Wednesday 11 April 2018

visuddhi magga ವಿಶುದ್ಧಿ ಮಾರ್ಗದ ಭಾಗ 2 ಸಮಾಧಿ ಅಧ್ಯಾಯ 3 ಕಮಟ್ಠಾನ ಗಹಣ ನಿದ್ದೇಸ

ಭಾಗ 2ಸಮಾಧಿಅಧ್ಯಾಯ 3ಕಮಟ್ಠಾನ ಗಹಣ ನಿದ್ದೇಸ

ಇಲ್ಲಿ ಸಮಾಧಿಯು ಚಿತ್ತವೆಂಬ ತಲೆಬರಹದಿಂದ ಸ್ಪಷ್ಟೀಕರಿತವಾಗಿದೆ. ಭಿಕ್ಖುವು ಚಿತ್ತ ಹಾಗು ಪಞ್ಞಾದ ಅಭಿವೃದ್ಧಿಗೊಳಿಸಿರುತ್ತಾನೆ. ಸಮಾಧಿಯು ಶೀಲದ ಸುಭದ್ರ ತಳಹದಿಯ ಮೇಲೆ ನಿಂತಾಗ ಮಹತ್ಫಲ ನೀಡುತ್ತದೆ. ಆದ್ದರಿಂದಾಗಿ ಈ ಹಿಂದೆ ವಿವರಿಸಿದಂತೆ ಶೀಲಗಳು ಮತ್ತು ಧುತಾಂಗಗಳ ಪಾಲನೆಯಿಂದ ಶೀಲವಿಶುದ್ಧಿ ಮಾಡಿರುತ್ತಾನೆ. ಸಮಾಧಿಯ ವಿವರಣೆ ಸಂಕ್ಷಿಪ್ತವಾಗಿ ವಿವರಿಸಿದರೆ ಸಮಾಧಿಯು ಅಭಿವೃದ್ಧಿಯಾಗುವುದಿರಲಿ, ಅದು ಅರ್ಥವೂ ಆಗುವುದಿಲ್ಲ. ಆದ್ದರಿಂದಾಗಿ ಈ ಪ್ರಶ್ನೆಗಳ ಅಡಿಯಲ್ಲಿಯೇ ಚಿತ್ತಾಭಿವೃದ್ಧಿಯ ಅಥವಾ ಸಮಾಧಿಯ ಸ್ಪಷ್ಟೀಕರಣ ಹೀಗೆ ವಿವರಿಸಲಾಗಿದೆ.
1. ಸಮಾಧಿ ಎಂದರೇನು ?
2. ಯಾವ ಅರ್ಥದಲ್ಲಿ ಸಮಾಧಿ ?
3. ಸಮಾಧಿಯ ಲಕ್ಷಣಗಳೇನು ? ಅದರ ಕ್ರಿಯೆ ಯಾವುದು ? ಅದು ಹೇಗೆ ವ್ಯಕ್ತವಾಗುವುದು ಮತ್ತು ಅದರ ತತ್ಕ್ಷಣದ ಕಾರಣವೇನು ?
4. ಎಷ್ಟು ವಿಧದ ಸಮಾಧಿಗಳಿವೆ ?
5. ಸಮಾಧಿಯು ಹೇಗೆ ಮಲಿನವಾಗುತ್ತದೆ ?
6. ಸಮಾಧಿಯ ವಿಶುದ್ಧಿ ಹೇಗಾಗುವುದು ?
7. ಸಮಾಧಿಯನ್ನು ಅಭಿವೃದ್ಧಿಗೊಳಿಸುವುದು ಹೇಗೆ ?
8. ಸಮಾಧಿಯ ವಿಕಾಸದಿಂದ (ಅಭಿವೃದ್ಧಿ) ಆಗುವ ಮಹತ್ತರ ಲಾಭಗಳಾವುವು ?

1. ಸಮಾಧಿ ಎಂದರೇನು? 2. ಯಾವ ಅರ್ಥದಲ್ಲಿ ಸಮಾಧಿ ?

ಇದು ಸಮಾಧಾನ (ಏಕಾಗ್ರ) ವಾಗುವುದರಿಂದಾಗಿ ಸಮಾಧಿ, ಇದು ಏಕ ವಿಷಯದ ಮೇಲೆ ಚಿತ್ತದಿಂದ ಕೇಂದ್ರೀಕೃತವಾಗಿರುವುದರಿಂದಾಗಿ, ಚಿತ್ತದ ಸಹವತರ್ಿಯಾಗಿ ಸರಿಯಾಗಿ (ಸಮ್ಮಾ) ಸಮವಾಗಿ (ಸಮಂ) ಚದುರದೆ ಹಾಗು ಚೆಲ್ಲಾಪಿಲ್ಲಿಯಾಗದೆ ಏಕಾಗ್ರವಾಗುವುದರಿಂದಾಗಿ ಸಮಾಧಿ ಎನಿಸುತ್ತದೆ.

3. ಸಮಾಧಿಯ ಲಕ್ಷಣ ಕ್ರಿಯೆ, ವ್ಯಕ್ತತೆ ಯಾವುವು? ತತ್ಕ್ಷಣದ ಕಾರಣವೇನು?

ಸಮಾಧಿಯು ಚಿತ್ತ ಏಕಾಗ್ರತೆಯ ಸ್ಥಿತಿಯಾಗಿದೆ. ಇಲ್ಲಿ ಒಂದು ವಿಷಯದ ಮೇಲೆ ಪೂರ್ಣ ಏಕಾಗ್ರವಹಿಸಿ ಮಿಕ್ಕೆಲ್ಲದರಿಂದ ವಿಮುಖರಾಗುತ್ತೇವೆ. ಇದಕ್ಕೆ ಪಾಳಿಯಲ್ಲಿ ಬಹಳಷ್ಟು ಸಮಾನಾರ್ಥಕ ಪದಗಳಿವೆ. ಝಾನ/ಧ್ಯಾನ/ಭಾವನ/ಸಮಾಪತ್ತಿ ಇತ್ಯಾದಿ.
ಎಲ್ಲಾ ಕುಶಲ ಸ್ಥಿತಿಗಳಿಗೆ ಸಮಾಧಿಯೇ ನಾಯಕವಾಗಿದೆ. ಇಲ್ಲಿ ಒಂದೇ ವಿಷಯ ವಸ್ತುವಿನ ಮೇಲೆ ಮನಸ್ಸು ಮತ್ತು ಎಲ್ಲಾ ಮಾನಸಿಕ ಕುಶಲ ಸ್ಥಿತಿಗಳು ಏಕಾಗ್ರವಾಗುವುದರಿಂದ ಇದಕ್ಕೆ ಕುಶಲ ಸ್ಥಿತಿಗಳ ಸಮಗ್ರತೆ ಎನ್ನುವೆವು. ಎಲ್ಲಾ ಮಾನಸಿಕ ಸ್ಥಿತಿಗಳು ಬಾಗುವುದರಿಂದ, ಹಿಂಬಾಲಿಸುವುದರಿಂದ, ಕೇಂದ್ರೀಕೃತವಾಗುವುದರಿಂದ ಸಮವಾಗಿ, ಸರಿಯಾಗಿ, ಏಕ ವಿಷಯದ ಮೇಲೆ ಹರಿಸುವುದರಿಂದ ಇದು ಸಮಾಧಿಯಾಗಿದೆ.
ಸಮಾಧಿಯ ಲಕ್ಷಣ : ಸಮಾದಿಯ ಲಕ್ಷಣವೇನೆಂದರೆ ನೆಲಸುವಿಕೆ ಮತ್ತು ಚದುರಿ ಹೋಗದಿರುವಿಕೆ.
ಸಮಾಧಿಯ ಕ್ರಿಯೆ : ಸಮಾದಿಯ ಕ್ರಿಯೆಯೇ ಚದುರುವುದನ್ನು ತೆಗೆದುಹಾಕುವಿಕೆ.
ಸಮಾಧಿಯ ವ್ಯಕ್ತತೆ : ಸಮಧಿಯು ಚಿತ್ತದ ಅಚಲತೆಯಿಂದ  ವ್ಯಕ್ತವಾಗುತ್ತದೆ.
ಸಮಾಧಿಗೆ ತತಕ್ಷಣದ ಕಾರಣ : ಸಮಾಧಿಗೆ ತತ್ಕ್ಷಣದ ಕಾರಣವೇನೆಂದರೆ ಆನಂದಿಸುವಿಕೆ. ಆನಂದ, ಉತ್ಸಾಹದಿಂದ ಏಕಾಗ್ರವಾದಾಗ ಚಿತ್ತವು ಕಶ್ಮಲಗಳಿಂದ ಮುಕ್ತವಾಗುತ್ತದೆ. ಹೀಗೆ ಯಾವುದಕ್ಕೂ ಅವಲಂಬಿತವಾಗದೆ, ಅಚಲವಾಗಿ, ಅಭಾಧಿತವಾಗಿ, ತಡೆಗಳಿಂದ ದೂರವಾಗಿ, ಏಕವಾಗಿ, ಸ್ಥಿರವಾಗಿ, ಶಾಂತಿ ಮತ್ತು ಸುಖಗಳಿಂದ ಮನಸ್ಸು ಕೇಂದ್ರೀಕೃತವಾಗಿ ಸಮನ್ವಯವಾಗಿ, ವರ್ತಮಾನದಲ್ಲಿ ನೆಲೆಸಿ, ವಿಹರಿಸುವಂತಹುದೇ ಸಮಾಧಿಯಾಗಿದೆ.

4. ಎಷ್ಟು ವಿಧದ ಸಮಾಧಿಗಳಿವೆ ?

1. ಒಂದು ವಿಧದಲ್ಲಿ ಹೇಳುವುದಾದರೆ ಸಮಾಧಿಯು ಬೇರೆಡೆ ಹಂಚಿಹೋಗದಿರುವಂತಹ (ಚದುರದೆ) ಇರುವಂತಹ ನಿಶ್ಚಲತೆಯ ಲಕ್ಷಣವನ್ನು ಹೊಂದಿದೆ.
ಎರಡು ವಿಧದ ಸಮಾಧಿಗಳು:
2. ಉಪಚಾರ (ಚಿಂತನಾಯುತ ಧ್ಯಾನ) ಮತ್ತು ಅಪನ್ನ (ಆಳ ಧ್ಯಾನ) ಎಂಬ ಎರಡು ವಿಧದ ಸಮಾಧಿಗಳು.
3. ಲೋಕಿಯ (ಲೌಕಿಕ) ಮತ್ತು ಲೋಕೋತ್ತರ (ನಿಬ್ಬಾಣಗಾಮಿ) ಎಂಬ ಎರಡು ವಿಧದ ಸಮಾಧಿಗಳು.
4. ಪೀತಿ (ಆನಂದ) ಯುತ ಸಮಾಧಿ ಮತ್ತು ನಿಪ್ಪೀತಿ (ಆನಂದರಹಿತ) ಸಮಾಧಿಗಳು.
5. ಸುಖಯುತ ಸಮಾಧಿ ಮತ್ತು ಉಪೇಕ್ಖಾ (ಸಮಚಿತ್ತತೆ) ಯುತ ಸಮಾಧಿಗಳು.
ಮೂರು ವಿಧದ ಸಮಾಧಿಗಳು:
6. ಹೀನ ಸಮಾದಿ (ಮೊದಲ ಹಂತ), ಮಧ್ಯಮ ಸಮಾಧಿ (ಅಭಿವೃದ್ಧಿ ಹಂತ) ಮತ್ತು ಉತ್ತಮ ಸಮಾಧಿ (ಪ್ರಾವೀಣ್ಯತೆಯ ಹಂತ).
7. ವಿತಕ್ಕ ಮತ್ತು ವಿಚಾರ ಇತ್ಯಾದಿಯುತ ಸಮಾಧಿ.
8. ಸುಖ ಇತ್ಯಾದಿಯುತ ಸಮಾಧಿ.
9. ಪರಿಮಿತ (ಚತುರ್ಥ ಸಮಾಧಿಯವರೆಗೆ), ಉದಾತ್ತ (ಅರೂಪ ಧ್ಯಾನ), ಪರಿಮಾಣಕ್ಕೆ ಅತೀತವಾದ ಸಮಾಧಿಗಳು. (ವಿಪಸ್ಸನ).
ನಾಲ್ಕು ವಿಧದ ಸಮಾಧಿಗಳು:
10. ಕಷ್ಟಕರವಾದ ಮುನ್ನಡೆಯುತ ಸಮಾಧಿ, ಮಂದಯುತವಾದ ಅಭಿಜ್ಞಾಕಾರಿಯಾದ ಸಮಾಧಿಗಳು; ಕಷ್ಟಕರವಾಗಿ ಮುನ್ನಡೆದರೂ, ಕ್ಷಿಪ್ರವಾಗಿ ಅಭಿಜ್ಞಾ; ಸುಲಭವಾಗಿ ಮುನ್ನಡೆಯಾದರೂ ಮಂದಯುತವಾದ ಅಭಿಜ್ಞಾ; ಸುಲಭವಾಗಿ (ಸಮಥಾ ಧ್ಯಾನದಿಂದ ಸುಲಭವಾಗಿ ಮುನ್ನಡೆ ದೊರಕುವುದು) ಮುನ್ನಡೆ ಹಾಗು ಕ್ಷಿಪ್ರವಾಗಿ (ವಿಪಶ್ಶನದಿಂದ ಕ್ಷಿಪ್ರವಾಗಿ ಅಭಿಜ್ಞಾ ಪ್ರಾಪ್ತಿಯಾಗುವುದು) ಅಭಿಜ್ಞಾ ಪ್ರಾಪ್ತಿ - ಹೀಗೆ ನಾಲ್ಕು ವಿಧಗಳು.
11. ಪರಿಮಿತ ವಿಷಯದೊಂದಿಗೆ ಪರಿಮಿತವಾದ ಸಮಾಧಿ
ಪರಿಮಿತ ವಿಷಯದೊಂದಿಗೆ ಅಪರಿಮಿತವಾದ ಸಮಾಧಿ
ಅಪರಿಮಿತ ವಿಷಯದೊಂದಿಗೆ ಅಪರಿಮಿತವಾದ ಸಮಾಧಿ
ಅಪರಿಮಿತ ವಿಷಯದೊಂದಿಗೆ ಪರಿಮಿತವಾದ ಸಮಾಧಿ ಹೀಗೆ ನಾಲ್ಕು ವಿಧಗಳು.
12. ಧ್ಯಾನಾಂಗದ ಮೂಲಕ ಒಂದರಿಂದ ನಾಲ್ಕನೆಯ ಹಂತದ ಸಮಾಧಿಗಳು.
13. . ಕ್ಷೀಣಭಾಗಿತ್ವ (ಹಾನಭಾಗಿಯಾ) (ಪಂಚ ನಿವರಣಗಳ ನಿವಾರಣೆ).
. ಸ್ಥಿತಿಭಾಗಿತ್ವ (ಅತಿಭಾಗಿಯೋ) (ಪ್ರಥಮ ಸಮಾಧಿಯಲ್ಲಿ ಸ್ಥಿರತೆ).
. ವಿಶೇಷಭಾಗಿಯಾ (ಚತುರ್ಥದವರೆಗೆ ಪ್ರಾವೀಣ್ಯತೆ)
ತ. ತೀಕ್ಷ್ಣಗ್ರಾಹಕ ಭಾಗಿತ್ವ ನಿಬ್ಬೇದ ಭಾಗಿಯೋ (ಸ್ಥಿತಿಗಳಲ್ಲಿ ವಿಕರ್ಷಣೆ ಸಾಧನೆ).
14. ಕಾಮವಚರಾದಿ ಕ್ಷೇತ್ರ ಇತ್ಯಾದಿ ನಾಲ್ಕು ವಿಧಗಳು:
(ಅ) ಇಂದ್ರೀಯ ವಿಷಯಗಳೊಂದಿಗೆ ಏಕಾಗ್ರತೆ, (ಆ) ರೂಪ ಸಮಾಧಿ (ಇ) ಅರೂಪ ಸಮಾಧಿ (ಈ) ಅಪರಿಯಾ ಪನ್ಹೊ ಸಮಾಧಿ (ವಿಪಶ್ಶನದಿಂದ ಮಾರ್ಗಫಲ ಮತ್ತು ನಿರೋಧ ಸಮಾಧಿ).
15. ಅದಿಪತ್ಯ ವಿಧಗಳು: (ಅ) ಇಚ್ಛಾಪ್ರಧಾನ ಸಮಾಧಿ (ಆ) ವಿರಿಯಾ ಪ್ರಧಾನ ಸಮಾಧಿ (ಇ) ಚಿತ್ತ (ಏಕಾಗ್ರತೆ) ಪ್ರಧಾನ ಸಮಾದಿ (ಈ) ಮಿಮಾಂಸ (ಅನ್ವೇಷಣೆ) ಪ್ರಧಾನ ಸಮಾಧಿ
ಪಂಚ ವಿಧದ ಸಮಾಧಿಗಳು:
16. ಐದು ಹಂತದ ಐದು ವಿಧದ ಸಮಾಧಿಗಳು

ಸಮಾಧಿ ಮಾಲಿನ್ಯ ಹಾಗು ಸಮಾಧಿ ವಿಶುದ್ಧಿ:

ಯಾವುದರಿಂದ ಸಮಾಧಿ ಮಾಲಿನ್ಯವಾಗುವುದು ಮತ್ತು ಯಾವುದರಿಂದಾಗಿ ವಿಶುದ್ಧಿಯಾಗುವುದು?
ವಿಭಂಗದ ಪ್ರಕಾರ ಹಾನಭಾಗಿಯೋ (ಕ್ಷೀಣ ಬಾಗಿತ್ವ) ದಿಂದಲೇ ಮಲೀನವಾಗುತ್ತದೆ ಹಾಗು ವಿಸೇಸ ಬಾಗಿಯೋ (ವೈಶಿಷ್ಟ ಬಾಗಿಯೋ) ದಿಂದಲೇ ವಿಶುದ್ಧಿಯಾಗುವುದು (ವಿಭಂಗ 343).
ಕ್ಷೀಣಬಾಗಿತ್ವ ಎಂದರೆ ಹೀಗೆ ಅರ್ಥ ಮಾಡಿಕೊಳ್ಳಬೇಕು: ಯಾವಾಗ ಒಬ್ಬನು ಪ್ರಥಮ ಸಮಾಧಿ ಪ್ರಾಪ್ತಿ ಮಾಡುವಾಗ ಕಾಮುಕತೆಯ ಸಂಜ್ಞೆಯೊಂದಿಗೆ ಹಾಗು ಅದೇರೀತಿಯ ಗಮನಹರಿಸುವಿಕೆಯಿಂದ ಪ್ರಾಪ್ತಿ ಮಾಡಿದರೆ ಆತನ ಪ್ರಜ್ಞಾವು ಕ್ಷೀಣಬಾಗಿತ್ವ ದಿಂದ ಕೂಡಿದೆ ಎಂದು ಅಥರ್ೈಸಿಕೊಳ್ಳಬೇಕು. ವೈಶಿಷ್ಟ ಬಾಗಿತ್ವ (ವಿಸೇಸಬಾಗಿಯೋ) ಎಂದರೆ ಹೀಗೆ ಅರ್ಥಮಾಡಿಕೊಳ್ಳಬೇಕು: ವಿತರ್ಕವಿಲ್ಲದ ಸಂಜ್ಞೆಯಿಂದ ಮತ್ತು ಆ ರೀತಿಯ ಗಮನಹರಿಸುವಿಕೆಯಿಂದಲೇ ಸಮಾಧಿ ಪ್ರಾಪ್ತಿ ಮಾಡಿದರೆ ಆತನ ಪ್ರಜ್ಞಾವು ವಿಶೇಷ ಬಾಗತ್ವ (ವೈಶಿಷ್ಟ/ವಿಸೇಸ) ದಿಂದ ಆಗಿದೆ ಎಂದು ಅರ್ಥಮಾಡಿಕೊಳ್ಳಬೇಕು (ವಿಭಂಗ 330).

ಸಮಾಧಿಯ ವಿಕಾಸ ಹೇಗೆ ?

ಸಮಾಧಿಯ ಅಭಿವೃದ್ಧಿಯು ಆರ್ಯರ ಮಾರ್ಗದೊಂದಿಗೆ ಮಿಶ್ರಿತವಾಗಿದೆ. ಇಲ್ಲಿ ಎರಡು ವಿಧದ ಸಮಾಧಿಯೊಂದಿಗೆ ವಿವರಿಸಲಾಗಿದೆ. ಮೊದಲಿಗೆ ಲೋಕಿಯ ಸಮಾಧಿಗಳ ವಿವರಣೆಯಿದೆ. ಇದನ್ನು ಸಾಧಿಸುವ ಭಿಕ್ಷು (ಸಾಧಕ) ಶೀಲದಲ್ಲಿ ಸುಭದ್ರವಾಗಿ ನಿಂತಿರುವವನಾಗಿರಬೇಕು. ಅದೆಲ್ಲವನ್ನು ಈ ಹಿಂದೆಯೇ ವಿವರಿಸಲಾಗಿದೆ. ಆತನು 10 ಅಡಚಣೆಗಳನ್ನು ಮೀರಿ ಹೋಗಬೇಕು. ನಂತರ ಆತನು ಕಲ್ಯಾಣಮಿತ್ರನ ಬಳಿಗೆ ಬಂದು ಆತನಿಂದ ಧ್ಯಾನದ ವಿಷಯವನ್ನು ಕೇಳಿ, 40 ಧ್ಯಾನವಿಷಯಗಳಲ್ಲಿ ತನ್ನ ವ್ಯಕ್ತಿತ್ವಕ್ಕೆ, ಸ್ವಭಾವಕ್ಕೆ ಸರಿಹೊಂದುವ ಧ್ಯಾನ ವಿಷಯವನ್ನು ಸ್ವೀಕರಿಸಿ, ನಂತರ ಆತನು ಸಮಾಧಿಗೆ ಅಡ್ಡಿಯಾಗುವ ವಿಹಾರವನ್ನು ತೊರೆದು ತನಗೆ ಹಿತವಾಗುವ ಸ್ಥಳದಲ್ಲಿ ನೆಲೆಸಿ ಚಿಕ್ಕ ಪುಟ್ಟ ಅಡ್ಡಿಗಳನ್ನು ನಿವಾರಿಸಿಕೊಂಡು ಸಮಾಧಿ ವೃದ್ಧಿಗೆ ಕಾರಣವಾಗುವ ಎಲ್ಲಾ ಅಭ್ಯಾಸಗಳನ್ನು ಮಾಡಬೇಕು.

ಹತ್ತು ಅಡಚಣೆಗಳ ವರ್ಣನೆ

ಇಲ್ಲಿ ಭಿಕ್ಖು (ಸಾಧಕನು) ತನಗೆ ಅಡ್ಡಿಯಾಗುವಂತಹ ಅಡಚಣೆಯಾಗುವಂತಹ ಈ ಹತ್ತನ್ನು ಮೀರಿ ಹೋಗಬೇಕು. ಆ ಹತ್ತು ಅಡಚಣೆಗಳೆಂದರೆ: ವಾಸಸ್ಥಳ, ಕುಲ, ಲೋಭ, ಗಣ ಮತ್ತು ಐದನೆಯದೇ ಕಟ್ಟಡ. ಪ್ರಯಾಣ, ನೆಂಟರು, ರೋಗ, ಗ್ರಂಥಗಳು ಹಾಗು ಇದ್ದಿ (ಅತೀಂದ್ರಿಯ ಶಕ್ತಿಗಳು)ಯೇ ಹತ್ತನೆಯದು. ಈಗ ಪ್ರತಿಯೊಂದನ್ನು ವಿವರವಾಗಿ ಅರಿಯೋಣ.
1. ವಾಸಸ್ಥಳ: ಇಲ್ಲಿ ವಾಸಸ್ಥಳವೆಂದರೆ ಚಿಕ್ಕ ಒಳಕೋಣೆಯಾಗಿರಬಹುದು ಅಥವಾ ಒಂದು ಗುಡಿಸಲು ಆಗಿರಬಹುದು ಅಥವಾ ಇಡೀ ಭಿಕ್ಖು ವಿಹಾರವಾಗಿರಬಹುದು. ಆದರೆ ವಾಸಸ್ಥಳವು ಎಲ್ಲರಿಗೂ ಅಡಚಣೆಯಗುವುದಿಲ್ಲ. ಆದರೆ ಯಾರ ಮನಸ್ಸು ವಾಸಸ್ಥಳದ ಸುತ್ತಲು ಸದಾ ಹರಿದಾಡುತ್ತಿರುತ್ತದೋ ಅಂತಹವರಿಗೆ ಮಾತ್ರ ಇದು ಅಡಚಣೆಯಾಗಿರುತ್ತದೆ (ಕೆಲವರಿಗೆ ತಾವು ವಾಸಿಸುವ ಸ್ಥಳ ಇಷ್ಟವಿಲ್ಲದೆ ಹೋಗಬಹುದು. ಹೀಗಾಗಿ ಅದನ್ನು ದ್ವೇಷಿಸುತ್ತಾ ಯೋಚಿಸಬಹುದು ಅಥವಾ ಕೆಲವರಿಗೆ ತಾವು ವಾಸಿಸುವ ಸ್ಥಳವು ತುಂಬಾ ಇಷ್ಟವಾಗಬಹುದು. ಹೀಗಾಗಿ ಅದರ ಕುರಿತೇ ಯೋಚಿಸುತ್ತಾ, ಅದನ್ನು ಇನ್ನಷ್ಟು ಸಿಂಗರಿಸಲು ಯೋಚಿಸುತ್ತಾ, ಅದರ ಕುರಿತು ಮಾತನಾಡುತ್ತಾ, ಕಾಲಕಳೆಯುವುದು ವಾಸಸ್ಥಳದ ಅಡಚಣೆಯಾಗುತ್ತದೆ. ಅದನ್ನು ಅವರು ಮೀರಿ ಹೋಗಬೇಕಾಗುತ್ತದೆ.
2. ಕುಲ: ಕೆಲವರು ಭಿಕ್ಷುಗಳಾಗಿದ್ದರೂ ಅವರ ಕುಲ (ಕುಟುಂಬದವರ) ದವರನ್ನು ಕಂಡಾಗ ಸಂತೋಷಿಸುತ್ತಾನೆ, ಕುಟುಂಬದ ಸದಸ್ಯರಿಲ್ಲದೆ ಆಹಾರವೂ ಸೇವಿಸಲಾರರು, ನಿದ್ರಿಸಲಾರರು ಎಲ್ಲೂ ಹೋಗಲಾರರು. ಕೊನೆಗೆ ಸಾಧನೆಯನ್ನು ಮಾಡಲಾರರು. ಹೀಗಾಗಿ ಅಂತಹವರಿಗೆ ಕುಟುಂಬವು ಅಡಚಣೆಯಾಗಿದೆ. ಅವರು ಅಂತವನ್ನೆಲ್ಲಾ ಮೀರಬೇಕಾಗಿದೆ.
ಕೊರಂಡಕ ವಿಹಾರದಲ್ಲಿ ಸಾಮಣೇರನಿದ್ದನು. ಆತನು ತೀರ ಚಿಕ್ಕಂದಿನಲ್ಲಿಯೇ ಪಬ್ಬಜ್ಜ ಪಡೆದಿದ್ದನು. ತುಸು ದೊಡ್ಡವನಾದಮೇಲೆ ತನ್ನ ಸೋದರಮಾವನ (ಹಿರಿಯ ಭಿಕ್ಖುವಿನ) ಅಣತಿಯಂತೆ ತನ್ನ ತಾಯಿಯ ಬಳಿಯಲ್ಲೇ ವರ್ಷವಾಸಕ್ಕೆಂದು ಹೋಗಿ ಅಲ್ಲಿ ಮೂರು ತಿಂಗಳು ವಾಸಿಸಿ ಸಾಧನೆ ಮುಂದುವರಿಸಿದನು. ಆದರೂ ಸಹಾ ಒಂದು ದಿನವೂ ಸಹಾ ಆತನು ತಾನು ಆಕೆಯ ಪುತ್ರನೆಂದು ಪರಿಚಯಿಸಿಕೊಳ್ಳಲಿಲ್ಲ. ಈ ರೀತಿಯ ನಿವರ್ಿಕಾರತೆಯು ಅತ್ಯಂತ ಪ್ರಶಂಸನೀಯವಾಗಿದೆ.
3. ಲಾಭ: ಪುಣ್ಯಶಾಲಿ ಭಿಕ್ಷುವನ್ನು ಕಂಡಾಗ ಜನರು ಪ್ರವಾಹದಂತೆ ಮುಗಿಬೀಳುತ್ತಾರೆ. ಅವರನ್ನು ಪ್ರಶಂಸಿಸುತ್ತಾರೆ, ನಮಸ್ಕರಿಸುತ್ತಾರೆ, ಅವರಿಗೆ ಬೇಕಾದ ಪರಿಕರಗಳನ್ನು ನೀಡುತ್ತಾರೆ. ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ, ದರ್ಶನ ಮಾಡುತ್ತಾ ಪುನೀತರಾಗುತ್ತಾರೆ. ಆದರೆ ಆ ಭಿಕ್ಖುವಿಗೆ ಸದಾ ಈ ಬಗೆಯ ವಂದನೆ, ಆಹಾರ, ಪರಿಚಯ, ದಾನಾದಿಗಳ ಅವಕಾಶ ಹೀಗಾಗಿ ಆತನಿಗೆ ಸಾಧನೆ ಮಾಡಲು ಸಮಯವೇ ಇಲ್ಲದಂತಾಗಿ ಆತನಿಗೆ ಈ ಬಗೆಯ ಲಾಭವೇ ಅಡಚಣೆಯಾಗಿ ಆತನು ಇದನ್ನು ಮೀರಬೇಕಾಗುತ್ತದೆ.
4. ಗಣ (ವರ್ಗ): ವಿಹಾರದಲ್ಲಿ ಸುತ್ತಪಿಟಕದ ವಿದ್ಯಾಥರ್ಿಗಳ ಗಣಗಳಿರುತ್ತವೆ ಅಥವಾ ಅಭಿಧಮ್ಮದ ವಿದ್ಯಾಥರ್ಿಗಳ ಗಣಗಳಿರುತ್ತವೆ. ಹೀಗೆ ಅಲ್ಲಿದ್ದಾಗ ಹಿರಿಯರ ನಿದರ್ೆಶನಗಳು, ಪ್ರಶ್ನಿಸುವಿಕೆ, ಕಲಿಕೆ - ಹೀಗೆಯೇ ಕಾಲದ ಬಹುಪಾಲು ಸಮಯವು ನಷ್ಟವಾಗಿ ತಾಪಸಿಗಳ (ಧುತಾಂಗ) ಆಚರಣೆಯಾದ ಧ್ಯಾನಕ್ಕೆ ಸಮಯವಿಲ್ಲದಂತಾಗಿ ಆತನಿಗೆ ಈ ಗಣವೇ ಅಡಚಣೆಯಾಗಿ ಇದನ್ನು ಮೀರಿ ಹೋಗಬೇಕಾಗುತ್ತದೆ.
5. ಕಟ್ಟಡ: ವಿಹಾರಕ್ಕೆಂದು ಹೊಸ ಕಟ್ಟಡವು ನಿಮರ್ಾಣವಾಗುತ್ತಿದ್ದರೆ ಅಲ್ಲಿಯೂ ಸಹಾ ಭಿಕ್ಷುವು ಕೆಲಸ ಮಾಡಿಸಬೇಕಾಗುತ್ತದೆ ಅಥವಾ ನೇರವಾಗಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಆತನ ಬಹುಪಾಲು ಸಮಯವು ವ್ಯರ್ಥವಾಗಿ, ಈ ಕಟ್ಟಡದ ಅಡಚಣೆಯನ್ನು ಆತನು ಮೀರಿ ಹೋಗಬೇಕಾಗುತ್ತದೆ.
6. ಪ್ರಯಾಣ: ಪ್ರಯಾಣವೂ ಸಹಾ ಚಕ್ಷು ಇಂದ್ರಿಯದ ಲಾಲಸೆಯಾಗಿದೆ. ಪ್ರಯಾಣ ಮಾಡಿದಷ್ಟೂ ಮನಸ್ಸು ತೃಪ್ತಿಯಾಗುವುದಿಲ್ಲ. ಪ್ರಯಾಣದ ನಂತರ ಪ್ರಯಾಣದ ಸ್ಮೃತಿಯೇ ಮನಸ್ಸಿನಲ್ಲಿ ಆವರಿಸುತ್ತದೆ. ಹೀಗಾಗಿ ಧ್ಯಾನದಲ್ಲಿ ಚಿತ್ತ ನಿಲ್ಲಲಾರದು. ಧ್ಯಾನಿಗಳು ಅರಣ್ಯವನ್ನು ಆಯ್ಕೆಮಾಡುತ್ತಾರೆ. ಅಲ್ಲಿ ಪ್ರಾಪಂಚಿಕರು ಆನಂದಿಸಲಾರರು ಹಾಗು ಅಲ್ಲಿದ್ದು ಪ್ರಯಾಣದ ಅಡಚಣೆಯನ್ನು ಮೀರಿಹೋಗುತ್ತಾರೆ.
7. ಞ್ಞಾತಿ (ಬಂಧು): ವಿಹಾರದಲ್ಲಾದರೆ ಗುರು-ಶಿಷ್ಯರ ಬಾಂಧವ್ಯ, ಮನೆಯಲ್ಲಿದ್ದರೆ ತಂದೆ-ತಾಯಿಗಳ, ಬಂಧು-ಮಿತ್ರರು, ಸ್ನೇಹಿತರ ಮುಂತಾದ ಬಾಂಧವ್ಯವು ಧ್ಯಾನಿಗೆ ಪ್ರಧಾನ ಅಡಚಣೆಯಾಗುತ್ತದೆ. ಅವರೊಂದಿಗೆ ಮಾತುಕತೆ ಅಥವಾ ಕಾಯಿಲೆ ಬಿದ್ದಾಗ ಶ್ರೂಶುಷೆ ಇತ್ಯಾದಿಗಳಿಂದಾಗಿ ಸಮಯವನ್ನು ಧ್ಯಾನಕ್ಕೆ ಹೇರಳವಾಗಿ ನೀಡದಂತಾಗುತ್ತದೆ. ಆದ್ದರಿಂದಾಗಿ ಭಿಕ್ಷುವು ವಿಹಾರಗಳಿಗೆ, ಬಾಂಧವರಿಗೆ ಕರೆಯಲಾರರು ಹಾಗು ಅವರು ಬಂದರೂ ಅವರನ್ನು ಹೆಚ್ಚುಕಾಲ ಇರಿಸಿಕೊಳ್ಳಲಾರರು. ಆತನು ಈ ಅಡಚಣೆಯನ್ನು ಮೀರಿದಾಗಲೇ ಧ್ಯಾನದಲ್ಲಿ ಆಳವಾಗಿ ಇಳಿಯಬಲ್ಲನು.
8. ರೋಗ: ಯಾವುದೇ ರೋಗವಾದರೂ ರೋಗ ರೋಗವೇ. ರೋಗವು ಬಾಧಿಸುವಾಗಲೇ ಅದು ಪ್ರಧಾನ ಅಡಚಣೆಯಾಗಿ ಕಾಣುತ್ತದೆ. ಆದ್ದರಿಂದಾಗಿ ರೋಗ ಅತಿ ಚಿಕ್ಕದಾಗಿರುವಾಗಲೇ ಅದನ್ನು ಇಲ್ಲದಂತೆ ಮಾಡಿಕೊಳ್ಳಬೇಕು. ಬಾಧಿಸುವಾಗ ಸಮಚಿತ್ತತೆಯಿಂದ ಹಾಗು ಸಹನೆಯಿಂದ ಎದುರಿಸಬೇಕು. ರೋಗ ಬಾರದಂತೆ ಅಪಾರ ಮುನ್ನೆಚ್ಚರಿಕೆ ವಹಿಸಬೆಕು. ಪರರಿಗೆ ಬಂದಾಗಲೂ ಕೆಲವು ದಿನಗಳವರೆಗೂ ಅವರ ಶ್ರುಶೂಷೆ ಮಾಡಬೇಕು. ಆದರೆ ಕೇವಲ ಶ್ರುಶೂಷೆಯಲ್ಲೇ ಇರದೇ ಧ್ಯಾನದಲ್ಲಿ ಅಪಾರ ಸಂಯಮ ನೀಡಲು ಯತ್ನಿಸಬೇಕು.
9. ಗ್ರಂಥಗಳು (ಪುಸ್ತಕಗಳು): ಯಾರು ಕೇವಲ ಓದಿನಲ್ಲೇ ತಲ್ಲೀನರೋ ಅಥವಾ ಗ್ರಂಥಪಠಣ ಮಾಡುತ್ತಾ ನೆನಪಿಡಲು ಸದಾ ಯತ್ನಿಸುವರೋ ಅಂತಹವರಿಗೆ ಓದು ಸಹಾ ಪ್ರದಾನ ಅಡಚಣೆಯಾಗುವುದು. ಏಕೆಂದರೆ ಅವರಿಗೆ ಧ್ಯಾನಕ್ಕೆ ಸಮಯ ದೊರೆಯದೇ ಹೋಗುವುದು. ಸಾಕ್ಷಾತ್ಕಾರದಿಂದ ದೂರವೆ ಉಳಿಯುತ್ತಾರೆ. ಆದ್ದರಿಂದಾಗಿ ಅವರು ಈ ಓದುವಿಕೆಯ ಅಡಚಣೆಯನ್ನು ದಾಟಬೇಕು.
ರೇವತ ಥೇರನ ಜೀವನಶೈಲಿ : ರೇವತ ಎಂಬ ಥೇರನು ಮಜ್ಝಿಮನಿಕಾಯದ ಪ್ರವೀಣನಾಗಿದ್ದನು. ಒಮ್ಮೆ ತನ್ನ ಗುರುಗಳ ಬಳಿಗೆ ಬಂದು ಧ್ಯಾನ ವಿಷಯವನ್ನು ಯಾಚಿಸಿದನು. ಆಗ ಹಿರಿಯ ಥೇರನು ಹೀಗೆ ಕೇಳಿದನು: ಶಾಸ್ತ್ರಗಳಲ್ಲಿ ನೀನು ಹೇಗಿರುವೆ? ತಿಪಿಟಕದ ಯಾವುದರಲ್ಲಿ ನಿಷ್ಠನಾಗಿರುವೆ?
ನಾನು ಮಜ್ಜಿಮನಿಕಾಯದಲ್ಲಿ ತಲ್ಲೀನನಾಗಿದ್ದೇನೆ ಭಂತೆ.
ಓಹ್, ಮಜ್ಝಿಮನಿಕಾಯವು ಅತ್ಯಂತ ಜವಾಬ್ದಾರಿಯುತ ಕಾರ್ಯವಾಗಿದೆ. ಯಾವಾಗ ನೀನು 50 ಸುತ್ತಗಳನ್ನು ಕಂಠಪಾಠ ಮಾಡಿರುವೆಯೋ, ಆಗ ಮತ್ತೆ 50ನ್ನು ಎದುರಿಸಬೇಕಾಗುತ್ತದೆ. ಅದನ್ನು ಪೂರ್ಣಗೊಳಿಸಿದರೆ ಉಳಿದ 50ನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ನೀನು ಧ್ಯಾನ ವಿಷಯವನ್ನು ಎಂದು ಸ್ವೀಕರಿಸುವೆ? ಎಂದು ಪ್ರಶ್ನಿಸಿದರು.
ಆಗ ರೇವತ ಥೇರನು ಯೋಚಿಸಿ ಹೀಗೆ ನುಡಿದನು: ಭಂತೆ, ಯಾವಾಗ ನಿಮ್ಮಿಂದ ನಾನು ಧ್ಯಾನ ವಿಷಯವನ್ನು ಸ್ವೀಕರಿಸುವೆನೋ ಮತ್ತು ಶಾಸ್ತ್ರಗಳ ಕಡೆ ನೋಡಲಾರೆ.
ರೇವತನು ಧ್ಯಾನ ವಿಷಯ ಸ್ವೀಕರಿಸಿದ ನಂತರ 19 ವರ್ಷಗಳ ಕಾಲ ಯಾವುದೇ ಕಂಠಪಾಠ ಮಾಡಲಿಲ್ಲ. 20ನೇ ವರ್ಷದ ಹೊತ್ತಿಗೆ ಅರಹಂತತ್ವವನ್ನು ಪ್ರಾಪ್ತಿಮಾಡಿದನು. ಕಂಠಪಾಠಕ್ಕೆಂದು ಬಂದ ಭಿಕ್ಖುಗಳಿಗೆ ಒಂದು ಅಕ್ಷರವೂ ತಪ್ಪಿಲ್ಲದೆ ಪೂರ್ಣ ಮಜ್ಝಿಮನಿಕಾಯ ಉಚ್ಚರಿಸಿ ಒಪ್ಪಿಸಿದನು.
*  *  *
ಮಹಾನಾಗ ಥೇರ ಸಹಾ 18 ವರ್ಷ ಮೂರು ತಿಪಿಟಕಗಳನ್ನು ಪಕ್ಕಕ್ಕಿಟ್ಟು ಧ್ಯಾನದಲ್ಲಿಯೇ ತಲ್ಲೀನನಾಗಿ ಫಲಪ್ರಾಪ್ತಿ ಗಳಿಸಿ ನಂತರ ಭಿಕ್ಷುಗಳಿಗೆ ಧಾತುಕಥಾ ತಪ್ಪಿಲ್ಲದೆ ವಿವರಿಸಿ ಅಚ್ಚರಿಯನ್ನುಂಟುಮಾಡಿದನು.
ಹೀಗೆ ಧ್ಯಾನಕ್ಕೆ, ಫಲಪ್ರಾಪ್ತಿಗೆ ಅಡ್ಡಿಯಾದಾಗ ಗ್ರಂಥ ಅಧ್ಯಯನವನ್ನು ಪಕ್ಕಕ್ಕಿಟ್ಟು ಬಹಳಷ್ಟು ಜನ ವಿವೇಕಿಗಳು ಧ್ಯಾನ ಸಾಧನೆ ಮಾಡಿದ್ದಾರೆ ಹಾಗು ಗುರಿಯನ್ನು ಮುಟ್ಟಿದ್ದಾರೆ. ಆದರೆ ಕೆಲವರು ಕಾಲಕಾಲಕ್ಕೆ ಮಾತ್ರ ಅಧ್ಯಯನ ನಡೆಸಿ ಉಳಿದ ಕಾಲ ಧ್ಯಾನದಲ್ಲಿಯೇ ತೊಡಗಿಸಿಕೊಂಡು, ಸಮತೋಲನದಿಂದ ಸಿದ್ಧಿ ಗಳಿಸಿದ್ದಾರೆ. (ಉದಾ: ಧಮ್ಮರಕ್ಖಿತ) ಅಂತಹವರಿಗೆ ಗ್ರಂಥ ಅಧ್ಯಯನವು ಅಡ್ಡಿ-ಅಡಚಣೆಯಾಗುವುದಿಲ್ಲ.

10. ಇದ್ದಿಶಕ್ತಿಗಳು:

 ಇದ್ದಿ ಎಂದರೆ ಧ್ಯಾನದಿಂದ ಗಳಿಸಿದ ಅತೀಂದ್ರಿಯ ಶಕ್ತಿಗಳಾಗಿವೆ. ಇವು ಸಮಥಾ ಧ್ಯಾನದಿಂದ ಸಿಗುವವಾಗಿದ್ದು, ಇದ್ದಿಗಳನ್ನು ನಿಯಂತ್ರಿಸುವುದು ಅತಿಕಷ್ಟಕರವಾಗಿವೆ. ಏಕೆಂದರೆ ಪುಟ್ಟ ಮಗುವಿನ ಹಾಗೆ ಸಣ್ಣ ತಪ್ಪೂ ಸಹ ಅವುಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಮೇಲಾಗಿ ಅವುಗಳಿಂದ ಸಿಗುವ ರಂಜನೆ ಪಞ್ಞಾ ವಿಕಾಸಕ್ಕೆ ಅಡ್ಡಿಯಾಗುವುದು. ಆದರೆ ಸಮ್ಮಾ ಧ್ಯಾನಕ್ಕೆ ಅಡ್ಡಿಯಾಗಲಾರದು. ಹೀಗಾಗಿ ನಿಬ್ಬಾಣಗಾಮಿಯು ಇವನ್ನು ಮೀರಿ ಹೋಗಬೇಕು.

ಕಮಟ್ಠಾನ ನೀಡುವ ಕಲ್ಯಾಣಮಿತ್ರನ ವರ್ಣನೆ

ತನ್ನ ಉನ್ನತಿಗಾಗಿ ಧ್ಯಾನ ವಿಷಯ ನೀಡುವ ಕಲ್ಯಾಣಮಿತ್ರನ ಬಳಿಗೆ ಹೋಗಬೇಕು.
ಧ್ಯಾನ ವಿಷಯಗಳು ಎರಡು ವಿಧದ್ದಾಗಿವೆ: 1. ಸರ್ವತ್ರ ಧ್ಯಾನವಿಷಯ (ಕಮ್ಮಟ್ಟನ). 2. ಪಾರಿಹಾರಿಯ (ವಿಶೇಷ) ಕಮ್ಮಟ್ಟನ (ಧ್ಯಾನ ವಿಷಯ).
ಇವೆಂದರೆ: (ಅ) ಮೆತ್ತ ಧ್ಯಾನ, (ಆ) ಮರಣಾನುಸ್ಸಮೃತಿ, (ಇ) ಅಶುಭ ಧ್ಯಾನ.
ಮೆತ್ತಾ ಧ್ಯಾನದಿಂದಾಗಿ ದ್ವೇಷವು ಪೂರ್ಣವಾಗಿ ಅಳಿಸಿಹೋಗುತ್ತದೆ. ಮರಣಾನುಸ್ಮೃತಿಯಿಂದ ಎಲ್ಲಿ ಸತ್ತುಹೋಗುವೆನೊ ಎಂಬ ಭೀತಿಯಿಂದ ಪ್ರಯತ್ನಶೀಲತೆಯು ಉತ್ತುಂಗಕ್ಕೆ ಏರಿ ಅಂಟಿಕೊಳ್ಳದವನಾಗಿ ಗುರಿ ತಲುಪುತ್ತಾನೆ. ಅಶುಭ ಧ್ಯಾನದಿಂದಾಗಿ ಲೋಭವು ಬಹುಪಾಲು ಕ್ಷೀಣಿಸಿ ದಿವ್ಯವಾದ ಆಕರ್ಷಣ ದೃಶ್ಯಗಳು ಸಹಾ ಲೋಭವನ್ನು ಪ್ರಚೋದಿಸಲಾರವು. ಇವುಗಳ ಪೂರ್ಣ ವಿವರ ಮುಂದಿನ ಅಧ್ಯಾಯದಲ್ಲಿ ಸಿಗಲಿದೆ.
ಪಾರಿಹಾರಿಯ ಕಮ್ಮಟ್ಟನ (ವಿಶೇಷ ಧ್ಯಾನ ವಿಷಯ)ವೆಂದರೆ ವ್ಯಕ್ತಿಯ ಪ್ರಸನ್ನತೆಗೆ, ಸ್ವಭಾವಕ್ಕೆ, ವ್ಯಕ್ತಿತ್ವಕ್ಕೆ ತಕ್ಕಂತೆ ಆತನ ಪೂರ್ಣ ವಿಕಾಸತೆಗೆ, ಪೂರ್ಣ ಪರಿಶುದ್ಧತೆಗೆ ಸಹಾಯವಾಗುವಂತೆ ನೀಡುವ ವಿಶೇಷ ಧ್ಯಾನಗಳಾಗಿವೆ. ಇದರಿಂದಾಗಿ ಆತನ ಗುರಿಮುಟ್ಟಲು ಸಹಾಯಕವಾಗುವುದು. ಹೀಗಾಗಿ ಇವೆರಡು ರೀತಿಯ ಧ್ಯಾನ ವಿಷಯಗಳನ್ನು ನೀಡುವ ಗುರುವೇ (ಧ್ಯಾನಿಯೇ) ಕಲ್ಯಾಣಮಿತ್ರ.

ಕಲ್ಯಾಣಮಿತ್ರನ ಲಕ್ಷಣಗಳು:

ಆತನು ಗೌರವಿಸಲ್ಪಡುತ್ತಾನೆ; ಪ್ರೀತಿಸಲ್ಪಡುತ್ತಾನೆ, ಅಂತಹುದಕ್ಕೆ ಸುಪಾತ್ರನು, ಉದಾತ್ತವಾದ ಧಮ್ಮಾನುಸಾರವಾಗಿ ಮಾತನಾಡುವವನು, ಮಾತುಗಳನ್ನು ಸಹಿಸುವವನು, ಗಂಭೀರವಾದ ಪ್ರಾಜ್ಞನು, ಕೆಟ್ಟ ಕಾರ್ಯಗಳನ್ನು ಮಾಡದವನು, ಕಾರಣವಿಲ್ಲದೆ ಪ್ರೇರೇಪಿಸದವನು ಆಗಿರುತ್ತಾನೆ.
ಆನಂದ, ನನ್ನಂತಹ ಕಲ್ಯಾಣಮಿತ್ರನೇ ಜನ್ಮಕಾರಕರಾದಂತಹ ಜೀವಿಗಳಿಗೆ ಜನ್ಮದಿಂದ ವಿಮುಕ್ತಿ ನೀಡಲು ಕಾರಣಕರ್ತನಾಗುತ್ತಾನೆ.
ಬುದ್ಧ ಭಗವಾನರೇ ಕಲ್ಯಾಣಮಿತ್ರರ ಸಕಲ ಗುಣಗಳನ್ನು ಹೊಂದಿರುತ್ತಾರೆ. ಹೀಗಾಗಿ ಭಗವಾನರು ಜೀವಂತವಾಗಿದ್ದಾಗ ಅವರ ಬಳಿಯಲ್ಲಿಯೇ ಧ್ಯಾನವಿಷಯ ಪಡೆಯುವುದು ಅತ್ಯುತ್ತಮ ಆಯ್ಕೆಯಾಗಿದೆ. ಅವರ ಪರಿನಿಬ್ಬಾಣದ ನಂತರ ಅಥವಾ ಅವರ ಅನುಪಸ್ಥಿತಿಯಲ್ಲಿ ಭಗವಾನರ 80 ಅಗ್ರಶ್ರಾವಕರು ಜೀವಂತವಾಗಿದ್ದರೆ ಅವರಿಂದ ಪಡೆಯಬಹುದಾಗಿದೆ. ಅಥವಾ ಅನುಪಸ್ಥಿತಿಯಲ್ಲಿ ಆಸವಕ್ಷಯಿತ ಅರಹಂತರು ಉತ್ತಮರಾಗಿರುತ್ತಾರೆ. ಅರಹಂತರು ಬರಿದಾದ ಕಾಲದಲ್ಲಿ, ಅನಾಗಾಮಿಯು ಧ್ಯಾನ ವಿಷಯ ನೀಡಲು ಅರ್ಹರಾಗಿತ್ತಾರೆ. ಅವರಿಲ್ಲದ ಪಕ್ಷದಲ್ಲಿ ಸಕದಾಗಾಮಿ, ಅವರೂ ಇಲ್ಲದ ಪಕ್ಷದಲ್ಲಿ ಸೋತಪನ್ನರು ಧ್ಯಾನ ವಿಷಯ ನೀಡಲು ಸಮರ್ಥರಾಗಿರುತ್ತಾರೆ. ಸೋತಪನ್ನರು ಸಿಗಿದಿದ್ದಾಗ ಧ್ಯಾನ ಸಮಾಧಿಗಳನ್ನು ಪ್ರಾಪ್ತಿಮಾಡಿದ ತ್ರಿಪಿಟಕ ಜ್ಞಾನಿಯ ಸಮರ್ಥ ವ್ಯಕ್ತಿಯಾಗಬಲ್ಲನು. ಅಥವಾ ಎರಡು ಪಿಟಕ ಅಥವಾ ಒಂದು ಪಿಟಕ ಅಥವಾ ಒಂದು ನಿಕಾಯದಲ್ಲಿ ಪ್ರವೀಣನಾದ ಸಮಾಧಿಪ್ರಾಪ್ತನೂ ಅಥವಾ ಪ್ರಧಾನ ಧ್ಯಾನ ಸುತ್ತಗಳ ಪರಿಚಿತನೂ ಹಾಗು ಸಂಪ್ರದಾಯಕ್ಕೆ ಗೌರವಿಸುವವನು, ಗುರುಗಳ ಅಭಿಪ್ರಾಯದಂತೆ ಸಾಗುವವನು, ತನ್ನ ನಂಬಿಕೆಗಳನ್ನು ಪ್ರತಿಪಾದಿಸದವನು ಧ್ಯಾನ ವಿಷಯ ನೀಡಲು ಅರ್ಹನಾಗಿರುತ್ತಾನೆ. ಲಜ್ಜಾವಂತನು ಧಮ್ಮವನ್ನು ಕಾಪಾಡಬಲ್ಲನು, ಲಜ್ಜೆಯೇ ಕಾಪಾಡಬಲ್ಲದು, ಲಜ್ಜವಂತನೇ ಕಾಪಾಡಬಲ್ಲನು ಎಂದು ಮೂರುಸಾರಿ ಹಿಂದಿನ ಹಿರಿಯರೇ ಅರುಹಿದ್ದಾರೆ.
ವಿಹಾರದಲ್ಲಿ ಅಂತಹ ವ್ಯಕ್ತಿಯನ್ನು ಹುಡುಕಿ, ಸೇವೆ ಮಾಡಿ, ಆತನಿಂದ ಧ್ಯಾನ ವಿಷಯ ಪಡೆಯಬೇಕು. ಅಂತಹವನು ವಿಹಾರದಲ್ಲಿ ಇರದಿದ್ದಲ್ಲಿ ಆತನು ಎಲ್ಲಿ ವಾಸಿಸುವನೋ ಅಲ್ಲಿಗೆ ಹೋಗಿ ಪಡೆಯಬೇಕು. ಆ ಗುರುವಿನೊಂದಿಗೆ ಅಹಂಕಾರ ಪ್ರದರ್ಶನ ಮಾಡಬಾರದು, ವಿನಮ್ರನಾಗಿ, ಶಿಷ್ಯನ ಕರ್ತವ್ಯಗಳೆಲ್ಲವನ್ನು ಮಾಡಬೇಕು. ಆತನೊಂದಿಗೆ ಪ್ರಯಾಣ ಬೆಳೆಸಬೇಕು, ಪಿಂಡಪಾತ್ರೆ ಚೀವರಗಳನ್ನು ತಾನೇ ಹೊರಬೇಕು, ದಂತಕಡ್ಡಿಗಳನ್ನು ತಂದುಕೊಡಬೇಕು, ನೀರನ್ನು ನೀಡಬೇಕು, ವಿಶ್ರಾಮಕ್ಕೆ ಅನುಕೂಲ ಮಾಡಿಕೊಡಬೇಕು, ಕುಡಿಯಲು, ಸ್ನಾನ ಮಾಡಲು ನೀರಿನ ವ್ಯವಸ್ಥೆ ಮಾಡಬೇಕು. ಗುರುವು ದಣಿದಿದ್ದರೆ ಎಣ್ಣೆಮರ್ದನವನ್ನು ಮಾಡಬೇಕು. ತಾವಾಗಿಯೇ ನನಗೆ ಧ್ಯಾನ ವಿಷಯ ನೀಡಿ ಎಂದು ಕೇಳಬಾರದು. ಅಥವಾ ಬಂದ ದಿನವೇ ನನಗೆ ಧ್ಯಾನ ವಿಷಯ ನೀಡಿ ಎಂದು ಕೇಳಬಾರದು.
ಶಿಷ್ಯರ ಬಗ್ಗೆ ಭಗವಾನರು ಹೀಗೆ ನುಡಿದಿದ್ದಾರೆ: ಭಿಕ್ಷುಗಳೇ, ಶಿಷ್ಯನು ತನ್ನ ಕರ್ತವ್ಯಗಳನ್ನು ಸರಿಯಾಗಿ ಮಾಡಬೇಕು. ಆತನು ಮುಂಜಾನೆ ಗುರುವಿಗಿಂತ ಮುಂಚೆ ಏಳಬೇಕು, ಗುರುವಿಗೆ ದಂತ-ಕಡ್ಡಿಗಳನ್ನು, ಮುಖ ತೊಳೆಯಲು ನೀರು ಅಥವಾ ಧ್ಯಾನಕ್ಕೆ ನೀಡಿ ಸಿದ್ಧಪಡಿಸಬೇಕು. ಗುರುವಿನ ಪಾದರಕ್ಷೆಗಳನ್ನು ತೆಗೆಯಬೇಕು, ಅವರ ಚೀವರವನ್ನು ಸಿದ್ಧಪಡಿಸಬೇಕು, ಅವರಿಗೆ ಪೀಠವನ್ನು ಸಿದ್ಧಪಡಿಸಬೇಕು, ಅವರ ಪಾತ್ರೆಯನ್ನು ಸ್ವಚ್ಛಗೊಳಿಸಿ ಆಹಾರವನ್ನು ನೀಡಬೇಕು.
ಶಿಷ್ಯನು ಹೀಗೆ ತನ್ನ ಕರ್ತವ್ಯಗಳನ್ನು ಪೂರೈಸಿದ ನಂತರ ಸಂಜೆಗೆ ಗುರುವಿಗೆ ನಮಸ್ಕರಿಸಬೇಕು. ನೀನಿನ್ನು ಹೋಗಬಹುದು ಎಂದು ಹೇಳಿದಾಗಲೇ ಹೋಗಬೇಕು. ಯಾವಾಗ ಗುರುವು ಶಿಷ್ಯನಿಗೆ ನೀನೇಕೆ ಬಂದೆ ಎಂದು ಪ್ರಶ್ನಿಸಿದಾಗ, ಶಿಷ್ಯನು ಕಾರಣವನ್ನು ವಿನಂತಿಸಬೇಕು. ಒಂದುವೇಳೆ ಗುರುವು ಮುಂಜಾನೆ ಬಾ ಎಂದು ಹೇಳಿದರೆ ಶಿಷ್ಯನು ಹಾಗೇ ಮಾಡಬೇಕು. ಒಂದುವೇಳೆ ಆ ಸಮಯದಲ್ಲಿ ಶಿಷ್ಯರಿಗೆ ಅನಾರೋಗ್ಯ ಅಥವಾ ಇತರೆ ಕಾರಣಗಳಿಂದ ಹೋಗಲಾಗದಿದ್ದರೆ ಅದನ್ನು ಮುಂಚಿತವಾಗಿ ತಿಳಿಸಿ, ಹಾಗೆಯೇ ಬರುವ ಸಮಯವನ್ನು ತಿಳಿಸಬೇಕು. ಏಕೆಂದರೆ ಧ್ಯಾನದ ವಿಷಯವನ್ನು ಅಕಾಲದಲ್ಲಿ ವಿವರಿಸಿದಾಗ ಒಬ್ಬನು ಗಮನಹರಿಸದೆ ಹೋಗಬಹುದು.

ಚರ್ಯ ವರ್ಣನೆ (ಸ್ವಭಾವ/ವ್ಯಕ್ತಿತ್ವಗಳ ವರ್ಣನೆ)

ಇಲ್ಲಿ ಆರು ವಿಧದ ವ್ಯಕ್ತಿತ್ವ (ಸ್ವಭಾವ)ಗಳನ್ನು ವಿವರಿಸಲಾಗಿದೆ. ಅವೆಂದರೆ: 1. ರಾಗಚರ್ಯೆ, 2. ದ್ವೇಷಚರ್ಯೆ,
3. ಮೋಹಚರ್ಯೆ, 4. ಶ್ರದ್ಧಾಚರ್ಯೆ 5. ಬುದ್ಧಿಚರ್ಯೆ, 6. ವಿತಕ್ಕ ಚರ್ಯೆ (ಇಲ್ಲಿ ವ್ಯಕ್ತಿತ್ವಗಳನ್ನು ಧ್ಯಾನವಸ್ತು ನೀಡುವ ಉದ್ದೇಶಕ್ಕೆ ಅನುಗುಣವಾಗಿ ವಿಂಗಡಿಸಲಾಗಿದೆ, ಇದೇ ಅಂತಿಮವಲ್ಲ.)
ಕೆಲವರು ರಾಗವನ್ನು ಇತರ ನಾಲ್ಕಕ್ಕೆ (1. ರಾಗ ದ್ವೇಷ ಚರ್ಯೆ, 2. ರಾಗ ಮೋಹ ಚರ್ಯೆ, 3. ರಾಗ ದ್ವೇಷ, ಮೋಹ ಚರ್ಯೆ, 4. ದ್ವೇಷ, ಮೋಹ, ಚರ್ಯೆ) ಹಾಗೆಯೇ (ಅ) ಶ್ರದ್ಧಾಬುದ್ಧಿ ಚರ್ಯೆ, (ಆ) ಶ್ರದ್ಧಾವಿತರ್ಕ (ಇ) ಬುದ್ಧಿವಿತರ್ಕ,
(ಈ) ಶ್ರದ್ಧಾ ಬುದ್ಧಿ ವಿತರ್ಕ. ಹೀಗೆ ಒಟ್ಟು 8 ಚರ್ಯೆ ಹಾಗು ಮೊದಲು ಹೇಳಿದ ಆರನ್ನು ಸೇರಿಸಿ 14 ಚರ್ಯೆಗಳೆನ್ನುವರು.

ಆದರೆ ಈ ವಗರ್ಿಕರಣವನ್ನು ಒಪ್ಪಿದರೆ ಮತ್ತು ಇದೇರೀತಿಯಲ್ಲಿ ಪುನಃ ವಿಲೀನವಾಗಿ ಅಸಂಖ್ಯಾತ ರೀತಿಯಲ್ಲಿ ಚರ್ಯೆ (ಸ್ವಭಾವ)ಗಳು ಸಿಗುವವು. ಆದ್ದರಿಂದಾಗಿ ಸರಳ ರೀತಿಯಲ್ಲಿ ಚಿಂತನೆ ಮಾಡಲು ಹಾಗು ಸುಲಭವಾಗಿ ವ್ಯಕ್ತಿತ್ವ ಗುರುತಿಸಲು ಸಂಕ್ಷಿಪ್ತವಾಗಿ ಕೇವಲ ಅದನ್ನೇ ತೆಗೆದುಕೊಳ್ಳತಕ್ಕದ್ದು. ಅವೆಂದರೆ: ರಾಗಚರಿತನು, ದ್ವೇಷಚರಿತನು, ಮೋಹಚರಿತನು, ಶ್ರದ್ಧಾಚರಿತನು, ಬುದ್ಧಿಚರಿತನು ಹಾಗು ಮೋಹಚರಿತನು.
ಇಲ್ಲಿ ಶ್ರದ್ಧಾಚರಿತನು ರಾಗಚರಿತನೊಂದಿಗೆ ಕೆಲವು ವಿಷಯಗಳಲ್ಲಿ ಸಮಾನಾಂತರವಾಗಿ ಇರುತ್ತಾನೆ. ಏಕೆಂದರೆ ಲೋಭಿಯಲ್ಲಿ ಕುಶಲಕಮ್ಮಗಳು ಇದ್ದಾಗ ಶ್ರದ್ಧೆಯು ಬಲಿಷ್ಠವಾಗಿರುತ್ತದೆ. ಲೋಭಿಯು ಲೋಭದ ವಿಷಯಗಳಲ್ಲಿ ಹತ್ತಿರ ಇರುತ್ತಾನೆ. ಅನರ್ಥಕಾರಿ ವಿಷಯವಾದರೂ ಆಸಕ್ತನಾಗುತ್ತಾನೆ. ಆದರೆ ದೇಹದಂಡನೆ ಇಷ್ಟಪಡುವುದಿಲ್ಲ. ಅದೇರೀತಿಯಲ್ಲಿ ಶ್ರದ್ಧಾಚರಿತನು ಯಾವುದು ಹಿತಕಾರಿಯೋ ಅದರಲ್ಲಿ ಹತ್ತಿರ ಇರುತ್ತಾನೆ. ಹೇಗೆ ಲೋಭಿಯೂ ಇಂದ್ರಿಯ ವಿಷಯಗಳಲ್ಲಿ ಸುಖ ಹುಡುಕುವನೋ ತಲ್ಲೀನತೆಯನ್ನು ಹೊಂದುವನೋ ಹಾಗೆಯೇ ಶ್ರದ್ಧಾಚರಿತನು ಶೀಲ, ಸದ್ಗುಣ ಇತ್ಯಾದಿ ಕುಶಲಗಳನ್ನು ಹುಡುಕುವನು ಹಾಗು ಅದರಲ್ಲಿ ತಲ್ಲೀನವಾಗುವನು ಮತ್ತು ಹೇಗೆ ಲೋಭಿಯು (ರಾಗಿಯು) ತನಗೆ ಹಾನಿಯಾದರೂ ಪ್ರಿಯ ವಿಷಯವನ್ನು ಬಿಡಲಾರನೋ ಹಾಗೆಯೇ ಕುಶಲಗಳನ್ನು ಶ್ರದ್ಧಾಚರಿತನು ಬಿಡಲಾರನು.
ಹಾಗೆಯೇ ಬುದ್ಧಿಚರಿತನು ದ್ವೇಷಚರಿತನಂತೆಯೇ ಸಮಾನಂತರವಾಗಿದ್ದಾನೆ. ಏಕೆಂದರೆ ದ್ವೇಷಚರಿತನಲ್ಲಿ ಕುಶಲ ಕಮ್ಮಗಳು ಹೆಚ್ಚು ಇದ್ದಾಗ ಬುದ್ಧಿಯು ಬಲಯುತವಾಗಿರುತ್ತದೆ. ದ್ವೇಷಚರಿತನು ದ್ವೇಷಿಸುವಂತಹ ವಿಷಯಗಳಲ್ಲಿ ಅನರ್ಥಕಾರಿಯಾಗಿದ್ದರೂ ಹತ್ತಿರವಿರುವಂತೆ ಆ ವಿಷಯಗಳನ್ನು ತೊರೆಯದಿರುವಂತೆ, ಅರ್ಥಕಾರಿ (ಲಾಭಕಾರಿ) ವಿಷಯಗಳಲ್ಲಿ ಬುದ್ಧಿಚರಿತನೂ ಸಹ ಹಾಗೇ ಇರುತ್ತಾನೆ. ದ್ವೇಷಿಯು ನಿಜವಲ್ಲದಿದ್ದರೂ ತಪ್ಪುಗಳನ್ನು ಹುಡುಕುವಂತೆ ಬುದ್ಧಿವಂತನು ಕೇವಲ ನಿಜವಾದ ತಪ್ಪುಗಳನ್ನು ಹುಡುಕುತ್ತಾನೆ. ದ್ವೇಷಿಯು ತಪ್ಪುಗಳಿಂದಾಗಿ ಲೋಭಿಗಳನ್ನು ತೆಗಳಿದರೆ, ಬುದ್ಧಿವಂತನು ಇವೆಲ್ಲಾ ಸಂಖಾರಗಳಿಂದಾಗಿರುವುದು ಎಂದು ಅರ್ಥಮಾಡಿಕೊಳ್ಳುವನು.
ಹಾಗೆಯೇ ವಿತರ್ಕಚರಿತನು ಮೋಹಚರಿತನಂತೆ ಸಮಾನಂತರವಾಗಿರುತ್ತದೆ. ಏಕೆಂದರೆ ಮೋಹಚರಿತನು ಉಂಟಾಗದೆ ಇದ್ದ ಕುಶಲಗಳು ಉದಯಿಸುವಂತೆ ಶ್ರಮಿಸುತ್ತಿರುವಾಗ ಆತನಿಗೆ ಅಡ್ಡಿಯುಂಟುಮಾಡುವ ವಿತರ್ಕಗಳು ಉಂಟಾಗುತ್ತವೆ. ವಿತರ್ಕಗಳ ವಿಶೇಷವೇನೆಂದರೆ, ಮೋಹಕ್ಕೆ ಸಮೀಪವಾಗಿರುವುದು. ಮೋಹಿಯು ದ್ವಂದ್ವಕಾರಿ ವಿಷಯಗಳಿಂದಾಗಿ ಅವಿಶ್ರಾಂತನಾಗುತ್ತಾನೆ. ಹಾಗೆಯೇ ಹಲವರು ವಿಷಯಗಳ ಬಗ್ಗೆ ವಾಲಿರುವುದರಿಂದಲೇ ವಿತರ್ಕಗಳು ಉಂಟಾಗುತ್ತವೆ. ಮೋಹಿಯು ತೋರಿಕೆಯಿಂದಾಗಿ ಚಾಂಚಲ್ಯಕ್ಕೆ ಒಳಗಾದರೆ, ವಿತಕರ್ಿಯು ಸುಲಭವಾಗಿ ಉಂಟಾಗುವ ಊಹೆಗಳಲ್ಲಿ ತಲ್ಲೀನನಾಗುವನು.
ಕೆಲವು ವಿದ್ವಾಂಸರು ಇನ್ನೂ ಮೂರು ಚರ್ಯೆಗಳಿವೆ ಎನ್ನುವರು. ಅವೆಂದರೆ: ತನ್ಹಾಚರಿಯ (ತೃಷ್ಣೆಪ್ರಿಯ ವ್ಯಕ್ತಿತ್ವ), ಮಾನಚರಿಯ (ಅಹಂಕಾರ ಪ್ರಧಾನ ವ್ಯಕ್ತಿತ್ವ) ಹಾಗೂ ದಿಟ್ಟಿಚರಿಯ (ಮೌಢ್ಯ ಪ್ರಧಾನ ವ್ಯಕ್ತಿತ್ವ). ಆದರೆ ಇಲ್ಲಿ ತನ್ಹಾ (ತೀವ್ರ ಬಯಕೆ)ಯು ಲೋಭವೇ ಆಗಿದೆ ಮತ್ತು ಅಹಂಕಾರವು ಅದರೊಳಗೆ ಸದಾ ಸಹಚಯರ್ೆಯಲ್ಲಿ ಇರುತ್ತದೆ. ಹೀಗಾಗಿ ಇವೆರಡೂ ಲೋಭವನ್ನು ಮಿತಿಮೀರಲಾರದು ಮತ್ತು (ದ್ವೇಷ (ದಿಟ್ಟಿ)ಗಳ ಬಗ್ಗೆ ಹೇಳುವುದಾದರೆ ಅವುಗಳ ಮೂಲವೇ ಮೋಹವಾಗಿದೆ. ಹೀಗಾಗಿ ದಿಟ್ಟಿ (ದೃಷ್ಟಿಕೋನಗಳು) ಮೋಹದಲ್ಲೇ ಮಿಳಿತವಾಗುವುದು.

ಸ್ವಭಾವಗಳ ಮೂಲ, ಆಕರ ಯಾವುದು?

ಈ ಪ್ರಜ್ಞಾಗಳ ಮೂಲ ಯಾವುವು? ಆಕರ ಯಾವುದು? ಮತ್ತು ಈ ವ್ಯಕ್ತಿ ಲೋಭಚರಿತನೆಂದೇ ಹೇಗೆ ಗೊತ್ತಾಗುವುದು? ಇಂತಹ ಮನುಷ್ಯ ದ್ವೇಷಮೂಲ (ಚರಿತ) ದವನೆಂದು ಹೇಗೆ ಗುತರ್ಿಸುವುದು? ಯಾವ ವಿಧದ ಚರಿತನಿಗೆ (ಸ್ವಭಾವದವನಿಗೆ) ಯಾವುದು ಹೊಂದುತ್ತದೆ.

ಹಿಂದಿನ ಜನ್ಮದ ಆಧಾರದಿಂದ ಸ್ವಭಾವ ಅರಿಯುವಿಕೆ:

ಇಲ್ಲಿ ಕೆಲವರು ಹೇಳುವುದು ಏನೆಂದರೆ ಮೊದಲ ಮೂರು ಚರಿತಗಳ ಮೂಲ ಆಕರವು ಅವರ ಹಿಂದಿನ ಚಟಗಳಿಂದ ಆಯಿತೆಂಬುದು ಮತ್ತು ಅವಕ್ಕೆ ಮೂಲಧಾತುಗಳು ಮತ್ತು ಚಿತ್ರವೃತ್ತಿಗಳಾಗಿವೆ. ಸಹಜವಾಗಿ ರಾಗಚರಿತನಲ್ಲಿ ಈ ಹಿಂದೆಯೇ ಪ್ರಿಯವಾದ ವಿಷಯಗಳಲ್ಲಿ ತಲ್ಲೀನನಾಗುವಿಕೆ, ಹೊಂದಿರುವಿಕೆ, ತೃಪ್ತಿಪಟ್ಟಿರುವಿಕೆ ಆಗಿರುತ್ತದೆ. ಅವರು ಸುಗತಿಯಿಂದ ಜಾರಿ ಇಲ್ಲಿ ಹುಟ್ಟಿರುವಿಕೆಯು ಸಹಾ ಆಗಿರುತ್ತದೆ. ಮತ್ತು ದ್ವೇಷಚರಿತನಲ್ಲಿ ಈ ಹಿಂದೆಯೇ ಅಪ್ರಿಯ ವಿಷಯಗಳಲ್ಲಿ ತೊಡಗಿರುವಿಕೆ, ಹಿಂಸೆ, ವ್ಯಗ್ರತೆ, ಹತ್ಯೆ, ಕ್ರೌರ್ಯತೆ ಇದ್ದು ಈಗ ಸುಪ್ತವಾಗಿರುತ್ತದೆ ಅಥವಾ ಅವನು ನಾಗಾಲೋಕದಿಂದ ಇಲ್ಲವೆ ನರಕದಲ್ಲಿ ಸತ್ತು ಇಲ್ಲಿ ಜನಿಸಿರುತ್ತಾನೆ. ಮತ್ತು ಮೋಹಚರಿತದವರ ಬಗ್ಗೆ ಹೇಳುವುದಾದರೆ ಈ ಹಿಂದೆ ಅವರು ಮಾದಕ ದ್ರವ್ಯಗಳಲ್ಲಿ ತಲ್ಲೀನರಾಗಿದ್ದು, ಕಲಿತಿರುವುದರ ಬಗ್ಗೆ ಹಾಗು ಪ್ರಶ್ನಿಸಿರುವುದರ ಬಗ್ಗೆ ಅಲಕ್ಷಿಸಿರುವುದರಿಂದಾಗಿ ಹೀಗಿದ್ದು ಅಥವಾ ಅವರು ಪ್ರಾಣಿ ಲೋಕದಲ್ಲಿದ್ದು ಸತ್ತು ಅಲ್ಲಿಂದ ಇಲ್ಲಿ ಹುಟ್ಟಿದವರಾಗಿದ್ದಾರೆ. ಈ ರೀತಿಯಾಗಿ ಅವರ ಮೂಲ ಆಕರ ಹಿಂದಿನ ಜನ್ಮದ ಚಟ (ಅಭ್ಯಾಸ)ಗಳೇ ಆಗಿವೆ.

ತ್ರಿದೋಷ ಆಧಾರಿತವಾಗಿ ಸ್ವಭಾವ ಅರಿಯುವಿಕೆ:

ಮೋಹಚರಿತದ ವ್ಯಕ್ತಿಯಲ್ಲಿ ಎರಡು ಧಾತುಗಳು ಪ್ರಧಾನವಾಗಿರುತ್ತದೆ: ಪಠವಿಧಾತು ಹಾಗು ತೇಜೋಧಾತು.
ದ್ವೇಷಚರಿತದ ವ್ಯಕ್ತಿಯಲ್ಲಿ ಎರಡು ಧಾತುಗಳು ಪ್ರಧಾನವಾಗಿರುತ್ತದೆ: ಅಪೋಧಾತು ಹಾಗು ವಾತಧಾತು.
ಆದರೆ ರಾಗಚರಿತನಲ್ಲಿ ನಾಲ್ಕು ಧಾತುಗಳು ಸಮನಾಗಿರುತ್ತವೆ. ವೈದ್ಯಕೀಯ, ತ್ರಿದೋಷಗಳ ಪ್ರಕಾರ ಲೋಭಚರಿತನಲ್ಲಿ ಕಫವು ಹೆಚ್ಚಾಗಿರುತ್ತದೆ, ಮೋಹಚರಿತನಲ್ಲಿ ವಾತವು ಅಧಿಕವಾಗಿರುತ್ತದೆ ಅಥವಾ ಮೋಹಚರಿತನಲ್ಲಿ ಕಫವೂ ಹೆಚ್ಚಾಗಿರುತ್ತದೆ, ಲೋಭವಂತನಲ್ಲಿ ವಾತವೂ ಹೆಚ್ಚಾಗಿರುತ್ತದೆ. ಹೀಗೆ ಕೆಲವರ ಅಭಿಪ್ರಾಯವಾಗಿದೆ.
ಆದರೂ ಈ ವಿವರಣೆಗಳಲ್ಲಿ ಶ್ರದ್ಧಾ ಬುದ್ಧಿಚರಿತರ ಉಲ್ಲೇಖವಿಲ್ಲ. ಹೀಗಾಗಿ ಇವುಗಳ ನಿರೂಪಣೆ ಅನಿಶ್ಚಿತವಾಗಿದೆ.
ಪತಿಸಂಧಿ ಆಧಾರಿತವಾಗಿ ಸ್ವಭಾವ ಅರಿಯುವಿಕೆ:
ಆದರೆ ಅಟ್ಠಕಥಾ ಆಚಾರ್ಯರ ಪ್ರಕಾರ ಈ ಎಲ್ಲಾ ಸತ್ವಗಳು ಈ ಎಲ್ಲಾ ಜೀವಿಗಳೂ ತಮ್ಮ ಹಿಂದಿನ ಹೇತುಗಳ ಕಾರಣದಿಂದಾಗಿ ಲೋಭ, ರಾಗ ಪ್ರಧಾನ, ದ್ವೇಷ ಪ್ರಧಾನ, ಮೋಹ ಪ್ರಧಾನ ಹಾಗೆಯೇ ಅಮೋಹ ಪ್ರಧಾನ, ಅದ್ವೇಷ ಪ್ರಧಾನ, ಅಮೋಹ ಪ್ರಧಾನವಾಗಿ ಜನಿಸುತ್ತವೆ.
ಯಾವುದೇ ವ್ಯಕ್ತಿ ಪತಿಸಂದಿ (ಪುನರ್ಜನ್ಮ) ಸಮಯದಲ್ಲಿ ಲೋಭವು ಬಲಯುತವಾಗಿದ್ದು, ಅಲೋಭವು ದುರ್ಬಲವಾಗಿದ್ದರೆ, ಅದ್ವೇಷ ಹಾಗು ಅಮೋಹವು ಬಲಿಷ್ಠವಾಗಿದ್ದರೆ, ದ್ವೇಷ ಹಾಗು ಮೋಹವು ದುರ್ಬಲವಾಗಿದ್ದರೆ ಆಗ ಆತನು ದುರ್ಬಲ ಅಲೋಭವು ಲೋಭದ ಮೇಲೆ ಭಯಗೊಳಿಸಲಾಗುವುದಿಲ್ಲ. ಆದರೆ ಆತನ ಅದ್ವೇಷ ಮತ್ತು ಅಮೋಹವು ಬಲಿಷ್ಠವಾಗಿದ್ದರೆ ಮಾತ್ರ ಆತನ ದ್ವೇಷದ ಮೇಲೆ ಹಾಗು ಮೋಹದ ಮೇಲೆ ಜಯಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಕಮ್ಮಾನುಸಾರವಾಗಿ ಹೀಗೆ ಜೀವಿಯು ಪತಿಸಂದಿ ಸಮಯದಲ್ಲಿ ಹೀಗಿದ್ದು ಜನಿಸಿದರೆ ಆತನಲ್ಲಿ ಲೋಭವಿದ್ದರೂ ಸಹಾ ಉತ್ತಮ ಪ್ರವೃತ್ತಿಯವನು ಹಾಗು ಕೋಪಗೊಳ್ಳದವನು ಅಷ್ಟೇ ಅಲ್ಲದೆ ಜ್ಞಾನಸಂಪಾದನೆಯಲ್ಲಿ ಮಿಂಚಿನಂತಹ ಗ್ರಹಣ ಶಕ್ತಿಯುಳ್ಳವನು ಆಗುತ್ತಾನೆ.
ಅದೇರೀತಿಯಲ್ಲಿ ಮತ್ತೊಬ್ಬನಲ್ಲಿ ಪತಿಸಂದಿ ಸಮಯದಲ್ಲಿ ಲೋಭ ಹಾಗು ದ್ವೇಷವು ಬಲಿಷ್ಠವಾಗಿದ್ದು ಮತ್ತು ಅಲೋಭ ಹಾಗು ಅದ್ವೇಷವು ದುರ್ಬಲವಾಗಿದ್ದರೆ ಮತ್ತು ಅಮೋಹವು ಬಲಿಷ್ಠವಾಗಿದ್ದು ಹಾಗು ಮೋಹವು ದುರ್ಬಲವಾಗಿದ್ದರೆ ಆತನು ಈಗಾಗಲೇ ಹೇಳಿರುವಂತೆ ರಾಗದ್ವೇಷಗಳಿಂದ ಕೂಡಿದ್ದು ಆದರೂ ಜ್ಞಾನಾರ್ಜನೆಯಲ್ಲಿ ಮಿಂಚಿನಂತಹ ಗ್ರಹಣಶಕ್ತಿಯುಳ್ಳವನಂತಾಗುವನು (ಉದಾ: ಅಭಯದತ್ತ ಥೇರ).
ಅದೇರೀತಿ ಮತ್ತೊಬ್ಬನು ಪತಿಸಂಧಿ ಕ್ಷಣದಲ್ಲಿ ಲೋಭವು ಹಾಗು ಮೋಹವು; ಅದ್ವೇಷವೂ ಬಲಿಷ್ಠವಾಗಿದ್ದು ಮಿಕ್ಕವು ದುರ್ಬಲವಾಗಿದ್ದರೆ ಅಂತಹವನು ಸಹಜವಾಗಿ ಲೋಭಿಯು ಹಾಗು ಮಂದಮತಿ ಆಗಿದ್ದು ಸಹಾ ಕೋಪಗೊಳ್ಳದ ಸ್ನೇಹಮಯಿಯಾಗಿರುತ್ತಾನೆ. (ಉದಾ: ಬಹುಲ ಥೇರ).
ಅದೇರೀತಿ ವ್ಯಕ್ತಿಯಲ್ಲಿ ಪತಿಸಂಧಿ ಕ್ಷಣದಲ್ಲಿ ಲೋಭ ದ್ವೇಷ ಮೋಹ ಮೂರು ಸಹಾ ಬಲಿಷ್ಠವಾಗಿದ್ದು ಕುಶಲ ಮೂಲಗಳಿಂದ ಮೂರು ಸಹಾ ದುರ್ಬಲವಾಗಿದ್ದರೆ ಆತನು ರಾಗ ದ್ವೇಷ ಮೋಹದಿಂದ ಕೂಡಿರುವ ಸಾಧಾರಣ ಮಾನವನಂತಿರುತ್ತಾನೆ.
ಹಾಗೆಯೇ ಯಾವ ವ್ಯಕ್ತಿಗೆ ಪತಿಸಂಧಿ ಕ್ಷಣದಲ್ಲಿ ಅಲೋಭವು, ದ್ವೇಷವು ಮತ್ತು ಮೋಹವು ಬಲಿಷ್ಠವಾಗಿದ್ದು, ಉಳಿದವು ದುರ್ಬಲವಾಗಿದ್ದರೆ ಆತನಲ್ಲಿ ಕಲ್ಮಶಗಳು ಇದ್ದು, ದಿವ್ಯವಾದ ದೃಶ್ಯಗಳು ಸಹಾ ಆತನಿಗೆ ಏನನ್ನೂ ಮಾಡಲಾರವು. ಆದರೆ ಆತನಲ್ಲಿ ಕೋಪವಿದ್ದು, ನಿಧಾನವಾಗಿ ಅರ್ಥಮಾಡಿಕೊಳ್ಳವ ಗುಣವಿರುತ್ತದೆ.
ಅದೇರೀತಿಯಲ್ಲಿ ಯಾವ ವ್ಯಕ್ತಿಯ ಪತಿಸಂದಿ ಕ್ಷಣದಲ್ಲಿ ಅಲೋಭವು, ಅದ್ವೇಷವು ಹಾಗು ಮೋಹವು ಬಲಿಷ್ಠವಾಗಿದ್ದು, ಉಳಿದವು ದುರ್ಬಲವಾಗಿದ್ದರೆ ಅಂತಹವನು ದಾನಿಯ (ಅಲೋಭಿ), ಮೈತ್ರಿಯುಳ್ಳವನು (ಅದ್ವೇಷ) ಸ್ನೇಹಿಯೂ ಆಗಿದ್ದು, ಅವನು ನಿಧಾನವಾಗಿ ಅರ್ಥ ಮಾಡಿಕೊಳ್ಳುವವನಾಗಿರುತ್ತಾನೆ.
ಅದೇರೀತಿಯಲ್ಲಿ ಯಾವ ವ್ಯಕ್ತಿಯು ಪತಿಸಂಧಿ ಕ್ಷಣದಲ್ಲಿ ಅಲೋಭ ದ್ವೇಷ ಮತ್ತು ಅಮೋಹವು ಬಲಿಷ್ಠವಾಗಿದ್ದು, ಉಳಿದವು ದುರ್ಬಲವಾಗಿದ್ದರೆ ಅಂತಹವನು ಲೋಭವಿಲ್ಲದವನು, ಆದರೆ ಮುಂಗೋಪಿಯು ಹಾಗೆಯೇ ಕ್ಷಿಪ್ರವಾಗಿ ಜ್ಞಾನವನ್ನು ಅರ್ಥ ಮಾಡಿಕೊಳ್ಳುವವನು ಆಗಿರುತ್ತಾನೆ.
ಅದೇ ವಿಧದಲ್ಲಿ ಯಾವ ವ್ಯಕ್ತಿ ಪತಿಸಂದಿ ಕ್ಷಣದಲ್ಲಿ ಅಲೋಭವು, ಅದ್ವೇಷವು ಮತ್ತು ಅಮೋಹವು ಈ ಮೂರು ಕುಶಲ ಮೂಲಗಳು ಬಲಿಷ್ಠವಾಗಿದ್ದು, ಅಕುಶಲ ಮೂಲಗಳು ದುರ್ಬಲವಾಗಿದ್ದರೆ ಅಂತಹವನು ಲೋಭವಿಲ್ಲದ ದಾನಿಯು, ಸ್ನೇಹಮಯಿಯು (ಕೋಪಗೊಳ್ಳದವನು), ಮಿಂಚಿನಂತೆ ಜ್ಞಾನ ಗ್ರಹಣ ಮಾಡುವವನು ಆಗಿರುತ್ತಾನೆ. (ಉದಾ: ಮಹಾ ಸಂಘರಕ್ಖಿತ ಥೇರ).
ಸಂಕ್ಷಿಪ್ತವಾಗಿ ಹೇಳುವುದಾದರೆ ಲೋಭ ಹೊಂದಿದ್ದರೆ ಲೋಭಚರಿತನಾಗಿರುತ್ತಾನೆ, ಅಲೋಭ ಹೊಂದಿದ್ದರೆ ಲೋಭವಿಲ್ಲದವನಾಗುತ್ತಾನೆ, ಅಂತಹವನಲ್ಲಿ ಸಹಜವಾಗಿ ಪ್ರಮಾಣಿಕತೆ, ದಾನ, ವೈರಾಗ್ಯ ಇರುತ್ತವೆ. ದ್ವೇಷ ಹೊಂದಿದ್ದರೆ ದ್ವೇಷದಿಂದ ಕೂಡಿರುತ್ತಾನೆ. ಕೋಪ, ಹಿಂಸೆ, ಇಂತಹವು ಸಾಮಾನ್ಯ. ಹಾಗೆಯೇ ಅದ್ವೇಷ ಹೊಂದಿದ್ದರೆ ಕೋಪಗೊಳ್ಳದವನು, ಸ್ನೇಹಮಯಿಯು ಆಗಿರುತ್ತಾನೆ. ಮೋಹ ಹೊಂದಿದ್ದರೆ ನಿಧಾನವಾಗಿ ಅರ್ಥಮಾಡಿಕೊಳ್ಳುವ ಸ್ವಭಾವವಿದ್ದು, ಅಮೋಹ ಹೊಂದಿದ್ದರೆ ಕ್ಷಿಪ್ರವಾಗಿ ಅರ್ಥ ಮಾಡಿಕೊಳ್ಳುವ ಸ್ವಭಾವವಿರುತ್ತದೆ. ಇವುಗಳಲ್ಲಿ ಅಮೋಹಿಯು ಬುದ್ಧಿಚರಿತನಾಗಿರುತ್ತಾನೆ, ಮೋಹಿಯು ವಿತರ್ಕಚರಿತನಾಗಿದ್ದು, ಪ್ರಬಲವಾದ ಶ್ರದ್ಧೆಯಿರುವವನು ಶ್ರದ್ಧಾವಂತನಾಗಿರುತ್ತಾನೆ ಅಂತಹವನಲ್ಲಿ ಅದ್ವೇಷ ಹೆಚ್ಚಾಗಿರುತ್ತದೆ.

ಬಾಹ್ಯಕ್ರಿಯೆಗಳಿಂದ ಸ್ವಭಾವ ಅರಿಯುವಿಕೆ

ಇವನು ಎಂತಹ ಸ್ವಭಾವದವನೆಂದು ಬಾಹ್ಯಕ್ರಿಯೆಗಳಿಂದ ಅರಿಯವುದು ಹೀಗೆ: ಆತನು ಭಂಗಿಯಿಂದ, ಚಟುವಟಿಕೆಯಿಂದ ತಿನ್ನುವುದರಿಂದ, ನೋಡುವಿಕೆಯಿಂದ, ಇತ್ಯಾದಿ. ಮನೋಸ್ಥಿತಿಗಳಿಂದ ಸ್ವಭಾವ ಅಂಗೀಕರಿಸಬಹುದಾಗಿದೆ.
ಶಾರೀರಿಕ ಭಂಗಿಗಳಿರುವ ಸ್ವಭಾವ ಗಮನಿಸುವಿಕೆ:
ನಡಿಗೆ : ರಾಗ (ಲೋಭ) ಚರಿತನು ಸಾಮಾನ್ಯವಾಗಿ ನಡೆಯುತ್ತಾನೆ, ಎಚ್ಚರಿಕೆಯಿಂದ ನಡೆಯುತ್ತಾನೆ, ತನ್ನ ಕಾಲನ್ನು ನಿಧಾನವಾಗಿ ಇಡುತ್ತಾನೆ, ಸಮನಾಗಿ ಇಡುತ್ತಾನೆ, ಸಮವಾಗಿ ಎತ್ತುತ್ತಾನೆ ಹಾಗು ಆತನ ಹೆಜ್ಜೆಗಳು ಪುಟಿಯುವಂತಿರುತ್ತದೆ.
ದ್ವೇಷಚರಿತನು ತನ್ನ ಪಾದಗಳ ಕೊನೆಯಿಂದ ಭೂಮಿಯನ್ನು ಅಗೆಯುತ್ತಿರುವವನಂತೆ ನಡೆಯುತ್ತಾನೆ. ತನ್ನ ಪಾದವನ್ನು ಬೇಗ ಕೆಳಗಿಡುತ್ತಾನೆ. ಹಾಗೆಯೇ ವೇಗವಾಗಿ ಎತ್ತಿಕೊಳ್ಳುತ್ತಾನೆ ಮತ್ತು ಆತನ ಹೆಜ್ಜೆಗಳು ದಾರಿಯುದ್ದಕ್ಕೂ ಎಳೆದಾಡುವಂತಿರುತ್ತವೆ.
ಮೋಹಚರಿತನು ಗೊಂದಲದಿಂದ ನಡೆಯುತ್ತಾನೆ. ಆತನು ಹಿಂದು-ಮುಂದು ನೋಡುತ್ತಾ (ಅನುಮಾನಿಸುತ್ತ) ಹೆಜ್ಜೆ ಕೆಳಗಿಡುತ್ತಾನೆ ಹಾಗೆಯೇ ಹೊಯ್ದಾಟದಿಂದ ಹೆಜ್ಜೆ ಎತ್ತುತ್ತಾನೆ ಹಾಗು ತಕ್ಷಣ ಹೆಜ್ಜೆಯನ್ನು ಇಟ್ಟು ಅಮುಕುತ್ತಾನೆ.
ಮಾಗಂಡಿಯ ಸುತ್ತದಲ್ಲಿ ಮಾಗಂಡಿಯಾಳು ಲಕ್ಷಣಶಾಸ್ತ್ರ ಬಲ್ಲವಳಾಗಿದ್ದು ಹೀಗೆ ಹೇಳುತ್ತಾಳೆ:
ರಾಗಚರಿತರ ಹೆಜ್ಜೆಯು ಜಿಗಿಯುವಂತಹದ್ದಾಗಿರುತ್ತದೆ,
ದ್ವೇಷಚರಿತರ ಹೆಜ್ಜೆಯು ಉದ್ದಕ್ಕೂ ಎಳೆಯುವಂತಿರುತ್ತದೆ,
ಮೋಹಚರಿತರ ಹೆಜ್ಜೆಯು ತಕ್ಷಣ ಅಮುಕಿದಂತಿರುತ್ತದೆ.
ಆದರೆ ಯಾರು ಕಶ್ಮಲಾತೀತರೊ ಅಂತಹ ಪರಿಶುದ್ಧರ ಹೆಜ್ಜೆ ಮಾತ್ರ ಹೀಗಿರುತ್ತದೆ. (ಸಂ.ನಿ.ಅಟ್ಠಕಥಾ544)
ನಿಲುಗೆ: ರಾಗಚರಿತನ ನಿಲುಗೆಯು ಶ್ರದ್ಧೆಯಿಂದ ಹಾಗು ಶೋಭಾಯಮಾನವಾಗಿರುತ್ತದೆ
ದ್ವೇಷಚರಿತನ ನಿಲುಗೆ ನಿಷ್ಠೂರವಾಗಿರುತ್ತದೆ.
ಮೋಹಚರಿತನ ನಿಲುಗೆಯು ತಬ್ಬಿಬ್ಬಾಗಿರುತ್ತದೆ.
ಕೂಡುವಿಕೆ: ಎಲ್ಲವೂ ಮೇಲಿನಂತೆಯೇ ಆಗಿರುತ್ತದೆ.
ಮಲಗುವಿಕೆ: ರಾಗಚರಿತನು ಆತುರವಿಲ್ಲದೆ ಹಾಸಿಗೆಯನ್ನು ಹರಡುತ್ತಾನೆ, ನಿಧಾನವಾಗಿ ಮಲಗಿಕೊಳ್ಳುತ್ತಾನೆ. ತನ್ನ ಅಂಗಗಳನ್ನು ಜೋಡಿಸುತ್ತಾ ಶ್ರದ್ಧೆಯಿಂದ ನಿದ್ರಿಸುತ್ತಾನೆ. ಮತ್ತೆ ಜಾಗ್ರತನಾದಾಗ ನಿಧಾನವಾಗಿ ಏಳುತ್ತಾನೆ.
ದ್ವೇಷಚರಿತನು ತನ್ನ ಹಾಸಿಗೆಯನ್ನು ಹೇಗೆಂದರೆ ಹಾಗೆ ಹರಡುತ್ತಾನೆ. ಅಸಹನೀಯವಾಗಿ ಬಿದ್ದುಕೊಂಡು, ಸಿಡುಕಿನಿಂದ ನಿದ್ರಿಸುತ್ತಾನೆ. ಮತ್ತೆ ಜಾಗ್ರತನಾದಾಗ ತಕ್ಷಣ ಎದ್ದು ಕೂಡುತ್ತಾನೆ ಮತ್ತು ಕೆರಳಿಸುವಂತೆ ಉತ್ತರಿಸುತ್ತಾನೆ.
ಮೋಹಚರಿತನು ತನ್ನ ಹಾಸಿಗೆಯನ್ನು ಅಂಕುಡೊಂಕಾಗಿ ಹರಡಿಕೊಳ್ಳುತ್ತಾನೆ ಹಾಗು ಮುಖ ಕೆಳಕಾಗಿ ಮಲಗಿಕೊಂಡು ಅಸ್ತವ್ಯಸ್ತವಾಗಿ ಬಿದ್ದುಕೊಂಡಿರುತ್ತಾನೆ. ಮತ್ತೆ ಏಳುವಾಗ ಹಮ್... ಎಂದು ಶಬ್ದ ಮಾಡುತ್ತಾ ಅತಿ ನಿಧಾನವಾಗಿ ಏಳುತ್ತಾನೆ.
ಇಲ್ಲಿ ಶ್ರದ್ಧಾಚರಿತನ ನಡಿಗೆ, ನಿಲುಗೆ, ಕೂಡುವಿಕೆ ಹಾಗು ಮಲಗುವಿಕೆ ಲೋಭಚರಿತನಂತೆಯೇ ಇರುತ್ತವೆ. ಹಾಗೆಯೇ ದ್ವೇಷಚರಿತನ ಹಾಗು ಬುದ್ಧಿಚರಿತನ ಶಾರೀರಿಕ ಭಂಗಿಗಳು ಒಂದೇರೀತಿ ಇರುತ್ತವೆ ಮತ್ತು ಮೋಹಚರಿತನ ಹಾಗು ವಿತರ್ಕಚರಿತನ ಶಾರೀರಿಕ ಭಂಗಿಗಳು ಒಂದೇರೀತಿ ಇರುತ್ತವೆ.

ಚಟುವಟಿಕೆಗಳಿಂದ ಸ್ವಭಾವ ಅಳತೆ ಮಾಡುವಿಕೆ:

ಇಲ್ಲಿ ವ್ಯಕ್ತಿ ಮಾಡುವ ಚಟುವಟಿಕೆಯಿಂದ ಆತನ ಸ್ವಭಾವ ಗ್ರಹಿಸುತ್ತಾರೆ. ಇಲ್ಲಿ ಉದಾಹರಣೆಗೆ ಗುಡಿಸುವಿಕೆಯನ್ನು ತೆಗೆದುಕೊಳ್ಳಲಾಗಿದೆ.
ಇಲ್ಲಿ ರಾಗವಂತನು ಪೊರಕೆಯನ್ನು ಚೆನ್ನಾಗಿ ಹಿಡಿಯುತ್ತಾನೆ, ಆತನು ಸ್ವಚ್ಛಾಗಿ ಹಾಗು ಸಮವಾಗಿ ಯಾವುದೇ ಆತುರವಿಲ್ಲದೆ ಮಣ್ಣನ್ನು ಚದುರಿಸದೆ ಸಿಂಧೂರ ಪುಷ್ಪಗಳನ್ನು ಚೆಲ್ಲುವಂತೆ ಗುಡಿಸುತ್ತಾನೆ.
ದ್ವೇಷರಹಿತನು ಪೊರಕೆಯನ್ನು ಗಟ್ಟಿಯಾಗಿ ಹಿಡಿಯುತ್ತಾನೆ ಮತ್ತು ಅಸ್ವಚ್ಛವಾಗಿ, ಅಸಮವಾಗಿ ಕೆಟ್ಟ ಶಬ್ದ ಬರುವಂತೆ, ಆತುರವಾಗಿ, ಮಣ್ಣು ಪ್ರತಿ ಪಕ್ಕಕ್ಕೆ ಬೀಳುವಂತೆ ಗುಡಿಸುತ್ತಾನೆ.
ಮೋಹಚರಿತನು ಪೊರಕೆಯನ್ನು ಅತಿ ಸಡಿಲವಾಗಿ ಹಿಡಿದಿರುತ್ತಾನೆ ಮತ್ತು ಆತನು ಸ್ವಚ್ಛವಾಗಿಯೇ ಆಗಲಿ ಅಥವಾ ಸಮನಾಗಿ ಆಗಲಿ ಗುಡಿಸುವುದಿಲ್ಲ. ಮಣ್ಣು ಮೇಲೇಳುವಂತೆ ಪುನಃ ಪುನಃ ಗುಡಿಸುತ್ತಾನೆ.
ಇದೇರೀತಿಯ ಕಾರ್ಯ ಚಟುವಟಿಕೆಗಳನ್ನು ಅವರ ತೊಳೆಯುವಿಕೆಯಲ್ಲಿ, ಬಣ್ಣ ಹಚ್ಚುವುದರಲ್ಲಿ ಇತ್ಯಾದಿಗಳಲ್ಲಿ ನಾವು ಕಾಣಬಹುದು.
ರಾಗಚರಿತನು ಕೌಶಲ್ಯಯುತವಾಗಿ, ಸ್ವಚ್ಛವಾಗಿ, ಸಮವಾಗಿ, ಎಚ್ಚರಿಕೆಯಿಂದ ಕಾರ್ಯ ಮಾಡುತ್ತಾನೆ. ಆದರೆ ದ್ವೇಷಚರಿತನು ಒತ್ತಡದಿಂದ, ಪೆಡುಸಾಗಿ, ಅಸಮವಾಗಿ ಕಾರ್ಯ ಮಾಡುತ್ತಾನೆ. ಲೋಭಚರಿತನು ಕೌಶಲ್ಯರಹಿತವಾಗಿ, ಗೊಂದಲಮಯವಾಗಿ ಮತ್ತು ಅನಿಶ್ಚಿತವಾಗಿ ಕಾರ್ಯ ಮಾಡುತ್ತಾನೆ.
ವಸ್ತ್ರಧಾರಣೆ ಮೂಲಕ: ಅದೇರೀತಿ ರಾಗಚರಿತನು ವಸ್ತ್ರ ಧರಿಸಿದರೆ ಅದು ಅಷ್ಟು ಬಿಗಿಯಾಗಿಯೂ ಅಥವಾ ಅಷ್ಟು ಸಡಿಲವಾಗಿಯೂ ಇರುವುದಿಲ್ಲ, ಶ್ರದ್ಧೆಯಿಂದ ಕೂಡಿರುತ್ತಾನೆ. ಸುತ್ತಲು ಸಮವಾಗಿ ಹರಡಿರುವಂತೆ ಧರಿಸುತ್ತಾನೆ. ಆದರೆ ದ್ವೇಷಚರಿತನು ಅತಿ ಬಿಗಿಯಾಗಿರುವಂತೆ ವಸ್ತ್ರ ಧರಿಸುತ್ತಾನೆ ಹಾಗು ಅಸಮವಾಗಿ ಹರಡಿರುವಂತೆ ವಸ್ತ್ರ ಧರಿಸುತ್ತಾನೆ ಮತ್ತು ಮೋಹಚರಿತನು ಅತಿ ಸಡಿಲವಾಗಿ, ಗೊಂದಲದ ರೀತಿಯಲ್ಲಿ ಧರಿಸಿರುತ್ತಾನೆ.
ಇಲ್ಲಿ ರಾಗಚರಿತನು ಹಾಗು ಶ್ರದ್ಧಾವಂತರ ಚಟುವಟಿಕೆ ಒಂದೇರೀತಿ ಇರುತ್ತವೆ. ಹಾಗೆಯೇ ದ್ವೇಷಚರಿತನ ಹಾಗು ಬುದ್ಧಿಚರಿತನ ಚಟುವಟಿಕೆಯೂ ಸಹಾ ಒಂದೇರೀತಿ ಇರುವುದು ಮತ್ತು ಮೋಹಚರಿತನ ಹಾಗು ವಿತಕ್ಕಚರಿತನ ಚಟುವಟಿಕೆಗಳು ಒಂದೇರೀತಿ ಇರುತ್ತದೆ. ಏಕೆಂದರೆ ಅವರೀರ್ವರ ವ್ಯಕ್ತಿತ್ವ ಸಹಾ ಸಮಾನಂತರವಾಗಿರುತ್ತದೆ. ಹೀಗೆ ಚಟುವಟಿಕೆಗಳ ಮೂಲಕ ಅವರ ಸ್ವಭಾವ ಅಳತೆ ಮಾಡಬಹುದಾಗಿದೆ.
ತಿನ್ನುವಿಕೆಯ ಮೂಲಕ:
ರಾಗಚರಿತರು ಸ್ವಾದಿಷ್ಟವಾದ ಸಿಹಿತಿಂಡಿಗಳನ್ನು ಅಪೇಕ್ಷಿಸುತ್ತಾರೆ ಹಾಗು ತಿನ್ನುವಾಗ ಅವರ ತುತ್ತು ಗುಂಡಗೆ ಅತಿ ಚಿಕ್ಕದಾಗಿರದೆ, ಅತಿ ದೊಡ್ಡದಾಗಿರದೆ ಇರುತ್ತದೆ. ಅವರು ನಿಧಾನವಾಗಿ ವಿವಿಧ ರುಚಿಗಳನ್ನು ಸವಿಯುತ್ತ ಆನಂದದಿಂದ ತಿನ್ನುತ್ತಾರೆ.
ದ್ವೇಷಚರಿತರು ಒರಟಾದ ಹುಳಿ ಇರುವ ಆಹಾರವನ್ನು ಇಷ್ಟಪಡುತ್ತಾರೆ. ಅವರ ತುತ್ತು ಬಾಯಿ ತುಂಬುವಷ್ಟು ಇರುತ್ತದೆ. ಅವರು ರುಚಿಯತ್ತ ಗಮನಹರಿಸದೆ ಗಬಗಬನೆ ಆತುರವಾಗಿ ತಿನ್ನುತ್ತಾರೆ. ತಮಗೆ ಉತ್ತಮವಾದುದು ಸಿಗದಿದ್ದರೆ ದುಃಖಿಸುತ್ತಾರೆ, ಕೋಪಗೊಳ್ಳುತ್ತಾರೆ.
ಮೋಹಚರಿತರಿಗೆ ಯಾವುದೇ ನಿರ್ಧರಿತ ಆಯ್ಕೆಗಳಿರುವುದಿಲ್ಲ. ಆದರೆ ತಿನ್ನುವಾಗ ಚಿಕ್ಕ ಚಿಕ್ಕ ತುತ್ತುಗಳಿರುತ್ತವೆ. ತಿನ್ನುವಾಗ ಪಾತ್ರೆಯಲ್ಲಿ ತುಣಕುಗಳು ಬೀಳುತ್ತಿರುತ್ತವೆ, ಮುಖಕ್ಕೆ ಆಹಾರ ಹಚ್ಚಿರುವ ರೀತಿ ತಿನ್ನುತ್ತಾರೆ. ಅವರು ತಿನ್ನುವಾಗ ಅವರ ಮನಸ್ಸು ಹಾದಿ ತಪ್ಪಿರುತ್ತದೆ. ಇದನ್ನು, ಅದನ್ನು ಯೋಚಿಸುತ್ತಾ ತಿನ್ನುತ್ತಿರುತ್ತಾರೆ.
ಇಲ್ಲಿಯೂ ಸಹ ಲೋಭಚರಿತನಂತೆಯೇ ಶ್ರದ್ಧಾಚರಿತನ ವರ್ತನೆಗಳು ಇರುತ್ತವೆ. ಹಾಗೆಯೇ ದ್ವೇಷಚರಿತನಂತೆಯೇ ಬುದ್ಧಿಚರಿತನ ವರ್ತನೆಗಳು ಇರುತ್ತವೆ. ಮತ್ತು ಮೋಹಚರಿತನಂತೆಯೇ ವಿತಕ್ಕಚರಿತನ ವರ್ತನೆಗಳು ಇರುತ್ತವೆ. ಏಕೆಂದರೆ ಅವರೀರ್ವರ ವ್ಯಕ್ತಿತ್ವ ಸಹಾ ಸಮಾನಂತರವಾಗಿರುತ್ತದೆ.

ಇಂದ್ರಿಯಗಳ ವರ್ತನೆ/ನೋಡುವಿಕೆ ಮೂಲಕ :

ಇಲ್ಲಿ ರಾಗಚರಿತನು ಪ್ರಿಯವಾದ ದೃಶ್ಯವನ್ನು ಆನಂದದಿಂದ, ಆಶ್ಚರ್ಯದಿಂದ ದೀರ್ಘಕಾಲ ನೋಡುತ್ತಾನೆ. ಆತನಿಗೆ ಕ್ಷುಲ್ಲಕ ಗುಣಗಳು ಸಹಾ ಗೋಚರಿಸಿದರೂ ಆಕಷರ್ಿತನಾಗುತ್ತಾನೆ. ಅವರೊಂದಿಗೆ ಇರುವ ಅಪ್ಪಟ ದೋಷಗಳನ್ನು ಸಹಾ ಕಡೆಗಣಿಸುತ್ತಾನೆ. ಸುಂದರ ದೃಶ್ಯಗಳಿಂದ ದೂರ ಹೋಗುವ ಸಮಯ ಬಂದಾಗ ವಿಯೋಗ ದುಃಖ ಅನುಭವಿಸುತ್ತಾನೆ.
ದ್ವೇಷಚರಿತನು ಅಪ್ರಿಯವಾಗಿರುವ ಅಲ್ಪ ದೃಶ್ಯ ಗೋಚರಿಸಿದರೂ ಸಹಾ ಅಸಂತುಷ್ಟಿ ವ್ಯಕ್ತಪಡಿಸುತ್ತಾನೆ. ಆತನು ದಣಿದಿರುವಂತೆ ನೋಡುವುದನ್ನು ತಡೆಯುತ್ತಾನೆ. ಆತನಿಗೆ ಕ್ಷುಲ್ಲುಕ ದೋಷಗಳು ಸಹಾ ದೊಡ್ಡದಾಗಿ ಕಾಣಿಸುತ್ತದೆ ಹೀಗಾಗಿ ದ್ವೇಷಿಸುತ್ತಾನೆ. ಅದರೊಂದಿಗೆ ಇರುವ ಅಪ್ಪಟ ಸದ್ಗುಣಗಳನ್ನು ಸಹಾ ಕಡೆಗಣಿಸುತ್ತಾನೆ. ಅಲ್ಲಿಂದ ದೂರ ಹೋಗುವ ಸಮಯಬಂದಾಗ, ಪಶ್ಚಾತ್ತಾಪವಿಲ್ಲದೆ ಯಾವುದೇ ತವಕವಿಲ್ಲದೆ ಹೊರಡುತ್ತಾನೆ.
ಮೋಹರಹಿತನು ಯಾವುದೇ ದೃಶ್ಯ ಗಮನಿಸಲಿ ಆತನು ಪರರನ್ನು ಅನುಕರಣೆ ಮಾಡುತ್ತಾನೆ. ಪರರು ಖಂಡಿಸಿದರೆ ಆತನು ಸಹಾ ಖಂಡಿಸುತ್ತಾನೆ, ಟೀಕೆ ಮಾಡುತ್ತಾನೆ. ಅಥವಾ ಪರರು ಪ್ರಶಂಸಿಸುವುದನ್ನು ಗಮನಿಸಿದರೆ ಆತನೂ ಸಹಾ ಪ್ರಶಂಸಿಸುತ್ತಾನೆ. ತಾನು ತಿಳಿದಿಲ್ಲದವನಾಗಿ ತನ್ನ ಬಗ್ಗೆಯೂ ಉಪೇಕ್ಷೆಯನ್ನು ಪಡುತ್ತಾನೆ.
ಇದೇ ವಿಧವಾಗಿ ಇತರ ಇಂದ್ರಿಯ ವಿಷಯಗಳಾದ ಶಬ್ದ, ವಾಸನೆ, ರುಚಿ, ಸ್ಪರ್ಶ ಯೋಚನೆಗಳಿಗೂ ಈ ರೀತಿಯಲ್ಲಿ ತಾಳೆಯನ್ನು ಹಾಕಿಕೊಳ್ಳಬಹುದು.
ಇಲ್ಲಿಯೂ ಸಹ ಲೋಭಚರಿತನಂತೆಯೇ ಶ್ರದ್ಧಾಚರಿತನ ವರ್ತನೆಗಳು ಇರುತ್ತವೆ. ಹಾಗೆಯೇ ಇತರರನ್ನು ಈ ಹಿಂದಿನಂತೆಯೇ ತಿಳಿದುಕೊಳ್ಳುವುದು.


ಮನೋಪ್ರವೃತ್ತಿ (ಧಮ್ಮ)ಗಳ ಮೂಲಕ ಅರಿಯುವಿಕೆ:

ರಾಗ (ಲೋಭ) ಚರಿತನಲ್ಲಿ ಮೋಸ, ವಂಚನೆ, ಅಹಂಕಾರ, ದುರಾಸೆ, ಮಹತ್ವಾಕಾಂಕ್ಷೆ, ಅಸಂತೃಪ್ತಿ, ಅಲಂಕಾರಪ್ರಿಯತೆ, ಜಂಬ, ಚಂಚಲತೆ ಇತ್ಯಾದಿ ಈ ಬಗೆಯ ಮನೋವೃತ್ತಿಗಳು ಸಾಧಾರಣವಾಗಿ ಇರುತ್ತವೆ. 
ಆದರೆ ದ್ವೇಷಚರಿತನಲ್ಲಿ ಸಾಧಾರಣವಾಗಿ ಇರುವಂತಹ ಧಮ್ಮ (ಮನೋವೃತ್ತಿಗಳು) ಯಾವುವೆಂದರೆ: ಕೋಪ, ಹಗೆತನ, ಪರರನ್ನು ಕೀಳಾಗಿ ಕಾಣುವಿಕೆ, ನಿಷ್ಠೂರತೆ, ದೌರ್ಜನ್ಯತೆ, ಅಸೂಯೆ ಹಾಗು ಸ್ವಾರ್ಥ ಸಾಧನೆ ಇತ್ಯಾದಿಗಳನ್ನು ಕಾಣಬಹುದು.
ಆದರೆ ಮೋಹಚರಿತನಲ್ಲಿ ಸಾಧಾರಣವಾಗಿ ಇರುವಂತಹ ಧಮ್ಮವೆಂದರೆ ತಿನಾ ಮತ್ತು ಮಿದ್ದ (ಮಾನಸಿಕ ಹಾಗು ಶಾರೀರಿಕ ಸೋಮಾರಿತನ), ಉದ್ವೇಗ (ಕ್ಷೊಭೆ), ಪಶ್ಚಾತ್ತಾಪ, ಅನಿಧರ್ಾರ, ಸಂದೇಹ, ಹಠಮಾರಿತನ, ಇತ್ಯಾದಿಗಳನ್ನು ನಾವು ಕಾಣಬಹುದು.
ಇನ್ನು ಶ್ರದ್ಧಾಚರಿತರಲ್ಲಿ ನಾವು ಸಾಧಾರಣವಾಗಿ ಕಾಣಬಹುದಾದ ಧಮ್ಮಗಳೆಂದರೆ (ಚಿತ್ತವೃತ್ತಿ) ದಾನಶೀಲತೆ, ಶ್ರೇಷ್ಠರ (ಭಿಕ್ಖು) ದರ್ಶನ, ಧಮ್ಮವನ್ನು ಆಲಿಸುವಂತಹ ಜ್ಞಾನಾರ್ಜನೆ, ಪ್ರಸನ್ನತೆ, ಸರಳತೆ, ಪ್ರಮಾಣಿಕತೆ, ಸಹಜತೆ, ಉತ್ತಮವಾದುದರ ಮೇಲೆ ಅಪಾರ ನಂಬಿಕೆ ಇತ್ಯಾದಿಗಳನ್ನು ನಾವು ಕಾಣಬಹುದು.
ಇನ್ನು ಬುದ್ಧಿಚರಿತನಲ್ಲಿ ನಾವು ಕಾಣಬಹುದಾದ ಧಮ್ಮಗಳೆಂದರೆ: ಚೆನ್ನಾಗಿ ಮಾತನಾಡುವಿಕೆ, ಉತ್ತಮ ಮಿತ್ರರನ್ನು ಹೊಂದಿರುವಿಕೆ, ಆಹಾರದಲ್ಲಿ ಪರಿಮಿತಿ ಹೊಂದಿರುವಿಕೆ, ಸ್ಮೃತಿ ಸಂಪಜನ್ಯನಾಗಿ ಇರುವಿಕೆ, ಜಾಗರೂಕತೆಯಲ್ಲಿ ನಿಷ್ಣನಾಗಿರುವಿಕೆ ಯಾವುದನ್ನು ಮೊದಲು ಮಾಡಬೇಕೋ ಅಂತಹುದರಲ್ಲಿ ಪ್ರೇರೇಪಿತ ಕಾರ್ಯಾಚರಣೆ ಮತ್ತು ಪ್ರಜ್ಞಾ ನಿದರ್ೆಶಿತ ಪ್ರಯತ್ನಶೀಲತೆ, ಇತ್ಯಾದಿಗಳನ್ನು ನಾವು ಕಾಣಬಹುದಾಗಿದೆ.
ಇನ್ನು ವಿತರ್ಕಚರಿತನಲ್ಲಿ ನಾವು ಸಾಧಾರಣವಾಗಿ ಕಾಣಬಹುದಾದ ಮನೋವೃತ್ತಿಗಳೆಂದರೆ: ಅತಿ ವಾಚಾಳಿತನ, ಸಾಮಾಜಿಕವಾಗಿ ಅತಿಯಾಗಿ ಇರುವಿಕೆ (ಜನ ಸಂಘ ಪ್ರಿಯತೆ), ಉತ್ತಮವಾದುದರಲ್ಲಿ ಬೇಸರ ಹೊಂದಿರುವಿಕೆ (ಆನಂದಿಸದೆ ಇರುವಿಕೆ), ಭದ್ರತೆಯುತ ಕಾರ್ಯಗಳನ್ನು ಪೂತರ್ಿ ಮಾಡದೆ ಹೋಗುವಿಕೆ, ರಾತ್ರಿಯಲ್ಲಿ ಹೊಗೆಯಾಡಿ ಹಗಲಲ್ಲಿ ಉರಿಯುವಿಕೆ (ರಾತ್ರಿ ಯೋಜನೆಗಳನ್ನು ಹಾಕಿ ಹಗಲಲ್ಲಿ ಸಾಧಿಸುವಿಕೆ), ಮನಸ್ಸು ಅಲ್ಲಿ ಇಲ್ಲಿ ಅತಿಯಾಗಿ ಚದುರುವಿಕೆ ಇತ್ಯಾದಿಗಳನ್ನು ನಾವು ವಿತರ್ಕಚರಿತರಲ್ಲಿ ಕಾಣುತ್ತೇವೆ.
ಈ ರೀತಿಯಾಗಿ ನಾವು ಮನೋವೃತ್ತಿಯ (ಧಮ್ಮ) ಮೂಲಕ ವ್ಯಕ್ತಿತ್ವವನ್ನು ಅರಿಯಬಹುದಾಗಿದೆ.

ವಿಶೇಷ ಸೂಚನೆ: ವ್ಯಕ್ತಿತ್ವವನ್ನು ಅರಿಯುವಂತಹ ಈ ವಿಧಾನಗಳನ್ನು ತಿಪಿಟಕದಲ್ಲಾಗಲಿ ಅಥವಾ ವ್ಯಾಖ್ಯಾನಗಳಲ್ಲಾಗಲಿ ಕಾಣಸಿಗುವುದಿಲ್ಲ. ಇಲ್ಲಿ ಮಹಾನ್ ಗುರುಗಳ ಅವರ ಗುರುಗಳ ಅಭಿಪ್ರಾಯವಿರಬಹುದು. ಇದನ್ನೇ ದೃಢೀಕೃತವಾಗಿ ಸ್ವೀಕರಿಸಬಾರದು. ಮತ್ತೊಂದು ಗಮನಾರ್ಹ ಸೂಚನೆ ಏನೆಂದರೆ ಯಾರೊಬ್ಬರೂ ಸಹಾ ಅದೇ ವ್ಯಕ್ತಿತ್ವದಲ್ಲಿ ಉಳಿಯಲಾರರು. ತಮ್ಮ ಪರಿಶ್ರಮ ಅಥವಾ ದೌರ್ಬಲ್ಯಗಳಿಂದಾಗಿ ಅವರ ಚರಿತವು (ವ್ಯಕ್ತಿತ್ವ) ಬೇರೆಯೂ ಆಗಬಹುದು. ಎನೇ ಇರಲಿ, ಇಷ್ಟು ಚೆನ್ನಾಗಿ ಇರುವ, ಸತ್ಯಕ್ಕೆ ಅತ್ಯಂತ ಸನಿಹವಾಗಿರುವ, ಈ ಸ್ವಭಾವಗಳ ವಿಂಗಡನೆ ನಾನು ಬೇರೆಲ್ಲಿಯೂ ಕಾಣಲಿಲ್ಲ.)

ಚಿತ್ತವನ್ನು ಓದುವಂತಹ ವಿಧಾನ: 

ಇಲ್ಲಿ ಗುರುವು ತನ್ನ ಇದ್ದಿಬಲದಿಂದಾಗಿ ಪರರ ಮನಸ್ಸನ್ನು ಅರಿತು ಅವರ ಸ್ವಭಾವಕ್ಕೆ ಅನುಗುಣವಾಗಿ ಧ್ಯಾನ ವಿಷಯವನ್ನು (ಕಮ್ಮಟ್ಟನ) ನೀಡುತ್ತಾನೆ. ಅಂತಹ ಗುರು ಶಿಷ್ಯನಿಗೆ ಪ್ರಶ್ನೆಯೇ ಕೇಳಲಾರನು. ಇಲ್ಲದಿದ್ದಲ್ಲಿ ಸ್ವಯಂ ಅವರಾಗಿಯೇ ತಾವು ಇಂತಹ ವ್ಯಕ್ತಿತ್ವದವರೆಂದು ಅಥವಾ ಅವರನ್ನು ಪ್ರಶ್ನಿಸಿ ಇಂತಹವರೆಂದು ನಿರ್ಧರಿಸಲಾಗುವುದು.
ಯಾವ ಸ್ವಭಾವದವನಿಗೆ ಯಾವುದು ಸೂಕ್ತ:
ರಾಗಚರಿತನಿಗೆ, ಅನ್ನ, ಗಂಜಿ, ಮೊಸರು, ಮಜ್ಜಿಗೆ, ತರಕಾರಿಗಳು ಸೂಕ್ತವಾದುದು. ಲೋಭಚರಿತನಿಗೆ ನಿಲುಗೆಯ ಅಥವಾ ನಡಿಗೆ ಸೂಕ್ತ ಭಂಗಿಯಾಗಿವೆ. ಇವರಿಗೆ ಸೂಕ್ತವಾದ ಧ್ಯಾನವೆಂದರೆ ವರ್ಣಕಸಿನಾಗಳಾಗಿವೆ. ದ್ವೇಷಚರಿತನಿಗೆ ಉತ್ತಮ ವರ್ಣದ, ಉತ್ತಮ ಗುಣಮಟ್ಟದ, ಉತ್ತಮ ಸುವಾಸನೆಯ, ಅದ್ಭುತ ರುಚಿಯ ಹಾಗು ಪೌಷ್ಠಿಕತೆಯ ಆಹಾರ ಸೂಕ್ತ. ದ್ವೇಷಚರಿತನಿಗೆ ಮಲಗುವ ಅಥವಾ ಕೂಡುವಿಕೆಯ ಭಂಗಿಯು ಸೂಕ್ತವಾದುದು. ಸೂಕ್ತವಾದ ಧ್ಯಾನವೆಂದರೆ ವರ್ಣಕಸಿನಗಳಾಗಿವೆ.
ಮೋಹಚರಿತನಿಗೆ ನಡಿಗೆಯ ಭಂಗಿಯು ಸೂಕ್ತ ಹಾಗು ಈತನಿಗೂ ವರ್ಣ ಕಸಿನಾವೇ ಸೂಕ್ತ. ಆದರೆ ಆ ಮಂಡಲವು ಅಗಲವಾಗಿರಬೇಕು. ಅಂದರೆ ಅಗಲವಾಗಿರುವ ಧ್ಯಾನವಸ್ತುವು ಈತನ ಮನೋ ಏಕಾಗ್ರತೆಗೆ ಸೂಕ್ತವಾದುದು.
ಶ್ರದ್ಧಾಚರಿತನಿಗೆ ಉತ್ತಮವಾದ ಖಾದ್ಯಗಳು (ದ್ವೇಷಚರಿತನಂತೆಯೇ), ಉತ್ತಮ ಭಂಗಿಯ ಕೂಡುವಿಕೆಯ ಅಥವಾ ಮಲಗುವ ಭಂಗಿ, ಧ್ಯಾನವು ವರ್ಣಕಸಿನಾ ಹಾಗು ಅನುಸ್ಮೃತಿಯು ಅತಿಸೂಕ್ತ.
ಬುದ್ಧಿಚರಿತನಿಗೆ ಯಾವುದೇ ನಿಗದಿತವಿಲ್ಲ. ಏಕೆಂದರೆ ಆತನು ಎಂತಹ ವಾಸಸ್ಥಳವಿರಲಿ, ಎಂತಹ ಆಹಾರವಿರಲಿ, ಎಂತಹ ಭಂಗಿಯೇ ಇರಲಿ ಅಥವಾ ಎಂತಹ ಧ್ಯಾನವೇ ಇರಲಿ ಹೊಂದಿಕೊಳ್ಳುತ್ತಾನೆ.
ವಿತರ್ಕಚರಿತನಿಗೆ ಪ್ರಾಕೃತಿಕ ಸ್ಥಳಗಳು ಪರಮ ಸೂಕ್ತ. ಧ್ಯಾನ ವಿಷಯದ ಮಂಡಲವು ಚಿಕ್ಕದಾಗಿರಬೇಕು. ಮಿಕ್ಕೆಲ್ಲವೂ ರಾಗಚರಿತನಂತೆಯೇ ಸೂಕ್ತವಾಗಿರುತ್ತವೆ.


40 ಕಮ್ಮಟ್ಟನಗಳು (ಕರ್ಮಸ್ಥಾನ) ವರ್ಣನೆ (40 ಧ್ಯಾನ ವಿಷಯಗಳ ವರ್ಣನೆ)

ಸ್ವಭಾವಕ್ಕೆ ಅನುಗುಣವಾಗಿ ಧ್ಯಾನ ವಿಷಯಗಳ ಹಂಚಿಕೆ ಎಲ್ಲಾ ರೀತಿಯಲ್ಲೂ ಸ್ಪಷ್ಟೀಕರಣವಾಗಿಲ್ಲ. ಆದರೂ ಈಗ ಬರುವ ವಿವರಣೆಯಿಂದ ಸ್ವಯಂ ಆಗಿ ಸ್ಪಷ್ಟೀಕರಣವಾಗುತ್ತವೆ. ಈ 40 ಧ್ಯಾನ ವಿಷಯಗಳಲ್ಲಿ ಆತನ ಸ್ವಭಾವಕ್ಕೆ ಅನುಗುಣವಾಗಿ ಒಂದೇ ಧ್ಯಾನವನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗು ಅದನ್ನು ಸಿದ್ಧಿಸಬೇಕು. (ನಂತರ ಬೇಕಾದರೆ ಇನ್ನೊಂದನ್ನು ಆಯ್ಕೆ ಮಾಡಬಹುದು). ಈ 40 ಧ್ಯಾನ ವಿಷಯಗಳನ್ನು 10 ವಿಧದಲ್ಲಿ ಅರ್ಥ ಮಾಡಿಕೊಳ್ಳಬಹುದು.
1. ಸಂಖ್ಯಾಗಣನೆಗೆ ಅನುಸಾರವಾಗಿ 2. ಉಪಚಾರ, ಅಪ್ಪನ್ನವಾಹಕವಾಗಿ 3. ಧ್ಯಾನ ಪ್ರಭೇದದಿಂದ 4. ಸಮ ಅತಿಕ್ರಮಣದಿಂದ 5. ವರ್ಧನೆ ಮತ್ತು ಅವರ್ಧನೆಯಿಂದ 6. ಅರಮ್ಮಣತೋ (ಆಲಂಬನೆ) ಯಿಂದ (ವಿಷಯಕ್ಕೆ ಅನುಗುಣವಾಗಿ) 7. ಭೂಮಿಯಿಂದ (ಹುಟ್ಟಲಿರುವ ಲೋಕಕ್ಕೆ ಅನುಗುಣವಾಗಿ) 8. ಗ್ರಹಣೆಯಿಂದ  9. ಪಚ್ಚಯತೋ (ಪ್ರತ್ಯಯವಾಗಿ/ಪರಿಣಾಮಕ್ಕೆ ಅನುಗುಣವಾಗಿ)  10. ಚರಿಯಾನುಕುಲತೋ (ಸ್ವಭಾವಕ್ಕೆ ಅನುಕೂಲವಾಗಿ). ಹೀಗೆ 10 ವಿಧದಲ್ಲಿ ಅರ್ಥಮಾಡಿಕೊಳ್ಳಬಹುದು.

1. ಸಂಖ್ಯಾಗಣನೆಗೆ ಅನುಗುಣವಾಗಿ :  

ಸಂಖ್ಯೆಗೆ ಅನುಗುಣವಾಗಿ ಇವು 40 ಇರುವುದರಿಂದಾಗಿ ಹೀಗೆ ಕರೆಯಲಾಗಿದೆ. 10 ಕಸಿಣಾಗಳು, 10 ಅಶುಭಗಳು, 10 ಅನುಸ್ಮತಿಗಳು, 4 ಬ್ರಹ್ಮ ವಿಹಾರಗಳು, 4 ಅರೂಪವ ಝಾನಗಳು, 1 ಸಂಜ್ಞಾ ಮತ್ತು 1 ಧಾತು ವಿಶ್ಲೇಷಣೆ.
10 ಕಸಿನಾಗಳೆಂದರೆ: ಪೃಥ್ವಿ (ಪಠವಿ) ಕಸಿಣಾ, ಜಲಕಸಿಣಾ (ಅಪೋ), ಅಗ್ನಿಕಸಿಣಾ (ತೇಜೋ), ವಾಯುಕಸಿಣಾ, ನೀಲ (ನೀಲಿ) ಕಸಿಣಾ, ಹಳದಿ (ಪೀತ) ಕಸಿಣಾ, ಶ್ವೇತ ಕಸಿಣಾ, ಬೆಳಕಿನ (ಅಲೋಕ) ಕಸಿಣಾ, ಪರಿಮಿತ ಆಕಾಶ ಕಸಿಣಾ.
10 ಅಶುಭಗಳೆಂದರೆ: ಉಬ್ಬಿದ ಶವ, ನೀಲಿಗಟ್ಟಿದ ಶವ, ಕೀವುಗಟ್ಟಿದ (ಕೊಳೆತ) ಶವ, ಕತ್ತರಿಸಲ್ಪಟ್ಟ ಶವ, ಪ್ರಾಣಿ ಪಕ್ಷಿಗಳು ಭಕ್ಷಿಸಲ್ಪಟ್ಟ ಶವ, ಚೆಲ್ಲಾಪಿಲ್ಲಿಯಾಗಿರುವ ಶವ, ತುಂಡು ತುಂಡಾಗಿ, ಚೆಲ್ಲಾಪಿಲ್ಲಿಯಾಗಿರುವ ಶವ, ರಕ್ತಸಿಕ್ತವಾಗಿರುವ ಶವ, ಹುಳುಗಳಿಂದ ಆವೃತವಾಗಿರುವ ಶವ, ಅಸ್ತಿಪಂಜರ.
10 ಅನುಸ್ಮತಿ (ಅನುಸ್ಮೃತಿ)ಗಳೆಂದರೆ: ಬುದ್ಧಾನುಸ್ಸತಿ, ಧಮ್ಮಾನುಸ್ಸತಿ, ಸಂಘಾನುಸ್ಸತಿ, ಶೀಲಾನುಸ್ಸತಿ, ಚಾಗಾನುಸ್ಸತಿ, ದೇವಾನುಸ್ಸತಿ, ಮರಣಾನುಸ್ಸತಿ, ಕಾಯಗತಾನುಸ್ಸತಿ, ಅನಾಪಾನಾಸ್ಸತಿ, ಉಪಸಮಾನುಸ್ಸತಿ.
4 ಬ್ರಹ್ಮವಿಹಾರಗಳೆಂದರೆ: ಮೆತ್ತಾ, ಕರುಣಾ, ಮುದಿತಾ ಮತ್ತು ಉಪೇಕ್ಖಾ.
4 ಅರೂಪ ಸ್ಥಿತಿಗಳೆಂದರೆ: ಅನಂತಾಕಾಸಾಯತನ, ವಿಞ್ಞಾನಂತಾಯತನ, ಅಕಿಞ್ಚಯಾತನ, ನೇವಸಞ್ಞಾನಾಸಞ್ಞಾಯತನ.
1 ಸಂಜ್ಞೆಯೆಂದರೆ ಆಹಾರವು ಅಸಹ್ಯವೆಂಬ ಧ್ಯಾನ.
1 ವಿಶ್ಲೇಷಣೆಯೆಂದರೆ ನಾಲ್ಕು ಧಾತುಗಳ ವಿಶ್ಲೇಷಣೆ.
ಹೀಗೆ ಸಂಖ್ಯಾನುಗುಣವಾಗಿ ಧ್ಯಾನ ವಿಷಯಗಳನ್ನು ಹೀಗೆ ವಗರ್ಿಕರಿಸಬಹುದು.

2. ಉಪಚಾರ (ಸಾಮಿಪ್ಯ ಸಮಾಧಿ) ಮತ್ತು ಅಪ್ಪಣ್ಣವಾಹಕಕ್ಕೆ ಅನುಗುಣವಾಗಿ:  

ಕಾಯಗತಾನುಸ್ಸತಿ ಮತ್ತು ಅನಾಪಾನಾಸತಿಯ ಹೊರತು 8 ಅನುಸ್ಸತಿಗಳು, ಆಹಾರ ಅಸಹ್ಯ ಸಂಜ್ಞೆ, ಧಾತುಗಳ ವಿಶ್ಲೇಷಣೆ ಇವಿಷ್ಟೂ ಸಾಮಿಪ್ಯ ಸಮಾಧಿ (ದುರ್ಬಲ ಧ್ಯಾನಾಂಗಗಳ ಸಮಾಧಿ/ಉಪಚಾರ) ಗಳಿಸುವುವು, ಮಿಕ್ಕವೆಲ್ಲಾ ಸ್ಥಿರ ಸಮಾಧಿ (ಅಪಣ್ಣ) (ಧ್ಯಾನಾಂಗಗಳ ಬಲಿಷ್ಠ ಸಮಾಧಿ) ಗಳಿಸುವುವು.

3. ಝಾನಕ್ಕೆ ಅನುಗುಣಾವಾಗಿ:  

10 ಕಸಿಣಾಗಳು, ಆನಾಪಾನಾಸತಿ, ಉಪೇಕ್ಖ ಬ್ರಹ್ಮವಿಹಾರ, 4 ರೂಪ ಸಮಾಧಿ ಇವೆಲ್ಲವೂ ನಾಲ್ಕನೇ ಸಮಾಧಿ (ಝಾನ) ಸ್ಥಿತಿಯವರೆಗೆ ತಲುಪಿಸುವವು. ಅರೂಪ ಸಮಾಧಿಯಂತೂ ಇನ್ನೂ ಮೀರಿ ಹೋಗುವುದು.
ಆದರೆ 10 ಅಶುಭ ಮತ್ತು ಕಾಯಗತಾಸತಿ, ಇವು ಕೇವಲ ಪ್ರಥಮ ಸಮಾಧಿಗೆ ನಿಲ್ಲುವುವು. ಮೊದಲ ಮೂರು ಬ್ರಹ್ಮ ವಿಹಾರಗಳು ತೃತೀಯ ಸಮಾಧಿವರೆಗೆ ಕರೆದೊಯ್ಯುತ್ತವೆ.

4. ಸಮತಿಕ್ರಮಣದಿಂದ:  

ಇಲ್ಲಿ ಅತಿಕ್ರಮಿಸಿ ದಾಟಿ ಮುಂದಕ್ಕೆ, ಉನ್ನತಿಗೆ, ಇನ್ನೂ ಪರಮ ಸೂಕ್ಷ್ಮ ಸ್ಥಿತಿಗೆ ಹೋಗಬಹುದಾಗಿದೆ. ಇದರಲ್ಲಿ ಎರಡು ವಿಧವಿದೆ. 1. ಧ್ಯಾನಂಗಗಳನ್ನು ಅತಿಕ್ರಮಿಸಿ 2. ಧ್ಯಾನ ವಿಷಯವನ್ನು ಅತಿಕ್ರಮಿಸಿ ದಾಟಿ, ಮುಂದೆ ಸಾಗಬಹುದಾಗಿದೆ. ಅಂದರೆ ಐದು ಧ್ಯಾನಾಂಗಗಳಿವೆ. ಇವುಗಳನ್ನು ವಿತರ್ಕ, ವಿಚಾರ ಮೀರಿ ದ್ವಿತೀಯ ಸಮಾಧಿಗೆ ಹೋಗುವುದು. ನಂತರ ಪ್ರೀತಿಯನ್ನು ಮೀರಿ ತೃತೀಯ ಸಮಾಧಿಗೆ ನಂತರ, ಸುಖವನ್ನು ಮೀರಿ ಚತುರ್ಥ ಧ್ಯಾನ ಪ್ರಾಪ್ತಿಮಾಡುವರು. ಇಂತಹ ಅತಿಕ್ರಮಣಕ್ಕೆ ಧ್ಯಾನಾಂಗಗಳ ಅತಿಕ್ರಮಣ ಎನ್ನುವರು.
ಆದರೆ ಚತುರ್ಥ ಧ್ಯಾನದ ನಂತರ ಧ್ಯಾನ ವಿಷಯವನ್ನು ಬದಲಾಯಿಸುವರು. ಅಂದರೆ ಚತುರ್ಥವನ್ನು ಮೀರಲು ಅನಂತಾಕಾಶವನ್ನು, ನಂತರ ಅದನ್ನು ಮೀರಲು ಅನಂತವಿಞ್ಞಾನ, ನಂತರ ಅದನ್ನು ಮೀರಲು ಅಕಿಂಚ (ಏನೂ ಇಲ್ಲ) ವನ್ನು ಆಧಾರವಾಗಿಯು ಹೀಗೆ ಸಾಗುತ್ತಾರೆ. ಇದಕ್ಕೆ ಧ್ಯಾನದ ವಿಷಯ ಅತಿಕ್ರಮಣವೆನ್ನುವರು.

5. ವರ್ಧನೆ (ವಿಕಾಸ/ವಿಸ್ತಾರ) ಮತ್ತು ಅವರ್ಧನೆ (ಅವಿಸ್ತಾರ)

ಸಮಾಧಿಯಲ್ಲಿ ಆಳಕ್ಕೆ ಹೋಗುತ್ತಿದ್ದಂತೆ ಪಟಿಭಾಗ (ಪ್ರತಿಫಲಿತ) ನಿಮಿತ್ತ ಉದಯಿಸುವುದು. ಅದನ್ನು ವಿಸ್ತಾರ ಮಾಡುವಿಕೆಯೇ ವರ್ಧನೆ ಎನ್ನುತ್ತಾರೆ. ಇದನ್ನು ನಾವು ಕಸಿಣಾ ಝಾನದಲ್ಲಿ ಮಾತ್ರ ಮಾಡಬೇಕಾಗುತ್ತದೆ. ಅಲ್ಲಿ ಈ ಪ್ರತಿಫಲಿತ ಸಂಜ್ಞೆಯನ್ನು ವಿಸ್ತರಿಸಿದಷ್ಟು ಅದರ ಲಾಭವನ್ನು ಅತಿಯಾಗಿ ಪಡೆಯುವೆವು. ಉದಾ: ದಿವ್ಯಚಕ್ಷು, ದಿವ್ಯಶೋತ್ರ, ಪರರ ಚಿತ್ತ ಓದುವಿಕೆ ಇತ್ಯಾದಿ ಅಭಿಜ್ಞಾ ಲಾಭಗಳು ಸಿಗುವುದು. ಹಾಗಾದರೆ ಅನ್ಯ ಧ್ಯಾನಗಳಲ್ಲಿ ವಿಸ್ತರಿಸಲು ಆಗದೆ? ಎಂಬ ಪ್ರಶ್ನೆ ಮೂಢಬಹುದು. ಆದರೆ ಹಾಗೆ ವಿಸ್ತರಿಸಿದರೂ ಯಾವುದೇ ಲಾಭವಿರದ ಕಾರಣ ಹಾಗು ವಿಸ್ತರಿಸಲಾಗದ ಕಾರಣ ಕಸಿಣಾ ಹೊರತು ಅನ್ಯ ಧ್ಯಾನ ವಿಷಯಗಳನ್ನು ಅವರ್ಧನ (ವಿಸ್ತರಿಸದಿರುವಿಕೆ) ಎನ್ನುವೆವು.
ಉದಾ: ಅಶುಭಾ ಧ್ಯಾನದಲ್ಲಿ ಅಸ್ತಿ ಪಂಜರವನ್ನು ವಿಸ್ತರಿಸಿದರೆ ಅದರಿಂದ ಯಾವ ಲಾಭವೂ ಇಲ್ಲ. ಅಲ್ಲಿ ಧ್ಯಾನದ ಉದ್ದೇಶ, ದೇಹ ಅಸಹ್ಯ ಎಂಬ ಜ್ಞಾನ ಪಡೆಯುವುದು ಹೊರತು ಅಸ್ತಿಗಳ ರಾಶಿ ಹಾಕುವುದಲ್ಲ. ಹೀಗಾಗಿ ಅಶುಭದ ಧ್ಯಾನ ವಿಷಯವು ಪರಿಮಿತಿಸಂಜ್ಞಾ ಎನಿಸುತ್ತದೆ.
ಇನ್ನೂ ಅನಾಪಾನಸತಿಯಲ್ಲೂ ಸಹಾ ಉಸಿರಾಟದ ವಿಸ್ತಾರ ಮಾಡಿದರೆ ಗಾಳಿಯ ವಿಸ್ತರಣೆಯಾಗುವುದೇ ವಿನಃ ಮತ್ಯಾವ ಲಾಭವೂ ಇಲ್ಲ. ಪರಿಮಿತ ಭಾಗದಲ್ಲೂ ಅಷ್ಟೇ ಲಾಭ ಸಿಗುವುದು.
ಇನ್ನು ಮೆತ್ತಾ ಧ್ಯಾನದಲ್ಲೂ ಸಹಾ ವಿಸ್ತರಣೆ ಮಾಡಿದರೆ ಜೀವಿಗಳ ವೃದ್ಧಿ ಮಾಡಿದಷ್ಟು ಯಾವುದೇ ಪ್ರತ್ಯೇಕ ಲಾಭವಿಲ್ಲ. ಅಲ್ಲಿ ದಿಕ್ಕುಗಳಿಗೆ ಪ್ರಸರಿಸುವ ವಿಧಾನವಿದೆ. ಆದರೆ ಅದು ಪ್ರತಿಭಾಗ ನಿಮಿತ್ತದ ವಿಸ್ತರಣೆಯಲ್ಲ ಎನ್ನುವುದು ತಿಳಿದುಕೊಳ್ಳುವುದು ಒಳ್ಳೆಯದು.
ಇನ್ನು ಅರೂಪ ಧ್ಯಾನಗಳಲ್ಲೂ ಸಹಾ ಸೂಕ್ಷ್ಮದಿಂದ ಪರಮ ಸೂಕ್ಷ್ಮತೆ ಅಥವಾ ಆ ಸ್ಥಿತಿಯನ್ನು ಪೂರ್ಣವಾಗಿ ವಿಮುಖವಾಗಿ ಇನ್ನೂ ಉತ್ತಮವಾದ ಸ್ಥಿತಿಯನ್ನು ಹೊಂದುವ ಉದ್ದೇಶವಿರುತ್ತದೆ ವಿನಃ ವಾಸ್ತವತೆಯ ಉದ್ದೇಶವಿರುವುದಿಲ್ಲ ಹಾಗು ಅದರಿಂದಾಗಿ ಯಾವುದೇ ಲಾಭವೂ ಇರುವುದಿಲ್ಲ.
ಇನ್ನು ಉಳಿದ ಧ್ಯಾನಗಳ ವಿಷಯಗಳಲ್ಲಿ ಪತಿಭಾಗ ನಿಮಿತ್ತವೇ ಇರುವುದಿಲ್ಲ. ಉದಾ: ಧಮ್ಮಾನುಸ್ಸತಿ. ಹೀಗಾಗಿ ಅಲ್ಲಿ ವಿಸ್ತರಣೆಯ ಮಾತೇ ಬರುವುದಿಲ್ಲ.

6. ಅರಮ್ಮಣತೊ (ಅಲಂಬನೆ/ಧ್ಯಾನ ವಿಷಯಕ್ಕೆ ಅನುಗುಣವಾಗಿ)

40 ಧ್ಯಾನ ವಿಷಯಗಳಲ್ಲಿ 22 ಧ್ಯಾನಗಳಲ್ಲಿ ಮಾತ್ರ ಪತಿಭಾಗ ನಿಮಿತ್ತವಿದೆ. ಇವೇ ಆ ಧ್ಯಾನಗಳಿಗೆಲ್ಲಾ ಪತಿಭಾಗವೇ ಅವಲಂಬನೆಯಾಗಿದೆ. ಅವೆಂದರೆ: 10 ಕಸಿಣಾ, 10 ಅಶುಭಾ, ಅನಾಪಾನಸತಿ, ಕಾಯಗತಾನುಸ್ಸತಿ. ಇನ್ನು ಉಳಿದ 18 ಧ್ಯಾನ ವಿಷಯಗಳಲ್ಲಿ ಪತಿಭಾಗ (ಪ್ರತಿಫಲನ ಚಿಹ್ನೆ) ನಿಮಿತ್ತವಿಲ್ಲ ಮತ್ತು ಉಳಿದ 8 ಅನುಸ್ಸತಿಗಳು (ಅನಾಪಾನಾ ಮತ್ತು ಕಾಯಗತಾನುಸ್ಸತಿ ಹೊರತು). ಆಹಾರ ಅಸಹ್ಯತೆ ಧ್ಯಾನ, ಚತುಧಾತು ವವಟ್ಟನ (ಧಾತುಗಳ ವಿಶ್ಲೇಷಣೆ) ವಿನ್ಯಾನಂಚಾಯತನ, ನೇವಸಞ್ಞನಾಸಞ್ಞಾಯತನ; ಇವು ಒಟ್ಟು 12 ಧ್ಯಾನಗಳಿಗೆ ಸ್ವಭಾವ ಧಮ್ಮವೇ ಅವಲಂಬಿತವಾಗಿದೆ. ಉಳಿದ 6 ಧ್ಯಾನಗಳಿಗೆ ವಗರ್ಿಕರಣವಲ್ಲದ (ನವಲ್ಲಭ) ಧ್ಯಾನ ವಿಷಯಗಳಾಗಿವೆ. ಮತ್ತೆ ಪತಿಭಾಗ ನಿಮಿತ್ತಗಳಲ್ಲಿ 8 ಧ್ಯಾನ ವಿಷಯಗಳು ಚಲನಾತ್ಮಕ ಪತಿಭಾಗವಾಗಿದೆ ಹಾಗು 10 ಸ್ಥಿರ ಪಟಿಭಾಗ ನಿಮಿತ್ತವಾಗಿದೆ. (ಚಲನಾತ್ಮಕ ಪತಿಭಾಗಗಳೆಂದರೆ: ಕೀವುಗಟ್ಟಿದ, ರಕ್ತಸಿಕ್ತವಾದ, ಹುಳುಗಳು ಸುತ್ತುವರೆದ ಶವ, ಅನಾಪಾನಸತಿ, ಜಲಕಸಿನಾ, ಅಗ್ನಿಕಸಿನಾ, ವಾಯುಕಸಿಣಾ ಮತ್ತು ಅಲೋಕ ಕಸಿಣಾ).

7. ಭೂಮಿ (ಲೋಕಕ್ಕೆ (ಕ್ಷೇತ್ರಕ್ಕೆ ಅನುಗುಣವಾಗಿ): 

ಇಲ್ಲಿ 10 ಅಶುಭಾ, ಕಾಯಗತಾಸತಿ, ಆಹಾರ ಪ್ರತಿಕೂಲವ ಸಞ್ಞಾ; ಈ 12 ಧ್ಯಾನ ದೇವಲೋಕದಲ್ಲಿ ಕಾಣಸಿಗವು. ಈ 12 ಹಾಗು ಜೊತೆಗೆ ಅನಾಪಾನಸತಿಯು ಬ್ರಹ್ಮಲೋಕದಲ್ಲಿಯೂ ಸಿಗುವುದಿಲ್ಲ. ಅರೂಪ ಝಾನಗಳ ಹೊರತು ಬೇರ್ಯಾವುದು ಸಹಾ ಯಾವ ಲೋಕದಲ್ಲಿಯೂ ಸಿಗಲಾರದು. ಆದರೆ ಎಲ್ಲಾ ಧ್ಯಾನಗಳು ಮಾನವ ಲೋಕದಲ್ಲಿ ಕಾಣಸಿಗುವುವು. ಹೀಗೆ ಈ ಅರ್ಥದಲ್ಲಿ ಭೂಮಿ ವಿವರಿಸಲಾಗಿದೆ.

8. ಗ್ರಹಣೆಯಿಂದ:

ಇಲ್ಲಿ ಧ್ಯಾನಸಿದ್ಧಿಯು ಮೂರು ಇಂದ್ರೀಯ ದ್ವಾರಗಳಿಂದ ಸಂಭವಿಸುತ್ತವೆ. ಅವೆಂದರೆ: ಕಣ್ಣು, ಕಿವಿ ಮತ್ತು ಶರೀರದಿಂದ ಧ್ಯಾನದ ಆರಂಭವಾಗುವುದು. ಕಣ್ಣಿನಿಂದ ಆರಂಭವಾಗುವ ಧ್ಯಾನಗಳೆಂದರೆ ವಾಯುಕಸಿಣಾದ ಹೊರತು ಎಲ್ಲಾ ಕಸಿಣಾ ಧ್ಯಾನಗಳು, 10 ಅಶುಭಗಳು; ಹೀಗೆ ಒಟ್ಟು 19 ಧ್ಯಾನಗಳಿಗೆ ಕಣ್ಣೇ ಆಧಾರವಾಗಿರುತ್ತದೆ (ಕಣ್ಣಿಂದ ಗ್ರಹಿಸಿಯೇ ಧ್ಯಾನವಾಗುತ್ತದೆ).
ಕಾಯಗತಾಸತಿಯಲ್ಲಿ 5 (ಕೂದಲು, ರೋಮ, ನಖ, ದಂತ ಮತ್ತು ಚರ್ಮ)ನ್ನು ನೋಡಿ, ಉಳಿದವನ್ನು ಕೇಳಿ ಧ್ಯಾನವನ್ನು ಆರಂಭಿಸಬೇಕಾಗುತ್ತದೆ. ಹೀಗಾಗಿ ಇವು ನೋಡಿ ಮತ್ತು ಕೇಳಿ ಗ್ರಹಿಸಲಾಗುತ್ತದೆ.
ಅನಾಪಾನಾಸತಿ ಮತ್ತು ವಾಯುಕಸಿಣಾ ಸ್ಪರ್ಶದಿಂದ ಗ್ರಹಿಸಿ ಸಾಧಿಸಲಾಗುತ್ತದೆ.
ಉಳಿದ 18 ಧ್ಯಾನಗಳನ್ನು ಕೇಳಿಯೇ ಧ್ಯಾನ ಮಾಡಲಾಗುತ್ತದೆ.
ವಾಯು ಕಸಿಣಾವನ್ನು ನೋಡಿಯೂ ಮತ್ತು ಸ್ಮಶರ್ಿಸಿಯೂ ಎರಡು ವಿಧದಲ್ಲಿ ಧ್ಯಾನಿಸಲಾಗುತ್ತದೆ.
ಉಪೇಕ್ಖಾ ಧ್ಯಾನದಲ್ಲಿ ಅರೂಪಗಳನ್ನು ಧ್ಯಾನದಲ್ಲಿ ಪಳಗದವರಿಂದ ಗ್ರಹಿಸಲು ಸಾಧ್ಯವೇ ಇಲ್ಲ.
ಉಳಿದ 35 ಧ್ಯಾನಗಳನ್ನು ಮಾತ್ರ ಅವರು ಗ್ರಹಿಸಲು ಸಾಧ್ಯ. ಇದು ಗ್ರಹಣೆಯಿಂದ ಧ್ಯಾನ ಎಂಬಂತೆ ವಗರ್ಿಕರಿಸಲಾಗಿದೆ.

9. ಸ್ಥಿತಿ (ಪಚ್ಚಯತೋ) (ಪರಿಣಾಮಕ್ಕೆ ಅನುಗುಣವಾಗಿ): 

ಇಲ್ಲಿ ವಾಯು ಕಸಿಣಾದ ಹೊರತು ಉಳಿದ 9 ಕಸಿಣಾ ಧ್ಯಾನದಿಂದ ಅರೂಪ ಝಾನಗಳ ಸ್ಥಿತಿಯು ಸಿಗುವುದು. 10 ಕಸಿಣಾಗಳಿಂದ ಅಭಿಜ್ಞ ಲಾಭವಾಗುವುದು. ಆ ಸ್ಥಿತಿಗಳಿಗೆ ಕಸಿಣಾ ಕಾರಣ. ಮೊದಲು ಮೂರು ಬ್ರಹ್ಮವಿಹಾರದಿಂದಲೇ ನಾಲ್ಕನೆಯ ಬ್ರಹ್ಮವಿಹಾರ ಲಭಿಸುವುದು. ಪ್ರತಿ ಕೆಳಹಂತದ ಅರೂಪ ಝಾನವು ಅವರ ಮೇಲಿನ ಹಂತಕ್ಕೆ ಸೋಪಾನವಾಗಿದೆ. ನೇವಸಞ್ಞಾನಾಸಞ್ಞವೇ ನಿರೋಧ ಸಮಾಪತ್ತಿಗೆ ಕಾರಣವಾಗಿದೆ. ಇವೆಲ್ಲಾ ಸುಖಕ್ಕೆ, ಪಞ್ಞಾಕ್ಕೆ, ಸುಗತಿಗೆ ಕಾರಣಕರ್ತವಾಗಿದೆ.

10. ಚರಿಯಾನುಕೂಲೆ (ಸ್ವಭಾವಕ್ಕೆ ಅನುಕೂಲವಾಗಿ): 

ಇಲ್ಲಿ ಯಾವ ಸ್ವಭಾವಕ್ಕೆ ಯಾವ ಧ್ಯಾನವು ಅನುಕೂಲವೆಂದು ನಿರ್ಧರಿಸಿ ನೀಡಲಾಗುತ್ತದೆ. ರಾಗಚರಿತರಿಗೆ 10 ಅಶುಭ, ಕಾಯಗತಾಸತಿ, ಈ 11 ಧ್ಯಾನಗಳು. ದೋಷಚರಿತರಿಗೆ 4 ಬ್ರಹ್ಮವಿಹಾರ, 4 ವರ್ಣಕಸಿಣಾ ಸೂಕ್ತವಾದುದು. ಮೋಹಚರಿತರಿಗೆ ಹಾಗು ವಿತರ್ಕಚರಿತರಿಗೆ ಅನಾಪಾನಸತಿ, ಶ್ರದ್ದಾವಂತರಿಗೆ ಮೊದಲ 6 ಅನುಸ್ಸತಿಗಳು.
ಬುದ್ಧಿಚರಿತರಿಗೆ ಮರಣಾನುಸ್ಸತಿ, ಉಪಸಮಾನುಸ್ಸತಿ, ಚಾತುಧಾತುವವತ್ಥನ 4 ಆಹಾರ ಪತಿಕೂಲೆಸಞ್ಞಾ. ಉಳಿದ ಕಸಿಣಾಗಳು, ಅರೂಪ ಝಾನಗಳು ಎಲ್ಲರಿಗೂ, ಯಾವುದೇ ಕಸಿಣಾವಾಗಲಿ ವಿರ್ತಚರಿತರಿಗೆ ಪರಿಮಿತವಾಗಿಯು ಹಾಗು ಮೋಹಚರಿತರಿಗೆ ಅಪರಿಮಿತವಾಗಿ ನೀಡಬೇಕು.
ಇವಿಷ್ಟು ಸ್ವಭಾವಕ್ಕೆ ಅನುಕೂಲವಾಗಿ ಧ್ಯಾನದ ವಗರ್ಿಕರಣವಾಗಿದೆ.

ಮೇಘಿಯ ಸುತ್ತದ ಉಲ್ಲೇಖ:

ಒಬ್ಬನು ಈ ಐದರ (ಶೀಲ, ಸುಶೀಲರ ಸ್ನೇಹ, ಒಳ್ಳೆಯದನ್ನು ಯೋಗ್ಯವಾದುದನ್ನು ಆಲಿಸುವಿಕೆ, ಪ್ರಯತ್ನಶೀಲತೆ ಮತ್ತು ಪ್ರಜ್ಞಾ) ಜೊತೆಗೆ ಈ ನಾಲ್ಕನ್ನು ವೃದ್ಧಿಗೊಳಿಸಬೆಕು:
1. ಅಶುಭ ಧ್ಯಾನವನ್ನು ರಾಗದ ವರ್ಜನೆಗಾಗಿ ವೃದ್ಧಿಗೊಳಿಸಬೇಕು.
2. ಮೆತ್ತಾ ಧ್ಯಾನವನ್ನು ದ್ವೇಷದ ವರ್ಜನೆಗಾಗಿ ವೃದ್ಧಿಗೊಳಿಸಬೇಕು.
3. ಅನಾಪಾನಾಸತಿಯನ್ನು ವಿತರ್ಕದ ವರ್ಜನೆಗಾಗಿ ವೃದ್ಧಿಗೊಳಿಸಬೇಕು.
4. ಅನಿತ್ಯತೆಯ ತೀವ್ರತೆಯನ್ನು ನಾನು ಎಂಬುದರ ವರ್ಜನೆಗಾಗಿ ವೃದ್ಧಿಗೊಳಿಸಬೇಕು.
ಸಾಧನೆ ಮಾಡತಕ್ಕವನು ಧ್ಯಾನ ವಿಷಯ ನೀಡುವವರ ಬಳಿಗೆ ಬರಬೇಕು. ಆದರೆ ನೆನಪಿರಲಿ; ಧ್ಯಾನ ವಿಷಯ ನೀಡುವವನು ಬುದ್ಧ ಭಗವಾನರಿಗೆ ನಿಷ್ಠನಾಗಿರಬೇಕು. ಧ್ಯಾನ ವಿಷಯ ಕೇಳುವವನು ಅವನ್ನು ಪಾಲಿಸುವ ಶುದ್ಧ ಆಶಯವುಳ್ಳವನಾಗಿರಬೇಕು. ಭಗವಾನರಿಗೆ ನಿಷ್ಠನಾಗಿದ್ದರೆ ಸಾಧನೆ ಮಾಡುವಾಗ ಕೇವಲ ಆನಂದವು ಉದಯಿಸುತ್ತದೆ. ಅಂತಹವರಿಗೆ ಯಾವ ಭಯವೂ ಉದಯಿಸದು.
ಕೆಲವರು ಏಕಾಂತದಲ್ಲಿ ರಾತ್ರಿ ವೇಳೆ ಇದ್ದಾಗ ಹೆದರಿಸುವ ಆಕೃತಿಗಳು ಕಾಣಿಸಿಕೊಳ್ಳಬಹುದು. ಆದರೆ ಭಗವಾನರಲ್ಲಿ ನಿಷ್ಠೆ ಇದ್ದಾಗ ಆತನು ಭಯಪಡಲಾರ. ಅಂತಹವು ಆತನಿಗೆ ಮರುಕಳಿಸಲಾರವು ಆದರೆ ಭಗವಾನರಲ್ಲಿ ನಿಷ್ಠೆ ಇಲ್ಲದಿದ್ದಾಗ ಆತನು ಭೀತಿಪಡಬಹುದು. ಸಾಧನೆಯನ್ನು ಬಿಟ್ಟು ಮರಳಿ ಪ್ರಾಪಂಚಿಕನಾಗಲುಬಹುದು. ಇವೆಲ್ಲಾ ಅಡ್ಡಿಗಳನ್ನು ದೃಢತಾಪೂರ್ವಕ ಎದುರಿಸಬೇಕು.
ಯಾವ ಸಾಧಕನು ತನ್ನ ಗುರುಪ್ರಾಪ್ತಿಯನ್ನು ನಿಷ್ಠನಾಗಿರುತ್ತಾನೋ ಆತನು ತನ್ನನ್ನು ತಿದ್ದಿಕೊಳ್ಳುವಿಕೆಯಲ್ಲಿ ಅನುಕೂಲಿಯಾಗಿರುತ್ತಾನೆ ಹೊರತು, ಹಠಮಾರಿಯಾಗಿರುವುದಿಲ್ಲ. ಅಂತಹವರಿಗೆ ಅವರ ಹಿತೈಷಿ ಗುರುಗಳು ಸಹಾಯ ಮಾಡುತ್ತಾರೆ. ಆತನ ವೃದ್ಧಿಯು ಆಗುವುದು. ಉದಾ: ಚುಲ್ಲಪಂಕನ ಶಿಷ್ಯರ ಬಗ್ಗೆ ತಿಳಿಯೋಣ.
ಮೂವರು ಶಿಷ್ಯರು ಚುಲ್ಲಪಂಥಕನ ಬಳಿಗೆ ಬಂದರು. ಅವರಲ್ಲಿ ಒಬ್ಬನು ಹೀಗೆ ಹೇಳಿದನು: ಪೂಜ್ಯರೇ, ನಾನು 100 ಮನುಷ್ಯರಷ್ಟು ಎತ್ತರದ ಬೆಟ್ಟದಿಂದ ಬೀಳುವವನಿದ್ದೆ, ಆದರೆ ನಿಮ್ಮ ದಯೆಯಿಂದಲೇ ಪಾರಾದೆನು. ಎರಡನೆಯವನು ಹೀಗೆ ಹೇಳಿದನು: ಪೂಜ್ಯರೇ, ನಾನು ತಲೆಕೆಳಗಾಗಿ ಬಿದ್ದು, ನುಚ್ಚುನೂರಾಗಿ ಆಗುವವನಿದ್ದೆ, ಆದರೆ ನಿಮ್ಮ ದಯೆಯಿಂದ ಪಾರಾಗಿದ್ದೇನೆ. ಮೂರನೆಯವನು ಭಂತೆ, ನಾನು ಉಸಿರನ್ನು ನಿಲ್ಲಿಸಿ ಸಾಯಬೇಕೆಂದಿದ್ದೆ, ಆದರೆ ನಿಮ್ಮ ದಯೆಯಿಂದಾಗಿ, ನಿಮ್ಮ ಪ್ರಯೋಜನದಿಂದಾಗಿ ಹೀಗಾಗಲಿಲ್ಲ. ಇವರು ಸಿದ್ಧಿಸುವಿಕೆಯಲ್ಲಿ ಸಿದ್ಧರಾಗಿರುವವರು ಎಂದು ಅರಿತ ಥೇರರು ಅವರಿಗೆ ಧ್ಯಾನ ವಿಷಯವನ್ನು ನೀಡಿದರು. ಅದನ್ನು ಪಾಲಿಸಿದ ಮೂರು ಶಿಷ್ಯರು ಅರಹಂತತ್ವ ಪ್ರಾಪ್ತಿಮಾಡಿದರು. ಇದೇ ಸ್ವ-ನಿಷ್ಠತೆಗೆ ಇರುವ ಲಾಭವಾಗಿದೆ.

ನೈಜ್ಯ ಬಾಳುವಿಕೆಯ ಮಹತ್ವ:

ನಿಷ್ಠೆಯುತವಾದ ನಿಧರ್ಾರವಿರಬೇಕು, ಧ್ಯಾನದೆಡೆಯೇ ಮನವು ಬಾಗಿರಬೇಕು, ಅನ್ಯಕಡೆಗಳಲ್ಲಿ ಚದುರಿ ಹೋಗಬಾರದು. ಆರುಬಗೆಯಲ್ಲಿ ಕುಶಲದೆಡೆಗೆ ಚಿತ್ತವು ಭಾಗಿರುವುದರಿಂದಾಗಿ ಆಕರ್ಷಣೆಯಾಗುವುದರಿಂದಾಗಿ, ಬೋಧಿಸತ್ವರ ಬೋಧಿಪ್ರಾಪ್ತಿಯು ಪಕ್ವವಾಗುವುದು. ಹೇಗೆಂದರೆ ಯಾವ ಬೋಧಿಸತ್ವರು ಅಲೋಭದೆಡೆಗೆ ಭಾಗಿರುವರೋ ಅವರು ಲೋಭದಲ್ಲಿ ದೋಷವನ್ನು ಕಾಣುತ್ತಾರೆ. ಹಾಗೆಯೇ ಅದ್ವೇಷದಲ್ಲಿ ಬಾಗಿರುವಂತಹ ಬೋಧಿಸತ್ವರು ದ್ವೇಷದಲ್ಲಿ ದೋಷವನ್ನು ಕಾಣುತ್ತಾರೆ. ಹಾಗೆಯೇ ಅಮೋಹದಲ್ಲಿ ಬಾಗಿರುವಂತಹ ಬೋಧಿಸತ್ವರು ಮೋಹದಲ್ಲಿ ದೋಷವನ್ನು ಕಾಣುತ್ತಾರೆ. ಅದೇರೀತಿ ತ್ಯಾಗದ ಕಡೆಗೆ ಆಕಷರ್ಿತರಾಗಿರುವಂತಹ ಬೋಧಿಸತ್ವರಿಗೆ ಗೃಹಜೀವನವು ದೋಷಯುತವಾಗಿ ಕಾಣುವುದು. ಏಕಾಂತದಲ್ಲಿ ಬಾಗಿರುವಂತಹ, ಆಕಷರ್ಿತರಾಗಿರುವಂತಹ ಬೋಧಿಸತ್ವರಿಗೆ ಸಮಾಜಿಕ ಜೀವನ, ಸಂಘಗಳು, ಜನರಲ್ಲಿ ಬೆರೆಯುವಿಕೆ ದೋಷವಾಗಿ ಕಾಣಿಸುತ್ತದೆ. ಹಾಗೆಯೇ ನಿಬ್ಬಾಣದೆಡೆ ಬಾಗಿರುವ, ಆಕಷರ್ಿತನಾಗಿರುವ ಬೋಧಿಸತ್ವನಿಗೆ ಎಲ್ಲಾರೀತಿಯ ಲೋಕಗಳು, ಭವವು ದೋಷಯುತವಾಗಿ ಕಾಣಿಸುವುದು.
ಇದೇರೀತಿಯಾಗಿ ಬೋಧಿಸತ್ವ, ಸೋತಾಪನ್ನ, ಸಕದಾಗಾಮಿ, ಅನಾಗಾಮಿಗಳು, ಅರಹಂತರು, ಪಚ್ಚೇಕ ಬುದ್ಧರು ಅಷ್ಟೇ ಏಕೆ ಸಮ್ಮಾಸಂಬುದ್ಧರು ಸಹಾ ಕುಶಲ ಮೂಲದೆಡೆಗೆ ಆಕಷರ್ಿತರಾಗಿ, ಅಕುಶಲದಿಂದ ವಿಕಷರ್ಿತರಾಗಿ ತಮ್ಮ ಗುರಿಯನ್ನು ಹೊಂದುತ್ತಾರೆ. ಆದ್ದರಿಂದ ಈ ಆರುಬಗೆಯ ಬಾಗುವಿಕೆಯನ್ನು ಹೊಂದಬೇಕು. ಆತನು ಪೂರ್ಣ ಹೃದಯದಿಂದ, ಆನಂದದಿಂದ ಧ್ಯಾನಾಸಿದ್ಧಿಗೆ ಸಂಕಲ್ಪಬದ್ಧನಾಗಿ, ಧ್ಯಾನಕ್ಕೆ ಗೌರವ ನೀಡುವವನಾಗಿ, ಧ್ಯಾನದಲ್ಲಿಯೇ ಬಾಗಿರುವವನಾಗಿ, ನಿಬ್ಬಾಣಕ್ಕೆ ಸಂಕಲ್ಪಬದ್ಧನಾಗಿ, ನಿಬ್ಬಾಣಕ್ಕೆ ಗೌರವ ನೀಡುವವನಾಗಿ ನಿಬ್ಬಾಣದತ್ತಲೇ ಬಾಗಿದವನಾಗಿ ಸಾಗಬೇಕು.
ಅಂತಹವನಿಗೆ ಧ್ಯಾನ ವಿಷಯದ ಬಗ್ಗೆ ವಿವರಿಸಿದಾಗ, ಸಾಧಕನು ಅವನೆಲ್ಲಾ ಸ್ಪಷ್ಟವಾಗಿ ನೆನಪಿಡುತ್ತಾನೆ ಹಾಗು ಪಾಲಿಸಲು ತೊಡಗುತ್ತಾನೆ. ಆತನಿಗೆ ಪಠವಿ ಕಸಿಣಾವನ್ನು ವಿವರಿಸತೊಡಗಿದಾಗ ಅವರ ಒಂಭತ್ತು ವಿಷಯಾಂಶಗಳನ್ನು ವಿವರಿಸಬೇಕು. ಕಸಿಣಾದ 4 ತಪ್ಪುಗಳು, ಕಸಿಣಾದ ನಿಮರ್ಿಸುವಿಕೆ, ಕಸಿಣಾದ ಅಭಿವೃದ್ಧಿ, 2 ವಿಧದ ನಿಮಿತ್ತಗಳು, 2 ವಿಧದ ಸಮಾಧಿ, 7 ವಿಧದ ಹೊಂದುವಿಕೆ ಮತ್ತು ಹೊಂದದೆಯಿರುವಿಕೆ, ಸಮಾಧಿಯ 10 ಕೌಶಲ್ಯಗಳು, ಪ್ರಯತ್ನಶೀಲತೆಯ ಸಮತೆ ಮತ್ತು ಸಮಾಧಿಯ ನಿದರ್ೆಶನಗಳು ಇವಿಷ್ಟನ್ನು ವಿವರಿಸಬೇಕಾಗುತ್ತದೆ.
ಇತರ ಧ್ಯಾನ ವಿಷಯಗಳನ್ನು ಸಹಾ ಪೂರ್ಣವಾಗಿ, ಯೋಗ್ಯವಾಗಿ, ಸ್ಪಷ್ಟವಾಗಿ, ವಿವರಿಸಿದಾಗ ಧ್ಯಾನಿಯು ಕೇಳುವಾಗಲೇ ನಿಮಿತ್ತವನ್ನು ಗ್ರಹಿಸುತ್ತಾನೆ (ಹೇಗೆಂದರೆ: ಗ್ರಹಿಸಿ, ಯಾವುದು ಮೊದಲು, ನಂತರದ್ದು ಏನು, ಅದರ ಅರ್ಥ, ಉದ್ದೇಶ, ಸಾಮ್ಯತೆಯೆಲ್ಲಾ ಅರಿಯುತ್ತಾನೆ ಹೀಗೆ ಆತನು ಆಲಿಸುತ್ತಾನೆ). ಈ ರೀತಿಯಾಗಿ ಗ್ರಹಿಸಿದಾಗ ಆತನು ಧ್ಯಾನವನ್ನು ಚೆನ್ನಾಗಿ ಗ್ರಹಿಸುತ್ತಾನೆ. ಆಗ ಆತನು ಪ್ರಯತ್ನದಿಂದ ಯಶಸ್ವಿಯಾಗಿ ವೈಶಿಷ್ಟ್ಯತೆ ಸಾಧಿಸುತ್ತಾನೆ ಹೊರತು ಬೇರಲ್ಲ. ಹೀಗೆ ಪದಗಳ ಅರ್ಥ ಮತ್ತು ಗ್ರಹಣಶಕ್ತಿಯ ಬಗ್ಗೆ ವಿವರಿಸಲಾಗಿದೆ.
ಇಲ್ಲಿಗೆ ಕಲ್ಯಾಣ ಮಿತ್ರನಲ್ಲಿ ಸಮಾಧಿ ವಿಷಯಕ್ಕಾಗಿ ಹೋಗಿ, ಅಲ್ಲಿ 40 ದ್ಯಾನಗಳನ್ನು ಅರಿತು, ತನ್ನ ಸ್ವಭಾವಕ್ಕೆ ತಕ್ಕ ಧ್ಯಾನ ವಿಷಯ ಗ್ರಹಿಸುವುದನ್ನು ವಿವರಿಸಲಾಗಿದೆ.

ವಿಶುದ್ಧಿ ಮಾರ್ಗದ 3ನೇಯ ಅಧ್ಯಾಯವಾದ
ಧ್ಯಾನ ವಿಷಯ ತೆಗೆದುಕೊಳ್ಳುವಿಕೆಯ ವಿವರಣೆ ಇಲ್ಲಿಗೆ ಮುಗಿಯಿತು.
ಇದನ್ನು ಸಜ್ಜನರ ಆನಂದಕ್ಕಾಗಿ ರಚಿಸಲಾಗಿದೆ. 

No comments:

Post a Comment