿಂದಾಗಿ ಆತನು ತನಗೆ ಸಂಬಂಧಿಸದ ಸತ್ತ ಜೀವಿಗಳನ್ನು ಅಥವಾ ಸತ್ತ ವ್ಯಕ್ತಿಗಳನ್ನು ನೆನೆಸಿಕೊಳ್ಳಬೇಕು (ಅವರ ಭಾವಚಿತ್ರ ನೆನೆಯಬಾರದು). ಮರಣವು ಸಂಭವಿಸಿತು, ಮರಣವು ನಿಶ್ಚಿತ ಎಂದು ಅಥವಾ ಎಂಟು ರೀತಿಯ ವಿಶಿಷ್ಟತೆಯಿಂದ ಧ್ಯಾನಿಸಬೇಕು.
ಆಗ ಆತನಲ್ಲಿ ವಿಭಂಗಗಳು (ತಡೆಗಳು) ನಾಶವಾಗಿ, ಸ್ಮೃತಿಯು ಸ್ಥಾಪಿತವಾಗುತ್ತದೆ ಹಾಗು ಅದರ ಧ್ಯಾನವಸ್ತುವು ಮರಣವೇ ಆಗಿರುತ್ತದೆ. ಧ್ಯಾನದಿಂದ ಸಾಮಾನ್ಯ ಸಮಾಧಿಯು ಸಿಗುವುದು.

ಎಂಟು ವಿಶಿಷ್ಯ ರೀತಿಯ ಮರಣಾನುಸ್ಸತಿ ಧ್ಯಾನ:

ಇಲ್ಲಿ ನೀಡಿರುವ ಅಷ್ಟರೀತಿಯ ಚಿಂತನೆಯಿಂದಾಗಿ ಮರಣಾನುಸ್ಸತಿಯನ್ನು ಅಭ್ಯಸಿಸಬೇಕು.

 1. ಕೊಲೆಗಾರನು ಬೆನ್ನೆತ್ತುವ ರೀತಿ 

2. ಯಶಸ್ಸಿನ ನಾಶದಂತೆ

 3. ಹೋಲಿಕೆಯಿಂದಾಗಿ 4. ಈ ಶರೀರ ಅನೇಕ ಜೀವಿಗಳ ತಾಣ ಕೇವಲ ತನ್ನದಲ್ಲ ಎಂದು 5. ಜೀವದ ತೋರಿಕೆ ಎಂದು 6. ನಿಮಿತ್ತರಹಿತವಾಗಿ 7. ಪರಿಮಿತ ಕಾಲವೆಂದು 8. ಪರಿಮಿತ ಕ್ಷಣವೆಂದು.


ಈಗ ವಿವರವಾಗಿ
1. ಇಲ್ಲಿ ಕೊಲೆಗಾರನು ವ್ಯಕ್ತಿಯೊಬ್ಬನನ್ನು ನಿನ್ನನ್ನು ಕೊಲ್ಲುತ್ತೇನೆ ಎಂದು ಶಸ್ತ್ರ ಸಮೇತ ಬೆನ್ನತ್ತುವಂತೆ ಮರಣವು ಜೀವಿಗಳನ್ನು ಬೆನ್ನತ್ತುತ್ತಿದೆ ಎಂದು ಧ್ಯಾನಿಸುತ್ತಾ ತಾನು ಸಹಾ ಇದಕ್ಕೆ ಹೊರತಲ್ಲ, ಬಹುಬೇಗನೇ ವಯಸ್ಸಾಗುವುದು, ಹಾಗೆಯೇ ಮರಣವೂ ಸಹಾ ಬೆಟ್ಟದಿಂದ ಕಲ್ಲು ಉರುಳುವಂತೆ ಕ್ಷಿಪ್ರವಾಗಿ ಆಗುತ್ತದೆ (ನಂತರ ಹೊಸ ಜನ್ಮ ಸಿಗುತ್ತಿರುತ್ತದೆ) ಸಾವಿನ ಹಿಂದೆಯೇ ಜನ್ಮವೂ ಸಿದ್ಧವಾಗಿರುತ್ತದೆ, ಆದರೂ ಜನ್ಮತಳೆದ ಪ್ರತಿಯೊಂದಕ್ಕೂ ಸಾವು ತಪ್ಪಲಾರದು. ಹೇಗೆ ಸೂರ್ಯನು ಪಶ್ಚಿಮಾಭಿಮುಖವಾಗಿ ಸಂಚರಿಸುತ್ತ ಪೂರ್ವದತ್ತ ಹಿಂತಿರುಗಿ ಚಲಿಸುವುದಿಲ್ಲವೊ, ಹಾಗೆಯೇ ಮರಣವೂ ಸಹಾ ತಪ್ಪುವುದಿಲ್ಲ. ಅಲೆಗಳು ಹೇಗೆ ದಡಕ್ಕೆ ಅಪ್ಪಳಿಸದೆ  ಹಿಂತಿರುಗುವುದಿಲ್ಲವೋ ಹಾಗೆಯೇ ಜೀವನವೂ ಮರಣದೆಡೆಗೆ ಸಾಗುತ್ತದೆ. ಕೊಲೆಗಾರನು ಬೆನ್ನತ್ತುವ ರೀತಿ ಮರಣವು ಹಿಂಬಾಲಿಸುತ್ತದೆ.
ದಿನ-ರಾತ್ರಿಗಳು ವೇಗವಾಗಿ ಜಾರುತ್ತವೆ
ಹಣ್ಣುಗಳಿಗೆ ಬೀಳುವ ಭಯವಿರುತ್ತದೆ
ಹಾಗೆಯೇ ವಯಸ್ಸಾಗುತ್ತಿರುವ ಎಲ್ಲರಿಗೂ ಮರಣ ಭಯವಿರುತ್ತದೆ.
ಮಡಿಕೆಗಳು ಒಡೆದುಹೋಗುವಂತೆ ಪ್ರಾಣವೂ ಹೋಗಿಬಿಡುವುದು
ಕುಶಾಗ್ರದಲ್ಲಿರುವ ಮಂಜಿನ ಹನಿಯು ಮರೆಯಾಗುವಂತೆ
ಜೀವಿಗಳು ಸಾವಿನ ನಂತರ ಮರೆಯಾಗುವರು.
ಹೀಗೆ ಮಾನವನ ಜೀವನವಿದೆ, ಇದನ್ನು ತಾಯಿಯು ಸಹಾ ತಡೆಯಲಾರಳು.
..... ಹೀಗೆ ಚಿಂತನೆ ಮಾಡುವುದು.

2. ಯಶಸ್ಸಿನ ನಾಶದಂತೆ:
ಎಲ್ಲಿಯವರೆವಿಗೆ ನಷ್ಟ ಸಂಭವಿಸುವುದಿಲ್ಲವೋ, ಅಲ್ಲಿಯವರೆಗೆ ಯಶಸ್ಸು ಹೊಳೆಯುತ್ತಿರುತ್ತದೆ.
ಆತನು ಪೃಥ್ವಿಯನ್ನು ಜಯಿಸಿದಾಗ ಆನಂದದಿಂದ ಲಕ್ಷಾಂತರ ದಾನ ಮಾಡಿದನು.
ಆತನ ಆಳ್ವಿಕೆಯಿರುವವರೆಗೂ, ಆದರೆ ಆತನ ಪುಣ್ಯ ಪೂರ್ಣವಾಗಿ ಬಳಕೆಯಾದಾಗ,
ಅಂತಿಮ ಶ್ವಾಸ ಹರಿದಾಡುವಾಗ ಶೋಕರಹಿತ ಅಶೋಕ ಸಾಮ್ರಾಟನು ಸಹಾ
ಮೃತ್ಯುವನ್ನು ಶೋಕದಿಂದಲೇ ಎದುರಿಸಿದನು.
ಎಲ್ಲಾ ಆರೋಗ್ಯವೂ, ರೋಗ ಬರುವವರೆಗೆ ಮಾತ್ರ;
ಎಲ್ಲಾ ಯೌವ್ವನವೂ ಮುಪ್ಪಿನವರೆಗೆ ಮಾತ್ರ;
ಈ ಜೀವನವೂ ಮರಣದವರೆಗೆ ಮಾತ್ರ.
ಎಲ್ಲಾ ಪ್ರಾಪಂಚಿಕ ಅಸ್ತಿತ್ವವೂ ಜನ್ಮದಿಂದಲೇ ಆರಂಭವಾಗಿ, ಪಶ್ಚಾತ್ತಾಪದ ಕಾಟದಿಂದ ರೋಗದ ಅನಿರೀಕ್ಷತೆಯಿಂದ ನಡೆದು, ಮರಣದ ಹೊಡೆತದಿಂದ ಪೆಟ್ಟು ತಿಂದು ಹಾಗೇ ಬಿದ್ದುಬಿಡುತ್ತದೆ.
ಮರಣವೂ ಎಲ್ಲಾ ಜೀವಿಗಳನ್ನು ಅಪ್ಪಳಿಸುವುದು
ಯಾರಿಗೂ ದಯೆ ತೋರಿಸುವುದಿಲ್ಲ, ಅದನ್ನು ಗೆಲ್ಲಲು ಗಜದಳವಾಗಲಿ,
ರಥಿಕರಾಗಲಿ, ವೀರಾಗ್ರಣಿಗೂ ಸಾಧ್ಯವಾಗುತ್ತಿಲ್ಲ.
ಮಾಂತ್ರಿಕರ ಮಂತ್ರದಾಟವೂ ಅಲ್ಲಿ ನಡೆಯುವುದಿಲ್ಲ,
ಯಾವ ಐಶ್ವರ್ಯವೂ ಅಲ್ಲಿ ತಲೆಹಾಕಲಾಗಿಲ್ಲ.

3. ಹೋಲಿಕೆಯಿಂದ : 

ಇಲ್ಲಿ ತನ್ನನ್ನು ಪರರಿಗೆ ಹೋಲಿಸಿಕೊಂಡು ಸಮಾಧಾನ ಅಥವಾ ನಿರ್ಭಯತೆ ಗಳಿಸುವುದು. ಇದನ್ನು ಏಳು ರೀತಿಯಲ್ಲಿ ಹೋಲಿಸಿಕೊಳ್ಳಲಾಗುತ್ತದೆ.
ಅ) ಮಹಾ ಕೀತರ್ಿವಂತರಾದ ಮಹಾಸಮ್ಮತ, ಮಂದಾತು, ಮಹಾಸುದಸ್ಸನ, ದಲ್ಹನೇಮಿ ಮುಂತಾದವರು ಅಪಾರ ಕೀತರ್ಿಶಾಲಿಗಳು ಹಾಗು ಐಶ್ವರ್ಯವಂತರಾಗಿದ್ದರು. ಅವರ ಕೀತರ್ಿ ಉದ್ದಗಲಕ್ಕೂ ಹಬ್ಬಿತ್ತು; ಅವರು ಸದಾ ಮೃತ್ಯುವಿನ ಮುಂದೆ ಕುಬ್ಜರಾದ ಬಳಿಕ ನನ್ನ ಬಗ್ಗೆ ಏನು ಹೇಳುವುದು?
ಆ) ಮಹಾ ಪುಣ್ಯಶಾಲಿಗಳಾದ ಜೋತಿಕ, ಜಟಿಲ, ಉಗ್ಗ, ಮೆಂಡಕ ಮತ್ತು ಪುಣ್ಣಕ ಮತ್ತಿತರರು ಅತಿ ಪುಣ್ಯಶಾಲಿಗಳಾಗಿ ಜೀವಿಸಿದವರು; ಅವರಿಗೆ ಮರಣ ಬಂದಿರುವಾಗ, ಸಾಧಾರಣನಾದ ನನ್ನ ಬಗ್ಗೆ ಹೇಳುವುದೇನು?
ಇ) ಅತ್ಯಂತ ಬಲಿಷ್ಠರಾಗಿದ್ದಂತಹ ವಾಸುದೇವ, ಬಲದೇವ, ಭೀಮಸೇನ, ಯುದಿಷ್ಠಿರ, ಚಾರುಣಮಲ್ಲ ಇಂತಹವರು ತಮ್ಮ ಬಲಿಷ್ಠತೆಗೆ, ಪರಾಕ್ರಮಕ್ಕೆ, ಪ್ರಸಿದ್ಧಿಯಾಗಿದ್ದವರು; ಅವರು ಸಹಾ ಮರಣ ವಲಯಕ್ಕೆ ಸಿಲುಕಿ ಹೋದರು, ಇನ್ನು ನನ್ನ ಬಗ್ಗೆ ಹೇಳುವುದು ಏನು?
ಈ) ಮಹಾ ಇದ್ದಿಶಕ್ತಿ ಸಂಪನ್ನರಾದಂತಹ ಮೊಗ್ಗಲ್ಲಾನರವರು ಇಂದ್ರನ ವೈಜಯಂತಿ ಭವನವನ್ನು ತಮ್ಮ ಕಾಲ ಬೆರಳಿನಿಂದ ಕಂಪಿಸಿದ್ದವರು. ಅವರು ಮಹಾ ಇದ್ದಿಸಂಪನ್ನರು; ಅವರು ಸಹಾ ಸಿಂಹದ ಬಾಯಿಗೆ ಸಿಲುಕುವ ಜಿಂಕೆಯಂತೆ ಮೃತ್ಯು ದವಡೆಗೆ ಸಿಲುಕಿಹೋದರು; ಇನ್ನು ನನ್ನ ಪಾಡೇನು?
ಉ) ಮಹಾ ಪ್ರಾಜ್ಞರಾದಂತಹ ಸಾರಿಪುತ್ತರಂಥವರು ಅವರ ಪ್ರಜ್ಞಾಶೀಲತೆಯಷ್ಟು 16ನೇ 1 ಭಾಗದಷ್ಟು ಯಾವ ಜೀವಿಯೂ ಇಲ್ಲ. ಅಂತಹವರು ಮರಣದ ವಲಯಕ್ಕೆ ಸಿಲುಕಿರುವಾಗ ನನ್ನಂಥವನ ಬಗ್ಗೆ ಹೇಳುವುದು ಏನು?
ಊ) ಯಾವ ಪಚ್ಚೇಕ ಬುದ್ಧರು ತಮ್ಮ ಸ್ವಶಕ್ತಿಯಿಂದ ಹಾಗು ಸ್ವಜ್ಞಾನದಿಂದಲೇ ಎಲ್ಲಾ ಕ್ಲೇಶಗಳನ್ನು ನಾಶಗೊಳಿಸಿ, ಪಚ್ಚೇಕಬೋಧಿಯನ್ನು ಗಳಿಸಿದವರು, ಖಡ್ಗಮೃಗದಂತೆ ಏಕಾಕಿಯಾಗಿ ಸಂಚರಿಸುವವರಾದ ಅವರನ್ನು ಮೃತ್ಯುವು ಬಿಡಲಿಲ್ಲ, ಇನ್ನು ನನ್ನಂಥವನ ಬಗ್ಗೆ ಹೇಳುವುದು ಏನು?
ಋ) ಯಾವ ಭಗವಾನ ಬುದ್ಧರು 32 ಮಹಾಪುರುಷ ಲಕ್ಷಣಗಳಿಂದ ಹಾಗು 108 ವಿಶೇಷ ಲಕ್ಷಣಗಳಿಂದ ಕೂಡಿದ್ದಂತಹವರು. ಧಮ್ಮಕಾಯ, ಸಂಬೋಧಿಕಾಯಗಳನ್ನು ಹೊಂದಿದ್ದಂತಹವರು. ಪ್ರತಿ ಕೋನದಲ್ಲೂ ಪರಿಶುದ್ಧತೆ ಹೊಂದಿದ್ದಂತಹವರು. ಅಪಾರ ಕೀತರ್ಿವಂತರು, ಅಪಾರ ಪುಣ್ಯಶಾಲಿಗಳು, ಮಹಾ ಇದ್ದಿ ಸಂಪನ್ನರು, ಅದ್ವಿತೀಯ ಅತೀಂದ್ರಿಯಶಕ್ತಿ ಸಂಪನ್ನರು, ಪರಮ ಪ್ರಾಜ್ಞರು, ಹೋಲಿಸಲಾಗದವರು. ಬುದ್ಧರೊಂದಿಗೆ ಮಾತ್ರ ಹೋಲಿಸಬಹುದಾದಂತಹವರು. ಏಕಮೇವಾದ್ವಿತೀಯರು, ಅರಹಂತರು, ಸಮ್ಮಾಸಂಬುದ್ಧರು. ಅಂತಹವರು ಸಹಾ ಮರಣದ ಮಹಾವರ್ಷಕ್ಕೆ ಸ್ತಬ್ಧರಾದರು. ಹೇಗೆಂದರೆ ಮಹಾ ಅಗ್ನಿಯು ಮಹಾ ಮಳೆಗೆ ಆರಿಹೋದಂತೆ ಆರಿಹೋದರು. ಇನ್ನು ನನ್ನಂಥವನ ಬಗ್ಗೆ ಹೇಳುವುದೇನು?
ಈ ರೀತಿಯಾಗಿ ಹೋಲಿಸಿ ಸಮಾಧಾನ ತಂದುಕೊಳ್ಳುವುದು.

4. ಶರೀರ ಹಲವಾರು ಜೀವಿಗಳಿಗೆ ಆಶ್ರಯ:
ಈ ಶರೀರವು ಹಲವಾರು ಸೂಕ್ಷ್ಮ ಜೀವಿಗಳಿಗೆ ಆಶ್ರಯತಾಣವೆಂದು ಚಿಂತಿಸುವುದು ಹೇಗೆಂದರೆ: ಹೊರ ಚರ್ಮದ ಮೇಲೆ, ಚರ್ಮದ ಒಳಗೆ, ಮಾಂಸದಲ್ಲಿ, ಸ್ನಾಯುಗಳಲ್ಲಿ, ಮೂಳೆಗಳಲ್ಲಿ, ಅತ್ಥಿಮಚ್ಚೆಯಲ್ಲಿ ಹೀಗೆ ನಮ್ಮ ಶರೀರದಲ್ಲಿ ಎಲ್ಲೆಲ್ಲೂ ಸೂಕ್ಷ್ಮ ಜೀವಿಗಳ ಆಶ್ರಯವಾಗಿ ಬದುಕುತ್ತವೆ. ಅವು ಅಲ್ಲೇ ಹುಟ್ಟಿ, ಅಲ್ಲೇ ಬೆಳೆದು, ಅಲ್ಲೇ ಸಾಯುತ್ತಿರುತ್ತವೆ, ನೀರನ್ನುಂಟುಮಾಡುತ್ತವೆ. ಹೀಗಾಗಿ ಶರೀರವು ಅವುಗಳ ತಾಯ್ತನವಾಗಿದೆ, ಅವುಗಳ ಆಸ್ಪತ್ರೆಯಾಗಿದೆ ಅವುಗಳ ಸ್ಮಶಾನವಾಗಿದೆ. ಇವುಗಳಿಂದಾಗಿಯೇ ರೋಗಗಳು ಹಾಗೆಯೇ ಮರಣವು ಸಂಭವಿಸಬಲ್ಲದು. 80 ಬಗೆಯ ಸೂಕ್ಷ್ಮಜೀವಿಗಳ ಕುಟುಂಬಗಳಿಂದಾಗಿ ನೂರಾರು ಬಗೆಯ ರೋಗಗಳು ಉಂಟಾಗುತ್ತವೆ. ಹಾಗೆಯೇ ಸಾವಿಗೆ ಬಾಹ್ಯ ಕಾರಣಗಳೆಂದರೆ: ಹಾವುಗಳು, ಚೇಳುಗಳು ಇತ್ಯಾದಿ ಜೀವಿಗಳಿಂದಾಗಿ ಹಾಗು ಶತ್ರುಗಳಿಂದಾಗಿ ವಿವಿಧ ದಿಕ್ಕುಗಳಿಂದಾಗಿ ಬರುವಂತಹ ಬಾಣಗಳು, ಈಟಿಗಳು, ಕಲ್ಲುಗಳು ಇತ್ಯಾದಿ. ಹಾಗೆಯೇ ಎಲ್ಲಾರೀತಿಯ ಆಕಸ್ಮಿಕ ಅಪಘಾತಗಳು ಈ ಶರೀರದ ಮೇಲೆ ಬೀಳಬಹುದು. ಅದರಿಂದಾಗಿ ಮರಣವು ಸಂಭವಿಸಬಹುದು. ಆದ್ದರಿಂದಲೇ ಭಗವಾನರು ಹೀಗೆ ಹೇಳಿರುವರು: ಭಿಕ್ಷುಗಳೇ, ಇಲ್ಲಿ ಯಾವಾಗ ದಿನವು ಮುಗಿಯುವುದೋ ಹಾಗು ರಾತ್ರಿಯು ಹತ್ತಿರವಾಗುತ್ತಿರುವುದೋ ಆಗ ಭಿಕ್ಷುವು ಹೀಗೆ ಚಿಂತನೆ ಆರಂಭಿಸಬೇಕು: ನಾನು ಹಲವಾರು ವಿಧಗಳಿಂದಾಗಿ ಸಾವನ್ನು ಎದುರಿಸಬೇಕಾಗುತ್ತದೆ. ನನಗೆ ಹಾವು ಕಚ್ಚಬಹುದು, ಚೇಳು ಕುಟುಕಬಹುದು, ಸಹಸ್ರಪಾದಿಯು ಕಡಿಯಬಹುದು, ಇದರಿಂದಾಗಿ ನಾನು ಸಾಯಬಹುದು. ಅಥವಾ ನಾನು ಕೇವಲ ಎಡವಿಬಿದ್ದು ಸಾವು ಬರಬಹುದು. ಅಥವಾ ನಾನು ತಿನ್ನುವಂತಹ ಆಹಾರದಿಂದಲೂ ಶರೀರ ಅಸ್ತವ್ಯಸ್ತವಾಗಬಹುದು, ಪಿತ್ತವಿಕಾರವಾಗಬಹುದು, ಕಫ ದೋಷವು ವಿಪರೀತವಾಗಬಹುದು ಅಥವಾ ವಾಯು ವಿಕಾರವಾಗಿ ಶಸ್ತ್ರಾಘಾತದಷ್ಟು ನೋವುಗಳನ್ನು ತರಿಸಬಹುದು. ಈ ರೀತಿಯ ಪರಿಣಾಮಗಳಿಂದಾಗಿ ನನಗೆ ಸಾವು ಸಂಭವಿಸಬಹುದು.
ಈ ರೀತಿಯಾಗಿ ಈ ಶರೀರವೂ ಹಲವಾರು ಜೀವಿಗಳ ಪಾಲಾಗಿದೆ ಎಂದು ಮರಣಾನುಸ್ಸತಿ ಮಾಡಬಹುದು.


5. ಜೀವನವು ಚಂಚಲತೆ (ಅಸ್ಥಿರತೆ)ಯಂತೆ:

ಈ ಜೀವನವು ಶಕ್ತಿಹೀನವಾದುದು ಹಾಗು ಅಸ್ಥಿರವದುದು. ಏಕೆಂದರೆ ಜೀವಿಗಳು ಉಸಿರಾಟದಿಂದಾಗಿ ಆಧಾರವಾಗಿದೆ. ಶಾರೀರಿಕ ಭಂಗಿಗಳಿಂದ ಆಧಾರವಾಗಿದೆ. ಶೀತೋಷ್ಣಗಳಿಂದ ಅವಲಂಬಿತವಾಗಿದೆ. ಪ್ರಾಥಮಿಕ ಧಾತುಗಳಿಂದ ಆಧಾರವಾಗಿದೆ ಹಾಗು ಆಹಾರದಿಂದ ಪೋಷಿತವಾಗಿದೆ. ಉಚ್ವಾಸ ನಿಶ್ವಾಸಗಳು ಸರಾಗವಾಗಿದ್ದರೆ ಮಾತ್ರ ಜೀವವಿರುತ್ತದೆ. ಆದರೆ ಒಳಹೋದ ಶ್ವಾಸ ಹೊರಬರದೆ ಹೋದರೆ ಅಥವಾ ಹೊರಬಂದ ಶ್ವಾಸ ಒಳಕ್ಕೆ ಹೋಗದಿದ್ದರೆ ದೇಹವೇ ಶವವಾಗುತ್ತದೆ.
ನಡಿಗೆ, ಕೂಡುವಿಕೆ, ನಿಲ್ಲುವಿಕೆ ಮತ್ತು ಮಲಗುವಿಕೆ ಇವುಗಳಲ್ಲಿ ಒಂದು ಸದಾ ಸಹಜವಾಗಿ ನಡೆದಿಲ್ಲವೆಂದರೆ ಜೀವನವೇ ನರಕದಂತೆ ಆಗಿಹೋಗುವುದು. ಅದೇರೀತಿ ಶೀತೋಷ್ಣಗಳ ಶೇಕಡವಾರು ಏರುಪೇರಾದರೆ ಜೀವಕ್ಕೆ ಅಪಾಯ. ಹಾಗೆಯೇ ಶಾರೀರಿಕ ಧಾತುಗಳು ಸಹಾ. ಉದಾಹರಣೆಗೆ: ಪಠವಿಧಾತು (ಘನ) ತೊಂದರೆಗೀಡಾಯಿತು ಎಂದರೆ ದೇಹವೇ ಬಿಗಿದುಕೊಂಡು ಬಾಗಲಾರದಂತಾಗುತ್ತದೆ. ಅದೇರೀತಿ ಜಲಧಾತು ಅಥವಾ ವಾಯುಧಾತು ಇತ್ಯಾದಿಗಳು ತೊಂದರೆಗೀಡಾದರೆ ಜಲಬಾಧೆ, ದುರ್ಬಲತೆ, ಆಘಾತ, ಜ್ವರ ಇತ್ಯಾದಿಗಳ ಆಕ್ರಮಣವಾಗುತ್ತದೆ, ಸಾವು ಸಂಭವಿಸಬಹುದು.
ಹೀಗೆ ಜೀವ(ನ)ವು ಅತಿ ಅಸ್ಥಿರವೆಂದು ತಿಳಿದುಕೊಳ್ಳಬೇಕು.

6. ಮರಣವು ಚಿಹ್ನಾತೀತದಂತೆ ಭವಿಷ್ಯ ಸೂಚಕವಲ್ಲ:
ಜೀವವು ಗರ್ಭದಲ್ಲಿರುವಾಗಲೇ ಸಾಯಬಹುದು ಅಥವಾ ಹುಟ್ಟಿದ ಕೆಲದಿನಗಳಲ್ಲೇ ಅಥವಾ ಕೆಲವಾರಗಳಲ್ಲೇ ಅಥವಾ ಕೆಲ ತಿಂಗಳಲ್ಲೇ ಅಥವಾ ಕೆಲ ವರ್ಷಗಳಲ್ಲೇ ಅಥವಾ ಯೌವ್ವನದಲ್ಲಿ ಅಥವಾ ಮದ್ಯವಯಸ್ಸಿನಲ್ಲಿ ಅಥವಾ ವೃದ್ಧಾಪ್ಯದಲ್ಲಿ ಸಾಯಬಹುದು.
ಅದೇರೀತಿ ಜೀವಿಗೆ ಯಾವ ರೋಗ ಬರುತ್ತದೆ, ಯಾವಾಗ ಬರುತ್ತದೆ ಎಂದು ಸೂಚಿಸಲಿಕ್ಕೆ ಆಗುವುದಿಲ್ಲ.
ಹಾಗೆಯೇ ದಿನದ ಯಾವುದೇ ಘಳಿಗೆಯಲ್ಲಿಯೂ ಸಾಯಬಹುದು. ಹಾಗೆಯೇ ಆತನು ಯಾವ ಸ್ಥಳದಲ್ಲಿ ಸಾವನ್ನು ಪಡೆಯುವನೋ ಸೂಚಿಸಲು ಆಗಲಾರದು. ಹಾಗೆಯೇ ಸಾವಿನ ನಂತರದ ಗತಿಯನ್ನು ಹೇಳಲಾಗದು. (ಆದರೆ ಅಭಿಜ್ಞಾವಂತರಿಗೆ ಇವೆಲ್ಲಾ ಸಾಧ್ಯವಿದೆ. ಆದರೂ ಸಾಧಾರಣ ಜನರನ್ನು ಗುರಿಯಾಗಿಟ್ಟುಕೊಂಡು ಇಲ್ಲಿ ಹೇಳಲಾಗಿದೆ). ಆದ್ದರಿಂದಾಗಿ ಮರಣಕ್ಕೆ ಚಿಹ್ನಾತೀತವಾಗಿ ಭವಿಷ್ಯ ಸೂಚಕವಲ್ಲ ಎನ್ನಲಾಗಿದೆ.

7. ಜೀವನವು ಪರಿಮಿತವೆಂದು:
ಮಾನವ ಜೀವನ ಅತಿ ಅಲ್ಪ. ಸಾಯಲಿಕ್ಕೆ ಜನ್ಮಿಸುವಂತೆ ನೂರು ವರ್ಷಕ್ಕೆ ಮುಂಚೆಯೇ ಸಾಯುವನು. ಇದನ್ನು ಅರಿತ ಜ್ಞಾನಿಯು ಸಾವು ತಪ್ಪದೆ ಬರುವುದೆಂದು ತಲೆಯ ಮೇಲೆ ಬೆಂಕಿ ಬಿದ್ದಿರುವವನಂತೆ ತೀವ್ರ ಕಾರ್ಯಶೀಲನಾಗುತ್ತಾನೆ. ವಿರಿಯದಲ್ಲಿ ಸಂವೇಗಶೀಲನಾಗುತ್ತಾನೆ. ಸಾವು ಯಾವ ಕ್ಷಣದಲ್ಲಿ ಬೇಕಾದರೂ ಬರುವುದೆಂದು ಆಸವ ಕ್ಷಯದಲ್ಲಿ ಅತ್ಯಂತ ಜಾಗರೂಕನಾಗಿರುತ್ತಾನೆ.

8. ಜೀವನವೂ ಚಿತ್ತ ಕ್ಷಣದಷ್ಟು ಪರಿಮಿತವೆಂದು:
ಜೀವಿಗಳ ಜೀವನವು ಪರಮಾರ್ಥ ಸಂಜ್ಞೆಯಿಂದ ಅಳೆಯಲಾಗುತ್ತದೆ. ಹೇಗೆಂದರೆ ಒಂದು ಚಿತ್ತ ಕ್ಷಣದಲ್ಲಿ ಯಾವಾಗ ಬೇಕಾದರೂ ಮರಣ ಸಂಭವಿಸುವುದೆಂದು ಚಿಂತನೆ ಮಾಡಬೇಕಾಗುತ್ತದೆ. ಹೇಗೆಂದರೆ: ಚಕ್ರವು ತಿರುಗುತ್ತದೆ, ಆದರೆ ಚಕ್ರದ ಪರಿಧಿಯು ಒಂದು ಭಾಗ ಮಾತ್ರ ನೆಲೆದ ಮೇಲಿರುತ್ತದೆ. ಹೀಗೆ ಸಾಗುತ್ತಿರುತ್ತದೆ. ಹಾಗೆಯೇ ಒಂದರ ನಂತರ ಚಿತ್ತಗಳು ಉದಯಿಸಿ ಅಳಿಯುತ್ತಿರುತ್ತವೆ. ಆದರೆ ಯವುದು ಒಂದು ಕ್ಷಣದಲ್ಲಿ ಉದಯಿಸಿ ಅಳಿಯುವ ಆ ಚಿತ್ತದ ಕ್ಷಣದಲ್ಲಿ ಆ ಚಿತ್ತದ ಆದಿಯಲ್ಲೊ, ಮಧ್ಮದಲ್ಲೊ ಅಥವಾ ಅಂತ್ಯದಲ್ಲೇ ಮರಣ ಸಂಭವಿಸಬಹುದು. ಆದ್ದರಿಂದ ಇಲ್ಲಿ ಪ್ರತಿಕ್ಷಣವೂ ಜಾಗರೂಕತೆಯಿಂದ ಜೀವಿಸಬೇಕಾಗುತ್ತದೆ. ಅಂದರೆ ವರ್ತಮಾನದಲ್ಲಿರುವಾಗ ಆತನು ಹಿಂದೆ ಜೀವಿಸಿರುವುದಿಲ್ಲ. ಹಾಗೆಯೇ ಮುಂದೆ ಜೀವಿಸಲಾರನು. ಹಾಗೆಯೇ ಅತೀತಕಾಲ ಮತ್ತು ಭವಿಷ್ಯಕಾಲವನ್ನು ಹೀಗೆಯೇ ತೆಗೆದುಕೊಳ್ಳಬೇಕು.
ಜೀವನ, ವ್ಯಕ್ತಿ, ಸುಖ, ದುಃಖ - ಇವೆಲ್ಲಾ ಏಕಾಂಗಿಯೇ,
ಚಿತ್ತಕ್ಷಣವೊಂದಲ್ಲಿ ಭಾಗಿಯಾಗಿ ಹಾಗೆಯೇ ಆರಿಹೋಗುವುದು,
ಶರೀರದ ಅಥವಾ ಶವದ ಖಂಧಗಳು ಅಳಿಯುವುವು,
ಅವೆಲ್ಲಾ ಒಂದೇರೀತಿಯೇ ಹೋದನಂತರ ಹಿಂತಿರುಗಿ ಬಾರವು.
ಚಿತ್ತವಿಲ್ಲದೊಡೆ ವಿಶ್ವವೂ ಇಲ್ಲ, ಉದಯಿಸಿ ವರ್ತಮಾನದಲ್ಲಿ ಜೀವಿಸುವುದು.
ಯಾವಾಗ ಚಿತ್ತ ಅಳಿಯುವುದೋ ಜಗವೂ ಸಾಯುವುದು.
ಉನ್ನತ ಪ್ರಜ್ಞೆಯಲ್ಲೆ ಈ ತತ್ವವೇ ಸ್ವೀಕಾರಾರ್ಹ.
ಹೀಗೆ ಚಿತ್ತಕ್ಷಣದ ಅಡಿಯಲ್ಲಿ ಮರಣಾನುಸ್ಮೃತಿ ಮಾಡಬೇಕಾಗುತ್ತದೆ.
ಉಪಸಂಹಾರ: ಮರಣಾನುಸ್ಸತಿ ಪ್ರಕ್ರಿಯೆ ಯಾವಾಗ ಹೀಗೆ ಧ್ಯಾನಿಯು ಈ ರೀತಿಯ ಎಂಟು ವಿಧದ ಚಿಂತನೆಗಳಲ್ಲಿ ಮಗ್ನನಾಗುವನೋ ಆಗ ಆತನಲ್ಲಿ ನಿವರಣಗಳು (ತಡೆಗಳು) ದಮನವಾಗುವುವು. ಧ್ಯಾನಂಗಗಳು ಕಾಣಿಸಿಕೊಂಡು ಬಲಿಷ್ಠವಾದರೂ ಸಾಮಿಪ್ಯ ಸಮಾಧಿಯು ಸಿಗುವುದು.

ಮರಣಾನುಸ್ಸತಿಯ ಲಾಭಗಳು:

ಆತನು ಭವಗಳಲ್ಲಿ ಆನಂದಿಸಲಾರ, ಜೀವನದಲ್ಲಿ ಯಾವೊಂದಕ್ಕೂ ಅಂಟಿಕೊಳ್ಳಲಾರ, ಪಾಪವನ್ನು ಖಂಡಿಸುತ್ತಾನೆ, ಸಂಗ್ರಹಿಸುವುದನ್ನು ತಡೆಯುತ್ತಾನೆ, ಸ್ವಾರ್ಥರಹಿತನಾಗುತ್ತಾನೆ. ಅನಿತ್ಯತೆಯ ಸಂಜ್ಞೆಯು ಅಭಿವೃದ್ಧಿಯಾಗುವುದು, ಜೊತೆಗೆ ದುಃಖಸಂಜ್ಞಾ ಹಾಗು ಅನತ್ತಸಂಜ್ಞಾ ಬರುವವು. ಸಾವಿಗೆ ಹೆದರಲಾರ, ಎಂತಹ ಕಠಿಣ ಸಾವಿನಲ್ಲೂ ಭಯರಹಿತನಾಗಿ, ಗೊಂದಲರಹಿತನಾಗಿ, ಮೋಹರಹಿತನಾಗಿರುತ್ತಾನೆ. ಅಮರತ್ವ ಪಡೆದಿಲ್ಲದಿದ್ದರೂ ಸುಗತಿ ಪಡೆಯುತ್ತಾನೆ.
ನಿಜ ಜ್ಞಾನಿಯ ನಿರಂತರ ಕಾರ್ಯಾಚರಣೆ ಏನೆಂದರೆ ಮರಣಾನುಸ್ಸತಿ ಮಾಡುವುದು. ಅಂತಹ ಮಹಾ ಪ್ರಾಜ್ಞರು ಧನ್ಯರು.
ಇಲ್ಲಿಗೆ ಮರಣಾನುಸ್ಸತಿ ಮುಗಿಯಿತು.
*************************************************************************

8. ಕಾಯಗತಾನುಸ್ಸತಿ

ಈಗ ಕಾಯವೇ (ಶರೀರವೇ) ಧ್ಯಾನವಸ್ತುವಾಗಿ ಬರುವಂತಹ ಕಾಯಗತಾನುಸ್ಸತಿಯ ಸರದಿ. ಈ ಕಾಯಗತಾನುಸ್ಸತಿಯಲ್ಲಿ ಬುದ್ಧರ ಉದಯಕ್ಕೆ ಮುನ್ನ ಯಾವ ಧ್ಯಾನಿಯೇ ಆಗಲಿ ಯಾವ ಅನ್ಯ ಧಮರ್ಿಯರೇ ಆಗಲಿ ಹೇಳಿರಲಿಲ್ಲ.
ಭಿಕ್ಷುಗಳೇ, ಯಾರು ಅಮರತ್ವದ ರುಚಿ ನೋಡಿರುವರೋ ಅವರು ಕಾಯಾಗತಸತಿಯ ರುಚಿಯನ್ನು ನೋಡಿರುತ್ತಾರೆ. ಯಾರು ಕಾಯಾಗತಸತಿಯ ರುಚಿಯನ್ನು ನೋಡಿಲ್ಲವೋ ಅವರು ಅಮರತ್ವದ ರುಚಿ ನೋಡಿಲ್ಲ.
ಇದೇರೀತಿ ಭಗವಾನರು ವಿಭಿನ್ನ ಕಡೆ ಕಾಯಗತಾಸತಿಯನ್ನು ಪ್ರಶಂಸಿಸಿದ್ದಾರೆ. ಇದನ್ನು ಮಾಡುವ ರೀತಿ ಮಾತ್ರ ವಿವಿಧ ರೀತಿಯಿಂದ ಭಗವಾನರು ಮಜ್ಜಿಮನಿಕಾಯದ ಕಾಯಾಗತಾಸತಿ ಸುತ್ತದಲ್ಲಿ ಇದನ್ನು ಸಾಧಿಸುವ ಹಂತಗಳು ಈ ರೀತಿ ಬರುತ್ತದೆ.
(1) ಅನಾಪಾನಾಸತಿ
(2) ದೇಹದ ಭಂಗಿಗಳಲ್ಲಿ ಜಾಗರೂಕತೆ
(3) ದೇಹದ ವರ್ತನೆಗಳ ಅರಿವು
(4) ದೇಹದಲ್ಲಿ ಏನೆಲ್ಲಾ ಇವೆ ಎಂಬ ಚಿಂತನೆ
 (5) ದೇಹದಲ್ಲಿ ನಾಲ್ಕು ದಾತುಗಳಿವೆ.
(6) ಹತ್ತು ರೀತಿಯ ಶವಗಳ ಅಶುಭ ಅರಿಯುವುದು
 (7) ನಾಲ್ಕು ಹಂತದ ಸಮಾಧಿ ಇವಿಷ್ಟನ್ನು ಹೇಳಿದ್ದಾರೆ.

ಕಾಯಾಗತಸತಿಯಿಂದ ಒದಗುವ ಫಲಗಳು  

1. ಆತನು ಪ್ರಿಯ, ಅಪ್ರಿಯ ಭಾವನೆಗಳನ್ನು ಮೀರಿರುತ್ತಾನೆ.
2. ಭಯ ಗೆದ್ದಿರುತ್ತಾನೆ.
3. ಚಳಿ, ಉಷ್ಣ, ಹಸಿವು, ಬಾಯಾರಿಕೆ, ಸೊಳ್ಳೆ ಮುಂತಾದ ಕೀಟಗಳ ವೇದನೆ, ಬಿಸಿಲು, ವಾಯು, ಮಳೆಗಳ ತೊಂದರೆ, ಸರಿಸೃಪಗಳ ಸರಿದಾಡುವಿಕೆ, ಕೆಟ್ಟ ಮಾತು, ನೋವು, ಹಿಂಸೆ, ಮರಣ ನೋವು ಅವೆಲ್ಲವನ್ನು ಸಹಿಸುವ ಶಕ್ತಿ ಆತನಿಗೆ ಸಿಗುತ್ತದೆ.
4. ತನ್ನ ಇಚ್ಛೆ ಮಾತ್ರದಿಂದ ನಾಲ್ಕನೆಯ ಸಮಾಧಿ ಪ್ರಾಪ್ತಿ ಮಾಡಬಲ್ಲ.
5. ದೇಹದಿಂದ ಮಾಡುವ ಎಲ್ಲಾ ಪವಾಡ ಸಿದ್ಧಿಯಾಗುತ್ತದೆ.
6. ದಿವ್ಯ ಕಿವಿ
7. ದಿವ್ಯ ಚಕ್ಷು
8. ಪರಚಿತ್ತ ಅರಿಯುವಿಕೆ
9. ಪೂರ್ವಜನ್ಮ ಅರಿಯುವಿಕೆ
10. ಅಸವ ಕ್ಷಯ ಜ್ಞಾನ ಮತ್ತು ನಿಬ್ಬಾಣ ಪ್ರಾಪ್ತಿ.
ಇಲ್ಲಿ ಕಾಯಾಗತಾಸತಿಯಲ್ಲಿ ದೇಹದಲ್ಲಿ ಏನೆಲ್ಲಾ ಇವೆ ಎಂಬ ಚಿಂತನೆ ಮಾತ್ರ ಇವೆ. ಏಕೆಂದರೆ ಮಿಕ್ಕವು ವಿವಿಧಕಡೆ ವಿವರಿಸಲಾಗಿದೆ. ಇಲ್ಲಿ ಸಾಧಕನು ವೃಕ್ಷ ಮೂಲದಲ್ಲೂ ಅಥವಾ ಅರಣ್ಯದಲ್ಲೂ ಅಥವಾ ಗವಿಯಲ್ಲೂ, ಅಥವಾ ಶೂನ್ಯಗೃಹದಲ್ಲೂ ನಿರ್ಜನ, ನಿಶ್ಶಬ್ದ ವಾತಾವರಣದಲ್ಲಿ ಪದ್ಮಾಸನದಲ್ಲಿ ಕುಳಿತು ದೇಹದ ಬಗ್ಗೆ ಈ ಚಿಂತನೆ ಮಾಡುತ್ತಾನೆ.
ಈ ದೇಹದಲ್ಲಿ ತಲೆಗೂದಲು, ಮೈಕೂದಲು, ಉಗುರುಗಳು, ಹಲ್ಲುಗಳು, ಚರ್ಮ, ಮಾಂಸ, ಸ್ನಾಯುಗಳು, ಮೂಳೆ, ಅಸ್ಥಿಮಚ್ಚೆ, ಮೂತ್ರಪಿಂಡ, ಹೃದಯ, ಪಿತ್ತಕೋಶ, ಶ್ವಾಸದ ಪೊರೆ, ಗುಲ್ಮ, ಶ್ವಾಸಕೋಶ, ಕರುಳು, ವಪೆ, ಉದರ, ಮಲ, ಶ್ಲೇಷ್ಮ, ಕೀವು, ರಕ್ತ, ಬೆವರು, ಕೊಬ್ಬು, ಕಣ್ಣೀರು ಮೆದುಳು ಜಿಡ್ಡಾದ ಕೊಬ್ಬು, ಜೊಲ್ಲು, ಲೋಳೆ, ಕೀಲಿನದ್ರವ ಮತ್ತು ಮೂತ್ರಗಳಿಂದ ಆಗಿದೆ.
ಹೇಗೆ ಮೂಟೆಯಲ್ಲಿ ಧವಸಧಾನ್ಯಗಳು ಇರುತ್ತವೆಯೋ ಹಾಗೆಯೇ ಚರ್ಮವೆಂಬ ಮೂಟೆಯಲ್ಲಿ ಈ ಎಲ್ಲಾ ಕಶ್ಮಲ ಅಂಗಗಳು ಇವೆ.
ಬಿಂಬದಂತಿರುವ ಈ ಶರೀರವನ್ನು ನೋಡು, ಇದೊಂದು ವೃಣಗಳಿರುವ ದುರ್ಬಲವಾದ ಪಂಜರ. ಬಯಕೆಗಳ ಗೂಡು
ಇದು ದ್ರುವವಲ್ಲ, ಶಾಶ್ವತವಲ್ಲ. ಶಾಶ್ವತವಲ್ಲದ ಈ ಕಾಯವು ನಿರರ್ಥಕ ಒಣಗಿದ ಮರದಂತೆ ಭೂಮಿಗೆ ಬಿದ್ದು ಹೋಗುತ್ತದೆ.
ಅಸ್ತಿಪಂಜರವೆಂಬ ನಗರದ ಗೋಡೆಗಳಿಂದ ಆವೃತವಾಗಿರುವ ಈ ದೇಹ, ಮಾಂಸ, ರಕ್ತಗಳಿಂದ ಲೇಪಿತವಾಗಿದೆ. ಇದರೊಳಗೆ ಜರಾ, ಮೃತ್ಯುಗಳು, ಗರ್ವ, ಈಷರ್ೆ ಮನೆ ಮಾಡಿವೆ.
ಈ ಕಾಯವು ನೊರೆಯಂತಿದೆ ಎಂಬುದನ್ನು ತಿಳಿದು ಮರಿಚಿಕೆ ಎಂಬ ಅರಿವನ್ನು ಹೊಂದಿ ಮಾರನ ಪುಷ್ಪಗಳನ್ನು ಕತ್ತರಿಸಿ ಹಾಕಿ ಮಾರನ ಕಣ್ಣಿಗೆ ಬೀಳದೆ ಹೋಗು.
ಈ ಕಾಯವು ಮಡಿಕೆಯಂತಿದೆ ಎಂಬುದನ್ನು ತಿಳಿದು, ಕೋಟೆಯಂತೆ ಚಿತ್ತವನ್ನು ಭದ್ರಪಡಿಸಿಕೊಂಡು, ಪ್ರಜ್ಞಾವೆಂಬ ಆಯುಧದಿಂದ ಮಾರನನ್ನು ಜಯಿಸಿ ತನ್ನನ್ನು ರಕ್ಷಿಸಿಕೊಂಡವ ಯಾವುದಕ್ಕೂ ಅಂಟಿಕೊಂಡಿರುವುದಿಲ್ಲ.
ಈ ಶರೀರವು ಮಲಿನ್ಯಗಳಿಂದ ಉತ್ಪತ್ತಿಯಾಗುತ್ತದೆ. ಮಲಿನ ವಸ್ತುಗಳಿಂದ ಪೋಷಣೆಗೊಂಡು ಬೆಳೆಯುತ್ತದೆ. ಮಲಿನ ಭಾಗದಿಂದಲೇ ಜನ್ಮಿಸುತ್ತದೆ. ನವರಂಧ್ರಗಳು ಸಹಾ ಮಲಿನವನ್ನೇ ಸ್ರವಿಸುತ್ತದೆ.
ಈ ಶರೀರದಲ್ಲಿ ಸಹಸ್ರಾರು ಸೂಕ್ಷ್ಮ ಜೀವಿಗಳು, ಕ್ರಿಮಿಗಳು ಇವೆ. ಅನೇಕ ಮೂಳೆಗಳಿಂದ ಕಟ್ಟಲ್ಪಟ್ಟಿದೆ. ಅತ್ಯಂತ ಕುರೂಪವಾಗಿದೆ. ಲೆಕ್ಕವಿಲ್ಲದ ರೋಗ ಉತ್ಪತ್ತಿ ಪ್ರದೇಶವಾಗಿದೆ. ರೋಗಗಳ ಗೂಡಾಗಿದೆ. ನೋವಿನ ಸ್ಥಳವಾಗಿದೆ. ದುಃಖಜನಕವಾಗಿದೆ. ಆದ್ದರಿಂದ ವಿವೇಕಿಯು ಮತ್ತೊಮ್ಮೆ ಶರೀರಧಾರಣೆ ಮಾಡದೆ ಇರಲಿ.
ಈ ರೀತಿಯ ಚಿಂತನೆಗಳಿಂದ ಕೂಡಿ ಏಕಾಗ್ರಚಿತ್ತವನ್ನು ಪಡೆಯುತ್ತಾನೆ. ನಿವರಣಗಳಿಂದ ಮುಕ್ತನಾಗುತ್ತಾನೆ. ಸಾಮೀಪ್ಯ ಸಮಾಧಿ ಪಡೆಯುತ್ತಾನೆ (ಉಪಚರ ಸಮಾಧಿ).

ಕಾಯಗತಾನುಸ್ಸತಿಯನ್ನು ಸಪ್ತವಿಧ ಕೌಶಲ್ಯಗಳಿಂದ ಕಲಿಯುವಿಕೆ:

1. ಜಪಿಸುವುದರಿಂದಾಗಿ
2. ಮಾನಸಿಕ ಜಪದಿಂದಾಗಿ
3. ವರ್ಣದಿಂದಾಗಿ
4. ಆಕಾರದಿಂದಾಗಿ
5. ದಿಕ್ಕಿನಿಂದಾಗಿ
 6. ಸ್ಥಾನದಿಂದಾಗಿ 
7. ಪರಿಚ್ಛೇದದಿಂದಾಗಿ.

1. ಇಲ್ಲಿ ಧ್ಯಾನದ ಉದ್ದೆಶವೇ ಅಹಸ್ಯತೆಯ ಕಡೆ ಗಮನನೀಡುವಿಕೆ. ಹೀಗಿರುವಾಗ ಒಬ್ಬ ತಿಪಿಟಕದ ಆಚಾರ್ಯನಾದರೂ ಸಹಾ ಆತನು ವಾಚಿಕ ಜಪಮಾಡಲು ಮೊದಲು ಒತ್ತು ನೀಡುತ್ತಾನೆ. ಮಲಯ ದೇಶದಲ್ಲಿ ಮಹಾದೇವ ಥೇರರು ವಾಸಿಸುತ್ತಿದ್ದರು. ಅವರ ಬಳಿ ಇಬ್ಬರು ಕಿರಿಯ ಭಿಕ್ಷುಗಳು ಧ್ಯಾನವಸ್ತು ಪಡೆಯಲು ಬಂದರು. ಆಗ ಆ ಹಿರಿಯರು ಅವರಿಗೆ 32 ದೇಹದ ಪ್ರಮುಖ ಅಂಗಗಳ ಧ್ಯಾನವಾದ ಕಾಯಗತಾನುಸ್ಸತಿಯನ್ನು ನೀಡಿ ಈ ಶಾರೀರಿಕ ಅಂಗಗಳನ್ನು ನಾಲ್ಕು ತಿಂಗಳಕಾಲ ಜಪಿಸುವಂತೆ ಉತ್ತೇಜಿಸಿದರು. ಆದರೆ ಆ ಇಬ್ಬರು ಭಿಕ್ಷುಗಳು ಎರಡು-ಮೂರು ಪಿಟಕಗಳ ಜ್ಞಾತರಾಗಿದ್ದರು. ಅವರು ನಾಲ್ಕು ತಿಂಗಳ ಕೊನೆಯಲ್ಲಿ ಸೋತಪನ್ನರಾದರು. ಹೀಗಾಗಿ ಧ್ಯಾನಗುರುವು ಕಾಯಗತಾನುಸ್ಸತಿಯ ಜಪಕ್ಕೆ ಪ್ರಾಶಸ್ತ್ಯ ನೀಡುತ್ತಾರೆ.
ಜಪ : ಇಲ್ಲಿ ಜಪವನ್ನು ಪಂಚಕ ವಿಭಾಗಿಸುತ್ತಾರೆ. ಹೇಗೆಂದರೆ: ಚರ್ಮದ ಪಂಚಕವು ಅಂದರೆ ಚರ್ಮ, ದಂತ, ನಖ, ಲೋಮ, ಕೇಶ ಹೀಗೆ ಜಪಿಸುತ್ತಾರೆ. ಅದೇರೀತಿಯಲ್ಲಿ ಮೂತ್ರಪಿಂಡದ ಪಂಚಕದಲ್ಲಿ ಮೂತ್ರಪಿಂಡ, ಅಸ್ಥಿಮಚ್ಚೆ, ಮೂಳೆ, ಸ್ನಾಯು, ಮಾಂಸ ಇದೇರೀತಿಯಾಗಿ ಜಪಿಸಿ ಪುನಃ ಹಿಂದಿನ ಪಂಚಕವನ್ನು ಸೇರಿಸಿಕೊಂಡು ಜಪಿಸುತ್ತಾರೆ. ಇದೇರೀತಿ ಉಳಿದ ಪಂಚಕಗಳನ್ನು ಮಾಡಬೇಕು.
ಈ ಜಪವು ನೂರುಬಾರಿ, ಸಾವಿರಬಾರಿ, ಲಕ್ಷಬಾರಿಯು ಸಹಾ ಬಗೆಯ ಕಾಯಗತಾನುಸ್ಸತಿಯ ಜಪದಿಂದ ಧ್ಯಾನವು ಅತ್ಯಂತ ಪರಿಚಿತವಾಗುತ್ತವೆ. ಮನಸ್ಸು ಸಹಾ ಇಲ್ಲಿ, ಅಲ್ಲಿ ಓಡುವುದು ತಪ್ಪುತ್ತದೆ. ಚಪ್ಪಾಳೆಯಲ್ಲಿನ ಬೆರಳುಗಳ ರೀತಿ ಸಾಂಗಿತ್ಯ ವಹಿಸುತ್ತದೆ.
ಮಾನಸಿಕ ಜಪ: ಇಲ್ಲಿ ಎಲ್ಲವೂ ಮೊದಲಿನಂತೆಯೇ ಇದ್ದು ಜಪ ಮಾತ್ರ ಮಾನಸಿಕವಾಗಿರುತ್ತದೆ. ಅಶುಭವನ್ನು ಅರಿಯಲು ಮಾನಸಿಕ ಜಪವೇ ಸಹೇತುಕವಾಗಿರುತ್ತದೆ.
ಬಣ್ಣ : ಕೇಶದ ಬಣ್ಣ ಕಪ್ಪಾಗಿರುತ್ತದೆ. ಹಲ್ಲಿನ ವರ್ಣ ಬಿಳಿಯಾಗಿರುತ್ತದೆ. ರಕ್ತದ ವರ್ಣ ಕೆಂಪಾಗಿರುತ್ತದೆ. ಹೀಗೆ ವೀಕ್ಷಿಸುವುದು.
ಆಕಾರ: ದೇಹದ 32 ಅಂಗಗಳ ಆಕಾರಗಳನ್ನು ವೀಕ್ಷಿಸುವುದು.
ದಿಸೆ : ಶರೀರದಲ್ಲಿ ನಾಭಿಗಿಂತ ಮೇಲ್ಭಾಗದಲ್ಲಿರುವುದೆಲ್ಲಾ ಊಧ್ರ್ವ ದಿಕ್ಕು ಹಾಗು ಅಲ್ಲಿಂದ ಕೆಳಮುಖ ವಾಗಿರುವುದು ಅಧೋದಿಕ್ಕು. ಈ ಲೆಕ್ಕಾಚಾರಕ್ಕೆ ಅನುಗುಣವಾಗಿ ಈ ಅಂಗವು ಈ ದಿಕ್ಕಿನಲ್ಲಿದೆ ಎಂದು ವಿಶ್ಲೇಷಿಸುವುದು.
ಸ್ಥಾನ : ಈ ಅಂಗವು ಈ ಸ್ಥಾನದಲ್ಲಿದೆ ಎಂದು ನಿರೂಪಿಸುವುದು.
ಎಲ್ಲೆ : ಇಲ್ಲಿ ಎರಡು ರೀತಿಯ ಎಲ್ಲೆಗಳಿವೆ. ಸಮಾನರೂಪ ಎಲ್ಲೆ ಹಾಗು ಅಸದೃಶ ಎಲ್ಲೆ. ಈ ಅಂಗದ ಎಲ್ಲೆಯು ಮೇಲೆ-ಕೆಳಗೆ ಮತ್ತು ಸುತ್ತಲು ಹೀಗಿದೆ ಎಂದು ತಿಳಿಯುವುದು. ಉದಾ: ಕೇಶವು ಲೋಮವಲ್ಲ ಎಂದು ಅವುಗಳ ಎಲ್ಲೆ ಸ್ಪಷ್ಟವಾಗಿ ತಿಳಿಯುವುದು.

ಗಮನ ನೀಡುವಿಕೆಯಲ್ಲಿನ ದಶಾಂಗ ಕೌಶಲ್ಯ:

1) ಕ್ರಮವನ್ನು ಅನುಸರಿಸುವಿಕೆ: ಇಲ್ಲಿ ಗಮನವನ್ನು ಯಾವೊಂದಕ್ಕೂ ಮಧ್ಯದಲ್ಲಿ ಬಿಡದಂತೆ ಗಮನಹರಿಸುವುದು. ಹೇಗೆಂದರೆ, ಏಣಿಯನ್ನು ಹತ್ತುವವನು ಯಾವುದನ್ನೂ ಬಿಡದೆ ಹತ್ತುವಂತೆ.
2) ಅತಿವೇಗ ಕೂಡದು: ಒಬ್ಬನು ಗಮನವನ್ನು ಒಂದು ಅಂಗದಿಂದ ಮತ್ತೊಂದಕ್ಕೆ ವೇಗವಾಗಿ ನೆಗೆಯಬಾರದು. ಏಕೆಂದರೆ ಅದರಿಂದಾಗಿ ಸತ್ಯಗಳನ್ನು ಸ್ಪಷ್ಟವಾಗಿ ಅರಿಯಲು ಸಾಧ್ಯವಾಗುವುದಿಲ್ಲ.
3) ಅತಿ ನಿಧಾನವೂ ಕೂಡದು: ಒಬ್ಬನು ಧ್ಯಾನ ಗಮನವನ್ನು ಅತಿ ನಿಧಾನವಾಗಿ ಮಾಡಿದಾಗ ಆತನು ಗಮ್ಯವನ್ನು ಸಾಧಿಸಲಾಗದು ಹಾಗು ಅತ್ಯುನ್ನತೆಯನ್ನು ಸಿದ್ಧಿಸಲಾಗದು.
4) ಚದುರತೆಯನ್ನು ದೂರೀಕರಿಸಿ: ಧ್ಯಾನದಲ್ಲಿ ಗಮನವಿರಿಸಬೇಕು. ಹೀಗಾಗದ ಬಾಹ್ಯ ವಿಷಯದಲ್ಲಿ ಅಥವಾ ಆಂತರಿಕದಲ್ಲೆ ಧ್ಯಾನ ವಿಷಯಕ್ಕೆ ಹೊರತಾದ ಅನ್ಯ ವಿಷಯಗಳತ್ತ ಮನಸ್ಸು ಹರಿದಾಗ, ಧ್ಯಾನವು ಅಲಕ್ಷಿತವಾಗಿ, ಶಿಥಿಲವಾಗುತ್ತದೆ. ಆದ್ದರಿಂದಾಗಿ ಮನಸ್ಸು ಚದುರಿಹೋಗದಂತೆ ಗಮನವಹಿಸಿ ಚದುರತೆಯನ್ನು ದೂರೀಕರಿಸಬೇಕು.
5) ಪರಿಕಲ್ಪನೆಯನ್ನು ದಾಟುವಿಕೆ: ಯಾವ ಪರಿಕಲ್ಪನೆಯು (ಭಾವನೆಯು) ಕೇಶಲೋಮದಿಂದಾಗಿ ಆರಂಭವಾಗಿ ಅಸಹ್ಯತೆಯಲ್ಲಿ ಸ್ಥಾಪಿತವಾಯಿತೋ ಆಗ ನಿಜವಾದ ಅಸಹ್ಯತೆಯಲ್ಲಿ (ಪ್ರತಿಭಾಗ ನಿಮಿತ್ತ) ಮನಸ್ಸು ಸ್ಥಾಪನೆಗೊಳಿಸಿ, ಹಿಂದಿನದನ್ನು ದಾಟಿ ಹೋಗಬೇಕು.
6) ಯಶಸ್ವಿಯುತ ಬೀಳ್ಕೊಡುಗೆ: ಇಲ್ಲಿ ಧ್ಯಾನಿಯು ತನ್ನ ಗಮನವನ್ನು ಕೇಶದಿಂದ ಪಾದತಲದವರೆಗೂ ಒಂದೊಂದೇ ಭಾಗದತ್ತ ಗಮನನೀಡಬೇಕು. ಒಂದೊಂದೇ ಭಾಗದತ್ತ ಬಹುಕಾಲದವರೆಗೂ ಮನಸ್ಸನ್ನು ನಿಲ್ಲಿಸಬೇಕು. ಆಗ ಆತನಿಗೆ ಆ ಭಾಗದ ಅರಿವು (ಸಂವೇದನೆ, ಚಿತ್ರಣದ ದರ್ಶನ) ಆಗುತ್ತದೆ. ಒಂದುವೇಳೆ ಕೆಲ ಅಂಗಗಳ ದರ್ಶನವಾಗದಿದ್ದರೆ ಹಾಗೆಯೇ ಮುಂದುವರೆಯಬೇಕು. ನಂತರ ಪುನಃ ಮೊದಲಿನಂತೆಯೇ ಪ್ರಯತ್ನಿಸಬೇಕು. ಹೀಗೆ ಯಾವುದನ್ನೂ ಬಿಡದೆ ಪ್ರತಿ ದೇಹದ ಅಂಗಗಳ ಅಶುಭದರ್ಶನ ಪಡೆಯಬೇಕು.
7) ಸಮಾಧಿ: ಇಲ್ಲಿ ಈ ಹಂತದಲ್ಲಿ ಧ್ಯಾನಿಯು ಪ್ರತಿ ಭಾಗದಲ್ಲೂ ಸ್ಥಿರ ಸಮಾಧಿ ಪಡೆಯಲು ಪ್ರಯತ್ನಿಸಬೇಕು.
8-10) ಮೂರು ಸುತ್ತಾಂತಗಳ ಪ್ರಕಾರ: ಇದನ್ನು ಮೂರು ಸುತ್ತಾಂತಗಳ ಅರ್ಥಮಾಡಿಕೊಳ್ಳಬೇಕು. ಅವೆಂದರೆ: ಅಧಿಚಿತ್ತ (ಸಮಾಧಿಚಿತ್ತ), ಶೀತಭಾವ (ನಿಬ್ಬಾಣ) ಮತ್ತು ಬೋಧಿ ಅಂಗ ಕೌಶಲ್ಯ. ಇಲ್ಲಿ ಇವುಗಳ ಉದ್ದೇಶ ಪ್ರಯತ್ನ (ವಿರಿಯ)ವನ್ನು ಸಮಾಧಿಯೊಂದಿಗೆ ಬೆಸೆಯುವುದು.
ಭಿಕ್ಖುಗಳೆ, ಆದಿಚಿತ್ತಕ್ಕಾಗಿ ಮೂರು ನಿಮಿತ್ತಗಳೊಂದಿಗೆ ನಾವು ಕಾಲಕಾಲಕ್ಕೆ ಗಮನನೀಡಬೇಕು. ಅವೆಂದರೆ: ಸಮಾಧಿ ನಿಮಿತ್ತ, ವಿರಿಯ ನಿಮಿತ್ತ ಮತ್ತು ಉಪೇಕ್ಖಾ ನಿಮಿತ್ತ. ಏಕೆಂದರೆ, ಬರೀ ಏಕಾಗ್ರತೆಯಲ್ಲಿ (ಸಮಣ) ಗಮನ ನೀಡಿದಾಗ ಸೋಮಾರಿತನ ಹಾಗು ಜಡತೆ ಆಕ್ರಮಿಸುತ್ತದೆ. ಅಥವಾ ಬರೀ ಪ್ರಯತ್ನಶೀಲತೆಯಲ್ಲಿ (ವಿರಿಯ) ಗಮನನೀಡಿದಾಗ ಕ್ಷೊಭೆ ಉಂಟಾಗುತ್ತದೆ. ಅಥವಾ ಬರೀ ಉಪೇಕ್ಖಾದ ಗಮನನೀಡಿದಾಗ ಚಿತ್ತವು ಆಸವಕ್ಷಯಕ್ಕಾಗಿ ಯೋಗ್ಯವಾಗಿ ಸಮಾಧಿ ವಹಿಸಲಾರದು.
ಭಿಕ್ಷುಗಳೇ, ಯಾವಾಗ ಭಿಕ್ಷುವು ಆರು ವಿಷಯವನ್ನು ಹೊಂದಿರುವನೋ ಆತನು ಶೀತಭಾವ (ಪರಮ ಶೀತಲವಾದ ನಿಬ್ಬಣ)ವನ್ನು ಸಾಕ್ಷಾತ್ಕರಿಸುತ್ತಾನೆ. ಯಾವುವವು ಆರು? ಇಲ್ಲಿ ಭಿಕ್ಷುಗಳೇ, ಯಾವಾಗ ಚಿತ್ತವನ್ನು ನಿಯಂತ್ರಿಸಬೇಕೋ ಆಗ ನಿಯಂತ್ರಿಸುತ್ತವೆ. ಯಾವಾಗ ಚಿತ್ತವನ್ನು ಕ್ರಿಯಾಶೀಲವನ್ನಾಗಿಸಬೇಕೋ ಆಗ ವಿರಿಯವಂತನಾಗುತ್ತಾನೆ. ಯಾವಾಗ ಚಿತ್ತವನ್ನು ಪ್ರೋತ್ಸಾಹಿಸಬೇಕೋ ಆಗ ಪ್ರೋತ್ಸಾಹಿಸುತ್ತಾನೆ. ಯಾವಾಗ ಚಿತ್ತವನ್ನು ಸಮಚಿತ್ತತೆಯಿಂದ ಕಾಣಬೇಕೋ ಆಗ ಸಮಚಿತ್ತತೆಯಿಂದ ಕಾಣುತ್ತಾನೆ ಮತ್ತು ಪ್ರಾಪ್ತಿಮಾಡಿದಂತಹ ಉನ್ನತ ಚಿತ್ತಗಳಲ್ಲಿ ದೃಢಯುತನಾಗಿರುತ್ತಾನೆ ಹಾಗು ನಿಬ್ಬಾಣದಲ್ಲಿ ಆನಂದ ಪಡೆಯುವವನಾಗಿರುತ್ತಾನೆ. ಈ ಆರು ವಿಷಯಗಳೊಂದಿಗೆ ಕೂಡಿರುವ ಭಿಕ್ಷುವು ಪರಮಶಾಂತಿಯನ್ನು ಪಡೆಯುತ್ತಾನೆ ಹಾಗು ಆತನು ಸಂಬೋಧಿ ಅಂಗಗಳಲ್ಲಿ ಕೌಶಲ್ಯವನ್ನು ಹೊಂದಿರುತ್ತಾನೆ (ಅದನ್ನು ಈಗಾಗಲೇ ವಿವರಿಸಲಾಗಿದೆ).
ಹೀಗೆ ಧ್ಯಾನಿಯು ಸಪ್ತಾಂಗ ಕೌಶಲ್ಯವನ್ನು ಕಲಿಕೆಯಲ್ಲಿ ಅನ್ವಯಿಸಿದಾಗ ಹಾಗು ಗಮನನೀಡುವಿಕೆಯ 10 ವಿಧದ ಶೀಲಗಳನ್ನು ಹೊಂದಿರುವಾಗ, ಧ್ಯಾನದ ವಿಷಯಗಳಲ್ಲಿ ಎರಡು ವಿಧದ ಕೌಶಲ್ಯವುಳ್ಳವನಾಗುತ್ತಾನೆ.
* * *                                           ***                                                               ***

ಕಾಯದ 32 ಭಾಗಗ ವಿಸ್ತೃತ ನೋಟ

ಇಲ್ಲಿ ಧ್ಯಾನಿಯು ಕೇಶದಿಂದ ಧ್ಯಾನ ಆರಂಭಿಸಬೇಕು. ಶರೀರದ ಅಂಗಗಳನ್ನು ಈ ರೀತಿ ವಿಶ್ಲೇಷಿಸಿ ಧ್ಯಾನಿಸಬೇಕು. 1) ವರ್ಣ 2) ಆಕಾರ 3) ದಿಸೆ 4) ಸ್ಥಾನ 5) ಎಲ್ಲೆ ಹಾಗು ಐದು ವಿಧದ ಅಸಹ್ಯತೆ ಸಂಪಾದಿಸಬೇಕು. 1) ವರ್ಣ 2) ಆಕಾರ 3) ವಾಸನೆ 4) ಆಶ್ರಯ 5) ಅವಕಾಶ (ಸ್ಥಾನ).
ಈಗ ಕೇಶದಿಂದ ಆರಂಭಿಸೋಣ.
1. ಕೇಶ: ಸಾಮಾನ್ಯವಾಗಿ ಕಪ್ಪು ವೃದ್ಧರಾದರೆ ಬಿಳುಪು. ಆಕಾರ ಉದ್ದನೆಯ ಎಳೆಗಳು, ದಿಸೆ ದೇಹದ ಮೇಲ್ಭಾಗದಲ್ಲಿದೆ, ಸ್ಥಾನ ತಲೆಬುರುಡೆಯನ್ನು ಸುತ್ತುವರೆದ ಚರ್ಮದ ಮೇಲಿದೆ. ಇದರ ಎಲ್ಲೆಯು ಕುತ್ತಿಗೆಯ ಮೇಲ್ಭಾಗದಿಂದ ಹಣೆಯವರೆಗೆ.
ಈಗ ಅಸಹ್ಯತೆ ಗಮನ: ಬಿಳಿ ಕೂದಲು ಅಸಹ್ಯತೆಗೆ ಹತ್ತಿರ, ಆಹಾರದಲ್ಲಿದ್ದಾಗಲೂ ಅಸಹ್ಯ ಎಂದು ನೆನೆಯುವಿಕೆ. ನಾರಿನಂತಿರುವ ಆಕಾರದಲ್ಲಿ ಅಸಹ್ಯಪಡುವಿಕೆ, ಸುಗಂಧಪೂರಿತ ತೈಲವಿಲ್ಲದಿದ್ದರೆ ಅಸಹ್ಯಕರ ವಾಸನೆಯೆಂದು, ಇವುಗಳ ಸ್ಥಾನ ಶೀಲಿಂದ್ರಗಳ ಬೆಳವಣಿಗೆಗೆ ಸಹಾಯಕಾರಿ, ಸೂಕ್ಷ್ಮ ಕ್ರಿಮಿಗಳಿಗೆ ಅವಾಸಸ್ಥಾನವೆಂದು ವಿಶ್ಲೇಷಿಸಬೇಕು.
2. ಶರೀರದ ಕೂದಲು (ಲೋಮ): ಶರೀರದ ಕೂದಲು ಕೇಶದಂತೆ ಕಪ್ಪಾಗಿರುವುದಿಲ್ಲ, ಬದಲಾಗಿ ಕಡುಕಂದಾಗಿರುತ್ತದೆ. ಅವುಗಳ ಆಕಾರ ತಾಳೆಯ ಬೇರಿನಂತೆ ಇದ್ದು ಇವುಗಳ ಎಲ್ಲೆ ಕೇಶಕ್ಕೆ ವಿರುದ್ಧವಾಗಿರುತ್ತದೆ.
3. ನಖಗಳು : ನಖಗಳು ಸಾಮಾನ್ಯವಾಗಿ 20 ಇರುತ್ತವೆ. ಇವು ಬಿಳಿ ವರ್ಣದ್ದಾಗಿದ್ದು ಇವುಗಳ ಆಕಾರವು ಮೀನಿನ ಚಿಪ್ಪುಗಳಂತಿರುತ್ತವೆ. ಕಾಲಿನ ನಖಗಳು ಕೆಳಭಾಗದಲ್ಲಿದ್ದರೆ ಕೈನಖಗಳು ಊಧ್ರ್ವ ದಿಕ್ಕಿನಲ್ಲಿರುತ್ತವೆ. ಇವುಗಳ ಸ್ಥಾನವು ಬೆರಳುಗಳ ತುದಿಯಲ್ಲಿರುತ್ತದೆ. ಅಲ್ಲಿ ಮಾತ್ತವೇ ಪರಿಮಿತವಾಗಿರುತ್ತವೆ.
4. ಹಲ್ಲುಗಳು: ಸಾಮಾನ್ಯವಾಗಿ 32 ಇರುತ್ತವೆ. ಇವು ಬಿಳಿ ವರ್ಣದ್ದಾಗಿದ್ದು, ಇವುಗಳ ಆಕಾರವು ವಿಭಿನ್ನವಾಗಿರುತ್ತದೆ. ಕುಂಬಳದ ಬೀಜದಂತೆಯೂ ಮಲ್ಲಿಗೆಯ ಮೊಗ್ಗಿನಂತೆಯು, ದಾಳಿಂಬೆಯ ಹಣ್ಣಿನ ಒಳಗಿನ ಸಾಲಿನಂತೆಯೂ ಇದ್ದು, ಇವು ಬಾಯಿಯ ಒಳಗೆ ಇರುತ್ತವೆ. ದವಡೆಯ ಮೂಳೆಗಳಿಗೆ ಅಂಟಿರುತ್ತವೆ.
5. ತ್ವಚೆ: ಒಳಚರ್ಮವು ಶರೀರವೆಲ್ಲವನ್ನು ಆವರಿಸಿರುತ್ತದೆ. ಅದನ್ನು ಹೊರಚರ್ಮವು ಆವರಿಸಿ ಹೊದಿಕೆಯಾಗಿರುತ್ತದೆ. ಚರ್ಮದ ಬಣ್ಣವು ಕಪ್ಪು, ಕಂದು ಅಥವಾ ಹಳದಿಯಾಗಿರುತ್ತದೆ. ಇಡೀ ಶರೀರದ ಚರ್ಮವೆಲ್ಲವನ್ನು ಬೇರ್ಪಡಿಸಿದರೆ ಅದು ಕೇವಲ ಜುಜುಬೆ ಹಣ್ಣಿನಷ್ಟು ಮಾತ್ರವಿರುತ್ತದೆ. ಶರೀರದ ಭಾಗಗಳಿಗೆ ಅನುಗುಣವಾಗಿ ಅವುಗಳ ಆಕಾರವಿರುತ್ತದೆ. ಧ್ಯಾನಿಯು ಚರ್ಮವನ್ನು ವಿಶ್ಲೇಷಿಸುವಾಗ ಮೊದಲು ಮುಖಕ್ಕೆ ಆವರಿಸಿರುವ ಒಳಚರ್ಮವನ್ನು ವೀಕ್ಷಿಸಬೇಕು. ತುಟಿಯ ಚರ್ಮ, ತಲೆಯ ಚರ್ಮ, ಮುಖದ ಮೂಳೆಗೆ ಆವೃತವಾಗಿರುವ ಚರ್ಮ, ಅದೇರೀತಿ ಶರೀರದ ಎಲ್ಲೆಡೆ ಆವೃತವಾಗಿರುವ ಚರ್ಮವನ್ನು ವಿಶ್ಲೇಷಿಸಬೇಕು. ಇಡೀ ಶರೀರವನ್ನು ಆವರಿಸಿರುವ ಚರ್ಮವನ್ನು ಹೀಗೆಯೇ ಇನ್ನೂ ಆಳವಾಗಿ ಅರಿಯಬೇಕು.
6. ಮಾಂಸ: ಶರೀರದಲ್ಲಿ ಸುಮಾರು 900 ಮಾಂಸದ ತುಣುಕುಗಳಿವೆ. ಇದರ ವರ್ಣವು ಕಿಂಸುಕ ಹೂಗಳಂತೆ ಕೆಂಪಾಗಿದ್ದು, ಆಕಾರವು ಶರೀರದ ಭಾಗಕ್ಕೆ ಅನುಗುಣವಾಗಿರುತ್ತದೆ. ಎರಡು ದಿಕ್ಕಗೂ ಹರಡಿವೆ. ಇವುಗಳ ಸ್ಥಾನವು 300 ಮೂಳೆಗಳೂ, ಮೆತುಗಾರಿಕೆ (ಕಟಚಿಣಜಡಿಟಿರ) ಮಾಡಿದಂತೆ ಇವುಗಳ ಎಲ್ಲೆಯು ಮೂಳೆ ಹಾಗು ಚರ್ಮದ ನಡುವೆ ಇರುತ್ತವೆ.
7. ನರಗಳು: 900 ನರಗಳಿವೆ. ಎಲ್ಲಾ ನರಗಳು ಬಿಳಿ ವರ್ಣದಿಂದಿವೆ. ನರಗಳು ಹಲವಾರು ಆಕಾರಗಳಲ್ಲಿದೆ. 5 ಮಹಾನರಗಳು ಮೇಲ್ಭಾಗದಿಂದ ಕುತ್ತಿಗೆ ಹಾಗು ಮುಂಭಾಗವನ್ನು ಸುತ್ತುವರೆದಿವೆ. 5 ಮಹಾನರಗಳು ಬೆನ್ನಿನಿಂದ ಮತ್ತು 5 ಬಲಭಾಗದಿಂದ ಹಾಗು 5 ಎಡಭಾಗದಿಂದ ಮತ್ತು 5 ಬಲಗೈಯನ್ನು ಬಂಧಿಸಿದೆ ಮತ್ತು 5 ಕೈಯ ಮುಂಭಾಗದಿಂದ ಇಳಿದಿದೆ. ಹಾಗೆಯೇ ಎಡಗೈ ಸಹಾ ಬಂಧಿಸಲ್ಪಟ್ಟಿದೆ. ಬಲಗಾಲಿಗೆ 5 ಮುಂಭಾಗದಿಂದ ಮತ್ತು 5 ಬೆನ್ನಿನಿಂದ ಹಾಗೆಯೇ ಎಡಗಾಲಿಗೂ ಸಹಾ. ಹೀಗೆ 60 ಮಹಾನರಗಳಿವೆ. ಇವನ್ನು ದೇಹರಕ್ಷಕವೆನ್ನುವರು. ಕೆಲವರು ಸ್ನಾಯುಗಳೆಂದು ಕರೆಯುವರು. ಅವೆಲ್ಲಾ ಗೆಣಸಿನ ಚಿಗುರಿನ ಆಕಾರಗಳಲ್ಲಿದೆ. ಮಿಕ್ಕವು ದೇಹದ ಎಲ್ಲಾ ಭಾಗಗಳಿಗೂ ಹಬ್ಬಿವೆ. ಅವುಗಳಲ್ಲಿ ತಂತಿಗಳಂತೆ, ಬಳೆಗಳಂತೆ, ಎಳೆಗಳಂತೆ, ದಾರಗಳಂತೆ ಆಕಾರದಲ್ಲಿದ್ದು, ಶರೀರವೆಲ್ಲಾ ವ್ಯಾಪಿಸಿ ಬಂಧಿಸಿ ನಿಯಂತ್ರಿಸುತ್ತವೆ. ತಲೆಯಲ್ಲಿರುವ ನರವ್ಯೂಹವು ಮಕ್ಕಳ ಶಿರಜಾಲದಂತಿರುತ್ತವೆ. ಬೆನ್ನಿನಲ್ಲಿರುವ ನರವ್ಯೂಹವು ಸೂರ್ಯನಿಂದ ಪ್ರಸರಿಸಿದ ಬಲೆಯಂತೆ ಹಬ್ಬಿದೆ. ಮಿಕ್ಕ ನರಜಾಲವು ಜಾಲವುಳ್ಳ ಅಂಗಿಯಂತೆ ಇದ್ದು, ದೇಹವೆಲ್ಲಾ ಸುತ್ತುವರೆದಿದೆ. ಇದು ಊಧ್ರ್ವ ಹಾಗು ಅಧೋ ದಿಕ್ಕುಗಳೆರಡರಲ್ಲೂ ಹಬ್ಬಿದೆ. ಇವುಗಳ ಸ್ಥಾನವು ಅಸ್ಥಿಪಂಜರದನ್ನು ಸುತ್ತುವರೆದಿರುತ್ತವೆ. ಅಷ್ಟೇ ಅಲ್ಲದೆ ಮಾಂಸರಾಶಿಯನ್ನು ಹಾಗು ಒಳಚರ್ಮವನ್ನು ಸುತ್ತುವರೆದಿವೆ.
8. ಅಸ್ಥಿ: ಹಲ್ಲಿನ 32 ಮೂಳೆಗಳನ್ನು ಬಿಟ್ಟರೆ ಉಳಿದ 64 ಕೈಯ ಮೂಳೆ, 64 ಕಾಲಿನ ಮುಳೆ, ಮಾಂಸದಲ್ಲಿನ 64 ಮೆದು ಮೂಳೆಗಳು, 2 ಹಿಮ್ಮಡಿಯ ಮೂಳೆಗಳು, ಪಾದದ ಕೀಲಿನ ಮೂಳೆಗಳು, ಮೊಣಕಾಲ ಕೆಳಗಿನ ಎಲುಬುಗಳು, ಮೊಣಕಾಲಿನ ಮೂಳೆಗಳು, ತೊಡೆಯ ಮೂಳೆಗಳು, ಸೊಂಟದ ಮೂಳೆಗಳು, ಬೆನ್ನಿನ 18 ಮೂಳೆಗಳು, 24 ಪಕ್ಕೆಲುಬಿನ ಮೂಳೆಗಳು, 14 ಎದೆಯ ಮೂಳೆಗಳು, 1 ಹೃದಯದ ಸಮೀಪ ಎಲುಬು (ಖಣಜಡಿಟಿಣಟ), 2 ಹೆಗಲಿನ ಮೂಳೆಗಳು, 2 ಕೊರಳಪಟ್ಟಿಯ ಮೂಳೆಗಳು, 2 ತೋಳುಗಳ ಮೂಳೆಗಳು, 12 ಜೊತೆ ಮುಂಗೈನ ಮೂಳೆಗಳು, 2 ಕತ್ತಿನ ಮೂಳೆಗಳು, 2 ದವಡೆಯ ಮೂಳೆಗಳು, ಮೂಗಿನ ಮೂಳೆ, ಕಣ್ಣಿನ ಎಲುಬು, ಪೀಠದ ಮೂಳೆ, ಇತರ ಮೂಳೆಗಳೆಲ್ಲಾ ಸೇರಿ 300 ಮೂಳೆಗಳಿವೆ. ಇವುಗಳ ವರ್ಣವು ಬಿಳಿಯದ್ದಾಗಿದೆ. ಇವೆಲ್ಲವೂ ವಿಭಿನ್ನ ಆಕಾರದಿಂದ ಕೂಡಿದೆ. ಇದನ್ನು ಅಸ್ತಿಪಂಜರ ನೋಡಿದರೆ ಸ್ಪಷ್ಟವಾಗಿ ತಿಳಿಯುವುದು. ಇವು ಎರಡು ದಿಕ್ಕಿನಲ್ಲೂ ಇವೆ. ಇಡೀ ಶರೀರದಲ್ಲೆಲ್ಲಾ ಅವುಗಳ ಸ್ಥಾನಕ್ಕೆ ತಕ್ಕಂತೆ ಶಿರ ಎಲುಬು, ಕತ್ತಿನ ಎಲುಬುಗಳು, ಬೆನ್ನಿನ ಮೂಳೆ, ಕಾಲಿನ ಮೂಳೆ ಹೀಗೆಲ್ಲಾ ವಿಂಗಡಿಸಬಹುದು. ಇವೆಲ್ಲಾ ಅಸ್ಥಿಮಚ್ಚೆಯನ್ನು ಹೊಂದಿವೆ. ಇವನ್ನು ಮಾಂಸವು ಸುತ್ತುವರೆದಿದ್ದು ನರಗಳಿಂದ ಹಬ್ಬಿದೆ.
9. ಅಸ್ಥಿಮಚ್ಚೆ: ಅಸ್ಥಿಮಚ್ಚೆಯು ಹಲವಾರು ಮೂಳೆಗಳ ಒಳಭಾಗದಲ್ಲಿರುತ್ತದೆ. ಇದು ಸಹಾ ಬಿಳಿವರ್ಣದ್ದಾಗಿದ್ದು, ಆಕರವು ಮೂಳೆಗಳನ್ನು ಅವಲಂಬಿಸಿದೆ. ದಿಸೆಯು ಎರಡೂ ದಿಕ್ಕಿನಲ್ಲೂ ಇವೆ. ಸ್ಥಾನವು ಮೂಳೆಗಳ ಒಳಭಾಗದಲ್ಲಿದೆ. ಇವುಗಳ ಎಲ್ಲೆಯು ಮೂಳೆಗಳ ಒಳಭಾಗದವರೆಗೆ ಮಾತ್ರ.
10. ಮೂತ್ರಪಿಂಡ: ಇವು ಎರಡು ಮಾಂಸದ ತುಣುಕುಗಳಂತಿದ್ದು, ಒಂದು ಪಟ್ಟಿಯಿಂದ ಕೂಡಿದೆ. ಇದು ತಿಳಿಗೆಂಪು ವರ್ಣದ್ದಾಗಿದೆ. ಆಕಾರವು ಮಾವಿನ ಹಣ್ಣಿನಂತಿದ್ದು, ಇವುಗಳ ಸ್ಥಾನವು ಹೃದಯ ಮಾಂಸದ ಕೆಳಭಾಗದಲ್ಲಿದ್ದು, ಶರೀರದ ಇತರ ಅವಯವಗಳಿಂದ ಸುತ್ತುವರೆದಿದ್ದು....
11. ಹೃದಯ: ಇದು ಹೃದಯ ಮಾಂಸ. ಇದರ ವರ್ಣವು ಕೆಂಪು ಕಮಲದಂತಿದ್ದು, ಇದರ ಆಕಾರವು ತಲೆಕೆಳಕಾದ ಕಮಲದ ಮೊಗ್ಗಿನಂತೆ ಇರುವುದು. ಹೊರಗಡೆ ಮೃದುವಾಗಿದೆ. ಯಾರು ಪ್ರಜ್ಞಾವನ್ನು ಹೊಂದಿರುತ್ತಾರೊ, ಅಂತಹವರಲ್ಲಿ ಇದು ತುಸು ವಿಕಾಸವಾಗಿರುತ್ತದೆ. ಅಪ್ರಜ್ಞರಲ್ಲಿ ಇದು ಕೇವಲ ಮೊಗ್ಗಿನಂತೆಯೇ ಇರುವುದು. ಇದರಲ್ಲಿ ರಕ್ತವು ಹರಿದಾಡುತ್ತಿದ್ದು, ಅಷ್ಟೇ ಅಲ್ಲದೆ ಮನೋಧಾತು ಹಾಗು ಮನೋವಿಞ್ಞಾನಕ್ಕೂ ಆಧಾರವಾಗಿದೆ. [ಆದ್ದರಿಂದಲೇ ಪ್ರತಿವೇದನೆ (ಭಾವಾವೇಶವನ್ನ) ದೇಹದ ಬೇರೆ ಯಾವುದೇ ಭಾಗಕ್ಕಿಂತ ಹೃದಯ ಹೆಚ್ಚಾಗಿ ಅನುಭವಿಸುತ್ತದೆ]. ಲೋಭಚರಿತರ ಹೃದಯವು ಕೆಂಪಗೆ ಇರುತ್ತದೆ, ದ್ವೇಷಚರಿತರ ಹೃದಯವು ಕಪ್ಪಾಗಿರುತ್ತದೆ, ಮೋಹಚರಿತರ ಹೃದಯವು ನೀರಿನಲ್ಲಿ ಮಾಂಸವು ತೊಳೆದಂತೆ ಇರುತ್ತದೆ. ವಿತಕ್ಕಚರಿತರ ಹೃದಯವು ಮಸೂರ ಬೆಳೆಯ ವರ್ಣದ್ದಾಗಿರುತ್ತದೆ. ಶ್ರದ್ಧಾವಂತರ ಹೃದಯವು ಕಾಣಿಕಾರ ಪುಷ್ಪದ ವರ್ಣದ್ದಾಗಿರುತ್ತದೆ. ಬುದ್ಧಿವಂತರ ಹೃದಯವು ಸ್ವಚ್ಛವಾದ, ಸ್ಪಷ್ಟವಾದ, ಪ್ರಭಾಯುತ ರತ್ನದಂತೆ ಇರುತ್ತದೆ. ಇದು ಊಧ್ರ್ವ ದಿಸೆಯಲ್ಲಿದೆ. ಇದರ ಸ್ಥಾನವು ವಕ್ಷಸ್ಥಳದ ಮಧ್ಯದಲ್ಲಿರುತ್ತದೆ. ಇದರ ಎಲ್ಲೆಯು ಹೃದಯಕ್ಕೆ ಯೋಗ್ಯವಾದುದರಿಂದ ಆವರಿಸಲ್ಪಟ್ಟಿರುತ್ತದೆ.
ಇದೇರೀತಿಯಲ್ಲಿ ಉಳಿದ 21 ಅಂಗಗಳನ್ನು ವಿಶ್ಲೇಷಿಸಿ ಅಸಹ್ಯಿಸಿ ಸಮಾಧಿ ಪಡೆಯುವುದು.
ಯಾವಾಗ ಧ್ಯಾನಿಯು ಕೇಶದಿಂದ ಆರಂಭಿಸಿ 32 ಅಂಗಗಳನ್ನು ಅವುಗಳ ವರ್ಣದಿಂದ, ಆಕಾರದಿಂದ, ದಿಕ್ಕಿನಿಂದ, ಸ್ಥಾನದಿಂದ ಮತ್ತು ಎಲ್ಲೆಯಿಂದ ಗುರುತಿಸುವನೋ ಆಗ ಆತನು ಐದು ರೀತಿಯಲ್ಲಿ ಅಸಹ್ಯ ತಾಳುವನು. ಅವೆಂದರೆ: ವರ್ಣದಿಂದ ಹಾಗು ಆಕಾರದಿಂದ ಅಸಹ್ಯಿಸುವನು. ದುರ್ಗಂಧದಿಂದ ಅಸಹ್ಯಿಸುವನು. ಅವುಗಳ ಸ್ಥಾನ ಹಾಗು ನಿವಾಸದಿಂದಾಗಿ ಅಸಹ್ಯಿಸುವನು. ವಿವಿಧ ಹೂಗಳಿಂದಾದ ಹೂಹಾರದಂತೆಯೇ ಆತನು ವಿವಿಧ ಅಸಹ್ಯಕರ ಅಂಗಗಳಿಂದಾದ ಶರೀರವನ್ನು ವೀಕ್ಷಿಸುವನು. ಆತನು ಕೇಶದಿಂದ ಆರಂಭಿಸಿ ಮೂತ್ರದವರೆಗೂ ಗಮನನೀಡುತ್ತಾ ವಿಶ್ಲೇಷಿಸುತ್ತಾನೆ. ಮೊದಮೊದಲು ಹೊರಭಾಗದಿಂದ ಆರಂಭವಾದ ಈ ಧ್ಯಾನವು ಎಲ್ಲಾ ಭಾಗಗಳಿಗೂ ವಿಸ್ತಾರವಾಗುವುದು. ಮತ್ತೆ ಮತ್ತೆ ಶರೀರವನ್ನು ಗಮನಿಸುತ್ತಾ, ವಿಶ್ಲೇಷಿಸುತ್ತಾ ಅಸಹ್ಯ ಅಸಹ್ಯ ಎಂದು ದೃಢತೆ ತಾಳುತ್ತಿರುತ್ತಾನೆ. ಹಾಗೆಯೇ ಎಲ್ಲದರ ಅಸಹ್ಯತೆಯ ಪ್ರತಿಭಾಗನಿಮಿತ್ತ ಪಡೆಯುತ್ತಾನೆ. ನಂತರ ಆತನಿಗೆ ಸಮಾಧಿ ಲಭ್ಯವಾಗುವುದು. ಆದರೆ ಪ್ರಥಮ ಝಾನವು ಮಾತ್ರ ಲಭಿಸುವುದು.
ಒಬ್ಬನು ಒಂದು ಭಾಗದಲ್ಲಿ ಸಮಾಧಿ ಪಡೆದರೆ ಪುನಃ ಉಳಿದ ಭಾಗಗಳಲ್ಲಿ ಪಡೆಯುವ ಅಗತ್ಯವಿರುವುದಿಲ್ಲ. ಆದರೂ ಕೆಲವರು ಎಲ್ಲ ಭಾಗಗಳಲ್ಲಿ ಸಮಾಧಿ ಪಡೆಯಲು ಯತ್ನಿಸುತ್ತಾರೆ. ಉದಾಹರಣೆಗೆ: ಥೇರ ಮಲ್ಲಕ, ಈ ಥೇರನು 32 ಅಂಗಗಳಲ್ಲಿಯೂ ಪ್ರಥಮ ಸಮಾಧಿ ಪಡೆದಿದ್ದನು. ರಾತ್ರಿಯಲ್ಲಿ ಒಂದು ಅಂಗದಲ್ಲಿ ಪ್ರಥಮ ಝಾನ ಪಡೆದರೆ ಪುನಃ ಹಗಲಲ್ಲಿ ಇನ್ನೊಂದು ಅಂಗದಲ್ಲಿ ಪ್ರಥಮ ಧ್ಯಾನ ಪಡೆಯುತ್ತಿದ್ದನು. ಇದೇರೀತಿಯಲ್ಲಿ ಕೇವಲ 15 ದಿನಗಳಲ್ಲೇ ಇಡೀ ಕಾಯಗತಾನುಸ್ಸತಿಯಲ್ಲಿ ಪ್ರಥಮ ಸಮಾಧಿ ಪಡೆದನು.

ಕಾಯಗತಾನುಸ್ಸತಿಯ ಲಾಭಗಳು: 

ಅ) ಇಂತಹ ಧ್ಯಾನಿಯು ಬೇಸರ ಹಾಗು ಶರೀರದ ಬಗ್ಗೆ ಆನಂದವನ್ನು ಗೆಲ್ಲುತ್ತಾನೆ.
ಆ) ಹಾಗೆಯೇ ಆತನು ಭಯ ಮತ್ತು ಅಂಜಿಕೆಯನ್ನು ಗೆಲ್ಲುತ್ತಾನೆ.
ಇ) ಆತನು ಶೀತೋಷ್ಣಗಳನ್ನು ಸಹಿಸುವವನಾಗುತ್ತಾನೆ.
ಈ) ಆತನು ಶರೀರದ ಅಂಗಗಳ ವರ್ಣಗಳಿಗೆ (ಉದಾ: ಕೂದಲು ಕಪ್ಪು) ಆಧಾರದಿಂದಾಗಿ ಲಭಿಸುವ ಸಮಾಧಿಯಿಂದಾಗಿ ಚತುರ್ಥ ಧ್ಯಾನವನ್ನು ಪಡೆಯಬಲ್ಲನು ಹಾಗು ಆರು ಅಭಿಜ್ಞಾಗಳನ್ನು ಪ್ರಾಪ್ತಿಮಾಡಬಲ್ಲನು.
ಧ್ಯಾನಿಯು ಪ್ರಾಜ್ಞನಾಗಿದ್ದರೆ ಆತನ ದಿನಗಳು ಅವಿಶ್ರಾಂತವಾಗಿರಲಿ
ಚಿತ್ತವನ್ನು ಕಾಯಗತಾನುಸ್ಸತಿಯಲ್ಲಿ ತೊಡಗಿಸಿ ವಿವಿಧ ಫಲಗಳನ್ನು ಪಡೆಯಲಿ.

ಇಲ್ಲಿಗೆ ಕಾಯಗತಾನುಸ್ಸತಿ ಸಂಕ್ಷಿಪ್ತವಾಗಿ ಮುಗಿಯಿತು.
****************************************************************************

9. ಆನಾಪಾನಾಸತಿ

ಭಿಕ್ಷುಗಳೇ, ಈ ಆನಾಪಾನಾಸತಿಯು ಯಾವಾಗ ಧ್ಯಾನಿಸುತ್ತೇವೆಯೋ ಅಭಿವೃದ್ಧಿಗೊಳಿಸುತ್ತೇವೆಯೋ ಮತ್ತು ನಿರಂತರ ಸಾಧಿಸುತ್ತೇವೆಯೋ ಆಗ ಮಹತ್ಫಲ ನೀಡುತ್ತದೆ. ಇದು ಪರಮಶಾಂತಿದಾಯಕವಾಗಿದೆ. ಹಾಗು ಪರಮ ಉದಾತ್ತವಾಗಿದೆ. ಇದು ಪರಿಶುದ್ಧವಾದ ಪ್ರಶಾಂತ ವಿಹಾರವಾಗಿದೆ ಮತ್ತು ಇದು ಅಕುಶಲ ಸ್ಥಿತಿಗಳನ್ನು ಒಂದೇಬಾರಿಗೆ ಅಂತ್ಯಗೊಳಿಸುತ್ತದೆ, ತಡೆಯುತ್ತದೆ ಹಾಗು ಉದಯಿಸಿದರೂ ಹಾಗೆಯೇ ಸ್ತಬ್ದವಾಗುತ್ತದೆ.
ಆನಾಪಾನದ ಬಗ್ಗೆ ಇದು ಭಗವಾನರ ಪ್ರಶಂಸೆಯಾಗಿದೆ. ಆನಾಪಾನಾಸತಿಯು ನಾನಾರೀತಿಯಲ್ಲಿ ಉಪಯೋಗಕಾರಿಯಾಗಿದೆ. ಆರೋಗ್ಯ ದೃಷ್ಟಿಯಿಂದ, ಮಾನಸಿಕ ಪ್ರಫುಲ್ಲತೆ, ಸಮಾಧಾನ ಅಭಿಜ್ಞಾ ದರ್ಶನ, ಸಂಬೋಧಿ ಮತ್ತು ನಿಬ್ಬಾಣ ಎಲ್ಲವನ್ನು ಇದರಿಂದ ಪಡೆಯಬಹುದು. ಇದು ವೈಜ್ಞಾನಿಕವಾಗಿಯು ಅತ್ಯಂತ ಶ್ರೇಷ್ಠ ಎಂದು ಸಾಬೀತಾಗಿದೆ. ಇಂದು ವಿಶ್ವದ ಎಲ್ಲೆಡೆ ವಿವಿಧ ಮತದ ಸ್ವಾಮೀಜಿಗಳು, ಧ್ಯಾನ ಗುರುಗಳು, ವೈದ್ಯರು ಮತ್ತು ಇತರರು ಇದರ ಪ್ರಯೋಜನ ಪಡೆದಿದ್ದಾರೆ. ಅದನ್ನು ತಮ್ಮದಾಗಿಸಿಕೊಂಡಿದ್ದಾರೆ ಹಾಗು ಪರರಿಗೂ ಅದನ್ನು ಬೋಧಿಸುತ್ತಿದ್ದಾರೆ. ಆದರೆ ಇದರ ಮೂಲ ಬುದ್ಧ ಭಗವಾನರ ಸಂಶೋಧನೆಯಾಗಿದ್ದು, ಬೌದ್ಧರಲ್ಲಿ ಅದು ಪೂರ್ಣವಾಗಿ ವಿಕಸಿತ ರೂಪ ಪಡೆದಿದ್ದು, ಪರಿಶುದ್ಧ ರೂಪದಲ್ಲಿದ್ದು ಪೂರ್ಣ ವಿವರಣೆ ಅದರಲ್ಲಿ ಮಾತ್ರ ಸಿಗುತ್ತದೆ.
ಬುದ್ಧ ಭಗವಾನರು ಅನಾಪಾನಸತಿಯ ಮೂಲಕವೇ ಸಮ್ಮ ಸಂಬೋಧಿ ಪಡೆದಿದ್ದರು. ಇದು ಸಾರ್ವಕಾಲಿಕ ಶ್ರೇಷ್ಠ ಧ್ಯಾನವಾಗಿದೆ. ಅನಾ ಎಂದರೆ ಉಶ್ವಾಸ ಹಾಗು ಅಪಾನ ಎಂದರೆ ನಿಶ್ವಾಸ ಸತಿ ಎಂದರೆ ಜಾಗರೂಕತೆಯಾಗಿದೆ. ಅಂದರೆ ಉಸಿರಾಟದಲ್ಲಿ ಇದನ್ನು ಸಾಧಿಸುವ ಭಿಕ್ಷುಗಳು ಅರಣ್ಯದಂತಹ ಅಥವಾ ಮರದ ಬುಡ ಅಥವಾ ಶೂನ್ಯಗೃಹ (ಬರಿದಾದ ಕೊಣೆ) ದಂತಹ ನಿಶಬ್ಧ, ನಿರ್ಜನ ವಾತಾವರಣದಲ್ಲಿ ಕುಳಿತು ಪದ್ಮಾಸನದಲ್ಲಿ ಆಸೀನರಾಗಿ, ದೇಹವನ್ನು ಸ್ಥಿರವಾಗಿಟ್ಟುಕೊಂಡು, ತಮ್ಮ ಮುಂದೆ ಸ್ಮೃತಿಯನ್ನು ಸ್ಥಾಪಿಸುತ್ತಾರೆ ಹಾಗೂ ಅಕುಶಲವಾದ ಸರ್ವ ಯೊಚನಾ ಸ್ಥಿತಿಗಳನ್ನು ದೂರೀಕರಿಸುತ್ತಾರೆ. ಹಾಗು ಉಸಿರಾಟದಲ್ಲಿ ಏಕಾಗ್ರವಹಿಸಿ ಎಂದಿಗೂ ಎಚ್ಚರಿಕೆಯಿಂದ ಉಶ್ವಾಸ ಮತ್ತು ನಿಶ್ವಾಸ ಮಾಡುತ್ತಾರೆ. ಅನಾಪಾನಸತಿಯಿಂದ ಯೋಚನೆಗಳು ಬಹುಬೇಗ ಸ್ತಬ್ದವಾಗುತ್ತದೆ. ಇದು ನಿವರಣಗಳ ನಾಶಕ್ಕೆ ಬಹು ಸಹಕಾರಿಯಾಗಿದೆ.
ಇದು ಉಸಿರಿನ ವ್ಯಾಯಮವಲ್ಲ (ಪ್ರಾಣಯಾಮ) ಆದ್ದರಿಂದ ಉಸಿರನ್ನು ಬಿಗಿಹಿಡಿಯಬೇಡಿ. ಇಲ್ಲಿ ಧ್ಯಾನಿಯು ಎಚ್ಚರಿಕೆಯಿಂದ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಾನೆ (ಉಶ್ವಾಸ) ಹಾಗು ಎಚ್ಚರಿಕೆಯಿಂದ ಉಸಿರನ್ನು ಹೊರಕ್ಕೆ (ನಿಶ್ವಾಸ) ಬಿಡುತ್ತಾನೆ. ಅದೇರೀತಿಯ ಜಾಗ್ರತೆಯ ಸ್ಥಿತಿಯನ್ನು ನಿರಂತರ ಸ್ಥಾಪಿಸುತ್ತಾನೆ. ಆತನು ಕೇವಲ ಜಾಗರೂಕತೆ, ಎಚ್ಚರ, ಹಾಗು ಗಮನ ಕೊಡಬೇಕಷ್ಟೆ. ಸಾಧಕನು ಉದ್ದವಾದ ಮೂಗು ಉಳ್ಳವನಾಗಿದ್ದರೆ ಉಸಿರು ಮೊದಲು ಆತನ ಮೂಗಿನ ತುದಿಗೆ ಸ್ಪಶರ್ಿಸುತ್ತದೆ ಮತ್ತು ಸಾಧಕನಿಗೆ ಉದ್ದ ಮೂಗು ಇಲ್ಲದಿದ್ದಲ್ಲಿ ಆತನ ಉಸಿರು ಮೇಲ್ಭಾಗದ ತುಟಿಗೆ ಸ್ಪಶರ್ಿಸುತ್ತದೆ. ಆತನು ತನ್ನ ಗಮನ, ಏಕಾಗ್ರತೆಯನ್ನೆಲ್ಲಾ ಅಲ್ಲೇ ಕೇಂದ್ರೀಕರಿಸಬೇಕು. ಈ ರೀತಿಯಾದ ಅಭ್ಯಾಸ ಆತನು ಪ್ರತಿನಿತ್ಯ ಕನಿಷ್ಠ ಅರ್ಧಗಂಟೆಯಾದರೂ ಮಾಡಬೇಕು. ನಿಷ್ಠ ಸಾಧಕರು ಅಹೋರಾತ್ರಿ ಸಾಧಿಸುವರು. ಬಲವಂತವಾಗಿ ಉಸಿರಾಟ ಮಾಡಬಾರದು ಕೇವಲ ಉಸಿರಾಟವನ್ನು ಗಮನಿಸಬೇಕಷ್ಟೆ.
ಈ ಸಾಧನೆಯ ಪ್ರಾರಂಭಿಕ ಮೆಟ್ಟಿಲು ಏನೆಂದರೆ ತನ್ನ ಉಸಿರಾಟದ ಬಗ್ಗೆಯೆ ಪೂರ್ಣ ಗಮನ ನೀಡಬೇಕು. ಆದರೆ ಹೊಸಬರಿಗೆ ಇದು ಕೂಡಲೇ ಸಾಧ್ಯವಾಗುವುದಿಲ್ಲ. ಅವರ ಮನಸ್ಸು ಭೂತಕಾಲದ ಸ್ಮರಣೆಯಲ್ಲಿಯೊ ಅಥವಾ ಭವಿಷ್ಯತ್ತಿನ ಕನಸುಗಳಲ್ಲಿಯೋ ಸುತ್ತಾಡುತ್ತಿರುತ್ತದೆ.  ಅಥವಾ ವರ್ತಮಾನದ ಕೆಲಸಕಾರ್ಯಗಳ ಬಗ್ಗೆಯೋ, ಭೋಗಗಳ ಚಿಂತನೆಯಲ್ಲೂ ಅಥವಾ ವ್ಯಕ್ತಿಗಳ ಬಗ್ಗೆ ದ್ವೇಷದ ಚಿಂತನೆಯಲ್ಲೋ ಅಥವಾ ಸ್ಥಿತಿಗಳ ಬಗ್ಗೆ ವಿರೋಧ ಭಾವನೆಯಿಂದಲೋ ಅಥವಾ ಮಾಡಿರುವ ತಪ್ಪುಗಳ ಬಗ್ಗೆ ಪಶ್ಚಾತ್ತಾಪದಿಂದಲೋ ಅಥವಾ ಮಾಡದೆ ಇರುವ ಕಾರ್ಯಗಳ ಬಗ್ಗೆ ಚಿಂತೆಯಿಂದಲೊ, ಭಯದಿಂದಲೊ ಅಥವಾ ಸಂದೇಹ ಪೀಡಿತನಾಗಿ, ಧ್ವಂಧ್ವಗಳಲ್ಲಿ ಸಿಲುಕಿ ನಿಧರ್ಾರ ಬರದವನಾಗಿಯೋ ಅಥವಾ ವಿಶ್ರಾಂತಿ ಬಯಕೆವುಳ್ಳವನಾಗಿ, ಜಡತೆ ಹಾಗು ನಿದ್ರೆಯ ಸ್ಥಿತಿಯಲ್ಲಿ ಕೂಡಿರುವವನಾಗಿರುತ್ತಾನೆ. ಆತನು ದೃಢತೆ ತಾಳಿ ಇವ್ಯಾವ ಸ್ಥಿತಿಯೂ ಇರದಂತೆ ಮನಸ್ಸನ್ನು ಬರಿದು ಮಾಡಿ, ಮುಂದೆಯೂ ಈ ಯೋಚನೆಗಳು ಬಾರದಂತೆ ಎಚ್ಚರ ವಹಿಸುತ್ತಾನೆ. ಆ ದಿಕ್ಕಿನಲ್ಲಿ ಪ್ರಯತ್ನಿಸುತ್ತಾನೆ. ಪ್ರಾರಂಭದಲ್ಲಿ ಕಾಲು ನೋಯುವಿಕೆ ಅಥವಾ ಜೋಮು ಹಿಡಿಯುವಿಕೆ ಆಗಬಹುದು. ಆದನ್ನು ಲೆಕ್ಕಿಸದೆ ಸಾಧನೆ ಮಾಡಬೇಕು.
ಆತನಿಗೆ ಉಸಿರಾಟ ಗಮನ ಕಷ್ಟವಾದುದರಿಂದಾಗಿ ಅತನು ಅಂಕೆಗಳನ್ನು ಎಣಿಸಿ ಉಸಿರಾಟ ಮಾಡಬೇಕು. ಒಂದು ಎಂದು ಮನಸ್ಸಿನಲ್ಲಿಯೇ ಹೇಳಿಕೊಂಡು ಉಸಿರು ತೆಗೆದುಕೊಳ್ಳಬೆಕು. ಎರಡು ಎಂದು ಮನಸ್ಸಿನಲ್ಲಿಯೇ ಹೇಳಿಕೊಂಡು ಉಸಿರು ಹೊರಕ್ಕೆ ಬಿಡಬೆಕು. ಇದೇರೀತಿ ಹತ್ತರ ತನಕ ಎಣಿಸಬೇಕು. ಈ ಪ್ರಕ್ರಿಯೆ ಸುಮಾರು 20 ಸಾರಿ ಮಾಡಿದ ನಂತರ ಎಣಿಕೆ ಇಲ್ಲದೆ ಧ್ಯಾನ ಮಾಡಬೇಕು. ಕೇವಲ ವರ್ತಮಾನದಲ್ಲೇ ಅದು ಧ್ಯಾನದಲ್ಲೆ ಮನಸ್ಸೆಲ್ಲಾ ಇರಬೇಕು. ಆತನು ಉಸಿರಾಟದ ಜಾಗರೂಕತೆಯನ್ನು ಬೆರೆಸಬೇಕು. ಇದೇ ಸಂಪರ್ಕವಾಗಿದೆ.
ಆತನು ಮೂಗಿನ ತುದಿ ಅಥವಾ ಮೇಲ್ಭಾಗದ ತುಟಿಯ ಮೇಲೆ ಸ್ಪರ್ಶ ಗ್ರಹಿಸಬೇಕು. ಅಂದರೆ ಗಾಳಿಯ, ಉಸಿರಿನ, ಸ್ಪರ್ಶ ಗ್ರಹಿಸುತ್ತಾ ನಿರಂತರ ಉಶ್ವಾಸ ಮತ್ತು ನಿಶ್ವಾಸದ ಸ್ಪರ್ಶ ಗ್ರಹಿಸುತ್ತಿರಬೇಕು.
ಅಲ್ಲಿಯೇ ಮನಸ್ಸನ್ನು ನೆಟ್ಟಬೇಕು ಮತ್ತು ಗಮನಿಸಬೇಕು. ಆನಂದ, ಸುಖಗಳನ್ನು ಸ್ಥಾಪಿಸಬೇಕು. ಈ ರೀತಿಯ ಎಣಿಕೆಯಿಂದ ಅನಿಧರ್ಾರವು ಅಂತ್ಯವಾಯಿತು ಹಾಗು ಚೆಲ್ಲಾಪಿಲ್ಲಿಯಾಗಿ ಯೋಚಿಸುತ್ತಿದ್ದ ಮನಸ್ಸು ನಿಯಂತ್ರಿತವಾಯಿತು. ಸ್ಪರ್ಶದಿಂದ ಚದುರುವಿಕೆಯು ನಿವಾರಣೆಯಾಗಿ ಏಕಾಗ್ರತೆಯು ಸ್ಥಾಪಿತವಾಗುತ್ತದೆ.

ಉಸಿರಾಟದ 16 ಆಧಾರಗಳು :

1. ಮೊದಮೊದಲು ಉಸಿರಾಟವು ದೀರ್ಘವಾಗಿರುತ್ತದೆ. ಆಗ ಆತನು ಜಾಗರೂಕತೆಯ ಅರಿವಿನಿಂದ ನಾನು ಉದ್ಧವಾದ ಉಶ್ವಾಸವನ್ನು ಮಾಡುತ್ತಿದ್ದೇನೆ ಅಥವಾ ನಾನು ಉದ್ದವಾದ (ದೀರ್ಘ) ನಿಶ್ವಾಸವನ್ನು ಮಾಡುತ್ತಿದ್ದೇನೆ ಎಂದು ಬಾವಿಸುತ್ತಾನೆ.
2. ಹಾಗೆಯೇ ಆತನ ಉಸಿರಾಟವು ಕಿರಿದಾಗಿರುವಾಗ ಆತನು ಜಾಗರೂಕತೆಯ ಅರಿವಿನಿಂದ ನಾನು ಕಿರಿದಾಗಿ ಉಶ್ವಾಸ ಮಾಡುತ್ತಿದ್ದೇನೆ ಅಥವಾ ನಾನು ಕಿರಿದಾಗಿ ನಿಶ್ವಾಸವನ್ನು ಮಾಡುತ್ತಿದ್ದೇನೆ ಎಂದು ಭಾವಿಸುತ್ತಾನೆ. ಆತನು ಅತ್ಯಂತ ಜಾಗರೂಕತೆಯಿಂದ ಕೂಡಿರುತ್ತಾನೆ. ಆತನಿಂದ ಯಾವ ಉಸಿರು ಸಹಾ ಗಮನಿಸಲ್ಪಡದೆ ಒಳಗೆ ಹೋಗುವಂತಿಲ್ಲ. ಹಾಗೆಯೇ ಹೊರಗೆ ಬರುವಂತಿಲ್ಲ. ಹೆಬ್ಬಾಗಿಲಿನ ಕಾವಲುಗಾರನ ರೀತಿ ಪ್ರತಿಯೊಂದು ಜಾಗರೂಕತೆಯಿಂದ, ಅರಿವಿನಂದ ಕೂಡಿರುತ್ತಾನೆ. ಹಾಗೆಯೇ ಸಾಧನೆ ಮುಂದುವರೆಯು ತ್ತಿದ್ದಂತೆ ಆತನಗೆ ಉಸಿರು ಸೂಕ್ಷ್ಮವಾಗಿ, ಅತಿಕಿರಿದಾಗಿ, ಸಭ್ಯವಾಗಿ ಕಾಣಿಸುತ್ತದೆ.
3. ಇಡೀ ಉಸಿರಿನ ಕಾಯವನ್ನು ಅನುಭವಿಸಿದವನಾಗಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆಯ ಅರಿವನ್ನು ಸ್ಥಾಪಿಸುತ್ತಾನೆ. ಇಲ್ಲಿ ಆತನು ಅತ್ಯಂತ ವಿಶ್ಲೇಷಣೆಯುತವಾಗಿ ಜಾಗರೂಕವಾಗುತ್ತಾನೆ. ಆತನು ತನ್ನ ಏಕಾಗ್ರತೆಯೆಲ್ಲಾ ಉಸಿರಲ್ಲೆ ನೆಲಸಿರುತ್ತಾನೆ. ಆಗ ಈ ರೀತಿ ಅರಿಯುತ್ತಾನೆ. ಉಸಿರು ಮೂಗಿನ ತುದಿಯಿಂದ ಪ್ರಾರಂಭವಾಗುತ್ತದೆ ಹೃದಯದ ಹತ್ತಿರ ಮಧ್ಯವಸ್ಥೆಯಲ್ಲಿರುತ್ತದೆ ಹಾಗು ಅದರ ಅಂತ್ಯವು ಕಿಬ್ಬೊಟ್ಟೆ ಬಳಿ ಆಗುತ್ತದೆ. ಹಾಗೆಯೇ ನಿಶ್ವಾಸವು ಕಿಬ್ಬೊಟ್ಟೆಯಿಂದ ಪ್ರಾರಂಭವಾಗಿ, ಹೃದಯದಲ್ಲಿ ಮಧ್ಯವಾಗಿ, ಮೂಗಿನಿಂದ ಅಂತ್ಯವಾಗುತ್ತದೆ. ಈ ರೀತಿಯಲ್ಲಿ ಆತ ಇಡೀ ಉಸಿರಾಟದ ಆದಿ, ಮಧ್ಯಮ ಮತ್ತು ಅಂತ್ಯಗಳ ಮೂರು ಅವಸ್ಥೆಯಲ್ಲೂ ಜಾಗರೂಕನಾಗಿರುತ್ತಾನೆ. ಆದಿಯ ಪ್ರತಿಕ್ಷಣ ಜಾಗರೂಕನಾಗಿ ಮಧ್ಯದ ಪ್ರತಿಕ್ಷಣ ಜಾಗರೂಕನಾಗಿ, ಅಂತ್ಯದ ಪ್ರತಿಕ್ಷಣ ಜಾಗರೂಕನಾಗಿರುತ್ತಾನೆ.
4. ಉಸಿರು ಕಾಯದ ಸಂಖಾರಗಳನ್ನು (ಚಟುವಟಿಕೆ) ಶಾಂತಗೊಳಿಸಿ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆಯ ಅರಿವನ್ನು ಹೊಂದುತ್ತಾನೆ. ಅಂದರೆ ಇಲ್ಲಿ ಶರೀರವು ಯಾವ ರೀತಿಯಲ್ಲಿಯೂ ಚಲಿಸದೆ, ಅಲ್ಲಾಡದೆ, ಬಾಗದೆ ಇರಬೇಕಾಗುತ್ತದೆ. ಹಾಗು ನಾವು ಯಾವುದೇರೀತಿ ಯೋಚಿಸುವಾಗ ಉಸಿರು ಕಸಿವಿಸಿಯಾಗುತ್ತದೆ. ನಮ್ಮ ಯೋಚನೆಗಳೆಲ್ಲಾ ನಿಂತಾಗ, ಕಸಿವಿಸಿ ನಿಲ್ಲುತ್ತದೆ. ಕಸಿವಿಸಿ ನಿಂತಾಗ ಶಾರೀರಿಕ ಅಸಮತೋಲನ, ಶಾರೀರಿಕ ಕ್ಷೊಭೆ ನಿಲ್ಲುತ್ತದೆ. ಶಾರೀರಿಕ ಕ್ಷೊಭೆ ನಿಂತಾಗ ಶರೀರ ಶಾಂತವಾಗುತ್ತದೆ. ಈ ರೀತಿಯಲ್ಲಿ ಆತನು ಸಂಖಾರಗಳನ್ನು ಶಾಂತಗೊಳಿಸಿ ಉಶ್ವಾಸ, ನಿಶ್ವಾಸ ಮಾಡುತ್ತಾನೆ
.
5. ಆನಂದವನ್ನು (ಪೀತಿ) ಅನುಭವಿಸಿದವನಾಗಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆ ಅರಿವನ್ನು ಹೊಂದುತ್ತಾನೆ. ಆತನು ಆನಂದ ಅನುಭವಿಸಿ ಉಶ್ವಾಸ ಹಾಗು ನಿಶ್ವಾಸ ಮಾಡುತ್ತಿರುತ್ತಾನೆ. ಇಲ್ಲಿ ಸಾಧಕನು ಧ್ಯಾನಮಗ್ನನಾಗಿರುವಾಗಿ ಆತನು ಧ್ವಂದ್ವತೆ, ಸಂಶಯಗಳನ್ನು ಮೀರುತ್ತಾನೆ. ಆಗ ಆತನಲ್ಲಿ ಆನಂದ ಉಂಟಾಗುತ್ತದೆ. ಹಾಗೆಯೇ ಆತನಿಗೆ ಧ್ಯಾನ ವಿಷಯದಿಂದಲೂ ಆನಂದ ಉಂಟಾಗುತ್ತದೆ. ಹೇಗೆಂದರೆ ಯಾವಾಗ ಕಾಯದ ಚಟುವಟಿಕೆಗಳು (ಸಂಖಾರ) ಶಾಂತವಾದವು ಆಗ ಆತನಲ್ಲಿ ಆನಂದವು ಉಂಟಾಗುತ್ತದೆ. ಆನಂದವು 5 ವಿಧದ್ದಾಗಿರುತ್ತದೆ. ರೋಮಾಂಚನ ಆನಂದ, ಕ್ಷಣಿಕ ಆನಂದ, ಪ್ರಸರಿಸುವ ಆನಂದ, ವೇಗದ ಆನಂದ, ಉದ್ವೇಗದ ಆನಂದ ಇವುಗಳನ್ನು ಅನುಭವಿಸುತ್ತಾ ಆತನು ಉಸಿರಾಡುತ್ತಾನೆ.
6. ಸುಖವನ್ನು (ಶಾಂತತೆ) ಅನುಭವಿಸಿದವನಾಗಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆ, ಅರಿವನ್ನು ಹೊಂದುತ್ತಾನೆ, ಅದರಂತೆ ಅಭ್ಯಸಿಸುತ್ತಾ ಆತನು ಉಶ್ವಾಸ ಮತ್ತು ನಿಶ್ವಾಸ ಮಾಡುತ್ತಿರುತ್ತಾನೆ. ಇಲ್ಲಿ ಸಾಧಕನಿಗೆ ಆನಂದ ಉಂಟಾದಾಗ ಅದರ ಹಿಂದೆ ಸುಖವು ಉಂಟಾಗುತ್ತದೆ. ಆನಂದವು ಸ್ಥೂಲವಾದರೆ ಸುಖ(ಶಾಂತತೆ)ವು ಸೂಕ್ಷ್ಮತೆಯುಳ್ಳದ್ದಾಗಿದೆ. ಈ ರೀತಿಯ ಸುಖವನ್ನು ಆತ ನಿವರಣಗಳ ನಾಶ ಹೊಂದುತ್ತಿರುವುದರಿಂದ ಅನುಭವಿಸುತ್ತಿರುತ್ತಾನೆ.
ಇಲ್ಲಿ ಸಾಧಕನಿಗೆ ತನ್ನ ಉಸಿರು ಅತ್ಯಂತ ಶಾಂತವಾದ ರೀತಿ ಸಾಗುತ್ತಿದೆ ಎಂಬ ಅರಿವು ಬರುತ್ತದೆ. ಆತನ ಉಸಿರಾಟವು ಸೂಕ್ಷ್ಮವು ಹಾಗು ಅತ್ಯಂತ ಶಾಂತವಾಗಿರುತ್ತದೆ. ಇದೇರೀತಿಯಲ್ಲಿ ಸಾಗುತ್ತಿರುವಾಗ ಆತನು ಉಸಿರು ಕಾಯದ ಚಟುವಟಿಕೆ ಶಾಂತಗೊಂಡಾಗ, ಆನಂದವು ಉಕ್ಕಿದಾಗ, ಆತನ ದೇಹವು ಹಗುರವಾಗುತ್ತದೆ. ಕೆಲವರ ದೇಹವು ತೇಲಾಡುತ್ತದೆ ಮತ್ತು ಹಾಗೆಯೇ ಮೇಲಕ್ಕೇರುತ್ತದೆ. ಹಾಗೆಯೇ ಕೆಳಕ್ಕೂ ಸಹಾ ಇಳಿಯುತ್ತದೆ. ಇದು ಅನುಭವಿಗಳ ಮಾತಾಗಿದೆ.
ಸಾಧಕನು ಉಸಿರಾಡುತ್ತಿರುವಾಗ ಆತನ ಮೂಗಿನ ತುದಿಯಲ್ಲಿ ಅಥವಾ ಮೇಲಿನ ತುಟಿಯ ಮೇಲ್ಭಾಗದಲ್ಲಿ ಹತ್ತಿಯಂತಹ ಸ್ಪರ್ಶವಾಗುತ್ತದೆ. ಇದು ವಶೀಕೃತ ಚಿಹ್ನೆಯಾಗಿದೆ (ಉಗ್ಗಹನಿಮಿತ್ತ). ಆಗ ಸಾಧಕ ತನ್ನ ಗಮನವನ್ನೆಲ್ಲಾ ಅಲ್ಲೇ ಕೇಂದ್ರೀಕೃತ ಮಾಡಿದಾಗ ಆತನಲ್ಲಿ ನಿವರಣಗಳು ನಾಶವಾಗುತ್ತದೆ. ಅಂದರೆ ಇಂದ್ರೀಯ ಭೋಗಲಾಲಸೆ, ವಿರೋಧತೆ, ಜಡತೆ, ಚಿಂತೆ, ಸಂದೇಹಗಳೆಲ್ಲಾ ನಾಶವಾಗಿ ಆತನ ಮನಸ್ಸು ಶುದ್ಧವಾಗುತ್ತೆ. ಉಸಿರಾಟವು ಇನ್ನೂ ಪ್ರಕಾಶಮಾನವಾಗಿ ಕಂಡುಬರುತ್ತದೆ. ಆತನಿಗೆ ನಕ್ಷತ್ರಗಳ ಗುಂಪು ಕಾಣಿಸಬಹುದು ಅಥವಾ ನಕ್ಷತ್ರ ಕಾಣಿಸಬಹುದು ಅಥವಾ ರತ್ನದಂತೆ ಕಾಣಿಸಬಹುದು ಅಥವಾ ರತ್ನಗಳ ಗುಂಪು ಕಾಣಿಸಬಹುದು. ಅಥವಾ ಮುತ್ತುಗಳ ಗುಂಪು ಕಾಣಿಸಬಹುದು. ಸುಂದರವಾದ ಹೊಗೆ ಕಾಣಿಸಬಹುದು. ಜೇಡರ ಬಲೆಯಂತೆ ಕಾಣಿಸಬಹುದು. ಮೋಡಗಳಂತೆ ಕಾಣಿಸಬಹುದು, ಕಮಲದ ಹೂ ಅಥವ ರಥದ ಚಕ್ರ, ಸೂರ್ಯನಂತೆ, ಚಂದಿರನಂತೆ ಅಥವಾ ಇನ್ಯಾವುದೇ ಹೊಳೆವ ವಿಷಯ ಕಾಣಿಸಬಹುದು. ಇದು ಪ್ರತಿಭಾಗ ನಿಮಿತ್ತವಾಗಿದೆ (ಪ್ರತಿಫಲಿತ ಚಿಹ್ನೆ). ಇದು ಕಾಣಿಸಿಕೊಂಡಾಗ ಮರೆಯಾಗಲು ಬಿಡಬಾರದು. ಇದು ಮರೆಯಾಗಬಾರದೆಂದರೆ ಆತನು ಅತ್ಯಂತ ಕುಶಲಿಯಾಗಿರಬೇಕು. ಶೀಲ, ಸಂಯಮ, ನಿವರಣರಹಿತ ಧ್ಯಾನ, ಧ್ಯಾನ ಕೌಶಲ್ಯ, ಸೂಕ್ಷ್ಮತೆಗೆ ವಾಲುವಿಕೆ, ಸ್ಫೂತರ್ಿ, ದೃಢತೆ ಮತ್ತು ಪಂಚಬಲಗಳು ಸಮತೋಲನ ಸಹಾಯಕಾರಿಯಾಗುತ್ತದೆ.
ನಂತರ ಸಾಧಕನು ಪ್ರತಿಭಾಗ ನಿಮಿತ್ತವನ್ನು ವಿಕಸಿಸಬೇಕಾಗುತ್ತದೆ. ಮೊದಲು ರಕ್ಷಿಸಲು ಸಾಪಲ್ಯ ಪಡೆದ ಮೇಲೆ ಅದನ್ನು ಇಂಚು ಇಂಚಾಗಿ ವಿಕಸಿಸಲು ಪ್ರಯತ್ನಿಸಬೇಕು. ನಂತರ ಒಂದು ಅಡಿ ಅಗಲ, ಎರಡು ಅಡಿ ಅಗಲ ಕೊಡೆಯಷ್ಟು ರಥದ ಚಕ್ರದಷ್ಟು ಮನೆಯಷ್ಟು, ಊರಿನಷ್ಟು ನಂತರ ಅನಂತವಾಗಿ ವಿಕಸಿಸಬೇಕು. ಎಲ್ಲೆಲ್ಲೂ ಬೆಳಕನ್ನೇ ಕಾಣುವ ಈ ರೀತಿಯ ಆನಂತ ಬೆಳಕನ್ನು ಪಡೆಯುವುದರಿಂದಾಗಿ ಆತನಲ್ಲಿ ವಿತರ್ಕ ವಿಚಾರ, ಪ್ರೀತಿ, ಸುಖ, ಏಕಾಗ್ರತೆ ಧ್ಯಾನಾಂಗಗಳು ಕೂಡಿ ಬಲಿಷ್ಠವಾಗಿ ಪ್ರಥಮ ಸಮಾಧಿ ಪಡೆಯುತ್ತಾನೆ.
ನಂತರ ಆತನು ಈ ಸಮಾಧಿಯಲ್ಲಿ ಬೇಕೆನಿಸಿದಾಗ, ಕ್ಷಿಪ್ರವಾಗಿ ಲಕ್ಷ ಕೊಡುತ್ತಾನೆ. ಬೇಗ ಪ್ರವೇಶಿಸುತ್ತಾನೆ. ತನಗೆ ಇಷ್ಟಬಂದಷ್ಟು ಕಾಲ ಅದರಲ್ಲೆ ನೆಲೆಸುತ್ತಾನೆ, ವಿಹರಿಸುತ್ತಾನೆ. ಹಾಗೆಯೇ ಕ್ಷಿಪ್ರವಾಗಿ ಹೊರಬರುತ್ತಾನೆ. (ಅಥವಾ ಮುಂದಿನ ಸಮಾಧಿಗೆ ಪ್ರವೇಶಿಸುತ್ತಾನೆ) ಮತ್ತು ಅದನ್ನು ಪುನರ್ ಅವಲೋಕಿಸುತ್ತಾನೆ.
ಧ್ಯಾನ ಪ್ರಾವಿಣ್ಯತೆ : ಈ ರೀತಿ, ಲಕ್ಷ, ನೀಡುವಿಕೆ, ಪ್ರವೇಶ, ನೆಲೆಸುವಿಕೆ, ಹೊರಬರುವಿಕೆ ಮತ್ತು ಪುನರ್ ಅವಲೋಕನಗಳಲ್ಲಿ ಆತನು ಸಾವಿರ ಬಾರಿ ಹೋಗಿ ಪ್ರವೀಣನಾಗುತ್ತಾನೆ. ಇದರಿಂದಾಗಿ ಆತನು ಮುಂದಿನ ಧ್ಯಾನಗಳಲ್ಲಿ ಹಂತಕ್ಕೇರುವುದು ಸುಲಭವಾಗುತ್ತದೆ.
ದ್ವಿತಿಯ ಸಮಾಧಿ : ನಂತರ ಆತನಿಗೆ ವಿತಕ್ಕ ವಿಚಾರ ಸ್ಥೂಲವಾಗಿ ಕಂಡು ಅದರಿಂದ ವಿಮುಖವಾಗಿ ಪೀತಿ, ಸುಖ, ಏಕಾಗ್ರತೆಯಿಂದ ಕೂಡಿದ ದ್ವಿತೀಯ ಸಮಾಧಿಯಲ್ಲಿ ನೆಲೆಸುತ್ತಾನೆ. ಐದು ರೀತಿಯಲ್ಲಿ ಧ್ಯಾನ ಪ್ರಾವೀಣ್ಯತೆ ಗಳಿಸುತ್ತಾನೆ.
ತೃತೀಯ ಸಮಾಧಿ : ನಂತರ ಆತನಿಗೆ ಪೀತಿಯು ಸ್ಥೂಲವಾಗಿ ಕಂಡುಬಂದು ಅದರಿಂದ ವಿಮುಖವಾಗಿ ಸುಖ ಮತ್ತು ಏಕಾಗ್ರತೆಯಿಂದ ಕೂಡಿದ ತೃತೀಯ ಧ್ಯಾನದಲ್ಲಿ ಪ್ರವೇಶಿಸಿ ನೆಲೆಸುತ್ತಾನೆ. ಅದರಲ್ಲಿ ಐದು ರೀತಿಯ ಧ್ಯಾನ ಪ್ರಾವಿಣ್ಯತೆ ಗಳಿಸಿದಾಗ ಆತನಿಗೆ ಸುಖವು ಸ್ಥೂಲವಾಗಿ ಕಂಡುಬರುತ್ತದೆ.
7. ಚಿತ್ತದ ಚಟುವಟಿಕೆಗಳೆಲ್ಲವನ್ನು ಅನುಭವಿಸಿದವನಾಗಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವನ್ನು ಹೊಂದುತ್ತಾನೆ. ಅದರಂತೆ ಉಶ್ವಾಸ ಮತ್ತು ನಿಶ್ವಾಸ ಮಾಡುತ್ತಾನೆ. ನಂತರ ಸಾಧಕ ಚಿತ್ತದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಅರಿಯುತ್ತಾ, ಉಸಿರಾಟದಲ್ಲಿ ಏಕಾಗ್ರವಹಿಸುತ್ತಾನೆ. ಹೇಗೆಂದರೆ ಚಿತ್ತದ ಸಂಖಾರಗಳಾದ ಸಂವೇದನೆ ಮತ್ತು ಗ್ರಹಿಕೆಯನ್ನು ಅರಿಯುತ್ತಾನೆ. ಈ ಹಿಂದೆ ಅನುಭವಿಸಿದ ಆನಂದ ಮತ್ತು ಸುಖಗಳ ಉದಯ ಮತ್ತು ಬೆಳವಣಿಗೆ ಗಮನನಿಸುತ್ತಾ ಉಸಿರಾಡುತ್ತಾನೆ.
8 ಚಿತ್ತದ ಸಂಖಾರಗಳನ್ನು ಶಾಂತಗೊಳಿಸಿದವನಾಗಿ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವನ್ನು ಹೊಂದಿ ಏಕಾಗ್ರತೆ ಹೊಂದುತ್ತಾನೆ. ಆತನು ಸಂವೇದನೆಗಳನ್ನು ಮತ್ತು ಗ್ರಹಿಕೆಗಳನ್ನು ಶಾಂತಗೊಳಿಸುತ್ತಾನೆ. ಸುಖವು ಸ್ಥೂಲವಾಗಿ ಕಂಡು ಆತನು ಅದನ್ನು ದಾಟಿ ಸುಖವು ಅಲ್ಪದ ದುಃಖವು ಇಲ್ಲದ ಸಮಚಿತ್ತತೆ ಮತ್ತು ಏಕಾಗ್ರತೆಯುಳ್ಳ ಸಮಾಧಿಯಲ್ಲಿ ನೆಲಸುತ್ತಾನೆ.
9. ನಂತರ ಆತನು ಚಿತ್ತವನ್ನು ಅನುಭವಿಸಿದವನಾಗಿ ಉಸಿರಾಡುತ್ತಾನೆ. ಅಂತಹ ಜಾಗರೂಕ ಅರಿವಿನಲ್ಲಿ ಏಕಾಗ್ರತೆ ಹೊಂದುತ್ತಾನೆ. ಹೇಗೆಂದರೆ ಉಸಿರಾಟದ ಧ್ಯಾನದಲ್ಲೇ ಆತನು ನಾಲ್ಕು ಸಮಾಧಿಗಳನ್ನು ಅನುಭವಿಸಿದವನಾಗಿ ಉಸಿರಾಡುತ್ತಾನೆ.
10. ಚಿತ್ತವನ್ನು ಸಂತೋಷಪಡಿಸುತ್ತಾ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವನ್ನು ಹೊಂದಿ ಏಕಾಗ್ರತೆ ಸಾಧಿಸುತ್ತಾನೆ. ಹೇಗೆಂದರೆ ಸಮಥದಿಂದ ಮತ್ತು ವಿಪಶ್ಶನದಿಂದ.  ಹೇಗೆಂದರೆ ಪ್ರಥಮ ಮತ್ತು ದ್ವಿತೀಯ ಧ್ಯಾನವನ್ನು ಮತ್ತೆ ಪಡೆದು ಅವುಗಳಲ್ಲಿ ಅನಿತ್ಯತೆ ಕಂಡು ವಿಪಶ್ಶನದ ಅರಿವು ತೀಷ್ಣಗೊಳಿಸುವುದರಿಂದಾಗಿ ಅತನು ಚಿತ್ತವನ್ನು ಸಂತೋಷಪಡಿಸುತ್ತಾನೆ.
11. ಚಿತ್ತವನ್ನು ಏಕಾಗ್ರಗೊಳಿಸುತ್ತಾ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವನ್ನು ಹೊಂದುತ್ತಾ ಏಕಾಗ್ರತೆ ಸಾಧಿಸುತ್ತಾನೆ. ಅದರಂತೆ ಉಶ್ವಾಸ ಮತ್ತು ನಿಶ್ವಾಸ ಮಾಡುತ್ತಾನೆ. ಹೇಗೆಂದರೆ ಮನಸ್ಸನ್ನು ಸಮವಾಗಿ, ಪೂರ್ಣವಾಗಿ, ಯೋಗ್ಯವಾಗಿ ಏಕಾಗ್ರತೆಯಿಂದ ಧ್ಯಾನ ವಿಷಯದಲ್ಲಿಟ್ಟು ಪ್ರಥಮ ಧ್ಯಾನ ಹಾಗೆಯೇ ಮುಂದಿನ ಹಂತಗಳನ್ನು ಪಡೆಯುತ್ತಾನೆ. ನಂತರ ಅವುಗಳ ಪುನರ್ ಅವಲೋಕನ ಮಾಡುತ್ತಾನೆ. ಸಮಾಧಿ ಸ್ಥಿತಿಗಳ ಬೀಳುವಿಕೆ ಮತ್ತು ಅನಿತ್ಯ ಗಮನಿಸುತ್ತಾನೆ. ಅಂತಹ ಪ್ರಜ್ಞಾಸ್ಥಿತಿಯ ಕ್ಷಣಿಕ ಸಮಾಧಿ ಪಡೆಯುತ್ತಾನೆ.
12. ಚಿತ್ತವನ್ನು ವಿಮೋಚನೆಗೊಳಿಸುತ್ತ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವಿನ ಏಕಾಗ್ರತೆ ಸಾಧಿಸುತ್ತಾನೆ. ಹೇಗೆಂದರ ಮೊದಲು ಪಂಚ ನಿವರಣಗಳಿಂದ ಮನಸ್ಸು ವಿಮುಖವಾಯಿತು, ನಂತರ ವಿತರ್ಕ, ವಿಚಾರಗಳಿಂದ ಮನವು ವಿಮುಖವಾಯಿತು. ನಂತರ ಪೀತಿ, ಸುಖಗಳಿಂದ ಮನಸ್ಸು ವಿಮುಖವಾಯಿತು. ಈ ಧ್ಯಾನ ಸ್ಥಿತಿಯಲ್ಲಿಯೂ ಅನಿತ್ಯತೆ ಕಾಣಿಸಿತು. ಆಗ ನಿತ್ಯ ಭಾವನೆಯಿಂದ ಮನಸ್ಸು ವಿಮುಖವಾಯಿತು. ಹಾಗೆಯೇ ಜೀವನದಲ್ಲಿ ದುಃಖದ ಅರಿವು ಉಂಟಾಗಿ ಸುಖ ಎಂಬ ಭಾವನೆಯಿಂದ ಮುಕ್ತವಾಯಿತು ಹಾಗು ಇಡೀ ಅಸ್ತಿತ್ವದಲ್ಲಿ ಎಲ್ಲವೂ ಒಂದನ್ನು ಒಂದು ಪರಸ್ಪರ ಅವಲಂಬಿಸಿ ಕಾರ್ಯ ನಿರ್ವಹಿಸುತ್ತದೆ, ಯಾವುದು ನಾಯಕವಲ್ಲ. ಯಾವುದು ನಿತ್ಯವಲ್ಲ ಯಾವುದು ಆತ್ಮವಲ್ಲ ಎಂಬ ಅನಾತ್ಮ ಭಾವನೆಯಿಂದ ಆತ್ಮಭಾವನೆ ವಿಮುಖವಾಯಿತು. ಈ ರೀತಿಯಾಗಿ ಚಿತ್ತವು ವಿಮೋಚನೆಯನ್ನು ಅನುಭವಿಸುತ್ತಾ ಉಸಿರಾಡುತ್ತಿರುತ್ತದೆ.
13. ಅನಿತ್ಯತೆಯನ್ನು ಗಮನಿಸುತ್ತಾ ಉಸಿರಾಟ ಮಾಡುತ್ತಿದ್ದೇನೆ ಎಂದು  ಜಾಗರೂಕತೆಯ ಅರಿವಿನ ಧ್ಯಾನವನ್ನು ಅಭ್ಯಸಿಸುತ್ತಾನೆ. ಹೇಗೆಂದರೆ ಆತನು ಅನಿತ್ಯವನ್ನು ಧ್ಯಾನಿಸುತ್ತಾನೆ. ಯಾವರೀತಿ ಎಂದರೆ ಐದು ಖಂಧಗಳು (ದೇಹ ಮತ್ತು ಮನಸ್ಸುಗಳು) ಅನಿತ್ಯ ಏಕೆಂದರೆ ಪ್ರತಿಯೊಂದು ಉದಯಿಸುತ್ತದೆ. ಹಾಗೆಯೇ ಲಯವಾಗುತ್ತದೆ. ಅವು ಒಂದೇರೀತಿಯಲ್ಲಿ ಇರುವುದಿಲ್ಲ. ಪ್ರತಿಕ್ಷಣ ಬದಲಾಯಿಸುತ್ತಿರುತ್ತದೆ. ಹಾಗೆಯೇ ಉಸಿರಾಟವು ಸಹಾ ಒಂದೇರೀತಿ ಇಲ್ಲ, ನಿರಂತರ ಬದಲಾಯಿಸುತ್ತವೆ. ದೇಹವಾಗಲೀ, ವೇದನೆ (ಸಂವೇದನೆಗಳಾಗಲಿ) ಯಾಗಲಿ, ಗ್ರಹಿಕೆಯಾಗಲೀ, ಸಂಖಾರಗಳಾಗಲೀ (ಚಟುವಟಿಕೆ) ಅರಿವಾಗಲಿ ನಿತ್ಯವಲ್ಲ. ಪ್ರತಿಕ್ಷಣ ಬದಲಾಯಿಸುತ್ತಿರುತ್ತದೆ. ಉಸಿರಾಟದಲ್ಲೂ ನಿರಂತರ ಬದಲಾವಣೆ ನಾವು ಕಾಣುತ್ತೇವೆ. ಉಶ್ವಾಸ, ನಿಶ್ವಾಸಗಳ ವ್ಯತ್ಯಾಸ, ದೀರ್ಘ, ಕಿರಿಯ ಉಸಿರಾಟ, ನೋವು, ನಲಿವಿನ ಉಸಿರಾಟ, ಆನಂದ ಉಸಿರಾಟ, ಸುಖದ ಉಸಿರಾಟ, ಹೀಗೆಯೆ ನಿರಂತರ ಬದಲಾವಣೆ ಆತ ಕಾಣುತ್ತಾನೆ.
14. ವಿರಾಗವನ್ನು ಗಮನಿಸಿ ಉಸಿರಾಡುತ್ತೇನೆ ಎಂಬ ಜಾಗರೂಕತೆಯ ಅರಿವಿನ ಧ್ಯಾನವನ್ನು ಅಭ್ಯಸಿಸುತ್ತಾನೆ. ಇದು ಅನಿತ್ಯವಾಗಿದೆ. ಯಾವುದೆಲ್ಲ ಅನಿತ್ಯವಾಗಿದೆಯೋ ಅವೆಲ್ಲ ದುಃಖಕರ. ಆದ್ದರಿಂದ ಆತ ಅದರಲ್ಲಿ ರಾಗವನ್ನು ತೊಡೆದುಹಾಕುತ್ತಾನೆ. ಜಗತ್ತಿನ ಯಾವುದಕ್ಕೂ ಅಂಟುವುದಿಲ್ಲ. ದೇಹಕ್ಕಾಗಲಿ, ಮನಸ್ಸಿಗಾಗಲೀ, ಸಮಾಧಿಗಾಗಲಿ, ಸಮಾಧಿ ಸ್ಥಿತಿಗಳಾಗಲಿ, ಅಂಟುವುದಿಲ್ಲ ವಿರಾಗದಿಂದಲೆ ಆರಿಹೋಗುವಿಕೆ ಅದೇ ನಿಬ್ಬಾಣ ಎಂದು ಧ್ಯಾನಿಸುತ್ತಾ ಉಸಿರಾಡುತ್ತಾನೆ.
15. ನಿರೋಧವನ್ನು ಗಮನಿಸಿ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವಿನ ಧ್ಯಾನವನ್ನು ಅಭ್ಯಸಿಸಿ ವಿಶ್ವಾಸ ಮತ್ತು ನಿಶ್ವಾಸ ಮಾಡುತ್ತಿರುತ್ತಾನೆ. ಹೇಗೆಂದರೆ : ಯಾವುದೆಲ್ಲ ಅನಿತ್ಯವೋ ಅದರಲ್ಲಿ ವಿರಾಗ ಉಂಟುಮಾಡಿ ಯಾವುದಕ್ಕೂ ಅಂಟದೆ ಅವೆಲ್ಲ ಸ್ಥಿತಿಗಳನ್ನು ನಿಲ್ಲಿಸುತ್ತಾನೆ (ನಿರೋಧಿಸುತ್ತಾನೆ) ಸ್ತಬ್ಧಗೊಳಿಸುತ್ತಾನೆ (ಪೂರ್ಣವಾಗಿ ಆರಿಹೋಗುವಂತೆ ಶಾಂತಗೊಳಿಸುತ್ತಾನೆ).
16. ತ್ಯಜಿಸುವಿಕೆ (ಪಟಿನಿಸ್ಸ) ಗಮನಿಸುತ್ತಾ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವಿನ ಧ್ಯಾನವನ್ನು ಅಭ್ಯಸಿಸಿ ಉಶ್ವಾಸ ಮತ್ತು ನಿಶ್ವಾಸ ಮಾಡುತ್ತಿರುತ್ತಾನೆ. ಹೇಗೆಂದರೆ ಇವೆಲ್ಲಾ ಅನಿತ್ಯಕಾರಕಗಳು, ಕ್ಷಣಿಕವಾದುದು, ಸದಾ ಪರಿವರ್ತನಾಶೀಲವುಳ್ಳದ್ದು ಎಂದು ಅರಿವನ್ನು ಪಡೆದು ಅವೆಲ್ಲವನ್ನು ತ್ಯಜಿಸುತ್ತಾನೆ. ಯಾವುದನ್ನು ಇಟ್ಟುಕೊಳ್ಳುವುದಿಲ್ಲ, ಅಂಟುವುದಿಲ್ಲ. ಪೂರ್ಣವಾಗಿ ತ್ಯಜಿಸುತ್ತಾನೆ, ಆಗ ಎಲ್ಲಾ ಕ್ರಿಯೆಗಳು ವಿಶ್ರಾಂತಿ ಪಡೆಯುತ್ತದೆ. ಸ್ತಬ್ದವಾಗುತ್ತದೆ. ಎಲ್ಲಾ ಕ್ಲೇಶಗಳು ತ್ಯಜಿಸಲ್ಪಡುತ್ತವೆ. ತೃಷ್ಣೆಯ ತ್ಯಜಿಸಲ್ಪಡುತ್ತದೆ. ರಾಗವು ಇನ್ನಿಲ್ಲವಾಗುತ್ತದೆ. ಇದೇ ಆರಿಹೋಗುವಿಕೆಯ ಶಾಂತತೆ (ನಿಬ್ಬಾಣ) ಯಾಗಿದೆ.
ಈ ರೀತಿ ಅನಾಪಾನಸತಿಯನ್ನು ವೃದ್ಧಿಸುವುದರಿಂದ ಮಹಾಪಲವು ಸಿಗುತ್ತದೆ. ಆಗ ಕೊನೆಯ ಒಳ ಉಸಿರು ಮತ್ತು ಹೊರ ಉಸಿರುಗಳು ಜಾಗೃಕತೆಯಿಂದ ಇರುವಾಗಲೇ ನಿಲ್ಲುತ್ತದೆ.
ಉಸಿರಾಟವು 3 ವೇಳೆ ನಿಂತಿರುತ್ತವೆ :

1. ಮರಣದಲ್ಲಿ  2. ಚತುರ್ಥ ಸಮಾಧಿ ಸಿದ್ಧಿಯಾದಾಗ 3. ನಿರೋಧ ಪ್ರಾಪ್ತಿಯಾದಾಗ.
ಈ ಹದಿನಾರು ಆಧಾರಗಳ ಅನಾಪಾನಸತಿಯು 12 ಹಂತಗಳು ಸಮಥ ಮತ್ತು ವಿಪಶ್ಶನವನ್ನು ಹೊಂದಿವೆ ಮತ್ತು ಕೊನೆಯ ನಾಲ್ಕು ಹಂತಗಳು ವಿಪಶ್ಶನ ಧ್ಯಾನ ಮಾತ್ರ ಹೊಂದಿವೆ.
ಭಿಕ್ಷುಗಳೇ, ಅನಾಪಾನಸತಿಯನ್ನು ಬೆಳವಣಿಗೆ ಮಾಡಿದರೆ ಮತ್ತು ವೃದ್ಧಿಗೊಳಿಸಿದರೆ ಮಹತ್ಛಲವನ್ನು ನೀಡುತ್ತದೆ ಮತ್ತು ಮಹತ್ ಲಾಭವನ್ನು ನೀಡುತ್ತದೆ. ಯಾವಾಗ ಅನಾಪಾನಸತಿಯು ಅಭಿವೃದ್ಧಿಗೊಳ್ಳುತ್ತದೋ ಮತ್ತು ಬೆಳವಣಿಗೆ ಆಗುವುದೋ ಆಗ ಅದು ನಾಲ್ಕು ಸತಿಪಟ್ಟಾನವನ್ನು ಪೂರ್ಣಗೊಳಿಸುತ್ತದೆ. ಯಾವಾಗ ನಾಲ್ಕು ಸತಿಪಟ್ಟಾನವನ್ನು ಅಭಿವೃದ್ಧಿಗೊಳಿಸಿ ಬೆಳವಣಿಗೆ ಮಾಡುವಿರೋ ಆಗ ಅದು 7 ಬೋಧಿ ಅಂಗಗಳನ್ನು ಬೆಳವಣಿಗೆ ಮಾಡುತ್ತದೆ ಮತ್ತು ಅಭಿವೃದ್ಧಿಗೊಳಿಸುತ್ತದೆ. ಯಾವಾಗ 7 ಬೋಧಿ ಅಂಗಗಳನ್ನು ಬೆಳವಣಿಗೆ ಮತ್ತು ಅಭಿವೃದ್ಧಿಗೊಳಿಸುತ್ತವೆಯೋ ಅವು ನಿಜವಾದ ವಿದ್ಯೆಯನ್ನು ಮತ್ತು ವಿಮುಕ್ತಿಯನ್ನು ನೀಡುತ್ತದೆ.

4. ಸ್ಮೃತಿಯ ಸ್ಥಾಪನೆ :

ಹೇಗೆಂದರೆ ಸ್ಮೃತಿಯ ಸ್ಥಾಪನೆಯು ದೀರ್ಘ ಉಸಿರಾಟದ ಗಮನಿಸುವಿಕೆಯಿಂದ ಪ್ರಾರಂಭವಾಯಿತು. ಇದೇ ಕಾಯಾನುಪಶ್ಶನವಾಗಿದೆ. ನಂತರ ಆನಂದ ಮತ್ತು ಶಾಂತತೆಗಳ ಅನುಭವಗಳಿಂದ ಉಸಿರಾಟ ಸಾಗಿತು - ಇದೇ ವೇದಾನುಪಶ್ಶನವಾಗಿದೆ. ನಂತರ ಚಿತ್ತವನ್ನು ಅರಿಯುವಿಕೆ ಮತ್ತು ಪುನರ್ ಅವಲೋಕನ ಇದೇ ಚಿತ್ತಾನುಪಶ್ಶನವಾಗಿದೆ.
ನಂತರ ಅನಿತ್ಯತೆಯನ್ನು ಇಡೀ ಉಸಿರಾಟದ ಧ್ಯಾನಗಳಲ್ಲಿ ಗಮನಿಸುವಿಕೆಯು ಇದೇ ಧಮ್ಮಾನುಪಾಶ್ಶನವಾಗಿದೆ. ಈ ರೀತಿ ಅನಾಪಾನ ಸ್ಮೃತಿಯಿಂದ 4 ಸತಿಪಟ್ಟಾನ ಸ್ಥಾಪಿತವಾಗುತ್ತದೆ.

ಸಪ್ತಬೋಧಿ ಅಂಗಗಳು :

ಇಲ್ಲಿ ಏಳು ಬೋದಿ ಅಂಗಗಳು ನಾಲ್ಕು ಸತಿ ಪಟ್ಟಾನವನ್ನು ಪೂರ್ಣಗೊಳಿಸುವುದರಿಂದ ಸ್ಥಾಪಿತವಾಗುತ್ತದೆ.
1. ಸ್ಮೃತಿಸಂಭೋಧಿ ಅಂಗ : ಹೇಗೆಂದರೆ ಭಿಕ್ಷು ನಾಲ್ಕು ಎಚ್ಚರಿಕೆಗಳ ಪ್ರತಿಷ್ಠಾನಗಳನ್ನು ಸ್ಥಾಪಿಸುವಾಗ ಅತ್ಯಂತ ಜಾಗರೂಕನಾಗಿರುತ್ತಾನೆ, ಧ್ವಂದ್ವರಹಿತನಾಗಿರುತ್ತಾನೆ, ಎಚ್ಚರಿಕೆಯಿಂದ ಕೂಡಿರುತ್ತಾನೆ.
2. ಧಮ್ಮವಿಚಯ ಸಂಬೋಧಿ ಅಂಗ : ಹಾಗಿದ್ದು ಆತನು ದುಃಖವನ್ನು ಅನಿತ್ಯವನ್ನು, ಅನಾತ್ಮವನ್ನು ಸಂಶೋಧಿಸುತ್ತಾನೆ.
3. ವೀರ್ಯ ಸಂಬೋಧಿ ಅಂಗ : ನಂತರ ಗುರಿಪ್ರಾಪ್ತಿಗಾಗಿ ದೃಢವಾಗಿ ಪರಿಶ್ರಮಪಡುತ್ತಾನೆ.
4. ಪೀತಿ ಸಂಭೋಧಿ ಅಂಗ : ಆ ರೀತಿ ಪರಿಶ್ರಮ ಪಡುವಾಗ ಆತನಲ್ಲಿ ಆನಂದ ಉಕ್ಕುತ್ತದೆ.
5. ಪಸ್ಸದಿ ಸಂಭೋಧಿ ಅಂಗ : ಅನಂದದಿಂದ ಆತನಲ್ಲಿ ಪ್ರಶಾಂತತೆ ಆವರಿಸಿ ದೇಹ ಮತ್ತು ಮನವನ್ನು ಶಾಂತಗೊಳಿಸುತ್ತದೆ.
6. ಸಮಾಧಿ ಸಂಬೋಧಿ ಅಂಗ : ದೇಹದ ಶಾಂತತೆ ಮತ್ತು ಮನದ ಸ್ಥೀಮಿತವೆ (ಸ್ಥಬ್ದತೆ) ಸಮಾಧಿಯನ್ನುಂಟು ಮಾಡುತ್ತದೆ.
7. ಉಪೇಕ್ಖಾ ಬೋಧಿ ಅಂಗ : ಸಮಾಧಿಯಿಂದ ಉಪೇಕ್ಷಾ ಭಾವನೆ (ಸಮಚಿತ್ತತೆ) ಸ್ಥಾಪಿತವಾಗುತ್ತದೆ.
ಹೀಗಾಗಿ ನಾಲ್ಕು ಸತಿಪಟ್ಟಾನದಿಂದ ಏಳು ಬೋಧಿ ಅಂಗಗಳು ಪೂರ್ಣವಾಗುತ್ತದೆ.
ಇಲ್ಲಿಗೆ ಸಂಕ್ಷಿಪ್ತ ಅನಾಪಾನಸತಿ ಮುಗಿಯಿತು.


ಸತಿಪಟ್ಠಾನ ಸುತ್ತದಲ್ಲಿ ಅನಾಪಾನಾಸತಿಯ ವಿವರ :

ಭಿಕ್ಷುವು ಅರಣ್ಯದಲ್ಲಿ ಹೋಗಿ ಅಥವಾ ಮರದ ಬುಡದಲ್ಲಿ ಕುಳಿತು ಅಥವಾ ಏಕಾಂತ ಸ್ಥಳದಲ್ಲಿ ಪದ್ಮಾಸನದಲ್ಲಿ ಆಸೀನನಾಗಿ ದೇಹವನ್ನು ನೇರಕ್ಕೆ ಇಟ್ಟು ಜಾಗರೂಕತೆಯಲ್ಲಿ ತಲ್ಲೀನನಾಗುತ್ತಾನೆ.
ಅರಿವಿನಿಂದ ಉಶ್ವಾಸ (ಉಸಿರನ್ನು ತೆಗೆದುಕೊಳ್ಳುವುದು) ಮಾಡುತ್ತಾನೆ. ಅರಿವಿನಿಂದ ನಿಶ್ವಾಸ (ಉಸಿರನ್ನು ಹೊರಕ್ಕೆ ಬಿಡುವುದು) ಮಾಡುತ್ತಾನೆ. ಅವನಿಗೆ ಉದ್ದವಾದ ಉಸಿರನ್ನು ಉಶ್ವಾಸಿಸುವಾಗ ನಾನು ದೀರ್ಘವಾದ ಉಶ್ವಾಸ ಮಾಡುತ್ತಿದ್ದೇನೆ ಎಂಬ ಅರಿವಿರುತ್ತದೆ. ಹಾಗೆಯೇ ಉದ್ದವಾದ ಉಸಿರನ್ನು ನಿಶ್ವಾಸಿಸುವಾಗ ನಾನು ದೀರ್ಘವಾದ ಉಸಿರನ್ನು ನಿಶ್ವಾಸ ಮಾಡುತ್ತಿದ್ದೇನೆ ಎಂಬ ಅರಿವು ಇರುತ್ತದೆ.
ಅದರಂತೆಯೇ ಕಿರಿದಾದ ಉಶ್ವಾಸ ಮಾಡುತ್ತಿರುವಾಗ ನಾನು ಕಿರಿದಾದ ಉಶ್ವಾಸ ಮಾಡುತ್ತಿರುವೆ ಎಂಬ ಅರಿವಿರುತ್ತದೆ. ಹಾಗೆಯೇ ಕಿರಿದಾದ ನಿಶ್ವಾಸ ಮಾಡುತ್ತಿರುವಾಗ ನಾನು ಕಿರಿದಾಗಿ ನಿಶ್ವಾಸ ಮಾಡುತ್ತಿರುವೆ ಎಂಬ ಅರಿವಿರುತ್ತದೆ.
ದೇಹದಲ್ಲಿ ಇಡೀ ಉಸಿರಾಟದ ಪ್ರಕ್ರಿಯೆಯನ್ನು ಅನುಭವಿಸುತ್ತಾ ಉಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನನ್ನು ಸುಶಿಕ್ಷಿತಗೊಳಿಸುತ್ತಿರುತ್ತಾನೆ.
ಉಸಿರಾಟದ ಪ್ರಕ್ರಿಯೆಯನ್ನು (ದೇಹವನ್ನು) ಶಾಂತಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನನ್ನು ಸುಶಿಕ್ಷಿತಗೊಳಿಸುತ್ತಾನೆ. ಉಸಿರಾಟದ ಕಾಯವನ್ನು ಪ್ರಕ್ರಿಯೆಯನ್ನು ಶಾಂತಗೊಳಿಸುತ್ತಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನನ್ನು ಸುಶಿಕ್ಷಿತಗೊಳಿಸುತ್ತಾನೆ.
ಹೇಗೆ ಕುಶಲಿಯಾದ ಚರಕಿ ಕೆಲಸದವ ಅಥವಾ ಆತನ ಶುಶುಕ್ಷು ಉದ್ದವಾಗಿ ತಿರುಗಿಸುವಾಗ ನಾನು ದೀರ್ಘವಾಗಿ ತಿರುಗಿಸುತ್ತಿದ್ದೇನೆ. ಹಾಗೆಯೇ ಕಿರಿದಾಗಿ ತಿರುಗಿಸುವಾಗ ನಾನು ಕಿರುವಾಗಿ ತಿರುಗಿಸುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ. ಅದರಂತೆಯೇ ಭಿಕ್ಷುವು ದೀರ್ಘವಾಗಿ ಉಶ್ವಾಸಿಸುವಾಗ ನಾನು ದೀರ್ಘವಾಗಿ ಉಸಿರಾಡುತ್ತಿದ್ದೇನೆ ಎಂದು ಕಿರಿದಾಗಿ ನಿಶ್ವಾಸಿಸುವಾಗ ನಾನು ಕಿರಿದಾಗಿ ನಿಶ್ವಾಸಿಸುತ್ತಿರುವೆ ಎಂದು... ಆತನು ತನ್ನನ್ನು ಸುಶಿಕ್ಷಿತಗೊಳಿಸುತ್ತಾನೆ.
ಹೀಗೆ ಆತನು ಕಾಯಾನುಪಸ್ಸಿಯಾಗಿ ಆಂತರಿಕವಾಗಿ ಅಥವಾ ಬಾಹ್ಯವಾಗಿ ಅಥವಾ ಆಂತರಿಕ ಮತ್ತು ಬಾಹ್ಯಗಳೆರಡರಲ್ಲೂ ಸಹಾ ಆತನು ಉಸಿರಾಟದಲ್ಲಿ ಉದಯಿಸುವ ಸ್ವಭಾವ (ಸಮುದಯ ಧಮ್ಮ) ಅರಿಯುತ್ತಾನೆ. ಹಾಗೆಯೇ ಅಳಿಯುವಿಕೆಯ ಸ್ವಭಾವವನ್ನು (ವಯ ಧಮ್ಮ) ಅರಿಯುತ್ತಾನೆ. ಹಾಗೆಯೇ ಉದಯವಯ (ಉದಯಿಸುವಿಕೆಯ ಮತ್ತು ಅಳಿಯುವಿಕೆಯ ಸ್ವಭಾವ)ವನ್ನು ಅರಿಯುತ್ತಾನೆ.
ಆಗ ಆತನಲ್ಲಿ ಇಲ್ಲಿ ದೇಹವಷ್ಟೇ ಇದೆ ಎಂಬ ಪ್ರಜ್ಞಾವುಂಟಾಗುತ್ತದೆ. ಪ್ರಜ್ಞಾವಿಕಾಸಕ್ಕಾಗಿ, ಕುಡಿಯುವಾಗ ಆಗಲಿ, ಅಗಿಯುವಾಗ ಆಗಲಿ, ಜಾಗರೂಕತೆಯ ವಿಕಾಸಕ್ಕಾಗಿ ಆತನು ಲೋಕದ ಯಾವುದಕ್ಕೂ ಅಂಟದೆ ಸ್ವತಂತ್ರವಾಗಿ ಜೀವಿಸುತ್ತಾನೆ.
ಹೀಗೆ ಭಿಕ್ಷುವು ಕಾಯಾನುಪಸ್ಸಿಯಾಗಿ ಜೀವಿಸುತ್ತಾನೆ.

ಆನಾಪಾನಸತಿ ಸುತ್ತ (ಮಜ್ಜಿಮನಿಕಾಯ 118ನೇ ಸುತ್ತ) ದಲ್ಲಿನ ವಿವರ:

ಆದರೆ ಮಜ್ಜಿಮನಿಕಾಯದ ಸುತ್ತದಲ್ಲಿ ಅನಾಪಾನಾಸತಿಯು ಇನ್ನೂ ವಿವರವಾಗಿ ಬೋಧಿಸಲಾಗಿದೆ.
.... ಈಗ ಹೇಗೆ ಆನಾಪಾನಸತಿಯನ್ನು ವೃದ್ಧಿಗೊಳಿಸಿದರೆ ಮತ್ತು ಅನುಸರಿಸಿದರೆ ಮಹತ್ತರ ಲಾಭವಾಗುತ್ತದೆ. ಮಹತ್ತರ ಫಲವು ಸಿಗುತ್ತದೆ?
ಇಲ್ಲಿ ಭಿಕ್ಷುವು ಅರಣ್ಯದಲ್ಲಿ, ಮರದ ಬುಡದಲ್ಲಿ ಅಥವ ಶೂನ್ಯಗೃಹದಲ್ಲಿ, ಪದ್ಮಾಸನದಲ್ಲಿ ಅಸೀನನಾಗಿ, ತನ್ನ ದೇಹವನ್ನು ನೇರವಾಗಿಟ್ಟುಕೊಂಡು ಮತ್ತು ಸದಾ ಉಶ್ವಾಸ ಮತ್ತು ನಿಶ್ವಾಸದಲ್ಲಿಯೇ ಜಾಗರೂಕತೆಯನ್ನು ಸ್ಥಾಪಿಸಿ ಸಾಧನೆ ಮಾಡುತ್ತಿರುತ್ತಾನೆ.
1. ಉಸಿರಾಟವು ದೀರ್ಘವಾಗಿದ್ದರೆ ನಾನು ದೀರ್ಘವಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ. 
2. ಉಸಿರಾಟವು ಕಿರಿದಾಗಿದ್ದರೆ ನಾನು ಕಿರಿದಾದ ಉಸಿರನ್ನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅರಿಯುತ್ತಾನೆ. 
3. ಇಡೀ ಉಸಿರಿನ ಕಾಯವನ್ನು ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
4. ಉಸಿರು ಕಾಯದ ಸಂಖಾರಗಳನ್ನು (ಚಟುವಟಿಕೆ) ಶಾಂತಗೊಳಿಸಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ. (ಇವಿಷ್ಟು ಅನುಪಾನ ಕಾಯನುಪಸ್ಸನವಾಗಿದೆ).
5. ಆನಂದವನ್ನು (ಪ್ರೀತಿ) ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
6. ಶಾಂತತೆಯನ್ನು (ಸುಖ) ಅನುಭವಿಸಿದವನಾಗಿ ನಾನು ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನಗೆ ತಾನೇ ಸುಶಿಕ್ಷಣ ಪಡೆಯುತ್ತಾನೆ.
7. ಚಿತ್ತದ ಚಟುವಟಿಕೆಗಳನ್ನೆಲ್ಲಾ ಅನುಭವಿಸಿ ನಾನು ಉಶ್ವಾಸಿಸುತ್ತಿರುವೆ ಅಥವಾ ನಿಶ್ವಾಸಿಸುತ್ತಿರುವೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
8. ಚಿತ್ತದ ಚಟುವಟಿಕೆಗಳನ್ನೆಲ್ಲಾ (ಸಂಖಾರಗಳನ್ನು) ಶಾಂತಗೊಳಿಸಿದವನಾಗಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ವೇದನಾನುಪಸ್ಸನವಾಗಿದೆ).
9. ಚಿತ್ತವನ್ನು ಅನುಭವಿಸಿದವನಾಗಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಅತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
10. ಚಿತ್ತವನ್ನು ಸಂತೃಪ್ತಿಗೊಳಿಸುತ್ತಾ (ಶಾಂತಗೊಳಿಸುತ್ತಾ) ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
11. ಚಿತ್ತವನ್ನು ಸ್ಥಿರ (ಏಕಾಗ್ರ)ಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
12. ಚಿತ್ತವನ್ನು ವಿಮೋಚನೆಗೊಳಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಚಿತ್ತಾನುಪಸ್ಸನವಾಗಿದೆ).
13. ಅನಿತ್ಯತೆಯನ್ನು ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
14. ವಿರಾಗವನ್ನು ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
15. ನಿರೋಧವನ್ನು ಗಮನಿಸಿ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ.
16. ತ್ಯಜಿಸುವಿಕೆ (ಪಟಿನಸ್ಸ) ಗಮನಿಸುತ್ತಾ ಉಶ್ವಾಸಿಸುತ್ತಿದ್ದೇನೆ ಅಥವಾ ನಿಶ್ವಾಸಿಸುತ್ತಿದ್ದೇನೆ ಎಂದು ಆತನು ತನ್ನಲ್ಲಿ ಸುಶಿಕ್ಷಣ ಪಡೆಯುತ್ತಿರುತ್ತಾನೆ. (ಇವಿಷ್ಟು ಅನಾಪಾನಾ ಧಮ್ಮಾನುಪಸ್ಸನವಾಗಿದೆ).
ಈ ರೀತಿಯಾಗಿ ಆನಾಪಾನಾಸತಿಯನ್ನು ವೃದ್ಧಿಗೊಳಿಸಿದರೆ ಮತ್ತು ಪಾಲಿಸಿದರೆ ಮಹತ್ಪಲ ದೊರೆಯುತ್ತದೆ ಮತ್ತು ಮಹತ್ ಲಾಭ ದೊರೆಯುತ್ತದೆ. ಆಗ ಕೊನೆಯ ಒಳ ಉಸಿರು ಮತ್ತು ಹೊರ ಉಸಿರುಗಳು ಜಾಗ್ರತೆ ಇರುವಾಗಲೇ ನಿಲ್ಲುತ್ತದೆ.
ಭಿಕ್ಷುಗಳೇ ಆನಾಪಾನಾಸತಿಯನ್ನು ಬೆಳವಣಿಗೆ ಮಾಡಿದರೆ ಮತ್ತು ವೃದ್ಧಿಗೊಳಿಸಿದರೆ ಮಹತ್ಫಲವನ್ನು ನೀಡುತ್ತದೆ ಮತ್ತು ಮಹತ್ಲಾಭವನ್ನು ನೀಡುತ್ತದೆ. ಯಾವಾಗ ಆನಾಪನಾಸತಿಯು ಅಭಿವೃದ್ಧಿಗೊಳ್ಳುತ್ತದೋ ಮತ್ತು ಬೆಳವಣಿಗೆ ಆಗುವುದೋ ಆಗ ಅದು ನಾಲ್ಕು ಸತಿಪಟ್ಟಾನಗಳನ್ನು ಪೂರ್ಣಗೊಳಿಸುತ್ತದೆ. ಯಾವಾಗ ನಾಲ್ಕು ಸತಿಪಟ್ಟಾನಗಳನ್ನು ಅಭಿವೃದ್ಧಿಗೊಳಿಸಿ ಬೆಳವಣಿಗೆ ಮಾಡುವಿರೋ ಆಗ ಅದು ಏಳು ಬೋಧಿ ಅಂಗಗಳ ಬೆಳವಣಿಗೆ ಮೂಡುತ್ತದೆ ಮತ್ತು ಅಭಿವೃದ್ಧಿಗೊಳಿಸುತ್ತದೆ. ಯಾವಾಗ ಸಪ್ತಬೋಧಿ ಅಂಗಗಳನ್ನು ಬೆಳವಣಿಗೆ ಮತ್ತು ಅಭಿವೃದ್ಧಿಗೊಳಿಸುತ್ತವೆಯೋ ಆಗ ಅವು ನಿಜವಾದ ವಿದ್ಯೆ (ಬೋಧಿ) ಮತ್ತು ನಿಜವಾದ ವಿಮುಕ್ತಿ (ನಿಬ್ಬಾಣ) ನೀಡುತ್ತವೆ.

ಸಮಾಧಿಯ ಲೋಕೋತ್ತರ ಪ್ರಯಾಣದ ವಿಸ್ತೃತ ವಿವರಣೆ :

ಮನಸ್ಸಿನ ಏಕತೆಯೇ ಸಮಾಧಿ, ನಾಲ್ಕು ಸತಿಪಟ್ಠಾನವೇ ಧ್ಯಾನದ ವಿಷಯಗಳು, ನಾಲ್ಕು ಸಮ್ಮಾ ಪ್ರಯತ್ನಗಳೇ ಅವುಗಳ ಸಲಕರಣೆಗಳು. ಇವುಗಳ ನಿರಂತರ ಅಭ್ಯಾಸದ ವೃದ್ಧಿಯೇ ಸಮಾಧಿ ವೃದ್ಧಿ.
ಆನಾಪಾನಾ ಝಾನದ ಆರಂಭ :
ಇಲ್ಲಿ ಸಾಧಕ ಅಥವಾ ಭಿಕ್ಷುವು, ಅರಣ್ಯಕ್ಕೂ ಅಥವಾ ವೃಕ್ಷ ಮೂಲದಲ್ಲೋ ಅಥವಾ ಶೂನ್ಯಗೃಹದಲ್ಲೋ ಪದ್ಮಾಸನದಲ್ಲಿ ಕುಳಿತುಕೊಳ್ಳುತ್ತಾನೆ ಮತ್ತು ತನ್ನ ಶರೀರವನ್ನು ನೇರವಾಗಿಡುತ್ತಾನೆ ಮತ್ತು ಜಾಗರೂಕತೆಯನ್ನು ತನ್ನ ಮುಂದೆ ಸ್ಥಾಪಿಸುತ್ತಾನೆ. ಸದಾ ಒಳ ಉಸಿರು ಅಂದರೆ ಇಲ್ಲಿ ಒಂದು ನಿಗದಿತ ಕಾಲದಲ್ಲಿ ಅಥವಾ ಭಿಕ್ಷುವಾಗಿದ್ದರೆ ಸದಾಕಾಲ ಅಭ್ಯಸಿಸಬೇಕಾಗುತ್ತದೆ. ಆಗಿನ ಕಾಲದಲ್ಲಿ ಅರಣ್ಯವು ಏಕಾಂತ ಸ್ಥಳವಾಗಿದ್ದರಿಂದ ಅದೇ ವಿವರಣೆ ಇಲ್ಲಿ ನೀಡಿದೆ. ವೃಕ್ಷಮೂಲ ಅಥವಾ ಮರದ ಬುಡವು ಚಳಿ, ಮಳೆ ಮತ್ತು ಬಿಸಿಲಿಗೆ ರಕ್ಷಣೆ ನೀಡುವುದರಿಂದ ಅದನ್ನು ಆಯ್ಕೆ ಮಾಡಬಹುದು ಅಥವಾ ಆಧುನಿಕ ಕಾಲದಂತೆ ಧ್ಯಾನಮಂದಿರ ಅಥವಾ ಶೂನ್ಯಗೃಹ ಅಂದರೆ ಶಬ್ದವಿಲ್ಲದ, ಬೇರೆ ವ್ಯಕ್ತಿಗಳಿಲ್ಲದ ಕಡೆ ಧ್ಯಾನದಲ್ಲಿ ನೆಲೆಸಿ ಸಾಧಿಸಬೇಕಾಗುತ್ತದೆ.
ಆತನು ಪದ್ಮಾಸನ ಅಥವಾ ವಜ್ರಾಸನ ಅಥವಾ ಸುಖಾಸನದಲ್ಲಿ ಅಥವಾ ಅರ್ಧ ಪದ್ಮಾಸನದಲ್ಲಿ ಕುಳಿತು ಬೆನ್ನನ್ನು ಮತ್ತು ಕತ್ತನ್ನು ಒಟ್ಟಾರೆ ಶರೀರದ ಭಂಗಿ ನೇರವಾಗಿಟ್ಟುಕೊಂಡು ಕುಳಿತು ತನ್ನ ಗಮನವೆಲ್ಲಾ, ತನ್ನ ಮನಸ್ಸನ್ನು ಉಸಿರಿನಲ್ಲೇ ಅಂದರೆ ಒಳ ಉಸಿರು ಮತ್ತು ಹೊರ ಉಸಿರಿನಲ್ಲೇ ಕೇಂದ್ರೀಕೃತಗೊಳಿಸಿ ಜಾಗ್ರತೆಯಲ್ಲಿರಬೇಕು. ಇಲ್ಲಿ ಉಸಿರನ್ನು ಹಿಡಿಯುವುದಾಗಲಿ (ಕುಂಭಕ) ಅಥವಾ ಉಸಿರನ್ನು ಬಿಟ್ಟು ಉಸಿರನ್ನು ಹಿಡಿಯುವುದಾಗಲಿ (ಬಾಹ್ಯ ಕುಂಭಕ) ಮಾಡಬಾರದು. ಅಥವಾ ಒಂದು ಮೂಗಿನ ಹೊಳ್ಳೆಯಿಂದ ಉಸಿರು ತೆಗೆಯುವುದು, ಬಿಡುವುದು ಇತ್ಯಾದಿ. ಉಸಿರಾಟದ ವ್ಯಾಯಾಮಗಳನ್ನು ಮಾಡಬೇಡಿ. ಏಕೆಂದರೆ ಇದು ಉಸಿರಾಟದ ವ್ಯಾಯಾಮವಲ್ಲ, ಬದಲಾಗಿ ಉಸಿರಾಟದ ಧ್ಯಾನವಾಗಿದೆ. ಹಾಗೆಯೇ ಬಲವಂತವಾಗಿ ಉಸಿರಾಟ ಮಾಡುವುದು ಬೇಡ. ಸಹಜ ಸ್ಥಿತಿಯಲ್ಲೇ ಉಸಿರಾಟ ಹೇಗೆ ಒಳಹೋಗುವುದು ಅಥವಾ ಹೊರಬರುತ್ತದೋ ಅದನ್ನು ಹಾಗೆಯೇ ವೀಕ್ಷಿಸಿ, ಅನುಭವಿಸಿ, ಜಾಗ್ರತೆಯಿಂದ ಗಮನಿಸಿ. ಹಾಗೆಯೇ ಉಸಿರಿನ ಜೊತೆಗೆ ರೂಪವನ್ನು (ರೂಪ/ವಿಗ್ರಹ/ಭಾವಚಿತ್ರ) ಕಲ್ಪಿಸಬೇಡಿ. ಹಾಗೆಯೇ ಜಪವನ್ನು ಮಾಡಬೇಡಿ. ಹಾಗೆ ಮಾಡಿದಾಗ ಅದು ಉಸಿರಾಟದ ಧ್ಯಾನವಾಗದೆ ಕಸಿನಾ ಅಥವಾ ಜಪಧ್ಯಾನವಾಗುತ್ತದೆ. ಆಗ ನೀವು ಅನಾಪಾನಾಸತಿಯ ಅತ್ಯುನ್ನತ ಲಾಭದಿಂದ ವಂಚಿತರಾಗುತ್ತೀರಿ. ಆದ್ದರಿಂದ ಕಡ್ಡಾಯವಾಗಿ ರೂಪ ಅಥವಾ ನಾಮ (ಜಪ) ಸೇರಿಸಬೇಡಿ.
ಉಸಿರಾಟವು ಸಹಜವಾಗಿ ನಡೆಯುತ್ತಿರುತ್ತದೆ. ನೀವು ಸಹಾ ಸಹಜವಾಗಿಯೇ ಅದನ್ನು ಗಮನಿಸುತ್ತಿರಿ. ಮನಸ್ಸಿನಲ್ಲಿ, ಉಸಿರಾಟದಲ್ಲೇ ಕೇಂದ್ರೀಕೃತಗೊಳಿಸಿ. ಉಸಿರಾಟದಲ್ಲೇ ಹರಿಸಿರಿ. ಏಕಾಗ್ರಗೊಳಿಸಿರಿ, ನಿಮ್ಮ ಮನಸ್ಸು ಚದುರದಿರಲಿ, ಚೆಲ್ಲಾಪಿಲ್ಲಿಯಾಗಿ ಚಲಿಸದಿರಲಿ. ಬೇರೆ ವಿಷಯದ ಕಡೆ ಹರಿಯದಿರಲಿ, ಯಾವುದರಿಂದಲೂ ಕ್ಷೊಭೆಗೆ ಒಳಗಾಗಬಾರದು. ಚದುರದ, ಅಬಾಧಿತವಾದ ಏಕಾಗ್ರತೆಯನ್ನು ಉಸಿರಾಟದ ಮೇಲೆ ಹರಿಸಿ, ಮಿಕ್ಕೆಲ್ಲಾ ವಿಷಯದಿಂದ ನಿಮ್ಮ ಮನಸ್ಸು ವಿಮುಖವಾಗಲಿ, ಹಾಗೆಯೇ ಉಸಿರಾಟದಲ್ಲಿ ನಿಮ್ಮ ಮನಸ್ಸು ಒಮ್ಮುಖವಾಗಿರಲಿ.

ಆನಾಪಾನಾ ಸಮಥ ಧ್ಯಾನ

ಆನಾಪಾನಾಕ್ಕೆ ಎಂಟು ಮೆಟ್ಟಿಲುಗಳು :
ಈ ಎಂಟು ಮೆಟ್ಟಿಲುಗಳಲ್ಲಿ ನಾವು ಇಡೀ ಸಾಧನೆಯನ್ನೇ ಅಡಕಗೊಳಿಸಬಹುದು. ಇದರಲ್ಲಿ ಆದಿಯಿಂದ ಅಂತ್ಯದವರೆಗಿನ ಮಾಹಿತಿಯಿದೆ. ಇದರಿಂದಾಗಿ ಧ್ಯಾನ ಸ್ಥಿತಿಗಳಲ್ಲದೆ ಆರಿಯ ಮಾರ್ಗಫಲವು ಸಹಾ ಸಿಗುತ್ತದೆ. ಮೊದಲ ನಾಲ್ಕು ಮೆಟ್ಟಿಲುಗಳು ಝಾನ ಸ್ಥಿತಿಗೆ ಕೊಂಡೊಯ್ಯುತ್ತದೆ ನಂತರದ ನಾಲ್ಕು ಸ್ಥಿತಿಗಳು ಅರಿಯಮಾರ್ಗ ಫಲವನ್ನು ನೀಡುತ್ತದೆ. ಅವು ಹೀಗಿವೆ :

ಸಮಥಾ ಅನಾಪಾನ ಸತಿ

1. ಎಣಿಕೆಯ ಸಾಧನೆ (ಗಣನ) : ಕೇವಲ ಉಸಿರಾಟದ ಎಣಿಕೆ
2. ಸಂಬಂಧಿಸುವ ಸಾಧನೆ (ಅನುಬಂಧನ) : ಉಸಿರಾಟದ ಗಮನ
3. ಸಂಪರ್ಕ ಸಾಧನೆ (ಪುಸನಾ) : ಉಸಿರಾಟದ ಸ್ಪಶರ್ಿಸುವಿಕೆ
4. ಸ್ಥಿರಗೊಳ್ಳುವ ಸಾಧನೆ (ಥಾಪನ) : ಧ್ಯಾನ ಪ್ರಾಪ್ತಿ

ಅನಪಾನಾ ವಿಪಶ್ಶನಾ

5. ಅರಿಯುವಿಕೆಯ ಸಾಧನೆ (ಸಲ್ಲಕ್ಖಣ) : ವಿಪಶ್ಶನದ ಆರಂಭ
6. ವಿಮುಖವಾಗುವ ಸಾಧನೆ (ವಿವಟ್ಠನಾ) : ಮಾರ್ಗದಲ್ಲಿ ನೆಲಸುವಿಕೆ
7. ಪರಿಶುದ್ಧಿಯಾಗುವ ಸಾಧನೆ (ಪರಿಶುದ್ಧಿ) : ಫಲಪ್ರಾಪ್ತಿ
8. ಪುನರ್ ಅವಲೋಕನ ಸಾಧನೆ (ಪಟಿಪಸ್ಸನಾ) : ಪುನರ್ ವೀಕ್ಷಣೆ

ಅನಾಪಾನ ಸಮಥ ಧ್ಯಾನ :

1. ಎಣಿಕೆ (ಗಣನೆ) : ಯೋಚನೆಗಳ ತಡೆಯನ್ನು ಮೀರಲು ಸುಲಭವಾದ ಕ್ರಮವಿದು.  ಇಲ್ಲಿ ಸಾಧಕನು ಉಸಿರಾಟವು ಸ್ಪರ್ಶವಾದೊಡನೆಯೆ ಒಂದು ಎಂದು ಎಣಿಕೆ ಮಾಡುತ್ತಾನೆ. ಹೀಗೆಯೇ ಪ್ರತಿ ಉಸಿರಾಟದ ಸ್ಪರ್ಶದಲ್ಲಿ ಎಣಿಕೆ ಮಾಡುತ್ತಾನೆ. ಆದರೆ ಸಂಖ್ಯೆ 10ನ್ನು ಮೀರಬಾರದು. ಹಾಗಾದರೆ ಅನಾಪಾನಾ ಸ್ಮೃತಿಯು ಭಂಗವಾಗುತ್ತದೆ. ಉಸಿರಾಟದ ಧ್ಯಾನದಲ್ಲಿ ಹಿಡಿತ ಸಿಕ್ಕೊಡನೆ ಆತನು ಎಣಿಸುವುದನ್ನು ನಿಲ್ಲಿಸಬೇಕು. ಕೇವಲ ಉಸಿರಾಟದಲ್ಲಿ ಗಮನವನ್ನು ಕೇಂದ್ರೀಕರಿಸಬೇಕು.
2. ಸಂಬಂಧಿಸುವ ಸಾಧನೆ (ಅನುಬಂಧನ) : ಅನುಬಂಧನವೆಂದರೆ ಉಸಿರಾಟದಲ್ಲಿ ತಡೆರಹಿತ ಗಮನ ನೀಡುವಿಕೆ ಆಗಿದೆ. ಇಲ್ಲಿ ಒಳ ಉಸಿರಾಟವು ಮೂಗಿನಿಂದ ಆರಂಭವಾಗುತ್ತದೆ. ಹೃದಯದಲ್ಲಿ ಇದರ ಮಧ್ಯಾವಸ್ಥೆ ಇರುತ್ತದೆ. ಕಿಬ್ಬೊಟ್ಟೆಯಲ್ಲಿ ಇದರ ಅಂತ್ಯವಾಗುತ್ತದೆ. ಹಾಗೆಯೇ ಹೊರ ಉಸಿರಾಟವು ಕಿಬ್ಬೊಟ್ಟೆಯಿಂದ ಆರಂಭವಾಗಿ, ಹೃದಯದಲ್ಲಿ ಮಧ್ಯಾವಸ್ಥೆ ಇದ್ದು ಮೂಗಿನಲ್ಲಿ ಕೊನೆಗೊಳ್ಳುತ್ತದೆ. ಆದರೆ ಈ ಎಲ್ಲಾ ಅವಸ್ಥೆಯಲ್ಲಿ ಕೇಂದ್ರೀಕೃತಗೊಳಿಸಿದರೆ ಮನವು ಚದುರಿಹೋಗುತ್ತದೆ.
ಆಗ ಮನಸ್ಸು ಕ್ಷೊಭೆಗೆ ಒಳಗಾಗುತ್ತದೆ. ಆದ್ದರಿಂದ ಎಲ್ಲಿ ಉಸಿರಾಟ ಸ್ಪರ್ಶವಾಗುತ್ತದೋ ಅಲ್ಲೇ ಎಣಿಕೆ ಮಾಡಬೇಕು. ಹಾಗೆಯೇ ಅನುಬಂಧವು ಸಹಾ ಅದೇ ಸ್ಥಳದಲ್ಲಿ ಆಗಬೇಕು. ಆಗ ಮನಸ್ಸು ಏಕಾಗ್ರವಾಗಿರುತ್ತದೆ. ಅಂದರೆ ಮೂಗಿನ ತುದಿಯಲ್ಲಿ ಗಮನ ಕೇಂದ್ರೀಕರಿಸಬೇಕು.
3. ಸಂಪರ್ಕ ಸಾಧನೆ (ಪುಸಣ) : ಇಲ್ಲಿ ಉಸಿರಾಟದ ಸ್ಪರ್ಶವಾಗುವ ಕಡೆ ಸಂಪರ್ಕ ಏರ್ಪಟ್ಟಿರಬೇಕು. ಅಂದರೆ ಮೂಗಿನ ತುದಿಯಲ್ಲಿ ಅಥವಾ ಮೇಲ್ತುಟಿಯ ಭಾಗದಲ್ಲಿ ಕೆಲವೊಂದು ಸಾಧಕರು ಕಿಬ್ಬೊಟ್ಟೆಯಲ್ಲಿ ಮಾತ್ರ ಕೇಂದ್ರೀಕೃತಗೊಳಿಸುತ್ತಾರೆ. ಆದರೆ ಬಹುಪಾಲು ಸಾಧಕರು ಮೂಗಿನ ತುದಿಯಲ್ಲಿ ಕೇಂದ್ರೀಕೃತಗೊಳಿಸುತ್ತಾರೆ. ಎಲ್ಲೇ ಆಗಲಿ, ಆ ಒಂದು ಸ್ಥಳದಲ್ಲೇ ಕೇಂದ್ರೀಕೃತಗೊಳಿಸಬೇಕು. ಹೇಗೆಂದರೆ ದ್ವಾರಪಾಲಕನಂತೆ. ದ್ವಾರಪಾಲಕನು ಯಾರು ಒಳಹೊಕ್ಕರು ಅಥವಾ ಯಾರು ಹೊರಬಂದರು ಎಂದು ಗಮನ ನೀಡುತ್ತಲೇ ಇರುತ್ತಾನೆ. ಅದೇ ರೀತಿಯಲ್ಲಿ ನಾವು ಒಳ ಉಸಿರು ಮತ್ತು ಹೊರ ಉಸಿರಿನಲ್ಲೇ ಅಂದರೆ ಅದು ಸಂಪಕರ್ಿಸುವಲ್ಲೇ ಗಮನ ನೀಡಬೇಕು. ಹೇಗೆಂದರೆ ಗರಗಸದ ಉದಾಹರಣೆಯಂತೆ. ಒಂದು ಮರದ ತುಂಡನ್ನು ಸಮನಾದ ನೆಲದಲ್ಲಿಟ್ಟು ಆ ಕಡೆ ಈ ಕಡೆ ಗರಗಸದಿಂದ ಕೊಯ್ಯುತ್ತಾರೆ. ಆಗ ಅವರ ಗಮನ ಮರದ ತುಂಡಿನ ಮೇಲೆ ಇರುವುದಿಲ್ಲ. ಹಾಗೆಯೇ ಗರಗಸದ ಮೇಲೆಯೂ ಇರುವುದಿಲ್ಲ. ಕೇವಲ ಗರಗಸವು ಮರದ ತುಂಡನ್ನು ಕತ್ತರಿಸುತ್ತಿರುವ ಭಾಗದಲ್ಲಿ ಮಾತ್ರ ನೆಲೆಸಿರುತ್ತದೆ. ಹಾಗೆಯೇ ಸಾಧಕನು ಒಳ ಉಸಿರಿನಲ್ಲಿ ಆಗಲಿ ಅಥವಾ ಹೊರ ಉಸಿರಿನಲ್ಲಿ ಆಗಲಿ ಕೇಂದ್ರೀಕರಿಸದೆ ಉಸಿರುಗಳು ಸ್ಪಶರ್ಿಸುತ್ತಿರುವ ಭಾಗದಲ್ಲಿ ಮಾತ್ರ ಚಿತ್ತವನ್ನು ಕೇಂದ್ರೀಕೃತಗೊಳಿಸುತ್ತಾನೆ.
ಹಾಗೆಯೇ ಆತನು ಯೋಗ್ಯ ಜಾಗರೂಕತೆಯಿಂದಿರುತ್ತಾನೆ, ಯೋಗ್ಯ ಏಕಾಗ್ರತೆಯಿಲ್ಲಿರುತ್ತಾನೆ ಮತ್ತು ಯೋಗ್ಯ ಶ್ರಮವನ್ನು ಪಡುತ್ತಿರುತ್ತಾನೆ. ಹೇಗೆಂದರೆ ಯಾವುದೇ ಯೋಚನೆಗಳನ್ನು ಆತನು ಮಾಡುವುದಿಲ್ಲ. ಹೀಗಾಗಿ ಆತನಿಗೆ ತಡೆಗಳಾವುವು ಇಲ್ಲದೆ ಪಂಚ ನೀವರಣಗಳು ಕ್ಷಯಿಸಿ ಹೋಗುತ್ತದೆ. ತಾತ್ಕಾಲಿಕವಾಗಿ ನಾಶವಾಗುತ್ತದೆ. ಅಷ್ಟೇ ಅಲ್ಲದೆ ಆತನ ಧ್ಯಾನಾಂಗಗಳು ಹರಿತವಾಗುತ್ತದೆ. ಆಗ ಆತನಲ್ಲಿ ಪಂಚನೀವರಣಗಳಾದ ಬೋಗಾಭಿಲಾಷೆ, ದ್ವೇಷ, ಸೋಮಾರಿತನ, ಅವಿಶ್ರಾಂತಿ, ಪಶ್ಚಾತ್ತಾಪ ಮತ್ತು ಸಂದೇಹ ಗಳಿಂದ ಮುಕ್ತನಾಗುತ್ತಾನೆ. ಹಾಗೆಯೇ ಧ್ಯಾನಾಂಗಗಳಿಂದ ಕೂಡಿರುತ್ತಾನೆ. ಧ್ಯಾನಂಗಗಳೆಂದರೆ ವಿತರ್ಕ, ವಿಚಾರ, ಪ್ರೀತಿ, ಸುಖ ಮತ್ತು ಏಕಾಗ್ರತೆ. ಈಗ ವಿವರವಾಗಿ...

5 ಧ್ಯಾನಂಗಗಳು : 

ವಿತಕ್ಕ : ಸಮಾನ್ಯವಾಗಿ ವಿತರ್ಕವೆಂದರೆ ಯೋಚಿಸುವುದು, ನಿರ್ಧರಿಸುವುದು ಎಂತಿದೆ. ಆದರೆ ಇಲ್ಲಿ ಆ ಪದಕ್ಕೆ ಬೇರೆಯೇ ಅರ್ಥವಿದೆ. ಇಲ್ಲಿ ವಿತಕ್ಕ (ವಿತರ್ಕ)ವೆಂದರೆ ಧ್ಯಾನದ ವಿಷಯಕ್ಕೆ (ಉಸಿರಾಟದಲ್ಲಿ) ಸಮೀಪ ಗಮನ ನೀಡುವಿಕೆ ಅಂದರೆ ಗಮನವನ್ನು ಕೇಂದ್ರೀಕರಿಸುವಿಕೆ. ಉಸಿರಾಟದ ಎಣಿಕೆಯಲ್ಲಿ ಮತ್ತು ಸಂಬಂಧ ಏಪರ್ಾಟು ಆಗುವಲ್ಲಿ ವಿತಕ್ಕವು ಅಷ್ಟಾಗಿ ಬೆಳವಣಿಗೆ ಹೊಂದಿರುವುದಿಲ್ಲ, ಆದರೆ ಸಂಪರ್ಕ ಮತ್ತು ಸ್ಥಿರತೆಯ ಹಂತದಲ್ಲಿ ವಿತಕ್ಕವು ಪೂರ್ಣವಾಗಿ ಅಭಿವೃದ್ಧಿ ಹೊಂದಿರುತ್ತದೆ.
ವಿಚಾರ : ವಿಚಾರಕ್ಕೆ ಸಾಮಾನ್ಯ ಅರ್ಥ ಶೋಧನೆ. ತರ್ಕ ವಿಶ್ಲೇಷಣೆಯಿದ್ದರೂ ಇಲ್ಲಿ ಅದಕ್ಕೆ ಬೇರೆಯೇ ಅರ್ಥವಿದೆ. ಅಂದರೆ ಧ್ಯಾನ ವಿಷಯದಲ್ಲಿ (ಉಸಿರಾಟದಲ್ಲಿ) ಆಳವಾಗಿ ಅರಿಯುವಿಕೆ ಮತ್ತು ಹರಿಯುವಿಕೆ, ವಿತಕ್ಕ ಮತ್ತು ವಿಚಾರವು ಜೊತೆಯಲ್ಲಿಯೇ ಇರುತ್ತದೆ. ಉದಾಹರಣೆಗೆ : ವಿತರ್ಕವು ಚಿತ್ತವನ್ನು ನೋಡಿದರೆ ವಿಚಾರವು ನೋಡುವಷ್ಟೇ ಅಲ್ಲದೆ ಅರಿಯುವ ಕೆಲಸವು ಮಾಡುತ್ತದೆ, ವಿತರ್ಕವು ಭೂಮಿಗೆ ಸ್ಪಶರ್ಿಸುವ ಮಳೆಯ ಹನಿಗಳಾದರೆ, ವಿಚಾರವು ಆ ನೀರನ್ನು ಹೀರುವ ನೆಲವಾಗುತ್ತದೆ. ಒಂದು ದುಂಬಿಯು ಹೂವಿನ ಹತ್ತಿರ ಹೋಗುವಿಕೆ ವಿತರ್ಕವಾದರೆ, ಆ ಹೂವಿನ ಸುತ್ತಲು ತಿರುಗಾಡುವುದು ವಿಚಾರವಾಗುತ್ತದೆ. ಗಂಟೆಯ ಶಬ್ದವು ವಿತರ್ಕವಾದರೆ, ನಂತರದ ಪ್ರತಿಧ್ವನಿ ವಿಚಾರವಾಗುತ್ತದೆ. ಪಕ್ಷಿಯೊಂದು ಬಂಡೆಯಿಂದ ಹಾರಿದಾಗ ವಿತರ್ಕವಾಗುತ್ತದೆ ನಂತರ ದಿಕ್ಕಿನತ್ತ ನಿರಂತರ ಹಾರುವಿಕೆ ವಿಚಾರವಾಗುತ್ತದೆ. ಹೀಗಾಗಿ ವಿತರ್ಕವೆಂದರೆ ಕೇಂದ್ರೀಕೃತಗೊಳಿಸುವಿಕೆ ಮತ್ತು ವಿಚಾರವೆಂದರೆ ನಿರಂತರ ಮುಂದುವರೆಯುವಿಕೆ, ಹರಿಯುವಿಕೆ ಆಗಿದೆ.
ಪೀತಿ (ಆನಂದ) : ಪೀತಿ ಎಂದರೆ ಆನಂದ ಎಂದರ್ಥ. ಆದರೆ ಈ ಆನಂದವು ಇಂದ್ರೀಯ ಸುಖಗಳ ಆನಂದಕ್ಕಿಂತ ವಿಭಿನ್ನವಾದುದು ಹಾಗು ಶ್ರೇಷ್ಠವಾದುದು, ಮೀರಿದುದು ಆಗಿದೆ. ಈ ಪೀತಿಯು ಚೇತಸಿಕಾಗಳಲ್ಲಿ ಒಂದಾಗಿದೆ. ಯಶಸ್ಸಿನ ನಂತರದ ಆನಂದ ಅನುಭೂತಿಯಾಗಿದೆ. ಆನಂದವು ಉದಯಿಸಿದಾಗ ಕೂದಲು ಎದ್ದಿರುತ್ತದೆ. ಮಿಂಚಿನಂತೆ ಉದಯಿಸುವ ಕ್ಷಣಿಕ ಆನಂದವು ಇರುತ್ತದೆ. ದೇಹದಲ್ಲಿ ಎಣ್ಣೆಯು ಹರಿಯುವ ರೀತಿ ಪ್ರವಹಿಸುವ ಆನಂದವು ಇರುತ್ತದೆ. ವೇಗವಾಗಿ ಹರಿದು ದೀರ್ಘಕಾಲ ಇರುವಂತಹ ಆನಂದ ಇರುತ್ತದೆ. ಆದರೆ ಇಲ್ಲಿ ಅತ್ಯಂತ ರಭಸವಾಗಿ ಬೀಳುವ ಮಳೆಯಂತೆ ಇರುವ ಆನಂದವಾಗಿರುತ್ತದೆ. ಇದರಿಂದಾಗಿಯೇ ಪ್ರಥಮ ಸಮಾಧಿ ಸಿಗುವುದು.
ಸುಖ (ದಿವ್ಯ ಸುಖ/ಶಾಂತತೆ) : ನಾವು ನಿಜವಾದ ದಿವ್ಯ ಸುಖವನ್ನು ಅನುಭವಿಸಿಯೇ ಇಲ್ಲ. ಇದು ಸಿಗುವುದು ಪಂಚ ನೀವರಣಗಳು ನಾಶವಾದ ನಂತರವೇ. ಆದ್ದರಿಂದ ನಾವು ಇದನ್ನು ಕ್ಷಣಿಕವಾಗಿ ಅನುಭವಿಸುತ್ತಿದ್ದೇವೆ. ಯಾವಾಗ ಮನಸ್ಸು ನೀವಾರಣಗಳಿಂದ ಮುಕ್ತವಾಗಿ ಏಕಾಂತತೆ ತಾಳುವುದೋ ಆಗ ಸುಖವು ನೆಲಸುತ್ತದೆ. ನಾವು ಸುಖವನ್ನು ಅನುಭವಿಸಿದಾಗ ಮಾತ್ರ ಆನಂದಕ್ಕೂ ಮತ್ತು ದಿವ್ಯಸುಖಕ್ಕೂ ವ್ಯತ್ಯಾಸ ತಿಳಿಯಬಲ್ಲೆವು. ಪೀತಿ (ಆನಂದ) ಮತ್ತು ಸುಖ (ದಿವ್ಯ ಸುಖ/ಶಾಂತತೆ) ಇವು ಸಹಾ ಜೊತೆಯೇ ಇರುತ್ತದೆ. ಹೇಗೆಂದರೆ ತೇಲುವಿಕೆ ಪೀತಿಯಾದರೆ ನೆಮ್ಮದಿಯು ಸುಖವಾಗಿರುತ್ತದೆ. ಮನಶ್ಶಾಂತಿಯು ಪೀತಿಯಾದರೆ ಏಕಾಗ್ರತೆಯು ಸುಖವಾಗಿರುತ್ತದೆ. ಪೀತಿಯ ಸ್ಥೂಲವಾಗಿದ್ದರೆ ಸುಖವು ಸೂಕ್ಷ್ಮವಾಗಿರುತ್ತದೆ. ಪೀತಿಯು ಸಂಖಾರಗಳಲ್ಲಿ ಒಂದಾದರೆ ಆನಂದವು ವೇದನೆಗಳಲ್ಲಿ ಒಂದಾಗಿದೆ. ಎಲ್ಲಿ ಪೀತಿ (ಆನಂದ) ಬರುತ್ತದೆಯೋ ಅಲ್ಲೆಲ್ಲಾ ಸುಖವಿರುತ್ತದೆ. ಆದರೆ ಸುಖವಿರುವೆಡೆಯಲ್ಲಿ ಆನಂದ (ಪೀತಿ) ಇರಬಹುದು ಅಥವಾ ಇಲ್ಲದೆ ಹೋಗಬಹುದು.
ಏಕಾಗ್ಗತಾ (ಏಕಾಗ್ರತೆ) : ಇದನ್ನು ಚಿತ್ತ ಏಕಾಗ್ರತೆಯೆಂದು ಕರೆಯುತ್ತಾರೆ. ಇಲ್ಲಿ ಮನಸ್ಸು ಒಂದೇ ವಿಷಯದ ಮೇಲೆ (ಉಸಿರಾಟ) ನೆಲೆಸಿರುತ್ತದೆ, ಸ್ಥಾಪಿತವಾಗಿರುತ್ತದೆ. ಅಲ್ಲೇ ಕೇಂದ್ರಿಕೃತವಾಗಿರುತ್ತದೆ. ಸಾಮಾನ್ಯವಾಗಿ ಮನಸ್ಸು ಒಂದು ವಿಷಯದಿಂದ, ವಿಷಯಕ್ಕೆ ಹಾರುತ್ತಿರುತ್ತದೆ. ಪರಿವರ್ತನೆಯಾಗುತ್ತಲೆ ಇರುತ್ತದೆ. ಆದರೆ ಸುಶಿಕ್ಷಣದಿಂದ ಇಲ್ಲಿ ಮನಸ್ಸನ್ನು ಏಕ ವಿಷಯದ (ಉಸಿರಾಟದ) ಮೇಲೆ ನಿಲ್ಲಿಸಿ, ಕೇಂದ್ರೀಕೃತಗೊಳಿಸಿ, ಹರಿಸಿ, ನೆಲೆಸಿ, ಸ್ಥಾಪಿಸಿ ದೀರ್ಘಕಾಲ ಇರುತ್ತೇವೆ. ಇಲ್ಲಿ ಮನಸ್ಸು ಸ್ಥಿರವಾಗಿ, ದೃಢವಾಗಿ ಸುಸ್ಥಾಪಿತವಾಗಿರುತ್ತದೆ.
ಈ ಐದು ಅಂಗಗಳು ಒಟ್ಟಾಗಿ ಸೇರಿದಾಗ, ಪರಸ್ಪರ ಅವಲಂಬನೆಯಿಂದ ಬಲಿಷ್ಠವಾದಾಗ ಏಕ ಕಾರ್ಯಕ್ಕೆ ಕ್ರಿಯಾಶೀಲವಾದಾಗ, ಕುಶಲ ಸ್ಥಿತಿಗಳ ಸಮಗ್ರತೆಯಾದಾಗ ಪ್ರಥಮ ಸಮಾಧಿಗೆ ಸಮೀಪವಾದ ಸಾಮಿಪ್ಯ ಸಮಾಧಿಗೆ ದಾರಿ ಮಾಡಿಕೊಡುತ್ತದೆ. ಈ ಐದು ಅಂಗಗಳು ಎಳೆಗಳಿಂದ ದೊಡ್ಡ ಹಗ್ಗವಾದಂತೆ, ಸ್ಥಂಬಗಳಿಂದ ಕಟ್ಟಡವಿದ್ದಂತೆ, ಈ ಧ್ಯಾನದ ಅಂಗಗಳಿಂದ ಪ್ರಥಮ ಸಮಾಧಿಯು ಲಭಿಸುವುದು.
ಈ ಧ್ಯಾನಾಂಗಗಳು ಪಂಚ ನೀವರಣಗಳಿಗೆ ವಿರುದ್ಧವಾಗಿದೆ. ಯಾವಾಗ ವಿತಕ್ಕವು ಉಸಿರಾಟದಲ್ಲಿ (ಧ್ಯಾನ ವಿಷಯದಲ್ಲಿ) ಕೇಂದ್ರೀಕೃತವಾಗುವುದೋ ಆಗ ಉದ್ದಚ್ಚ (ಅವಿಶ್ರಾಂತಿ) ಮತ್ತು ಕುಕ್ಕುಚ್ಚ (ಚಿಂತೆ, ಪಶ್ಚಾತ್ತಾಪ) ಉದಯಿಸುವುದಿಲ್ಲ ಹಾಗು ಇರುವುದಿಲ್ಲ. ಹಾಗೆಯೇ ವಿಚಾರ (ಹರಿಯುವಿಕೆ)ವು ಕ್ರಿಯಾಬದ್ಧವಾಗಿರುವಾಗ ಸಂಶಯವು ತಾತ್ಕಾಲಿಕವಾಗಿ ನಿಲ್ಲುತ್ತದೆ, ಉದಯಿಸುವುದಿಲ್ಲ, ಇದರಂತೆಯೇ ಪೀತಿ (ಆನಂದ) ಮತ್ತು ಸುಖ (ದಿವ್ಯಸುಖ) ಇದ್ದಾಗ ದ್ವೇಷ ಬೇಸರವಾಗಲಿ, ಜಡತೆ ಸೋಮಾರಿತನವಾಗಲಿ ಇರುವುದಿಲ್ಲ, ಅವೆಲ್ಲವೂ ನಾಶವಾಗುತ್ತದೆ. ಹಾಗೆಯೇ ಏಕಾಗ್ರತೆಯು ನೆಲೆಸಿ ಪೀತಿ, ಸುಖ ಲಭಿಸುತ್ತಿದ್ದಂತೆ ಬೋಗಾಭಿಲಾಷೆಯು ನಾಶವಾಗಿ ಯಾವುದೇ ಪ್ರಾಪಂಚಿಕ ಬಯಕೆಗಳು, ಆನಂದವು ಇರುವುದಿಲ್ಲ. ಹೇಗೆ ಬೆಳಕು, ಕತ್ತಲೆಗಳು ಒಟ್ಟಿಗೆ ಇರಲಾರವೋ ಹಾಗೆಯೇ ಧ್ಯಾನಾಂಗಗಳ ಅಸ್ತಿತ್ವದಿಂದ ಐದು ನೀವರಣಗಳು ನಾಶವಾಗುತ್ತದೆ. ಆಗ ಆತನಿಗೆ ಸಾಲದಿಂದ ಮುಕ್ತವಾದಂತೆ, ರೋಗದಿಂದ ಮುಕ್ತನಾದಂತೆ, ಕಾರಾಗೃಹದಿಂದ ಮುಕ್ತನಾದಂತೆ, ಗುಲಾಮಗಿರಿಯಿಂದ ಮುಕ್ತನಾದಂತೆ ಮರಳುಗಾಡಿನ ಅಥವಾ ಕಾಡಿನಿಂದ ದಾರಿತಪ್ಪಿ ಮತ್ತೆ ಯೋಗ್ಯ ಪಥದಲ್ಲಿ ಬಂದಂತಹ ಆನಂದ ಪಡೆಯುತ್ತಾನೆ.

ನಿಮಿತ್ತ (ಚಿಹ್ನೆ)ಗಳು :ನಿಮಿತ್ತಗಳು 3 ವಿಧದಿಂದ ಕೂಡಿವೆ

1. ಪರಿಕಮ್ಮ ನಿಮಿತ್ತ (ಪ್ರಾಥಮಿಕ ಚಿಹ್ನೆ)
2. ಉಗ್ಗಹ ನಿಮಿತ್ತ (ವಶೀಕೃತ ಚಿಹ್ನೆ)
3. ಪಟಿಭಾಗ ನಿಮಿತ್ತ (ಪ್ರತಿಫಲಿತ ಚಿಹ್ನೆ)

1. ಪರಿಕಮ್ಮ ನಿಮಿತ್ತ : 

ಇಲ್ಲಿ ಉಸಿರಾಟವೇ ಪರಿಕಮ್ಮ (ಪ್ರಾಥಮಿಕ ಚಿಹ್ನೆಯಾಗಿದೆ), ನಿಮಿತ್ತವಾಗಿದೆ. ಅಂದರೆ ಧ್ಯಾನ ವಸ್ತು (ವಿಷಯ)ವೇ ಪ್ರಾಥಮಿಕ ಚಿಹ್ನೆಯಾಗಿರುತ್ತದೆ. ಇಲ್ಲಿ ಉಸಿರಾಟದಲ್ಲಿ ಚಿತ್ತವು ನೆಲೆಸುವುದರಿಂದ ಇಲ್ಲಿ ಉಸಿರಾಟದ ಮೇಲಿನ ಜಾಗ್ರತೆಯೇ ಪರಿಕಮ್ಮ ನಿಮಿತ್ತ ಆಗಿರುತ್ತದೆ.
2. ಉಗ್ಗಹ ನಿಮಿತ್ತ (ವಶೀಕೃತ ಚಿಹ್ನೆ) :
ಯಾವಾಗ ಚಿತ್ತವು ಉಸಿರಾಟದಲ್ಲಿ ನೆಲಸುವುದೋ ಆಗ ಏಕಾಗ್ರತೆಯೂ ಹರಿತವಾಗಿ, ಸ್ಥಿರವಾಗಿ ಸ್ಥಾಪಿಸಲ್ಪಡುತ್ತದೆ. ಉಸಿರಾಟವು ಮೂಗಿನ ಅಥವಾ ಮೇಲ್ತುಟಿಯ ಚರ್ಮದಲ್ಲಿ ಸ್ಥಾಪಿಸಲ್ಪಡುತ್ತದೆ. ದೀರ್ಘಕಾಲ ಅಭಾದಿತ, ನಿವರ್ಿಘ್ನ ಏಕಾಗ್ರತೆಯಿಂದ ದೇಹವು ಶಾಂತವಾಗುತ್ತದೆ. ಉಸಿರಾಟವು ಒಂದೇ ಗತಿಯಲ್ಲಿ ನಡೆಯುತ್ತಿರುತ್ತದೆ. ಅವಿಶ್ರಾಂತಿ ಶಾಂತವಾಗುತ್ತದೆ. ದೇಹವು ವಿಶ್ರಾಂತತೆಯನ್ನು, ಮಣಿಯುವಂತಹ ಮೆದುತನದ ಅನುಭವ ಪಡೆಯುತ್ತದೆ. ನೋವು, ಒತ್ತಡ, ಅವಿಶ್ರಾಂತತೆಯಿಂದ ಮುಕ್ತತೆ ಪಡೆದಾಗ, ಉಸಿರಾಟವು ಅತ್ಯಂತ ಸೂಕ್ಷ್ಮವಾಗಿ ನಡೆಯುತ್ತಿರುತ್ತದೆ. ಆಗ ದೇಹವು ಹಗುರತನದ ಅನುಭೂತಿಯನ್ನು ಪಡೆಯುತ್ತದೆ. ದೇಹವು ಗಾಳಿಯಲ್ಲಿ ತೇಲಿದಂತೆ ಭಾಸವಾಗುತ್ತದೆ. ಗಂಟೆಯ ಶಬ್ದವು ಬಂದಾಗ ಆ ಶಬ್ದವು ಅಳಿದು ಅಲೆಗಳ ಕಂಪನ ಶಬ್ದವು ಸೂಕ್ಷ್ಮವಾಗಿ ಕೇಳಿದಂತೆ ಸೂಕ್ಷ್ಮವಾದ ಉಸಿರಾಟದ ಅನುಭವವು ಲಭಿಸುತ್ತದೆ. ಉಸಿರಾಟ ಒಂದು ಕ್ಷಣ ನಿಲ್ಲಿಸಿದರೂ ಉಸಿರಾಟ ನಡೆದಂತೆ ಭಾಸವಾಗುತ್ತದೆ. ಮೂಗು ಅಥವಾ ತುಟಿಯ ಚರ್ಮದ ಮೇಲೆ ಅಂತಹುದೆ ಸಂವೇದನೆ ಸಿಗುತ್ತದೆ. ಗೋಪಾಲಕನು ಹಸುಗಳನ್ನು ಮೇಯಿಸಲು ಹೋದಾಗ ಅದರ ಪಾಡಿಗೆ ಅದನ್ನು ಬಿಟ್ಟುಬಿಡುತ್ತಾನೆ. ಆದರೂ ಅವು ಎಲ್ಲೇ ಮೇಯಲಿ, ನೀರು ಕುಡಿಯಲು ಒಂದೇ ಸ್ಥಳಕ್ಕೆ ಬರುತ್ತದೆ. ಅಲ್ಲೇ ಗೋಪಾಲಕನು ಅವನ್ನು ಹಿಡಿಯುತ್ತಾನೆ. ಅದೇರೀತಿಯಲ್ಲಿ ಒಳ ಉಸಿರು ಮತ್ತು ಹೊರ ಉಸಿರು ಸಂಪರ್ಕವಾಗುವ ಸ್ಥಳದ ಸಂವೇದನೆ, ಗಾಳಿಯ ಸಂವೇದನೆಯಲ್ಲಿ ಮನಸ್ಸು ಸ್ವಾಭಾವಿಕವಾಗಿ ನೆಲೆಸುತ್ತದೆ. ಇದೇ ಉಗ್ಗಹ ನಿಮಿತ್ತವಾಗಿದೆ.

3. ಪಟಿಭಾಗ ನಿಮಿತ್ತ (ಪ್ರತಿಫಲಿತ ಚಿಹ್ನೆ) : 

ಹೀಗೆ ಸಾಧನೆ ಮಾಡುತ್ತಿರುವಾಗ ಅಲೌಕಿಕ ಅನುಭವಗಳಾಗುತ್ತದೆ. ಅದೇ ಈ ಪಟಿಭಾಗ ನಿಮಿತ್ತ. ಅದೆಂದರೆ ಆತನಿಗೆ ಚಿಹ್ನೆಗಳು (ನಿಮಿತ್ತ) ಗೋಚರವಾಗುತ್ತದೆ. ಆದರೆ ಆ ಚಿಹ್ನೆಗಳು ಎಲ್ಲರಿಗೂ ಒಂದೇರೀತಿಯಾಗಿ ಕಾಣಿಸುವುದಿಲ್ಲ ಅಥವಾ ಸ್ಪರ್ಶವಾಗುವುದಿಲ್ಲ ಅಥವಾ ಅನುಭೂತಿಯಾಗುವುದಿಲ್ಲ.
ಇಲ್ಲಿ ಆಗುವಂತಹ ಅನುಭವಗಳೆಂದರೆ ಹತ್ತಿಯ ಸ್ಪರ್ಶದಂತಹ ಅನುಭವ ಅಥವಾ ರೇಷ್ಮೆಯ ಹತ್ತಿಯಂತಹ ಸ್ಪರ್ಶದ ಅನುಭವ ಅಥವಾ ಗಾಳಿಯ ಹೊಡೆತದಂತಹ ಅನುಭವವಾಗುತ್ತದೆ. ಎಳೆತ, ಸೆಳೆತದಂತಹ ಅನುಭವ ಅಥವಾ ಕೆಲವರಿಗೆ ನಕ್ಷತ್ರ ಅಥವಾ ರತ್ನಗಳ ಗುಂಪಿನಂತೆ, ಮುತ್ತಿನ ಗುಂಪಿನಂತೆ ಅಥವಾ ಹತ್ತಿಯ ಬೀಜದ ಸ್ಪರ್ಶದಂತೆ, ಉಲ್ಲಾಸಯುತ ಗಾಳಿಯ ಸ್ಪರ್ಶದಂತೆ ಅಥವಾ ಕಾಂಡದ ಚೂಪಿನ ಸ್ಪರ್ಶದಂತೆ, ತಂತಿಗಳ ಪಟ್ಟಿಯಂತೆ ಹೂಮಾಲೆಯಂತೆ, ಹೊಗೆಯ ಚಲನೆಯಂತೆ, ಜೇಡರ ಬಲೆಯಂತೆ ಅಥವಾ ಮೋಡದ ಪೊರೆಯಂತೆ ಅಥವಾ ಕಮಲದ ಹೂವಿನಂತೆ ಅಥವಾ ರಥದ ಚಕ್ರದಂತೆ ಅಥವಾ ಚಂದಿರನ ತಟ್ಟೆಯಂತೆ ಅಥವಾ ಸೂರ್ಯನ ತಟ್ಟೆಯಂತೆ ಕಾಣಿಸುವುದು ಅಥವಾ ಸ್ಪಶರ್ಿಸಲ್ಪಡುವುದು.
ಹೀಗೆ ಈ ಪಟಿಭಾಗ ನಿಮಿತ್ತವು ಒಬ್ಬೊಬ್ಬರಿಗೆ ಒಂದು ರೀತಿಯಂತೆ ಅನುಭವಕ್ಕೆ ಬರುತ್ತದೆ. ಏಕೆಂದರೆ ಗ್ರಹಿಕೆಯೇ ಕಾರಣ. ಒಬ್ಬೊಬ್ಬರ ಗ್ರಹಿಕೆ ಒಂದೊಂದು ರೀತಿಯಲ್ಲಿರುವ ಕಾರಣದಿಂದ, ಗ್ರಹಿಕೆಯಿಂದಲೇ ಉದಯಿಸುವ ಚಿಹ್ನೆಯು ಈ ರೀತಿಯಾಗಿ ಗೋಚರಿಸಿದರೆ ಆಶ್ಚರ್ಯವಿಲ್ಲ.
ಉದಾಹರಣೆಗೆ ಒಂದು ದೀಪವನ್ನೇ ತೆಗೆದುಕೊಳ್ಳಿ :-
ಅ) ಚಿಟ್ಟೆಗಳಿಗೆ ಅಥವಾ ಕೆಲವು ಕೀಟಗಳಿಗೆ ಈ ದೀಪವು ಅತ್ಯಾಕರ್ಷಕವಾಗಿರುತ್ತದೆ ಎಂದರೆ ಅದನ್ನು ಸ್ಪಶರ್ಿಸಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತದೆ.
ಆ) ಸಾಮಾನ್ಯ ಜನಕ್ಕೆ ದೀಪ ಬೆಳಕು ನೀಡುವಂತಹುದು ಅಷ್ಟೇ.
ಇ) ವಿಜ್ಞಾನಿಗಳಿಗೆ ದೀಪದಲ್ಲಿರುವ ಸಂಯುಕ್ತಗಳು, ಇಂಧನಗಳೆಲ್ಲಾ ತಿಳಿಯುತ್ತದೆ.
ಈ) ಸಮಥ ಧ್ಯಾನಿಗೆ ಝಾನ ಪ್ರಾಪ್ತಿಯ ವಸ್ತು ದೀಪವಾದರೆ
ಉ) ವಿಪಶ್ಶನ ಧ್ಯಾನಿಗೆ ಅನಿತ್ಯಗೋಚರಕಾರಿ ವಸ್ತುವಾಗಿರುತ್ತದೆ.
ಈ ರೀತಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಗ್ರಹಿಕೆಯಿರುತ್ತದೆ.
4. ಸ್ಥಿರಗೊಳ್ಳುವ ಸಾಧನೆ (ಥಾಪನ) :
ಈ ನಿಮಿತ್ತಗಳಲ್ಲಿ ನಾವು ಜಾಗರೂಕರಾಗಿರಬೇಕು. ಏಕೆಂದರೆ ಇಲ್ಲಿ ಕಸಿನಾದಲ್ಲಿ ಗೋಚರಿಸುವಂತಹ ನಿಮಿತ್ತಗಳು ಗೋಚರವಾದಾಗ ನಾವು ಅದನ್ನು ಅಲಕ್ಷಿಸಬೇಕು. ಇಲ್ಲವಾದರೆ ಅನಾಪಾನಾಸತಿಯ ಧ್ಯಾನವಾಗದೆ, ಕಸಿನಾದಂತಹ ಧ್ಯಾನಕ್ಕೆ ತಲುಪುವ ಸಂಭವನೀಯತೆ ಇರುತ್ತದೆ. ಅಂತಹ ನಿಮಿತ್ತಗಳೆಂದರೆ ಹೊಳಪುಳ್ಳ ಸೂರ್ಯ, ಚಂದಿರ, ನಕ್ಷತ್ರ, ಮುತ್ತು-ರತ್ನ ಇತ್ಯಾದಿ. ಈ ಗೋಚರ ನಿಮಿತ್ತ ಗೋಚರಿಸಿದರೂ ಅನಾಪಾನಾ ಸಾಧನೆ ಮುಂದುವರೆಸಬೇಕು. ಆದರೆ ಗಾಳಿಯ ಸ್ಪರ್ಶ, ಹತ್ತಿಯ ಸ್ಪರ್ಶಕ್ಕೆ, ಹತ್ತಿಯ ಬೀಜದ ಸ್ಪರ್ಶ, ಹಗುರತನದ ಅನುಭೂತಿ, ಗಾಳಿಯಲ್ಲಿ ತೇಲುವ ಅನುಭೂತಿ ಅಲಕ್ಷಿಸಬಾರದು. ಅಂತಹ ಸ್ಪರ್ಶದ ಅನುಭೂತಿಯಲ್ಲೇ ತಲ್ಲೀನನಾಗಬೇಕು. ಆ ಸ್ಪರ್ಶದ ಅನುಭೂತಿಯಲ್ಲೇ ಮನಸ್ಸು ನೆಟ್ಟು, ಕೇಂದ್ರೀಕರಿಸಿ ಸಾಧನೆ ಮಾಡಬೇಕು. ಇದೇ ಪಟಿಭಾಗ ನಿಮಿತ್ತವಾಗಿದೆ. ಈ ನಿಮಿತ್ತವು ಬಣ್ಣಗಳಿಂದ ಕೂಡಿರುವುದಿಲ್ಲ ಅಥವಾ ಆಕಾರದಿಂದಲೂ ಕೂಡಿರುವುದಿಲ್ಲ. ಈ ಪಟಿಭಾಗ ನಿಮಿತ್ತವನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಕೌಶಲ್ಯದಿಂದ ರಕ್ಷಿಸಬೇಕಾಗುತ್ತದೆ. ಹೇಗೆಂದರೆ ಗಭರ್ಿಣಿಯು ತನ್ನ ಪುತ್ರನನ್ನು ರಕ್ಷಿಸುವಂತೆ ಅತ್ಯಮೂಲ್ಯವಾದ ರತ್ನವನ್ನು ಕಾಪಾಡುವ ಹಾಗೆ ಕಾಪಾಡಿ ಹಗಲು-ರಾತ್ರಿ ಧ್ಯಾನಿಸಬೇಕಾಗುತ್ತದೆ. ಮೊದಲಿನ ಉಗ್ಗಹ ನಿಮಿತ್ತಕ್ಕೂ ಪಟಿಭಾಗ ನಿಮಿತ್ತಕ್ಕೂ ವ್ಯತ್ಯಾಸವಿದೆ. ಉಗ್ಗಹ ನಿಮಿತ್ತದಲ್ಲಿ ಯಾವುದೇ ತಪ್ಪಿದ್ದರೂ ಗೋಚರವಾಗುತ್ತಿತ್ತು. ಆದರೆ ಪಟಿಭಾಗ ನಿಮಿತ್ತದಲ್ಲಿ ಸಾವಿರಪಟ್ಟು ಶುದ್ಧವಾಗಿ ಕಂಡುಬರುತ್ತದೆ. ಆಗ ಸಾಧಕನು ಈ ಪಟಿಭಾಗ ಚಿಹ್ನೆಯನ್ನು ಮೂಗಿನ ತುದಿಯಲ್ಲಿ ಕೇಂದ್ರೀಕರಿಸಿ ಹಿಗ್ಗಿಸಬೇಕು. ನಂತರ ಹಾಗೆಯೇ ಹುಬ್ಬುಗಳ ನಡುವೆ ಅಥವಾ ಹಣೆಯಲ್ಲಿ ಹಾಗೆಯೇ ದೇಹದ ಭಾಗಗಳಲ್ಲಿ ಸ್ಥಾಪಿಸಬೇಕು. ಆಗ ಅಲ್ಲೆಲ್ಲಾ ಗಾಳಿ ತುಂಬಿದ ಅನುಭೂತಿಯಾಗುತ್ತದೆ. ಉದಾಹರಣೆಗೆ ಹಣೆಯಲ್ಲಿ ಕೇಂದ್ರೀಕರಿಸಿದಾಗ ತಲೆಯೆಲ್ಲಾ ಗಾಳಿಯಿಂದ ತುಂಬಿದ ಅನುಭೂತಿಯಾಗುತ್ತದೆ. ಇದೇ ರೀತಿಯಲ್ಲಿ ಇಡೀ ಶರೀರವೆಲ್ಲಾ ಗಾಳಿಯ, ತೇಲುವ, ಸ್ಪಶರ್ಿಕ ಅನುಭೂತಿಯ ಪಟಿಭಾಗ ನಿಮಿತ್ತದಿಂದ ಆವರಿಸಿದಾಗ ಆನಂದ ಮತ್ತು ಸುಖವು ಆತನಲ್ಲಿರುವ ಸೂಕ್ಷ್ಮ ನೀವರಣಗಳು ನಶಿಸಿ ಧ್ಯಾನಂಗಗಳು ಕೂಡಿ ಸಾಮಿಪ್ಯ ಸಮಾಧಿ ಪ್ರಾಪ್ತಿಮಾಡುತ್ತಾನೆ.

ಸಮಾಧಿ ಹಂತಗಳು

ಪ್ರಥಮ ಸಮಾಧಿ : ಸಾಧಕನಲ್ಲಿ ಪಂಚನೀವರಣಗಳು ಅಂತ್ಯಗೊಂಡು ಸಾಮಿಪ್ಯ (ಉಪಾಚರ) ಸಮಾಧಿ ಪಡೆದಿದ್ದರೂ ಆತನಲ್ಲಿ ಧ್ಯಾನಂಗಗಳು ಇನ್ನೂ ಬಲಿಷ್ಠವಾಗಿ ಬೆಳೆದಿರುವುದಿಲ್ಲ. ಹೇಗೆಂದರೆ ಮಗುವು ಎದ್ದು ಬಿದ್ದು ನಡೆಯುವ ರೀತಿ. ಆದರೆ ಪಂಚ ಧ್ಯಾನಂಗಗಳನ್ನು ವೃದ್ಧಿಸಿದಾಗ ಆತನು ಸ್ಥಿರ ಸಮಾಧಿ ಪಡೆಯುತ್ತಾನೆ. ಹೇಗೆಂದರೆ ಯುವಕ ಓಡುವಂತೆ. ಹೇಗೆ ಆತನು ಸ್ಥಿರ ಸಮಾಧಿ (ಪ್ರಥಮ ಸಮಾಧಿ ಗಳಿಸುತ್ತಾನೆ) ಆ ಸ್ಥಿತಿಯಲ್ಲಿ ಆತನ ಮನಸ್ಸು, ಅತ್ಯಂತ ಮೃದು, ಅತ್ಯಂತ ಶಾಂತ, ಏಕಾಗ್ರತೆ, ಕಾರ್ಯಶೀಲತೆ, ಸುಖ, ಆನಂದ, ಮಣಿಯುವಂತಹ ಹಗುರತೆ ಎಲ್ಲವೂ ವೃದ್ಧಿಯಾಗಿರುತ್ತದೆ. ಆತನಿಗೆ ಯಾವ ಶಬ್ದವೂ ಕೇಳಿಸದೆ ಶಬ್ದಕ್ಕೆ ಆತೀತನಾಗಿರುತ್ತಾನೆ. ಪ್ರಥಮ ಸಮಾಧಿಯಲ್ಲಿ ಮಾನಸಿಕವು ಪ್ರಕಾಶಿತವಾಗುತ್ತದೆ, ಮನಸ್ಸು ಪಕ್ವವಾಗುತ್ತದೆ. ಅಪಾರ ಆನಂದದ ವೃದ್ಧಿಯಾಗಿರುತ್ತದೆ.
ಆತನ ಮನಸ್ಸು ಇಂದ್ರೀಯ ಕ್ಷೇತ್ರದಿಂದ ಸಮಾಧಿ ಲೋಕದ ಚಿತ್ತವಾಗಿ ಗೋತ್ರ ಬದಲಾಯಿಸುತ್ತದೆ. ಈ ರೀತಿಯಲ್ಲಿ ಆತನು ರಾಗಾದಿ, ಅಕುಶಲ ಚಿತ್ತಗಳಿಂದ (ನೀವರಣಗಳಿಂದ) ಮುಕ್ತನಾಗಿ ಏಕಾಂತತೆಯಿಂದ ಹುಟ್ಟಿದ ಪೀತಿ, ಸುಖದಿಂದ ಕೂಡಿದ ಪ್ರಥಮ ಸಮಾಧಿಯಲ್ಲಿ ನೆಲೆಗೊಳ್ಳುತ್ತಾನೆ.
ಆತನ ಇಡೀ ಶರೀರದಲ್ಲೆಲ್ಲಾ ಈ ರೀತಿಯ ಅಲೌಕಿಕ ಆನಂದ ಮತ್ತು ಸುಖದ ಏಕಾಗ್ರತೆಯ ಸುಖವನ್ನು ಆತನು ಇಡೀ ಶರೀರದಲ್ಲೆಲ್ಲಾ ಯಾವ ಭಾಗವು ಬಿಡದೆ ಹಬ್ಬಿಸುತ್ತಾನೆ.
ಹೇಗೆಂದರೆ ಸ್ನಾನ ಮಾಡುವವನು ಸೋಪಿನಪುಡಿಯನ್ನು ನೀರಿನಲ್ಲಿ ನೆನೆಸಿ, ಹಿಂಡಿ, ನೊರೆಯುಕ್ಕಿಸಿ ಇಡೀ ಶರೀರದಲ್ಲೆಲ್ಲಾ ನೊರೆ ವ್ಯಾಪಿಸುವ ಹಾಗೆ ಆತನು ತನ್ನ ಪಟಿಭಾಗ ನಿಮಿತ್ತವನ್ನು, ಹಗುರತನವನ್ನು, ಆ ಸಂವೇದನೆಗಳನ್ನು ಇಡೀ ಶರೀರ ವ್ಯಾಪಿಸುತ್ತಾನೆ.
ನಂತರ ಸಾಧಕನು 10 ವಿಧದ ಧ್ಯಾನದ ಕೌಶಲ್ಯಗಳನ್ನು ಪ್ರಾವೀಣ್ಯತೆ ಗಳಿಸುತ್ತಾನೆ. ಅದೆಂದರೆ : 1) ಸ್ವಚ್ಛತೆ
2) ಧ್ಯಾನಂಗಗಳ ಮತ್ತು ಪಂಚಬಲಗಳ ಸಮತೋಲನೆ 3) ಚಿಹ್ನೆಗಳಲ್ಲಿ ಕೌಶಲ್ಯತೆ 4) ಸಕಾಲ ಪ್ರಯತ್ನಶೀಲತೆ
5) ಸಕಾಲ ಸಂಯಮ 6) ಸಕಾಲ ಸ್ಫೂತರ್ಿ 7) ಸಕಾಲ ಸಮಚಿತ್ತತೆ 8) ಧ್ಯಾನಿಗಳಲ್ಲದವರ ವರ್ಜನೆ
9) ಧ್ಯಾನಿಗಳೊಂದಿಗೆ ಬೆರೆಯುವಿಕೆ (ಸ್ನೇಹ) 10) ಧ್ಯಾನದಲ್ಲಿ ಸ್ಥಿರನಿಧರ್ಾರ ಕೈಗೊಳ್ಳುವಿಕೆ (ಹೊಂದಿಕೊಳ್ಳುವಿಕೆ, ಬಾಗುವಿಕೆ).
ಸಾಧಕನು ನಂತರ ಐದು ಹಂತದ ಸಮಾಧಿಯಲ್ಲಿ ನೈಪುಣ್ಯತೆ ಪಡೆಯಬೇಕಾಗುತ್ತದೆ.
1. ಲಕ್ಷ ನೈಪುಣ್ಯತೆ : ಇಚ್ಛೆ ಮಾತ್ರಕ್ಕೆ ಧ್ಯಾನ ವಿಷಯದಲ್ಲಿ ಗಮನ ನೀಡುತ್ತಾನೆ. ನಿಮಿತ್ತ ಧ್ಯಾನಂಗಗಳಲ್ಲಿಯೂ ಗಮನ ಕೇಂದ್ರೀಕರಣ.
2. ಪ್ರಾಪ್ತಿ ನೈಪುಣ್ಯತೆ : ಇಲ್ಲಿ ಆತನು ಎಲ್ಲಿಯಾದರೂ, ಯಾವಾಗಲಾದರೂ, ಇಚ್ಛೆಯಂತೆ ಧ್ಯಾನ ಪ್ರವೇಶ ಮಾಡಿ ನೆಲಸುತ್ತಾನೆ.
3. ನೆಲೆಸುವ ನಿಧರ್ಾರ ನೈಪುಣ್ಯತೆ : ಇಚ್ಛಾಕಾಲ (ದೀರ್ಘಕಾಲ) ಸಮಾಧಿಯಲ್ಲಿ ನೆಲೆಸುತ್ತಾನೆ.
4. ನಿರ್ಗಮನ ನೈಪುಣ್ಯತೆ : ಇಚ್ಛಿಸಿದಾಗ ಸಮಾಧಿಯಿಂದ ಹೊರಬರುವಿಕೆ.
5. ಪುನರಾವಲೋಕನ ನೈಪುಣ್ಯತೆ : ಇಡೀ ಧ್ಯಾನವನ್ನು ಆತನು ಪುನಃ ಅವಲೋಕಿಸುತ್ತಾನೆ, ವಿಮಶರ್ಿಸುತ್ತಾನೆ ಮತ್ತು ವಿಶ್ಲೇಷಿಸುತ್ತಾನೆ.
ದ್ವಿತೀಯ ಸಮಾಧಿ :
ಈ ರೀತಿಯಲ್ಲಿ ಆತನು ಧ್ಯಾನದಲ್ಲಿ ನೈಪುಣ್ಯತೆ ಪಡೆದಾಗ ಆತನು ಅದನ್ನು ಪುನರ್ ಅವಲೋಕನ ಮಾಡಿದಾಗ ಆತನಿಗೆ ವಿತಕ್ಕ, ವಿಚಾರಗಳು ಸ್ಥೂಲವಾಗಿ ಕಂಡುಬರುತ್ತದೆ ಮತ್ತು ಪೀತಿ, ಸುಖ ಮತ್ತು ಏಕಾಗ್ರತೆಯು ಸೂಕ್ಷ್ಮವಾಗಿ ಕಂಡುಬರುತ್ತದೆ. ಆಗ ಆತನು ವಿತಕ್ಕ ವಿಚಾರವನ್ನು ಸ್ತಬ್ದಗೊಳಿಸುತ್ತಾನೆ.
ಭಿಕ್ಷುವು ವಿತಕ್ಕ ಮತ್ತು ವಿಚಾರವನ್ನು ಸ್ತಬ್ದಗೊಳಿಸಿ, ಪೀತಿ (ಆನಂದ) ಸುಖ (ದಿವ್ಯಸುಖ) ಮತ್ತು ಏಕಾಗ್ರತೆಯಿಂದ ಕೂಡಿದ ದ್ವಿತೀಯ ಸಮಾಧಿಯನ್ನು ಪ್ರಾಪ್ತಿಮಾಡುತ್ತಾನೆ. ಇದನ್ನು ಸಾಧಿಸಲು ಆತನಿಗೆ ಅಪಾರ ಆಂತರಿಕ ಶ್ರದ್ಧೆಯಿರಬೇಕಾಗುತ್ತದೆ. ಇವು ಮೂರು ಅಂಗಗಳಿಂದ ಕೂಡಿರುತ್ತದೆ. ಅಂದರೆ ಆನಂದ, ಸುಖ ಮತ್ತು ಏಕಾಗ್ರತೆ ವಿಭಂಗದ ಪ್ರಕಾರ ಪ್ರಬಲ ಶ್ರದ್ಧೆಯು ಇರುತ್ತದೆ. ಇದರಿಂದ ಸಿಗುವಂತಹ ಸುಖ, ಆನಂದದಿಂದ ಆತನು ನೆಲೆಸಿ ಆತನು ಇಡೀ ಶರೀರದಲ್ಲೆಲ್ಲಾ ಸುಖ, ಆನಂದವನ್ನು ಪ್ರಸರಿಸುತ್ತಾನೆ. ಹೇಗೆಂದರೆ ಆಳವಾದ ಸರೋವರವೊಂದರಲ್ಲಿ ಕೆಳಗಿನಿಂದ ತಂಪಾದ ನೀರು ಉದಯಿಸಿ ಉಕ್ಕಿ ಮೇಲೆ ಸುತ್ತಲೂ ಸರೋವರವನ್ನೆಲ್ಲ ಆವರಿಸಿಬಿಡುತ್ತದೆ. ಅದೇರೀತಿಯಲ್ಲಿ ಸಾಧಕನು, ಪೀತಿ ಸುಖದಿಂದ ಕೂಡಿದ ಏಕಾಗ್ರತೆಯ ಸುಖದಿಂದ ಇಡೀ ಶರೀರವನ್ನು ತೋಯಿಸಿಬಿಡುತ್ತಾನೆ.
ತೃತೀಯ ಸಮಾಧಿ :
ಆತ ದ್ವಿತೀಯ ಸಮಾಧಿಯಲ್ಲಿ 5 ರೀತಿ ಪ್ರಾವಿಣ್ಯತೆ ಪಡೆಯುತ್ತಾನೆ. ಸಮಾಧಿಯಲ್ಲಿ ಬಹಳಕಾಲ ಲಕ್ಷಕೊಟ್ಟು ಪ್ರವೇಶಿಸಿ, ನೆಲೆಸಿ, ನಿರ್ಗಮಿಸಿ, ಪುನರ್ ಅವಲೋಕನ ಮಾಡುತ್ತಾನೆ. ಆಗ ಆತನಿಗೆ ಪೀತಿ (ಆನಂದ) ಸ್ಥೂಲವಾಗಿ ಕಂಡುಬರುತ್ತದೆ ಮತ್ತು ಸುಖ ಹಾಗು ಏಕಾಗ್ರತೆಯು ಸೂಕ್ಷ್ಮವಾಗಿಯು, ಶಾಂತವಾಗಿಯು ಕಂಡುಬರುತ್ತದೆ.
ಆಗ ಆತನು ಪೀತಿ (ಆನಂದ)ಯನ್ನು ಸ್ತಬ್ದಗೊಳಿಸಿದವನಾಗಿ ಸಮಚಿತ್ತತೆಯಿಂದ ವಿಹರಿಸುತ್ತಾನೆ. ತನ್ನ ದೇಹದಲ್ಲೆಲ್ಲಾ ಸುಖವನ್ನು (ದಿವ್ಯಸುಖ/ಶಾಂತಿ) ಎಚ್ಚರಿಕೆಯಿಂದ ಅನುಭವಿಸಿದವನಾಗಿ, ಯಾವುದನ್ನು ಆರ್ಯರು ಸಮಚಿತ್ತತೆ ಮತ್ತು ಎಚ್ಚರದಿಂದ ಕೂಡಿದ ಸುಖ ಎನ್ನುವರೋ ಅದನ್ನು ಪ್ರಾಪ್ತಿ ಮಾಡುತ್ತಾನೆ. ಈ ರೀತಿಯ ಪ್ರಶಾಂತತೆಯ ಸುಖದಿಂದ ಆತನು ಇಡೀ ಶರೀರವನ್ನೆಲ್ಲಾ (ತುಂಬಿಸಿ ಆವರಿಸಿಬಿಡುತ್ತಾನೆ), ತೋಯಿಸಿಬಿಡುತ್ತಾನೆ. ಹೇಗೆಂದರೆ ಕಮಲಗಳಿರುವ ಸರೋವರದಲ್ಲಿ ಕಮಲಗಳನ್ನೆಲ್ಲಾ ನೀರು ಆವರಿಸಿರುತ್ತದೆ. ಅಲ್ಲಿರುವ ಯಾವುದೇ ಕಮಲವಿರಲಿ ಅವೆಲ್ಲಾ ನೀರಿನಿಂದ ಆವೃತವಾಗಿರುತ್ತದೆ. ಅದೇರೀತಿಯಲ್ಲಿ ಆತನು ಸುಖವನ್ನು ಶರೀರದಲ್ಲೆಲ್ಲಾ ಆವರಿಸುತ್ತಾನೆ.
ಚತುರ್ಥ ಸಮಾಧಿ :
ನಂತರ ಮತ್ತೆ ಆತನು 5 ರೀತಿಯಲ್ಲಿ ಧ್ಯಾನದ ಪ್ರಾವಿಣ್ಯತೆ ಗಳಿಸುತ್ತಾನೆ. ಅವೆಂದರೆ ಲಕ್ಷಿಸುವಿಕೆ, ಪ್ರವೇಶ, ನೆಲೆಸುವಿಕೆ, ನಿರ್ಗಮನ, ಅವಲೋಕನ. ಆಗ ಆತನಿಗೆ ಸುಖವು ಸ್ಥೂಲವಾಗಿ ಕಂಡುಬರುತ್ತದೆ. ಸಂಪೂರ್ಣ ಜಾಗರೂಕನಾದ ಆತನಿಗೆ ಸಮಚಿತ್ತತೆ ಮತ್ತು ಏಕಾಗ್ರತೆಯು ಸೂಕ್ಷ್ಮವಾಗಿ ಶಾಂತವಾಗಿ ಕಂಡುಬಂದು ಅದನ್ನು ಸಾಧಿಸುತ್ತಾನೆ. ಸ್ಥೂಲವಾದ ಸುಖವನ್ನು ವಜರ್ಿಸಿ, ಸುಲಭವಾಗಿ ಸಿಗಲಾರದ ಅತ್ಯಂತ ಸೂಕ್ಷ್ಮವಾದ ಪರಿಶುದ್ಧವಾದ ಚತುರ್ಥ ಸಮಾಧಿ ಪ್ರಾಪ್ತಿಮಾಡುತ್ತಾನೆ. ಅದು ಕೇವಲ 2 ಅಂಗಗಳಿಂದ ಕೂಡಿರುತ್ತದೆ. ಅದೆಂದರೆ ಸಮಚಿತ್ತತೆ ಮತ್ತು ಏಕಾಗ್ರತೆ ಈ ಬಗೆಯ ಪರಿಶುದ್ಧ ಸ್ಥಿತಿಯಿಂದ ಆತನು ನೆಲೆಸಿರುತ್ತಾನೆ. ಇಡೀ ಶರೀರದಲ್ಲೆಲ್ಲಾ ಇಂತಹುದೇ ಸ್ಥಿತಿಯಿಂದ ಆವೃತಗೊಳಿಸುತ್ತಾನೆ. ಹೇಗೆಂದರೆ ಒಬ್ಬ ವ್ಯಕ್ತಿ ಕುಳಿತು ಬಿಳಿ ಬಟ್ಟೆಯನ್ನು ಪೂರ್ಣವಾಗಿ ಹೊದ್ದುವಂತೆ ಆತನು ಈ ಪರಿಶುದ್ಧತೆಯಿಂದ ಇಡೀ ಶರೀರವನ್ನು ತೋಯಿಸುತ್ತಾನೆ, ನೆಲೆಸುತ್ತಾನೆ.
ನಂತರ ಆತನು 5 ರೀತಿಯಲ್ಲಿ ಧ್ಯಾನದ ಪ್ರಾವಿಣ್ಯತೆ ಗಳಿಸುತ್ತಾನೆ. ಅವೆಂದರೆ ಲಕ್ಷ, ಪ್ರವೇಶ, ನೆಲೆ, ನಿರ್ಗಮನ ಮತ್ತು ಅವಲೋಕನ. ಆಗ ಆತನಿಗೆ ರೂಪ ಸಮಾಧಿಯು ಸ್ಥೂಲವಾಗಿ ಕಂಡುಬರುತ್ತದೆ. ಆಗ ಆತನಿಗೆ ಎರಡು ಆಯ್ಕೆಗಳಿರುತ್ತದೆ. ಅರೂಪ ಸಮಾಧಿ ಸಿದ್ಧಿಸುವುದು ಅಥವಾ ವಿಪಶ್ಶನಾ ಧ್ಯಾನವನ್ನು ಆರಂಭಿಸುವುದು.

5. ಅರಿಯುವಿಕೆ (ಸಲ್ಲಖ್ಖಂ) [ಅನಾಪಾನ ವಿಪಶ್ಶನ ಧ್ಯಾನ (ಸಂಕ್ಷಿಪ್ತ)] : ಇಲ್ಲಿ ಧ್ಯಾನಿಯು ನಾಮ (ಮನಸ್ಸು) ಮತ್ತು ರೂಪ (ಶರೀರ)ವನ್ನು ಅರಿಯುತ್ತಾನೆ. ಆಗ ಆತನಿಗೆ ಆನಾಪಾನಸತಿಗೆ ಶರೀರವೇ ಆಧಾರ ಮತ್ತು ಮನಸ್ಸಿನಿಂದ ಇದರ ಉದ್ಭವ ಆಗಿದೆ ಎಂದು ಅರಿವಾಗುತ್ತದೆ. ಹಾಗೆಯೇ ದೇಹ ಮನಸ್ಸಿನ ಸ್ವರೂಪವು ಅದರ ಹಿಂದಿನ ಕಾರಣಗಳು, ಈಗಿನ ಅಸ್ತಿತ್ವ ಮತ್ತು ಮುಂದಿನ ಪರಿಣಾಮ ಈ ರೀತಿಯಲ್ಲಿ ಕಾಲಕ್ಕೆ ಅನುಗುಣವಾಗಿ ಅರಿಯುತ್ತಾನೆ. ನಂತರ ಆತನು ತನ್ನ ಸಂಶಯಗಳನ್ನೆಲ್ಲಾ ನಿವಾರಿಸಿಕೊಳ್ಳುತ್ತಾನೆ. ಆತನಿಗೆ ಈ ದೇಹ ಮತ್ತು ಮನಸ್ಸು ಕ್ಷಣಿಕ. ಅನಿತ್ಯವೆಂಬ ಜ್ಞಾನೋದಯ ಉಂಟಾಗುತ್ತದೆ. ಈ ಶರೀರವೇ ದುಃಖ ಮತ್ತು ಮನಸ್ಸು ಸಹಾ ದುಃಖ ಎಂದು ಅರಿವಿಗೆ ಬರುತ್ತದೆ. ಇಲ್ಲಿ ತನ್ನದು, ತನ್ನ ಆತ್ಮ ಅಥವಾ ನಾನು ಎಂಬುದು ಭ್ರಮೆ ಎಂಬ ಜ್ಞಾನೋದಯ ಉಂಟಾಗುತ್ತದೆ.
6. ವಿಮುಖತೆ (ವಿವಟ್ಠನಾ) : ಇಲ್ಲಿ ಸಾಧಕನು 10 ಬಗೆಯ ಅಪೂರ್ಣತೆಗಳನ್ನು ವಜರ್ಿಸುತ್ತಾನೆ. ಇಲ್ಲಿ ಆತನಿಗೆ ಉದಯ ವ್ಯಯದ ಜ್ಞಾನವಾಗಿ ಎಲ್ಲಾ ಸಂಖಾರಗಳು ಭಯಾನಕವಾಗಿ ಕಂಡುಬರುತ್ತದೆ. ಆತನು ಅದರಿಂದ ವಿರಾಗ ತಾಳುತ್ತಾನೆ. ನಿರೋಧವನ್ನುಂಟುಮಾಡಿ, ಕಲ್ಮಶಗಳನ್ನೆಲ್ಲ ತೊರೆಯುತ್ತಾನೆ. ಹೊಸದಾಗಿ ಯಾವೊಂದು ರೀತಿಯ ಬಂಧನಕ್ಕೂ ಬೀಳದೆ ಸಾಧನೆ ಮಾಡುತ್ತಾನೆ.
7. ಪರಿಶುದ್ಧಿ : ಇಲ್ಲಿ ಆತನಿಗೆ ಲೋಕೋತ್ತರ ಫಲ ಪ್ರಾಪ್ತಿಯಾಗುತ್ತದೆ. ವಿಮುಕ್ತಿ ಅಥವಾ ಸಮಚ್ಛೆದಾ ವಿಮುಕ್ತಿ ಗಳಿಸುತ್ತಾನೆ.
8. ಪುನರ್ ಅವಲೋಕನ (ಪಟಿಪಸ್ಸನಾ) : ಇಲ್ಲಿ ಆತನು ನಾಶಗೊಳಿಸಿದ ಬಂಧನಗಳ ಇಡೀ ಪ್ರಕ್ರಿಯೆ ಪುನಃ ಪುನಃ ಅವಲೋಕಿಸುತ್ತಾನೆ. ಅಂದರೆ ಎಣಿಕೆಯಿಂದ ಪರಿಶುದ್ದಿಯವರೆಗೂ ಪ್ರವೇಶ ಪ್ರಾಪ್ತಿ ನೈಪುಣ್ಯತೆ, ಇಚ್ಛೆ ಮಾತ್ರಕ್ಕೆ ಸಮಾಧಿಯ ಪ್ರವೇಶ ಮತ್ತು ಪ್ರಾಪ್ತಿ.

8. ಆನಾಪಾನಾ ವಿಪಸ್ಸನ ಧ್ಯಾನ 
ಆನಾಪಾನಸತಿ ಸುತ್ತದ ವಿವರಣೆ
ಆನಾಪಾನಾ ಕಾಯಾನುಪಶ್ಶನ :
ಭಿಕ್ಷುಗಳೇ, ಆನಾಪಾನಸತಿ ಸಾಧನೆ ಮಾಡಿದರೆ ಮತ್ತು ವೃದ್ಧಿಸಿದರೆ ಅಕುಶಲ ಚೇತಸಿಕಾಗಳನ್ನೆಲ್ಲಾ ಅದು ಉದಯಿಸುತ್ತಿದ್ದಂತೆ ಸ್ತಬ್ದಗೊಳಿಸಿ ಮರೆಮಾಡುತ್ತದೆ. ಆನಾಪಾನಸತಿಯು ಶಾಂತಿಯುತವಾದುದು ಮತ್ತು ಉದಾತ್ತವಾದುದು. ಇದು ಅಮಿಶ್ರಿತ ಆಹ್ಲಾದಕರ ವಿಹಾರವಾಗಿದೆ.
ಆನಾಪಾನಸತಿ ವೃದ್ಧಿಸಿದರೆ ಮತ್ತು ಸಾಧನೆ ಮಾಡಿದರೆ ಎಂದರೆ ಉಸಿರಾಟದ ಜಾಗರೂಕತೆಯಲ್ಲಿರುವ ಧ್ಯಾನ ಅಥವಾ ಉಸಿರಾಟದ ಧ್ಯಾನದಲ್ಲಿರುವ ಜಾಗರೂಕತೆ ಎಂದರ್ಥ. ಇದರಲ್ಲಿ ಪದೇ ಪದೇ ತಲ್ಲೀನನಾಗುವುದು ಎಂದು ಅರ್ಥವಾಗಿದೆ.
ಇದು ವೃದ್ಧಿಸಿದಾಗ ಅಕುಶಲ ಚೇತಿಸಿಕಾಗಳೆಲ್ಲಾ ಅದು ಉದಯಿಸುತ್ತಿದ್ದಂತೆ ಸ್ತಬ್ದಗೊಳಿಸಿ ಮರೆಯಾಗುತ್ತದೆ ಅಂದರೆ ಯಾವುದೆಲ್ಲವೂ ಅಕುಶಲ ಪ್ರವೃತ್ತಿಗಳು, ಯೋಚನೆಗಳು ಮತ್ತು ಅಕುಶಲ ಸ್ಥಿತಿಗಳು ಇವೆಯೋ ಒಂದೇಬಾರಿಗೆ ನಾಶಗೊಳ್ಳುತ್ತದೆ, ಸ್ತಬ್ದಗೊಳ್ಳುತ್ತದೆ. ಏಕೆಂದರೆ ಕುಶಲ ಚಿತ್ತಗಳ ಸಮಗ್ರತೆಯ ಪ್ರಶಾಂತತೆ ಅಷ್ಟು ಬಲಿಷ್ಠವಾಗಿರುತ್ತದೆ. ಅಷ್ಟು ಪರಿಣಾಮಕಾರಿಯಾದ ಕ್ರಿಯಾಶೀಲತೆ ಅಲ್ಲಿರುತ್ತದೆ.
ಆನಾಪಾನಸತಿಯು ಶಾಂತವಾದುದು ಮತ್ತು ಉದಾತ್ತವಾದುದು ಎಂದರೆ ಧ್ಯಾನದ ವಸ್ತುವಿನ (ವಿಷಯ) ಅರ್ಥದಲ್ಲಿ ಮತ್ತು ಧ್ಯಾನದ ಪರಿಣಾಮದ ಅರ್ಥದಲ್ಲಿ ಹೇಳಲಾಗಿದೆ. ಅಂದರೆ ಉದಾಹರಣೆಗೆ ಅಶುಭ ಧ್ಯಾನವೇ ತೆಗೆದುಕೊಳ್ಳಿ. ಅಲ್ಲಿ ಧ್ಯಾನದ ವಸ್ತುವು ಅಸಹ್ಯವಾಗಿರುತ್ತದೆ, ಕುರೂಪವಾಗಿರುತ್ತದೆ. ಆದರೆ ಪರಿಣಾಮ ಮಾತ್ರ ಅತ್ಯಂತ ಸುಲಾಭಕಾರಿಯಾಗಿದೆ. ಆದರೆ ಆನಾಪಾನಸತಿಯಲ್ಲಿ ಹಾಗಲ್ಲ, ಇಲ್ಲಿ ಧ್ಯಾನದ ವಿಷಯವು ಮತ್ತು ಪರಿಣಾಮವು ಶಾಂತವಾಗಿಯು ಇದೆ ಮತ್ತು ಉದಾತ್ತವಾಗಿಯು ಇದೆ. ಶಾಂತವೆಂದರೆ ಧ್ಯಾನದ ವಸ್ತುವು ಶಾಂತವಾಗಿ, ಸೂಕ್ಷ್ಮವಾಗಿ, ಸುಂದರವಾಗಿದೆ ಮತ್ತು ಶಾಂತತೆಯನ್ನು ನಿಮರ್ಿಸುತ್ತದೆ. ನಿಬ್ಬಾಣದ ಶಾಂತತೆಗೆ ಸಹಾಯಕಾರಿಯಾಗಿದೆ. ಹಾಗೆಯೇ ಶ್ರೇಷ್ಠ ಪರಿಣಾಮಗಳನ್ನು ನೀಡುವುದರಿಂದಾಗಿ ಉದಾತ್ತವಾಗಿದೆ. ಇದು ಅಮಿಶ್ರಿತ ಆಹ್ಲಾದಕರ ವಿಹಾರವಾಗಿದೆ ಎಂದರೆ ನಿಜಕ್ಕೂ ಕಸಿನಾಗಳಂತೆ ಅಥವಾ ಅಶುಭಾ ಧ್ಯಾನಗಳಂತೆ ಬಾಹ್ಯ ವಸ್ತುವಿನ ಅಗತ್ಯವಿಲ್ಲ. ಇದು ವಿಶೇಷವಾಗಿದೆ. ಯಾವುದೇ ದೇವರ ಜಪವಾಗಲಿ, ರೂಪ ಕಲ್ಪನೆಯಾಗಲಿ ಅಗತ್ಯವಿಲ್ಲ. ಆದ್ದರಿಂದ ಇದು ಅಮಿಶ್ರಿತವಾಗಿದೆ, ವಿಶಿಷ್ಟವಾಗಿದೆ. ಆಹ್ಲಾದಕರ ವಿಹಾರ ಎಂದರೆ ಇದರಿಂದ ದೊರಕುವ ಸಮಾಧಿಯ ಸ್ಥಿತಿಯು ಅತ್ಯಂತ ಆಹ್ಲಾದಕರ ಸುಖಗಳಿಂದ ಕೂಡಿರುವುದರಿಂದಾಗಿ ಅಂತಹುದರಲ್ಲಿ ವಿಹರಿಸುವುದರಿಂದ ಇದನ್ನು ಆಹ್ಲಾದಕರ ವಿಹಾರ ಎಂದು ಹೇಳುತ್ತಾರೆ.
ಇಲ್ಲಿ ಭಿಕ್ಷುವು (ಸಾಧಕ)... ಪದ್ಮಾಸನದಲ್ಲಿ ಆಸೀನನಾಗಿ, ದೇಹವನ್ನು ಸ್ಥಿರವಾಗಿಟ್ಟುಕೊಂಡು, ನೇರವಾಗಿಟ್ಟುಕೊಂಡು ಸದಾ ಉಶ್ವಾಸ ಮತ್ತು ನಿಶ್ವಾಸದಲ್ಲಿಯೇ ಜಾಗರೂಕತೆಯನ್ನು ಸ್ಥಾಪಿಸಿ ಸಾಧನೆ ಮಾಡುತ್ತಾನೆ.
ಅಂದರೆ ಇಲ್ಲಿ ಸಾಧಕನು ಪದ್ಮಾಸನದಲ್ಲಿ (ಸುಖಾಸನ) ದೇಹವನ್ನು ನೇರವಾಗಿಟ್ಟು ಒಳ ಉಸಿರು ಮತ್ತು ಹೊರ ಉಸಿರಿನಲ್ಲಿಯೇ ಜಾಗರೂಕತೆಯನ್ನು ಪ್ರತಿಷ್ಠಾಪಿಸಿ ಧ್ಯಾನಿಸುತ್ತಿರುತ್ತಾನೆ ಎಂದರ್ಥ.
ಹಂತ-1 : ಉಸಿರಾಟವು ದೀರ್ಘವಾಗಿದ್ದರೆ ನಾನು ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ. 
ಅಂದರೆ ಇಲ್ಲಿ ಉಸಿರಾಟವು ಸಾಮಾನ್ಯವಾಗಿ ದೀರ್ಘವಾಗಿರಬಹುದು ಅಥವಾ ಓಡಿಬಂದು ಹಾಗೆಯೇ ಧ್ಯಾನಕ್ಕೆ ಕುಳಿತಿದ್ದರೆ ಆಗಲೂ ಉಸಿರಾಟ ದೀರ್ಘವಾಗಿರಬಹುದು ಅಥವಾ ಗಾಬರಿಯಿಂದ ಉಸಿರಾಟ ದೀರ್ಘವಾಗಿರಬಹುದು. ಅಂದರೆ ಉಸಿರನ್ನು ಕಿಬ್ಬೊಟ್ಟೆಯವರೆಗೆ ತೆಗೆದುಕೊಂಡಾಗ ಅದು ದೀರ್ಘ ಉಸಿರಾಟ ಎನಿಸುತ್ತದೆ. ಒಟ್ಟಿನಲ್ಲಿ ಉಸಿರಾಟ ಈ ರೀತಿಯ ದೀರ್ಘ ಉಸಿರಾಟವಿದ್ದಾಗ ಅದನ್ನು ಹಾಗೆಯೇ ಅದು ಇರುವ ಹಾಗೆ ಯಥಾಭೂತವಾಗಿ ಹಾಗೆಯೇ ಅರಿಯುವುದು. ಆದರೆ ಯೋಚಿಸುವ ಹಾಗಿಲ್ಲ.
ಉಸಿರಾಟವು ಮೂಗಿನ ತುದಿಗೆ ಅಥವಾ ಮೇಲ್ತುಟಿಗೆ ಸ್ಪಶರ್ಿಸುತ್ತಿರುತ್ತದೆ. ಅಲ್ಲೇ ಅಬಾಧಿತ ಏಕಾಗ್ರತೆಯನ್ನು ನಿಲ್ಲಿಸಬಹುದು ಅಥವಾ ಕೆಲವು ಸಾಧಕರು ಕಿಬ್ಬೊಟ್ಟೆಯ ಮೇಲೆ ಮನಸ್ಸು ಕೇಂದ್ರೀಕರಿಸುತ್ತಾರೆ. ಪ್ರತಿ ಒಳ ಉಸಿರು ಮತ್ತು ಹೊರ ಉಸಿರಿಗೂ ಕಿಬ್ಬೊಟ್ಟೆ ಏರಿಳಿತ ಮಾಡುತ್ತಿರುತ್ತದೆ. ಅಲ್ಲೂ ಸಹ ಮನಸ್ಸು ಕೇಂದ್ರೀಕರಿಸಬಹುದು. ಆಗ ಉತ್ಸಾಹ ಉಂಟಾಗುತ್ತಿರುತ್ತದೆ. ಆನಂದ ಉಂಟಾಗುತ್ತಿರುತ್ತದೆ. ಅವನ್ನೆಲ್ಲಾ ವೃದ್ಧಿ ಮಾಡಬೇಕು. ಆದರೆ ಮೂಗಿನ ತುದಿ ಅಥವಾ ಕಿಬ್ಬೊಟ್ಟೆ ಎಲ್ಲೇ ಆಗಲಿ ಒಂದುಕಡೆ ಮಾತ್ರ ಏಕಾಗ್ರತೆ ಬೆಳೆಸಬೇಕು. ಎರಡುಕಡೆ ಬೆಳೆಸಿದರೆ, ಮನಸ್ಸು ಚದುರಿ ಅಶಾಂತತೆ ಉಂಟಾಗುತ್ತದೆ. ಮಿಕ್ಕ ಎಲ್ಲಾ ವಿಷಯಗಳಿಂದ ಮನಸ್ಸು ವಿಮುಖಗೊಳಿಸಬೇಕು. ಉಸಿರಾಟದ ಗಮನದ ವಿನಃ ಬೇರಾವ ಯೋಚನೆ ಇರಬಾರದು. ಮುಂದೆ ಸಾಧನೆ ಮುಂದುವರೆದಂತೆ ಜಾಗ್ರತಾ ಸ್ಥಿತಿಯು ಸಹಜವಾಗುತ್ತಾ ಹೋಗುತ್ತದೆ.
ಹಂತ-2 : ಉಸಿರಾಟವು ಕಿರಿದಾಗಿದ್ದಾಗ ನಾನು ಕಿರಿದಾಗಿ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಎಂದು ಅರಿಯುತ್ತಿರುತ್ತಾರೆ. 
ಅಂದರೆ ಇಲ್ಲಿ ಉಸಿರಾಟ ಸಾಮಾನ್ಯವಾಗಿ ಕಿರಿದಾಗಿರಬಹುದು ಅಥವಾ ಇಲ್ಲಿ ಉಸಿರಾಟಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿಲ್ಲ ಅಥವಾ ಉಸಿರಾಟದ ಗಾತ್ರ ಕಿರಿದಾಗಿರಬಹುದು. ಅಂದರೆ ಬಲವಂತವಾಗಿ ಉಸಿರಾಟವನ್ನು ದೀರ್ಘ ಅಥವಾ ಕಿರಿದಾಗಿ ಮಾಡಬಾರದು. ಈ ರೀತಿ ಕಿರಿದಾಗಿ ಉಸಿರಾಟವು ನಡೆಯುತ್ತಿರುವಾಗ ದೇಹವು ಅತ್ಯಂತ ಸಮತೋಲನವಾಗಿ, ಸ್ಥಿರವಾಗಿರುತ್ತದೆ ಮತ್ತು ಅಲುಗಾಡುವುದಿಲ್ಲ. ಉಸಿರಾಟವನ್ನು ಆಡುತ್ತಿದ್ದರೂ ಸಹ ಅದರ ಚಲನೆಯನ್ನು ಬೇರೆಯವರು ಗಮನಿಸಲು ಆಗುವುದಿಲ್ಲ. ಅಂದರೆ ಎದೆ ಅಥವಾ ಕಿಬ್ಬೊಟ್ಟೆಯಲ್ಲಿ ಚಲನೆ ಕಾಣದ ರೀತಿ ನಡೆಯುತ್ತಿರುತ್ತದೆ. ಅದು ಹೇಗೇ ನಡೆಯುತ್ತಿರಲಿ ಅದನ್ನು ಹಾಗೆಯೇ ಗಮನಿಸುತ್ತಿರಬೇಕು. ಈ ಸ್ಥಿತಿಯಲ್ಲಿ ಯೋಚನೆಗಳು ನಿಂತಿರುತ್ತದೆ. ಭೂತಕಾಲದಲ್ಲಿಯಾಗಲಿ ಅಥವಾ ಭವಿಷ್ಯತ್ತಿನಲ್ಲಿ ಆಗಲಿ ಮನಸ್ಸು ಚಲಿಸುವುದಿಲ್ಲ.
ಹಂತ-3 : ಇಡೀ (ಉಸಿರಿನ) ದೇಹವನ್ನು ಅನುಭವಿಸಿ ನಾನು ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಎಂದು ಹೀಗೆ ಸುಶಿಕ್ಷಣ ಪಡೆದು ಅರಿಯುತ್ತಿರುತ್ತಾನೆ. 
ಇಡೀ ಉಸಿರಿನ ಕಾಯವನ್ನು ಅನುಭವಿಸಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆ ಸ್ಥಾಪಿಸುತ್ತಾನೆ. ಆತನು ಅತ್ಯಂತ ಜಾಗೃತನು ವಿಶ್ಲೇಷಣೆಯಿಂದ ಕೂಡಿರುತ್ತಾನೆ. ಉಸಿರನ್ನು ಬಿಟ್ಟು ಬೇರೇನನ್ನು ಯೋಚಿಸಲಾರ, ಗ್ರಹಿಸಲಾರ, ಅರಿಯಲಾರ, ಅನುಭವಿಸಲಾರ. ಆತನು ಕೇವಲ ಉಸಿರಿನಲ್ಲೇ ಗಮನವಿಟ್ಟು ಉಸಿರಿನ ಆದಿ ಅಂತ್ಯ ಮತ್ತು ಮಧ್ಯದ ಪ್ರಕ್ರಿಯೆಯ ಎಲ್ಲವನ್ನು ಅರಿಯುತ್ತಾನೆ. ಉಸಿರು ಮೊದಲು ಮೂಗಿನ ತುದಿಯಲ್ಲಿ ಆರಂಭವಾಗುತ್ತದೆ ಮತ್ತು ನಾಭಿಯ ಬಳಿ ಅಂತಿಮವಾಗುತ್ತದೆ. ಮೂಗು ಮತ್ತು ನಾಭಿಯ ಮಧ್ಯದ ಭಾಗವೇ ಮಧ್ಯ (ಅಥವಾ ಹೃದಯ ಮತ್ತು ಪುಪ್ಪಸ). ಆತ ಮೂಗಿನ ತುದಿ ಮಾತ್ರವಲ್ಲ ಅಥವಾ ಎದೆಯ ಭಾಗ ಮಾತ್ರವಲ್ಲ ಅಥವಾ ನಾಭಿಯ ಭಾಗ ಮಾತ್ರವಲ್ಲ, ಆತ ಈ ಮೂರು ಅವಸ್ಥೆಯಲ್ಲೂ ಅಂದರೆ ಆರಂಭ, ಮಧ್ಯ ಮತ್ತು ಅಂತ್ಯದಲ್ಲಿಯೂ ಪೂರ್ಣವಾಗಿ ಪ್ರಕ್ರಿಯೆ ಅರಿಯುತ್ತಾನೆ. ಹೀಗೆ ಆತನು ಉಸಿರಿನ ಕಾಯವನ್ನು ಅನುಭವಿಸಿ ಉಸಿರಾಟದಲ್ಲಿ ಜಾಗ್ರತೆ ಸ್ಥಾಪಿಸಿರುತ್ತಾನೆ. ಉದಾಹರಣೆಗೆ ತಾಯಿಯು ಮಗುವನ್ನು ತೊಟ್ಟಿಲಲ್ಲಿ ತೂಗಾಡಿಸುತ್ತಾ ಇರುವಾಗ ಬಹಳ ಜಾಗ್ರತೆಯಿಂದ ಇರುತ್ತಾಳೆ. ಮಗುವು ನಿದ್ರಿಸಿದರೂ ಮತ್ತೆ ಎಚ್ಚರಗೊಂಡಾಗ ಎಲ್ಲಿ ಎದ್ದು ಅಥವಾ ನಿಂತು ತೊಟ್ಟಿಲಿನಂದ ಬೀಳುವುದೋ ಎಂದು ಮಮತೆಯಿಂದ ಪೂರ್ಣ ಜಾಗ್ರತೆಯಿಂದ ಕೂಡಿ ಕಾಪಾಡುತ್ತಾಳೆ. ತನ್ನ ಗಮನವೆಲ್ಲಾ ಆ ಮಗುವಿನ ಮೇಲೆಯೇ ಇಟ್ಟಿರುತ್ತಾಳೆ. ಆ ಮಗುವಿನ ತೊಟ್ಟಿಲಿನ ಪ್ರತಿ ಅವಸ್ಥೆಯಲ್ಲಿ ಜಾಗ್ರತೆ ಸ್ಥಾಪಿಸಿರುತ್ತಾಳೆ. ಹಾಗೆಯೇ ನಾವು ಸಹ ಉಸಿರಾಟದ ಪ್ರತಿ ಸ್ಥಿತಿಯಲ್ಲೂ ಜಾಗ್ರತೆ ಸ್ಥಾಪಿಸಬೇಕಾಗಿದೆ. ಕಾಯವನ್ನು ಅನುಭವಿಸಿ ಅಂದರೆ ವಿಶಾಲ ಅರ್ಥದಲ್ಲಿ ಇಡೀ ಶರೀರದ ರೂಪಕಾಯದಲ್ಲಿ ಮತ್ತು ನಾಮಕಾಯ (ಮನಸ್ಸು)ದಲ್ಲಿ ಅನುಭವಿಸಿ ಉಸಿರಾಡುತ್ತಿದ್ದೇವೆ ಎಂದರ್ಥವಾಗುತ್ತದೆ. ಆದರೆ ಪರಿಣಿತರು ಕೇವಲ ಉಸಿರಿನ ಕಾಯ ಮಾತ್ರ ಎಂದು ಹೇಳುತ್ತಾರೆ.
ಆತನು ಹೀಗೆ ಸುಶಿಕ್ಷಣ ಪಡೆದು ಅರಿಯುತ್ತಿರುತ್ತಾನೆ. ಹೇಗೆಂದರೆ : ನಾನು ಕಾಯಸಂಖಾರ (ದೇಹದ ಚಟುವಟಿಕೆ)ಗಳನ್ನು ಶಾಂತಗೊಳಿಸುತ್ತ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಮತ್ತು ಉಸಿರನ್ನು ಹೊರ ಬಿಡುತ್ತಿದ್ದೇನೆ.
ಇಲ್ಲಿ ಆತನು ದೇಹದ ಚಟುವಟಿಕೆಗಳನ್ನೆಲ್ಲಾ ಶಾಂತಗೊಳಿಸುತ್ತಾನೆ, ನಿಲ್ಲಿಸುತ್ತಾನೆ. ಸೂಕ್ಷ್ಮಗೊಳಿಸುತ್ತಾನೆ ಮತ್ತು ಪರಿಶುದ್ಧಿಗೊಳಿಸುತ್ತಾನೆ.
ಇಲ್ಲಿ ಶರೀರವು ಅಲ್ಲಾಡದೆ, ಬಾಗದೆ ಇರಬೇಕಾಗುತ್ತದೆ ಮತ್ತು ಯೋಚಿಸದೆ ಇರುವಾಗ ಶರೀರದಲ್ಲಿ ನಾನಾ ವಿಧವಾದ ಕಸಿವಿಸಿ, ಒತ್ತಡ, ಕಠಿಣತೆ, ಕ್ಷೊಭೆ, ನೋವು ನಿಲ್ಲುತ್ತದೆ. ಆತನ ದೃಢನಿಧರ್ಾರದಿಂದ ನೋವು ಎಲ್ಲವನ್ನು ಮೀರಿದ್ದರಿಂದ ಶರೀರವು ಶಾಂತವಾಗುತ್ತದೆ, ಪಳಗುತ್ತದೆ, ಮೆದುವಾಗುತ್ತದೆ ತುಂಬಾ ಸೂಕ್ಷ್ಮವಾಗುತ್ತದೆ. ಹೇಗೆಂದರೆ ಒಬ್ಬ ತಲೆಯ ಮೇಲೆ ಭಾರವನ್ನು ಎತ್ತಿಕೊಂಡು ಓಡುವುದು ಅಥವಾ ಬೆಟ್ಟ ಹತ್ತುವುದು ಮಾಡಿದಾಗ ಆತನ ಉಸಿರು ತಾರಕಕ್ಕೆ ಏರುತ್ತದೆ, ಅತಿಯಾಗುತ್ತದೆ. ಮೂಗಿನ ಹೊಳ್ಳೆಗೆ ಉಸಿರು ಜೋರಾಗಿ ಬೀಸುತ್ತದೆ. ದೇಹವೆಲ್ಲಾ ಕ್ಷೊಭೆಗೆ ಗುರಿಯಾಗಿ ದೇಹದಲ್ಲಿ ಅಶಾಂತತೆ ಮೂಡುತ್ತದೆ. ಆದರೆ ಅದೇ ವ್ಯಕ್ತಿ, ಭಾರವನ್ನು ಬಿಸಾಕಿ, ಓಡುವುದನ್ನು ನಿಲ್ಲಿಸಿ, ವಿಶ್ರಾಂತಿ ತೆಗೆದುಕೊಳ್ಳುತ್ತಾ ನಂತರ ಸ್ನಾನವನ್ನು ಮಾಡಿ, ತಂಪಾದ ನೆರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾ ಉಸಿರಾಟವನ್ನು ಗಮನಿಸಿದಾಗ ಉಸಿರಾಟವು ತುಂಬಾ ಶಾಂತವಾಗಿ, ಸೂಕ್ಷ್ಮವಾಗಿ ಗೋಚರಿಸುತ್ತದೆ. ಉಸಿರೇ ಇಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಇದೇರೀತಿಯ ಅನುಭವವು ಆತನಿಗೆ ಕಾಯದ ಸಂಖಾರಗಳನ್ನು ಸೂಕ್ಷ್ಮಗೊಳಿಸುವುದರಿಂದಾಗಿ ಉಂಟಾಗುತ್ತದೆ.
ಕಾಯದ ಸಂಖಾರಗಳನ್ನು ಶಾಂತಗೊಳಿಸುವುದು ಅಥವಾ ಸೂಕ್ಷ್ಮಗೊಳಿಸುವುದು ಹೇಗೆ? ಒಂದು ಸಮಾಧಿಯಿಂದ ಹೇಗೆಂದರೆ ಪಂಚನೀವರಣಗಳನ್ನು ಮೀರುವುದರಿಂದಾಗಿ ನಂತರ ಸಮಾಧಿಯ ಹಂತಗಳನ್ನು ದಾಟುತ್ತಿದ್ದಂತೆ ಹಿಂದಿನದಕ್ಕಿಂತ ಈಗಿನ ಸ್ಥಿತಿಯು ಶಾಂತವಾಗಿ, ಸೂಕ್ಷ್ಮವಾಗಿ ಕಾಣುವುದು. ಇದೇರೀತಿ ಪ್ರತಿಯೊಂದು ಹಂತದಲ್ಲೂ ಮೇಲೆ ಹೋಗುತ್ತಿದ್ದಂತೆ ಹಿಂದಿನ ಹಂತವು ಸ್ಥೂಲವಾಗಿ ಕಾಣುತ್ತದೆ. ಈಗಿನ ಹಂತವು ಶಾಂತವಾಗಿ ಸೂಕ್ಷ್ಮವಾಗಿ ಕಾಣುತ್ತದೆ.
ಮತ್ತೊಂದು ವಿಧಾನವೆಂದರೆ ವಿಪಶ್ಶನ ಧ್ಯಾನದಿಂದ ಅಂದರೆ ವಿಪಶ್ಶನ ಧ್ಯಾನದಲ್ಲಿ ಕಾಯ ಸಂಖಾರಗಳು ಸ್ಥೂಲವಾಗಿ ಕಾಣುತ್ತದೆ. ಧಾತುಗಳು ಸೂಕ್ಷ್ಮವಾಗಿ ಕಾಣುತ್ತದೆ. ಹಾಗೆಯೇ ಅರೂಪ ಸಮಾಧಿಗೆ ಹೋಲಿಸಿದರೆ ರೂಪ ಸಮಾಧಿಯು ಸ್ಥೂಲವಾಗಿರುತ್ತದೆ. ಅರೂಪ ಸಮಾಧಿಯು ಸೂಕ್ಷ್ಮವಾಗಿರುತ್ತದೆ. ಆದರೆ ನಾಮ ರೂಪಗಳನ್ನು ಅರಿಯುತ್ತಿರುವಾಗ ಅರೂಪವು ಸ್ಥೂಲವಾಗಿ ಕಂಡುಬರುತ್ತದೆ. ಹಾಗೆಯೇ ತ್ರಿಲಕ್ಷಣವನ್ನು ಅರಿಯುವಾಗ ನಾಮರೂಪದ ವಿಶ್ಲೇಷಣೆಯು ಸ್ಥೂಲವಾಗಿ ಕಂಡುಬರುತ್ತದೆ. ಇದೇರೀತಿ ಸಾಧನೆ ಮುಂದುವರೆಯುತ್ತಿರುತ್ತದೆ.
ಗಾಳಿಯ ಬಗ್ಗೆ, ಉಸಿರಾಟದ ಬಗ್ಗೆ ಜಾಗ್ರತೆಯು ಸ್ಥಾಪಿತವಾಗಿ, ನಿಮಿತ್ತಗಳಲ್ಲಿ ಕೌಶಲ್ಯ ಹೊಂದಿ ಮತ್ತು ಧ್ಯಾನಂಗಗಳಲ್ಲಿ ಕೌಶಲ್ಯ ಹೊಂದಿ, ಸಮಾಧಿಯಲ್ಲಿ ನೈಪುಣ್ಯತೆ ಪಡೆದು, ಹಂತ ಹಂತವು ಶುದ್ಧಿ ಹೊಂದುತ್ತಾನೆ. ಹಂತಹಂತವು ಸೂಕ್ಷ್ಮಕ್ಕೆ ಏರುತ್ತಾನೆ. ಹೇಗೆಂದರೆ ಗಂಟೆಯ ಶಬ್ದದಂತೆ, ಗಂಟೆಯ ಶಬ್ದವು ಹೊರಹೊಮ್ಮಿದಾಗ ಗಂಟೆಯ ಶಬ್ದ ಕೇಳಿಸುತ್ತದೆ. ನಂತರ ಗಾಳಿಯಲ್ಲಿ ಶಬ್ದದ ಕಂಪನಗಳು ಅಲೆಗಳಿಂದಲೂ ಸೂಕ್ಷ್ಮವಾಗಿ ಗಂಟೆ ನಿಂತ ನಂತರವೂ ಕೇಳಿಸುತ್ತಿರುತ್ತದೆ. ಇದೇರೀತಿ ಸೂಕ್ಷ್ಮವನ್ನು ಅವಲಂಬಿಸಿ ಮತ್ತಷ್ಟು ಅಭಿವೃದ್ಧಿ ಆಗುತ್ತಿರುತ್ತದೆ.
ಆಯ್ಕೆಗಳು : ಇಲ್ಲಿ ಆತನು ಚತುರ್ಥ ಸಮಾಧಿ ಪ್ರಾಪ್ತಿ ಮಾಡಿ ವಿಪಶ್ಶನ ಧ್ಯಾನ ಮಾಡಬಹುದು ಅಥವಾ ಪ್ರಥಮ ಧ್ಯಾನದ ನಂತರವೇ ವಿಪಶ್ಶನವನ್ನು ಪ್ರಾರಂಭಿಸಬಹುದು. ಅಥವಾ ಅರೂಪ ಸಮಾಧಿಯ ನಂತರವೂ ಪ್ರಾರಂಭಿಸಬಹುದು. ವಿಪಶ್ಶನದ ಪ್ರಾರಂಭಕ್ಕೆ ಯಾವ ಸ್ಥಿತಿಯು ಅಡ್ಡಿಯಿಲ್ಲ. ಆದರೆ ಸಮಥ ಧ್ಯಾನ ಮಾತ್ರ ಪ್ರಾರಂಭದಿಂದಲೇ ಆರಂಭಿಸಬೇಕಾಗುತ್ತದೆ.
ಆನಾಪಾನಾ ವೇದನಾನುಪಸ್ಸನಾ :
ಇಲ್ಲಿ ಸಾಧಕನು ಸುಶಿಕ್ಷಣ ಪಡೆದು ಹೀಗೆ ಅರಿತು ಸಾಧನೆ ಮಾಡುತ್ತಾನೆ. ನಾನು ಪೀತಿ (ಆನಂದ)ವನ್ನು ಅನುಭವಿಸುತ್ತಾ ಉಸಿರು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಇಲ್ಲಿ ಆನಂದವನ್ನು 2 ವಿಧದಲ್ಲಿ ಅನುಭವಿಸಬಹುದು.
ಧ್ಯಾನ ವಸ್ತು ವಿಷಯದಿಂದ (ಸಮಥದಿಂದ) 2. ಗೊಂದಲಾತೀತದಿಂದ (ವಿಪಶ್ಶನದಿಂದ) ಇಲ್ಲಿ ಧ್ಯಾನ ವಿಷಯದಿಂದ ಪ್ರಥಮ ಸಮಾಧಿ ಪ್ರಾಪ್ತಿಯಾದಾಗಿನಿಂದ ಆತನು ಆನಂದವನ್ನು ಅನುಭವಿಸಿರುತ್ತಾನೆ. ಇಲ್ಲಿ ಆತನು ಪ್ರಥಮ ಮತ್ತು ದ್ವಿತೀಯ ಧ್ಯಾನದಲ್ಲಿ ಅನುಭವಿಸಿದ ಆನಂದದಲ್ಲಿ ಅನಿತ್ಯತೆ ಕಾಣುತ್ತಾನೆ. ಹೀಗೆ ಆತನು ಗೊಂದಲಾತೀತನಾಗುತ್ತಾನೆ.
ಇಲ್ಲಿ ಆತನು 16 ರೀತಿಯಲ್ಲಿ ಆನಂದವನ್ನು ಉದಯಿಸುವಂತೆ ಮಾಡಬಹುದು. ಹೇಗೆಂದರೆ ಆತನು ಅನಾಪಾನಾಸತಿಯಲ್ಲಿ ಏಕಾಗ್ರತೆಯಿಂದ ಇದ್ದಾಗ, ಯಾವುದೇ ರೀತಿ ಭಂಗಬಾರದ ರೀತಿಯಲ್ಲಿ ಧ್ಯಾನಿಸುತ್ತಿರುವಾಗ ಅದನ್ನು (1) ಅರಿತಾಗ
 (2) ಗಮನಹರಿಸಿದಾಗ
(3) ಗ್ರಹಿಸಿದಾಗ
(4) ಸ್ಪಷ್ಟವಾಗಿ ನೋಡಿದಾಗ
(5) ಪ್ರತಿಬಿಂಬಿಸಿದಾಗ
(6) ನಿರ್ಧರಿಸಿದಾಗ
 (7) ಶ್ರದ್ಧೆಯಿಂದ ನಿರ್ಧರಿಸಿದಾಗ
 (8) ಪ್ರಯತ್ನಶೀಲದಿಂದ ಕೂಡಿದಾಗ
(9) ಜಾಗ್ರತೆ ಸ್ಥಾಪಿಸಿದಾಗ
(10) ಏಕಾಗ್ರತೆಯಲ್ಲಿ ನೆಲೆಸಿದಾಗ
(11) ಪ್ರಜ್ಞೆಯಿಂದ ಅರಿತಾಗ
(12) ಅಭಿಜ್ಞಾದಿಂದ ಕೂಡಿದಾಗ
 (13) ಯಾವುದನ್ನು ಅರಿಯಬೇಕೋ ಅದನ್ನು ಅರಿತಾಗ
 (14) ಯಾವುದನ್ನು ತ್ಯಜಿಸಬೇಕೋ ಅದನ್ನು ತ್ಯಜಿಸಿದಾಗ
(15) ಯಾವುದನ್ನು ವೃದ್ಧಿಸಬೇಕೋ ಅದನ್ನು ವೃದ್ಧಿಸಿದಾಗ
(16) ಯಾವುದನ್ನು ಸಾಕ್ಷಾತ್ಕರಿಸಬೇಕೋ ಅದನ್ನು ಸಾಕ್ಷಾತ್ಕರಿಸಿದಾಗ ಆನಂದ ಉದಯಿಸುತ್ತದೆ.
ಯಾವಾಗ ಆತನು ಸದಾ ಉದಾತ್ತವಾದ ಆನಂದದಿಂದ ಕೂಡಿರುವನೋ ಆಗ ಆತನಿಂದ ಯಾವುದೇ ಪಾಪ ಆಗುವುದಿಲ್ಲ. ಇದೇ ಆತನ ಶೀಲವಾಗಿರುತ್ತದೆ. ಆಗ ಆತನು ಅಭಂಗ ಏಕಾಗ್ರತೆಯಲ್ಲಿರುತ್ತಾನೆ. ಇದೇ ಆತನ ಸಮಾಧಿಯಾಗಿದೆ. ಈ ಆನಂದವು ಅನಿತ್ಯ, ಅನಾತ್ಮ ಎಂದು ಅರಿಯುತ್ತಾನೆ. ಇದೇ ಆತನ ಪ್ರಜ್ಞೆಯಾಗಿದೆ. ಹೀಗೆ ಆತನು ಸುಶಿಕ್ಷಣವನ್ನು ಪಡೆಯುತ್ತಾನೆ.

ಸಂಕ್ಷಿಪ್ತ ಆನಾಪಾನಾ ವೇದನಾನುಪಸ್ಸನಾ

1. ಇಲ್ಲಿ ಸಾಧಕನು ಆನಂದವನ್ನು ಅರಿಯುತ್ತಾ ಅದರ ಅನಿತ್ಯತೆಯನ್ನು ಅರಿಯುತ್ತಾನೆ. ಅದು ಶಾಶ್ವತವಲ್ಲ ಎಂದು ಅರಿಯುತ್ತಾನೆ. ಆಗ ಆತನು ನಿತ್ಯವೆಂಬ ಗ್ರಹಿಕೆ (ನಿಚ್ಚ ಸನ್ಯಾ) ತ್ಯಜಿಸುತ್ತಾನೆ.
2. ನಂತರ ವೇದನೆಗಳೆಲ್ಲವೂ ಅವು ಸುಖ ಪೂರ್ವಕವೇ ಆಗಿದ್ದರೂ ಜನ್ಮ ನೀಡುವುದರಿಂದ, ವಿಯೋಗವಾಗುವುದರಿಂದ ಮರೆಯಾಗುವುದರಿಂದಾಗಿ ಅವು ದುಃಖಕರ ಎಂದು ಅರಿತು ಸುಖವೆಂಬ ಗ್ರಹಿಕೆಯನ್ನು (ಸುಖಿ ಸನ್ಯಾ) ತ್ಯಜಿಸುತ್ತಾನೆ.
3. ನಂತರ ಸಾಧಕನು ಯಾವುದೆಲ್ಲಾ ವೇದನೆಗಳು ಉದಯಿಸಿ ಮರೆಯಾಗುತ್ತವೆಯೋ ಮತ್ತು ದುಃಖಜಾತವು ಅಗಿರುವುದರಿಂದಾಗಿ ಅವು ನಾನಲ್ಲ, ನನ್ನದಲ್ಲ ಅವು ನನ್ನ ಆತ್ಮವಲ್ಲ ಎಂದು ಅರಿಯುತ್ತಾನೆ. ಈ ರೀತಿಯಾಗಿ ಆತನು ಆನಂದವೇ ನನ್ನ ಆತ್ಮ ಎಂಬ ಮಿಥ್ಯಾ ಗ್ರಹಿಕೆಯನ್ನು (ಅತ್ತಸನ್ಯಾ) ತೊರೆಯುತ್ತಾನೆ.
4. ಹೀಗಾಗಿ ಆತನು ವೇದನೆಗಳಲ್ಲಿ (ಆನಂದದಲ್ಲಿ) ಯಾವ ಸುಖವನ್ನು ಪಡೆಯಲಾರ. ಆತನು ಆನಂದಿಸುವ ಪ್ರವೃತ್ತಿ ತೊರೆಯುತ್ತಾನೆ.
5. ಹೀಗೆ ಆತನು ವಿರಾಗಿಯಾಗುತ್ತಾನೆ, ವೇದನೆಗಳಲ್ಲಿ (ಆನಂದದಲ್ಲಿ) ವಿರಾಗ ಭಾವನೆ ತಾಳುತ್ತಾನೆ, ಹೀಗಾಗಿ ಆತನು ಭಾವೋದ್ರೇಕಗಳನ್ನೆಲ್ಲಾ ತೊರೆಯುತ್ತಾನೆ.
6. ನಂತರ ಆತನು ಈ ವೇದನೆಗಳ ಅಂತ್ಯ ಮಾಡಲು ನಿರ್ಧರಿಸುತ್ತಾನೆ (ನಿರೋಧ) ಮತ್ತು ಆತನಲ್ಲಿ ವೇದನೆಗಳು ಉದಯಿಸಲಾರವು. ಏಕೆಂದರೆ ಆತನು ಅವುಗಳ ಸಮುದಾಯ (ಉತ್ಪತ್ತಿ)ವನ್ನೇ ನಿಲ್ಲಿಸಿದ್ದಾನೆ. ಆತನಲ್ಲಿ ಈಗ ಸ್ಪರ್ಶವಾದರೂ ವೇದನೆಗಳು ಉಂಟಾಗುವುದಿಲ್ಲ.
7. ಹೀಗೆ ಆತನು ವೇದನೆಗಳನ್ನು (ಆನಂದವನ್ನು) ತ್ಯಜಿಸುತ್ತಾನೆ. ಅವುಗಳಲ್ಲಿ ಅಂಟುವುದಿಲ್ಲ. ಅವುಗಳಿಗೆ ಅತೀತನಾಗುತ್ತಾನೆ. ಹೀಗೆ ಆತನು ಆನಂದದಲ್ಲಿ ಅನುಭವಿಸುತ್ತಾ ಉಸಿರಾಟದ ಧ್ಯಾನದಲ್ಲಿ ವಿಹರಿಸುತ್ತಾನೆ.
ಇಲ್ಲಿ ಸಾಧಕನು ಸುಶಿಕ್ಷಣ ಪಡೆದು ಹೀಗೆ ಅರಿತು ಸಾಧನೆ ಮಾಡುತ್ತಾನೆ. ನಾನು ಸುಖ (ದಿವ್ಯವಾದ ಸುಖ)ವನ್ನು ಅನುಭವಿಸುತ್ತಾ ಉಸಿರನ್ನು ಒಳ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಹೊರ ಬಿಡುತ್ತಿದ್ದೇನೆ.
ಆನಂದವು ಸ್ಥೂಲವಾದರೆ ಸುಖವು ಸೂಕ್ಷ್ಮವಾಗಿದೆ. ಆನಂದವನ್ನು ದ್ವಿತೀಯ ಧ್ಯಾನದವರೆಗೆ ಅನುಭವಿಸಿದರೆ, ಸುಖವನ್ನು ತೃತೀಯ ಧ್ಯಾನದವರೆಗೆ ಅನುಭವಿಸಬಹುದಾಗಿದೆ. ಅಷ್ಟೇ ಅಲ್ಲ, ಸುಖವನ್ನು ವಿಪಶ್ಶನ ಧ್ಯಾನದಲ್ಲಿಯೂ ಅನುಭವಿಸಬಹುದಾಗಿದೆ.
ಆನಂದದಂತೆ ಸುಖವನ್ನು ಸಹ 16 ವಿಧದಲ್ಲಿ ಉದಯಿಸಬಹುದಾಗಿದೆ ಮತ್ತು ಸದಾ ಸುಖ ಪೂರ್ವಕದಲ್ಲಿ ಇರುವವನಲ್ಲಿ ಶೀಲ, ಸಮಾಧಿ ಮತ್ತು ಪ್ರಜ್ಞಾವು ನೆಲೆಸಿರುತ್ತದೆ.
ಇಲ್ಲಿ ಸಾಧನೆಯೆಲ್ಲವೂ ಹಿಂದಿನ ಹಂತದಂತೆಯೇ ಅಂದರೆ ಆನಂದವನ್ನು ಅನುಭವಿಸಿದ ರೀತಿಯಲ್ಲಿಯೇ. ಆದರೆ ವ್ಯತ್ಯಾಸವಿರುವುದು ಕೇವಲ ಹಿಂದಿನ ಸಾಧನೆಗೆ ಆನಂದವು ವಸ್ತು ವಿಷಯವಾಗಿತ್ತು. ಇಲ್ಲಿ ಸುಖವು ವಸ್ತು ವಿಷಯವಾಗಿದೆ.
ಚಿತ್ತ ಸಂಖಾರಗಳನ್ನು ಅನುಭವಿಸುತ್ತಾ ನಾನು ಉಸಿರನ್ನು ಒಳ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಹೊರಬಿಡುತ್ತಿದ್ದೇನೆ. ಈ ರೀತಿ ಸುಶಿಕ್ಷಣ ಪಡೆದು ಆತನು ಸಾಧನೆ ಮಾಡುತ್ತಿರುತ್ತಾನೆ.
ಇಲ್ಲಿ ಸುಶಿಕ್ಷಣವೆಂದರೆ ಶೀಲ, ಸಮಾಧಿ, ಪ್ರಜ್ಞಾವೇ ಆಗಿದೆ. ಒಳ ಉಸಿರು, ಹೊರ ಉಸಿರಿನ ಜಾಗ್ರತೆಯೇ ಆನಾಪಾನಾಸತಿಯಾಗಿದೆ. ಇಲ್ಲಿ ಚಿತ್ತ ಸಂಖಾರಗಳನ್ನು ವೀಕ್ಷಿಸುವುದೇ ಪ್ರಜ್ಞಾವಾಗಿದೆ. ಇಲ್ಲಿ ಚಿತ್ತಸಂಖಾರಗಳೆಂದರೆ ವೇದನಾ ಮತ್ತು ಸನ್ಯಾ (ಸಞ್ಞಾ) ಆಗಿದೆ. ಈ ವೇದನಾ ಮತ್ತು ಸನ್ಯಾವು ಪಂಚಖಂಧಗಳಲ್ಲಿ ಎರಡಾಗಿದೆ. ಉಳಿದವುಗಳೆಂದರೆ ರೂಪ, ವಿನ್ಯಾನ, ಸಂಖಾರ.
ಇಂದ್ರಿಯ ಮತ್ತು ಇಂದ್ರೀಯಗಳ ಸ್ಪರ್ಶದ ನಂತರದ ಸ್ಥಿತಿಯೇ ವೇದನಾ ಆಗಿದೆ. ವೇದನೆಯೆಂದರೆ ಯಾವ ವೇದನೆಯೆಂದು ಪತ್ತೆಹಚ್ಚುವುದೇ ಸನ್ಯಾ (ಗ್ರಹಿಕೆ)ಯಾಗಿದೆ. ಹಾಗೆಯೇ ಮನಸ್ಸು ಮತ್ತು ಮನಸ್ಸಿನ ವಿಷಯಗಳು ಸಂಪಕರ್ಿಸಿದಾಗ ವೇದನೆ (ಸಂವೇದನೆ) ಉಂಟಾಗುತ್ತದೆ. ಧ್ಯಾನದಲ್ಲೂ ಕಾಯಾನುಪಸ್ಸನಾ ಮತ್ತು ವೇದನೆ ಆನಾಪಾನಾ ಮಾಡುವಾಗ ವೇದನೆಗಳು ಉಂಟಾಗುತ್ತದೆ. ಅವು ಮುಖ್ಯವಾಗಿ 3 ವಿಧವಾಗಿದೆ. ಪ್ರಿಯ (ಸುಖ) ವೇದನೆ, ದುಃಖ (ಅಪ್ರಿಯ) ವೇದನೆ ಮತ್ತು ಪ್ರಿಯ ಅಪ್ರಿಯವಲ್ಲದ (ಸುಖವೂ-ದುಃಖವೂ ಅಲ್ಲದ ವೇದನೆ) ವೇದನೆ. ಇವು ಯಾವ ವೇದನೆಯೆಂದು ಪತ್ತೆಹಚ್ಚುವುದೇ ಗ್ರಹಿಕೆಯಾಗಿದೆ.
ಧ್ಯಾನ ಆಳದಲ್ಲಿ ಸಂಖಾರಗಳು, ವಿನ್ಯಾನವು, ಯೋಚನೆಗಳು ಇರುವುದಿಲ್ಲ. ಆದರೆ ವೇದನೆ ಮತ್ತು ಸನ್ಯಾಗಳು ಇರುತ್ತದೆ. ಹೀಗಾಗಿ ಇವುಗಳ ವೀಕ್ಷಣೆಯೇ ಚಿತ್ತ ಸಂಖಾರಗಳ ವೀಕ್ಷಣೆ ಅಥವಾ ನಿಜವಾದ ವೇದನಾನುಪಸ್ಸನಾವಾಗಿದೆ. ಸನ್ಯಾವು ದೃಷ್ಟಿಗೆ (ಮಿಥ್ಯಾ ದೃಷ್ಟಿಗೆ) ಮೂಲವಾಗಿದೆ. ಉದಾಹರಣೆಗೆ : ಸುಂದರವಾಗಿದೆ ಎಂಬ ಶುಭದೃಷ್ಟಿ, ಸುಖವಾಗಿದೆ ಎಂಬ ಸುಖದೃಷ್ಟಿ, ಇದು ನಾನೇ ಎಂಬ ಆತ್ಮದೃಷ್ಟಿ, ಇದು ನಿತ್ಯ ಎಂಬ ನಿಚ್ಚ ದಿಟ್ಟಿ ಇವೆಲ್ಲವೂ ಗ್ರಹಿಕೆಯಿಂದಲೇ ಉಂಟಾಗುತ್ತದೆ. ಹಾಗೆಯೇ ಪ್ರಜ್ಞಾದಿಂದ ಅಶುಭಾ, ಅನಿತ್ಯಾ, ದುಃಖ ಮತ್ತು ಅನಾತ್ಮವು ಉಂಟಾಗುತ್ತದೆ.
ಇದು ಅಪ್ಪಟವಾದ ವಿಪಸ್ಸನಾ ಧ್ಯಾನವಾಗಿದೆ. ಇಲ್ಲಿ ಸಮಥದ ಪ್ರವೇಶವಿಲ್ಲವಾಗಿದೆ. ವೇದನಾದಿಂದ ಸನ್ಯಾವು ಉಂಟಾಗುತ್ತದೆ. ಹಾಗೆಯೇ ಸನ್ಯಾದಿಂದ ವೇದನಾವು ಸಹಾ ಉಂಟಾಗುತ್ತದೆ. ಸನ್ಯಾದಿಂದ ಮನೋಕ್ಲೇಶವಾದ ದಿಟ್ಟಿ ಉಂಟಾಗುತ್ತದೆ. ಆದರೆ ವೇದನಾದಿಂದ ಇಚ್ಛೆ ಉಂಟಾಗುತ್ತದೆ. ಈ ಇಚ್ಛೆಯೇ ಎಲ್ಲ ಕರ್ಮಗಳ ಮೂಲವಾಗಿದೆ. ಗ್ರಹಿಕೆ ಮತ್ತು ವೇದನೆಗಳು ಮನಸ್ಸಿಗೆ ಕಾರಣವಾಗಿದೆ ಹಾಗು ಸನ್ಯಾವು ಮಾತ್ರ ಮನಸ್ಸಿನ ಅಂತಿಮ ಸ್ಥಿತಿಯಾಗಿದೆ. ಇಲ್ಲಿ ಮತ್ತೊಮ್ಮೆ ವೇದನಾನುಪಸ್ಸನಾ ಆರಂಭವಾಗಬೇಕಾಗುತ್ತದೆ. ಇಲ್ಲಿ ಆನಂದವೇ ಆಗಿರಲಿ, ಸುಖವೇ ಆಗಿರಲಿ ಅದು ವೇದನೆಯೆಂದು ಪರಿಗಣಿಸಲ್ಪಡುತ್ತದೆ. ಅವುಗಳ ವೀಕ್ಷಣೆ ಇಲ್ಲಿ ಆಗುತ್ತದೆ. ಇಲ್ಲಿ ವೇದನೆಗಳ ಉದಯ, ಸ್ಥಾಪನೆ, ಅಳಿವು ಎಲ್ಲವನ್ನೂ ಸಾಧಕ ಅರಿಯುತ್ತಿರುತ್ತಾನೆ.
ಚಿತ್ತ ಸಂಖಾರಗಳನ್ನು ಶಾಂತಗೊಳಿಸುತ್ತ ನಾನು ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಉಸಿರನ್ನು ಹೊರಬಿಡುತ್ತಿದ್ದೇನೆ ಎಂದು ಆತನು ಸುಶಿಕ್ಷಣ ಪಡೆದು ಸಾಧನೆ ಮಾಡುತ್ತಿರುತ್ತಾನೆ.
ಇಲ್ಲಿ ಚಿತ್ತ ಸಂಖಾರಗಳಾದ ವೇದನೆ ಮತ್ತು ಗ್ರಹಿಕೆಗಳ ಕಡೆ ಕೇಂದ್ರೀಕರಿಸಿ ಆನಾಪಾನಾಸಾಧನೆ ಮಾಡುತ್ತಿರುತ್ತಾನೆ. ಆತನು ವೇದನೆಗಳಿಗೆ ಅನಿತ್ಯ, ಅತೃಪ್ತಿಕಾರಕ (ದುಃಖ) ಮತ್ತು ಅನಾತ್ಮ (ನಾನು ಅಲ್ಲ) ಕಂಡು ಆನಂದದಿಂದ ಮತ್ತು ಸುಖದಿಂದ ವಿಮುಖವಾಗುತ್ತಾನೆ. ಹಾಗೆಯೇ (ಮಿಥ್ಯಾ) ಸನ್ಯಾದಿಂದ ಅಂದರೆ ಶುಭ (ಸುಂದರ) ನಿತ್ಯ, ಸುಖ ಮತ್ತು ಇದೇ ನನ್ನ ಆತ್ಮ, ಇದೇ ನಾನು, ಇದೇ ನನ್ನದು ಎಂಬ ಗ್ರಹಿಕೆಗಳಿಂದ ಮುಕ್ತನಾಗುತ್ತಾನೆ. ವೇದನೆಗಳ ಮತ್ತು ಸನ್ಯಾಗಳ ಉದಯ ಹೇಗೆ ಆಗುತ್ತವೆ ಎಂಬುದನ್ನು ಅರಿಯುತ್ತಾನೆ. ಹಾಗೆಯೇ ಅವುಗಳ ಅಪಾಯ ಅರಿಯುತ್ತಾನೆ. ಅವುಗಳಲ್ಲಿ ಆಸಕ್ತಿ ಕ್ಷೀಣಿಸಿ ಅವುಗಳಲ್ಲಿ ಆನಂದಿಸದೆ, ವಿರಾಗಿಯಾಗಿ ವೇದನೆಗಳ ಉದಯವನ್ನೇ ತಡೆದು ಈ ರೀತಿಯಾಗಿ ವೇದನೆಗಳ ಅಂತ್ಯಹಾಡಿ ತ್ಯಜಿಸುತ್ತಾನೆ. ಇರುವ ವೇದನೆಗಳನ್ನು ನಿಲ್ಲಿಸುತ್ತಾನೆ. ಹೊಸದಾಗಿ ವೇದನೆ ಉದಯಿಸದಂತೆ ಮಾಡುತ್ತಾನೆ. ಸಮಚಿತ್ತತೆಯನ್ನು ವೃದ್ಧಿಸಿ ವೇದನಾ ಸಮಚಿತ್ತತೆ ಸಾಧಿಸುತ್ತಾನೆ.

ವೇದನಾನುಪಸ್ಸನಾ

ಸತಿಪಟ್ಠಾನ ಸುತ್ತದಲ್ಲಿ ಹೀಗೆ ಭಗವಾನರು ಇದರ ಬಗ್ಗೆ ಹೇಳಿದ್ದಾರೆ, ಭಿಕ್ಷುಗಳೇ ಹೇಗೆ ಇಲ್ಲಿ ಭಿಕ್ಷುವು ವೇದನೆಗಳಲ್ಲಿ ವೇದನಾನುಪಸ್ಸಿಯಾಗಿ ವಿಹರಿಸುವನು?
ಇಲ್ಲಿ ಭಿಕ್ಷುಗಳೇ, ಯಾವಾಗ ಸುಖ ವೇದನೆಯನ್ನು ಅನುಭವಿಸಿರುತ್ತಿರುವನೋ ನಾನು ಅನುಭವಿಸುತ್ತಿರುವುದು ಸುಖವೇದನೆ ಎಂದು ಅರಿಯುತ್ತಿರುತ್ತಾನೆ. ಯಾವಾಗ ನೋವಿನ ವೇದನೆಯನ್ನು ಅನುಭವಿಸುತ್ತಿರುವನೋ ಆಗ ಆತನಗೆ ನಾನು ಅನುಭವಿಸುತ್ತಿರುವುದು ನೋವಿನ ವೇದನೆ ಎಂದು ಅರಿಯುತ್ತಿರುತ್ತಾನೆ. ಯಾವಾಗ ತಟಸ್ಥ ವೇದನೆಯನ್ನು ಅರಿಯುತ್ತಿರುವನೋ ಆಗ ಆತನಿಗೆ ನಾನು ಅನುಭವಿಸುತ್ತಿರುವುದು ತಟಸ್ಥ ವೇದನೆ ಎಂದು ಗೊತ್ತಾಗುತ್ತದೆ.
ಯಾವಾಗ ಪ್ರಾಪಂಚಿಕ ಸುಖ ವೇದನೆಯನ್ನು ಅನುಭವಿಸುತ್ತಿರುವನೋ ಆಗ ಆತನಿಗೆ ಗೊತ್ತಿರುತ್ತದೆ. ನಾನು ಅನುಭವಿಸುತ್ತಿರುವುದು ಪ್ರಾಪಂಚಿಕ ಸುಖವೇದನೆ ಯವಾಗ ಪ್ರಾಪಂಚಿಕ ದುಃಖ (ನೋವಿನ) ವೇದನೆಯನ್ನು ಅನುಭವಿಸುತ್ತಿರುವನೋ ಆಗ ಆತನಿಗೆ ನಾನು ಅನುಭವಿಸುತ್ತಿರುವುದು ಪ್ರಾಪಂಚಿಕ ದುಃಖವೇದನೆ ಎಂದು ತಿಳಿಯುತ್ತದೆ. ಹಾಗೆಯೇ ಯಾವಾಗ ಪ್ರಾಪಂಚಿಕ ತಟಸ್ಥ ವೇದನೆಯನ್ನು ಅನುಭವಿಸುತ್ತಿರುವನೋ ಆಗ ಆತನಿಗೆ ನಾನು ಅನುಭವಿಸುತ್ತಿರುವುದು ಪ್ರಾಪಂಚಿಕ ತಟಸ್ಥ ವೇದನೆ ಎಂದು ತಿಳಿದಿರುತ್ತದೆ.
ಹೀಗೆ ಆತನು ವಿಹರಿಸುತ್ತಾ (ಧ್ಯಾನಿಸುತ್ತ) ವೇದನೆಗಳಲ್ಲಿ ವೇದನಾನುಪಸ್ಸಿಯಾಗಿ ಆಂತರಿಕವಾಗಿಯು ಮತ್ತು ಬಾಹ್ಯವಾಗಿಯು ಅಥವಾ ಆಂತರಿಕ ಮತ್ತು ಬಾಹ್ಯಗಳೆರಡರ ವೇದನೆಗಳಲ್ಲೂ ವೇದನಾನುಪಸ್ಸಿಯಾಗಿ ವಿಹರಿಸುತ್ತಾನೆ.
ಮತ್ತೆ ಆತನು ವೇದನೆಗಳು ಉದಯಿಸುವುದನ್ನು ಅರಿಯುತ್ತಾನೆ. ಹಾಗೆಯೇ ವೇದನೆಗಳು ಅಳಿಯುವುದನ್ನು ಕಾಣುತ್ತಾನೆ ಅಥವಾ ವೇದನೆಗಳ ಉದಯ ವ್ಯಯ (ಅಳಿವು) ಎರಡನ್ನೂ ಕಾಣುತ್ತಾನೆ.
ಆತನ ಜಾಗ್ರತೆಯು ಈ ರೀತಿ ಸ್ಥಾಪಿಸಲ್ಪಡುತ್ತದೆ ಅಲ್ಲಿ ವೇದನೆ ಅಷ್ಟೇ ಇದೆ ಜ್ಞಾನಕ್ಕಾಗಿ ಮತ್ತು ಜಾಗ್ರತೆಗಾಗಿ ಆತನು ಅರಿಯುತ್ತಿರುತ್ತಾನೆ ಹಾಗು ಜಗತ್ತಿನ ಯಾವುದಕ್ಕೂ ಅಂಟದೆ ಆತನು ಸ್ವತಂತ್ರವಾಗಿ ವಿಹರಿಸುತ್ತಾನೆ.
ಭಿಕ್ಷುಗಳೇ ಹೀಗೆ ಭಿಕ್ಷುವು ವೇದನೆಗಳಲ್ಲಿ ವೇದನಾನುಪಸ್ಸಿಯಾಗಿ ವಿಹರಿಸುತ್ತಾನೆ.
ವೇದನಾನುಪಸ್ಸನಾವನ್ನು ಇಂದಿಗೂ ಆಚರಣೆಯಲ್ಲಿ ಆಚರಿಸುತ್ತಿರುವರು. ವಿಪಸ್ಸನಾ ಧ್ಯಾನದಲ್ಲಿ ಇದು ಒಂದು ಪ್ರಮುಖವಾದ ಅಂಗವಾಗಿದೆ. ಇಲ್ಲಿ ಸಾಧಕರು ಆನಾಪಾನಾ ಸಾಧನೆಯ ನಂತರ ಅಥವಾ ಅದರ ಜೊತೆಯಲ್ಲೇ ಅಥವಾ ಆನಾಪಾನಾ ಸ್ವಲ್ಪಕಾಲ ಮಾಡಿ ನೇರವಾಗಿ ವೇದನಾನುಪಸ್ಸನಾ ಧ್ಯಾನವನ್ನು ಮಾಡುತ್ತಾರೆ. ಇದರ ಪ್ರಕ್ರಿಯೆ ಹೀಗಿದೆ :
ಪದ್ಮಾಸನದಲ್ಲಿ ಅಥವಾ ಸುಖಾಸನದಲ್ಲಿ ಕುಳಿತುಕೊಳ್ಳಿ. ದೇಹವೆಲ್ಲಾ ಸಡಿಲಿಸಿ ನೇರವಾಗಿ ಕುಳಿತು ಉಸಿರು ಸ್ಪಶರ್ಿಸುವ ಮೂಗಿನ ತುದಿಯಲ್ಲಿ ಅಥವಾ ಮೇಲ್ತುಟಿಯ ಮೇಲ್ಭಾಗದಲ್ಲಿ ಗಮನವನ್ನು ಕೇಂದ್ರೀಕರಿಸುತ್ತಾರೆ. ಅಥವಾ ಕೆಲವರು ಕಿಬ್ಬೊಟ್ಟೆಯಲ್ಲಿ ಉಸಿರಾಟದಿಂದಾಗುವ ಏರಿಳಿತದಲ್ಲಿ ಗಮನ ಕೇಂದ್ರೀಕರಿಸುತ್ತಾರೆ. ಹಾಗೆಯೇ ಪ್ರಬಲ ಏಕಾಗ್ರತೆಯ ನಿಮಿಷಗಳು ಕಳೆದನಂತರ ಆ ಭಾಗದಲ್ಲಿ ಸಂವೇದನೆ ಉಂಟಾಗುತ್ತದೆ. ಹೇಗೆಂದರೆ ಗಾಳಿಯ ಸ್ಪರ್ಶದಂತೆ, ಹತ್ತಿಯ ಸ್ಪರ್ಶದಂತೆ, ನೀರಿನ ಹನಿಯಂತೆ, ತಣ್ಣನೆಯ ಸ್ಪರ್ಶದಂತೆ, ಮೃದುವಾದ ಸ್ಪರ್ಶದಂತೆ, ಚಲನೆಯಂತೆ, ಏನೂ ತಿರುಗಿದಂತೆ, ಒರಟಾದ ಸ್ಪರ್ಶದಂತೆ, ಬಿಸಿಯ ಸ್ಪರ್ಶದಂತೆ, ಮುಳ್ಳು, ಚುಚ್ಚಿದಂತೆ, ಒತ್ತಡದ ಅನುಭೂತಿಯಂತೆ, ಹಗುರತನದ ಅನುಭವ, ಭಾರದ ಅನುಭವ, ನೋವಿನ ಅನುಭವ, ಬಡಿತದ ಅನುಭವ, ಸಂಕುಚಿತತೆಯ ಅನುಭವ, ವಿಕಾಸತೆಯ ಅನುಭವ, ಪುಳುಕಿತ ಅನುಭವ, ಜೋಮಿನ ಅನುಭವ, ಅಲೆಗಳ ಅನುಭವ, ಹೀಗೆ ದುರ್ಬಲ ಅನುಭವ, ಪ್ರಬಲ ಅನುಭವ, ಸೂಕ್ಷ್ಮ ಅನುಭವ, ಸ್ಥೂಲ ಅನುಭವ, ಇತ್ಯಾದಿ ರೀತಿಯ ಪ್ರಿಯವಾದ ಅನುಭವ ಅಥವಾ ನೋವಿನ (ಅಪ್ರಿಯದ) ಅನುಭವ ಅಥವಾ ತಟಸ್ಥ ಅನುಭವಗಳನ್ನು ಇವುಗಳಲ್ಲಿ ಒಂದನ್ನು ಅನುಭವಿಸುತ್ತಾರೆ.
ಆಗ ಆ ಅನುಭವವನ್ನು (ವೇದನೆಗಳನ್ನು) ಸಾಕ್ಷಿಭೂತವಾಗಿ ಅದು ಹೇಗಿದೆಯೋ ಹಾಗೆಯೇ ವೀಕ್ಷಿಸಿ. ಆಗ ಅಂತಹ ಅನುಭವವನ್ನು ಇದು ಹೀಗೆ ದೀರ್ಘಕಾಲ ಇರಲಿ ಎಂದು ಆಶಿಸಬೇಡಿ. ಅಥವಾ ಈ ಅನುಭವಗಳು ದೂರವಾಗಿ ಹೋಗಲಿ ಎಂದು ದ್ವೇಷಿಸಬೇಡಿ. ಯಾವುದೇ ಅನುಭವಗಳು ಆಗದೆ ತಟಸ್ಥ ವೇದನೆ ಆದಾಗಲು ಓಹ್ ಯಾವ ಸಂವೇದನೆಯು ಆಗಲಿಲ್ಲ ಎಂದು ಚಿಂತಿಸಬೇಡಿ. ಕೇವಲ ಗಮನಿಸಿ, ಗಮನಿಸಿ ಮತ್ತು ಗಮನಿಸಿ. ನಂತರ ಹಾಗೆಯೇ ನೀವು ಕುಳಿತಿದ್ದಾಗ ಕಾಲುಗಳ ಕಡೆ ನೋವು ಆಗುತ್ತಿದ್ದರೆ ಅಲ್ಲೇ ಮನಸ್ಸನ್ನು ನಿಲ್ಲಿಸಿ ಕೇವಲ ಸಾಕ್ಷಿಭೂತವಾಗಿ ಗಮನಿಸಿ, ನೋವನ್ನು ದ್ವೇಷಿಸಬೇಡಿ. ಹಾಗೆಯೇ ಇಷ್ಟಪಡಲೂ ಬೇಡಿ, ಸಮಚಿತ್ತತೆಯಿಂದ ಏಕಾಗ್ರತೆಯಿಂದ ಗಮನಿಸಿ. 2 ರಿಂದ 5 ನಿಮಿಷದವರೆಗೆ ಧ್ಯಾನಿಸಿದ ನಂತರ ದೇಹದಲ್ಲಿ ಬೆವರು ಬರುತ್ತಿದ್ದರೆ ಆ ಭಾಗದಲ್ಲಿ ಧ್ಯಾನಿಸಿ. ಇದೇರೀತಿ ದೇಹದ ಭಾಗದಲ್ಲೆಲ್ಲಾ ಗಮನ ಕೇಂದ್ರೀಕರಿಸಿ ಧ್ಯಾನಿಸಿರಿ. ಅಲ್ಲಿ ಆಗುವಂತಹ ಸಂವೇದನೆಗಳನ್ನು ಅರಿಯುತ್ತಾ ಹೋಗಿ, ನಿಮಗೆ ಅಲ್ಲಿ ನಾನಾವಿಧವಾದ ಪ್ರಿಯ ಸಂವೇದನೆಗಳು ಆಗಬಹುದು. ಅಥವಾ ನೀವು ಇಷ್ಟಪಡದ ಅಪ್ರಿಯ ಸಂವೇದನೆಗಳು ಆಗಬಹುದು ಅಥವಾ ಯಾವುದೇ ಸಂವೇದನೆ ಆಗದೆ ಇರಬಹುದು. ಆದರೆ ಯಾವರೀತಿಯ ಆಸಕ್ತಿಯು ತಾಳದೆ, ಯಾವರೀತಿಯ ದ್ವೇಷವು ಇಲ್ಲದೆ ಯಾವರೀತಿ ಬಯಕೆಯು ತಾಳದೆ ಸಾಧನೆ ಮುಂದುವರೆಸಬೇಕು. ಇಲ್ಲಿ ಸಂವೇದನೆಗಳಿಂದ ನಿಮ್ಮ ಸಾಧನೆಯ ಮಾನದಂಡವಿಲ್ಲ ಬದಲಾಗಿ ನಿಮ್ಮ ಸಮಚಿತ್ತತೆಯ ಸಾಧನೆಗೆ ಅರ್ಹತೆ ಲಭಿಸುತ್ತದೆ. ಇದೇರೀತಿ ದೇಹವಿಡೀ ತಲೆಯಿಂದ ಪಾದದವರೆಗೆ ಪ್ರತಿ ಭಾಗದಲ್ಲೂ 2 ನಿಮಿಷದಿಂದ 5 ನಿಮಿಷದವರೆಗೆ ವೀಕ್ಷಿಸಿ ಮುಂದುವರೆಯುತ್ತೀರಿ. ನಿಮಗೆ ಲೌಕಿಕ ಸುಖದ ಅನುಭೂತಿಯಾಗಬಹುದು, ಅಲೌಕಿಕ ಸುಖದ ಅನುಭೂತಿಯಾಗಬಹುದು, ಪ್ರಿಯವಾದ ಸಂವೇದನೆಗಳೇ ಲಭಿಸಬಹುದು. ಆದರೆ ಅದಕ್ಕೆ ಅಂಟಬೇಡಿ ಹಾಗೆಯೇ ಲೌಕಿಕ ದುಃಖದ ಅನುಭವವಾಗಬಹುದು. ಅಲೌಕಿಕ ನೋವಿನ ಅನುಭವವಾಗಬಹುದು, ಅಪ್ರಿಯ ಸಂವೇದನೆಗಳೇ ಲಭಿಸಬಹುದು. ಆದರೆ ಅದ್ಯಾವುದನ್ನೂ ದೂರೀಕರಿಸಬೇಡಿ, ಅಂಟಬೇಡಿ ಅಥವಾ ಜಡತನ ಸಂವೇದನೆ ಅಥವಾ ಯಾವುದೇ ಸಂವೇದನೆ ಆಗದೆ ಇರಬಹುದು. ಆಗ ಯಾವ ಸಂವೇದನೆಗಾಗಿ ಹಾತೊರೆಯಬೇಡಿ. ಕೇವಲ ದೇಹದ ಭಾಗಗಳಲ್ಲಿ ಗಮನ ಕೇಂದ್ರೀಕರಿಸಿ ವೀಕ್ಷಿಸಿ ಸಮಚಿತ್ತತೆಯಿಂದಿರಿ. ಸುಖ ಬಂದಾಗ ಹಿಗ್ಗುವುದಾಗಲಿ ಅಥವಾ ದುಃಖ ಬಂದಾಗ ಕುಗ್ಗುವುದಾಗಲಿ ಮಾಡಬೇಡಿ. ಕೇವಲ ಸಮಚಿತ್ತತೆಯಿಂದ ವೀಕ್ಷಿಸಿ.
ಮೊದಮೊದಲು ಸ್ಥೂಲವಾದ ಸಂವೇದನೆಗಳಾಗುತ್ತವೆ. ನಂತರ ಸೂಕ್ಷ್ಮ ವೇದನೆಗಳಾಗುತ್ತದೆ. ಆದರೆ ಅದಕ್ಕೆ ಅಂಟದೆ ಸಮಚಿತ್ತತೆಯಿಂದಿರಿ. ಇದು ಆಯ್ಕೆರಹಿತ ವೀಕ್ಷಣೆಯಾಗಿದೆ.
ನಂತರ ವೇದನೆಗಳ ಉಗಮ ಗಮನಿಸಿ.
ದೇಹದಲ್ಲಿ ಸ್ಪರ್ಶವಾದಾಗ ವೇದನೆ ಉಂಟಾಗುತ್ತದೆ. ಉದಾಹರಣೆಗೆ ಯಾರಾದರೂ ನಿಮಗೆ ಹಣೆಯ ಮೇಲೆ ಆಶೀವರ್ಾದ ಮಾಡುತ್ತಾ ಸ್ಪಶರ್ಿಸಿದರೆ ನಿಮಗೆ ಆನಂದವಾಗುತ್ತದೆ. ಅದೇರೀತಿ ನಿಮ್ಮ ಕೆನ್ನೆಗೆ ಹೊಡೆದಾಗ ಕೋಪ ಬರುತ್ತದೆ. ಅದೇರೀತಿ ನಿಮ್ಮ ಶರೀರದ ಮೇಲೆ ಹಾವು ಹರಿದಾಡಿದಾಗ ನಿಮಗೆ ಭಯವು ಉಂಟಾಗುತ್ತದೆ. ಹಾಗೆಯೇ ನಿಮಗೆ ಯಾವುದಾದರೂ ನೋವು ಗುಣಮುಖವಾಗದಿದ್ದರೆ ನೀವು ಚಿಂತಿತರಾಗುತ್ತೀರಿ. ಇವೆಲ್ಲಾ ಏನು? ಕೇವಲ ಸಂವೇದನೆಗಳಾಗಿವೆ. ಇವು ದೇಹಕ್ಕೆ ಸ್ಪರ್ಶವಾದಾಗ ಉದಯಿಸಿವೆ.
ದೇಹ ್ಧ ಪ್ರಿಯ ಸ್ಪರ್ಶ ್ಧ ಆನಂದ (ಪ್ರಿಯ ವೇದನೆ)
ದೇಹ ್ಧ ಅಪ್ರಿಯ ಸ್ಪರ್ಶ ್ಧ ಕೋಪ
        ಅಪ್ರಿಯ ಸ್ಪರ್ಶ ್ಧ ಭಯ   (ಅಪ್ರಿಯ ವೇದನೆ)
        ಅಪ್ರಿಯ ಸ್ಪರ್ಶ ್ಧ ಚಿಂತೆ
ಅದೇ ರೀತಿಯಲ್ಲಿ ನೀವು ಪ್ರಿಯ ವ್ಯಕ್ತಿ ಕಂಡಾಗ ಆಹ್ಲಾದಪಡುವಿರಿ. ಹಾಗೆಯೇ ಶತ್ರುವನ್ನು ಕಂಡರೆ ದ್ವೇಷ, ಅಸಹನೆ ತಾಳುವಿರಿ. ಹಾಗೆಯೇ ಹಾವನ್ನು ಕಂಡರೆ ಭೀತಿ ಪಡುವಿರಿ. ಅಪ್ರಿಯ ಸನ್ನಿವೇಶ ನೋಡಿದಾಗ ಚಿಂತೆಪಡುವಿರಿ.
ಕಣ್ಣು ್ಧ ಪ್ರಿಯ ದೃಷ್ಟಿ ್ಧ ಆನಂದ
  ಅಪ್ರಿಯ ದೃಷ್ಟಿ ್ಧ ಕೋಪ
  ಅಪ್ರಿಯ ದೃಷ್ಟಿ ್ಧ ಭಯ
  ಅಪ್ರಿಯ ದೃಷ್ಟಿ ್ಧ ಚಿಂತೆ
ಕಿವಿ ್ಧ ಪ್ರಿಯ ಹೊಗಳಿಕೆ ್ಧ ಆನಂದ
ತೆಗಳಿಕೆ (ಅಪ್ರಿಯ) ್ಧ ಕೋಪ
ಅಪ್ರಿಯ (ಬೆದರಿಕೆ) ್ಧ ಭಯ
ಅಪ್ರಿಯ (ನಷ್ಟ) ್ಧ ಚಿಂತೆ
ಹೀಗೆಯೇ ಮೂಗು, ನಾಲಿಗೆ, ಎಲ್ಲವೂ ಇದೇರೀತಿಯ ಕ್ರಿಯೆ ನಡೆಯುತ್ತದೆ. ಮನಸ್ಸೇ ತೆಗೆದುಕೊಳ್ಳಿ.
ಮನಸ್ಸು ್ಧ ಪ್ರಿಯ ಆಲೋಚನೆಯ ಸ್ಪರ್ಶ (ಸಿನಿಮ) ್ಧ ಆನಂದ
ಅಪ್ರಿಯ ಆಲೋಚನೆಯ ಸ್ಪರ್ಶ (ಶತ್ರು) ್ಧ ಕೋಪ
ಅಪ್ರಿಯ ಆಲೋಚನೆಯ ಸ್ಪರ್ಶ (ಹಾವು/ರೋಗ) ್ಧ ಭಯ
ಅಪ್ರಿಯ ಆಲೋಚನೆಯ ಸ್ಪರ್ಶ (ನಷ್ಟ) ್ಧ ಚಿಂತೆ
ಪ್ರಿಯವಾದ ಆಲೋಚನೆಯ ವಿಷಯ ಸಂಪರ್ಕವಾದರೆ ಆನಂದ ಮಾತ್ರ ಉಂಟಾಗುತ್ತದೆ.
ಹಾಗೆಯೇ ಅಪ್ರಿಯ ಆಲೋಚನೆಗಳ ಸಂಪರ್ಕದಿಂದ ಕೋಪ, ಭಯ, ಚಿಂತೆಗಳ ಅಪ್ರಿಯ ಸಂವೇದನೆಗಳು ಉಂಟಾಗುತ್ತದೆ.
ಆದರೆ ನಾವು ಈ ಸಂವೇದನೆಗಳು ಉಂಟಾದಾಗ ಸಮಚಿತ್ತತೆ ತಾಳಿದರೆ ಆ ಸಂವೇದನೆಗಳು ಅಳಿಯುತ್ತದೆ. ಆಗ ಅವು ಇರುವುದಿಲ್ಲ, ಅವುಗಳಿಂದ ವಿಮುಕ್ತಿ ಸಿಗುತ್ತದೆ.
ಪ್ರಿಯ ಸಂವೇದನೆ (ಲೋಭ) + ಸಮಚಿತ್ತತೆ + ವೀಕ್ಷಣೆ (ವಿಪಸ್ಸನ) ್ಧ ವಿಮುಕ್ತಿ 
ಅಪ್ರಿಯ ಸಂವೇದನೆ (ಕೋಪ, ಭಯ, ಚಿಂತೆ) + ಸಮಚಿತ್ತತೆ + ವೀಕ್ಷಣೆ (ವಿಪಸ್ಸನ)  ್ಧ ವಿಮುಕ್ತಿ.
ಹಾಗೆಯೇ ಅಪ್ರಿಯ ಆಲೋಚನೆಗಳ ಸಂಪರ್ಕದಿಂದ ಕೋಪ, ಭಯ, ಚಿಂತೆಗಳ ಅಪ್ರಿಯ ಸಂವೇದನೆಗಳು ಉಂಟಾಗುತ್ತದೆ.
ಆದರೆ ನಾವು ಈ ಸಂವೇದನೆಗಳು ಉಂಟಾದಾಗ ಸಮಚಿತ್ತತೆ ತಾಳಿದರೆ ಆ ಸಂವೇದನೆಗಳು ಅಳಿಯುತ್ತದೆ. ಆಗ ಅವು ಇರುವುದಿಲ್ಲ, ಅವುಗಳಿಂದ ವಿಮುಕ್ತಿ ಸಿಗುತ್ತದೆ.
ಪ್ರಿಯ ಸಂವೇದನೆ (ಲೋಭ) + ಸಮಚಿತ್ತತೆ + ವೀಕ್ಷಣೆ (ವಿಪಸ್ಸನ) ್ಧ ವಿಮುಕ್ತಿ 
ಅಪ್ರಿಯ ಸಂವೇದನೆ (ಕೋಪ, ಭಯ, ಚಿಂತೆ) + ಸಮಚಿತ್ತತೆ + ವೀಕ್ಷಣೆ (ವಿಪಸ್ಸನ)  ್ಧ ವಿಮುಕ್ತಿ.
ಹೀಗೆ ಧ್ಯಾನದಲ್ಲೂ ವೇದನೆಗಳು ಉದಯಿಸುವುದನ್ನು ಗಮನಿಸಿ ಸಮಚಿತ್ತತೆಯಿಂದಿರಿ. ಅವುಗಳು ಅಳಿಯುವುದನ್ನು ಕಾಣುವಿರಿ. ಎಲ್ಲಾ ವೇದನೆಗಳು ಉದಯಿಸುತ್ತವೆ ಮತ್ತು ಅಳಿಯುತ್ತವೆ. ಇದನ್ನೇ ನೀವು ಕಾಣುವಿರಿ. ನೀವು ವೀಕ್ಷಿಸಿದಂತೆಲ್ಲಾ ಅವು ಸೂಕ್ಷ್ಮವಾಗಿ, ಅತ್ಯಂತ ಸೂಕ್ಷ್ಮವಾಗಿ ಇನ್ನಷ್ಟು ಸೂಕ್ಷ್ಮವಾಗಿ ಅಳಿಯುತ್ತದೆ, ಇನ್ನಿಲ್ಲದಂತಾಗುತ್ತದೆ.
ಇಡೀ ದೇಹವು ನಾಲ್ಕು ಮೂಲಧಾತುಗಳಾದ ಘನ, ದ್ರವ, ಅನಿಲ ಮತ್ತು ಉಷ್ಣತೆಯಿಂದಾಗಿದೆ ಎಂಬ ಅರಿವು ಬರುತ್ತದೆ. ಪ್ರತಿ ಅಣುವಿನಲ್ಲೂ ಈ ನಾಲ್ಕು ಧಾತುಗಳನ್ನು ನೀವು ಕಾಣುವಿರಿ.
ಹೀಗೆ ನೀವು ದೇಹದಲ್ಲೆಲ್ಲಾ ವೇದನೆಗಳು ಉದಯಿಸುವುದನ್ನು ಕಾಣುವಿರಿ. ಹಾಗೆಯೇ ಅವು ಅಳಿಯುವುದನ್ನು ಕಾಣುವಿರಿ. ಆದರೆ ಅವುಗಳೆಲ್ಲಾ ವೇದನೆಗಳಷ್ಟೇ ಆಗಿದೆ. ಅವುಗಳಲ್ಲಿ ಆಸಕ್ತಿ ತಾಳದೆ ವೀಕ್ಷಿಸಿ ಅವುಗಳು (ವೇದನೆಗಳು) ನಿಮ್ಮದಲ್ಲ, ವೇದನೆಗಳು ನೀವಲ್ಲ, ವೇದನೆಯೇ ನಿಮ್ಮ ಆತ್ಮವಲ್ಲ. ಕೆಲವರು ವೇದನೆಗಳು ನಮ್ಮವು ಎಂದು ಭಾವಿಸಿ ವೇದನೆಗಳೆಲ್ಲ ನಾವು ಎಂದು ಭಾವಿಸಿದರೆ ಅವರು ವೇದನೆಗಳು ಅನಂತರದ ಸ್ವರೂಪವಾದ ಲೋಭ, ದ್ವೇಷ, ಕೋಪ ಮತ್ತು ಚಿಂತೆಗಳನ್ನು ತಮ್ಮನ್ನು ತಾವೇ ಎಂದು ಭ್ರಮಿತರಾಗಿ ಎಂದಿಗೂ ಮುಕ್ತಿಹೊಂದಲಾರರು. ಕೆಲವರು ಸಮಾಧಿಯ ಆನಂದದ ಅನುಭೂತಿಯನ್ನು (ವೇದನೆಯನ್ನೇ) ತಮ್ಮ ಆತ್ಮ ಎಂದು ಭಾವಿಸಿ ಮತ್ತೆ ಜನನ ಮರಣದ ವಲಯದಲ್ಲೇ ಬೀಳುವರು. ಆದ್ದರಿಂದಾಗಿ ವೇದನೆಗಳಲ್ಲಿ ಆಸಕ್ತಿ ತಾಳದಿರಿ. ಇವು ಕೇವಲ ಉದಯಿಸುತ್ತದೆ, ಹಾಗೆಯೇ ಅಳಿಯುತ್ತವೆ. ಕೇವಲ ಪರಿವರ್ತನೆ ಆಗುತ್ತಲೇ ಇರುತ್ತವೆ. ಯಾವುದೂ ಪರಿವರ್ತನೆಯ ಪ್ರಕೃತಿವುಳ್ಳದ್ದೋ, ಅದು ನೀವಲ್ಲ, ನಿಮ್ಮ ಆತ್ಮವಲ್ಲ. ಅದು ನಿಮ್ಮದು ಅಲ್ಲ.
ಮುಂದೆ ನಿರಂತರ ಸಾಧನೆಯಿಂದ ವೇದನೆಗಳೆಲ್ಲವೂ ಉದಯವೇ ಆಗದಂತೆ ಸನ್ಯಾ ವೇದನಾ ನಿರೋಧ ಸಾಧನೆ ಮಾಡಲ್ಪಡುತ್ತದೆ.
ವೇದನೆಗಳಿಂದ ಸನ್ಯಾ ಉದಯಿಸುತ್ತದೆ, ಸನ್ಯಾದಿಂದ ಸಂಖಾರಗಳು, ಸಂಖಾರಗಳಿಂದ ವಿನ್ಯಾನ ಹೀಗೆ ಜನ್ಮವೇ ಲಭಿಸುತ್ತದೆ.
ವೇದನೆಗಳು ನಿರೋಧದಿಂದ ಸನ್ಯಾದ ನಿರೋಧವಾಗಿ, ಸನ್ಯಾದ ನಿರೋಧದಿಂದ ಸಂಖಾರಗಳ ನಿರೋಧವಾಗಿ, ಸಂಖಾರಗಳ ನಿರೋಧದಿಂದ ವಿನ್ಯಾನದ ನಿರೋಧವಾಗಿ ವಿನ್ಯಾನದ ನಿರೋಧದಿಂದ ಹೊಸ ಜನ್ಮ ತಡೆಯಲ್ಪಡುತ್ತದೆ.
ಆರು ಆಧಾರಗಳಿಂದ (ಸಳಯಾತನ/ಇಂದ್ರಿಯಗಳು) ಸ್ಪರ್ಶವಾದಾಗ ವೇದನೆಗಳು, ವೇದನೆಗಳಿಂದ ಇಚ್ಛೆಗಳು. ಇಚ್ಛೆಯಿಂದ ತನ್ಹಾ (ತೀವ್ರ ಬಯಕೆ)ವು, ತನ್ಹಾದಿಂದ ಅಂಟುವಿಕೆಯು, ಅಂಟುವಿಕೆಯಿಂದ ಭವವು, ಭವದಿಂದ ಜನ್ಮವು ಲಭಿಸುತ್ತದೆ.
ಯಾವಾಗ ಇಂದ್ರಿಯಗಳ ಸ್ಪರ್ಶವಾದರೂ ವೇದನೆಗಳು ನಿರೋಧಕ್ಕೆ ಒಳಗಾದಾಗ ತನ್ಹಾವಿಲ್ಲ, ಅಂಟುವಿಕೆಯೂ ಇಲ್ಲ, ಭವವೂ ಇಲ್ಲ, ಜನ್ಮವೂ ಇರುವುದಿಲ್ಲ. ಹೀಗೆ ವಿಮುಕ್ತಿಯು ಲಭಿಸುತ್ತದೆ. ಅದರಿಂದ ವೇದನಾನುಪಸ್ಸನಾ ಪ್ರಮುಖವಾದ ಸಾಧನೆಯ ಭಾಗವಾಗಿದೆ. ಈ ವೇದನಾನುಪಸ್ಸನಾವನ್ನು ದೇಹದಲ್ಲಿ ಅಷ್ಟೇ ಅಲ್ಲ, ಎಲ್ಲಾ ಇಂದ್ರಿಯಗಳ ವೇದನೆಯನ್ನು ಸಮಚಿತ್ತತೆಯಿಂದ ವಿರಾಗ ತಾಳುತ್ತಾ ಸಾಧನೆ ಮಾಡಬೇಕು.
ಖೀಣಂ ಪುರಾಣಂ ನವನತ್ಥಿಸಂಭವಂ ಇದೇ ವಿಮುಕ್ತಿಯ ಹಾದಿಯಾಗಿದೆ. ಅಂದರೆ ಹಳೆಯದೆಲ್ಲಾ ಕ್ಷಯಿಸುವಿಕೆ, ಹೊಸದು ಸಂಭವವಾಗದಿರುವಿಕೆ.
ಇಲ್ಲಿ ವೇದನೆಗಳಲ್ಲಿ ಸಮಚಿತ್ತತೆ ತಾಳಿದಾಗ ನಮ್ಮ ಹಳೆಯ ಕಶ್ಮಲಗಳಿಂದ ನಾವು ಮುಕ್ತರಾಗುತ್ತೇವೆ. ಮತ್ತು ನಾವು ಹೊಸದಾಗಿ ಏನೊಂದು ವೇದನೆ ಉದಯಿಸದಿದ್ದರೆ ನಾವು ಮುಕ್ತರಾಗಬಹುದು. ನಮ್ಮ ಎಲ್ಲಾ ಒಳ್ಳೆಯ ಕರ್ಮಗಳು ಮತ್ತು ಕೆಟ್ಟ ಕರ್ಮಗಳು, ನಮ್ಮ ಹಿಂದಿನ ಎಲ್ಲಾ ಯೋಚನೆಗಳು, ನಮ್ಮ ದೇಹದಲ್ಲಿಯೇ ಅಡಗಿವೆ. ಹೇಗೆಂದರೆ ಮಾವಿನ ಮರದಲ್ಲಿ ಹಣ್ಣುಗಳು ಕಾಣದಿದ್ದರೂ ಸಮಯಕ್ಕೆ ಅವು ಹೊರ ಕಾಣಿಸುವಂತೆ, ಯೋಗ್ಯ ಕಾಲದಲ್ಲಿ ಅವು ಫಲ ನೀಡುತ್ತದೆ. ನಾವು ವೇದನಾನುಪಸ್ಸಿಯಾಗಿ ಸಾಧನೆ ಮಾಡುವಾಗ ನಮ್ಮ ಹಿಂದಿನ ವ್ಯಕ್ತಿತ್ವದೊಂದಿಗೆ (ಅನುಶಯ) ನಾವು ವೇದನೆಗಳೊಂದಿಗೆ ಹೋರಾಡುತ್ತೇವೆ. ಆಗ ನಾವು ಸಮಚಿತ್ತತೆ ತಾಳಿದಾಗ ಅವು ನಶಿಸುತ್ತದೆ. ಹೀಗಾಗಿ ಹಿಂದಿನ ವ್ಯಕ್ತಿತ್ವವೆಲ್ಲಾ ಅಳಿಯುತ್ತದೆ. ನಾವು ಹೊಸದಾಗಿ ಯಾವ ವ್ಯಕ್ತಿತ್ವ (ವೇದನೆ) ಉಂಟು ಮಾಡದಿದ್ದರೆ ನಾವು ಮುಕ್ತಿ ಹೊಂದಿದಂತೆಯೇ ಸರಿ.
ಸಮಚಿತ್ತತೆ ತಾಳುವುದು ಹೇಗೆಂದರೆ ಪ್ರತಿಕ್ರಿಯೆ ಮಾಡದಿರುವುದು ಅಂದರೆ ಪ್ರಿಯವಾದುದಕ್ಕೆ ಅಂಟದೆ ಇರುವುದು, ಅಪ್ರಿಯವಾದುದಕ್ಕೂ ಅಂಟದೆ ಇರುವುದು, ಏನನ್ನು ಯೋಚಿಸದಿರುವುದು, ಬಿಟ್ಟುಬಿಡುವುದು. ಅಕುಶಲವನ್ನು ಮುಂದುವರೆಯದಂತೆ ನಿಲ್ಲಿಸುವುದು. ಹೀಗೆ ಸಮಚಿತ್ತತೆ ನೆಲಸುತ್ತದೆ. ಒಟ್ಟಾರೆ ಪ್ರತಿಕ್ರಿಯೆ ಮಾಡಬಾರದು.
ನಮ್ಮ ಮನಸ್ಸಿಗೂ ಶರೀರಕ್ಕೂ ಉಸಿರಾಟಕ್ಕೂ ಮತ್ತು ಸಂವೇದನೆಗಳಿಗೂ ಸಂಬಂಧವಿದೆ. ನಮ್ಮ ಮನಸ್ಸು ಕಲುಷಿತವಾದರೆ, ಶರೀರವೂ ಕಲುಷಿತವಾಗುತ್ತದೆ. ಆಗ ಉಸಿರಾಟವು ಕಲುಷಿತವಾಗುತ್ತದೆ, ಅಪ್ರಿಯವಾಗುತ್ತದೆ. ಆಗ ಅಪ್ರಿಯ ಸಂವೇದನೆಗಳು ಉಂಟಾಗುತ್ತದೆ. ಹಾಗೆಯೇ ನಮ್ಮ ಮನಸ್ಸು ಪರಿಶುದ್ಧವಾದಾಗ ದೇಹವು ಪರಿಶುದ್ಧ ಕಾರ್ಯಗಳನ್ನೇ ಮಾಡುತ್ತದೆ. ಉಸಿರಾಟವು ಪರಿಶುದ್ಧವಾಗಿರುತ್ತದೆ. ಸೂಕ್ಷ್ಮವಾಗಿ, ಸುಖಯುತದಿಂದ ಕೂಡಿರುತ್ತದೆ. ಸಂವೇದನೆಗಳು ಸುಖಕಾರಿಯಾಗಿರುತ್ತದೆ. ಸುಸಂವೇದನೆಗಳೇ ಉಂಟಾಗುತ್ತದೆ. ನೀವು ನಿಮ್ಮ ಕೋಪವನ್ನು ಅಥವಾ ಭಯವನ್ನು ಅಥವಾ ಚಿಂತೆಯನ್ನು ವೀಕ್ಷಿಸಿ. ಹೇಗೆಂದರೆ ಉಸಿರಾಟದಲ್ಲಿ. ಆಗ ನೀವೇ ನೋಡಿ ನಿಮ್ಮ ಉಸಿರಾಟವು ಎಷ್ಟು ವ್ಯಗ್ರವಾಗಿರುತ್ತದೆ, ಒರಟಾಗಿರುತ್ತದೆ, ಕಂಪನದಿಂದ ಕೂಡಿರುತ್ತದೆ, ಕುಗ್ಗಿರುತ್ತದೆ. ಹಾಗೆಯೇ ಸಂವೇದನೆಗಳಲ್ಲಿ ನೋಡಿ. ಕೋಪ ಬಂದಾಗ ದೇಹದ ಕಾವು ಏರಿರುತ್ತದೆ. ಭಯ ಬಂದಾಗ ದೇಹದ ಕಂಪನ ಮತ್ತು ಕಾಲುಗಳಲ್ಲಿ ಶಕ್ತಿ ಕುಂದುವುದು. ಚಿಂತೆಯಿಂದ ಇದ್ದಾಗ ದೇಹದಲ್ಲೆಲ್ಲಾ ಗ್ರಂಥಿಗಳ ಸ್ರವಿಕೆ, ನಿಶ್ಶಕ್ತಿಯ ಅನುಭೂತಿ, ಸೋಮಾರಿತನದಿಂದ ಕೂಡಿರುವಾಗ ಜಡತ್ವ ಭಾರವನ್ನು ಅನುಭವಿಸುವಿರಿ. ಆದರೆ ನೀವು ಆನಂದದಿಂದ, ಏಕಾಗ್ರತೆಯಿಂದ ಯೋಗ್ಯ ಪರಿಶ್ರಮದಿಂದ ಕೂಡಿರುವಾಗ ನಮ್ಮ ಉಸಿರಾಟವಾಗಲಿ ಅಥವಾ ಸಂವೇದನೆಯಾಗಲಿ ಅತ್ಯಂತ ಚೆನ್ನಾಗಿರುತ್ತದೆ, ಹಗುರವಾಗಿರುತ್ತದೆ, ಪ್ರಸನ್ನವಾಗಿರುತ್ತದೆ. ಸುಖಯುತವಾಗಿರುತ್ತದೆ, ಶಾಂತವಾಗಿರುತ್ತದೆ, ಸೂಕ್ಷ್ಮವಾಗಿರುತ್ತದೆ. ನೀವು ಮನಸ್ಸು ಮತ್ತು ಶರೀರದ ಹತೋಟಿ ತರಬೇಕೆ? ಶಾಂತಗೊಳಿಸಬೇಕೆ? ಹಾಗಾದರೆ ಉಸಿರಾಟದಲ್ಲಿ ಹತೋಟಿ ತನ್ನಿ, ಉಸಿರಾಟವನ್ನು ಶಾಂತಗೊಳಿಸಿ, ವೇದನೆಗಳಿಗೆ ಅಂಟಬೇಡಿ, ವೇದನೆಗಳಿಗೆ ಅತೀತರಾಗಿ. ಸಮಚಿತ್ತತೆ ತಾಳಿ ಆಗ ನಿಮ್ಮ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. ಮುಂದೆ ಈ ಉಸಿರಾಟದ ಅಥವಾ ಸಂವೇದನೆಗಳ ವೀಕ್ಷಣೆಯನ್ನು ದೇಹದ ಎಲ್ಲಾ ಭಂಗಿಗಳಲ್ಲಿ ವೀಕ್ಷಿಸಿ. ಆಗೆಲ್ಲಾ ವಿಭಿನ್ನ ಅನುಭವ ಮತ್ತು ಎಲ್ಲಾ ಕಾಲದಲ್ಲೂ ಸವರ್ಾವಸ್ಥೆಯಲ್ಲೂ ಕಶ್ಮಲ ಎದುರಿಸುವ ಸಾಮಥ್ರ್ಯ ಬರುತ್ತದೆ. ನಿಮಗೆ ಕೋಪ ಬಂದಾಗ ಅಥವಾ ಭಯ ಉಂಟಾದಾಗ ಅಥವಾ ಚಿಂತೆ ಉಂಟಾದಾಗ ಅಥವಾ ಲೋಭ ಉಂಟಾದಾಗ ನೀವು ಕೇವಲ ಸಂವೇದನೆಗಳ ವೀಕ್ಷಣೆ ಮಾಡಿ ಅವು ಇನ್ನಿಲ್ಲದಂತೆ ಆಗುವವು.
ಇಡೀ ಜಗತ್ತು ಜ್ವಾಲೆಗಳಿಂದ ಆವೃತವಾಗಿದೆ.
ಇಡೀ ಜಗತ್ತು ಹೊಗೆ (ಧೂಮ) ಯಿಂದ ಆವೃತವಾಗಿ ಹೋಗುತ್ತಿದೆ.
ಇಡೀ ಜಗತ್ತು ಸುಡುತ್ತಿದೆ
ಇಡೀ ಜಗತ್ತು ಕಂಪನಗೊಳ್ಳುತ್ತಿದೆ
ಆದರೆ ಯಾವುದು ಕಂಪಿಸುವುದಿಲ್ಲವೊ ಅಥವಾ ಸುಡಲ್ಪಡುವುದಿಲ್ಲವೋ ಯಾವುದನ್ನು ಆರ್ಯರು ಅನುಭವಿಸಿರುವರೋ ಮತ್ತು ಎಲ್ಲಿ ಮರಣವು ಪ್ರವೇಶಿಸುವುದಿಲ್ಲವೋ ಅಲ್ಲಿ ನನ್ನ ಮನಸ್ಸು ರಮಿಸುತ್ತದೆ.
ಯಾವಾಗ ಲೋಕಧಮ್ಮಗಳಾದಂತಹ (ಲಾಭ-ನಷ್ಟ, ಸುಖ-ದುಃಖ, ಜಯ-ಪರಾಜಯ, ಸ್ತುತಿ, ನಿಂದೆ, ಕೋಪ, ಭಯ) ಇವು ಸೋಕಲ್ಪಟ್ಟರೆ ಚಿತ್ತವು ಸ್ವಲ್ಪವೂ ಕಂಪನವಾಗದಿರಲಿ (ಅಭಯ), ಅಶೋಕ (ಶೋಕರಹಿತ)ವು, ವಿರಜ (ರಾಗರಹಿತ, ದ್ವೇಷರಹಿತ)ವು ಕ್ಷೇಮವಾಗಿ (ಶಾಂತವಾಗಿ, ವಿಮುಕ್ತವಾಗಿ) ಇರಬೇಕು - ಇದೇ ಮಂಗಳಗಳಲ್ಲೇ ಉತ್ತಮವಾಗಿದೆ.
ಯಾವಾಗ ಹಳೆಯದೆಲ್ಲವೂ ಅಳಿಸಿಹೋಯಿತೋ ಹೊಸದೊಂದು ಉದಯವಾಗಲಿಲ್ಲವೋ ಆಗ ಮನಸ್ಸು ಹೊಸ ಜನ್ಮ ಹುಡುಕಲಾರದು. ಬೀಜವು ಸುಡಲ್ಪಟ್ಟಿದೆ. ತನ್ಹಾವು ಉದಯಿಸಲಾರದು. ಅಂತಹ ಜ್ಞಾನಿಗಳು ದೀಪದಂತೆ ಆರಿಹೋಗುತ್ತಾರೆ.
ಸಾಮಾನ್ಯವಾಗಿ ಪ್ರಿಯವಾದ ವೇದನೆಯಲ್ಲಿ ಲೋಭವು (ವ್ಯಾಮೋಹ) ಹುದುಗಿರುತ್ತದೆ. ಅಪ್ರಿಯವಾದ ವೇದನೆಗಳಲ್ಲಿ ದ್ವೇಷವು (ವಿರೋಧ), ತಟಸ್ಥ ವೇದನೆಗಳಲ್ಲಿ ಅಜ್ಞಾನವು ಹುದುಗಿರುತ್ತದೆ. ಸುಖ ವೇದನೆಯು ನಿಜವಾಗಿ ದುಃಖ ವೇದನೆಯೆಂದು ಸತ್ಯ ಅರಿತವರು ಹೇಳುತ್ತಾರೆ.
ದುಃಖ ವೇದನೆಯು ಶಲ್ಯದಂತೆ ಇರಿಯುತ್ತದೆ ಎಂದರಿಯಬೇಕು. ತಟಸ್ಥ ವೇದನೆಯಲ್ಲಿ ಅಜ್ಞಾನವು ಹುದುಗಿರುತ್ತದೆ. ಯಾರು ವೇದನೆಗಳ ವ್ಯಾಮೋಹ, ವಿರೋಧ ಮತ್ತು ಅಜ್ಞಾನ ಪ್ರವೃತ್ತಿಯನ್ನು ತೊಡೆದು ಹಾಕಿರುವರೋ ಅವರು ಭ್ರಮಾತ್ಮಕ ಅಹಂನ್ನು ಕಂಡಿದ್ದಾರೆ. ಅಂತಹವರು ದುಃಖವನ್ನು ಅಂತ್ಯ ಮಾಡಿದ್ದಾರೆ.
ಯಾವಾಗ ಒಬ್ಬನು ವೇದನೆಗಳಲ್ಲಿ (ಸುಖ, ದುಃಖ, ಅಸುಖ-ಅದುಃಖ) ಒಂದನ್ನು ಅನುಭವಿಸುತ್ತಿದ್ದರೆ ಉಳಿದೆರಡು ಇರುವುದಿಲ್ಲ. ಕೇವಲ ಒಂದು ವೇದನೆ ಮಾತ್ರ ಇರುತ್ತದೆ. ಇದೇ ವೇದನೆಗಳಲ್ಲಿರುವ ಅಪಾಯ. ಇವು ಶಾಶ್ವತವಲ್ಲ. ಅನಿತ್ಯವಾದುದು, ನಾಶವಾಗುವ ಪ್ರಕೃತಿವುಳ್ಳವಂತಹುದು, ರಚಿತವಾಗಿರುವಂತಹುದು, ಅವಲಂಬನೆಯಿಂದ ಉಂಟಾಗಿರುವಂತಹುದು. ಕ್ಷಯವಾಗುವಂತಹುದು, ಶಿಥಿಲವಾಗುವಂತಹುದು, ಮರೆಯಾಗುವಂತಿರುವುದು, ಅಳಿಯುವಂತಹುದು, ನಿಲ್ಲುವಂತಹುದು. ಇದರ ವಾಸ್ತವ ಅರಿತ ಸಾಧಕನು ಪ್ರಿಯ, ಅಪ್ರಿಯ, ತಟಸ್ಥ ವೇದನೆಗಳಿಂದ ವಿಮುಖನಾಗಿ ಸಮಚಿತ್ತತೆ ಪಾಲಿಸುತ್ತಾನೆ. ಹೇಗೆ ಆತನು ಅಂಟದೆ, ಮುಕ್ತನಾಗಿ ವಿಮುಕ್ತಿ ಸಾಧಿಸುತ್ತಾನೆ.

ಆನಾಪಾನಾ ಚಿತ್ತ ವಿಪಸ್ಸನ

ಚಿತ್ತವನ್ನು ಅನುಭವಿಸುತ್ತಾ ನಾನು ಉಸಿರನ್ನು ತೆಗೆದುಕೊಳ್ಳುತ್ತೇನೆ ಮತ್ತು ಉಸಿರನ್ನು ಹೊರಬಿಡುತ್ತೇನೆ ಈ ರೀತಿಯಲ್ಲಿ ಆತನು ಸುಶಿಕ್ಷಿತನಾಗಿ ಸಾಧನೆ ಮಾಡುತ್ತಾನೆ.
ಇಲ್ಲಿ ಸುಶಿಕ್ಷಣವೆಂದರೆ ಶೀಲ ಸಮಾಧಿ, ಪ್ರಜ್ಞಾ, ಅಂದರೆ ಯೋಚನೆಯ ಮಟ್ಟದಲ್ಲೂ ಸಹ ಆತನು ಯಾವುದೇ ಪಾಪ ಮಾಡುವುದಿಲ್ಲ. ಚಿತ್ತವನ್ನು ಏಕಾಗ್ರವಾಗಿ ಉಸಿರಾಟದಲ್ಲಿ ನಿಲ್ಲಿಸಿ, ಚಿತ್ತದ ವೀಕ್ಷಣೆಯೇ ಆತನ ಸಮಾಧಿ. ಅಲ್ಲಿ ಸಿಗುವಂತಹ ಲೋಕೋತ್ತರ ಜ್ಞಾನವೇ ಪ್ರಜ್ಞಾವಾಗಿದೆ.
ಇಲ್ಲಿ ಚಿತ್ತಕ್ಕೆ ನಾನಾ ಸಮಾನಾರ್ಥಕ ಪದಗಳಿವೆ. ಉದಾಹರಣೆಗೆ : ಮನೋ (ಬುದ್ಧಿಶಕ್ತಿ), ಮಾನಸಂ (ಬುದ್ಧಶಕ್ತಿಯ ಪ್ರಕ್ರಿಯೆ) ಚಿತ್ತ (ಮನಸ್ಸಿನ ಕತರ್ೃ ಸಂಬಂಧವುಳ್ಳ) ವಿನ್ಯಾನ (ಇಂದ್ರೀಯಕ್ಕೆ ಸಂಬಂಧಿಸಿದಂತೆ ಮನಸ್ಸು) ಹದಯಂ (ಯೋಚನಾ ಪೀಠ), ಪಂಣಡರಂ (ತಿಳಿ ಮನಸ್ಸು) ಮನೋ ಆಯತನಂ (ಮನಸ್ಸಿನ ಆಧಾರ), ಮನೀಂದ್ರಿಯ (ಮನಸ್ಸಿನ ಇಂದ್ರೀಯ), ವಿನ್ಯಾನಖಂದಂ (ಅರಿವಿನ ರಾಶಿ), ಮನೋವಿನ್ಯಾನದಾತು (ಮನಸ್ಸಿನ ದಾತು) ಇತ್ಯಾದಿ ಪದಗಳು ಮನಸ್ಸಿನ ಬಗ್ಗೆ ಬರುತ್ತದೆ. ಇವೆಲ್ಲವನ್ನು ಸಮಾನಾರ್ಥಕವಾಗಿ ಬಳಸುತ್ತಾರೆ. ಆದರೆ ವಿಶಿಷ್ಟ ಕ್ರಿಯೆಯಂತೆ ಇವುಗಳ ಬಳಕೆಯಿದೆ.
ಇಲ್ಲಿ ಚಿತ್ತವನ್ನು ಅನುಭವಿಸುವುದೆಂದರೆ ಚಿತ್ತವು ಹೇಗೆ ಇದೆಯೋ ಅದನ್ನು ಹಾಗೆಯೇ ಅರಿಯುವುದು. ಉದಾಹರಣೆಗೆ ಇಲ್ಲಿ ಚಿತ್ತವು ಲೋಭದಿಂದ ಕೂಡಿರುತ್ತದೆ ಅಥವಾ ಅಲೋಭದಿಂದ ಕೂಡಿರುತ್ತದೆ. ಅಥವಾ ದ್ವೇಷದಿಂದ, ಅಥವಾ ಅದ್ವೇಷದಿಂದ ಕೂಡಿರುತ್ತದೆ. ಮೋಹದಿಂದ ಅಥವಾ ಅಮೋಹದಿಂದ ಕೂಡಿರುತ್ತದೆ. ಏಕಾಗ್ರತೆಯಿಂದಿರುತ್ತದೆ. ಅಥವಾ ಏಕಾಗ್ರವಾಗಿರುವುದಿಲ್ಲ. ಅಭಿವೃದ್ಧಿ ಹೊಂದಿರುತ್ತದೆ ಅಥವಾ ಅಭಿವೃದ್ಧಿ ಹೊಂದುತ್ತಿರುತ್ತದೆ ಅಥವಾ ಹೊಂದಿಲ್ಲ. ಸಂಕುಚಿತವಾಗಿರುತ್ತದೆ ಅಥವಾ ಚದುರಿಹೋಗಿರುತ್ತದೆ, ಮೀರಿಸಿರುತ್ತದೆ ಅಥವಾ ಮೀರಿಸಿರುವುದಿಲ್ಲ, ಅವಿಮುಕ್ತವಾಗಿರುತ್ತದೆ ಅಥವಾ ವಿಮುಕ್ತಿ ಹೊಂದಿರುತ್ತದೆ.
ಲೋಭ ದ್ವೇಷ, ಮೋಹ, ಏಕಾಗ್ರತೆಯಿಲ್ಲದಿರುವಂತಹ, ಚದುರಿದ, ಸಂಕುಚಿತ, ಅನಭಿವೃದ್ಧಿ ಚಿತ್ತ ಎಲ್ಲವೂ ಪಂಚನೀವರಣಗಳ ನಾಶದಲ್ಲೇ ತಾತ್ಕಾಲಿಕವಾಗಿ ನಾಶವಾಗಿರುತ್ತದೆ. ಈ ಕಶ್ಮಲಗಳು ಇದ್ದಾಗ ಉಸಿರಾಟವು ಒರಟಾಗಿರುತ್ತದೆ, ಭಾರವಾಗಿರುತ್ತದೆ, ಕ್ಷಿಪ್ರವಾಗಿರುತ್ತದೆ, ಮುಂದಿನ ಸ್ಥಿತಿಗಳಲ್ಲಿ ಅಲೋಭ, ಅದ್ವೇಷ, ಅಮೋಹ, ಏಕಾಗ್ರ, ಅಭಿವೃದ್ಧಿ ಹೊಂದಿದ, ಅತಿಶಯಿಸಿದ, ಚಿತ್ತವೇ ಬರುತ್ತಿರುತ್ತದೆ. ಹಾಗೆಯೇ ಹಂತಹಂತದಲ್ಲಿ ವಿಮುಕ್ತಿ ಲಭಿಸುತ್ತಿರುತ್ತದೆ. ಇಲ್ಲಿ ಉಸಿರಾಟವು ಶಾಂತವಾಗಿ, ಏಕಾಗ್ರವಾಗಿ, ಸುಖವಾಗಿ, ಭವ್ಯವಾಗಿ, ಸೂಕ್ಷ್ಮವಾಗಿರುತ್ತದೆ.

ಇಲ್ಲಿ ಚಿತ್ತವು 16 ರೀತಿಯಲ್ಲಿ ಅನುಭವಿಸುತ್ತಿರುತ್ತದೆ ಅದೆಂದರೆ :

1. ಅರಿಯುವಿಕೆ
2. ಸೂಕ್ಷ್ಮವಾಗಿ ಚಿಂತಿಸುವಿಕೆ
3. ಗ್ರಹಿಸುವಿಕೆ
4. ಸ್ಪರ್ಶವಾಗಿ ನೋಡುವಿಕೆ
5. ಪ್ರತಿಬಿಂಬಿಸುವಿಕೆ 
6. ನಿಧರ್ಾರ (ಇಚ್ಛೆ) 
7. ಶ್ರದ್ಧಾಯುತ ನಿಧರ್ಾರ 
8. ಯತ್ನಾಶೀಲತೆಯ ವಿಕಾಸ 
9. ಜಾಗ್ರತೆಯ ಸ್ಥಾಪನೆ 
10. ಸಮಾಧಿಯುತ ಚಿತ್ತ
 11. ಪ್ರಜ್ಞಾದಿಂದ ಸ್ಪಷ್ಟವಾಗಿ ಅರಿಯುವಿಕೆ 
12. ಅಭಿಜ್ಞಾದ ಮೂಲಕ ಅರಿಯುವಿಕೆ
 13. ಪೂರ್ಣ ಅಥರ್ೈಸುವಿಕೆ
 14. ಪೂರ್ಣ ಪರಿತ್ಯಾಗ 
15. ಪೂರ್ಣ ಚಿತ್ತಾ ಅಭಿವೃದ್ಧಿ (ವಿಕಾಸ)
 16. ಪೂರ್ಣ ಸಾಕ್ಷಾತ್ಕಾರ.
ಇಲ್ಲಿ ಚಿತ್ತವನ್ನು ಆಹ್ಲಾದಗೊಳಿಸುತ್ತಾ ಉಸಿರನ್ನು ಬಿಡುತ್ತಿದ್ದೇನೆ ಮತ್ತು ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಆತನು ಸುಶಿಕ್ಷಣಗೊಳ್ಳುತ್ತಾ ಸಾಧನೆ ಮಾಡುತ್ತಿರುತ್ತಾನೆ.
ಇಲ್ಲಿ ಆತನು ಮೊದಲನೆ 9 ಹಂತಗಳಲ್ಲಿ ಪ್ರತಿ ಹಂತದಲ್ಲೂ ಆಹ್ಲಾದ ಉಂಟಾಗುತ್ತದೆ. ಇಲ್ಲಿ ಪ್ರತಿ ಹಂತದಲ್ಲೂ ಆಹ್ಲಾದವನ್ನುಂಟುಮಾಡುವ ಏಕಾಗ್ರತೆ ಸಾಧಿಸುತ್ತಾನೆ. ಇಲ್ಲಿ ಆತನಿಗೆ ಆಹ್ಲಾದವು ಸಮಥ ಧ್ಯಾನದಿಂದಲೂ ಅಥವಾ ವಿಪಸ್ಸನಾ ಧ್ಯಾನದಿಂದಲೂ ಸಿಗುತ್ತದೆ. ಸಮಥದಿಂದ ಆತನಿಗೆ ಮೊದಲಿನ 3 ಝಾನಗಳಿಂದ ಸಿಗುತ್ತದೆ. ವಿಪಸ್ಸನದಿಂದಲೂ ಆತನಿಗೆ ಆಹ್ಲಾದ ಉಂಟಾಗುತ್ತದೆ. ಹೇಗೆಂದರೆ ಚಿತ್ತದ ಉದಯ, ಭಾಗಗಳನ್ನು ಗಮನಿಸುತ್ತಿರುವಾಗ, ಧ್ಯಾನದ ಉದಯ ಭಂಗಿಗಳನ್ನು ಗಮನಿಸುತ್ತಿದ್ದಾಗ ಪ್ರಜ್ಞಾ ಪ್ರಕಾಶದಿಂದ ಸ್ಫೂತರ್ಿಗೊಂಡು ಆಹ್ಲಾದಿತನಾಗುತ್ತಾನೆ.
ಚಿತ್ತವನ್ನು ಏಕಾಗ್ರಗೊಳಿಸುತ್ತಾ ನಾನು ಉಸಿರನ್ನು ಬಿಡುತ್ತಿದ್ದೇನೆ ಮತ್ತು ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಸುಶಿಕ್ಷಣವನ್ನು ಪಡೆದು ಸಾಧಕ ಸಾಧನೆ ಮಾಡುತ್ತಿರುತ್ತಾನೆ.
ಇಲ್ಲಿ ಆತನು ಉಸಿರಾಟದಲ್ಲೇ ಮನಸ್ಸು ಕೇಂದ್ರೀಕರಿಸಿ ಮನಸ್ಸನ್ನು ಉಸಿರಾಟದಲ್ಲೇ ಹರಿಸಿ, ಉಸಿರಾಟದಲ್ಲೇ ಏಕಾಗ್ರವಹಿಸಿ, ಉಸಿರಾಟದಲ್ಲೇ ಆನಂದಿಸಿ, ಚಿತ್ತವನ್ನು ಮತ್ತು ಚಿತ್ತವೃತ್ತಿಯನ್ನು ಉಸಿರಾಟದಲ್ಲೇ ಸ್ಥಾಪಿಸಿ ಪ್ರಥಮ ಸಮಾಧಿ ಗಳಿಸುತ್ತಾನೆ. ಹೀಗೆಯೇ ದ್ವಿತೀಯ, ತೃತೀಯ, ಚತುರ್ಥ ಸಮಾಧಿ ಗಳಿಸುತ್ತಾನೆ. ಹೀಗೆ ಅನಾಪಾನಾ ಸಮಾಧಿ ಧ್ಯಾನ ಮಾಡುತ್ತಾನೆ. ನಂತರ ಅನಾಪಾನಾದಲ್ಲೇ (ಉಸಿರಾಟದಲ್ಲಿ) ಉದಯ, ವಯ, (ಉದಯಿಸುವಿಕೆ ಮತ್ತು ಅಳಿಯುವಿಕೆ) ಕಡೆ ಗಮನಹರಿಸಿ ಪ್ರಜ್ಞಾ ಉತ್ಪತ್ತಿಯಾಗಿ ಕ್ಷಣಿಕ ಚಿತ್ತ ಸಮಾಧಿ ಸ್ಥಾಪಿಸುತ್ತಾನೆ.
ಇಲ್ಲಿ ಮನಸ್ಸು ಸ್ಥಾಪನೆಯಾಗಿರುತ್ತದೆ, ದೃಢವಾಗಿ ನೆಲೆಯೂರಿರುತ್ತದೆ. ಸ್ಥಿರತೆಯಿಂದ ಕೂಡಿ ಅಬಾಧಿತವಾಗಿರುತ್ತದೆ. ಯಾವುದೇ ಚದುರುವಿಕೆಗೆ ಅವಕಾಶವಿರುವುದಿಲ್ಲ. ಅಭಂಗ ಏಕಾಗ್ರತೆಯಿರುತ್ತದೆ. ಪ್ರಶಾಂತದ ಏಕಾಗ್ರತೆಯ ಅಧಿಪತ್ಯವಿರುತ್ತದೆ. ರಾಗ, ದ್ವೇಷ, ಮೋಹಗಳಿಲ್ಲದ ಸಮ್ಮಾ ಸಮಾಧಿಯಾಗಿರುತ್ತದೆ. ಈ ಸಮಾಧಿ ಬಲದಿಂದ ಮತ್ತು ಪ್ರಜ್ಞಾ ಬಲದಿಂದಲೇ ವಿಮುಕ್ತಿಯು ಲಭಿಸುತ್ತದೆ.
ಚಿತ್ತವನ್ನು ವಿಮುಕ್ತಿಗೊಳಿಸುತ್ತಾ ಉಸಿರನ್ನು ಹೊರಬಿಡುತ್ತಿದ್ದೇನೆ ಮತ್ತು ಒಳತೆಗೆದುಕೊಳ್ಳುತ್ತಿದ್ದೇನೆ ಹೀಗೆ ಆತನು ಸುಶಿಕ್ಷಿತನಾಗುತ್ತಾ ಸಾಧನೆ ಮಾಡುತ್ತಾನೆ.
ಇಲ್ಲಿ ಭಿಕ್ಷುವು, ಆನಾಪಾನಸತಿಯಲ್ಲಿ ಪ್ರತಿಷ್ಠಾಪಿಸಿಕೊಂಡು ಪಂಚನೀವರಣಗಳಿಂದ ವಿಮುಕ್ತನಾಗಿ ಪ್ರಥಮ ಸಮಾಧಿಯನ್ನು ಪ್ರಾಪ್ತಿಗೊಳಿಸುತ್ತಾನೆ. ನಂತರ ವಿತರ್ಕ, ವಿಚಾರಗಳಿಂದ ಮುಕ್ತನಾಗಿ ದ್ವಿತೀಯ ಸಮಾಧಿಯನ್ನು ಗಳಿಸುತ್ತಾನೆ. ಆನಂದದಿಂದ ಮುಕ್ತನಾಗಿ ತೃತೀಯ ಸಮಾಧಿ ಗಳಿಸುತ್ತಾನೆ. ಸುಖದಿಂದ ಮುಕ್ತನಾಗಿ ಹಾಗೆಯೇ ಎಲ್ಲಾ ನೋವುಗಳಿಂದ ಮುಕ್ತನಾಗಿ ಚತುರ್ಥ ಸಮಾಧಿ ಗಳಿಸುತ್ತಾನೆ. ನಂತರ ವಿಪಸ್ಸನ ಧ್ಯಾನವನ್ನು ಆರಂಭಿಸಿ ಧ್ಯಾನದ ಜೊತೆಗಿರುವ ಚಿತ್ತವು ಅನಿತ್ಯಾಕಾರಕ ಎಂಬ ಅರಿವು ಉಂಟಾಗಿ... ಮುಂದೆ ಅನಿತ್ಯತೆಯ ಅರಿವಿನಿಂದ ನಿತ್ಯ ಗ್ರಹಿಕೆಯಿಂದ ಮುಕ್ತನಾಗುತ್ತಾನೆ. ದುಃಖದ ಅರಿವಿನಿಂದ ಸುಖ ಗ್ರಹಿಕೆಯಿಂದ ಮುಕ್ತನಾಗುತ್ತಾನೆ. ಹಾಗೆಯೇ ಆನಾತ್ಮದ ಅರಿವಿನಿಂದ ಆತ್ಮ ಗ್ರಹಿಕೆಯಿಂದ ಮುಕ್ತನಾಗುತ್ತಾನೆ. ವಿರಾಗದ ಅರಿವಿನಿಂದ ರಾಗದಿಂದ ಮುಕ್ತನಾಗುತ್ತಾನೆ. ಕ್ಷಯವಾಗುವಿಕೆಯ ಅರಿವಿನಿಂದ ಲೋಭದಿಂದ ಮುಕ್ತನಾಗುತ್ತಾನೆ. ನಿರೋಧದ ಅರಿವಿನಿಂದ ಉದಯದಿಂದ ಮುಕ್ತನಾಗುತ್ತಾನೆ. ತ್ಯಾಗದ ಅರಿವಿನಿಂದಾಗಿ ಅಂಟುವಿಕೆ (ಹಿಡಿಯುವಿಕೆ) ಯಿಂದ ಮುಕ್ತನಾಗುತ್ತಾನೆ. ಹೀಗೆ ಆತನು ಚಿತ್ತ ವಿಮುಕ್ತಿಗೊಳಿಸುತ್ತಾ ಸಾಧನೆ ಮಾಡುತ್ತಾನೆ.
*  *  *
ಇಲ್ಲಿ ಆತನು ಚಿತ್ತದ ಉದಯ, ಚಿತ್ತದ ಏಕಾಗ್ರತೆಯನ್ನು ರೂಢಿಸುತ್ತಾನೆ. ಕೇವಲ ಚಿತ್ತದ (ಯೋಚನೆಯ) ಮೇಲೆ ಮನಸ್ಸನ್ನು ಇಟ್ಟಿರುತ್ತಾನೆ. ಇದಕ್ಕಾಗಿ ನಿರಂತರ ಜಾಗ್ರತೆ ಅತಿಮುಖ್ಯವಾಗಿ ಬೇಕಾಗಿದೆ. ಅಷ್ಟೇ ಪ್ರಜ್ಞಾವಂತಿಕೆ ಮತ್ತು ಸೂಕ್ಷ್ಮಗ್ರಹಿಕೆ ಅನಾವಶ್ಯಕವಾಗಿದೆ. ಮನಸ್ಸಿನ ಎಲ್ಲಾ ಚಲನೆಯ ಬಗ್ಗೆ ಗಮನವಿಟ್ಟಿರಬೇಕು. ಆದರೆ ಯಾವುದನ್ನೂ ನಿಯಂತ್ರಿಸಲು ಹೋಗಬಾರದು. ಕೇವಲ ಆಯ್ಕೆರಹಿತ ವೀಕ್ಷಣೆ ಮಾತ್ರ ಮಾಡಬೇಕು. ಉದಾಹರಣೆಗೆ  ನಿಮ್ಮ ಮನಸ್ಸಿನಲ್ಲಿ ಕೋಪವೇ ಉದಯವಾಗಲಿ ಅದರ ಉದಯ ವೀಕ್ಷಿಸಿ. ಹಾಗೆ ವೀಕ್ಷಿಸುತ್ತಿದ್ದಂತೆ ಅದು ನಾಶವಾಗುವುದು. ಕೇವಲ ವೀಕ್ಷಿಸಿ, ಆದರೆ ಬಲವಂತವಾಗಿ ಯೋಚಿಸಬೇಡಿ. ಯೋಚನೆ ಉಂಟಾದರೆ ವೀಕ್ಷಿಸಿ. ನಾವು ಯಾವುದೆಲ್ಲವನ್ನು ಅಂಟಿರುವೆವೋ ಅದೆಲ್ಲ ಯೋಚನೆಗಳು ಉದಯಿಸುತ್ತದೆ. ಆದರೆ ನವು ಯಾವುದಕ್ಕೂ ಅಂಟದೆ ಸಮಚಿತ್ತತೆಯಿಂದ ವೀಕ್ಷಿಸಿ, ಆಗ ಅವು ನಿಶ್ಶೇಷವಾಗಿ ನಾಶವಾಗುವುದು. ಹೀಗೆ ನಿಮ್ಮ ಹಳೆಯ ಬಂಧನಯುತ ಯೋಚನೆಗಳೆಲ್ಲಾ ಸಮಚಿತ್ತತೆಯ ವೀಕ್ಷಣೆಯಿಂದ ನಾಶವಾಗುವುದು. ಹೀಗೆ ಹಳೆಯದು ನಾಶವಾಗಿ ಹೊಸ ಯೋಚನೆಯನ್ನು ಮಾಡದೆ ನೀವು ಮುಕ್ತರಾಗುವಿರಿ. ಕೆಲವೊಮ್ಮೆ ಯೋಚನೆಯೇ ಇರುವುದಿಲ್ಲ. ಕೇವಲ ನಿಶ್ಶಬ್ದ, ಶೂನ್ಯತೆ ಇರುತ್ತದೆ. ಅದನ್ನು ಹಾಗೆಯೇ ವೀಕ್ಷಿಸಿ, ಕೇವಲ ವೀಕ್ಷಿಸಿ, ವೀಕ್ಷಿಸಿ.
ಹೀಗೆ ಆತನು ಆಯ್ಕೆರಹಿತವಾಗಿ ಸಮಚಿತ್ತತೆಯಿಂದ ವೀಕ್ಷಿಸುವಾಗ ಚಿತ್ತವು ಹೇಗೆ ಉದಯಿಸುತ್ತದೆ ಎಂದು ಅರಿಯುತ್ತಾನೆ. ಹಾಗೆಯೇ ಸಮಚಿತ್ತತೆಯ ವೀಕ್ಷಣೆಯಿಂದ ಹೇಗೆ ನಾಶವಾಯಿತು ಎಂಬುದನ್ನು ಅರಿಯುತ್ತಾನೆ. ಹೀಗೆ ಉದಯವ್ಯಯ ಗಮನಿಸುವಾಗ ಆತನಲ್ಲಿ ಆಹ್ಲಾದತೆ ಉದಯಿಸುತ್ತದೆ. ಅತ್ಯಂತ ಸಹಾನುಭೂತಿ ಮೂಡುತ್ತದೆ. ನಿಶ್ಶಬ್ದದ, ಶೂನ್ಯದ ಅನುಭೂತಿ ಮೂಡುತ್ತದೆ. ಯೋಚನೆಗಳಿಗೆ ಅತೀತವಾಗಿ ಮನಸ್ಸು ಹೋಗುತ್ತದೆ. ಸೂಕ್ಷ್ಮ ಯೋಚನೆಗಳ ಉದಯವ್ಯಯ ಗಮನಕ್ಕೆ ಬರುತ್ತದೆ. ಸಂಕೇತಗಳು ಕ್ಷಿಪ್ರವಾಗಿ ಉದಯಿಸಿ ಹಾಗೆಯೇ ಕ್ಷಿಪ್ರವಾಗಿ ಅಳಿಯುತ್ತದೆ. ಇವೆಲ್ಲಾ ಅನುಭೂತಿ ಉಂಟಾಗಿ ಆಹ್ಲಾದದಿಂದ ಕೂಡಿರುತ್ತಾನೆ.
ಈ ರೀತಿಯಾಗಿ ಚಿತ್ತದ ವೀಕ್ಷಣೆ ಮಾಡುವಾಗ ಆಹ್ಲಾದತೆ ಉಂಟಾಗುತ್ತದೆ. ಈ ಆಹ್ಲಾದತೆಯಿಂದಲೇ ಮನಸ್ಸು ಏಕಾಗ್ರಭರಿತವಾಗುತ್ತದೆ. ಏಕಾಗ್ರಭರಿತ ಮನಸ್ಸು ಮಾತ್ರ ಸತ್ಯವನ್ನು ಅದು ಹೇಗಿದೆಯೋ ಹಾಗೆ ಅರಿಯುತ್ತದೆ. ಇಲ್ಲಿ ಚಿತ್ತದ ಅಭಿವೃದ್ಧಿಯನ್ನು ಕಾಣುತ್ತಾನೆ. ಅತಿಶಯಿಸಿದ ಚಿತ್ತವನ್ನು, ಅಲೋಭಯುತ ಚಿತ್ತವನ್ನು ಕಾಣುತ್ತಾನೆ.
ಯಾವಾಗ ಮನಸ್ಸು ಏಕಾಗ್ರವಾಗುತ್ತದೆಯೋ ಆಗ ಸತ್ಯವನ್ನು (ದೇಹ ಮತ್ತು ಮನಸ್ಸನ್ನು) ಅದು ಹೇಗಿದೆಯೋ ಹಾಗೆಯೇ ಅರಿಯುತ್ತದೆ (ಅನಿತ್ಯ, ದುಃಖ, ಅನಾತ್ಮ) ಹೀಗೆ ಸತ್ಯವೀಕ್ಷಣೆ ಮಾಡಿದಾಗ ವಿರಾಗವುಂಟಾಗುತ್ತದೆ, ವಿಮುಖನಾಗುತ್ತಾನೆ, ನಿರೋಧ ಸಾಧಿಸುತ್ತಾನೆ. ಸರ್ವ ಪರಿತ್ಯಾಗ ಮಾಡುತ್ತಾನೆ. ಹೀಗೆ ಆತನು ಚಿತ್ತ ವಿಮುಕ್ತಿಗೊಳಿಸುತ್ತಾ ಸಾಧನೆ ಮಾಡುತ್ತಾನೆ.

ಆನಾಪಾನಾ ಧಮ್ಮಾನುಪಸ್ಸನಾ

ಅನಿತ್ಯವನ್ನು ಅರಿಯುತ್ತಾ ನಾನು ಉಸಿರನ್ನು ಬಿಡುತ್ತಿದ್ದೇನೆ ಮತ್ತು ಉಸಿರನ್ನು ತೆಗದುಕೊಳ್ಳುತ್ತಿರುವೆ ಹೀಗೆ ಸುಶಿಕ್ಷಣವನ್ನು ಪಡೆದು ಆತನು ಸಾಧನೆ ಮಾಡುತ್ತಿರುತ್ತಾನೆ.
ಪಂಚಖಂಧಗಳು (ದೇಹ ಮತ್ತು ಮನಸ್ಸು) ಅನಿತ್ಯವಾಗಿವೆ (ಪರಿವರ್ತನೆ). ಏಕೆಂದರೆ ಅವು ಉದಯಿಸುತ್ತದೆ ಮತ್ತು ಅಳಿಯುತ್ತದೆ, ಬದಲಾವಣೆಯಾಗುತ್ತಲೇ ಇರುತ್ತದೆ, ಮರೆಯಾಗುತ್ತಲೇ ಇರುತ್ತದೆ. ಒಂದು ಕ್ಷಣದಲ್ಲೂ ಸ್ಥಿರವಾಗಿ ಉಳಿಯಲಾರವು ಸದಾ ಭಂಗವಾಗುತ್ತಲೇ ಇರುತ್ತವೆ. ಸಾಧಕನು ಉಸಿರಾಟದಲ್ಲಿ ಅನಿತ್ಯತೆಯನ್ನು ಗಮನಿಸುತ್ತಾನೆ (ದೇಹದಲ್ಲಿ ಅನಿತ್ಯತೆ ಗಮನಿಸುತ್ತಾನೆ, ವೇದನೆಗಳಲ್ಲಿ ಅನಿತ್ಯತೆ ಗಮನಿಸುತ್ತಾನೆ. ಚಿತ್ತದಲ್ಲಿ ಅನಿತ್ಯತೆ ಗಮನಿಸುತ್ತಾನೆ, ಚಿತ್ತ ವೃತ್ತಿಯಲ್ಲಿ (ಧಮ್ಮದಲ್ಲಿ) ಅನಿತ್ಯತೆ ಗಮನಿಸುತ್ತಾನೆ. ಹಾಗೆಯೇ ಧ್ಯಾನದಲ್ಲಿ ಅನಿತ್ಯತೆ ಗಮನಿಸುತ್ತಾನೆ). ಎಲ್ಲಾ ಕಾರಣಬದ್ಧ ಸ್ಥಿತಿಗಳು (ಸಂಖಾರಗಳು) ಅನಿತ್ಯವೆಂಬ ಅರಿವನ್ನು ಪಡೆಯುತ್ತಾನೆ. ಪಂಚಖಂಧಗಳಾದ ದೇಹ, ಸಂವೇದನೆ (ವೇದನೆ) ಸನ್ಯಾ (ಗ್ರಹಿಕೆ), ವಿನ್ಯಾನ (ಅರಿವು) ಮತ್ತು ಸಂಖಾರ (ಮನೋನಿಮರ್ಿತಿ)ಗಳು ಅನಿತ್ಯ ಎದು ಅರಿಯುತ್ತಾನೆ. ಹಾಗೇ ಆರು ಇಂದ್ರಿಯಗಳ ಆಧಾರಗಳು ಅಲ್ಲಿಂದ ಉದಯವಾಗುವ ಎಲ್ಲವೂ ಅನಿತ್ಯ, ಹಾಗೆಯೇ ಪಟಿಚ್ಚ ಸಮುಪ್ಪಾದ ಅನಿತ್ಯ ಎಂದು ಅರಿಯುತ್ತಾನೆ. ಹೊರಗಿನ ಪ್ರಪಂಚವಾಗಲಿ, ಋತುಗಳಾಗಲಿ, ನಮ್ಮ ದೇಹವೇ ಆಗಲಿ ಸದಾ ಪರಿವರ್ತನೆಗೆ ಒಳಗಾಗುತ್ತ ಬಾಲ್ಯ, ಯೌವ್ವನ, ಮುಪ್ಪು ಮರಣ ಪಡೆಯುತ್ತದೆ. ಹಾಗೆಯೇ ವೇದನೆಗಳೇ ಆಗಲಿ ಒಮ್ಮೆ ಸುಖ, ಒಮ್ಮೆ ದುಃಖ ಒಮ್ಮೆ ಅಸುಖ-ಅದುಃಖ, ಈ ರೀತಿ ಅನಿತ್ಯಕಾರಕವಾಗಿರುತ್ತದೆ. ಹಾಗೆಯೇ ಯೋಚನೆಗಳಾಗಲಿ, ನಮ್ಮ ವ್ಯಕ್ತಿತ್ವವಾಗಲಿ ಸದಾ ಒಂದೇರೀತಿ ಇರುವುದಿಲ್ಲ. ಪರಿವರ್ತನೆಯಾಗುತ್ತಲೇ ಇರುತ್ತವೆ. ನಮ್ಮ ಗ್ರಹಿಕೆಯಾಗಲಿ, ದೃಷ್ಟಿಕೋನಗಳಾಗಲಿ ಎಲ್ಲವೂ ಪರಿವರ್ತನೆ ಆಗುತ್ತಲೇ ಇರುತ್ತದೆ.
ಇಂದ್ರೀಯಗಳು ಮತ್ತು ಇಂದ್ರಿಯಗಳ ವಿಷಯಗಳನ್ನು ಸಂಪಕರ್ಿಸಿದಾಗ ವೇದನೆಗಳು ಉಂಟಾಗುತ್ತದೆ. ಆಗ ಇಚ್ಛೆ ಉಂಟಾಗುತ್ತದೆ. ನಂತರ ತನ್ಹಾ ಉಂಟಾಗುತ್ತದೆ. ನಂತರ ಪ್ರಬಲ ಅಂಟುವಿಕೆ, ಕರ್ಮಗಳು ಉಂಟಾಗುತ್ತದೆ, ವ್ಯಕ್ತಿತ್ವ ನಿಮರ್ಾಣವಾಗುತ್ತದೆ. ಹಾಗೆಯೇ ಸದಾ ಅನಿತ್ಯತೆಯು ಗೋಚರವಾಗುತ್ತದೆ.
ಸದಾ ದೇಹ ಮನಸ್ಸುಗಳು (ಪಂಚಖಂಧಗಳು) ಉದಯಿಸುತ್ತ ಶಿಥಿಲಕ್ಕೆ ಒಳಗಾಗುತ್ತವೆ ಮತ್ತು ಅಳಿಯುತ್ತವೆ. ಹೀಗೆ ನಾವು ಪ್ರತಿಕ್ಷಣವು ಜನ್ಮಿಸುತ್ತಿರುವೆವು ಮುಪ್ಪು ಪಡೆಯುತ್ತಿರುವೆವು ಮತ್ತು ಮರಣಿಸುತ್ತಿರುವೆವು.
ಯಾವುದೆಲ್ಲವೂ ಗಮನಿಸುತ್ತಿದ್ದಾರೋ ಅವೆಲ್ಲಕ್ಕೂ ಒಂದು ಭೂತಕಾಲವಿದೆ. ಅದು ಆ ರೀತಿಯಲ್ಲಿ ಉದಯಿಸಿರುತ್ತದೆ ಮತ್ತು ಅದಕ್ಕೆ ಭವಿಷ್ಯವೂ ಇದೆ. ಈ ರೀತಿಯಲ್ಲಿ ಅದು ಅಳಿಯುತ್ತದೆ. ಹೀಗೆ ಇದು ಅನಿತ್ಯವಾಗಿದೆ.
ಅನಿತ್ಯವನ್ನು ನಾವು ಗಮನಿಸುವುದು ದೇಹದಲ್ಲಿ, ವೇದನೆಗಳಲ್ಲಿ, ಗ್ರಹಿಕೆಗಳಲ್ಲಿ, ಯೋಚನೆಗಳಲ್ಲಿ, ಅರಿವಿನಲ್ಲಿ, ಇಂದ್ರೀಯಗಳಲ್ಲಿ ಮತ್ತು ಇಡೀ ನಮ್ಮ ಅಸ್ತಿತ್ವದಲ್ಲಿ (ಅಂದರೆ ನಮ್ಮ ಭೂತಕಾಲ ವರ್ತಮಾನ ಮತ್ತು ಭವಿಷ್ಯದ ಅಸ್ತಿತ್ವದಲ್ಲಿ ಕಾಣುತ್ತೇವೆ).

ಪರಿವರ್ತನೆಗಳು ನಾಲ್ಕುರೀತಿ ಆಗುತ್ತವೆ.

1. ಬಂಧನದಿಂದ ಬಂಧನಕ್ಕೆ (ಅಪರಿಶುದ್ಧತೆಯಿಂದ ಅಪರಿಶುದ್ಧತೆಗೆ)
2. ಬಿಡುಗಡೆಯಿಂದ ಬಂಧನಕ್ಕೆ (ಸ್ವಲ್ಪ ಪರಿಶುದ್ಧನಾಗಿ ನಂತರ ಮತ್ತೆ ಕಲುಶಿತನಾಗುವಿಕೆ)
3. ಬಂಧನದಿಂದ ಬಿಡುಗಡೆಗೆ (ಕಲುಶಿತತೆಯಿಂದ ಪರಿಶುದ್ಧಿಯೆಡೆಗೆ)
4. ಬಿಡುಗಡೆಯಿಂದ ಬಿಡುಗಡೆಗೆ (ಪರಿಶುದ್ಧತೆಯಿಂದ ಪೂರ್ಣ ಪರಿಶುದ್ಧತೆಯೆಡೆಗೆ).
ಅಂದರೆ ಇಲ್ಲಿ ಕಶ್ಮಲಗಳು ಯಾವರೀತಿ ಆರಂಭವಾಗುತ್ತದೆ. ಯಾವರೀತಿ ಬೆಳೆದು ವ್ಯಕ್ತಿತ್ವವನ್ನು ನಾಶಗೊಳಿಸುತ್ತದೆ. ಹಾಗೆಯೇ ಕಶ್ಮಲಗಳಿಂದ ಹೇಗೆ ಬಿಡುಗಡೆಯ ಹಾದಿಗೆ ಬರುತ್ತಾನೆ. ಹೇಗೆ ಪೂರ್ಣ ಪರಿಶುದ್ಧತೆಯೆಡೆಗೆ ಬರುತ್ತಾನೆ ಎಂದು ಅರಿಯುತ್ತಾನೆ. ಅಂದರೆ ಪಂಚನೀವರಣಗಳ ಸ್ವರೂಪ, ಸಪ್ತಬೋಧಿ ಅಂಗಗಳ ಸ್ವರೂಪ, ಎಲ್ಲವನ್ನು ಅರಿಯುತ್ತಾನೆ. ಸಾಧಕನಲ್ಲಿ ಪರಿವರ್ತನೆಯು ಬಿಡುಗಡೆಯಿಂದ ಬಿಡುಗಡೆಗೆ ಅಂದರೆ ಪರಿಶುದ್ಧತೆಯಿಂದ ಪರಿಶುದ್ಧತೆಯೆಡೆಗೆ ಸಾಗುತ್ತಿರುತ್ತದೆ. ಆತ ಪಟಿಚ್ಚ ಸಮುಪ್ಪಾದವನ್ನು ಸಾಕ್ಷಾತ್ಕರಿಸುತ್ತಾನೆ.
ಯಾವೆಲ್ಲವೂ ಅನಿತ್ಯವೋ ಅವೆಲ್ಲಾ ದುಃಖವೆಂದು ಅರಿಯುತ್ತಾನೆ. ಯಾವೆಲ್ಲವೂ ದುಃಖವೋ ಅವೆಲ್ಲಾ ನಾನಲ್ಲ, ನನ್ನದಲ್ಲ, ನನ್ನ ಅತ್ಮವಲ್ಲ ಎಂದು ಸ್ಪಷ್ಟವಾಗಿ ಅರಿಯುತ್ತಾನೆ.
(ದೇಹ ಮತ್ತು ಮನಸ್ಸು) ಪಂಚಖಂಧಗಳು ಅನತ್ಯ
(ದೇಹ ಮತ್ತು ಮನಸ್ಸು) ಪಂಚಖಂಧಗಳು ದುಃಖ
(ದೇಹ ಮತ್ತು ಮನಸ್ಸು) ಪಂಚಖಂಧಗಳು ಅನಾತ್ಮ ಎಂದು ಅರಿಯುತ್ತಾನೆ.
ವಿರಾಗವನ್ನು ಗಮನಿಸುತ್ತಾ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಮತ್ತು ಉಸಿರನ್ನು ಹೊರಬಿಡುತ್ತಿದ್ದೇನೆ ಎಂದು ಸುಶಿಕ್ಷಣ ಪಡೆದು ಆತನ ಸಾಧನೆ ಮಾಡುತ್ತಿರುತ್ತಾನೆ.
ಇಲ್ಲಿ ವಿರಾಗವೆಂದರೆ ಕ್ರಮೇಣ ಮರೆಯಾಗುವಿಕೆ, ಮಾಯವಾಗುವಿಕೆ (ಇಲ್ಲವಾಗುವಿಕೆ) ಎಂದು ಅರ್ಥವಾಗಿದೆ. ಇಲ್ಲಿ ಎರಡು ರೀತಿಯ ಮರೆಯಾಗುವಿಕೆಯಿದೆ. ಒಂದು ನಾಶವಾಗುವಿಕೆ ಮತ್ತೊಂದು ಪೂರ್ಣವಾಗಿ ನಶಿಸುವಂತಹುದು, ಇಲ್ಲವಾಗುವಂತಹುದು. ಸಂಖಾರಗಳ ಭಂಗವಾಗುವಿಕೆ. ತಾತ್ಕಾಲಿಕ ನಾಶವಾಗುವಿಕೆಯಾಗಿದೆ. ಪೂರ್ಣ ಇಲ್ಲವಾಗುವಿಕೆ ಅಥವಾ ಪೂರ್ಣ ನಾಶವೆಂದರೆ ನಿಬ್ಬಾಣವಾಗಿದೆ. ಇಲ್ಲಿ ಸಾಧಕ ಎರಡನ್ನು ಅನುಭವಿಸುತ್ತಾನೆ. ಹೀಗೆ ಆತನು ಸಾಧನೆ ಮಾಡುತ್ತಾನೆ.
ನಿರೋಧವನ್ನು ಗಮನಿಸುತ್ತಾ ಉಸಿರನ್ನು ಬಿಡುತ್ತಿದ್ದೇನೆ ಮತ್ತು ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಹೀಗೆ ಸುಶಿಕ್ಷಿತನಾಗಿ ಆತನು ಸಾಧನೆ ಮಾಡುತ್ತಾನೆ. ಯಾವಾಗ ಸಾಧಕನು ಪಂಚಖಂಧಗಳಲ್ಲಿ ಅನಿತ್ಯತೆ ಕಾಣುವನೋ, ದುಃಖವನ್ನು ಕಾಣುವನೋ ಆಗ ಆತನಲ್ಲಿ ಸ್ಪಷ್ಟವಾಗಿ ಇವು ನಾನಲ್ಲ, ನನ್ನದಲ್ಲ, ಇದು ನನ್ನ ಆತ್ಮವಲ್ಲ ಎಂಬುದು ಅರಿವಿಗೆ ಬರುತ್ತದೆ. ಆಗ ಆತನಗೆ ಇಡೀ ಪಂಚಖಂಧಗಳೇ ಕೆಂಡಗಳ ಹಾಗೆ ಕಾಣುತ್ತದೆ. ಆಗ ಆತ ಹೊಸದು ಏನನ್ನೂ ಉದಯಿಸಲಾರ. ಉದಯಿಸುವಿಕೆಗಳ ಅಪಾಯವನ್ನು ಅರಿತು ಯಾವ ಹೊಸ ಸಂಖಾರವು ಆತನಲ್ಲಿ ಉದಯಿಸಲಾರದು ಹೀಗೆ ಆತನು ನಿರೋಧವನ್ನು ಗಮನಿಸುತ್ತಾ ಉಸಿರಾಟದಲ್ಲಿ ಸಾಧನೆ ಮಾಡುತ್ತಾನೆ.
ತ್ಯಜಿಸುವಿಕೆ (ಪರಿತ್ಯಾಗ) (ಪಟಿನಿಸ್ಸ) ಗಮನಿಸುತ್ತಾ ಆತ ಉಸಿರನ್ನು ಬಿಡುತ್ತಾನೆ ಮತ್ತು ಉಸಿರನ್ನು ತೆಗೆದುಕೊಳ್ಳುತ್ತಾನೆ.
ತ್ಯಜಿಸುವಿಕೆ ಎಂದರೆ ಬಿಟ್ಟುಬಿಡುವುದು. ಇಲ್ಲಿ ಪರಿತ್ಯಾಗವು ಎರಡು ವಿಧದಲ್ಲಿದೆ. ಒಂದನೆಯದು ಇರುವ ವ್ಯಕ್ತಿತ್ವ ಅಥವಾ ಸಂಖಾರಗಳನ್ನು ಪರಿತ್ಯಾಗ ಮಾಡುವುದು ಬಿಟ್ಟುಬಿಡುವುದು. ಇಲ್ಲಿ ಸಾಧಕ ಹಿಡಿಯುವುದರ ಅಪಾಯ ವೀಕ್ಷಿಸಿ, ಬಿಟ್ಟುಬಿಡುವುದರ, ಕ್ಷೇಮಹಿತ ಪರಿಗಣಿಸಿ ಬಿಟ್ಟುಬಿಡುತ್ತಾನೆ. ಆತನ ಚಿತ್ತವು ಯಾವುದನ್ನೂ ಒಳಗೊಂಡಿರುವುದಿಲ್ಲ ಶೂನ್ಯ ಮಾಡಿಬಿಡುತ್ತಾನೆ, ಸಂಖಾರಾತೀತನಾಗುತ್ತಾನೆ.
ಇನ್ನೊಂದು ಪ್ರವೇಶಿಸುವುದು ಅಂದರೆ ನಿಬ್ಬಾಣದಲ್ಲಿ ಪ್ರವೇಶ ಎಂದರ್ಥ. ಏನೂ ಇಲ್ಲದ, ಯಾವುದೇ ಹಿಡಿತವಿಲ್ಲದ, ಯಾವುದೇ ರಚನೆಯಿಲ್ಲದ, ನಿಲ್ಲಿಸಲ್ಪಟ್ಟ ರಾಗವಿಲ್ಲದ, ದ್ವೇಷವಿಲ್ಲದ, ಮೋಹವಿಲ್ಲದ, ಜನ್ಮವಿಲ್ಲದ, ಸ್ಥಿತಿಯಲ್ಲದ ಅಹಂ ಇಲ್ಲದ ನಿಬ್ಬಾಣದಲ್ಲಿ ನೆಲೆಗೊಳ್ಳುತ್ತಾನೆ.
ಹೀಗೆ ಆತನು ಅನಾಪಾನಾ ಧಮ್ಮಾನುಪಸ್ಸನಾ ಪಾಲಿಸುತ್ತಾನೆ.
ಯಾವುದೇ ಧ್ಯಾನಗಳಾಗಿರಲಿ ಅದು ಯಶಸ್ವಿಯಾಗುವುದು ಒಬ್ಬನು ಸ್ಮೃತಿವಂತನಾಗಿ ಜಾಗರೂಕನಾಗಿದ್ದಾಗಲೇ. ಈ ಧ್ಯಾನದ ಹೊರತು ಯಾವುದೇ ಧ್ಯಾನ ವಿಷಯದಲ್ಲಿ ಇದು ಹೆಚ್ಚು ನಿಖರವಾಗಿ ತಿಳಿಯುತ್ತದೆ. ಆದರೆ ಆನಾಪಾನಸತಿಯನ್ನು ವೃದ್ಧಿಸುವುದು ಅತ್ಯಂತ ಕಷ್ಟಕರ ವಿಷಯವಾಗಿದೆ. ಏಕೆಂದರೆ ಇದು ಕೇವಲ ಸಮ್ಮಾಸಂಬುದ್ಧರ, ಪಚ್ಚೇಕ ಬುದ್ಧರ ಮತ್ತು ಆರ್ಯರ (ಬುದ್ಧರ ಶಿಷ್ಯರ) ಕ್ಷೇತ್ರವಾಗಿದೆ. ಇದು ಕ್ಷುಲ್ಲಕ ವಿಷಯವಲ್ಲ. ಹಾಗೆಯೇ ಕ್ಷುಲ್ಲಕ ವ್ಯಕ್ತಿಗಳು ಸಾಧಿಸುವುದಂತು ಅಲ್ಲವೇ ಅಲ್ಲ. ಉಸಿರಾಟದ ಗಮನವು ಆಳವಾಗಿ ಹೋಗುತ್ತಿರುವಂತೆಯೇ ಇದು ಹೆಚ್ಚು ಶಾಂತದಾಯಕ ಮತ್ತು ಹೆಚ್ಚು ಸೂಕ್ಷ್ಮವಾಗಿರುತ್ತದೆ. ಆದ್ದರಿಂದಾಗಿ ಅತ್ಯಧಿಕ ಸ್ಮೃತಿ, ಜಾಗರೂಕತೆ ಹಾಗು ಪ್ರಜ್ಞಾಶೀಲತೆ ಇಲ್ಲಿ ಅತ್ಯಗತ್ಯವಾಗಿದೆ.
ಅನ್ಯ ಧ್ಯಾನಗಳಲ್ಲಿ ತೊಡಗಿರುವವರು ತಮ್ಮ ಆಯಸ್ಸನ್ನು ತಿಳಿಸಬಲ್ಲರು ಅಥವಾ ಇಲ್ಲ. ಆದರೆ ಅನಾಪಾನಸತಿಯನ್ನು ಅಭ್ಯಸಿಸಿದವರು ಖಂಡಿತವಾಗಿ ತಮ್ಮ ಅಂತಿಮ ಸಮಯವನ್ನು ತಿಳಿಸಬಲ್ಲರು.
ಉದಾಹರಣೆಗೆ ಇಲ್ಲಿ ಘಟನೆಯೊಂದಿದೆ. ಹುಣ್ಣಿಮೆಯಂದು ಉಪೋಸಥ ಆಚರಿಸುತ್ತಿದ್ದ ಭಿಕ್ಷುಗಳಲ್ಲಿ ಮಹಾತಿಸ್ಸ ಥೇರರು ಒಬ್ಬರಾಗಿದ್ದರು. ಅವರು ಭಿಕ್ಷು ಸಂಘವನ್ನುದ್ದೇಶಿಸಿ ಹೀಗೆ ಹೇಳಿದರು: ಭಿಕ್ಷುಗಳೇ, ಇಲ್ಲಿಯತನಕ ನೀವು ನಿಬ್ಬಾಣವನ್ನು ಯಾವ ಭಂಗಿಯಲ್ಲಿ ಸಾಧಿಸಿರುವುದನ್ನು ಕಂಡಿದ್ದೀರಿ?
ನಾವು ಕುಳಿತು ಪದ್ಮಾಸನದಲ್ಲಿ ನಿಬ್ಬಾಣ ಗಳಿಸಿರುವುದನ್ನು ಕಂಡಿರುವೆವು. ಆಕಾಶದಲ್ಲಿ ಪದ್ಮಾಸೀನರಾಗಿ ನಿಬ್ಬಾಣ ಗಳಿಸಿರುವುದನ್ನು ಕಂಡಿರುವೆವು.
ಆಗ ಥೇರರು ಚಂದಿರನ ಬೆಳಕು ನೋಡುತ್ತಾ, ತಮ್ಮ ಆಯುವನ್ನು ಲೆಕ್ಕಹಾಕಿ ಹೀಗೆ ಹೇಳಿದರು: ನಾನು ನಿಮಗೆ ಈಗ ನಡೆಯುತ್ತಲೇ ನಿಬ್ಬಾಣ ಪ್ರಾಪ್ತಿಮಾಡುವುದನ್ನು ತೋರಿಸುತ್ತೇನೆ. ನಂತರ ಅವರು ಹೀಗೆ ಹೇಳಿದರು: ನಾನು ಈ ತುದಿಯಿಂದ ಆ ತುದಿಯವರೆಗೆ ನಡೆದು ಪುನಃ ಈ ತುದಿಗೆ ತಲುಪುವಷ್ಟರಲ್ಲಿ ನಿಬ್ಬಾಣ ಪ್ರಾಪ್ತಿಮಾಡುವೆನು. ನಂತರ ಹಾಗೆಯೇ ನಿಬ್ಬಾಣ ಸಾಧಿಸಿ ತೋರಿಸಿದರು.
ಹೀಗಾಗಿ ಯಾರು ಪ್ರಾಜ್ಞನೋ, ತನ್ನ ದಿನಗಳನ್ನು ಅವಿಶ್ರಾಂತವಾಗಿ ಅನಾಪಾನಾಸತಿಯಲ್ಲಿ ನಿಷ್ಠೆಗೊಳಿಸಲಿ, ಪ್ರತಿಯಾಗಿ ಹಲವು ವಿಧದ ಲಾಭಗಳನ್ನು ಗಳಿಸಲಿ.
ಈ ಅಧ್ಯಾಯವು ಅನಾಪಾನಾಸತಿಯ ಬಗ್ಗೆ ವಿವರವಾಗಿ ನಿರ್ವಹಿಸಿ ಮುಗಿಯಿತು.
*********************************************************************************

10. ಉಪಸಮಾನುಸ್ಸತಿ

ಒಂದೇ ಒಂದು ಚಿಂತನೆ, ಓ ಭಿಕ್ಷುಗಳೇ ಅಭಿವೃದ್ಧಿಗೊಳಿಸಿದರೆ, ನಿರಂತರ ಸಾಧಿಸಿದರೆ ಈ ಜಗದಿಂದ ವಿಮುಖಗೊಳಿಸುತ್ತದೆ. ವಿರಾಗವುಂಟುಮಾಡುತ್ತದೆ. ನಿರೋಧ ಉಂಟುಮಾಡುತ್ತದೆ. ಶಾಂತಿಯನ್ನು, ಧ್ಯಾನವನ್ನು, ಸಂಬೋಧಿಯನ್ನು ಮತ್ತು ನಿಬ್ಬಾಣವನ್ನು ನೀಡುತ್ತದೆ ಮತ್ತು ಯಾವುದದು ಆ ಚಿಂತನೆ? ಅದೇ ಉಪಸಮಾನುಸ್ಸತಿ (ಅಥವಾ ನಿಬ್ಬಾಣದ) ಚಿಂತನೆಯಾಗಿದೆ.
ಈ ಉಪಸಮಾನುಸ್ಸತಿಯು ಬುದ್ಧಿವಂತರಿಗೆ ನೀಡುವ ಧ್ಯಾನ ವಿಷಯವಾಗಿದೆ. ಏಕೆಂದರೆ ಇದು ಪರರಿಂದ ಮಾಡಲು ಅಸಾಧ್ಯವಾಗಿದೆ. ಇದಕ್ಕೆ ತೀಷ್ಣ ಗ್ರಹಿಕೆ, ಅರಿವು ಬೇಕಾಗಿದೆ. ಆಳವಾದ ಧಮ್ಮಬ್ಯಾಸ ಬೇಕು ಇಲ್ಲದಿದ್ದರೆ ಮಿಥ್ಯಾಗ್ರಹಿಕೆಗಳು ಉಂಟಾಗುವ ಸಾಧ್ಯತೆ ಹೇರಳವಾಗಿರುತ್ತದೆ.
ಒಂದು ಮಾತು ಗಮನದಲ್ಲಿಡಿ, ಇದು ನಿಬ್ಬಾಣದ ಕುರಿತು ಚಿಂತನೆಯೆ ಹೊರತು ನಿಬ್ಬಾಣದ ಸಾಕ್ಷಾತ್ಕಾರವಲ್ಲ. ಇದರಿಂದ ನವು ಸಾಧಕ ಕೇವಲ ಉಪಚಾರ ಸಮಾಧಿ ಪಡೆಯುತ್ತಾನೆ. ಅದು ಪ್ರಥಮ ಸಮಾಧಿಗಿಂತ ಕಡಿಮೆಯಾಗಿದೆ.
ಇಲ್ಲಿ ಸಾಧಕನು ತೊಂದರೆ ಉಂಟಾಗದಂತಹ ವಿರುದ್ಧ, ನಿರ್ಜನ ವಾತಾವರಣದಲ್ಲಿ ಪದ್ಮಾಸನದಲ್ಲಿ ಕುಳಿತು ಅಕುಶಲ ಯೋಚನೆಗಳನ್ನು ದೂರೀಕರಿಸುತ್ತಾನೆ. ತನ್ನ ಶರೀರ ಮತ್ತು ಮನವನ್ನು ಶಾಂತಗೊಳಿಸುತ್ತಾನೆ. ಪ್ರಶಾಂತತೆಯನ್ನು ಅನುಭವಿಸುತ್ತಾ ಆತನು ನಿಬ್ಬಾಣವನ್ನು ಕುರಿತು ಈ ರೀತಿ ಚಿಂತನೆ ಮಾಡುತ್ತಾನೆ.
ಓ ಇಲ್ಲಿ ಭಿಕ್ಷುವೊಬ್ಬ, ಶೀಲವಂತನಾಗಿ, ಸಂಯಮಿಯಾಗಿ, ಜಾಗರೂಕನಾಗಿ ಪಂಚನಿವಾರಣಗಳನ್ನು ತ್ಯಜಿಸದವನಾಗಿ, ಪ್ರಥಮ ಸಮಾಧಿ ಪಡೆಯುತ್ತಾನೆ. ಹಾಗೆಯೇ ಚತುರ್ಥ ಸಮಾಧಿ... ನೇವಸನ್ನನಸನ್ಯಾಯಾತನವನ್ನು ಆಯತನ ಪಡೆಯುತ್ತಾನೆ. ನಂತರ ಸೋತಪನ್ನನಾಗಿ ಹಾಗೆಯೇ ಅರಹಂತರಾದಾಗ ಅವರು ನಿಬ್ಬಾಣ ಪ್ರಾಪ್ತಿ ಮಾಡುವರು. ಅವರು ಎಲ್ಲದರ ಅಂತ್ಯ ಮಾಡುವರು. ಲೋಭ, ದ್ವೇಷ, ಮೋಹಗಳ ಹಾಗು ಜನ್ಮ ಮರಣಗಳಿಂದ ಮುಕ್ತರಾಗುವರು. ಅಹಂ ಮತ್ತು ಅಸ್ತಿತ್ವಗಳಿಂದ ಮುಕ್ತರಾಗುವರು ಆ ನಿಬ್ಬಾಣ ಹೇಗಿರುತ್ತದೆ?
ಅದು ಯಾವುದರಿಂದಲೂ ರಚಿತವಾಗದಂತಹುದು....ಅನಂತ...ಮುಕ್ತ... ಸತ್ಯ... ಪಾರ.... ಗ್ರಹಿಕೆಗೆ ಮೀರಿದ್ದು... ಅಜರ, ಅಮರ... ದುಃಖರಹಿತ... ನಿತ್ಯ... ದಾತುಗಳಿಗೆ ಅತೀತ... ಶಾಂತ.... ಅತ್ಯುನ್ನತ....ಶುಭಕರ... ಭವನಿರೋಧ... ಕ್ಷೇಮಕರ... ಅದ್ಭುತವಾದುದು.... ದುಃಖರಹಿತವಾದುದು... ಶರಣೋತ್ತಮ... ಅಂಟದೆ ಇಂರುವಂತಹ...ಅಂತಿಮ ಸ್ಥಿತಿ... ತೃಷ್ಣಾಕ್ಷಯಸ್ಥಿತಿ, ನಿರೋಧ... ನಿಬ್ಬಾಣ ಆಗಿರುತ್ತದೆ.
ನಿಬ್ಬಾಣವು... ಯಾವುದರಿಂದಲೂ ರಚಿತವಾಗಿರುವುದಿಲ್ಲ (ದೇಹ, ಮನಸ್ಸು ಮತ್ತು ಜಗತ್ತು) ಮರೆಯಾಗುವಂತಹುದ್ದಾಗಿದೆ. ಅಂದರೆ ಲೋಭ, ದ್ವೇಷ, ಮೋಹ, ಅಹಂ ಸರ್ವದರಿಂದ ಮರೆಯಾಗುತ್ತದೆ. ಸರ್ವಲೋಕಗಳಿಂದ ಮುಕ್ತಿ ಪಡೆಯುವಂತಹದ್ದಾಗಿದೆ. ತೃಷ್ಣೆಯಿಂದ ಮುಕ್ತಿ ಪಡೆಯುವಂತಹದ್ದಾಗಿದೆ. ಇದು ಆರಿ ಹೋಗುವಿಕೆಯಾಗಿದೆ.
ಭಗವಾನರ ನುಡಿಯಿಂದ ಕೇಳುವುದಾದರೆ :
ಭಿಕ್ಷುಗಳೇ, ಯಾವುದರಿಂದಲೂ ರಚಿತವಾದ, ಯಾವುದರಿಂದಲೂ ಕೂಡಿರದ, ಸತ್ಯ... ಆಚೆಯ ದಡ... ಅರಿಯಲು ಕಠಿಣವಾದ... ಮುಪ್ಪಿರದ... ನಿತ್ಯ... ಅಮರವಾದುದು... ಶುಭವಾದದ್ದು... ಪರಮ ಕ್ಷೇಮಕರವಾದುದು... ಅದ್ಭುತವಾದುದು... ಪರಿಶುದ್ಧವಾದುದು... ಪರಿಪೂರ್ಣವಾದುದು... ಅದೇ ನಿಬ್ಬಾಣ.
ಹೀಗೆ ಆತನು ಚಿಂತಿಸುತ್ತಿರುವಾಗ ನಿಬ್ಬಾಣ ಪ್ರಾಪ್ತಿಗೆ ಸ್ಫೂತರ್ಿ ಪಡೆಯುತ್ತಾನೆ, ಆನಂದಿತನಾಗುತ್ತಾನೆ. ಏಕಾಗ್ರತೆ ಹೊಂದುತ್ತಾನೆ. ಪಂಚನಿವರಣಗಳಿಂದ ದೂರವಾಗುತ್ತಾನೆ. ಉಪಚರ ಸಮಾಧಿ ಪಡೆಯುತ್ತಾನೆ.

ಉಪಶಮನುಸ್ಸತಿಯ ಲಾಭಗಳು :

1. ಆತನು ಶಾಂತವಾಗಿ ನಿದ್ರಿಸುತ್ತಾನೆ ಮತ್ತು ಶಾಂತವಾಗಿ ಏಳುತ್ತಾನೆ.
2. ಆತನ ಸವರ್ೆಂದ್ರಿಯಗಳು ಶಾಂತವಾಗಿರುತ್ತದೆ.
3. ಶ್ರದ್ಧೆಯಿಂದ ಕೂಡಿರುತ್ತಾನೆ ಹಾಗು ಶೀಲವಂತನಾಗಿರುತ್ತಾನೆ.
4. ಶ್ರೇಷ್ಠತ್ವ ಪ್ರಾಪ್ತಿಗೆ ದೃಢಸಂಕಲ್ಪಿತನಾಗಿ ಸಾಧನೆ ಮಾಡುತ್ತಾನೆ.
5. ಸುಗತಿ ಪ್ರಾಪ್ತಿ ಮಾಡುತ್ತಾನೆ.
ಏಕಾಂತತೆಯಲ್ಲಿರುವ ಸವಿರಸವನ್ನು ಮತ್ತು ಉಪಸಮದ ಶಾಂತಿರಸ ಕುಡಿದವನು, ಧಮ್ಮ ಸುಖದ ರಸವನ್ನು ಸೇವಿಸುವವನು ನಿಶ್ಪಾಪಿಯು ಮತ್ತು ಅದುಃಖಿಯು ಆಗುವನು.
ಹೀಗಾಗಿ ಪ್ರಾಜ್ಞನು ತನ್ನ ದಿನಗಳನ್ನು ಅವಿಶ್ರಾಂತವಾಗಿ ಅತ್ಯುನ್ನತ ಶಾಂತಿಯಲ್ಲಿ ನೆಲೆಸಿರಲಿ, ಅದರಲ್ಲೇ ನಿಷ್ಠನಾಗಿರಲಿ, ಅದರಿಂದಾಗಿ ದೊರಕುವ ಲಾಭಗಳನ್ನು ಗಳಿಸಲಿ.
ಇಲ್ಲಿ ಉಪಸಮಾನುಸ್ಸತಿ ಮುಗಿಯಿತು.

ಸಜ್ಜನರ ಆನಂದಕ್ಕಾಗಿ ರಚಿಸಲ್ಪಟ್ಟ ವಿಶುದ್ಧಿಮಾರ್ಗದ ಸಮಾಧಿಯ ಭಾಗದ ಎಂಟನೆಯ ಅಧ್ಯಾಯವಾದ ಅನುಸ್ಸತಿ ಕಮ್ಮಟ್ಠನ ನಿದ್ದೆಸ ಮುಗಿಯಿತು