Friday 13 April 2018

visuddhi magga ವಿಶುದ್ಧಿಮಾರ್ಗದ ಸಮಾಧಿ ಭಾಗದಲ್ಲಿ ಅಧ್ಯಾಯ 11 ಸಮಾಧಿ ನಿದ್ದೇಸ

ಅಧ್ಯಾಯ 11ಸಮಾಧಿ ನಿದ್ದೇಸಆಹಾರ ಪಟಿಕ್ಕುಲ ಭಾವನಾ (ಆಹಾರದ ಕುರಿತು ಪ್ರತಿಕೂಲ ಧ್ಯಾನ):

ಆಹಾರ ಪ್ರತಿಕೂಲ ಭಾವನವು ಅರುಪ್ಪ (ಅರೂಪ) ಸ್ಥಿತಿಗಳ ನಂತರ ಬರುವುದು. ಯಾವುದು ಪೋಷಿಷುವುದೋ ಅದೇ ಪೋಷಕಾಂಶ ಅಥವಾ ಆಹಾರವಾಗಿದೆ. ನಾಲ್ಕು ವಿಧವಾದ ಆಹಾರಗಳಿವೆ. (ಅ) ಭೌತಿಕ ಆಹಾರ 
(ಆ) ಸ್ಪಶರ್ಿಕ ಆಹಾರ (ಪಸ್ಸ) ಇ) ಇಚ್ಛೆಯ ಆಹಾರ (ಚೇತನಾ) (ಈ) ಅರಿವಿನ ಆಹಾರ (ವಿಞ್ಞಾನ).
ಇಲ್ಲಿ ಯಾವುದು ಪೋಷಿಸುತ್ತದೆ? ಭೌತಿಕ ಆಹಾರವು ಕಾಯವನ್ನು ಎಂಟು ರೀತಿಯಲ್ಲಿ ಪೋಷಿಸುತ್ತದೆ. ಪಸ್ಸವು (ಸ್ಪರ್ಶ) 3 ವಿಧವಾದ ವೇದನೆಗಳನ್ನು (ಸುಖ, ದುಃಖ, ಸುಖ-ದುಃಖ) ಪೋಷಿಸುತ್ತದೆ.
ಇಚ್ಛೆಯು (ಚೇತನಾ) 3 ವಿಧದ ಭವ ಪಟಿಸಂದಿಯನ್ನು (ಪುನರ್ಜನ್ಮದ ಸರಪಳಿಯನ್ನು) ಪೋಷಿಸುತ್ತದೆ.
ವಿಞ್ಞಾನವು (ಅರಿವು) ಪುನರ್ಜನ್ಮ ತಾಳುವ ನಾಮರೂಪವನ್ನು ಪೋಷಿಸುತ್ತದೆ.
ಯಾವಾಗ ಭೌತಿಕ ಪೋಷಣೆಯಿರುವುದೋ ಆಗ ಅಂಟುವಿಕೆಯಿರುತ್ತದೆ. ಅದರಿಂದಾಗಿ ಅಪಾಯವುಂಟಾಗುತ್ತದೆ. ಎಲ್ಲಿ ಪೋಷಣೆಯಿರುವುದೋ ಅಲ್ಲಿ ಸ್ಪರ್ಶವಿದ್ದೇ ಇರುತ್ತದೆ, ಸಾನಿಧ್ಯವಿರುತ್ತದೆ. ಅದರಿಂದಾಗಿ ಅಪಾಯ ಇದ್ದೇ ಇರುತ್ತದೆ. ಎಲ್ಲಿ ಪೋಷಣೆಯಿರುತ್ತದೋ ಅಲ್ಲಿ ಇಚ್ಛೆಯು ಉಂಟಾಗುವುದು. ಹೀಗಾಗಿ ಅಲ್ಲಿ ಅಪಾಯವಿರುತ್ತದೆ. ಎಲ್ಲಿ ವಿಜ್ಞಾನ ಇರುತ್ತದೋ ಅಲ್ಲಿ ಪತಿಸಂಧಿಯು ಇರುತ್ತದೆ. ಪರಿಣಾಮವಾಗಿ ಅಪಾಯವು ಇರುತ್ತದೆ. ಭೌತಿಕ ಆಹಾರವು ಮಗುವಿನ ಮಾಂಸದಂತೆ ಅಪಾಯಕಾರಿ, ಸ್ಪರ್ಶವು ಎಚ್ಚರಹೀನ ಹಸುವಿನಂತೆ ಅಪಾಯಕಾರಿ, ಚೇತನಾವು ಕೆಂಡಗಳಂತೆ ಅಪಾಯಕಾರಿ, ವಿಜ್ಞಾನವು ನೂರು ಈಟಿಗಳಂತೆ ಅಪಾಯಕಾರಿ.
ಆದರೆ ಇಲ್ಲಿ ಭೌತಿಕ ಆಹಾರದ ಅಪಾಯ ಚಿಂತನೆ ಮಾಡಲಾಗಿದೆ. ಭೌತಿಕ ಆಹಾರವನ್ನು ತಿನ್ನಬಹುದು, ಕುಡಿಯಬಹುದು, ಅಗಿಯಬಹುದು ಮತ್ತು ಆಸ್ವಾದಿಸಬಹುದು. ಈ ಅರ್ಥದಲ್ಲಿ ಅದನ್ನು ಆಹಾರ ಎನ್ನಲಾಗಿದೆ.

ಆಹಾರ ಪ್ರತಿಕೂಲ ಸನ್ನಾ


ನಿಬ್ಬಾಣಕ್ಕೆ ತನ್ನ ಜೀವನವನ್ನು ಮೀಸಲಾಗಿಟ್ಟ ಭಿಕ್ಷುವು ಆಹಾರದಂತಹ ಪ್ರಮುಖ ವಿಷಯದಲ್ಲೂ ಅತ್ಯಂತ ಜಾಗರೂಕತೆಯಿಂದ ಅರಿತು ಆಹಾರ ಸೇವಿಸಬೇಕಾಗುತ್ತದೆ. ಇಲ್ಲದೆ ಇದ್ದರೆ ಆತನು ಆಹಾರಕ್ಕೆ ಅಂಟಿ ತಿಂಡಿಪೋತನಾಗಿ, ಸೋಮಾರಿಯಾಗಿ, ಇಂದ್ರೀಯಗಳ ಜಾಲದಲ್ಲಿ ಬಿದ್ದು ಹಾಳಾಗಬೇಕಾಗುತ್ತದೆ. ಆತ ಆಹಾರ ಸೇವಿಸುವುದೇ ದೇಹವು ಜೀವಂತವಾಗಿರಿಸಲು, ವೇದನೆಗಳನ್ನು ದಮಿಸಲು, ಅತೃಪ್ತಿಯನ್ನು ಅಂತ್ಯ ಮಾಡಲು, ಜೀವನ ಪರಿಶುದ್ಧನಾಗಲು ಹೊರತು ರುಚಿಯ ಆನಂದಕ್ಕಾಗಿ ಅಲ್ಲ, ಸಂತೋಷಕ್ಕಾಗಿ ಅಲ್ಲ, ದೇಹ ಪುಷ್ಠತೆಗಾಗಿ ಅಲ್ಲ, ದೇಹದಾಡ್ರ್ಯತೆಗಾಗಿ ಅಲ್ಲ.
ಈ ಧ್ಯಾನವು ಯಾರು ಆಹಾರದಲ್ಲಿ ಅತಿ ಅಂಟಿರುವರೋ ಅವರಿಗಾಗಿಯೇ ಇದೆ. ಈ ರೀತಿಯಲ್ಲಿ ಅವರು ಆಹಾರ ಪ್ರತಿಕೂಲಸನ್ಯಾ ಬೆಳೆಸಿ ಆಹಾರದ ಚಟದಿಂದ ಮುಕ್ತರಾಗಬೇಕಾಗುತ್ತದೆ.
ಈ ಧ್ಯಾನದಿಂದ ಸಿಗುವ ಲಾಭಗಳೆಂದರೆ ಆಹಾರ ನಿಜಸ್ವರೂಪ ಅರಿಯುತ್ತಾನೆ. ಐದು ರೀತಿಯ ರಾಗಗಳನ್ನು ಅರಿಯುತ್ತಾನೆ. ಭೌತಿಕ ರಾಶಿಯಿನ್ನು ಅರಿಯುತ್ತಾನೆ. ಅಶುಭಾ ಸನ್ಯಾ ಪಡೆಯುತ್ತಾನೆ. ಆಂತರಿಕ ದೇಹದ ಜಾಗರೂಕತೆಯ ಅರಿವು ಪಡೆಯುತ್ತಾನೆ. ಆಹಾರ ಲಾಲಸೆಯಿಂದ ಮುಕ್ತನಾಗುತ್ತಾನೆ. ವಿಮುಕ್ತಿಗೆ ಹತ್ತಿರವಾಗುತ್ತಾನೆ.
ಇಲ್ಲಿ ಧ್ಯಾನಿಯು ಏಕಾಂತ ಸ್ಥಳಕ್ಕೆ ತೆರಳಿ, ಪದ್ಮಾಸನದಲ್ಲಿ ಕುಳಿತು ಎಲ್ಲಾ ರೀತಿಯ ಯೋಚನೆಗಳಿಂದ ಮುಕ್ತವಾಗಿ, ತಾನು ಆಗಿದ, ನೆಕ್ಕಿದ, ತಿಂದ, ಕುಡಿದ ಆಹಾರದ ಬಗ್ಗೆ ಹೀಗೆ ಪುನರ್ ಅವಲೋಕನ ಮಾಡುತ್ತಾನೆ.
ಇಂಥ ಕಡೆ ನಾನು ನಾನಾರೀತಿಯ ರುಚಿಕರವಾದ ಆಹಾರವನ್ನು ಸೇವಿಸಿದೆ. ಆಹಾರವು ಜನರನ್ನು ಆನಂದಿಸುತ್ತದೆ. ಅವುಗಳ ಬಣ್ಣ, ಆಕಾರ, ಸ್ಪರ್ಶ, ರುಚಿ, ಸುಗಂಧವೆಲ್ಲಾ ಚೆನ್ನಾಗಿಯೇ ಇರುತ್ತದೆ. ಆದರೆ ದೇಹವನ್ನು ಪ್ರವೇಶಿಸಿದ ಬಳಿಕ ಅವು ಬಣ್ಣಗೆಡುತ್ತದೆ, ವಿಕಾರವಾಗುತ್ತದೆ, ಸ್ಪಶರ್ಿಸಲು ಅಸಹ್ಯವಾಗುತ್ತದೆ. ಅಸಹ್ಯ ರುಚಿಯಿಂದ ಕೂಡಿರುತ್ತದೆ, ಹಾಗು ದುನರ್ಾತ ಬೀರುತ್ತದೆ. ಅಶುಚಿಯಾಗಿರುತ್ತದೆ, ಕೊಳೆತ ರೀತಿಯಲ್ಲಿ ಇರುತ್ತದೆ ಎಂದು ಚಿಂತಿಸುತ್ತಾನೆ.
ಆಹಾರದ ಸಂಪಾದನೆಗಾಗಿ ಮಾನವ ಕೊಲ್ಲುತ್ತಾನೆ. ಕಳ್ಳತನ ಮಾಡುತ್ತಾನೆ, ಸುಳ್ಳು ಹೇಳುತ್ತಾನೆ, ಮೋಸ ಮಾಡುತ್ತಾನೆ, ಬೀದಿ ಬೀದಿ ಅಲೆಯುತ್ತಾನೆ, ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು!
ಆಹಾರವು ಹಾಗೇ ತಿನ್ನುತ್ತಾರೆ. ಅಥವಾ ಬೇಯಿಸಿ ತಿನ್ನುತ್ತಾರೆ. ಸರಿಯಾಗಿ ಸಿದ್ಧಪಡಿಸದಿದ್ದರೆ ಅಥವಾ ಯಾವುದಾದರೂ ಒಂದು ಹೆಚ್ಚಾಗಿ ತಿಂದರೂ, ಕಡಿಮೆ ತಿಂದರೂ ರೋಗ ಬರುತ್ತದೆ. ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು.
ಅಗಿದಮೇಲೆ ಆಹಾರ ಚೆನ್ನಾಗಿ ಕಾಣಿಸುವುದಿಲ್ಲ, ದುವರ್ಾಸನೆಯಿಂದ ಕೂಡುತ್ತದೆ. ಅದನ್ನು ಪುನಃ ಕೈಯಲ್ಲಿ ಯಾರೂ ಸ್ಪಶರ್ಿಸುವುದಿಲ್ಲ. ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು.
ದೇಹವನ್ನು ಒಳಹೊಕ್ಕ ಆಹಾರವು ವಾಂತಿಯಿಂದ ಹೊರಬಿದ್ದರೆ, ಆ ದೃಶ್ಯವು ಬೀಭತ್ಸವಾಗಿರುತ್ತದೆ, ಆ ಶಬ್ದವು ಅಸಹನೀಯವಾಗಿರುತ್ತದೆ. ದುವರ್ಾಸನೆಯಿಂದ ಕೂಡಿದ ಅದನ್ನು ಯಾರಾದರೂ ಸ್ಪಶರ್ಿಸುವರೇ? ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟಾವಾದುದು!.
ಆಹಾರ ಸೇವಿಸುವಾಗ ಆನಂದದಿಂದ ಜೊತೆಗೂಡಿ ಸೇವಿಸುತ್ತಾರೆ. ಆದರೆ ವಿಸಜರ್ಿಸುವಾಗ ಒಂಟಿಯಾಗಿ ಅಸಹ್ಯಪಟ್ಟು ವಿಸಜರ್ಿಸಬೇಕಾಗುತ್ತದೆ. ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು!
ನಮ್ಮ ಆಹಾರ ದೇಹವನ್ನು ಒಳಹೊಕ್ಕಿದ ಮೇಲೆ ಕೆಲವು ಭಾಗ ಜಂತುಗಳು, ಸೂಕ್ಷ್ಮಾಣುಜೀವಿಗಳು ಸೇವಿಸುತ್ತದೆ. ಕೆಲವು ಭಾಗದಿಂದ ಉಷ್ಣ ಉತ್ಪತ್ತಿಯಾಗುತ್ತದೆ. ಕೆಲವು ಭಾಗದಿಂದ ದೇಹ ಶಕ್ತಿ ಪಡೆದರೆ, ಶರೀರ ರಚನೆಯಾದರೆ ಮಿಕ್ಕ ಭಾಗವು ವಿಸರ್ಜನೆಯಾಗಿ ಹೊರಬೀಳುತ್ತದೆ. ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು.
ಅಹಾರದ ಸೇವನೆಯ ನಂತರ ನವ ದ್ವಾರಗಳಿಂದ ಅಸಹ್ಯಗಳು ಸ್ರವಿತವಾಗುತ್ತದೆ. ಸದಾ ದೇಹವನ್ನು ಶುಚಿಯಾಗಿಡಬೇಕಾಗುತ್ತದೆ. ಆದ್ದರಿಂದ ನಿಜಕ್ಕೂ ಆಹಾರ ಅತ್ಯಂತ ನಿಷ್ಕೃಷ್ಟವಾದುದು.
...ಹೀಗೆಲ್ಲಾ ಚಿಂತಿಸುತ್ತಾ ಆತನು ಪಂಚನಿವರಣಗಳಿಂದ ಮುಕ್ತನಾಗುತ್ತಾನೆ. ಹಾಗು ಧ್ಯಾನಗಳಿಂದ ಕೂಡಿ ಆತನು ಸಾಮಿಪ್ಯ ಸಮಾಧಿ ಪಡೆಯುತ್ತಾನೆ.
ಇಲ್ಲಿ ಧ್ಯಾನಿಯು ಏಕಾಂತದಲ್ಲಿ ಪದ್ಮಾಸೀನನಾಗಿ ಈ 10 ರೀತಿಯಲ್ಲಿ ಚಿಂತನೆ ಮಾಡುವುದು.

ಅ) ಆಹಾರಕ್ಕೆ ಹೊರಡುವಾಗ: ಇಲ್ಲಿ ಹೇಗೆ ನರಿಯ ಸ್ಮಶಾನಕ್ಕೆ ಆಹಾರಕ್ಕೆ ಹೋಗುವುದೋ ಹಾಗೆಯೇ ಭಿಕ್ಷುವು ಸಹಾ ಸುಂದರವಾದ ವಿಹಾರ, ಬೋಧಿವೃಕ್ಷದಂತಹ ಪವಿತ್ರ ಸ್ಥಳಗಳನ್ನು ಬಿಟ್ಟು ಅಶುಚಿಯಾದ ಆಹಾರಕ್ಕಾಗಿ ಹೊರಡಬೇಕಾಗುತ್ತದೆ. ದಾರಿಯಲ್ಲಿ ಕಂಡಂತಹ ಪ್ರತಿ ಅಶುಚಿಯನ್ನು ನೆನಪಿಗೆ ತಂದುಕೊಳ್ಳುತ್ತಾನೆ. ಉದಾಹರಣೆಗೆ: ಹಳ್ಳಿಯ ದ್ವಾರದ ಅಶುಚಿ, ಪ್ರಾಣಿಗಳ ಅಶುಚಿ, ದುನರ್ಾತ ಇತ್ಯಾದಿ ನೆನಪಿಗೆ ತಂದುಕೊಂಡು ನಿಜಕ್ಕೂ ಆಹಾರವು ಅಸಹ್ಯ ಎಂದು ಸ್ಪಷ್ಟೀಕರಿಸುವುದು.
ಆ) ಆಹಾರಕ್ಕೆ ಅಲೆದಾಡುವಾಗ: ಆಹಾರಕ್ಕಾಗಿ ಚಳಿಯೆನ್ನದೆ, ಬಿಸಿಲೆನ್ನದೆ ಅಲೆದಾಡಬೇಕಾಗುತ್ತದೆ. ಮಳೆಯಲ್ಲಿ ನೆನೆಯಬೇಕಾಗುತ್ತದೆ. ಕೆಲವರು ಆಹಾರ ನೀಡುವರು, ಕೆಲವರು ನೀಡದೆ ನಿರಾಕರಿಸುವರು. ಮುಂದೆ ಹೋಗಿ ಭಂತೆ ಎನ್ನುವರು, ಕೆಲವರು ನೋಡಿಲ್ಲದಂತೆ, ಕೇಳಿಲ್ಲದಂತೆ ವತರ್ಿಸಿದರೆ ಮತ್ತೆ ಕೆಲವರು ಮುಂದೆ ಹೋಗು ಬೋಳುತಲೆಯವ ಎನ್ನುವರು. ಧ್ಯಾನಿಯು ಧ್ಯಾನದ ವೇಳೆಯಲ್ಲಿ ಈ ಎಲ್ಲವನ್ನು ನೆನೆಯುತ್ತಾ ಓಹ್! ನಿಜಕ್ಕೂ ಆಹಾರವು ಅಸಹ್ಯಕರ ಎಂದು ಸ್ಪಷ್ಟೀಕರಿಸುತ್ತಾನೆ.
ಇ) ಆಹಾರ ಬಳಕೆ: ಇನ್ನು ಆಹಾರವನ್ನು ತಿನ್ನುವಾಗ ಬೆವರಿನ ಸೇರುವಿಕೆ, ಆಹಾರವನ್ನು ಕಲಿಸುವಾಗಿನ ಅಸಹ್ಯತೆ, ಅಗಿದು ನುಣ್ಣಗೆ ಮಾಡಿ ತಿನ್ನುವುದನ್ನು ಹೊರತೆಗೆದರೆ ಪುನಃ ಅದನ್ನು ತಿನ್ನಲಾರೆವು. ಹೀಗೆಲ್ಲಾ ಧ್ಯಾನದಲ್ಲಿ ಚಿಂತನೆ ಮಾಡುತ್ತಾ ನಿಜಕ್ಕೂ ಆಹಾರ ಅಸಹ್ಯಕರ ಎಂದು ಸ್ಪಷ್ಟೀಕರಿಸುವುದು.
ಈ) ಸ್ರವಿಸುವಿಕೆ: ಬುದ್ಧರು, ಪಚ್ಚೇಕಬುದ್ಧರು ಮತ್ತು ಚಕ್ರಚಾಲನೆ ಮಾಡುವ ಚಕ್ರವತರ್ಿ ಈ ಮೂವರಿಗೆ ನಾಲ್ಕುರೀತಿಯ ಸ್ರವಿಕೆ (ಪಿತ್ತ, ಕಫ, ಕೀವು ಮತ್ತು ರಕ್ತ) ಗಳಲ್ಲಿ ಒಂದು ಮಾತ್ರ ಆಗುವುದು. ಆದರೆ ಪುಣ್ಯಹೀನರಿಗೆ ನಾಲ್ಕು ಬಗೆಯ ಸ್ರವಿಕೆಗಳಾಗುವುವು. ಹೀಗಾಗಿ ಆಹಾರ ತಿನ್ನಿವುದರ ಈ ಪರಿಣಾಮಗಳನ್ನು ಚಿಂತನೆ ಮಾಡುತ್ತಾ ನಿಜಕ್ಕೂ ಆಹಾರ ಅಸಹ್ಯಕರ ಎಂದು ನಿಶ್ಚಯಿಸುವುದು.
ಉ) ಪಾತ್ರೆಯಂತೆ: ತಿಂದ ಆಹಾರವು ಚಿನ್ನದ ಪಾತ್ರೆಗಾಗಲಿ ಅಥವಾ ಬೆಳ್ಳಿಯ ಪಾತ್ರೆಗಾಗಲಿ ಹೋಗುವುದಿಲ್ಲ. ಬದಲಾಗಿ ಜೀಣರ್ಾಂಗ ವ್ಯೂಹದಲ್ಲಿ ಒಳಗೆ ಹೋಗುವುದು. ಅದು ವಷರ್ಾನುಗಟ್ಟಲೇ ಅಶುಚಿಯಾಗಿಯೇ ಇರುವುದು. ಆದ್ದರಿಂದಾಗಿ ನಿಜಕ್ಕೂ ಆಹಾರ ಅಸಹ್ಯಕರ ಎಂದು ನಿರ್ಧರಿಸುವುದು.
ಊ) ಅಜೀರ್ಣಯುತ ಆಹಾರ ಅಥವಾ ಬೆಂದಿಲ್ಲದ ಆಹಾರ: ಬೆಂದಿಲ್ಲದ ಆಹಾರ ಸೇವಿಸಿದಾಗ ಅದು ದೀರ್ಘಕಾಲದವರೆಗೆ ಜೀರ್ಣವಾಗದೆ ನಾನಾರೀತಿಯ ನೋವುಗಳನ್ನು, ದುವರ್ಾಸನೆಗಳನ್ನು ಸೃಷ್ಟಿಮಾಡುತ್ತವೆ. ಶರೀರದ ಹೊರಗೆಯೇ ಅವು ಕೊಳೆತು ನಾನಾರೀತಿಯ ಅಸಹ್ಯಗಳನ್ನು ಸೃಷ್ಟಿಸುವವು. ಇನ್ನು ಅವು ಒಳಗಿದ್ದು ಸೃಷ್ಟಿಸುವ ಭೀಭತ್ಸವನ್ನು ಯೋಚಿಸುತ್ತಾ ಅಹಾರವು ಅಸಹ್ಯಕರ ಎಂದು ಸ್ಪಷ್ಟವಾಗಿ ಅರಿಯುತ್ತಾನೆ.
ಋ) ಜೀಣರ್ಾಹಾರ: ಆಹಾರವು ಜೀರ್ಣವಾದ ನಂತರ ಅದು ಚಿನ್ನವಾಗುವುದಿಲ್ಲ ಅಥವಾ ಮುತ್ತುರತ್ನ, ರಜತವಾಗುವುದಿಲ್ಲ. ಬದಲಾಗಿ ನೊರೆ, ಗುಳ್ಳೆಕಾರಕ ಮಲವಾಗಿ ನಿಮರ್ಿತವಾಗುತ್ತದೆ. ಹೀಗಾಗಿ ಆಹಾರವು ಅಸಹ್ಯಕರ.
ಎ) ಪರಿಣಾಮ: ಅಹಾರವನ್ನು ಸರಿಯಾಗಿ ಬೇಯಿಸಿದರೆ, ಸಮತೋಲಿತ ಆಹಾರ ಸೇವಿಸಿದರೆ, ದೇಹದ ಸವರ್ಾಂಗಕ್ಕೂ ಬೆಳವಣಿಗೆ ಪೋಷಣೆಯಾಗುವುದು. ಆದರೆ ಕೆಟ್ಟದಾಗಿ ಬೇಯಿಸಿದಾಗ ಅದು ನಾನಾವಿಧವಾದ ರೋಗಗಳನ್ನು ತರಿಸಬಲ್ಲದು, ಇದು ಫಲವಾಗಿದೆ. ಆದ್ದರಿಂದ ಆಹಾರವು ಅಸಹ್ಯಕರವಾಗಿದೆ.
ಏ) ಹೊರಹರಿತ: ಆಹಾರ ಸೇವನೆಯ ನಂತರ ಒಂದು ಬಾಗಿಲಿನಿಂದ ಮತ್ತೊಂದು ಬಾಗಿಲಿಗೆ ಹೋಗುವಂತೆ ಶರೀರದ ಒಳಗೆ ಆಹಾರವು ಸಾಗುತ್ತಿರುತ್ತದೆ. ನಂತರ ಕೊನೆಗೆ ಮಲಮೂತ್ರವಾಗಿ ಹೊರಹಾಕಲ್ಪಡುವುದು. ಆದ್ದರಿಂದ ಆಹಾರವು ಅಸಹ್ಯಕರ.
ಐ) ಅಂಟುವಿಕೆಯ ಅಸಹ್ಯ: ಆಹಾರ ತಿನ್ನುವಾಗ ಚೆನ್ನಾಗಿಯೇ ಇರುತ್ತದೆ. ಆದರೆ ತಿಂದನಂತರ ಅಂಟಿಕೊಂಡಂತಹ ಕೈಯನ್ನು ತುಟಿ, ನಾಲಿಗೆ, ಹಲ್ಲು, ಬಾಯಿ, ಗಂಟಲನ್ನು ಚೆನ್ನಾಗಿ ಪದೇ ಪದೇ ತೊಳೆಯುತ್ತೇವೆ. ನಂತರ ವಾಸನೆ ಹೋಗಲಾಡಿಸಲು ಸಹಾ ತೊಳೆಯುತ್ತೇವೆ. ಆ ಅಹಾರವು ಕಾಲನಂತರ ನವರಂಧ್ರಗಳಿಂದ ಭಿನ್ನರೀತಿಯಲ್ಲಿ ಸ್ರವಿಕೆಯಾಗುವುದು. ಆದ್ದರಿಂದ ಆಹಾರವು ಅಸಹ್ಯಕರ.

ಹೀಗೆ ಈ 10 ರೀತಿಯಲ್ಲಿ ಆಹಾರವು ಅಸಹ್ಯಕರವೆಂದು ಧ್ಯಾನಿಯು ಚಿಂತನೆ ಮಾಡುತ್ತಾನೆ. ಪದೇಪದೇ ಅಸಹ್ಯತೆಯನ್ನೇ ಏಕಾಗ್ರಗೊಳಿಸುತ್ತಾನೆ. ಹೀಗೆಯೇ ಅಭ್ಯಾಸಿಸುತ್ತಾ, ನಿವರಣಗಳಿಂದ ಮುಕ್ತನಾಗಿ, ಉಪಚರ ಸಮಾಧಿಯನ್ನು ಪಡೆಯುತ್ತಾನೆ. ಹೀಗೆ ಆಹಾರವನ್ನು ಪ್ರತಿಕೂಲವಾಗಿ ಭಾವಿಸಿ ಅಸಹ್ಯತೆಯನ್ನು ಸಾಕ್ಷಾತ್ಕರಿಸುವುದರಿಂದಾಗಿ ಈ ಧ್ಯಾನ ಪದ್ಧತಿಗೆ ಆಹಾರ ಪಟಿಕ್ಕೂಲ ಭಾವನ ಎನ್ನುತ್ತಾರೆ.

ಆಹಾರ ಪಟಿಕ್ಕೂಲ ಭಾವನದ ಲಾಭಗಳು:

* ಜಿಹ್ವಾ ಲಾಲಸೆಯಿಂದ ಮುಕ್ತನಾಗುತ್ತಾನೆ.
* ಕೇವಲ ಜೀವಿಸುವುದಕ್ಕಾಗಿ ಮಾತ್ರ ಆಹಾರವೆಂಬ ತತ್ವದಂತೆ ಜೀವಿಸುತ್ತಾನೆ.
* ಇದೇರೀತಿಯಲ್ಲಿ ಇತರ ಇಂದ್ರೀಯಗಳ ಬಗ್ಗೆಯು ಜಿಗುಪ್ಸಕರ ಭಾವನೆ ವೃದ್ಧಿಯಾಗಿ ಅತನಲ್ಲಿ ಲೋಭ ಕ್ಷೀಣಿಸುತ್ತಾ ಹೋಗುತ್ತದೆ. ಆತನು ರೂಪಖಂಧವನ್ನು ಹಾಗು ಪಂಚೇಂದ್ರಿಯಗಳ ಅಪಾಯವನ್ನು ಸ್ಪಷ್ಟವಾಗಿ ಅರಿಯುತ್ತಾನೆ.
* ಅಶುಭಾ ಧ್ಯಾನಗಳಲ್ಲಿ ಅಶುಭ ನಿಮಿತ್ತಗಳಲ್ಲಿ ಸ್ಥಿರವಾಗುತ್ತಾನೆ.
* ಈ ಜನ್ಮದಲ್ಲಿ ಮುಕ್ತನಾಗದೆ ಹೋದರೂ ಸುಗತಿ ಪಡೆಯುತ್ತಾನೆ.
ಇಲ್ಲಿಗೆ ಆಹಾರ ಪ್ರತಿಕೂಲಸಞ್ಞ ಮುಗಿಯಿತು.
****************************************************************************

ಚತುಧಾತುವವತ್ಥಾನ ಭಾವನ:


ಈಗ ಚತುಧಾತುವವತ್ಥನ ಭಾವನದ ಬಗ್ಗೆ ವಿವರಣೆಯಿದೆ. ಈ ಧ್ಯಾನವು ಆಹಾರ ಪಟಿಕ್ಕೂಲ ಭಾವನದ ನಂತರ ಬರುವುದು. ಚತುಧಾತು ಎಂದರೆ ನಾಲ್ಕು ಧಾತುಗಳು ಎಂದರ್ಥ. ಹಾಗು ವವತ್ಥಾನ ಎಂದರೆ ವಿವರಣೆ, ಸ್ಪಷ್ಟೀಕರಣೆ, ವಿಶ್ಲೇಷಣೆ ಎಂದರ್ಥವಾಗಿದೆ. ಅಂದರೆ: ನಾಲ್ಕು ಧಾತುಗಳ ಬಗ್ಗೆ ವಿಶ್ಲೇಷಣೆ ಎಂದರ್ಥವಾಗಿದೆ.
ಈ ಧ್ಯಾನದ ಬಗ್ಗೆ ತಿಪಿಟಕಗಳಲ್ಲಿ ಎರಡುರೀತಿ ವಿವರಣೆಯಿದೆ. ಒಂದು ಸಂಕ್ಷಿಪ್ತವಾಗಿ ಮತ್ತು ಇನ್ನೊಂದು ವಿವರವಾಗಿ.
ಮಹಾಸತಿಪಟ್ಠಾನದಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದರೆ, ಮಹಾಹತ್ಥಿಪಾಲೋಪಮ ಸುತ್ತ ಹಾಗು ರಾಹುಲೋವಾದ ಸುತ್ತ ಮತ್ತು ಧಾತುವಿಭಂಗ ಸುತ್ತದಲ್ಲಿ ವಿವರವಾಗಿ ಸ್ಪಷ್ಟೀಕರಿಸಲ್ಪಟ್ಟಿದೆ.
ಚತುಧಾತುವವಥ್ಥನ (ಧಾತುಗಳ ವಿಶ್ಲೇಷಣಾ ಧ್ಯಾನ)
ಇಲ್ಲಿ ಸಾಧಕನು (ಭಿಕ್ಷುವು) ತನ್ನ ಶರೀರವನ್ನು ಯಥಾಭೂತವಾಗಿ ಅದು ಹೇಗಿದೆಯೋ ಹಾಗೆ ಅರಿಯುತ್ತಾನೆ. ದೇಹವು ನಾಲ್ಕು ಮಹಾಭೂತಗಳಾದ ಪೃಥ್ವಿ, ಜಲ, ವಾಯು, ಅಗ್ನಿಗಳಿಂದಾದ ರೂಪವಷ್ಟೇ ಹೊರತು ಇದು ನನ್ನದಲ್ಲ, ನಾನಲ್ಲ ಮತ್ತು ನನ್ನ ಆತ್ಮವಲ್ಲ ಎಂದು ಯತಾರ್ಥವಾಗಿ ಅರಿಯುತ್ತಾನೆ. ನಾಲ್ಕು ಧಾತುಗಳ ಯತಾರ್ಥ ಅರಿಯುವಿಕೆಯು ಈ ಧ್ಯಾನದ ಲಕ್ಷಣವಾಗಿದೆ. ಇಲ್ಲಿ ಶೂನ್ಯತೆಯನ್ನು ಅರ್ಥಮಾಡಿಕೊಳ್ಳುವಿಕೆಯೇ ಕ್ರಿಯೆಯಾಗಿದೆ. ಇದು ನಾನು ಅಥವಾ ಆತ್ಮದ ಯೋಚನೆಗಳಿಂದ ವಿಮುಕ್ತವಾದಾಗ ವ್ಯಕ್ತವಾಗುತ್ತದೆ. ಈ ಧ್ಯಾನವು ಬುದ್ಧಿವಂತರಿಗೆ ನೀಡಲಾಗುತ್ತದೆ.
ಈ ಧ್ಯಾನದ ಲಾಭಗಳೆಂದರೆ : ಭಿಕ್ಷುವು ಭಯದಿಂದ, ಪ್ರಾಪಂಚಿಕತೆಯಿಂದ, ಅತೃಪ್ತಿಯಿಂದ, ಪ್ರಿಯ ಮತ್ತು ಅಪ್ರಿಯ ಇಂದ್ರಿಯ ಸುಖಗಳಿಂದ, ಸ್ತ್ರೀ ಅಥವಾ ಪುರುಷ ಎಂಬ ಗ್ರಹಿಕೆಗಳಿಂದ ಮುಕ್ತನಾಗುತ್ತಾನೆ. ಪ್ರಜ್ಞಾವಂತನಾಗುತ್ತಾನೆ. ಸೋತಪನ್ನ ಸ್ಥಿತಿಗೆ ಹತ್ತಿರವಾಗುತ್ತಾನೆ. ಮಾನಸಿಕ ಸ್ಥಿತಿಗಳು, ಸ್ವಚ್ಛವಾಗುತ್ತದೆ. ತನ್ನ ಶರೀರವನ್ನು ಪೂರ್ಣ ಹತೋಟಿಯಲ್ಲಿ ಇಡುತ್ತಾನೆ.

ಧ್ಯಾನ ವಿಧಾನ : 

ಇಲ್ಲಿ ಭಿಕ್ಷುವು ನಿಶ್ಶಬ್ದ, ನಿರ್ಜನ ಏಕಾಂತ ಸ್ಥಳದಲ್ಲಿ ನೆಲೆಸಿ ಪದ್ಮಾಸನದಲ್ಲಿ ಕುಳಿತು, ಅಕುಶಲ ಸ್ಥಿತಿಗಳಿಂದ ಮುಕ್ತನಾಗಿ ಈ ರೀತಿ ಚಿಂತನೆ ಮಾಡುತ್ತಾನೆ. ಈ ಶರೀರವು ಕೇವಲ 4 ಧಾತುಗಳಿಂದ ಆಗಿದೆ. ಅವೆಂದರೆ ಘನ (ಪೃಥ್ವಿ), ದ್ರವ (ಜಲ) ಅನಲ (ವಾಯು) ಮತ್ತು ಉಷ್ಣ (ತೇಜೋ) ಹೀಗಾಗಿ ಇದು ಕೇವಲ ಧಾತುಗಳಿಂದ ಕೂಡಿದ್ದು, ಇಲ್ಲಿ ಯಾವ ಜೀವಿಯಾಗಲಿ, ಆತ್ಮವಾಗಲಿ ಇಲ್ಲ. ಇದು ನನ್ನದಲ್ಲ ಹಾಗು ನಾನು ಅಲ್ಲ ಎಂದು ಚಿಂತಿಸುತ್ತಾನೆ.
ಭಿಕ್ಷುಗಳೇ, ನುರಿತ ಕಟುಕನೊಬ್ಬನು ಹಸುವನ್ನು ಕೊಂದು ದಾರಿಯ ಬದಿಯಲ್ಲಿ ತುಂಡು ತುಂಡಾಗಿ ಮಾಂಸವನ್ನು ಇಟ್ಟಿರುತ್ತಾನೆ. ಹಾಗೆಯೇ ಭಿಕ್ಷುಗಳೇ ನೀವು ಸಹಾ ಈ ದೇಹವನ್ನು ಮಾನಸಿಕವಾಗಿ ವಿಭಜಿಸಿ ಇದು ಘನದಾತು, ಇದು ದ್ರವಧಾತು, ಇದು  ತೇಜೋ ಧಾತು ಮತ್ತು ಇದು ಅನಿಲಧಾತು ಎಂದು ವಿಭಜಿಸಿ ವಿಶ್ಲೇಷಿಸಿ.
ನಮ್ಮ ಶರೀರದಲ್ಲಿರುವ ಘನಧಾತುಗಳೆಂದರೆ ತಲೆಗೂದಲು, ತಲೆ, ಉಗುರು, ಹಲ್ಲುಗಳು, ಚರ್ಮ, ಮಾಂಸ, ಸ್ನಾಯು, ನಾಡಿಗಳು, ನರಗಳು, ಮೂಳೆಗಳು, ಅಸ್ತಿಮಚ್ಚೆ. ಮೂತ್ರಪಿಂಡ, ಹೃದಯ, ಶ್ವಾಸಕೋಶ, ವಪೆ, ಕರುಳು, ಗಂಟಲು, ಮೆದುಳು, ಮಲ ಇತ್ಯಾದಿ.
ನಮ್ಮ ಶರೀರದಲ್ಲಿರುವ ದ್ರವಧಾತುಗಳೆಂದರೆ - ಪಿತ್ತರಸ, ಜೊಲ್ಲು, ಕೀವು, ರಕ್ತ, ಬೆವರು, ಕೊಬ್ಬು ಕಣ್ಣೀರು, ತೈಲ, ಮೂಗಿನ ಸ್ರಾವ, ಮೂತ್ರ ಇತ್ಯಾದಿ.
ನಮ್ಮ ಶರೀರದಲ್ಲಿರುವ ಉಷ್ಣತೆಯೆಂದರೆ ಸಾಧಾರಣ ತಾಪ, ಜ್ವರದ ತಾಪ, ಆಹಾರದಿಂದಾದ ತಾಪ, ಮನಸ್ಸಿನ ಒತ್ತಡದಿಂದ ತಾಪ ಇತ್ಯಾದಿ.
ನಮ್ಮ ಶರೀರದಲ್ಲಿರುವ ವಾಯುವೆಂದರೆ ನಮ್ಮ ದೇಹದಲ್ಲಿ ಮೇಲ್ಮುಖವಾಗಿ ಹರಿಯುವ ವಾಯು, ಕೆಳಮುಖವಾಗಿ ಹರಿಯುವ ವಾಯು, ಕಿಬ್ಬೊಟ್ಟಯಲ್ಲಿರುವ ವಾಯು, ಬೆನ್ನನಲ್ಲಿರುವ ವಾಯು, ಶ್ವಾಸಕೋಶದಲ್ಲಿರುವ ವಾಯು, ಅಂಗಗಳಿರುವ ವಾಯು ಉಶ್ವಾಸ ಮತ್ತು ನಿಶ್ವಾಸ.
ಹೀಗೆ ನಮ್ಮ ಶರೀರದಲ್ಲಿ ಕೇವಲ 4 ಧಾತುಗಳಿವೆ ಹೊರತು ಆತ್ಮವಿಲ್ಲ. ಹಾಗು ಈ ಶರೀರ ನಮ್ಮದಲ್ಲ ಹಾಗು ನಾನು ಅಲ್ಲ ಎಂದು ಯತಾರ್ಥವಾಗಿ ಅರಿಯುತ್ತಾರೆ.
ಹಾಗೆಯೇ ಆತನು ಈ ಶರೀರದ ಅಂಗಗಳು ಎಲ್ಲೆಲ್ಲಿವೆ, ಅವುಗಳ ರಚನೆ ಹೇಗಿದೆ. ಆವುಗಳ ಧಾತುಗಳು ಅವುಗಳ ಕಾರ್ಯ, ಅವುಗಳ ಲಕ್ಷಣ ಗಮನಿಸುತ್ತಾ ಇಲ್ಲಿ ಯಾವುದು ನಾನಲ್ಲ, ನನ್ನ ಆತ್ಮವಲ್ಲ, ನಾನಲ್ಲ ಎಂದು ಅರಿಯುತ್ತಾನೆ.
ಈ ಶರೀರವು ಹಿಂದಿನ ಜನ್ಮದ ಕರ್ಮದ ಅನಾಸಾರವಾಗಿ ಮತ್ತು ಚಿತ್ತದಿಂದ ಉತ್ಪತ್ತಿಯಾಗಿದೆ ಹಾಗು ಉಷ್ಣತೆಯಿಂದ ಮತ್ತು ಆಹಾರದಿಂದ ಇವು ರಚಿತವಾಗಿದೆ ಎಂದು ಅರಿಯುತ್ತಾನೆ.
ಇಡೀ ಶರೀರ ಅಷ್ಟೇ ಅಲ್ಲ, ಇಡೀ ಬ್ರಹ್ಮಾಂಡವು ಈ ನಾಲ್ಕು ಮಹಾಧಾತುಗಳಿಂದ ರೂಪಿತವಾಗಿವೆ ಎಂದು ಅರಿಯುತ್ತಾನೆ.
ಈ ಧಾತುಗಳು ಸ್ತ್ರೀಯು ಅಲ್ಲ, ಪುರುಷನು ಅಲ್ಲ. ಕೇವಲ ಧಾತುಗಳಾಗಿವೆ ಎಂದು ಅರಿಯುತ್ತಾನೆ.
ಆತ ಧಾತುಗಳನ್ನು ಸ್ಪಷ್ಟವಾಗಿ ಅರಿಯುತ್ತಾನೆ. ಹೇಗೆಂದರೆ : ಪೃಥ್ವಿಯು (ಘನವು ಕಠಿಣವಾದ ಲಕ್ಷಣವನ್ನು ಹೊಂದಿದೆ. ಅದರ ಕ್ರಿಯೆಯು ಸ್ಥಾಪಿಸುವುದಾಗಿದೆ. ಅದು ಪಡೆಯುವಿಕೆಯಿಂದ ವ್ಯಕ್ತವಾಗುತ್ತದೆ ಅಷ್ಟೇ. (ಜಲ/ದ್ರವ)ವು ಹರಿಯುವ ಲಕ್ಷಣವನ್ನು ಹೊಂದಿದೆ. ಇದರ ಕ್ರಿಯೆಯು ಏನೆಂದರೆ ತೀವ್ರತೆ ಉಂಟುಮಾಡುವುದು. ಇದು ಅಂಟುವಿಕೆಯಿಂದ ವ್ಯಕ್ತವಾಗುತ್ತದೆ. ತೇಜೋದಾತುವು ಉಷ್ಣತೆಯ ಲಕ್ಷಣ ಹೊಂದಿದೆ. ಇದರ ಕ್ರಿಯೆ ಏನೆಂದರೆ ನಿರ್ವಹಣೆ ಮಾಡುವುದು (ಪೋಷಣೆ ಮಾಡುವುದು). ವಾಯು ಧಾತುವು ಉಬ್ಬುವಿಕೆಯ ಲಕ್ಷಣ ಹೊಂದಿದೆ. ಇದರ ಕ್ರಿಯೆ ಚಲನೆಯಾಗಿದೆ. ಇದು ಸಾಗಿಸುವಿಕೆಯಿಂದ ವ್ಯಕ್ತವಾಗುತ್ತದೆ.
ಪೃಥ್ವಿ ದ್ವಾರವು ಎತ್ತಿಹಿಡಿಯುತ್ತದೆ
ಅಪೋಧಾತುವು ಹರಿಯುತ್ತದೆ
ತೇಜಧಾತುವು ಮೇಲ್ಮುಖವಾಗಿ ಹೋಗುವಂತೆ ಮಾಡುತ್ತದೆ.
ವಾಯು ಉರುಳುವಂತೆ ಮಾಡುತ್ತದೆ.
ದೇಹವನ್ನು ರೂಪಖಂಧವೆನ್ನುತ್ತಾರೆ. ಅಂದರೆ ಧಾತುಗಳ ರಾಶಿಯಾಗಿದೆ. ಅಂದರೆ ಪೃಥ್ವಿರಾಶಿ, ಅಪೋರಾಶಿ, ತೇಜೋರಾಶಿ ಮತ್ತು ವಾಯುರಾಶಿ. ಪ್ರತಿ ರಾಶಿಯಲ್ಲಿ ಮತ್ತು ತತ್ವಗಳು ಇರುತ್ತದೆ. ಆದರೆ ಒಂದು ಮಾತ್ರ ಪ್ರಾಬಲ್ಯ ವಹಿಸಿರುವಾಗ ಅದರದೇ ಹೆಸರು ನೀಡಲಾಗುತ್ತದೆ. ಉದಾಹರಣೆಗೆ ಪೃಥ್ವಿ ರಾಶಿಯಲ್ಲಿ ಪೃಥ್ವಿಯು ಪ್ರಾಬಲ್ಯ ವಹಿಸಿರುತ್ತದೆ. ಹಾಗೆಯೇ ಅಪೋ, ತೇಜೋ ಮತ್ತು ವಾಯುಗಳು ಸಹ ಇರುತ್ತದೆ.
ಈ ನಾಲ್ಕು ಬೇರೆಯಾಗದು, ಜೊತೆಯಲ್ಲೇ ಇರುತ್ತದೆ. ಒಂದಕ್ಕೊಂದು ಆಧಾರವಾಗಿ, ಒಂದಕ್ಕೊಂದು ನಿವರ್ಾಹಕವಾಗಿ, ಸಹಾಯಕವಾಗಿ ಇರುತ್ತವೆ.
ಆತನು ಮುಂದೆ ಇವುಗಳಲ್ಲಿ ಸಾಮಿಪ್ಯತೆ ಮತ್ತು ವಿರುದ್ಧತೆ ಗಮನಿಸುತ್ತಾನೆ. ಹೇಗೆಂದರೆ ಪೃಥ್ವಿ ಮತ್ತು ಅಪೋಗಳಿಗೆ ತೂಕವಿರುತ್ತದೆ, ಆದ್ದರಿಂದ ಅವು ಸಾಮಿಪ್ಯ, ತೇಜೋ ಮತ್ತು ವಾಯುಗಳು ಹಗುರವಾಗಿರುತ್ತದೆ. ಇವು ಸಹಾ ಸಾಮಿಪ್ಯತೆ ಹೊಂದಿರುತ್ತದೆ. ಜಲ ಮತ್ತು ತೇಜೋಗಳು ವಿರುದ್ಧವಾಗಿರುತ್ತದೆ. ಅನ್ಯೋನ್ಯತೆಯಲ್ಲಿ ಪ್ರಥ್ವಿ ಮತ್ತು ಅಪೋ ವಿರುದ್ಧವಾಗಿರುತ್ತದೆ. ಪೃಥ್ವಿ ಮತ್ತು ವಾಯು ವಿರುದ್ಧವಾಗಿದೆ. ಈ ರೀತಿಯಲ್ಲಿ ಆತನು ಇವುಗಳ ಸಾಮಿಪ್ಯ ಮತ್ತು ವಿರುದ್ಧತೆ ಅರಿಯುತ್ತಾನೆ.
ಹೇಗೆ ಗೊಂಬೆಯೊಂದಕ್ಕೆ ಚಲನೆ, ಮಾತನಾಡುವಿಕೆ ಎಲ್ಲವನ್ನು ಸಿದ್ಧಪಡಿಸಿದರೆ ಅದಕ್ಕೆ ಆತ್ಮವಿಲ್ಲವೋ, ಹಾಗೆಯೇ ಧಾತುಗಳಿಂದ ದೇಹಕ್ಕೆ ಆತ್ಮವಿಲ್ಲ. ಕೇವಲ ಕ್ರಿಯೆಗಳು ಜರುಗುತ್ತವೆ. ನಾನು ಎಂಬುದೇ ಇಲ್ಲ. ಇನ್ನೂ ನನ್ನದೆಲ್ಲಿ? ಹೀಗೆ ಆತನು ವಿಶ್ಲೇಷಿಸುತ್ತಾನೆ. ಹೀಗೆಯೇ ಧ್ಯಾನಿಸುತ್ತಾ ಆತನು ಪಂಚನಿವರಣಗಳಿಂದ ಮುಕ್ತನಾಗಿ ಮತ್ತು ಧ್ಯಾನಗಳಿಂದ ಕೂಡಿ ಸಾಮಿಪ್ಯ ಸಮಾಧಿ ಪಡೆಯುತ್ತಾನೆ. ಅಥವಾ ಸೋತಪನ್ನ ಸ್ಥಿತಿಗೆ ಸಮೀಪವಾಗಿರುತ್ತಾನೆ.
ಇಲ್ಲಿಗೆ ಧಾತು ವಿಶ್ಲೇಷಣೆ ಸಂಕ್ಷಿಪ್ತವಾಗಿ ಮುಗಿಯಿತು ಇಲ್ಲಿಗೆ ಆಹಾರ ಪತಿಕೂಲಸನ್ಯಾ ಸಮಾಧಿ ಮುಗಿಯಿತು.


ಧಾತು ವಿಶ್ಲೇಷಣೆ ಸಮಾಧಿಯ ಮಹತ್ತರ ಲಾಭಗಳು ಯಾವುವು ?

:
ಹೀಗೆ ಧ್ಯಾನಿಯು ಧಾತುಗಳ ಬಗ್ಗೆ ಗಮನನೀಡುತ್ತಾ ಹೋದಾಗ ಧಾತುಗಳ ಸ್ಪಷ್ಟತೆ ಆತನಿಗೆ ತಿಳಿಯುವುದು. ಇದೇ ಧ್ಯಾನದಲ್ಲಿ ಆತನಿಗೆ ಸಾಮೀಪ್ಯ ಸಮಾದಿಯು ಸಿಗುವುದು.
ಯಾವ ಧ್ಯಾನಿಯು ಈ ನಾಲ್ಕು ಧಾತು ವಿಶ್ಲೇಷಣೆಯಲ್ಲಿ ತೊಡಗುವನೋ ಆತನಲ್ಲಿ ಜೀವಿಗಳ ಬಗ್ಗೆ ಆತ್ಮಗ್ರಹಿಕೆಯು ತೊಡೆದುಹೋಗುತ್ತದೆ. ಆತನು ಶೂನ್ಯತೆಯೇ ಕಾಣುತ್ತಾನೆ. ಆತನು ಶರೀರದಲ್ಲಿ ಯಾವುದೇ ರೀತಿಯಲ್ಲಿಯೂ ಆಸಕ್ತಿ ತಾಳದೆ, ಜೀವಿಗಳ ಭಿನ್ನತೆ, ಸಾಮ್ಯತೆ ಸ್ಪಷ್ಟವಾಗಿ ಅರಿಯುತ್ತಾನೆ. ಜೀವಿಗಳ ಬಗ್ಗೆ ತೊಡೆದುಹೋಗಿ ಕೇವಲ ಧಾತುಗಳೇ ಆತನಿಗೆ ಕಾಣಿಸುತ್ತದೆ. ಹೀಗಾಗಿ ಆತನಲ್ಲಿ ಭಯ, ಲೋಭ, ಬೇಸರವೂ ಅಳಿದುಹೋಗುವುದು. ಆತನಲ್ಲಿ ಪ್ರಿಯ-ಅಪ್ರಿಯ ಅಪೇಕ್ಷೆಗಳು ಇಲ್ಲದಂತಾಗುತ್ತವೆ. ಮುಕ್ತನಾಗದಿದ್ದರೆ ಸುಗತಿಯಂತು ಖಂಡಿತ ಪಡೆಯುತ್ತಾನೆ.
ಚತುಧಾತುವವತ್ಥಾನ ಸದಾ ಪ್ರಜ್ಞಾವಂತನ ವಿಹಾರ ಸ್ಥಾನ. ಇದೇ ಉದಾತ್ತ ಧ್ಯಾನಿಸಿಂಹನ ನೆಚ್ಚಿನ ಆಟದ ಮೈದಾನ.
ಇದು ಚತುವವತ್ಥಾನ ಭಾವನದ ಸಂಕ್ಷಿಪ್ತ ವಿವರಣೆಯಾಗಿದೆ.
ಸಮಾಧಿ ವಿಕಾಸದ ಪರಿಸಮಾಪ್ತಿ
ಇಲ್ಲಿಗೆ ಸಮಾಧಿಯನ್ನು ಹೇಗೆ ವಿಕಸಿಸಬೇಕು ಎಂಬ ವಿಷಯದ ಎಲ್ಲಾ ಧ್ಯಾನಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಸಮಾಧಿ ಎಂದರೇನು? ಇತ್ಯಾದಿ ಪ್ರಕರಣಗಳಿಗೆಲ್ಲಾ ಉತ್ತಮವಾಗಿ ಸ್ಪಷ್ಟೀಕರಣ ನೀಡಲಾಗಿದೆ.

ಸಮಾಧಿಯ ಮಹತ್ತರ ಲಾಭಗಳು:

8. ಧ್ಯಾನಭಿವೃದ್ಧಿಯ ಲಾಭಗಳೇನು? ಐದು ವಿಧದ ಲಾಭಗಳಿವೆ:
ಅ) ಇಲ್ಲೇ ಈಗಲೇ ಸುಖಮಯವಾಗಿ ವಿಹರಿಸುವಿಕೆ: ಅಂದರೆ ಮಾನಸಿಕ ನೆಮ್ಮದಿ, ಸಮಾಧಾನ, ಒತ್ತಡ ಮುಕ್ತ ಸುಖವನ್ನು ಗಳಿಸುತ್ತಾನೆ. ನಾವು ಸಮಾದಿ ಸುಖದಲ್ಲಿ ಇಡೀದಿನ ನೆಲೆಸುತ್ತೇವೆ ಎಂದು ಅರಹಂತರು ಹೇಳಿಕೊಳ್ಳುತ್ತಾರೆ.
ಆ) ಪ್ರಜ್ಞಾವನ್ನು ಸಂಪಾದಿಸುವಿಕೆ: ಇದಕ್ಕೆ ಸಂಬಂಧಿಸಿದಂತೆ ಭಗವಾನರು ಹೀಗೆ ಹೇಳಿರುವರು: ಭಿಕ್ಷುಗಳೇ, ಸಮಾಧಿಯನ್ನು ಅಭಿವೃದ್ಧಿಗೊಳಿಸಿ, ಯಾವ ಭಿಕ್ಷುವು ಸಮ್ಮಾಸಮಾದಿಯಲ್ಲಿರುವನೋ ಆತನು ಯೋಗ್ಯವಾಗಿ ಅರ್ಥಮಾಡಿಕೊಳ್ಳಬಲ್ಲವನಾಗುತ್ತಾನೆ.
ಇ) ಆತನು ಅಭಿಜ್ಞಾ ಸಂಪನ್ನನಾಗಬಲ್ಲನು: ಅಂದರೆ ಅಭಿಜ್ಞಾದಂತಹ ಶ್ರೇಷ್ಠ ವಿಸ್ಮಯಕಾರಿ ಬಲಗಳನ್ನು ಪಡೆಯಬಲ್ಲನು. ಅಂದರೆ ಯಾರು ಅಷ್ಟಸಮಾಪತ್ತಿಗಳನ್ನು ಪ್ರಾಪ್ತಿಮಾಡಿರುತ್ತಾನೋ ಆತನು ಅಭಿಜ್ಞಾಗಳ ಕಡೆ ಗುರಿಯಾಗಿಸಿ ವೀಕ್ಷಿಸುವಂತಹ ಸಾಮಥ್ರ್ಯ ಪಡೆಯುತ್ತಾನೆ. ಆತನು ಕೆಲ ವಿಶೇಷ ಧ್ಯಾನ ಕೌಶಲ್ಯಗಳಿಂದಾಗಿ ಹಲವರು ಶರೀರಗಳನ್ನು ಪಡೆಯಬಲ್ಲನು. ಪರರ ಚಿತ್ತವನ್ನು ಓದಬಲ್ಲನು. ಇತ್ಯಾದಿ ಅಭಿಜ್ಞಾ ಶಕ್ತಿ ಪಡೆಯುತ್ತಾನೆ.
ಈ) ಬ್ರಹ್ಮಲೋಕಗಳಲ್ಲಿ ಉಗಮಿಸಬಲ್ಲನು: ಇಲ್ಲಿ ಧ್ಯಾನಿಯು ತನ್ನ ಧ್ಯಾನಕ್ಕೆ ಅನುಸಾರವಾಗಿ ನಿಧನದ ನಂತರ ಬ್ರಹ್ಮಲೋಕಗಳಲ್ಲಿ ನಿದರ್ಿಷ್ಟ ಹಂತಗಳಲ್ಲಿ ಉಗಮಿಸಿ ಸ್ಥಾನವನ್ನು ಪಡೆಯಬಲ್ಲನು.
ಉ) ನಿಬ್ಬಾಣಪ್ರಾಪ್ತಿ: ಅಂದರೆ ಯಾವ ಆರ್ಯರು ಅಷ್ಟ ಸಮಾಪತ್ತಿಗಳನ್ನು ಪಡೆದಿರುವರೋ ಅವರು ಇಚ್ಛಿಸಿದಲ್ಲಿ ಏಳು ದಿನಗಳ ಕಾಲ ನಿರೋಧ ಸಮಾಪತ್ತಿ ಸ್ಥಿತಿಯಲ್ಲಿ (ನಿಬ್ಬಾಣ ಸುಖದಲ್ಲಿ) ನಿರಂತರ ಇರಬಲ್ಲರು. ಇದಕ್ಕೆ ನಿರೋಧ ಲಾಭವೆನ್ನುವರು. ಇದು ಧ್ಯಾನದಲ್ಲಿನ ಪರಮೋಚ್ಛ ಲಾಭವಾಗಿದೆ.

ಈ ರೀತಿಯಾಗಿ ಸಮಾಧಿಗಳಲ್ಲಿ 5 ವಿಧದ ಸುಖಗಳಿವೆ.

ಆದ್ದರಿಂದ ಪ್ರಜ್ಞಾವಂತನು ನಿಷ್ಠೆಯಲ್ಲಿ ಶಿಥಿಲನಾಗದೇ, ನಿರಂತರ ಧ್ಯಾನದಲ್ಲಿಯೇ ಅವಿಶ್ರಾಂತವಾಗಿ ತೊಡಗಿಸಿಕೊಂಡು ಶುಭ್ರವಾಗಲಿ ಕಶ್ಮಲರಹಿತನಾಗುತ್ತಲೇ ಹಾಗೆಯೇ ಗಳಿಸಲಿ ಇಚ್ಛಾಯುತ ಪರಮ ಲಾಭಗಳನ್ನು.
ಇಲ್ಲಿಗೆ ಸಮಾಧಿ ಭಾಗ ಮುಗಿಯಿತು.
*****                                             ******                                                            *****

ಸಜ್ಜನ ಆನಂದಕ್ಕಾಗಿ ರಚಿಸಲ್ಪಟ್ಟಂತಹ ವಿಶುದ್ಧಿಮಾರ್ಗದ ಸಮಾಧಿ ಭಾಗದಲ್ಲಿ 11ನೇ ಅಧ್ಯಾಯವಾದಂತಹ ಸಮಾಧಿ ನಿದ್ದೇಸವು ಮುಗಿಯಿತು.
ಮೊದಲಿಗೆ ಶೀಲನಿದ್ದೆಸವು, ಎರಡನೆಯದು ಧುತಂಗ ನಿದ್ದೆಸವಾಗಿ,
ತೃತೀಯವು ಕಮ್ಮಟ್ಠಾನ ಗ್ರಹಣ ನಿದ್ದೆಸವಾಗಿದ್ದು, ನಾಲ್ಕನೆಯ ಪಠವಿ ಕಸಿಣ ನಿದ್ದೆಸವು,
ಐದನೆಯದು ಉಳಿದ ಕಸಿಣಗಳಾದರೆ, ಆರನೆಯದೇ ಅಶುಭ ನಿದ್ದೇಸವಾದರೆ,
ಏಳನೆಯದು ಆರು ಅನುಸ್ಸತಿಗಳು, ಎಂಟನೆಯದೇ ಶೇಷ ಅನುಸ್ಸತಿ,
ಒಂಬತ್ತನೆಯದು  ಬ್ರಹ್ಮವಿಹಾರಗಳಾದರೆ ಹತ್ತನೆಯದೇ ಅರೂಪ್ಪ ನಿದ್ದೇಸವಾಗಿತ್ತು.
ಪಟಿಕ್ಕೂಲಸಞ್ಞಾ, ಧಾತುವವತ್ಥಾನ ನಿದ್ದೇಸವೇ ಹನ್ನೊಂದನೆಯ ಪರಿಚ್ಛೇದವಾಗಿತ್ತು.

ಇಲ್ಲಿಗೆ ವಿಸುದ್ಧಿ ಮಾಗ್ಗದ ಪ್ರಥಮ ಭಾಗ ಮುಗಿಯಿತು 

No comments:

Post a Comment