Friday 13 April 2018

visuddhi magga ವಿಶುದ್ಧಿ ಮಗ್ಗದ, ಸಮಾಧಿ ಭಾಗದ ಅಧ್ಯಾಯ 10 ಅರೂಪ ನಿದ್ದೇಸ

ಅಧ್ಯಾಯ 10ಅರೂಪ ನಿದ್ದೇಸ1. ಆಕಾಶನಂಚಾಯತನ


ಈ ನಾಲ್ಕು ಅರೂಪ ಧ್ಯಾನಗಳು ನಾಲ್ಕು ಬ್ರಹ್ಮವಿಹಾರದ ನಂತರ ಬರುವುವು. ಯಾರು ನಾಲ್ಕು ಅರೂಪಗಳನ್ನು ಸಿದ್ಧಿಸಬೇಕೆಂದು ಇರುವನೋ ಆತನು ಭೌತಿಕ ಜಗತ್ತಿನಿಂದ ವಿರಕ್ತನಾಗಿರುತ್ತಾನೆ. ಈ ಘನ ಭೌತಿಕ ಜಗತ್ತಿನ ಕಾರಣದಿಂದಲೇ ಈ ಜಗಳಗಳು, ಹೊಡೆದಾಟಗಳು, ಯುದ್ಧಗಳು, ವಿವಾದಗಳು, ರೋಗಗಳು ಇವೆಲ್ಲವೂ ಸಂಭವಿಸುವುವು. ಈ ಭೌತಿಕತೆ ಇಲ್ಲದಿದ್ದರೆ ಇವ್ಯಾವುದೂ ಇರಲಾರದು. ಆದ್ದರಿಂದಾಗಿ ಅರೂಪ ಸ್ಥಿತಿಯಲ್ಲಿ ಇಂತಹದು ಯಾವುದು ಇಲ್ಲದ ಕಾರಣ ಅದು ಶ್ರೇಷ್ಠವೇ ಆಗಿರುತ್ತದೆ ಎಂದು ಸ್ಪಷ್ಟವಾಗಿ ಚಿಂತನೆ ಮಾಡುತ್ತಾ ಆತನು ಎಲ್ಲಾ ಭೌತಿಕತೆಯ ರೂಪಗಳಿಂದ ವಿರಕ್ತನಾಗುತ್ತಾನೆ, ವಿರಾಗನಾಗುತ್ತಾನೆ. ಪರಿಮಿತ ಆಕಾಶವನ್ನು ಬಿಟ್ಟು ಉಳಿದ ರೀತಿಯ ಯಾವುದೇ ಕಸಿಣಾ ಧ್ಯಾನದಲ್ಲಿ ಚತುರ್ಥ ಧ್ಯಾನ ಪ್ರಾಪ್ತಿ ಮಾಡುತ್ತಾನೆ. 
ಆತನು ಬೌತಿಕತೆಯನ್ನು ಚತುರ್ಥ ಧ್ಯಾನದಲ್ಲಿ ಅತಿಕ್ರಮಿಸಿದ್ದರೂ, ಕಸಿಣಾದ ಸೂಕ್ಷ್ಮ ಭೌತಿಕತೆಯನ್ನು ಸಹಾ ಮೀರಲು ನಿಶ್ಚಯಿಸುತ್ತಾನೆ. ಭಿಕ್ಷುವಿಗೆ ಕಸಿಣಾದ ಪತಿಭಾಗವೂ ಸಹ ರೂಪವಾಗಿ (ಭೌತಿಕವಾಗಿ) ಗೋಚರಿಸಿ, ಆತನು ಕಸಿಣಾದ ಭೌತಿಕತೆಯಿಂದಲೂ ಸಹಾ ವಿರಕ್ತ ವಿರಾಗವುಳ್ಳವನಾಗಿ, ಆತನು ಚತುರ್ಥ ಧ್ಯಾನದಲ್ಲಿ ಈಗಾಗಲೇ ಐದು ವಿಧಗಳಿಂದಾಗಿ ಪ್ರಾವಿಣ್ಯತೆ ಗಳಿಸಿರುತ್ತಾನೆ. ಝಾನಗಳ ಅಪಾಯ ಈ ರೀತಿ ಗ್ರಹಿಸುತ್ತಾನೆ. ಇದರಿಂದಾಗಿ ನಾನು ವಿಕಷರ್ಿಸುತ್ತಿರುವ ಭೌತಿಕತೆಯೇ ದೊರಕುವುದು, ಇದಕ್ಕೆ ಆನಂದವೇ ಸನಿಹ ಶತ್ರುವಾಗಿದೆ. ಶಾಂತ ಸ್ಥಿತಿಗಳಿಗೆ ಹೋಲಿಸಿದರೆ, ಇವು ಸಹಾ ಸ್ಥೂಲವಾಗಿಯೇ ಇವೆ. ಆದರೂ ಸಹಾ ಎರಡುರೀತಿಯ ಝಾನಗಳಿಗೂ ಎರಡು ಝಾನಂಗಗಳು ಒಂದೇ ಆಗಿವೆ. ಅವೆಂದರೆ ಉಪೇಕ್ಖಾ ಹಾಗು ಏಕಾಗ್ಗತಾ.
ಹೀಗೆ ರೂಪ ಝಾನದಲ್ಲಿ ಅಪಾಯ ಕಾಣುತ್ತಾ ಅದರಿಂದ ಅಂಟುವಿಕೆ ಕಳಚುತ್ತಾ ಆತನು ಅನಂತವಾದ ಆಕಾಶದ ಆಧಾರದಲ್ಲಿ ಗಮನ ನೀಡಿದಾಗ ಅವು ಶಾಂತವಾಗಿ ಕಾಣುತ್ತದೆ. ಹೀಗೆಯೇ ಅನಂತ ಆಕಾಶದತ್ತ ವಾಲುತ್ತಾ ರೂಪ ಝಾನದಿಂದ ಮುಕ್ತನಾಗುತ್ತಾನೆ. ಅಂತಹ ಸ್ಥಿತಿಗೆ ಆಕಾಶ ಸ್ಪಶರ್ಿತ ಕಸಿಣಾವೆಂತಲೂ ಅಥವಾ ಕಸಿಣಾದಿಂದ ಮುಕ್ತವಾದ ಆಕಾಶವೆಂತಲೂ ಕರೆಯುತ್ತಾರೆ. ಇವೆರಡೂ ಒಂದೇ ಆಗಿವೆ.
ನಂತರ ನಿರಂತರವಾದ ಆಕಾಶ ಗಮನಿಸುವಿಕೆಯಿಂದಾಗಿ ನಿವರಣಗಳು ದಮನವಾಗಿ, ಸ್ಮೃತಿಯು ಸ್ಥಾಪಿತವಾಗಿ ಆಳವಾದ ಅರೂಪ ಸಮಾಧಿಯು ದೊರೆಯುತ್ತದೆ.
ಇಲ್ಲೊಂದು ವ್ಯತ್ಯಾಸವಿರುವುದು. ಅರೂಪ ಚಿತ್ತವು ಸ್ಥಾಪಿಸುವಾಗ, ಭಿಕ್ಷುವು ಹಿಂದಿನ ಕಸಿಣ ಮಂಡಲವನ್ನು ನೆನಪಿಗೆ ತಂದುಕೊಂಡು ಪಾಲನೆ ಮಾಡುತ್ತಾನೆ. ಆಗ ಆತನಿಗೆ ಆಕಾಶಕ್ಕೆ ಅಡ್ಡಿಯಾಗಿದ್ದ ರೇಷ್ಮೆಯ ವಸ್ತ್ರದಂತೆ ಹಿಂದಿನ ಝಾನವು ಕಾಣಿಸುವುದು.
ಭಗವಾನರು ಪ್ರಥಮ ಝಾನಕ್ಕೆ ಶಬ್ದವೇ ಮುಳ್ಳು ಎಂದಿದ್ದಾರೆ. ಆದರೆ ಅರೂಪ ಸಮಾಧಿಗಳು ಸಕಲ ಇಂದ್ರಿಯಗಳ ವಿಷಯಗಳಿಂದ ಅತೀತವಾಗಿರುತ್ತದೆ.
ಉದಾಹರಣೆಗೆ ಒಮ್ಮೆ ಸಿದ್ಧಾರ್ಥ ಗೌತಮರ ಗುರುಗಳಾಗಿದ್ದಂತಹ ಆಲಾರಕಲಾಮರು ಧ್ಯಾನಸ್ಥರಾಗಿದ್ದಾಗ ಅವರ ಮುಂದೆಯೇ 500 ಎತ್ತಿನ ಬಂಡಿಗಳು ಹಾದುಹೋದರೂ ಅವರಿಗೆ ಆ ದೃಶ್ಯಗಳಾಗಲಿ ಅಥವಾ ಆ ಶಬ್ದಗಳಾಗಲೀ ಯಾವುದೂ ಕೇಳಿಸಲಿಲ್ಲ. ಇದು ಅರೂಪ ಝಾನಗಳ ಪ್ರಾಬಲ್ಯತೆಗೆ ಸಾಕ್ಷಿಯಾಗಿದೆ. ಈ ಸ್ಥಿತಿಗಳಲ್ಲಿ ಆತನು ನಾಲ್ಕು ಬಗೆಯ ಗ್ರಹಿಕೆಗಳಿಂದ (8 ಬಗೆಯ ಇಂದ್ರಿಯ ಗ್ರಹಿಕೆ ಮತ್ತು ಅಕುಶಲ ಗ್ರಹಿಕೆಗಳಿಂದ 11 ಬಗೆಯ ಕುಶಲ ವಿಪಾಕದ, 2 ಬಗೆಯ ಅಕುಶಲ ವಿಪಾಕದ ಮತ್ತು 11 ಬಗೆಯ ಕ್ರಿಯಾ ಗ್ರಹಿಕೆಗಳಿಂದ) ಮುಕ್ತನಾಗಿರುತ್ತಾನೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ಭೌತಿಕತೆಯ ಸಂಜ್ಞೆಗಳನ್ನು ದಾಟುತ್ತಾ ರೂಪ ಕ್ಷೇತ್ರವನ್ನು ತ್ಯಜಿಸುತ್ತಾ, ಎಲ್ಲಾಬಗೆಯ ಇಂದ್ರೀಯ ಕ್ಷೇತ್ರದ ಚಿತ್ತಗಳ ಬಗ್ಗೆ ಯಾವುದೇ ಗಮನ ನೀಡದೆ, ಗ್ರಹಿಕೆಗಳ ಇಲ್ಲದಿರುವಿಕೆಯಾಗಿರುತ್ತದೆ.  ಅನಂತ ಆಕಾಶವೆಂದು ಏತಕ್ಕೆ ಹೇಳುತ್ತೇವೆ ಎಂದರೆ ಅದಕ್ಕೆ ಆದಿಯಾಗಲಿ, ಅಂತ್ಯವಾಗಲಿ ಇಲ್ಲದಿರುವುದರಿಂದಾಗಿ. ಗಡಿಯಿಲ್ಲದಿರುವಿಕೆಯಿಂದಾಗಿ ಆಕಾಶಕ್ಕೆ ಅನಂತ ಆಕಾಶವೆಂದು ಹೇಳುತ್ತಾರೆ. ಇಂತಹ ಧ್ಯಾನ ವಿಷಯದಲ್ಲಿ ಧ್ಯಾನಿಯ ಚಿತ್ತವು ನೆಲೆಸುತ್ತದೆ, ವಿಹರಿಸುತ್ತದೆ, ಹಾಗೆಯೇ ಅನಂತವಾಗಿ ಚಿತ್ತವನ್ನು ಪ್ರಸರಿಸಿ ವಿಕಾಸಿಸುವುದರಿಂದಾಗಿ ಹಾಗು ಪ್ರವೇಶಿಸಿ ವಿಹರಿಸಿ ಅನಂತ ಆಕಾಶದ ಆಧಾರದಲ್ಲೇ ನೆಲೆಸಿರುವುದರಿಂದಾಗಿ ಇದಕ್ಕೆ ಆಕಾಶನಂಚಾಯತನ ಎನ್ನುತ್ತಾರೆ.
ಆಕಾಶನಂಚಾಯತನ :
ಇಲ್ಲಿ ಸಾಧಕನು 9 ಕಸಿನಾಗಳು ಪರಿಮಿತ ಆಕಾಶದ ಹೊರತು ಚತುರ್ಥ ಧ್ಯಾನ ಪ್ರಾಪ್ತಿ ಮಾಡಿದ ನಂತರ ಅಥವಾ ಅನಾಪಾನಾಸತಿಯಲ್ಲಿ ಚತುರ್ಥ ಧ್ಯಾನ ಪ್ರಾಪ್ತಿ ಮಾಡಿದ ನಂತರ ಅಥವಾ ಬ್ರಹ್ಮ ವಿಹಾರದ ಉಪೇಖ್ಖಾ ಧ್ಯಾನದ ಪ್ರಾಪ್ತಿಯ ನಂತರ 5 ವಿಧದಲ್ಲಿ ಧ್ಯಾನ ಪ್ರವೀಣನಾಗುತ್ತಾನೆ. (ಅಂದರೆ ಲಕ್ಷ ನೀಡುವಿಕೆ, ಪ್ರವೇಶ ಮಾಡುವಿಕೆ, ಸ್ಥಿರವಾಗಿ ನೆಲೆಸುವಿಕೆ, ಕ್ಷಿಪ್ರವಾಗಿ ಹೊರಬರುವಿಕೆ ಮತ್ತು ಪುನರ್ ಅವಲೋಕನ ಮಾಡುವಿಕೆ) ನಂತರ ಆತನಿಗೆ ರೂಪ ಝಾನವು ಸ್ಥೂಲವಾಗಿ ಕಂಡುಬರುತ್ತದೆ. ಆತನು ಅದನ್ನು ದಾಟಲು ಇಚ್ಛಿಸುತ್ತಾನೆ. ಆತನಿಗೆ ರೂಪ ಝಾನವು ಸ್ಥೂಲವಾಗಿ ಕಂಡುಬರುತ್ತದೆ. ಆತನು ಅದನ್ನು ದಾಟಲು ಇಚ್ಛಿಸುತ್ತಾನೆ. ಆತನಿಗೆ ಈ ರೀತಿಯ ಅರಿವು ಬರುತ್ತದೆ ಈ ದೇಹದಿಂದಲೇ (ರೂಪದಿಂದಲೇ) ನಾನಾರೀತಿಯ ಹೋರಾಟಗಳು, ವಿವಾದಗಳು, ಪಾಪಗಳು ಉಂಟಾಗುತ್ತವೆ. ರೂಪವಿಲ್ಲದಿದ್ದರೆ ಇದ್ಯಾವುದು ಇರುವುದಿಲ್ಲ.
ದೇಹವಿದ್ದರೆ ನಾನಾ ರೊಗಗಳು, ಮುಪ್ಪು, ಮರಣಗಳಿಗೆ ಸಿಲುಕುತ್ತಲೆ ಇರಬೇಕಾಗುತ್ತದೆ. ಶೀತೋಷ್ಣ, ಹಸಿವು, ಬಾಯಾರಿಕೆ ಇತ್ಯಾದಿ ತೊಂದರೆ ಇದ್ದೇ ಇರುತ್ತದೆ. ಆದರೆ ರೂಪದ ಗ್ರಹಿಕೆಗಳನ್ನು ಮೀರಿದಾಗ, ಆತನಿಗೆ ಇನ್ನಾವುದು ತೊಂದರೆ ಇರುವುದಿಲ್ಲ ಎಂದು ಚಿಂತಿಸುತ್ತಾ ಆತನು ದೇಹತೀತ ಧ್ಯಾನವಾದ ಹಾಗು ರೂಪ ಶಬ್ದ, ವಾಸನೆ, ರುಚಿ ಮತ್ತು ಸ್ಪರ್ಶಗಳಿಗೆ ಅತೀತವಾದ ಅರೂಪ ಝಾನ ಮಾಡಲು ನಿರ್ಧರಿಸುತ್ತಾನೆ. ಮೊದಲನೆಯ ಸಮಾಧಿಯಲ್ಲಿ ಶಬ್ದವು ನಿಲ್ಲುತ್ತದೆ, ನಾಲ್ಕನೆಯ ಸಮಾದಿಯಲ್ಲಿ ಉಸಿರಾಟ ನಿಲ್ಲುತ್ತದೆ. ಆದರ ಅರೂಪ ಝಾನದಲ್ಲಂತು ಎಲ್ಲಾ ವಿಧವಾದ ರೂಪ ಮೀರಿ ರೂಪತೀತ (ದೇಹತೀತ ಮತ್ತು ಇಂದ್ರಿಯಾತೀತ) ಕ್ಷೇತ್ರಕ್ಕೆ ಹೋಗುತ್ತಾನೆ.
ಇಂದ್ರಿಯ ವಲಯದ ಮಾನವ ಪ್ರಥಮ ಸಮಾಧಿಗೆ ಹೊರಟಾಗ ಆತನು ರೂಪ ಧ್ಯಾನದ ಬ್ರಹ್ಮಾ ವಲಯದಲ್ಲಿ ಪ್ರವೇಶಿಸುತ್ತಾನೆ. ಈಗ ಆತನು ಆ ರೂಪವಲಯವನ್ನು ದಾಟಿ ಅರೂಪ ವಲಯಕ್ಕೆ ಪ್ರವೇಶಿಸುತ್ತಾನೆ. ಈ ಸ್ಥಿತಿಯಲ್ಲಿರುವವರು ದೇಹದ ಎಲ್ಲಾ ವಿಧವಾದ ಸಂಪರ್ಕ ಕಡಿದುಕೊಳ್ಳುತ್ತಾರೆ. ಹೇಗೆ ಸರ್ಪಕ್ಕೆ ಭಯಪಡುವ ಮನುಷ್ಯ ಹಗ್ಗವನ್ನು ಕಂಡು ಬೆಚ್ಚಿಬಿದ್ದು ಅಲ್ಲಿಂದ ವಿಮುಖವಾಗುವಂತೆ ಆತನು ಚತುರ್ಥ ಧ್ಯಾನದಿಂದ ಮೀರಿಹೋಗಲು ಇಚ್ಛಿಸುತ್ತಾನೆ.
ಆತನು 4ನೆಯ ಧ್ಯಾನದ ಪುನರ್ ಅವಲೋಕನ ಮಾಡಿದಾಗ ಆತನಿಗೆ ಚತುರ್ಥ ಧ್ಯಾನವು ಸ್ಥೂಲವಾಗಿ ಕಂಡುಬರುತ್ತದೆ. ಹಾಗೂ ಆಕಾಶದ ಅನಂತತೆಯು ಸೂಕ್ಷ್ಮವಾಗಿ, ಶಾಂತಿಯಾಗಿ ಕಂಡುಬರುತ್ತದೆ. ಆಗ ಆತನು ರೂಪದ ಚಿಹ್ನೆ (ರೂಪನಮಿತ್ತಗಳಿಂದ) ಹೊರಬರಲು ಯತ್ನಿಸುತ್ತಾನೆ. ಚತುರ್ಥ ಸಮಾಧಿಯಲ್ಲಿ ಗಮನ ನೀಡದೆ ಆಕಾಶದಲ್ಲಿ ಗಮನ ನೀಡಿದ್ದರಿಂದಾಗಿ ಆತನು ಝಾನ ಸಾಧಿಸುತ್ತಾನೆ ಅಥವಾ ರೂಪಚಿಹ್ನೆಗಳೆಲ್ಲವೂ ಮೀರಿ ಬರಿದು ಮಾಡಿದ್ದರಿಂದಾಗಿ ಆಕಾಶವು ಉಳಿಯುತ್ತದೆ. ಮತ್ತೆ ಮತ್ತೆ ಪ್ರಯತ್ನಿಸಿದ್ದರಿಂದ ಸ್ಮೃತಿಯು ಮನವು ಏಕಾಗ್ರವಾಗಿ ಅರೂಪ ಝಾನವು ಸ್ಥಾಪಿಸಲ್ಪಡುತ್ತದೆ.
ರೂಪಚಿಹ್ನೆಗಳನ್ನು (ನಿಮಿತ್ತಗಳನ್ನು) ಪೂರ್ಣವಾಗಿ ಬರಿದು ಮಾಡಿ ಆಕಾಶ ಸಾದಿಸಿ, ಅಥವಾ ಆಕಾಶವನ್ನು ಸ್ಥಾಪಿಸಿ ರೂಪನಿಮತ್ತಗಳನ್ನು ಮೀರಿ, ಆತನು ಆಕಾಶ ಅನಂತ ಆಯಾತನ ಸ್ಥಿತಿ ಪ್ರವೇಶಿಸುತ್ತಾನೆ. (ಆಗ ಆತನಲ್ಲಿ ರೂಪದ ಗ್ರಹಿಕೆಗಳು ಮಾತ್ರವಲ್ಲ, ರೂಪದ ಸಂಖಾರಗಳು, ರೂಪದ ವೇದನೆಗಳು ಹಾಗು ರೂಪದ ವಿನ್ಯಾಸವು ಸಹಾ ಅಳಿಯುತ್ತದೆ). ಕೇವಲ ಅರೂಪ ಗ್ರಹಿಕೆ ಸ್ಥಾಪಿತವಾಗುತ್ತದೆ. ಕಸಿನಾದಿಂದ ಅರೂಪ ಸಾಧಿಸುವಾಗ ಆತನು ಎಲ್ಲಾ ಮಹಾಭೂತಗಳ ಅಥವಾ ಎಲ್ಲಾ ವರ್ಣಗಳ ನಿಮಿತ್ತಗಳನ್ನು ಮೀರುತ್ತಾನೆ. ಬ್ರಹ್ಮವಿಹಾರದಿಂದ ಅರೂಪ ಸಾಧಿಸುವಾಗ ಎಲ್ಲಾ ವ್ಯಕ್ತಿಗಳ ನಿಮಿತ್ತವನ್ನು ಮೀರುತ್ತಾನೆ. ಅನಾಪಾಸತಿಯಿಂದ ಅರೂಪ ಸಾಧಿಸುವಾಗ ಆತನು ದೇಹದ ಸ್ಪರ್ಶಗಳನ್ನು, ನಿಮಿತ್ತಗಳನ್ನು ಮೀರುತ್ತಾನೆ. ಹಾಗು ಉಳಿದಿರುವ ಆಕಾಶ (ಶೂನ್ಯತೆ), ಆತನು ತನ್ನ ಚಿತ್ತವನ್ನು ಆ ಅಕಾಶದಲ್ಲಿ ನೆಲೆಸಿ, ಅದನ್ನು ಅನಂತವಾಗಿ ಹರಡಿಸುತ್ತಾನೆ (ಪ್ರಸರಿಸುತ್ತಾನೆ). ಆತನು ಈ ರೀತಿಯ ಅನಂತ ಆಕಾಶದ ಸ್ಥಿತಿಯಲ್ಲಿ ವಿಹರಿಸುತ್ತಾನೆ. ಆಯಾತನ ಎಂದರೆ ಆಧಾರ ಎಂದರ್ಥ. ಒಟ್ಟಾರೆ ಹೇಳುವುದಾದರೆ ಆನಂತ ಆಕಾಶದ ಆಧಾರದಲ್ಲಿ ವಿಹರಿಸುತ್ತಾನೆ ಎಂದರ್ಥ. ಆದ್ದರಿಂದ ಈ ಸ್ಥಿತಿಗೆ ಆಕಾಶ ಅನಂತ ಆಯಾತನ ಎನ್ನುತ್ತಾರೆ ಅಥವಾ ಆಕಾಶನಂಚಾಯತನ ಎನ್ನುತ್ತಾರೆ. ಈ ರೀತಿಯಾಗಿ ಆತನು ಆಕಾಶ ಅನಂತ ಆಯಾತನ ಝಾನದಲ್ಲಿ ವಿಹರಿಸುತ್ತಾನೆ.

2. ವಿನ್ಯಾನಂಚಯಾತನ 


ಆಕಾಶ ಸಂಚಾಯತನದ ಧ್ಯಾನದಲ್ಲಿ 5 ರೀತಿ ಪ್ರವೀಣ್ಯತೆಯನ್ನು ಗಳಿಸುತ್ತಾನೆ. (ಅಂದರೆ ಲಕ್ಷ ನೀಡುವಿಕೆ, ಕ್ಷಿಪ್ರವಾಗಿ ಪ್ರವೇಶ, ದೀರ್ಘಕಾಲ ನೆಲೆಸುವಿಕೆ, ಕ್ಷಿಪ್ರ ಕಾಲದಲ್ಲಿ ಹೊರಬರುವಿಕೆ ಮತ್ತು ಪುನರ್ ಅವಲೋಕನ ಮಾಡುವಿಕೆ) ಆಗ ಆತನಗೆ ಆಕಾಶನಂಚಾಯಾತನವು ಸ್ಥೂಲವಾಗಿ ಕಂಡುಬರುತ್ತದೆ. ಅದನ್ನು ಮೀರಿದ ಸ್ಥಿತಿಯಾದ ವಿನ್ಯಾನಂಚಯಾನವೇ ಸೂಕ್ಷ್ಮವಾಗಿ, ಶಾಂತವಾಗಿ, ಕಂಡುಬರುತ್ತದೆ. ಆಗ ಆತನು ಆಕಾಶವನ್ನು ಮೀರಲು ಯತ್ನಿಸುತ್ತಾನೆ. ಆಕಾಶದ ನಿಮಿತ್ತಗಳನ್ನು ಮೀರಿದಾಗ ಆತನಲ್ಲಿ ವಿನ್ಯಾಸ (ವಿಞ್ಞಾನ = ಅರಿವು) ಉಳಿಯುತ್ತದೆ. ಅದನ್ನು ಏಕಾಗ್ರತೆಯಿಂದ ಅನಂತವಾಗಿ ಪ್ರಸರಿಸಿದಾಗ ಆಗ ಅದು ವಿನ್ಯಾನ + ಅನಂತ + ಆಯತನ = ವಿನ್ಯಾನಂಚಯಾತನ ಆಗುತ್ತದೆ. ಅಂದರೆ ಆತನು ಇಲ್ಲಿ ಆಕಾಶ ಅನಂತತೆಯನ್ನು ಪೂರ್ಣವಾಗಿ ಮೀರಿಹೋಗಿ ಅನಂತ ವಿನ್ಯಾನವನ್ನು ಸ್ಥಾಪಿಸುತ್ತಾನೆ. ಆತನು ಅದರಲ್ಲಿ ಪ್ರವೇಶಿಸಿ ಅದರಲ್ಲೇ ವಿಹರಿಸುತ್ತಾನೆ.

3. ಅಕಿಂಚಾಯಾತನ :


ನಂತರ ಭಿಕ್ಷುವು ವಿನ್ಯಾನಂಚಯಾತನ ಧ್ಯಾನದಲ್ಲಿ 5 ರೀತಿ ಪ್ರಾವಿಣ್ಯತೆ ಗಳಿಸುತ್ತಾನೆ. ಆಗ ಆತನು ಈ ಧ್ಯಾನವನ್ನು ಪುನರ್ ಅವಲೋಕನ ಮಾಡಿದಾಗ ಆತನಿಗೆ ವಿನ್ಯಾನಂಚಯಾತನವು ಸ್ಥೂಲವಾಗಿ ಕಂಡುಬರುತ್ತದೆ.  ಅದನ್ನು ಮೀರಿದ ಸ್ಥಿತಿಯಾದ ಅಕಿಂಚಾಯಾತನದ (ಶೂನ್ಯ) ಸೂಕ್ಷ್ಮತೆಯ ಸುಳಿವು ಸಿಗುತ್ತದೆ. ಆಗ ಆತನಿಗೆ ಅಕಿಂಚ (ಏನೂ ಇಲ್ಲ) ಆಯಾತನ ಸ್ಥಿತಿಯೇ ಸೂಕ್ಷ್ಮವಾಗಿ ಶಾಂತವಾಗಿ ಕಂಡುಬರುತ್ತದೆ. ಆಗ ಆತನು ವಿನ್ಯಾನಂಚಯಾತನವನ್ನು ಮೀರಲು ನರಂತರ ಯತ್ನಿಸುತ್ತಾನೆ. ವಿನ್ಯಾನದ (ಅರಿವಿನ) ನಿಮಿತ್ತ ಮೀರಿದಾಗ ಆತನಲ್ಲಿ ಏನೂ ಇಲ್ಲವೆಂಬ ಶೂನ್ಯಸ್ಥಿತಿಯು ಉಳಿಯುತ್ತದೆ. ಇದು ಅನಂತ ಅರಿವಿಗಿಂತ ಅಪಾರವಾಗಿ ಸೂಕ್ಷ್ಮತೆಯುಳ್ಳದ್ದು ಹಾಗು ಶ್ರೇಷ್ಠಕರವಾಗಿರುತ್ತದೆ. ಈ ಸ್ಥಿತಿಯು ಅವನಿಗೆ ವಿನ್ಯಾನಂಚಯಾತನವನ್ನು ಪೂರ್ಣವಾಗಿ ಮೀರಿದ್ದರಿಂದಾಗಿ ಏನೂ ಇಲ್ಲದ ಸ್ಥಿತಿಯು ಪ್ರಾಪ್ತಿಯಾಗಿರುತ್ತದೆ. ಆತನು ಅರಿವನ್ನು ಇಲ್ಲದಂತೆ ಮಡಿದ್ದಾನೆ. ಆತನು ಕೇವಲ ಏನೂ ಇಲ್ಲ ಸ್ಥಿತಿಯೇ ಗೋಚರಿಸುತ್ತದೆ. ಆಲ್ಲಿ ಆತನು ಹಿಡಿಯುವಂತಹುದು ಏನೂ ಇರುವುದಿಲ್ಲ. ಆತನು ಅರಿವನ್ನು ಇಲ್ಲದಂತೆ, ಗಮನಿಸದಂತೆ, ನೆನಪಿಸದಂತೆ ಮಾಡಿ ಏನೂ ಇಲ್ಲದಂತಹ ಶೂನ್ಯದಲ್ಲಿ ಪ್ರವೇಶಿಸಿ ದೀರ್ಘಕಾಲ ನೆಲೆಸುತ್ತಾನೆ. ಈ ಸ್ಥಿತಿಗೆ ಈ ಹೆಸರು ಬರಲು ಕಾರಣ ಏನೆಂದರೆ ಅಕಿಂಚ ಎಂದರೆ ಏನೂ ಇಲ್ಲ ಏನೂ ಇಲ್ಲದ ಸ್ಥಿತಿಯ ಆಧಾರವುಳ್ಳದರಿಂದ ಇದಕ್ಕೆ ಅಕಿಂಚಾಯಾತನ ಎನ್ನುತ್ತಾರೆ. ಈ ರೀತಿಯಲ್ಲಿ ಆತನು ಅಕಿಂಚಾಯಾತನದಲ್ಲಿ ವಿಹರಿಸುತ್ತಾನೆ.

4. ನೇವಸನ್ಯಾನಸನ್ನಾಆಯಾತನ :


ಆತನು ಅಕಿಂಚಯಾತನದಲ್ಲಿ 5 ರೀತಿಯ ಧ್ಯಾನ ಪ್ರವೀಣನಾಗುತ್ತಾನೆ. ಅನಂತರ ಆತನು ಅದರಿಂದ ಹೊರಬಂದು ಅದನ್ನು ಪುನರ್ ಅವಲೋಕಿಸುತ್ತಾನೆ. ಆಗ ಆತನಿಗೆ ಅಕಿಂಚಾಯಾತನವು ಸಹಾ ಸ್ಥೂಲವಾಗಿ ಕಾಣಿಸುತ್ತದೆ ಮತ್ತು ಗ್ರಹಿಕೆಯೆ ಇಲ್ಲದಂತಹ ಸ್ಥಿತಿಯು ಇನ್ನೂ ಸೂಕ್ಷ್ಮವಾಗಿ ಕಂಡುಬರುತ್ತದೆ ಮತ್ತು ಶಾಂತವಾಗಿ ಕಂಡುಬರುತ್ತದೆ. ಆಗ ಆತನಿಗೆ ಗ್ರಹಿಕೆಯೇ ರೋಗ, ಗ್ರಹಿಕೆಯು ಹುಣ್ಣು, ಗ್ರಹಿಕೆಯೇ ಅಪಾಯ ಎಂಬ ಜ್ಞಾನೋದಯವಾಗಿ ಆತನು ಅಕಿಂಚಯಾತನವನ್ನು ಮೀರಲು ಸತತವಾಗಿ ಯತ್ನಿಸುತ್ತಾನೆ. ಅದರ ಅಂಟುವಿಕೆಯಿಂದ ಪೂರ್ಣವಾಗಿ ವಿಮುಖವಾದ ನಂತರ ಆತನು ನೇವಸನ್ಯಾನಸನ್ನಾ ಆಯಾತನ ಸ್ಥಿತಿಯಲ್ಲಿ ಗಮನವಿಟ್ಟು ಅಕಿಂಚಾಯಾತನವನ್ನು ಮೀರಿ ಹೋಗುತ್ತಾನೆ. ನೇವಸನ್ಯಾನಸನ್ನಾ ಆಯಾತನವೆಂದರೆ ಗ್ರಹಿಕೆ ಇಲ್ಲ, ಗ್ರಹಿಕೆ ಇಲ್ಲದೆಯೂ ಇಲ್ಲ ಎಂಬ ಸ್ಥಿತಿ. ಅಂದರೆ ಈ ಸ್ಥಿತಿಯಲ್ಲಿ ಗ್ರಹಿಕೆಯನ್ನು ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಮೀರಿಹೋಗುತ್ತಾರೆ. ಅಂದರೆ ಸ್ಥೂಲ ಗ್ರಹಿಕೆಗಳು ಇಲ್ಲವಾಗಿ, ಸೂಕ್ಷ್ಮ ಗ್ರಹಿಕೆಗಳು ಇರುತ್ತದೆ. ಇಲ್ಲ ಕೇವಲ ಗ್ರಹಿಕೆ ಮಾತ್ರ ವೇದನೆಗಳಲ್ಲು ಇದೇರೀತಿ ಭಾವಿಸಬೇಕು, ಹಾಗೆಯೇ ವಿನ್ಯಾನ ಮತ್ತು ಸ್ಪರ್ಶಗಳು ಸಹಾ. ಈ ಸ್ಥಿತಿಯನ್ನು ಈ ರೀತಿ ಉದಾಹರಿಸಬಹುದು. ಒಂದು ಪಾತ್ರೆಯಲ್ಲಿ ಎಣ್ಣೆಯಿರುತ್ತದೆ. ಅದನ್ನು ಚೆಲ್ಲುತ್ತೇವೆ. ಆಗ ಅದರಲ್ಲಿ ಎಣ್ಣೆ ಇರುವುದಿಲ್ಲ. ಆದರೂ ಮುಟ್ಟಿದಾಗ ಅಲ್ಲಿ ಸೂಕ್ಷ್ಮವಾಗಿ ಎಣ್ಣೆಯು ಪಾತ್ರೆಗೆ ಅಂಟಿರುತ್ತದೆ. ಅದೇ ರೀತಿಯಲ್ಲಿ ಭಿಕ್ಷುವು ತನ್ನ ಸ್ಥಿತಿಯಾದ ಗ್ರಹಿಕೆ ಇಲ್ಲ, ಹಾಗು ಗ್ರಹಿಕೆ ಇಲ್ಲದೆಯೂ ಇಲ್ಲ ಹೀಗೆ ಇರುತ್ತದೆ. ಆತ ಇದರಲ್ಲಿ ಲಕ್ಷ್ಯಕೊಟ್ಟು ಕ್ಷಿಪ್ರವಾಗಿ ಪ್ರವೇಶಿಸುತ್ತಾನೆ. ಹಾಗೆಯೇ ದೀರ್ಘಕಾಲ ಅದರಲ್ಲಿ ನೆಲೆಸುತ್ತಾನೆ. ಹಾಗೆಯೇ ಕ್ಷಿಪ್ರವಾಗಿ ಹೊರಗೆ ಬರುತ್ತಾನೆ. ಅದರ ಪುನರ್ ಅವಲೋಕನ ಮಾಡುತ್ತಾನೆ. ಆತ ಈ ರೀತಿಯಲ್ಲಿ ವಿಹರಿಸುತ್ತಾನೆ.
ಈ ಅರೂಪ ಧ್ಯಾನಗಳ ಪ್ರತಿಸ್ಥಿತಿಯಲ್ಲೂ ಏಕಾಗ್ರತೆ ಮತ್ತು ಸಮಚಿತ್ತತೆಯಿರುತ್ತದೆ. ಹಾಗು ಇವುಗಳು ಪ್ರತಿಯೊಂದು ಅನಂತವಾಗಿರುತ್ತದೆ. ಆದರೆ ಒಂದಕ್ಕಿಂತ ಮತ್ತೊಂದು ಸೂಕ್ಷ್ಮವಾಗಿರುತ್ತದೆ.
ಇಲ್ಲಿಗೆ ಅರೂಪ ಝಾನ ಮುಗಿಯಿತು.

ಸಜ್ಜನರ ಆನಂದಕ್ಕಾಗಿ ರಚಿಸಲ್ಪಟ್ಟಿರುವ ವಿಶುದ್ಧಿ ಮಗ್ಗದ, ಸಮಾಧಿ ಭಾಗದ ಹತ್ತನೆ ಅಧ್ಯಾಯವಾದ ಅರೂಪ ನಿದ್ದೆಸವು ಇಲ್ಲಿಗೆ ಸಂಕ್ಷಿಪ್ತವಾಗಿ ಮುಗಿಯಿತು 

No comments:

Post a Comment