Wednesday 11 April 2018

visuddhi magga ಅಧ್ಯಾಯ 2 ಧುತಙ್ಗ ನಿದ್ದೇಸೊ (ಧುತಂಗಗಳ ಆಚರಣೆ)

ಅಧ್ಯಾಯ 2ಧುತಙ್ಗ ನಿದ್ದೇಸೊ (ಧುತಂಗಗಳ ಆಚರಣೆ)

ಈಗ ಧ್ಯಾನಿಯು ಶೀಲದ ಬೆನ್ನಟ್ಟಿ ಅದರ ಸಿದ್ಧಿ ಪಡೆದನಂತರ ಆತನು ಧೂತಂಗ ಆಚರಣೆ (ತಪಶ್ಚರ್ಯೆ) ಯನ್ನು ಮಾಡಬೇಕಾಗುತ್ತದೆ. ಏಕೆಂದರೆ ಆಗಲೇ ಶೀಲವು ಪರಿಪೂರ್ಣವಾಗಿ ಪರಿಶುದ್ಧವಾಗುತ್ತದೆ. ಹೇಗೆಂದರೆ ಧೂತಂಗದಲ್ಲಿ ಕೆಲವು ವಿಶೇಷ ಸದ್ಗುಣಗಳಿವೆ, ಅವೆಂದರೆ: ಅಲ್ಪೇಚ್ಛೆ, ಸಂತೃಪ್ತಿ, ಅಳಿಸಿಹಾಕುವಿಕೆ, ಏಕಾಂತತೆ, ಹಂಚುವಿಕೆ, ಪ್ರಯತ್ನಶೀಲತೆ, ಪ್ರಜ್ಞಾಶೀಲತೆ ಇಂತಹ ಹಲವಾರು ಅತ್ಯಂತ ಆಳಮಟ್ಟದಲ್ಲಿ ಪರಿಶುದ್ಧಿಯಾಗುವುವು. ಹಾಗು ಆತನ ಸಂಕಲ್ಪಗಳು ಸಹಾ ಯಶಸ್ವಿಯಾಗುವುವು. ಹೀಗಾಗಿ ಆತನು ನಿಂದಾತೀತನಾಗಿ ಮೊದಲ ಮೂರು ಹಂತದ ಆರ್ಯರಲ್ಲಿ ಒಬ್ಬನಾಗಬಲ್ಲ. ಹಾಗು ನಾಲ್ಕನೆಯದನ್ನು ಸಾಧಿಸಲು ಸಿದ್ಧನಾಗಬಲ್ಲ. ಈಗ ಅವು ಯಾವುವೆಂದು ತಿಳಿಯೋಣ.

13 ಬಗೆಯ ಧುತಂಗ ಆಚರಣೆಗಳು (ತಪಶ್ಚರ್ಯೆ)

ಇವು ಭಗವಾನರಿಂದ ಸ್ವಾಗತಿಸಲ್ಪಟ್ಟಿವೆ. ಇವುಗಳನ್ನು ಪಾಲಿಸುತ್ತಿದ್ದಂತಹ ಮಹಾಕಸ್ಸಪ ಮೊದಲಾದವರಿಗೆ ಭಗವಾನರು ಪ್ರಶಂಸಿಸುತ್ತಿದ್ದರು. ಪುನಃ ತಾವೇ ಇವುಗಳನ್ನು ಸಿದ್ಧಿಸಿದ್ದರು (ಈ ಆಚರಣೆಗಳು ಭಿಕ್ಖುಗಳಿಗೆ ಮಾತ್ರ, ಗೃಹಸ್ಥರಿಗೆ ಅಲ್ಲವೆಂದು ಸ್ಪಷ್ಟವಾಗಿ ಅರಿಯಬೇಕು). ಭಿಕ್ಖುಗಳು ಶರೀರ, ಜೀವನ ಲೆಕ್ಕಸದೆ ಗುರಿ ಸಿದ್ಧಿಗಾಗಿ ಇದನ್ನು ಪಾಲಿಸುತ್ತಿದ್ದರು. ಅವುಗಳು ಯಾವುವೆಂದರೆ:
1. ಪಂಸುಕೂಲಿಕಙ್ಗಂ (ಬಿಸಾಡಿದ, ಹರಿದ ವಸ್ತ್ರಗಳಿಂದ ನಿಮರ್ಿಸಿದ ಚೀವರ ಧರಿಸುವ ಆಚರಣೆ).
2. ತೇಚಿವರಿಕಙ್ಗಂ (ಮೂರು ಚೀವರಗಳು ಧರಿಸುವ ಆಚರಣೆ).
3. ಪಿಣ್ಡಪಾತಿಕಙ್ಗಂ (ಪಿಂಡ (ತುತ್ತು) ತಿನ್ನುವ ಆಚರಣೆ)
4. ಸಪದಾನಚಾರಿಕಙ್ಗಂ (ಮನೆಗಳಿಗೆ ತಿರುಗುವ ಆಚರಣೆ)
5. ಏಕಾಸನಿಕಙ್ಗಂ (ಒಪ್ಪತ್ತು ಊಟ ಮಾಡುವ ಆಚರಣೆ)
6. ಪತ್ತಪಿಣ್ಡಿಕಙ್ಗಂ (ಪಿಂಡಪಾತ್ರೆಯಲ್ಲೇ ತಿನ್ನುವ ಆಚರಣೆ)
7. ಖಲುಪಚ್ಚಾಭತ್ತಿಕಙ್ಗಂ (ನಂತರದ ಆಹಾರ ನಿಕಾಕರಿಸುವ ಆಚರಣೆ)
8. ಆರಞ್ಞೆಕಙ್ಗಂ (ಅರಣ್ಯ ವಾಸದ ಆಚರಣೆ)
9. ರುಕ್ಖಮೂಲಕಙ್ಗಂ (ವೃಕ್ಷಮೂಲದಲ್ಲಿ ನೆಲೆಸುವ ಆಚರಣೆ)
10. ಅಬ್ಬೋಕಾಸಿಕಙ್ಗಂ (ತೆರೆದ ಆಕಾಶದಲ್ಲಿ ನೆಲೆಸುವ ಆಚರಣೆ)
11. ಸೊಸಾನಿಕಙ್ಗಂ (ಸ್ಮಶಾನ ವಾಸದ ಆಚರಣೆ)
12. ಯಥಾಸನ್ಥತಿಕಙ್ಗಂ (ಯಾವುದೇ ಶಯನದ ಆಚರಣೆ)
13. ನೇಸಬ್ಬೆಕಙ್ಗಂ (ಕುಳಿತೇ ಇರುವ ಆಚರಣೆ).

ಧುತಂಗದ ವಿವರಣೆ

ಧುತ ಎಂದರೆ ತಾಪಸಿ ಅಥವಾ ಭಿಕ್ಖು ಎಂದರ್ಥ, ಅಂಗ ಎಂದರೆ ಆಚರಣೆಗಳು ಎಂದರ್ಥ. ಯಾವುದು ಥರಥರವೆಂದು ಕಲ್ಮಶಗಳನ್ನು ನಡುಗಿಸುವುದೋ ಅದೇ ಧುತ (ನಡುಕ). ಧುತ ಎಂಬ ಪದಕ್ಕೆ ತಾಪಸಿ, ನಡುಕ ಎಂಬ ಎರಡು ಅರ್ಥವಿದೆ. ಆದ್ದರಿಂದ ಭಿಕ್ಖುಗಳ ವಿಶೇಷ ಆಚರಣೆಗಳಿಗೆ ಧುತಾಂಗವೆನ್ನುತ್ತಾರೆ. ಕಶ್ಮಲಗಳನ್ನು ಅವುಗಳ ವೈವಿಧ್ಯ ಗುಣಗಳಿಂದಾಗಿ ಅಲುಗಾಡಿಸುವ ಧ್ಯಾನಿಯ ಆಚರಣೆಗಳೇ ಧುತಂಗವಾಗಿದೆ. ಅವೇ ಪಟಿಪತ್ತಿ (ಮಾರ್ಗ) ಯಾಗಿವೆ .
ಈ ಹಿಂದೆ ಹೇಳಿದಂತೆ ಇವು ಒಟ್ಟು ಹದಿಮೂರು ಆಗಿವೆ. ಅವುಗಳಲ್ಲಿ ಮೊದಲನೆಯದು

1. ಪಂಸುಕೂಲಿಕಙ್ಗಂ: 

ಅಂದರೆ ತಿರಸ್ಕೃತವಾಗಲ್ಪಟ್ಟು ಬಿಸಾಡಿದ ಹರಿದ ಚಿಂದಿ ವಸ್ತ್ರಗಳನ್ನು ಆರಿಸಿ, ಸೇರಿಸಿ, ಹೊಲಿದು ಧರಿಸಿದ ಚೀವರವನ್ನು ಧರಿಸುವ ಆಚರಣೆಯೇ ಪಂಸುಕೂಲಿಕಙ್ಗಂ. ಈ ಆಚರಣೆವುಳ್ಳ ಭಿಕ್ಖು ಈ ರೀತಿಯ ಮನೋಭಾವನೆ ಉಳ್ಳವನಾಗಿರುತ್ತಾನೆ: ನಾನು ಗೃಹಸ್ಥರು ನೀಡುವ ಚೀವರಗಳನ್ನು ನಿರಾಕರಿಸುತ್ತೇನೆ ಅಥವಾ ನಾನು ತಿರಸ್ಕೃತವಾಗಿ  ಬಿಸಾಡಲ್ಪಟ್ಟ ಚಿಂದಿ ಹರಿದ ವಸ್ತ್ರಗಳನ್ನೇ ಆರಿಸಿ ಅವುಗಳಿಂದ ನಿಮರ್ಿಸಿದ ಚೀವರ ಧರಿಸುತ್ತೇನೆ.
ಆತನು ಬಿಸಾಡಿದ ತಿರಸ್ಕೃತವಾದ ವಸ್ತ್ರಗಳನ್ನು ಪಡೆಯುವ ಸ್ಥಳಗಳೆಂದರೆ, ಸ್ಮಶಾನ, ಅಂಗಡಿಯಲ್ಲಿ ಕತ್ತರಿಸಿ ಕೆಲಸಕ್ಕೆ ಬರದಂತಹ ಚಿಂದಿಯನ್ನು ಬಿಸಾಡಿದಾಗ, ಕಿಟಕಿಯಿಂದ ಕಸವೆಂದು ಬಿಸಾಡಲ್ಪಟ್ಟ ವಸ್ತ್ರ, ಕಸದ ರಾಶಿಯಲ್ಲಿ, ಮಗುವಿನ ಹಾಸಿಗೆಯಿಂದ ಒರೆಸಿ ಬಿಸಾಡಲ್ಪಟ್ಟ ವಸ್ತ್ರ, ವಾಮಾಚಾರಿಗಳು ಸ್ನಾನವಾದ ನಂತರ ಕೆಟ್ಟ ಶಕುನವೆಂದು ಬಿಸಾಡಿದ ವಸ್ತ್ರ, ಅಗಸರು ವ್ಯರ್ಥವಾದ, ನಷ್ಟವಾದ ಹರಿದ ವಸ್ತ್ರಗಳನ್ನು ಎಸೆಯುವ ಸ್ಥಳ, ಸ್ಮಶಾನದಿಂದ ಹಿಂತಿರುಗಿದ ಮೇಲೆ ಅಪಶಕುನವೆಂದು ಭಾವಿಸಿ ಎಸೆದ ವಸ್ತ್ರ, ಬೆಂಕಿಯಿಂದ ಸುಡಲ್ಪಟ್ಟು ಅಮಂಗಳಕರವೆಂದು ಎಸೆದ ವಸ್ತ್ರ, ಹಸುಗಳಿಂದ ಅಗಿಯಲ್ಪಟ್ಟ ಅಥವಾ ಹಸುವಿಗೆ ಚಿತ್ರಹಿಂಸೆ ಕೊಟ್ಟು ಮಲಿನವಾದ ವಸ್ತ್ರ, ಹಡಗಿನಲ್ಲಿ ಅಥವಾ ಸೈನ್ಯದಲ್ಲಿ ಕೆಲಸವಾದ ಮೇಲೆ ಬಿಸಾಡಿದ ವಸ್ತ್ರ, ಧ್ವಜದ ವಸ್ತ್ರ, ದೇವಸ್ಥಾನಗಳಲ್ಲಿ ತಿರಸ್ಕೃತವಾದ ವಸ್ತ್ರ, ರಾಜರಿಂದ ಕಾಣಿಕೆ ನೀಡಿದ ನಂತರ ಬಿಸಾಡಲ್ಪಟ್ಟ ವಸ್ತ್ರ, ಅಭಿಜ್ಞಾ ಬಲದಿಂದ ಸೃಷ್ಠಿಯಾದ ವಸ್ತ್ರ (ಏಹಿ ಭಿಕ್ಖು ಎಂದು ಭಗವಾನರು ತಮ್ಮ ಇದ್ದಿಬಲದಿಂದಾಗಿ ಅವರನ್ನು ಚೀವರದಿಂದ ಧರಿಸಲ್ಪಡುವಂತೆ ಮಾಡುತ್ತಿದ್ದರು). ಹೆದ್ದಾರಿಯಲ್ಲಿ  ಎಸೆಯಲ್ಪಟ್ಟ ವಸ್ತ್ರ, ಬಹುದೂರದಿಂದ ರಾಶಿಯಿಂದ ಹಾದಿತಪ್ಪಿ, ಅದರ ಬಗ್ಗೆ ಅವುಗಳ ಮಾಲಿಕನು ಮರೆತಂತಹ ವಸ್ತ್ರ, ದೇವತೆಗಳಿಂದ ಸಮಪರ್ಿತವಾದ ವಸ್ತ್ರ (ಥೇರ ಅನುರುದ್ಧರಿಗೆ ದೇವತೆಗಳು ಚೀವರವನ್ನು ನೀಡಿದ್ದರು).
ಈ ರೀತಿಯ ಆಚರಣೆಯಲ್ಲಿ ಮೂರು ಹಂತಗಳಿವೆ: 1. ಉತ್ತಮ: ಇಲ್ಲಿ ಭಿಕ್ಖುವು ಕೇವಲ ಸ್ಮಶಾನದಲ್ಲಿ ವಸ್ತ್ರ ಆರಿಸುತ್ತಾನೆ. 2. ಮಧ್ಯಮ: ಉಳಿದ ಸ್ಥಳಗಳಿಂದ ಆರಿಸುತ್ತಾನೆ. 3. ಸಾಧಾರಣ: ಭಿಕ್ಖು ಪುಟ್ಟ ವಸ್ತ್ರವನ್ನು ದಾನವಾಗಿ ನೀಡಿದಂತಹ ವಸ್ತ್ರ.
ಇಲ್ಲಿ ಗೃಹಸ್ಥರಿಂದ ದಾನವಾಗಿ ಚೀವರ ಪಡೆದರೆ ಇಲ್ಲಿ ಆಚರಣೆಯು ಮುರಿದಂತಾಗುತ್ತದೆ.
ಪಂಸುಕೂಲಿಯ ಲಾಭಗಳು : ಈ ರೀತಿಯ ವಸ್ತ್ರ ಧರಿಸುವವನಾಗಿ ಆತನು ವಸ್ತ್ರಗಳನ್ನು ಲೋಭವಿಲ್ಲದವನಾಗಿ, ಆರ್ಯರ ಸಂಪ್ರದಾಯದಲ್ಲಿ ಸ್ಥಾಪಿತನಾಗದಿದ್ದರೂ, ಹಾಗೆ ಇರುವಂತೆ ಕಾಣಿಸುತ್ತಾನೆ. ಅವನಿಗೆ ರಕ್ಷಣೆ ಬೇಕೆಂಬ ಬೇಡಿಕೆಯು ಇಲ್ಲ, ಭಯವೂ ಇಲ್ಲ. ಆತನು ಸ್ವತಂತ್ರವಾಗಿ ಜೀವಿಸಬಲ್ಲವನಾಗಿದ್ದಾನೆ. ಆತನಿಗೆ ಜೀವಭಯವಿಲ್ಲ, ಕಳ್ಳರ ಭಯವಿಲ್ಲ, ಪರಿಕರಗಳಿಂದಾದ ಬಯಕೆಗಳಿಲ್ಲ. ಆತನ ಪರಿಕರವು ಮೌಲ್ಯರಹಿತವಾದುದು, ಸುಲಭವಾಗಿ ದೊರಕುವಂತಹುದು, ನಿಂದಾತೀತವಾದುದು ಎಂದು ಭಗವಾನರೇ ತಿಳಿಸಿದ್ದಾರೆ. ಆತನು ಪರರಲ್ಲಿ ಶ್ರದ್ಧೆ ಸ್ಫೂತಿಗಳನ್ನು ತರುವವನಾಗಿರುತ್ತಾನೆ, ಆತನು ಅಲ್ಪೇಚ್ಛಿಯಾಗಿ ಮುಂದಿನ ತಲೆಮಾರುಗಳವರೆಗೆ ಆದರ್ಶಪ್ರಾಯನಾಗಿರುತ್ತಾನೆ.

2. ತೇಚಿವರಿಕಙ್ಗಂ (ಮೂರು ಚೀವರಗಳ ಆಚರಣೆ)

ಅದೇರೀತಿಯಾಗಿ ಇಲ್ಲಿ ಭಿಕ್ಖುವು ಕೇವಲ ಮೂರು ಚೀವರಗಳನ್ನು ಮಾತ್ರ ಧರಿಸುತ್ತಾನೆ. ಅಂದರೆ ತೇಪೆಗಳ ನಿಲುವಂಗಿ, ಮೇಲಿನ ಉಡುಗೆ ಮತ್ತು ಒಳ ಉಡುಗೆ. ಇವಿಷ್ಟನ್ನು ಮಾತ್ರ ಬಳಸುವುದರಿಂದ ಭಿಕ್ಖುವಿಗೆ ತೇಚಿವರಿ ಎನ್ನುತ್ತಾರೆ. ಈ ಆಚರಣೆಗೆ ತೇಚಿವರಿಕಙ್ಗಂ ಎನ್ನುವರು.
ಇಲ್ಲಿ ಭಿಕ್ಖುವು ಈ ರೀತಿಯ ಮನೋಭಾವದವನಾಗಿರುತ್ತಾನೆ. ಏನೆಂದರೆ, ನಾನು ನಾಲ್ಕನೆಯ ಚೀವರವನ್ನು ಸ್ವೀಕರಿಸಲು ನಿರಾಕರಿಸುತ್ತೇನೆ ಅಥವಾ ನಾನು ಕೇವಲ ಮೂರು ಚೀವರಗಳನ್ನಷ್ಟೇ ಬಳಸುತ್ತೇನೆ. ಹೀಗಾಗಿ ಅವನ್ನು ಬಹು ದೀರ್ಘಕಾಲ ಬಳಸುತ್ತಾನೆ.
ಇದರಲ್ಲಿಯೂ ಮೂರು ಹಂತಗಳಿವೆ: ಉತ್ತಮ: ವಸ್ತ್ರ ಸ್ವೀಕಾರದ ಬಳಿಕ ಬಣ್ಣ ಲೇಪನಕ್ಕಾಗಿ ಅಥವಾ ತೊಳೆಯುವುದಕ್ಕಾಗಿ ಅರಣ್ಯದಲ್ಲಿ ಒಂದನ್ನು ಹಾಕಿಕೊಂಡು ಮಿಕ್ಕ ಎರಡನ್ನು ಸಿದ್ಧಪಡಿಸಬೇಕಾಗುತ್ತದೆ. ಮಧ್ಯಮ: ಇಲ್ಲಿ ವರ್ಣ ಮಾಡಿಸಲು ಬಣ್ಣ ಲೇಪನದ ಕೋಣೆಗೆ ಹೋಗಬೇಕಾಗುತ್ತದೆ. ಸಾಧಾರಣ: ವರ್ಣ ಮಾಡಬೇಕಾದಾಗ ಸಹ ಭಿಕ್ಖುಗಳ ವಸ್ತ್ರವನ್ನು ಧರಿಸಬಹುದಾಗಿದೆ.
ಇಲ್ಲಿ ಆತನೇನಾದರೂ ನಾಲ್ಕನೆಯ ಚೀವರ ಸ್ವೀಕರಿಸಿ ದರಿಸಿದರೆ ಅವನ ಆಚರಣೆಯು ಮುರಿದಂತೆಯೇ.
ತೇಚಿವರದ ಲಾಭಗಳು : ಇಲ್ಲಿ ಭಿಕ್ಖುವು ವಸ್ತ್ರಗಳಲ್ಲಿ ಅಲ್ಪೆಚ್ಚುವಾಗಿ ಹೊರ ಹೋಗುವ ಪಕ್ಷಿಯಂತೆ ಚೀವರ ಧರಿಸಿ ಹೋಗುತ್ತಾನೆ. ಆತನು ಕೇವಲ ಮೈಮುಚ್ಚಲು ಮಾತ್ರ ಚೀವರ ಧರಿಸುತ್ತಾನೆ. ಆತನು ವಸ್ತ್ರಗಳ ಸಂಗ್ರಹ ಮಾಡಬೇಕಿಲ್ಲ, ವಸ್ತ್ರಗಳ ಮೋಹವು ಇಲ್ಲ, ಆತನ ಸರಳತೆ ಪೂರ್ಣವಾಗಿರುತ್ತದೆ.

3. ಪಿಂಡಪಾತಿಕಙ್ಗಂ:

ಪಿಂಡವೆಂದರೆ ಆಹಾರದ ತುತ್ತು ಎಂದರ್ಥ, ಪಾತವೆಂದರೆ ಹಾಕುವುದು. ಅಂದರೆ ಭಿಕ್ಖುವಿಗೆ ತುತ್ತುಗಳನ್ನು ಹಾಕುವುದೇ ಪಿಂಡಪಾತವೆನಿಸುತ್ತದೆ. ಈ ರೀತಿಯಾಗಿ ಕೇವಲ ತುತ್ತುಗಳನ್ನು ಆಹಾರವಾಗಿ ಪಡೆದು ಜೀವಿಸುವವನೇ ಪಿಂಡಪಾತಿಕನಾಗುತ್ತಾನೆ. ಈ ರೀತಿಯ ಆಚರಣೆಯುಳ್ಳವನಿಗೆ ಪಿಂಡಪಾತಿಕಙ್ಗಂ ಎನ್ನುತ್ತಾರೆ.
ಇಲ್ಲಿ ಭಿಕ್ಖುವು ನಾನು ಕೇವಲ ಪಿಂಡಪಾತದ ಆಚರಣೆಯಿಂದಲೇ ಜೀವಿಸುವೆನು ಅಥವಾ ಇದಕ್ಕಿಂತ ಹೆಚ್ಚಿನ ಭಾಗವನ್ನು ಸ್ವೀಕರಿಸಲಾರೆ ಎಂಬ ಮನೋಭಾವವನ್ನು ಆಹಾರ ಸ್ವೀಕರಿಸುವಿಕೆಯಲ್ಲಿ ಹೊಂದಿರುತ್ತಾನೆ. ಈ ರೀತಿಯ ಪಿಂಡಪಾತಿಕ ಭಿಕ್ಖುವು ಹದಿನಾಲ್ಕು ಬಗೆಯ ಆಹಾರ ಪದ್ಧತಿಯನ್ನು ಸ್ವೀಕರಿಸಲಾರ. ಸಂಘದಾನ, ವಿಶೇಷ ಭಿಕ್ಷುಗಳಿಗಾಗಿರುವ ದಾನ, ಆಹ್ವಾನ ದಾನ, ಚೀಟಿ ಹಂಚಿಕೆಯಿಂದಾದ ದಾನ, ಅಷ್ಟಮಿ ದಾನ, ಉಪೋಸಥದ ದಾನ, ಪ್ರಥಮ ಅಷ್ಟಮಿ ದಾನ, ಅತಿಥಿಗಳ ದಾನ, ಪ್ರಯಾಣಿಕರ ದಾನ, ರೋಗಿಗಳ ದಾನ, ಪ್ರತ್ಯೇಕವಾಸಿಗಳ ದಾನ, ಪ್ರತ್ಯೇಕ ಮನೆಯ ದಾನ, ಪ್ರಧಾನ ಮನೆಯ ದಾನ ಮತ್ತು ಸರತಿಯಿಂದ ಬಂದ ದಾನ. ಇವುಗಳಲ್ಲಿ ಯಾವುದೊಂದರಲ್ಲಿ ಸೇರಿದರೂ ಆಚರಣೆಯು ಭಗವಾದಂತೆಯೇ ಸರಿ.
ಇದರಲ್ಲಿ ಮೂರು ಹಂತಗಳಿವೆ: ಉತ್ತಮ: ಇಲ್ಲಿ ಭಿಕ್ಖುವು ಮನೆಯವರು ತಕ್ಷಣ ನೀಡಿದರೆ ಸ್ವೀಕರಿಸುನು, ಆದರೆ ಕಾಯಲಾರ, ಮುಂದಕ್ಕೆ ಹೋಗುತ್ತಿರುತ್ತಾನೆ. ಮಧ್ಯಮ: ಇಲ್ಲಿ ಭಿಕ್ಖುವು ಬೇಕಾದರೆ ಕಾಯ್ದು ಆಹಾರ ಪಡೆಯುತ್ತಾನೆ. ಸಾಧಾರಣ: ಇಲ್ಲಿ ಭಿಕ್ಖುವು ಮಾರನೆಯ ದಿನ ಬರಲು ಆಹ್ವಾನ ನೀಡಿದರೆ ಅದನ್ನು ಮುಂದುವರೆಸುತ್ತಾನೆ.
ಪಿಂಡಪಾತದ ಲಾಭಗಳು: ಇಲ್ಲಿ ಭಿಕ್ಖುವು ಪಿಂಡಪಾತಕ್ಕೆ ಅವಲಂಬಿತನಾಗಿರುವುದರಿಂದ, ನಾಲಿಗೆಯ ಲಾಲಸೆ ಗೆದ್ದಂತಹ ಸಕದಾಗಾಮಿಗಳ ಸಂಪ್ರದಾಯಕ್ಕೆ ಸೇರದಿದ್ದರೂ, ಸೇರಿದವನಂತೆ ಕಾಣಲ್ಪಡುತ್ತಾನೆ. ಆತನ ಅಸ್ತಿತ್ವವು ಪರರಿಗಿಂತ ಸ್ವಾವಲಂಬನಾಯುತವಾಗಿರುತ್ತದೆ. ಇದು ಆಹಾರ ಮೌಲ್ಯರಹಿತವಾದುದು, ಹಾಗು ಸುಲಭವಾಗಿ ದೊರೆಯುವಂತಹುದು. ಕಳಂಕರಹಿತವಾದುದು, ಸೋಮಾರಿತನ ದೂರೀಕರಿಸಬಹುದು, ಜೀವನೋಪಾಯ ಶುದ್ಧೀಕೃತವಾದಂತಹುದು. ಈ ಚರ್ಯೆಯಿಂದಾಗಿ ಚಿಕ್ಕ ಪಾತಿಮೋಕ್ಖ ನಿಯಮಕ್ಕೆ ಪಾಲನೆಯಾದಂತೆ ಆಗುವುದು. ಆತನು ಪರರಿಂದ ಪಾಲಿತನಾಗಲಾರ. ಆತನು ಅವರಿಗೆ ಸಹಾಯ ಮಾಡುವವನಾಗುವನು, ಆತನ ಅಹಂಕಾರ ಅಳಿಯವುವು, ಜಿಹ್ವಾಲಾಲಸೆ ನಿಯಂತ್ರಣದಲ್ಲಿರುವುದು, ಆತನ ಕೋರಿಕೆಗಳು ಅತ್ಯಲ್ಪವಾದುದು, ಸಮ್ಯಕ್ ಮಾರ್ಗದಲ್ಲಿ ಚಲಿಸುವವನಾಗಿ ಮುಂದಿನ ಜನಾಂಗಕ್ಕೆ ಆದರ್ಶಮಯನಾಗುತ್ತಾನೆ.
ಯಾವ ಭಿಕ್ಖುವು ಆಹಾರಕ್ಕಾಗಿ ತಾನೇ ನೋಡಿಕೊಳ್ಳುವನೋ,
ಪರರ ಸಲಹುವಿಕೆ (ಪೋಷಣೆ) ಯಿಲ್ಲದೆ ಜೀವಿಸುತ್ತಾನೆಯೋ,
ಆತನು ಲಾಭ ಅಥವಾ ಕೀತರ್ಿಗಳಲ್ಲಿ ಎಚ್ಚರ ತಪ್ಪದವನಾಗಿ
ದೇವತೆಗಳು ಸಹಾ ಅಸೂಯೆ ಪಡುವಂತಹ ಚಾರಿತ್ರ್ಯಶೀಲನಾಗಿರುತ್ತಾನೆ.

4. ಸಪದಾನಚಾರಿಕಙ್ಗಂ (ಮನೆಗಳಲ್ಲಿ ತಿರುಗುವ ಆಚರಣೆ) :

ಇಲ್ಲಿ ಭಿಕ್ಖುವು ಮನೆಗಳ ಅಂತಹವಿಲ್ಲದೆ ಸಂಚರಿಸಿ ಆಹಾರ ಸಂಗ್ರಹಿಸುತ್ತಾನೆ. ಆದ್ದರಿಂದಲೇ ಈ ಹೆಸರು ಬಂದಿದೆ. ಇಲ್ಲಿ ಭಿಕ್ಖುವು ನಾನು ಲೋಭಯುತ್ತ ಊಟ ನಿರಾಕರಿಸುತ್ತೇನೆ ಅಥವಾ ನಾನು ಕೇವಲ ಮನೆಯಿಂದ ಮನೆಗೆ ತಿರುಗುವ ಆಚರಣೆ ಪಾಲಿಸುತ್ತೇನೆ ಎಂದು ಸಂಕಲ್ಪಿತನಾಗಿರುತ್ತಾನೆ.
ಮನೆಗಳಲ್ಲಿ ಸಂಚರಿಸುವ ಭಿಕ್ಖುವು ಹಳ್ಳಿಯ ದ್ವಾರದಲ್ಲಿ ಬಂದಾಗಲೇ ಬಳಿಗೆ ಹೋಗಲು ಯಾವುದೇ ಅಪಾಯವಿಲ್ಲವೆ (ನಾಯಿ, ಕುಡುಕರು ಇತ್ಯಾದಿ) ಎಂದು ಪರಿಶೀಲಿಸಿಕೊಳ್ಳಬೇಕು. ಒಂದುವೇಳೆ ಅಪಾಯ ಕಂಡುಬಂದರೆ ಬೇರೆಲ್ಲಾದರೂ ಹೋಗಿಬಿಡಬೇಕು. ಆ ಹಳ್ಳಿಯಲ್ಲಿ ಅಥವಾ ಬೀದಿಯಲ್ಲಿ ಸಿಗದಿದ್ದರೆ ಬೇರೆಡೆಗೆ ಹೋಗಬೇಕು.
ಇದರಲ್ಲೂ ಮೂರು ಹಂತಗಳಿವೆ: ಉತ್ತಮ: ಆತನು ಆಹ್ವಾನ ನಿರಾಕರಿಸಿ ಮನೆ ಮನೆಗೂ ತನಗೆ ಬೇಕಾದ ಪ್ರಮಾಣ ಸಿಗುವವರೆಗೂ ಸಂಚರಿಸುತ್ತಾನೆ. ಈ ಪದ್ಧತಿಯಲ್ಲಿ ಮಹಾಥೇರ ಮಹಾಕಸ್ಸಪರ ಸಮಾನ ಯಾರೂ ಇಲ್ಲ ಎಂದು ಪ್ರತೀತಿಯಿದೆ. ಮಧ್ಯಮ: ಹಿಂದಿನಿಂದ ಅಥವಾ ಆನಂತರದಿಂದ ಬಂದಂತಹ ಆಹಾರ ಸೇವಿಸುತ್ತಾನೆ, ಆದರೆ ಕಾಯುವುದಿಲ್ಲ. ಸಾಧಾರಣ: ಮೇಲಿನಂತೆ ಆದರೆ ಆಹಾರ ನೀಡುವವರೆಗೂ ಕಾಯುತ್ತಾನೆ.
ಈ ಆಚರಣೆಯು ಉತ್ತಮ ಆಹಾರ ಸಿಗುವ ಮನೆಗಳನ್ನು ಆಯ್ಕೆ ಮಾಡಿದರೆ ಮುರಿಯುತ್ತದೆ.
ಲಾಭಗಳು: ಆತನು ಕುಟುಂಬಗಳಿಗೆ ಅಪರಿಚಿತನಾಗಿರುತ್ತಾನೆ ಹಾಗು ಅವರ ಬಗ್ಗೆ ದ್ವೇಷ ಇರುವುದಿಲ್ಲ. ಆತನ ದಯೆಯು ಪಕ್ಷಪಾತರಹಿತವಾದದ್ದು. ಕುಟುಂಬಗಳಿಗೆ ಅಂಟಿಕೊಂಡು, ಆಹ್ವಾನಗಳಲ್ಲಿ ಆನಂದಿಸಲಾರನು. ಅಲ್ಪೇಚ್ಚೆಯವನಾಗಿರುತ್ತಾನೆ.

5. ಏಕಾಸವಿಕಙ್ಗಂ (ಒಪ್ಪತ್ತು ಊಟದವ)

ಇಲ್ಲಿ ಭಿಕ್ಖು ಕೇವಲ ಒಂದು ಹೊತ್ತು ಮಾತ್ರ ಊಟ ಸೇವಿಸುವ ಆಚರಣೆ ಹೊಂದಿರುತ್ತಾನೆ. ಆದ್ದರಿಂದಾಗಿ ಈ ಹೆಸರು ಬಂದಿದೆ. ಆತನು ಈ ಬಗೆಯ ಸಂಕಲ್ಪ ಹೊಂದಿರುತ್ತಾನೆ: ನಾನು ಹಲವಾರುಬಾರಿ ತಿನ್ನುವುದನ್ನು ತಿರಸ್ಕರಿಸುತ್ತೇನೆ ಅಥವಾ ನಾನು ಕೇವಲ ಒಂದು ಹೊತ್ತು ಮಾತ್ರ ಆಹಾರ ಸೇವಿಸುತ್ತೇನೆ.
ಇಲ್ಲಿ ಆತನು ತನಗೆ ಮೀಸಲಾಗಿಟ್ಟ ಆಸನದಲ್ಲಿ ಕುಳಿತು ಆಹಾರ ಸೇವಿಸುತ್ತಾನೆ. ತನಗೆ ಬೇಕಾದ ಪ್ರಮಾಣದ  ನಂತರ ಆಹಾರವನ್ನು ಬಿಟ್ಟು ತನ್ನ ಕರ್ತವ್ಯಗಳಲ್ಲಿ ತೊಡಗುತ್ತಾನೆ.
ಇವರಲ್ಲಿ ಮೂರು ಹಂತಗಳಿವೆ: ಉತ್ತಮ: ತನಗೆ ಬೇಕಾದ ಪ್ರಮಾಣ ಮುಗಿಯುತ್ತಿದ್ದಂತೆ ಆತನು ಸಾಕು ಎಂದು ಕೈ ಅಡ್ಡವಿಡುತ್ತಾನೆ. ಮಧ್ಯಮ: ತನ್ನ ಪಾತ್ರೆ ತುಂಬುವವರೆಗೂ ಹಾಕಿಸಿಕೊಳ್ಳುತ್ತಾನೆ. ಸಾಧಾರಣ: ತಾನು ಏಳುವವರೆಗೂ ತಿನ್ನುತ್ತಲೇ ಇರುತ್ತಾನೆ.
ಒಪತ್ತು ಊಟದ ಲಾಭಗಳು: ಆತನು ರೋಗಕ್ಕೆ ಒಳಗಾಗುವುದು ಅತಿವಿರಳ. ಆತನು ಶರೀರದಲ್ಲಿ ಹಗುರತನ ಹೊಂದಿರುತ್ತಾನೆ, ಶಕ್ತಿ ಹೊಂದಿರುತ್ತಾನೆ ಮತ್ತು ಸುಖವಾದ ಜೀವನವನ್ನು ಹೊಂದಿರುತ್ತಾನೆ. ಆತನಿಂದ ಆಹಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮ ಭಂಗವಾಗುವುದಿಲ್ಲ. ಆತನ ಜಿಹ್ವಾತೃಷ್ಣೆ ನಾಶವಾಗಿರುತ್ತದೆ, ಅಲ್ಪೇಚ್ಚಿಯಾಗಿರುತ್ತಾನೆ.
ಯಾರು ಆನಂದದಿಂದ ಒಪ್ಪತ್ತು ಊಟ ಸೇವಿಸುವನೋ
ಆತನು ರೋಗಕ್ಕೆ ಒಳಗಾಗಲಾರ
ಅಂತಹವನಲ್ಲಿ ನಾಲಿಗೆಯ ಲಾಲಸೆಯಿರುವುದಿಲ್ಲ
ಹೀಗೆ ಸಮಯ ವ್ಯರ್ಥ ಮಾಡಲಾರ.
ತನ್ನ ಸುಖಕ್ಕಾಗಿಯೇ ಭಿಕ್ಖುವು
ಒಪ್ಪತ್ತು ಊಟದ ಆಚರಣೆ ಹುಡುಕುತ್ತಾನೆ
ಹೀಗಾಗಿ ಶುದ್ಧ ಮನಸ್ಸು ಪರಿಶುದ್ಧತೆ ಆತನಿಗೆ ಕಾದಿದ್ದು,
ಸುಖವಾಗಿ ವಿಹರಿಸಲು ದಾರಿ ನೀಡುತ್ತದೆ.

6. ಪತ್ತಪಿಣ್ಡಿಕಙ್ಗಂ (ಪಿಂಡಪಾತ್ರೆಯಲ್ಲೇ ತಿನ್ನುವ ಆಚರಣೆ)

ಇಲ್ಲಿ ಭಿಕ್ಖುವು ಪಿಂಡಪಾತ್ರೆಯ ವಿನಃ ಬೇರ್ಯಾವ ಪಾತ್ರೆಯನ್ನು ಬಳಸಲಾರನು. ಅದಕ್ಕಾಗಿ ಹೀಗೆ ಹೆಸರಿದೆ. ಆತನು ನಾನು ಇತರ ಪಾತ್ರೆ ನಿರಾಕರಿಸುವೆ ಅಥವಾ ನಾನು ಪಿಂಡಪಾತ್ರೆಯಲ್ಲಿ ಆಹಾರ ಸೇವಿಸುವ ಆಚರಣೆ ಹೊಂದಿರುತ್ತೇನೆ ಎಂದು ಸಂಕಲ್ಪ ಬದ್ಧನಾಗಿರುತ್ತಾನೆ.
ಆದರೆ ಇಲ್ಲಿ ಆಹಾರವನ್ನು ಪಿಂಡಪಾತ್ರೆಯಲ್ಲಿ ಹಾಕಿಕೊಳ್ಳುವಾಗ ವಿವಿಧಬಗೆಯ ಆಹಾರಗಳಿಂದ ಅಸಹ್ಯವಾಗಿ ಕಾಣುವಂತೆ ಮಾಡಿಕೊಳ್ಳಲಾರ. ಅಂದರೆ ಕೆಲವೊಂದು ಬಗೆಯ ಮಿಶ್ರಿತ ಅಹಾರವು ಆರೋಗ್ಯವನ್ನು ಕೆಡಿಸಬಲ್ಲದು. ಅಂತಹವನ್ನು ನಿರಾಕರಿಸುತ್ತಾನೆ; ಸರಿಯಾದ ಪ್ರಮಾಣದಲ್ಲಿ ಆಹಾರ ತೆಗೆದುಕೊಳ್ಳುತ್ತಾನೆ ಹೊರತು ಅತಿಯಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಇಲ್ಲಿ ಆತ ಇನ್ನೊಂದು ಪಾತ್ರೆಯಲ್ಲಿ ಆಹಾರ ಸೇವಿಸಲಾರ. ಅಂದರೆ ಪ್ರಮಾಣ ಮೀರಲಾರನೆಂದು ಅರ್ಥ.
ಇವರಲ್ಲಿ ಮೂರು ಹಂತಗಳಿವೆ: ಉತ್ತಮ: ಕಬ್ಬನ್ನು ಹೊರತುಪಡಿಸಿ, ಆಹಾರವನ್ನು ಎಸೆಯುವ ಹಾಗಿಲ್ಲ. ಮಧ್ಯಮ: ಪರಮಾಣ ಮೀರುವ ಸಮಯದಲ್ಲಿ ಕೈ ಅಡ್ಡ ಇಡುತ್ತಾನೆ. ಸಾಧಾರಣ: ಪಿಂಡಪಾತ್ರೆಯಲ್ಲಿ ಏನೇ ಹಾಕಿದರೂ ಸೇವಿಸುತ್ತಾನೆ.
ಈ ಆಚರಣೆಯ ಲಾಭಗಳು: ವಿವಿಧಬಗೆಯ ಆಹಾರದ ರುಚಿಯ ಲಾಲಸೆ ಮೀರುತ್ತಾನೆ. ಅತಿಯಾದ ಬಯಕೆಗಳನ್ನು ತ್ಯಜಿಸುತ್ತಾನೆ. ಅವನು ತಿನ್ನುವ ನಿಜ ಉದ್ದೇಶ ಹಾಗು ನಿಜ ಪ್ರಮಾಣ ಅರಿತಿರುತ್ತಾನೆ. ಆತನು ಸಾರುಗಳನ್ನು ಹೊತ್ತು ಹೋಗುವ ಮುಂತಾದವುಗಳಲ್ಲಿ ತಲೆಕೆಡಿಸಿಕೊಳ್ಳಲಾರನು. ಅಲ್ಪೇಚ್ಚಿಯಾಗಿರುತ್ತಾನೆ.
ಆಹಾರ ವೈವಿಧ್ಯತೆಯ ಯೋಚನೆ ಉಂಟಾಗದ,
ಕೆಳಬಾಗಿದ ಚಕ್ಷುವಿನ ಭಿಕ್ಷುವಿನಲ್ಲಿ
ತಿಂಡಿಬಾಕತನವಿರದೆ ಸುವ್ರತನಾಗಿರುತ್ತಾನೆ.
ಸಂತೃಪ್ತಿಯೇ ಆತನ ಪ್ರಕೃತಿ
ಸಂತುಷ್ಟ ಆತನ ಆನಂದ
ಇವನು ಕೇವಲ ಪಿಂಡಪಾತ್ರೆಯಲ್ಲೆ
ಆಹಾರದ ಆಚರಣೆಯಲ್ಲಿ ಮಾತ್ರ ನೋಡಲು ಸಾಧ್ಯ.


7. ಖಲುಪಚ್ಚಾಭತ್ತಿಕಙ್ಗಂ (ನಂತರದ ಆಹಾರ ನಿಕಾಕರಿಸುವ ಆಚರಣೆ)

ಖಲು ಎಂಬ ಪಕ್ಷಿಯಿತ್ತು. ಅದರ ಕೊಕ್ಕಿನಿಂದ ಆಹಾರ ಬಿದ್ದುಹೋದರೆ ಅದು ಮತ್ತೆ ಅದನ್ನು ತಿನ್ನುತ್ತಿರಲಿಲ್ಲ. ಹಾಗೆಯೇ ಇಲ್ಲಿ ಭಿಕ್ಷುವು ಸಂತೃಪ್ತನಾದಮೇಲೆ ಆಹಾರ ನಿರಾಕರಿಸುವವನಾಗಿರುತ್ತಾನೆ. ಹಾಗು ಸಮಯ ಮೀರಿದರೆ (ಹನ್ನೆರಡರ ನಂತರ) ಆಹಾರ ಸೇವಿಸುವುದಿಲ್ಲ.
ಇಲ್ಲಿ ಭಿಕ್ಷುವು ನಾನು ಹೆಚ್ಚಿನ ಆಹಾರ ನಿರಾಕರಿಸುತ್ತೇನೆ ಅಥವಾ ನಂತರ ಆಹಾರ ನಿರಾಕರಿಸುವ ಆಚರಣೆ ಹೊಂದಿರುತ್ತೇನೆ ಎಂಬ ಸಂಕಲ್ಪಕ್ಕೆ ಬದ್ಧನಾಗಿರುತ್ತಾನೆ.
ಇದರಲ್ಲಿ ಮೂರು ಹಂತಗಳಿವೆ: ಉತ್ತಮ: ಯೋಗ್ಯ ಪ್ರಮಾಣದ ಆಹಾರ ಸೇವನೆಯಲ್ಲಿ ಪರಮನಿಷ್ಠೆ. ಮಧ್ಯಮ: ಪಾತ್ರೆಯಷ್ಟು ತಿನ್ನುತ್ತಾನೆ. ಸಾಧಾರಣ: ಏಳುವವರೆಗೂ ತಿನ್ನುತ್ತಾನೆ.
ಈ ಆಚರಣೆಯ ಲಾಭಗಳು: ಅಧಿಕ ಆಹಾರವನ್ನು ತಪ್ಪು ಎಂದೇ ಪರಿಗಣಿಸುತ್ತಾನೆ, ಹೊಟ್ಟೆ ತುಂಬ ತಿನ್ನಲಾರ, ಆಹಾರವನ್ನು ಇಟ್ಟುಕೊಳ್ಳಲಾರನು, ಪುನಃ ಆಹಾರದ ಅನ್ವೇಷಣೆಯಿಲ್ಲ, ಅಲ್ಪೇಚ್ಚಿಯಾಗಿ ಸುಖವಾಗಿರುತ್ತಾನೆ.
ಪ್ರಾಜ್ಞನು ಹೆಚ್ಚಿನ ಆಹಾರ ಸ್ವೀಕರಿಸುವುದಿಲ್ಲ,
ಅಂತಹವನಲ್ಲಿ ಚಾಂಚಲ್ಯದ ಹುಡುಕಾಟವಿಲ್ಲ
ನಾಳೆಗಾಗಿ ಸಂಗ್ರಹವಿಲ್ಲ, ಹೊಟ್ಟೆಬಾಕತನವೂ ಇಲ್ಲ.
ತಪ್ಪುಗಳ ತಿರಸ್ಕಾರದ ನಿಪುಣನು
ಈ ಆಚರಣೆಯಲ್ಲಿ ಲಾಭ ಹೊಂದಿ
ಭಗವಾನರಿಂದಲೂ ಪ್ರಶಂಸಿತನಾಗಿ
ಸಂತೃಪ್ತನಾಗಿರುತ್ತಾನೆ.

8. ಅರಣ್ಯೆಕಙ್ಗಂ (ಅರಣ್ಯವಾಸದ ಆಚರಣೆ):

ಇಲ್ಲಿ ಭಿಕ್ಖುವಿಗೆ ಅರಣ್ಯವಾಸದ ಆಚರಣೆಯಿರುವುದರಿಂದಾಗಿ ಆತನಿಗೆ ಅರಣ್ಯವಾಸಿ ಅಥವಾ ಅರಣ್ಯವಿಹಾರಿ ಎನ್ನುವರು. ಈತನ ಆಚರಣೆಯನ್ನು ಅರಣ್ಯವಾಸದ ಆಚರಣೆ ಎನ್ನುವರು.
ಇಲ್ಲಿ ಭಿಕ್ಖುವು ನಾನು ಹಳ್ಳಿ (ಪಟ್ಟಣ/ನಗರ)ಯಲ್ಲಿರಲು ನಿರಾಕರಿಸುತ್ತೇನೆ ಅಥವಾ ನಾನು ಅರಣ್ಯವಾಸದ ಆಚರಣೆಗೆ ಬದ್ಧನಾಗಿರುತ್ತೇನೆ ಎಂದು ಸಂಕಲ್ಪ ತೊಟ್ಟಿರುತ್ತಾನೆ. ಅರಣ್ಯವಾಸಿಯು ಅರಣ್ಯವನ್ನು ಸೇರಲು ಹಳ್ಳಿಯನ್ನು ಬಿಡುತ್ತಾನೆ. ಹಳ್ಳಿಯಿಂದ ಬಲಿಷ್ಠ ವ್ಯಕ್ತಿಯು ಕಲ್ಲನ್ನು ಎಷ್ಟು ದೂರಕ್ಕೆ ಎಸೆಯಬಹುದೋ ಅಷ್ಟು ದೂರದಲ್ಲಿರುವ ಅರಣ್ಯದಲ್ಲಿ ವಾಸಿಸಬೇಕೆಂದು ನಿಯಮಗಳು ಹೇಳುತ್ತವೆ. ಅಂದರೆ ಸುಮಾರು 1. ಕಿ.ಮೀ. ದೂರದ ಅರಣ್ಯಕ್ಕೆ ಹೋಗಿ ಅಲ್ಲಿ ಸಾಧನೆ ಆರಂಭಿಸುತ್ತಾನೆ. ಅತಿಯಾದ ದಟ್ಟ ಅರಣ್ಯಕ್ಕೆ ಹೋಗಿ ಸಾಧನೆ ಆರಂಭಿಸಿದರೆ ಆಹಾರಕ್ಕೆ ತೊಂದರೆಯಾಗುವುದು. ಹೀಗಾಗಿ ಹಳ್ಳಿಗೆ ಅಷ್ಟು ಹತ್ತಿರವಲ್ಲದೆ ಹಾಗು ಅಷ್ಟು ದೂರವಲ್ಲದೆ ಸುಮಾರು 5 ಕಿ.ಮೀ. ದೂರದಲ್ಲಿ ಸಾಧನೆ ಮಾಡುತ್ತಾನೆ (ಅಂದರೆ 500 ಬಿಲ್ಲುಗಳ ಉದ್ದದ ಅಂತರ).
ಇವರಲ್ಲಿ ಮೂರು ಹಂತಗಳಿವೆ: ಉತ್ತಮ : ಮುಂಜಾನೆಗೆ ಅರಣ್ಯ ತಲುಪಿರುತ್ತಾನೆ ಹಾಗು ವರ್ಷದ 12 ತಿಂಗಳು ಕಾಡಿನಲ್ಲಿಯೇ ವಾಸಿಸುತ್ತಾನೆ. ಮಧ್ಯಮ : ಇಲ್ಲಿ ಭಿಕ್ಖುವು ವಷರ್ಾವಾಸವನ್ನು ಹಳ್ಳಿಯಲ್ಲಿ ಕಳೆಯುತ್ತಾನೆ. ಸಾಧಾರಣ : ಇಲ್ಲಿ ಭಿಕ್ಖುವು ವರ್ಷ ಹಾಗು ಚಳಿಗಾಲದಲ್ಲಿ ಹಳ್ಳಿಯಲ್ಲೇ ವಾಸಿಸುತ್ತಾನೆ.
ಅರಣ್ಯ ವಾಸದ ಲಾಭಗಳು: ದ್ಯಾನಕ್ಕೆ ಹಸಿರು ವರ್ಣದ ಕಾಡು ಸಹಾ ಧ್ಯಾನ ವಸ್ತುವಾಗಬಲ್ಲದು. ದೊರಕದಿರುವ ಧ್ಯಾನ ಲಾಭಗಳು ಇಲ್ಲಿ ಸಿಗುವಂತಾಗಬಹುದು. ಅಥವಾ ದೊರಕಿರುವ ಧ್ಯಾನಕ್ಕೆ ರಕ್ಷಣೆ ಸಿಗುತ್ತದೆ. ಭಗವಾನರು ಸಹಾ ಒಮ್ಮೆ ನಾಗಿಕನೆಂಬ ಭಿಕ್ಷುವಿಗೆ ಹೀಗೆ ಹೇಳಿದ್ದರು: ನಾಗಿತ, ಅರಣ್ಯವಾಸೆ ಭಿಕ್ಖುವೆಂದರೆ ನನಗೆ ಮೆಚ್ಚುಗೆ. ಆತನು ಅರಣ್ಯವಾಸಿಯಾದಾಗ ಆತನಿಗೆ ಕ್ಷೊಭೆ ತರುವಂತಹ ಯಾವುದೇ ಇಂದ್ರಿಯ ವಿಷಯಗಳು ಆತನನ್ನು ಸ್ಪಶರ್ಿಸಲಾರವು. ಹೀಗಾಗಿ ಆತನು ಸ್ವಾಭಾವಿಕವಾಗಿ ಚಿಂತೆಯಿಂದ ಅಂಟುವಿಕೆಯಿಂದ ಪಾರಾಗಿರುತ್ತಾನೆ. ಆತನು ಏಕಾಂತದ ಸವಿಯನ್ನು ಅನುಭವಿಸುತ್ತಾನೆ.
ಆತನು ಪ್ರತ್ಯೇಕವಾಗಿ ಹಾಗು ಏಕಾಂಗಿಯಾಗಿ ಜೀವಿಸುತ್ತಾನೆ
ಹೊಂದುತ್ತಾ ಆನಂದವನ್ನು ಹೃದಯದಲಿ,
ಪಕ್ಕದಲ್ಲಿಯೇ ಶಾಸ್ತರು ಇರುವಂತೆ ಅನುಭೂತಿ ಹೊಂದುತ್ತಾ,
ಹಿಗ್ಗಿಸುತ್ತಾ ಇರುವ ಆನಂದವನ್ನು.
ಯಾವ ಹಲವು ತನಗೆ ಮಾತ್ರವಿದೆ
ಎಂದು ಹೆಮ್ಮೆಯಿಂದ ಇರುವ
ಇಂದ್ರನಿಗಿಂತ ಅಧಿಕವಾದ ಸುಖವಿದೆ
ಎಂದು ಏಕಾಂತದಲ್ಲಿಯೇ ಇರುವ
ವನವಾಸಿಯ ಮನದ ಅನಿಸಿಕೆ.

9. ರುಕ್ಖಮೂಲಕಙ್ಗಂ (ವೃಕ್ಷ ಬುಡದ ಆಚರಣೆ):

ವೃಕ್ಷದ ಬುಡದಲ್ಲಿ ಪದ್ಮಾಸೀನನಾಗಿ ಧ್ಯಾನದಲ್ಲಿ ಸದಾ ನಿರತನಾಗಿರುವ ಭಿಕ್ಖುವಿಗೆ ವೃಕ್ಷ ಬುಡದ ಆಚರಣೆಯವನೆಂದು ಹೇಳುತ್ತಾರೆ. ಅಂತಹ ಭಿಕ್ಖುವು ಈ ರೀತಿಯ ಸಂಕಲ್ಪವುಳ್ಳವನಾಗಿರುತ್ತಾನೆ: ನಾನು ಛಾವಣಿಯ ಕೆಳಗೆ ವಾಸಿಸುವುದನ್ನು ನಿರಾಕರಿಸುತ್ತೇನೆ ಅಥವಾ ನಾನು ವೃಕ್ಷಮೂಲದಲ್ಲಿಯೇ ವಾಸಿಸುತ್ತೇನೆ.
ಆದರೆ ವೃಕ್ಷಮೂಲಿಯು ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ. ಆತನು ಕೆಲವೊಂದು ವೃಕ್ಷಗಳನ್ನು ನಿರಾಕರಿಸಬೇಕಾಗುತ್ತದೆ. ಆ ವೃಕ್ಷವು ಗಡಿಭಾಗದ ವೃಕ್ಷ, ದೇವಸ್ಥಾನದಲ್ಲಿರುವ ವೃಕ್ಷ, ಅಂಟುಸೋರುವ ವೃಕ್ಷ,
ಹಣ್ಣಿನ ವೃಕ್ಷ, ಬಾವಲಿಗಳು ಇರುವ ವೃಕ್ಷ, ಟೊಳ್ಳುತನವಿರುವ ವೃಕ್ಷ, ವಿಹಾರದ ಮಧ್ಯದಲ್ಲಿನ ವೃಕ್ಷ ಮತ್ತು
ಹಾವುಗಳಿರುವ ವೃಕ್ಷ.
ಇದರಲ್ಲಿ ಮೂರು ಹಂತಗಳು: ಉತ್ತಮ: ಆ ವೃಕ್ಷವನ್ನು ಚೊಕ್ಕವಾಗಿಡಲು ಗಮನಹರಿಸುವುದಿಲ್ಲ. ಕೇವಲ ಕಾಲಿನಿಂದ ಎಲೆಗಳನ್ನು ತಳ್ಳಿಬಿಡುತ್ತಾನೆ. ಮಧ್ಯಮ: ಯಾರಾದರೂ ಗೃಹಸ್ಥರು ಅತ್ತ ಬಂದಾಗ ಅವರಿಂದ ಸ್ವಚ್ಛಗೊಳಿಸಿಕೊಳ್ಳುತ್ತಾನೆ. ಸಾಧಾರಣ: ಆ ಭಿಕ್ಖುವು ಸ್ವಚ್ಛತೆಯ ಬಗ್ಗೆ ಅತೀ ಗಮನನೀಡುತ್ತಾನೆ.
ವೃಕ್ಷಮೂಲದ ಲಾಭಗಳು: ಈ ವೃಕ್ಷಮೂಲದ ಆಚರಣೆಯನ್ನು ಭಗವಾನರು ಸಹಾ ಬೋಧಿಪ್ರಾಪ್ತಿ ವೇಳೆ ಪೂರ್ಣಗೊಳಿಸಿದ್ದರು. ಅನೇಕ ಕಡೆಗಳಲ್ಲಿ ಇದನ್ನು ಸ್ತುತಿಸಿದ್ದಾರೆ: ಸುಲಭವಾಗಿ ದೊರೆಯುವಂತಹುದು, ನಿಂದಾತೀತವಾದುದು, ಉಚಿತವಾದುದು. ಎಲೆಗಳು ಹಣ್ಣಾಗಿ ಒಣಗಿ ಬೀಳುವಾಗ ಅನಿತ್ಯಸಞ್ಞವು ಜಾಗೃತವಾಗುತ್ತದೆ. ಆತನಲ್ಲಿ ಭವಗಳ ಬಗ್ಗೆ ಆಸೆಯಾಗಲಿ ದ್ವೇಷವಾಗಲಿ ಇರುವುದಿಲ್ಲ. ಆತನು ದೇವತೆಗಳ ಸಂಗಡ ವಾಸಿಸುತ್ತಾನೆ, ಅಲ್ಪೇಚ್ಛಿಯಾಗಿ ಜೀವಿಸುತ್ತಾನೆ.
ಭಗವಾನರು ವೃಕ್ಷಮೂಲಗಳನ್ನು ಪ್ರಶಂಸಿಸಿದ್ದಾರೆ:
ಅವಲಂಬನೆಗೆ ಯೋಗ್ಯವಾದುದರಲ್ಲಿ ಒಂದು,
ಯಾರು ಏಕಾಂತತೆಯಲ್ಲಿ ರಮಿಸುವರೋ
ಅವರಿಗೆ ಇದಕ್ಕಿಂತ ಉತ್ತಮ ವಾಸಸ್ಥಳ ಬೇಕೆ?
ವೃಕ್ಷಮೂಲದಲ್ಲಿ ಏಕಾಂತತೆಯಲ್ಲಿ ತಲ್ಲೀನನಾಗಿ
ದೇವತೆಗಳಿಂದಲೂ ರಕ್ಷಿತರಾಗುವರು
ಯಾವುದೇ ವಾಸ ಸ್ಥಾನಕ್ಕೆ ಹಂಬಲಿಸದೆ
ಆತನು ಮಾತ್ರವೇ ನಿಜನಿಷ್ಠೆಯಲ್ಲಿರುವನು.
ಕೋಮಲವಾದ ಎಲೆಗಳು ಮೊದಲು
ಕೆಂಪಾಗಿದ್ದು ತರುವಾಯ ಹಸಿರಾಗಿ
ನಂತರ ಹಳದಿಯಾಗಿ ಉದುರುವುವು
ಇದನ್ನು ಕಂಡ ಸಾಧಕನು ನಿತ್ಯವೆಂಬ
ನಂಬಿಕೆಯನ್ನು ಉದುರಿಸುವನು
ವೃಕ್ಷಮೂಲವು ಆತನ ಆಸ್ತಿಯಂತೆ
ಅನಿತ್ಯ (ಉದಯ ವ್ಯಯ)ದ ಚಿಂತನೆಯನ್ನು
ಯಾವ ಪ್ರಜ್ಞಾವಂತನು ಅಲಕ್ಷಿಸಲಾರನು.

10. ಅಬ್ಭೋಕಾಸಿಕಙ್ಗಂ (ತೆರೆದ ಆಕಾಶದ (ಗಾಳಿಯ) ಆಚರಣೆ):

ಇಲ್ಲಿ ಭಿಕ್ಖು ವೃಕ್ಷಮೂಲದವನಂತೆ ವಸತಿಗೆ ಕಟ್ಟಡವನ್ನು ಬಯಸುವುದಿಲ್ಲ. ಆದರೆ ಹಾಗೆಯೇ ವೃಕ್ಷವನ್ನು ಬಯಸುವುದಿಲ್ಲ. (ಆತನು ಬೆಟ್ಟಗಳನ್ನು ಅಥವಾ ವಿಶಾಲ ಮೈದಾನಗಳನ್ನು ಆರಿಸಿಕೊಳ್ಳುತ್ತಾನೆ). ಇಲ್ಲಿ ಭಿಕ್ಖುವು ಈ ರೀತಿಯ ಸಂಕಲ್ಪವನ್ನು ತೊಟ್ಟಿರುತ್ತಾನೆ: ನಾನು ಛಾವಣಿಯಾಗಲಿ ಅಥವಾ ವೃಕ್ಷಮೂಲವನ್ನಾಗಲಿ ನಿರಾಕರಿಸುವೆನು ಅಥವಾ ನಾನು ತೆರೆದ ಆಕಾಶ (ಗಾಳಿ) ಯಲ್ಲಿರುವಂತಹ ಆಚರಣೆ ಅಭ್ಯಸಿಸುತ್ತೇನೆ.
ಈ ಬಗೆಯ ಆಚರಣೆಯುಳ್ಳವರು ಉಪೋಸಥದ ಭವನಕ್ಕೆ ಧರ್ಮ ಶ್ರವಣಕ್ಕೆ ಹೋಗಬಹುದಾಗಿದೆ. ಆತನು ಒಳಗಿರುವಾಗ ಮಳೆ ಬಂದರೆ ಮಳೆ ನಿಂತಮೇಲೆ ಹೊರ ಹೋಗಬಹುದಾಗಿದೆ. ಅಗತ್ಯ ಕಾರ್ಯವಿದ್ದಾಗ ಛಾವಣಿ ಇರುವ ಕಟ್ಟಗಳಿಗೆ ಹೋಗಬಹುದಾಗಿದೆ (ಕಟ್ಟದಲ್ಲಿರುವ ಭಿಕ್ಖುಗಳಲ್ಲಿ ಸಂದೇಹ ಪರಿಹರಿಸಿಕೊಳ್ಳಲು ಇತ್ಯಾದಿ). ಇಂತಹುದೇ ನಿಯಮಗಳು ವೃಕ್ಷಮೂಲದವನಿಗೂ ಅನ್ವಯಿಸುತ್ತದೆ.
ಇದರಲ್ಲಿ ಮೂರು ಹಂತಗಳಿವೆ: ಉತ್ತಮ: ಇಲ್ಲಿ ಭಿಕ್ಖುವು ಯಾವುದೇ ಮನೆಗಳಲ್ಲಿ ಅಥವಾ ವೃಕ್ಷದ ಕೆಳಗೆ ಅಥವಾ ಬಂಡೆಯ ಕೆಳಗೆ ಆಗಲಿ ವಾಸಿಸಲಾರ. ಮಧ್ಯಮ: ಇಲ್ಲಿ ಭಿಕ್ಖುವು ಅಭ್ಯಾಸವಾಗುವವರೆಗೂ ಬಂಡೆಯ ಕೆಳಗೆ ಅಥವಾ ವೃಕ್ಷದ ಕೆಳಗೆ ವಾಸಿಸಬಹುದಾಗಿದೆ. ಸಾಧಾರಣ: ಎಲ್ಲಿ ಬೇಕಾದರೂ ಇರಲು ಅನುಮತಿಯಿದೆ.
ಅಬ್ಭೋಕಾಸಿಕಙ್ಗನ ಲಾಭಗಳು: ವಸತಿಗಳ ಬಂಧನವೂ ಕಠೋರ, ಹೀಗಾಗಿ ವಸತಿ ಬಂಧನದಿಂದ ಮುಕ್ತನಾಗುತ್ತಾನೆ. ಆತನ ಜಡತ್ವ ಹಾಗು ಸೋಮಾರಿತನ ನಾಶವಾಗುವುದು. ಆತನ ವರ್ತನೆಯು ಹೀಗೆ ಪ್ರಶಂಸಯೋಗ್ಯವಾಗುವುದು: ಜಿಂಕೆಯಂತೆ ಮನೆಯಿಲ್ಲದವನಾಗಿ ಅಂಟದವನಾಗಿರುತ್ತಾನೆ. ಆತನು ಮುಕ್ತನಾಗಿರುತ್ತಾನೆ, ಎಲ್ಲೇ ಹೋಗಲು ಸ್ವತಂತ್ರನಾಗಿರುತ್ತಾನೆ. ಅಲ್ಪೇಚ್ಛೆ, ಸರಳತೆ, ಏಕಾಂತತೆಗಳಂತಹ ಉತ್ತಮ ಆಚರಣೆಗಳಿಂದ ಕೂಡಿರುತ್ತಾನೆ.
ತೆರೆದ ಗಾಳಿಯು ಜೀವವನ್ನು ಪ್ರಸಾದಿಸುತ್ತದೆ. ಹೀಗಾಗಿ ಮನೆಯಿಲ್ಲದ ಭಿಕ್ಖುವು ಕಲಹಗಳಿಂದ ಮುಕ್ತ ಜಿಂಕೆಯಂತೆ ಸುಲಭವಾಗಿ ತಪ್ಪಿಸಿಕೊಳ್ಳುವಂತೆ ಸದಾ ಜಾಗೃತನಾಗಿ ವಿಹರಿಸುತ್ತಾನೆ.
ಜಡತ್ವ ಸೋಮಾರಿತನಗಳು ನಿಂತುಹೋಗಿ
ಸೂರ್ಯ ಚಂದಿರರು ಆತನ ಬೆಳಕಾಗಿ ಸುಸಜ್ಜಿತವಾಗಿ
ನಕ್ಷತ್ರಗಳ ಭವ್ಯ ಛಾವಣಿಯ ಕೆಳಗೆ
ಆತನ ಸಮಾಧಿಯು ಆನಂದಮಯವಾಗಿದೆ.
ಏಕಾಂತತೆಯ ಸವಿ ರಸದಿಂದಾಗಿ
ತೆರೆದ ಗಾಳಿಯಲ್ಲಿ ಏತಕ್ಕಾಗಿ ಪ್ರಾಜ್ಞರು
ತೆರೆದ ಆಕಾಶದಲ್ಲಿ ಇರಲು ಇಚ್ಛಿಸುವರೆಂದು
ಶ್ರಾವಕನು ಶೀಘ್ರವೇ ಶೋಧಿಸುವನು.

11. ಸೋಸಾನಿಕಙ್ಗಂ (ಸ್ಮಶಾನ ವಾಸದ ಆಚರಣೆ):
ಇಲ್ಲಿ ಭಿಕ್ಖುವು ಸ್ಮಶಾನ ವಾಸದ ಆಚರಣೆ ಹೊಂದಿರುವುದರಿಂದಾಗಿ ಹೀಗೆ ಕರೆಯಲಾಗಿದೆ. ಆತನು ಈ ಬಗೆಯ ಸಂಕಲ್ಪ ಹೊಂದಿರುತ್ತಾನೆ: ನಾನು ಸ್ಮಶಾನವಲ್ಲದ್ದನ್ನು ನಿರಾಕರಿಸುವೆನು ಅಥವಾ ನಾನು ಸ್ಮಶಾನದಲ್ಲಿ ನೆಲೆಸುವ ಆಚರಣೆ ಹೊಂದಿರುತ್ತೇನೆ.
ಕೆಲವೊಂದು ಹಳ್ಳಿಗೆ ಸ್ಮಶಾನ ಎಂದು ಹಿಂದೆ ಕರೆಯಲಾಗುತ್ತಿತ್ತು. ಕೇವಲ ಹೆಸರು ಇದ್ದ ಮಾತ್ರಕ್ಕೆ ಇಂತಹಕಡೆ ಭಿಕ್ಖುವು ವಾಸಿಸುವ ಹಾಗಿಲ್ಲ. ಎಲ್ಲಿ ಹೆಣಗಳನ್ನು ಸುಡುವರೋ ಅಥವಾ ಹೂಳುವರೋ ಅದು ಮಾತ್ರವೇ ಸ್ಮಶಾನ ಎಂದು ಕರೆಸಿಕೊಳ್ಳುತ್ತದೆ.
ಸ್ಮಶಾನ ವಾಸಿಯು ತಿಳಿದಿರಲೇಬೇಕಾದ ಮಾರ್ಗದರ್ಶನ: ಅಲ್ಲಿ ವಾಸಿಸುವವನು ಪೀಠೋಪಕರಣಗಳನ್ನಾಗಲಿ ಅಥವಾ ವಾಸಿಸಲು ಬೇಕಾದ ಸಾಮಗ್ರಿಗಳನ್ನು ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಈ ಬಗೆಯ ಆಚರಣೆ ಕಾಲಪರಿಮಿತವಾದುದು. ಇಲ್ಲಿ ವಾಸಿಸುವವ ಜಾಗರೂಕನಾಗಿರಬೇಕು ಹಾಗು ಪ್ರಯತ್ನಶೀಲನಾಗಿರಬೇಕು. ಆತನು ಹಿರಿಯ ಸ್ಥವಿರರಿಗೆ ತಾನು ವಾಸಿಸುವ ವಿಷಯ ಮೊದಲೇ ತಿಳಿಸಿರಬೇಕು ಅಥವಾ ರಾಜನಿಂದ ಪ್ರತಿನಿಧಿಯಾಗಿರುವ ಅಲ್ಲಿನ ಅಧಿಕಾರಿಗೆ ಮೊದಲೇ ತಿಳಿಸಿರಬೇಕು. ಇಲ್ಲದಿದ್ದರೆ ಕಾನೂನು ಉಲ್ಲಂಘನೆಯಂತಹ ಸಮಸ್ಯೆ ಎದುರಾಗುವುದು. ಆತನು ಅಲ್ಲಿ ನಡಿಗೆಯ ಧ್ಯಾನ ಮಾಡುವಾಗ ನೇಗಿಲುದ್ದದವರೆಗೆ ಮಾತ್ರ ದೃಷ್ಟಿ ಹಾಯಿಸಬೇಕು. ಅಲ್ಲಿಗೆ ಹೋಗುವ ಮುಂಚೆ ಹಗಲಿನಲ್ಲಿಯೇ ಹೋಗಿ ಅವೆಲ್ಲಾ ರಾತ್ರಿ ಹೇಗೆ ಕಾಣಬಹುದು ಎಂದು ಮೊದಲೇ ಊಹಿಸಬೇಕು. ಇಲ್ಲದಿದ್ದಲ್ಲಿ ರಾತ್ರಿ ವೇಳೆ ಆಕೃತಿಗಳನ್ನು ಭಯ ಮಿಶ್ರಿತನಾಗಿ ಗ್ರಹಿಸಿ ಹೆದರುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಅಲ್ಲಿ ಪ್ರೇತಗಳು ಅಥವಾ ಪ್ರಾಣಿಗಳು ಅಡ್ಡಾಡುತ್ತಾ ಚೀತ್ಕಾರಗಳನ್ನು ಹಾಕುತ್ತಿರುತ್ತವೆ. ಆದರೆ ಅವನ್ನು ಕಂಡು ಯಾವುದೇ ವಸ್ತುವಿನಿಂದಲೂ ಅವಕ್ಕೆ ಹೊಡೆಯಲು ಹೋಗಬಾರದು. ಅಲ್ಲಿಗೆ ಹೋಗುವುದನ್ನು ಒಂದು ರಾತ್ರಿಯೂ ತಪ್ಪಿಸಬಾರದು. ಅಲ್ಲಿಗೆ ಹೋಗುವ ಆತನು ಪ್ರೇತಗಳಿಗೆ ಅಥವಾ ಪ್ರಾಣಿಗಳಿಗೆ ಇಷ್ಟವಾಗುವಂತಹ ಆಹಾರಗಳನ್ನು ಕೊಂಡೊಯ್ಯಬಾರದು. ಎಳ್ಳಿನ ಹಿಟ್ಟು, ಬಟಾಣಿಯ ರಾಡಿ, ಮೀನು, ಮಾಂಸ, ಹಾಲು, ಎಣ್ಣೆ, ಸಕ್ಕರೆ ಇತ್ಯಾದಿ. ಅವೆಲ್ಲಾ ಅಮನುಷ್ಯರು ಇಷ್ಪಪಡುತ್ತವೆ. ಆತನು ಕೌಟುಂಬಿಕ ಮನೆಗಳಲ್ಲಿ ಪ್ರವೇಶಿಸಬಾರದು, ಹಗಲಿನಲ್ಲಿ ಆತನು ಸ್ಮಶಾನದಲ್ಲಿ ವಾಸಿಸಬಾರದು.
ಇದರಲ್ಲಿ ಮೂರು ಹಂತಗಳಿವೆ: ಉತ್ತಮ: ಈ ಆಚರಣೆಯಲ್ಲಿ ನಿಷ್ಟನಾದವನು ಸುಡುವಂತಹ ಬೆಂಕಿ, ಹೆಣಗಳ ಬಳಿ ಹಾಗು ಶೋಕಿಸುತ್ತಿರುವವರ ಬಳಿಯಲ್ಲಿಯೇ ವಾಸಿಸುತ್ತಾನೆ. ಮಧ್ಯಮ: ಇಲ್ಲಿ ಬೆಂಕಿ, ಹೆಣ, ಶೋಕಗಳಿಲ್ಲದಿದ್ದರೂ ನಡೆಯುತ್ತವೆ. ಸಾಧಾರಣ: ಅಲ್ಲಿ ಸಾಧಾರಣ ರೀತಿ ಕಂಡುಬಂದರೂ ನಡೆಯುತ್ತದೆ.
ಸ್ಮಶಾನವಾಸದ ಲಾಭಗಳು: ಆತನು ಮರಣಾನುಸ್ಮೃತಿಯನ್ನು ಸಹಜವಾಗಿಯೇ ಹೊಂದುತ್ತಾನೆ. ಅಶುಭ ಧ್ಯಾನದ ನಿಮಿತ್ತಗಳು ಸುಲಭವಾಗಿ ಸಿಗುತ್ತವೆ. ಇಂದ್ರೀಯ ಭೋಗದ ಮೋಹವು ಅಳಿಯುತ್ತದೆ. ಸದಾ ಶರೀರದ ನಿಜಸ್ವರೂಪ ಕಾಣುತ್ತಾನೆ. ಆತನು ಶೀಘ್ರವಾಗಿ ಗುರಿ ತಲುಪುವ ಕಾಯರ್ಾಚರಣೆ ಹೊಂದುತ್ತಾನೆ. ಆರೋಗ್ಯದ ಬಗ್ಗೆ, ಯೌವ್ವನದ ಬಗ್ಗೆ ಅಹಂಕಾರ ಅಳಿಯುವುದು. ಪ್ರೇತಗಳ ಬಗೆಗಿನ ಭಯ ಮಾಯವಾಗುವುದು. ಅಮನುಷ್ಯರು ಸಹಾ ಆತನ ಮೇಲೆ ಗೌರವ ಇಡುವರು. ಆತನು ಅಲ್ಪೇಚ್ಛಿಯಾಗಿ ಜೀವಿಸುತ್ತಾನೆ.
ಸ್ಮಶಾನವಾಸಿಗಳು ನಿದ್ರೆಯಲ್ಲಿಯೂ,
ಸ್ವಪ್ನದಲ್ಲಿಯೂ ಅಲಕ್ಷವ ತೋರಿಸಲಾರರು.
ಸದಾ ಮರಣಾನುಸ್ಮೃತಿಯಲ್ಲಿಯೇ ಇರುವರು.
ಈ ಹಿಂದೆ ಇಂದ್ರಿಯ ವಿಷಯಿಯಾಗಿದ್ದರೂ
ಅವರಲ್ಲಿ ಈಗಿನಿಂದ ರಾಗಾಗ್ನಿಯು ಉದಯಿಸಲಾರದು.
ಸದಾ ಸುಡುತ್ತಿರುವ ಶವಗಳಿಂದಲೇ ಚಿತ್ತವು ಆವೃತವಾಗಿರುತ್ತದೆ,
ಗುರಿಮುಟ್ಟುವ ತವಕದಿಂದಾಗಿ ಆತನ ಶ್ರಮವು ಯೋಗ್ಯವಾಗಿರುತ್ತದೆ,
ಪರಮಶಾಂತಿಗಾಗಿ ಎಲ್ಲಾ ಕೋರಿಕೆಗಳು ಅಳಿದು
ನಿಬ್ಬಾಣಕ್ಕಾಗಿ ಹೃದಯವು ಬಾಗಿ ಶೀಲಾದಿ ಅಭ್ಯಾಸಗಳಲ್ಲಿ ದೃಢವಾಗುವನು.

12. ಯಥಾಸನ್ಥತಿಕಙ್ಗಂ (ಯಾವುದೇ ಹಾಸಿಗೆ ಬಳಸುವ ಆಚರಣೆ) :

ಇಲ್ಲಿ ಭಿಕ್ಖುವು ವಿಶ್ರಾಂತಿಗಾಗಿ ಯಾವುದೇ ಸ್ಥಳ ಅಥವಾ ಸ್ಥಿತಿಗೂ ಹೊಂದಿಕೊಳ್ಳುವುದರಿಂದಾಗಿ ಈ ಆಚರಣೆಗೆ ಈ ಹೆಸರು ಬಂದಿದೆ. ಇಲ್ಲಿ ಭಿಕ್ಖುವು ಈ ಬಗೆಯ ಸಂಕಲ್ಪ ಹೊಂದಿರುತ್ತಾನೆ: ನಾನು ವಿಶ್ರಾಂತಿ ಸ್ಥಳಗಳ ಬಗ್ಗೆ ಲೋಭವನ್ನು ತಿರಸ್ಕರಿಸಿದ್ದೇನೆ ಅಥವಾ ನಾನು ಯಾವುದೇ ಹಾಸಿಗೆ ಬಳಸುವ ಆಚರಣೆ ಹೊಂದಿರುತ್ತೇನೆ.
ಇಲ್ಲಿ ಭಿಕ್ಖುವು ವಿಶ್ರಾಂತಿ ಸ್ಥಳಗಳ ಬಗ್ಗೆ ಅಥವಾ ಅನುಕೂಲತೆಗಳ ಬಗ್ಗೆ ಲೋಭಿಯಾಗಿರುವುದಿಲ್ಲ. ಯಾವುದಕ್ಕೂ ಹೊಂದಿಕೊಳ್ಳುತ್ತಾನೆ.
ಇದರಲ್ಲಿ ಮೂರು ಹಂತಗಳಿವೆ: ಉತ್ತಮ: ತನಗಾಗಿ ನಿಗಧಿಸಲ್ಪಟ್ಟ ಸ್ಥಳವು ದೂರವೇ ಇರಲಿ ಅಥವಾ ಹತ್ತಿರದಲ್ಲೇ ಇರಲಿ, ಆ ಸ್ಥಳವು ಪ್ರೇತಗಳಿಂತ ಅಥವಾ ಸರ್ಪಗಳಿಂದಲೇ ಇರಲಿ, ಚಳಿಯಿರಲಿ ಅಥವಾ ಬಿಸಿಯೇ ಇರಲಿ ಅದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾರ. ಮಧ್ಯಮ: ಇಲ್ಲಿ ಆಕ್ಷೇಪಡುತ್ತಾನೆ. ಸಾಧಾರಣ: ಇಲ್ಲಿ ಆಕ್ಷೇಪಪಟ್ಟು ಬದಲಿಗೆ ಬೇರೆಯವರನ್ನು ಕಳುಹಿಸುತ್ತಾನೆ.
ಲಾಭಗಳು: ತನಗೆ ಸಿಕ್ಕಿದುದರಲ್ಲಿ ಸಂತುಷ್ಟನಾಗುತ್ತಾನೆ. ಸಹ ಭಿಕ್ಷುಗಳ ಉನ್ನತಿ ಹಾಗು ಸುಖ ಬಯಸುತ್ತಾನೆ. ಶ್ರೇಷ್ಠ ಅಥವಾ ನೀಚ ಎಂಬಂತಹದೆಲ್ಲಾ ವಜರ್ಿಸುತ್ತಾನೆ. ಸ್ವೀಕಾರ ಅಥವಾ ತಿರಸ್ಕಾರದಂತಹ ರಾಗದ್ವೇಷಗಳು ಇಲ್ಲದಂತಾಗುತ್ತದೆ. ಲೋಭಪೂರಿತ ಇಚ್ಛೆ (ಅತಿಯಾಸೆ)ಗಳ ದ್ವಾರವು ಮುಚ್ಚಿಹೋಗುತ್ತವೆ. ಅಲ್ಪೇಚ್ಛೆ, ಸರಳತೆ, ಏಕಾಂತತೆಯು ವೃದ್ಧಿಯಾಗುವುದು.
ಯಾರು ಎಲ್ಲಿಯಾದರೂ ವಿಶ್ರಾಂತಿ ಪಡೆಯುವುದರಲ್ಲಿ ತೃಪ್ತನೋ
ದೊರೆತಿರುವುದರಲ್ಲಿ ಸಂತೃಪ್ತನೋ
ಆತನು ಭಯವಿಲ್ಲದೆ ಸುಖಮಯವಾಗಿ ಹುಲ್ಲಿನ ಮೇಲೆಯೇ ನಿದ್ರಿಸುತ್ತಾನೆ.
ಅತ್ಯುತ್ತಮವಾದುದು ಬೇಕು ಎಂಬ ಲಾಲಸೆಯಿಲ್ಲ,
ತುಚ್ಛ ಹಾಸಿಗೆಗೆ ತಿರಸ್ಕಾರವಿಲ್ಲ,
ಪಬ್ಬಜ್ಜಿತನಾಗಿರುವವನಿಗೆ ಸಹಾಯ ಮಾಡುತ್ತ ಸುಖಜೀವನ ಮಾಡುತ್ತಾನೆ.
ಹೀಗಾಗಿ ಪಂಡಿತನಾದವ ಯಾವುದೇ ಸ್ಥಳಕ್ಕೂ ಸರಿ ಎನ್ನುವ ಈ ಪದ್ಧತಿಗೆ
ಉದಾತ್ತನಾದವ ಇಷ್ಟಪಟ್ಟು ಸುಗತರ ಸಮ್ಮತಿಯಂತೆ ಜೀವಿಸುತ್ತಾನೆ.

13. ನೇಸಬ್ಬೇಕಕಙ್ಗಂ (ಕುಳಿತೇ ಇರುವ (ಆಸನ) ಆಚರಣೆ)
ಇಲ್ಲಿ ಭಿಕ್ಖುವು ಕುಳಿತೇ ಇರುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾನೆ. ಆತನು ಮಲಗಲು ನಿರಾಕರಿಸುತ್ತಾನೆ. ಅದರಿಂದ ಆತನಿಗೆ ಕುಳಿತೇ ಇರುವವ ಎನ್ನುವರು. ಆತನ ಆಚರಣೆಗೆ ಕುಳಿತೇ ಇರುವ ಆಚರಣೆ ಎನ್ನುವರು. ಇಲ್ಲಿ ಭಿಕ್ಖುವು ಈ ರೀತಿಯ ಸಂಕಲ್ಪ ತೊಟ್ಟಿರುತ್ತಾನೆ: ನಾನು ಮಲಗಲು ನಿರಾಕರಿಸುತ್ತೇನೆ ಅಥವಾ ನಾನು ಕುಳಿತೇ ಇರುವ ಅಭ್ಯಾಸದಲ್ಲಿ ದೃಢವಾಗಿರುತ್ತೇನೆ.
ಇಲ್ಲಿ ಆಸನಧಾರಿಯು (ಕುಳಿತಿರುವವನು) ರಾತ್ರಿಯ ಮೂರು ಝಾವದಲ್ಲೂ ಒಂದರಲ್ಲಿಯಾದರೂ ಎದ್ದು ಚಂಕ್ರಮಣ (ನಡಿಗೆಯ ಧ್ಯಾನ) ಮಾಡುತ್ತಾನೆ. ಆತನು ನಿಲ್ಲಬಲ್ಲ, ನಡೆಯಬಲ್ಲ, ಆದರೆ ಮಲಗಲಾರ. ಇದೇ ಆತನ ಸಾಧನೆಯಾಗಿರುತ್ತದೆ.
ಇದರಲ್ಲಿ ಮೂರು ಹಂತಗಳಿವೆ: ಉತ್ತಮ: ಇಲ್ಲಿ ಭಿಕ್ಷುವು ಬೆನ್ನನ್ನು ನೇರವಾಗಿಟ್ಟುಕೊಂಡು ಎಲ್ಲಿಯೂ ಒರಗದೆ ಅಥವಾ ಪಟ್ಟಿಯೊಂದನ್ನು ಬೀಳದಿರಲೆಂದು ಕಟ್ಟಿಕೊಳ್ಳದೆ ತುಸುಕಾಲವೂ ಬೆನ್ನುನೀಡಿ ವಿಶ್ರಾಂತಿ ತೆಗೆದುಕೊಳ್ಳದೆ ಇರುತ್ತಾನೆ. ಮಧ್ಯಮ: ಇಲ್ಲಿ ಭಿಕ್ಖುವು ಕೆಲವೊಮ್ಮೆ ಮಲಗಬಹುದು ಅಥವಾ ಒರಗಿಕೊಂಡು ಸಾಧನೆ ಮಾಡಬಹುದು ಅಥವಾ ಪಟ್ಟಿ ಕಟ್ಟಿಕೊಂಡು ಕುಳಿತುಕೊಳ್ಳಬಹುದು. ಇದರಲ್ಲಿ ಯಾವುದಾದರೂ ಒಂದನ್ನು ಮಾತ್ರ ಅನುಸರಿಸುತ್ತಾನೆ. ಸಾಧಾರಣ: ಇಲ್ಲಿ ಭಿಕ್ಖುವು ಮೂರನ್ನೂ ಅನುಸರಿಸುತ್ತಾನೆ.
ಸ್ಥಿರಾಸನದ ಲಾಭಗಳು: ಯಾವಾಗ ಭಿಕ್ಷುವು ಮಲಗಲಾರನೋ ಅಂತಹವನು ಜಡತ್ವ, ನಿದ್ದೆ, ಸೋಮಾರಿತನ, ಅಧಿಕ ವಿಶ್ರಾಂತಿಗಳಂತಹ ಬಂಧನವನ್ನು ಗೆಲ್ಲುತ್ತಾನೆ. ಅಂತಹವನು ಎಂತಹ ಧ್ಯಾನಕ್ಕಾದರೂ ಅಂದರೆ ಎಂತಹ ಧ್ಯಾನದ ವಿಷಯದಲ್ಲಿಯೂ ಸಿದ್ಧಿಗಳಿಸಬಲ್ಲನು. ಅಂತಹವನ ಮನಸ್ಸು ಯಾವುದೇ ಧ್ಯಾನದ ವಿಷಯಕ್ಕೂ ಹೊಂದಿಕೊಳ್ಳುವುದು ಹಾಗು ನಿಷ್ಠೆಯಲ್ಲಿರುವುದು. ಅಂತಹ ಸಂಗಡ ಸ್ಫೂತರ್ಿದಾಯಕ. ಆತನ ಯತ್ನಶೀಲತೆ ಅನುಕರಣೀಯ. ಆತನು ಸಮ್ಮಾ ವ್ಯಾಯಮವನ್ನು ವೃದ್ಧಿಗೊಳಿಸುತ್ತಾ ಇರುತ್ತಾನೆ.
ಯಾವ ಭಿಕ್ಖುವು ಪದ್ಮಾಸನನಾಗಿ
ಬೆನ್ನನು ನೇರವಾಗಿಟ್ಟುಕೊಂಡು
ಅಡ್ಡಿಗಳನ್ನು ನಿವಾರಿಸುವುದರಲ್ಲಿ ಪ್ರವೀಣನಾಗಿ
ಇರುವನೊ ಅಂತಹವನನ್ನು ಕಂಡು
ಮಾರನ ಹೃದಯವೂ ಸಹಾ ಕಂಪಿಸುವುದು.
ಯಾರು ಸ್ಥಿರಾಸನದಲ್ಲಿ ನೆಲೆಸಿರುವವನೊ
ಯಾರು ಶಯ್ಯಾಸುಖವನ್ನು ಜಡತ್ವಸುಖವನ್ನು
ವಜರ್ಿಸಿರುವವನೋ, ಅಪಾರ ವಿರಿಯವಂತನೋ
ಅಂತಹವನೊ ತಪೋವನವನ್ನು ಶೋಭಿಸುತ್ತಾನೆ.
ನಿರಾಮಿಷವಾದ ಪೀತಿ ಸುಖವನ್ನು ಹೊಂದುತ್ತಾ
ಇರುವವನಿಗೆ ಪ್ರಾಪಂಚಿಕತೆಯಲ್ಲಿ ಮಾಡುವಂತಹುದು
ಏನೂ ಇರುವುದಿಲ್ಲ, ಸ್ಥಿರಾಸನಧಾರಿಯ
ಸಂಕಲ್ಪವು ಜ್ಞಾನಿಯ ವರ್ತನೆಗೆ ಪರಮಯೋಗ್ಯವಾಗಿವೆ.
ಯಾವ ಭಿಕ್ಖುವು ಅಲ್ಪೇಚ್ಛೆಗಳಿಂದ ಕೂಡಿ ಈ ಧುತಾಂಗಗಳನ್ನು ಆಚರಿಸುವನೋ ಅಂತಹವನ ಬಂಧನಗಳು ಅತಿ ಶೀಘ್ರದಲ್ಲೇ ಕಳಚುವುವು. ಆತನ ಯತ್ನಶೀಲತೆಯಿಂದ ಸಾಧಿಸದಿದ್ದುದು ಸಾಧಿಸಬಲ್ಲನು. ಆದರೆ ದುರಾಸೆ ಪೀಡಿತರಿಗೆ, ಇಂದ್ರಿಯಾಸಕ್ತರಿಗೆ ಯಾವ ಲಾಭವೂ ಇಲ್ಲದೆ ಜೊತೆಗೆ ನೋವಿನ ಅನುಭವ ಉಂಟಾಗುವುದು.

ನಾಲ್ಕು ವಿಧದ ತಪೋಧಾರಿಗಳಿರುತ್ತಾರೆ: 

1. ತಾಪಸಿ (ಧುತಂಗಧಾರಿ) ಯಾಗಿದ್ದು, ಬೋಧಿಸಲಾರ, ಪ್ರೋತ್ಸಾಹಿಸಲಾರ. (ಉದಾ: ಭಿಕ್ಖುಲ)
2. ಇನ್ನೊಬ್ಬ ತಾಪಸಿಯಾಗಿರಲಾರ, ಆದರೆ ಬೋಧಿಸುತ್ತಾನೆ, ಪ್ರೋತ್ಸಾಹಿಸುತ್ತಾನೆ (ಉದಾ: ಉಪನಂದ)
3. ಇಲ್ಲಿ ಭಿಕ್ಖು ತಾಪಸಿಯೂ ಅಲ್ಲ, ಅದನ್ನು ಬೋಧಿಸುವುದೂ ಇಲ್ಲ. (ಉದಾ: ಲಾಲುದಾಯಿ)
4. ತಾಪಸಿಯಾಗಿದ್ದು, ಪರಿರಿಗೂ ಅದರ ಮಹತ್ವ ಬೋಧಿಸಿ ಪ್ರೋತ್ಸಾಹಿಸುವನು. (ಉದಾ: ಸಾರಿಪುತ್ತ)

ತಾಪಸಿಯ ಮನೋಸ್ಥಿತಿ

ಇವೆಲ್ಲಾ ಆಚರಣೆಗಳ ಬಗ್ಗೆ ಆನಂದದಿಂದ ಪಾಲಿಸುವ ಇಚ್ಛೆಯಿರುವವನು, ಅಂದರೆ ಅಲ್ಪೆಚ್ಛೆ, ಸಂತೃಪ್ತಿ, ಏಕಾಂತತೆ, ವರ್ಜನೆ ಇತ್ಯಾದಿ. ಇದರಲ್ಲಿ ಅಲ್ಪೆಚ್ಛೆ ಹಾಗು ಸಂತೃಪ್ತಿಯಿಂದಾಗಿ ಆತನಲ್ಲಿ ಲೋಭವು ಕ್ಷೀಣವಾಗುತ್ತದೆ. ಏಕಾಂತತೆ ಹಾಗು ಅಳಿಸಿಹಾಕುವ ಪ್ರವೃತ್ತಿಯಲ್ಲಿ ಅಮೋಹ ಹಾಗು ಅಲೋಭ ಎರಡೂ ಇರುತ್ತದೆ. ಇವುಗಳಲ್ಲಿ 13 ಭಿಕ್ಷುಗಳಿಗೆ, 8 ಭಿಕ್ಖುಣಿಯರಿಗೆ, 12 ಸಾಮಣೇರರಿಗೆ, 7. ಸ್ತ್ರೀ ಸಾಮಣೇರರಿಗೆ, ಇಬ್ಬರು ಉಪಾಸಕ ಉಪಾಸಿಕೆಯರಿಗೆ ನಿಗಧಿಪಡಿಸಲ್ಪಟ್ಟಿದೆ.
ಒಪ್ಪತ್ತು ಊಟ ಹಾಗು ಪಿಂಡಪಾತ್ರೆಯಲ್ಲೇ ಆಹಾರ ಸೇವನೆ ಎಲ್ಲ ಭಿಕ್ಖು ಭಿಕ್ಖುಣಿಯರಿಗೆ ಅನ್ವಯಿಸುತ್ತದೆ.

ಇಲ್ಲಿಗೆ ಧುತಾಂಗ ನಿದ್ದೇಸವು ಮುಗಿಯತು.
ಸಾಧು ಜನರಿಗೆ ಪ್ರಮೋದವನ್ನುಂಟುಮಾಡಲು ವಿಶುದ್ಧಿ ಮಾರ್ಗದಲ್ಲಿರುವ ಭಾಗ-1ರ
ಈ 2ನೇ ಅಧ್ಯಾಯ ಧುತಾಂಗ ನಿದ್ದೆಸೊ ರಚಿಸಲಾಗಿದೆ 

No comments:

Post a Comment