Thursday 12 April 2018

visuddhi magga ವಿಶುದ್ಧಿ ಮಾರ್ಗದ ಸಮಾಧಿಯ ಆಧ್ಯಾಯ 7 ಆರು ಅನುಸ್ಸತಿ (ಸ್ಮರಣೆ) ಗಳ ನಿದ್ದೇಸ (ವಿವರಣೆ)

ಅಧ್ಯಾಯ 7ಆರು ಅನುಸ್ಸತಿ (ಸ್ಮರಣೆ) ಗಳ ನಿದ್ದೇಸ (ವಿವರಣೆ)

10 ಅನುಸ್ಸತಿಗಳು 10 ಅಶುಭಗಳ ನಂತರ ಬರುವುವು. ಅವು ಹೀಗಿದೆ: ಸ್ಮೃತಿಯೇ ಅನುಸ್ಸತಿಯಾಗಿದೆ. ಏಕೆಂದರೆ ಇದು ಪದೇ ಪದೇ ಉಂಟಾಗುತ್ತದೆ. ಯಾವ ಕುಲಪುತ್ರರು ಶ್ರದ್ಧೆಯಿಂದ ಪಬ್ಬಜಿತರಾಗಿರುವರೋ ಅಂತಹ ಅನುರೂಪ (ಯೋಗ್ಯ) ರಲ್ಲಿ ಸಕಾಲದಲ್ಲಿ ಉಂಟಾಗುತ್ತದೆ. 
ಬುದ್ಧ ಭಗವಾನರಿಂದ ಸ್ಫೂತರ್ಿ ಪಡೆದು ಉಂಟಾದ ಸ್ಮೃತಿಯನ್ನು ಬುದ್ಧಾನುಸ್ಸತಿ ಎನ್ನುವೆವು. ಇದರಲ್ಲಿ ಅವರ ಮಹೋನ್ನತ ಗುಣಗಳನ್ನು ಸ್ಮರಿಸಲಾಗುತ್ತದೆ.
ಭಗವಾನರ ಧಮ್ಮದಿಂದ ಸ್ಫೂತರ್ಿ ಪಡೆದು ಸ್ಮರಿಸಲಾದ ಚಿಂತನೆಯನ್ನು ಧಮ್ಮಾನುಸ್ಸತಿ ಎನ್ನುವೆವು. ಇದರಲ್ಲಿ ಧಮ್ಮದ ಮಹೋನ್ನತ ಗುಣಗಳನ್ನು ಸ್ಮರಿಸಲಾಗುತ್ತದೆ.
ಭಗವಾನರ ಸಂಘದಿಂದ ಸ್ಫೂತರ್ಿ ಪಡೆದು ಉಂಟಾದ ಸ್ಮೃತಿಯನ್ನು ಸಂಘಾನುಸ್ಸತಿ ಎನ್ನುವೆವು. ಇದರಲ್ಲಿ ಸಂಘದ ಮಹೋನ್ನತ ಗುಣಗಳನ್ನು ಸ್ಮರಿಸಲಾಗುತ್ತದೆ.
ಹಾಗೆಯೇ ಶೀಲದಿಂದ ಸ್ಫೂತರ್ಿ ಪಡೆದು ಸ್ಮರಿಸಲಾದ ಚಿಂತನೆಯನ್ನು ಶೀಲಾನುಸ್ಸತಿ ಎನ್ನುವೆವು. ಇದರಲ್ಲಿ ಶೀಲದ ಪಾಲನೆಯ ಅಭಂಗ ಇತ್ಯಾದಿ ಗುಣಗಳನ್ನು ಸ್ಮರಿಸಲಾಗುತ್ತದೆ.
ಹಾಗೆಯೇ ದಾನದಿಂದ ಸ್ಫೂತರ್ಿ ಪಡೆದು ಸ್ಮರಿಸಲಾದ ಚಿಂತನೆಯನ್ನು ತ್ಯಾಗಾನುಸ್ಸತಿ ಎನ್ನುತ್ತಾರೆ. ಇದರಲ್ಲಿ ದಾನವನ್ನು ಅದರ ಪರಿಣಾಮವನ್ನು ಕುರಿತು ಸ್ಮರಣೆ ಮಾಡಲಾಗುತ್ತದೆ.
ಹಾಗೆಯೇ ದೇವ-ದೇವತೆಗಳಿಂದ ಸ್ಫೂತರ್ಿ ಪಡೆದು ಸ್ಮರಿಸುವುದನ್ನು ದೇವತಾನುಸ್ಸತಿ ಎನ್ನುವೆವು. ಇದರಲ್ಲಿ ದೇವತೆಗಳನ್ನು ಸಾಕ್ಷಿಯಾಗಿರಿಸಿ, ಮಾಡಲಾಗುವ ಶ್ರದ್ಧೆ ಮೊದಲಾದ ಸದ್ಗುಣಗಳ ಪರಿಣಾಮದ ಸ್ಮರಣೆಯಿರುತ್ತದೆ.
ಹಾಗೆಯೇ ಮರಣದಿಂದ ಸ್ಫೂತರ್ಿ ಪಡೆದು ನಡೆಸಲಾಗುವ ಚಿಂತನೆಯನ್ನು ಮರಣಾನುಸ್ಸತಿ ಎನ್ನುವೆವು. ಇದರಲ್ಲಿ ಪ್ರಾಣವನ್ನೇ ಚಿಂತನೆಯ ವಿಷಯವನ್ನಾಗಿಸಿ ಸ್ಮರಿಸಲಾಗುತ್ತದೆ.
ಹಾಗೆಯೇ ಕಾಯದ ಗತಿಗಳ ಬಗ್ಗೆ, ಗತಿಸಿಹೋದ ಶರೀರದ ಬಗ್ಗೆ ಸ್ಮೃತಿ ತಾಳುವುದನ್ನು ಕಾಯಗತಾನುಸ್ಸತಿ ಎನ್ನುವರು. ಈ ಧ್ಯಾನದಲ್ಲಿ ಶರೀರದ ಅಂಗಗಳ ಬಗ್ಗೆ ಯಥಾರ್ಥ ಸ್ಮರಣೆ ಮಾಡಲಾಗುತ್ತದೆ.
ಉಸಿರಾಟದಿಂದ ಸ್ಫೂತರ್ಿ ಪಡೆದು ನಡೆಸಲಾಗುವ ಸ್ಮೃತಿಯನ್ನು ಅಂದರೆ ಒಳಹೋಗುವ ಹಾಗು ಹೊರಬರುವ ಉಸಿರಾಟದ ಮೇಲೆ ಗಮನವಿರಿಸುವುದನ್ನು ಅನಾಪಾನಸ್ಸತಿ ಎನ್ನುವರು.
ಶಾಂತತೆಯ ಮಹೋನ್ನತೆಯಿಂದ ಸ್ಫೂತರ್ಿ ಪಡೆದು ನಡೆಸಲಾಗುವ ಸ್ಮೃತಿಯನ್ನು ಉಪಶಮನಾನುಸ್ಸತಿ ಎನ್ನುತ್ತಾರೆ. ದುಃಖಗಳ ಉಪಶಮನ ಕೇಂದ್ರೀಕರಿಸಿ ನಡೆಸಲಾದ ಸ್ಮೃತಿಗೆ ಉಪಶಮನಾನುಸ್ಸತಿ ಎನ್ನುತ್ತಾರೆ.
ಯಾವ ಧ್ಯಾನಿಯು ಬುದ್ಧಾನುಸ್ಸತಿ ಮಾಡಬಯಸುವನೋ ಆತನಿಗೆ ಬುದ್ಧ ಭಗವಾನರ ಮೇಲೆ ಪೂರ್ಣ (ಅಗಾಧ) ಶ್ರದ್ಧೆಯಿರಬೇಕು. ಆತನು ಏಕಾಂತದಲ್ಲಿ ನೆಲೆಸಿ ಬುದ್ಧರ ಗುಣಗಳನ್ನು ಹೀಗೆ ಸ್ಮರಿಸುತ್ತಾನೆ.

1. ಬುದ್ಧಾನುಸತಿ


ಒಂದು ಅದ್ವಿತೀಯ ಜೀವಿ, ಒಬ್ಬ ಅಸಮಾನ್ಯ ಮಾನವರು ಈ ಜಗತ್ತಿನಲ್ಲಿ ಉದಯಿಸುತ್ತಾರೆ. ಅವರು ಜಗತ್ತಿನ ಸರ್ವಹಿತಕ್ಕಾಗಿ ಸರ್ವರ ಸುಖಕ್ಕಾಗಿ, ಜಗತ್ತಿನ ಮೇಲಿರುವ ಅನುಕಂಪದಿಂದಾಗಿ ಉದಯಿಸುವರು. ಒಳ್ಳೆಯದಕ್ಕಾಗಿ ದೇವ-ಮನುಷ್ಯರ ಹಿತಸುಖಕ್ಕಾಗಿ ಹುಟ್ಟುವಂತಹ ಆ ಅದ್ವಿತೀಯ ಜೀವಿ ಯಾರು?
ಅವರೇ ತಥಾಗತರು, ಅರಹಂತರೂ, ಆಗಿರುವಂತಹ ಸಮ್ಮಾಸಂಬುದ್ಧರು.
ಬೌದ್ಧರಲ್ಲಿ 40 ಬಗೆಯ ಧ್ಯಾನಗಳಿವೆ. ಅವರವರ ಪ್ರಚ್ಚನ್ನತೆಗೆ ತಕ್ಕಂತೆ ಧ್ಯಾನ ಮಾರ್ಗಗಳಿವೆ. ಅವುಗಳಲ್ಲಿ 10 ಬಗೆಯ ಅನುಸ್ಮೃತಿ (ಚಿಂತನೆ) ಇದೆ. ಅದರಲ್ಲಿ ಮೊದಲನೆಯದೇ ಬುದ್ಧಾನುಸತಿ. ಇದು ಭಾವುಕರಿಗೆ, ಶುದ್ಧ ಭಕ್ತಿಯುಳ್ಳವರಿಗೆ ಸಹಕಾರಿಯಾಗಿದೆ.
   ಬೌದ್ಧರಲ್ಲಿ ಭಕ್ತಿಯು ಸಹ ಜ್ಞಾನ ಮಿಶ್ರಿತವಾಗಿದೆ. ಬುದ್ಧರಂತೂ ಎಂದಿಗೂ ತಮ್ಮನ್ನು ಪೂಜಿಸಿ ಎಂದು ಹೇಳಿಲ್ಲ. ಅವರಲ್ಲಿ ಅಂತಹ, ಸ್ವಾರ್ಥ ಇರಲಿಲ್ಲ. ಬೌದ್ಧರ ಬುದ್ಧ ಧ್ಯಾನವು ಅನ್ಯಧಮರ್ಿಯರಂತೆ ಅಂಧವಿಶ್ವಾಸ ಮೂಡಿಸದೆ ನಿಬ್ಬಾಣಕ್ಕೆ ಸಹಕಾರಿಯಾಗಿದೆ. ಒಮ್ಮೆ ವಕ್ಕಲಿ ಎಂಬ ಭಿಕ್ಷು ಬುದ್ಧರ ಬಾಹ್ಯ ಸೌಂದರ್ಯಕ್ಕೆ ಮನಸೋತು ಅವರ ವಿನಹ ಕ್ಷಣಕ್ಷಣವೂ ಪರಿತಪಿಸುತ್ತಿದ್ದ ಕೊನೆಗೆ ಅವರನ್ನು ದಶರ್ಿಸಲು ಆತ್ಮಹತ್ಯೆಗೂ ಸಿದ್ಧನಾಗಿದ್ದ. ಆಗ ಭಗವಾನರು ಪ್ರತ್ಯಕ್ಷರಾಗಿ ಆತನಿಗೆ ಹೀಗೆ ಹೇಳಿದರು ಓ ವಕ್ಕಲಿ, ಈ ಅಸಹ್ಯಕಾರಿಯಾದ ದೇಹವನ್ನು ನೋಡುವುದರಿಂದ ಏನು ಪ್ರಯೋಜನ? ಯಾರು ಧಮ್ಮವನ್ನು ಕಾಣುವರೋ ಅವರು ಬುದ್ಧರನ್ನು ಕಾಣುತ್ತಾರೆ. ಯಾರು ಬುದ್ಧರನ್ನು ಕಾಣುತ್ತಾರೋ ಅವರು ಧಮ್ಮವನ್ನು ಕಾಣುತ್ತಾರೆ.
ಆದ್ದರಿಂದ ವಕ್ಕಲಿ ಧಮ್ಮವನ್ನು ಅರಿತರೆ, ನನ್ನನ್ನು ಕಂಡಂತೆಯೇ ನನ್ನನ್ನು ನೋಡಿದರೆ ಧಮ್ಮವನ್ನು ನೋಡಿದಂತೆ ಎಂದು ತಿದ್ದುತ್ತಾರೆ. ಅದರಂತೆಯೇ ಬೌದ್ಧರಲ್ಲಿ ಬುದ್ಧರ ನಾಮಜಪಕ್ಕಿಂತ, ಬುದ್ಧರ ಅನುಪಮ ಸೌಂದರ್ಯ ರೂಪ ಕಲ್ಪನೆಯ ಧ್ಯಾನಕ್ಕಿಂತ ಹೆಚ್ಚು ಮಹತ್ವ ಅವರ ಮಹಾನ್ ಮನಸ್ಸು ಅರಿಯಲು ಒತ್ತುಕೂಡುತ್ತಾರೆ. ಏಕೆಂದರೆ ಮನಸ್ಸು ಅವರ ಅನುಪಮ, ಸದ್ಗುಣ ಒಳಗೊಂಡಿದೆ. ಅವರ ಅಪಾರ ಅನುಕಂಪಶೀಲತೆ ಹಾಗೂ ಅನುಪಮ ಜ್ಞಾನವನ್ನು ಒಳಗೊಂಡಿದೆ. ಮುಂದೆ ಬುದ್ಧರ ಸ್ವರೂಪವಾದ ನಿಬ್ಬಾಣವನ್ನು ಧ್ಯಾನಿಸಬಹುದು.
ಸಾಧಕ ಮೊದಲು ನಿಶಬ್ಬ ನಿರ್ಜನ ವಾತಾವರಣದಲ್ಲಿ ಪದ್ಮಾಸನ ಅಥವಾ ಸುಖಾಸನದಲ್ಲಿ ಆಸೀನನಾಗಿ ಬೆನ್ನು ಕತ್ತು ನೇರವಾಗಿಸಿ, ಭಗವಾನರ ಒಂದೊಂದು ಗುಣವನ್ನು ಭಗವಾನರು ಹೀಗಿದ್ದರು... ಆದ್ದರಿಂದ ಅವರಿಗೆ ಹೀಗೆ ಕರೆಯುತ್ತಾರೆ ಎಂದು ನಿರಂತರ ಧ್ಯಾನಿಸುತ್ತಾರೆ. ಹೇಗೆಂದರೆ ಭಗವಾನರು ಹೀಗಿರುವರು, ಅವರು ಅರಹಂತರು, ಸಮ್ಮಾಸಂಬುದ್ಧರು, ವಿಜ್ಜಾಚರಣ ಸಂಪನ್ನರು, ಸುಗತರು, ಅನುತ್ತರ ಪುರುಷ ಧಮ್ಮಸಾರಥಿ, ದೇವ-ಮನುಷ್ಯರಿಗೆ ಗುರುವು ಹಾಗೂ ಭಗವಾನರಾಗಿದ್ದಾರೆ.

1. ಅರಹಂತರು:

ಬುದ್ಧರನ್ನು ಅರಹಂತರೆಂದು ಐದು ಕಾರಣಗಳಿಂದ ಕರೆಯುತ್ತಾರೆ. 1. ಕಲ್ಮಶಗಳಿಂದ ದೂರವಿರುವುದರಿಂದಾಗಿ   (ಅರಕ), 2. ಅರಿಗಳನ್ನು (ಶತ್ರು, ಕ್ಲೇಷ) ಹತಮಾಡಿರುವುದರಿಂದಾಗಿ (ಅರಹತ), 3. ಅರಗಳನ್ನು (ಭವಚಕ್ರದ ಕಟ್ಟೆ) ನಾಶಮಾಡಿರುವುದರಿಂದಾಗಿ (ಅರಹತ), 4. ಪೂಜೆ ಆತಿಥ್ಯಗಳಿಗೆ ಅರ್ಹರಾಗಿರುವುದರಿಂದಾಗಿ (ಅರಹತ),
5. ರಹಸ್ಯವಾಗಿಯೂ ಪಾಪಮಾಡದೆ ಇರುವುದರಿಂದಾಗಿ ಅರಹತ. ಹೀಗೆ ಐದು ಕಾರಣಗಳಿಂದ ಅವರನ್ನು ಅರಹಂತರು ಎಂದು ಕರೆಯುತ್ತಾರೆ.
ಅರಹಂತರು : (ಮುನಿವರ್ಯಾರು) ಕಲ್ಮಶಗಳಿಂದ ದೂರವಾಗಿದ್ದಾರೆ.
ಅರ ಅರಿ, (ಶತ್ರು)ಗಳನ್ನು ಹತಮಾಡಿದ್ದಾರೆ.
ಭವಚಕ್ರದ ಅರಗಳನ್ನು (ಕಡ್ಡಿ) ನಾಶ ಮಾಡಿದ್ದಾರೆ.
ದಾನ ಆತಿಥ್ಯಕ್ಕೆ ಅರ್ಹರಾಗಿದ್ದಾರೆ.
ರಹಸ್ಯವಾಗಿಯೂ ಯಾವ ಪಾಪಮಾಡದೆ ಇದ್ದಾರೆ.
ಅದರಿಂದ ಅವರು ಅರಹಂತರು.
ಹೇಗೆ ಕಮಲವೂ ಸುಂದರವೂ, ಸುಗಂಧಿತವು ಆಗಿದ್ದು, ನೀರಿನಲ್ಲಿದ್ದು ಅದಕ್ಕೆ ಅಂಟಿಕೊಳ್ಳದೇ ಇರುವುದೋ ಹಾಗೆಯೇ ಅರಹಂತರು ರಾಗದ್ವೇಷ, ಮೋಹ, ದುಃಖ, ಅಹಂ ಮತ್ತು ಜನ್ಮಗಳಿಂದ ಮುಕ್ತರಾಗಿರುತ್ತಾರೆ.

2. ಸಮ್ಮಾಸಂಬುದ್ಧೋ: 

ಅವರು ಸ್ವತಃ ಸಂಶೋಧಿಸಿದಂತಹ, ನೇರವಾಗಿ ಅರಿತಿದ್ದಂತಹ ಆರ್ಯಸತ್ಯ ಜ್ಞಾನ, ಆರು ಇಂದ್ರಿಯಗಳ ಜ್ಞಾನ; ಸ್ವರ್ಶ, ವೇದನಾ, ಸಂಜ್ಞೆ, ತನ್ಹಾ, ವಿತರ್ಕ ವಿಚಾರಗಳ ಜ್ಞಾನ. ಪಂಚಖಂಧಗಳ ಜ್ಞಾನ, ಎಲ್ಲಬಗೆಯ ಜ್ಞಾನಗಳ ಜ್ಞಾನ, ಧಾತುಗಳ ಜ್ಞಾನ, ಭವಗಳ ಜ್ಞಾನ, ಪಟಿಚ್ಚ ಸಮುಪ್ಪಾದದ ಜ್ಞಾನ. ಇತ್ಯಾದಿಗಳ ಜ್ಞಾನಗಳನ್ನು ಸ್ವತಃ ತಾವೇ ಸಂಶೋಧಿಸಿ ಪಡೆದು ಪರರಿಗೆ ಸವಿವರವಾಗಿ ಪರಿಣಾಮಾತ್ಮಕವಾಗಿ ವಿವರಿಸಿರುವುದರಿಂದಾಗಿ ಅವರಿಗೆ ಸಮ್ಮಾಸಂಬುದ್ಧ ಎನ್ನುವರು.
ಸಮ್ಮಾಸಂಬುದ್ಧರು : ಅವರು ಎಲ್ಲವನ್ನು (ಸಮ್ಮ) ತಾವೇ (ಸಂ)ಪೂರ್ಣವಾಗಿ ಸಂಶೋದಿಸಿ ಅರಿತಿದ್ದಾರೆ (ಸಂಬುದ್ಧ) ಹೇಗೆಂದರೆ:
ಯಾವುದನ್ನು ನೇರವಾಗಿ ಅರಿಯಬಹುದು, ಅವೆಲ್ಲಾ ಅರಿತಿದ್ದಾಗಿದೆ. ಯಾವುದನ್ನು ಪೂರ್ಣಗೊಳಿಸಬೇಕು, ಅದನ್ನು ಪರಿಪೂರ್ಣಗೊಳಿಸಿದ್ದಾಗಿದೆ. ಮತ್ತು ಯಾವುದನ್ನು ತ್ಯಜಿಸಬೇಕು ಅದನ್ನು ತ್ಯಜಿಸಲಾಗಿದೆ. ಆದ್ದರಿಂದ ನಾನು ಬುದ್ಧ ಎಂದು ಒಮ್ಮೆ ಹೇಳಿದ್ದಾರೆ. ಅವರ ಸಂಬೋಧಿಗೆ ಆಚಾರ್ಯರು ಯಾರೂ ಇಲ್ಲ. ತಾವೇ ತಮ್ಮ ತೀಕ್ಷ್ಣ ಪ್ರಜ್ಞಾಶೀಲತೆಯಿಂದ ಅರಿತಿದ್ದರು. ಅವರನ್ನು ಸಬ್ಬನ್ಯೂ, ಸರ್ವಜ್ಞ ಎಂದು ಕರೆಯುತ್ತಾರೆ. ಅವರ ಇಡೀ ಜೀವನ ಆಶ್ಚರ್ಯಪ್ರಾಯವಾಗಿದೆ. ಅವರು ಅಸಮಾನರು ಹೋಲಿಕೆಗೆ ನಿಲುಕದವರು ಆಗಿದ್ದಾರೆ. ಅಸಮಾನ ಚಕ್ಷುವಂತರು, ಮಹಾನ್ ಜ್ಞಾನದ ಬೆಳಕನ್ನು ಹೊಂದಿದ್ದ ದಿವ್ಯತೇಜಸ್ವಿಗಳಾಗಿದ್ದಾರೆ. ಪರಹಿತಕ್ಕಾಗಿ ಕೋಟ್ಯಾಂತರ ಜನ್ಮ ಪಡೆಯುತ್ತಾ ಸದಾ ಧ್ಯಾನದಲ್ಲಿ ತಲ್ಲೀನರಾಗಿದ್ದು, ಶೀಲದ ಸುಗಂಧ ಹರಡುತ್ತಾ, ಪರರಿಗೆ ತ್ಯಾಗ ಮಾಡುತ್ತಾ ಪರರಿಗೋಸ್ಕರ ನಿರಂತರ ಕಠಿಣ ಪರಿಶ್ರಮಪಡುತ್ತಾ, ಸರ್ವರ ತಪ್ಪುಗಳನ್ನು ಸಹಿಸಿ ಕ್ಷಮಾಶೀಲರಾಗಿ, ನುಡಿದಂತೆ ನಡೆದು, ನಡೆದಂತೆ ನುಡಿಯುವ ತಥಾಗತರಾಗಿ, ವಜ್ರಕ್ಕಿಂತಲೂ ದೃಢವಾದ ನಿಧರ್ಾರವನ್ನು ಸಿದ್ಧಿಸಿ, ಪರಮಶಾಂತತೆಯನ್ನು ಪ್ರಾಪ್ತಿಮಾಡಿ, ಹೀಗೆ ಪಾರಮಿಗಳನ್ನು ಪೂರ್ಣಗೊಳಿಸಿ, ಪ್ರಜ್ಞಾ ಮತ್ತು ಕರುಣೆಯ ಸಂಗಮದ ಸಾಕ್ಷಾತ್ ಜ್ಞಾನ ದಯಾಸಾಗರ ಆಗಿದ್ದಾರೆ.
ಅವರು ಅನೇಕ ಬಗೆಯ ದಿವ್ಯ ಜ್ಞಾನಗಳಲ್ಲಿ ಹೊಂದಿದ್ದರು. ಅವರ ಜ್ಞಾನ ಅಗಾಧವಾಗಿತ್ತು. ಸೀಮಾತೀತವಾಗಿತ್ತು. ಮಾನಸಿಕವಾಗಿ ಬಲಿಷ್ಠತೆ, ಪ್ರಬುತ್ವತೆ ಸಾಧಿಸಿ, ಮಹಾಬಲಧಾರಿಗಳಾಗಿದ್ದರು. ಆದ್ದರಿಂದ ಅವರನ್ನು ಸಮ್ಮಾಸಂಬುದ್ಧರೆನ್ನುತ್ತಾರೆ. ಅವರು ತಮ್ಮ ಜ್ಞಾನವನ್ನು ಸರ್ವರಲ್ಲಿ ಹರಡಿ ಸರ್ವರನ್ನು ದುಃಖ ವಿಮುಕ್ತರು, ಜನ್ಮರಹಿತರನ್ನಾಗಿ ಮಾಡಿದ್ದಾರೆ.

3. ವಿಜ್ಜಾಚರಣಸಂಪನ್ನ :

ವಿದ್ಯೆಯೆಂದರೆ ಸ್ಪಷ್ಟ ಜ್ಞಾನದರ್ಶನ ಹೊಂದಿರುವಿಕೆ ಹಾಗು ಚರಣವೆಂದರೆ ಶ್ರೇಷ್ಠ ಆಚರಣೆ ಉಳ್ಳವರು. ಒಟ್ಟಾರೆ ವಿದ್ಯೆ ಹಾಗು ಆಚರಣೆ ಸಂಪನ್ನರಾಗಿರುವುದರಿಂದಾಗಿ ವಿಜ್ಜಾಚರಣಸಂಪನ್ನರೆನ್ನುತ್ತಾರೆ.
ಅವರು ವಿದ್ಯೆಯನ್ನು ಮೂರು ವಿಧದಲ್ಲೂ ಹಾಗು ಎಂಟು ವಿಧದಲ್ಲೂ ವಗರ್ಿಕರಿಸಿದ್ದಾರೆ. ಭಯಭೇದ ಸುತ್ತದಲ್ಲಿರುವಂತೆ ಮೂರು ವಿಧದ ವಿದ್ಯೆಗಳೆಂದರೆ: ಪೂರ್ಣ ರತ್ನಗಳ ಜ್ಞಾನ, ಜೀವಿಗಳ ಮರೆಯಾಗುವಿಕೆ ಹಾಗು ಪುನರ್ಜನ್ಮ ತಾಳುವಿಕೆಯ ಜ್ಞಾನ ಮತ್ತು ಅಸವಕ್ಷಯ ಜ್ಞಾನ.
ಅಂಬಟ್ಠ ಸುತ್ತದಲ್ಲಿ ಬರುವಂತಹ ಎಂಟು ವಿದ್ಯೆಗಳೆಂದರೆ: 1. ಮನೋಮಯ ಜ್ಞಾನ (ಶರೀರಗಳ ಸೃಷ್ಠಿ) 2. ಇದ್ದಿವಿಧ ಜ್ಞಾನ  3. ವಿಪಸ್ಸನ ಜ್ಞಾನ (ಅನೇಕವಾಗುವಿಕೆ, ಅದೃಶ್ಯವಾಗುವಿಕೆ, ಪರ್ವತಗಳಲ್ಲಿ ತೂರುವಿಕೆ, ನೀರಿನಲ್ಲಿ ನಡೆಯುವಿಕೆ, ಆಕಾಶದಲ್ಲಿ ಹಾರುವಿಕೆ, ಯಾವುದೇ ಆಕಾಶಕಾಯಗಳ ಸ್ಪಶರ್ಿಸುವಿಕೆ, ಸಶರೀರವಾಗಿ ಬ್ರಹ್ಮಲೋಕ ಸಂಚರಿಸುವಿಕೆ ಇತ್ಯಾದಿ). 4. ದಿವ್ಯಸ್ರೋತ ಜ್ಞಾನ  5. ಪರರ ಚಿತ್ತ ಓದುವಿಕೆ  6. ಪೂರ್ವ ಜನ್ಮಗಳ ಜ್ಞಾನ  7. ದಿವ್ಯಚಕ್ಷು (ಜೀವಿಗಳ ಜನ್ಮಗಳ ಬಗ್ಗೆ ಜ್ಞಾನ) 8. ಆಸವಕ್ಷಯ ಜ್ಞಾನ.
ಆಚರಣೆ ಎಂದರೆ ಶೀಲ ಎಂದರ್ಥ. 15 ಬಗೆಯ ಆಚರಣೆಗಳಿವೆ. ಅವೆಂದರೆ: ಶೀಲ ಸಂಯಮ, ಇಂದ್ರಿಯ ಸಂಯಮ, ಮಿತಾಹಾರ (ಸ್ಮೃತಿ, ಶ್ರದ್ಧೆ, ಹಿರಿ, ಪಾಪಭೀತಿ, ಕಲಿಯುವಿಕೆ, ವಿರಿಯ, ಪ್ರಜ್ಞಾ) ಒಟ್ಟು 7 ಸದ್ಧಮ್ಮಗಳು. ಜಾಗರೂಕತೆ, 4 ರೂಪಾವಚಾರ ಸಮಾಧಿಯಲ್ಲಿ ತೊಡಗುವಿಕೆ. ಇವಿಷ್ಟೂ 15 ಶ್ರೇಷ್ಠ ಆಚರಣೆಗಳೆಂದು ಪರಿಗಣಿಸಲ್ಪಟ್ಟಿವೆ.
ಸರ್ವಜ್ಞಾನ ದರ್ಶನದ ಹಾಗು ಮಹಾಕರುಣೆಯ ಸಮ್ಮಿಲನವೇ ವಿಜ್ಜಾಚರಣಸಂಪನ್ನತೆಯಾಗಿದೆ. ಸರ್ವಜ್ಞತೆಯಿಂದಾಗಿ ಜೀವಿಗಳಿಗೆ ಯಾವುವು ಒಳಿತು ಹಾಗು ಯಾವುದು ಕೆಡಕು ಎಂದು ತಿಳಿಯುತ್ತದೆ. ಮಹಾಕರುಣೆಯಿಂದಾಗಿ ಜೀವಿಗಳನ್ನು ಎಚ್ಚರಿಸಬಹುದು ಹಾಗು ಬೋಧಿಸಬಹುದು (ತಿದ್ದಬಹುದು). ಹೀಗಾಗಿಯೇ ಭಗವಾನರು ವಿದ್ಯಾಚರಣ ಸಂಪನ್ನರಾಗಿರುವುದರಿಂದಾಗಿಯೇ ಅವರ ಶಿಷ್ಯರು ಸಹಾ ಅವರಂತೆಯೇ ಶ್ರೇಷ್ಠ ಶೀಲ ಹಾಗು ಶ್ರೇಷ್ಠ ಜ್ಞಾನದರ್ಶನ ಪಡೆಯುತ್ತಾರೆ.

4. ಸುಗತರು :

ಅವರು ಹೇಗೆ ಶೋಭಾಯಮಾನವಾಗಿ ಹೋಗಿ (ಗಮತ) ಸುಗತರಾಗಿದ್ದಾರೆ? ಗತ ಎಂದರೆ ಹೋಗಿದ್ದಾರೆ. ಭಗವಾನರಿಗೆ ಶೋಭನಾಮಯ (ಒಳಿತಿನಿಂದ ಕೂಡಿರುವವರು, ಒಳಿತನ್ನೇ ಮಾಡುವವರು) ಎನ್ನುತ್ತಾರೆ. ಅವರು ಹೇಗೆ, ಯಾವ ಮಾರ್ಗದಲ್ಲಿ ಹೋಗಿದ್ದಾರೆ? ಅವರು ಆರ್ಯ ಅಷ್ಠಾಂಗ ಮಾರ್ಗದಲ್ಲಿ, ಯಾವುದೇ ಅಂಟುವಿಕೆಯಿಲ್ಲದೆ ಕ್ಷೇಮಕರ ದ್ವಾರವಾದ ನಿಬ್ಬಾನ ತಲುಪಿದ್ದಾರೆ.
ಅ) ಅವರು ಸೇರಿರುವುದು ಸುಂದರವಾದ, ಅಮರತ್ವದ ನಿಬ್ಬಾಣಕ್ಕೆ. ಹೀಗಾಗಿ ಅವರು ಸುಗತರು.
ಆ) ಅವರು ಯೋಗ್ಯವಾಗಿ ಸ್ವನಿಮರ್ಿತ ಸಮ್ಯಕ್ ಹಾದಿ (ಸಮಾಧಿ) ಯಲ್ಲಿ ಹೋಗಿರುವರು. ಕ್ಲೇಶಗಳೆಲ್ಲ ತೊರೆದು ಹೋಗಿದ್ದಾರೆ. ಅತಿರೇಕವಿಲ್ಲದ, ಮಧ್ಯಮ ಮಾರ್ಗದಿಂದಲೇ ಅರಹತ್ವ ಸಾಧಿಸಿದ್ದಾರೆ. ಹೀಗಾಗಿ ಅವರು ಸುಗತರಾಗಿದ್ದಾರೆ.
ಇ) ಅವರು ಸುಶ್ರೇಷ್ಠ ಸಮ್ಯಕ್ನ್ನು ಬೋಧಿಸಿದ್ದಾರೆ. ಅವರು ಸತ್ಯವನ್ನು ಯೋಗ್ಯವಾಗಿರುವುದನ್ನು ಸರಿಯಾಗಿರುವುದನ್ನು ಮಧುರವಾಗಿ, ಸಕಾಲಕ್ಕೆ ಪರಿಣಾಮಕಾರಿಯಾಗಿರುವಂತೆ ಸಮತೋಲನದಿಂದ ಬೋಧಿಸಿದ್ದಾರೆ. ಹೀಗಾಗಿ ಅವರು ಸುಗತರಾಗಿದ್ದಾರೆ.
ಪುರುಷ ಶ್ರೇಷ್ಠರನ್ನು ಕಾಣುವುದು ದುರ್ಲಭ...
ಬುದ್ಧರ ಹುಟ್ಟುವಿಕೆ ಮಂಗಳಕರ...
ಬುದ್ಧರ ದರ್ಶನ ದುರ್ಲಭ...
ಅವರು ಹಗಲು ರಾತ್ರಿ, ತಮ್ಮ ದಿವ್ಯ ತೇಜಸ್ಸಿನಿಂದ ಪ್ರಕಾಶಿಸುತ್ತಾರೆ.
ಅವರು ವಿಜಯಿ, ಸರ್ವದಶರ್ಿಗಳು, ಬಂಧನರಹಿತರು, ಅಸಮಾನರು, ಆಗಿದ್ದಾರೆ. ಹಿಂದೆ ಅವರಂತಹರವರು ಇರಲಿಲ್ಲ. ಅವರಂತೆ ಯಾರೂ ಜೀವಿಸಿಲ್ಲ. ಅವರು ಪರಮಶ್ರೇಷ್ಠರು, ಪರಮಶಾಂತರು, ಸರ್ವಸಿದ್ಧರು. ನಿಬ್ಬಾಣ ಸ್ವಪ್ರಾಪ್ತರು, ಶ್ರೇಷ್ಠರಲ್ಲಿ ಶ್ರೇಷ್ಠರು, ಮುಕ್ತರಲ್ಲಿ ಮುಕ್ತರು, ಅರಹಂತದಲ್ಲಿ ಅರಹಂತರು ಆಗಿದ್ದಾರೆ.
ಅವರು ಶೋಭನರಾಯವಾಗಿ ಗಮನಿಸಿದ್ದಾರೆ (ಹೋಗಿದ್ದಾರೆ) ಸುಂದರ (ನಿಬ್ಬಾಣ) ಸ್ಥಾನವನ್ನು ಗಮ್ಮಿಸಿದ್ದಾರೆ (ಹೋಗಿ ಮುಟ್ಟಿದ್ದಾರೆ) ಸ್ವನಿಮರ್ಿತ ಸಮ್ಯಕ್ ಹಾದಿಯಲ್ಲಿ ಗತರಾಗಿದ್ದಾರೆ (ನಡೆದಿದ್ದಾರೆ) ಮತ್ತು ಸುಶ್ರೇಷ್ಟ ಸಮ್ಯಕ್ನ್ನು ಬೋಧಿಸಿದ್ದಾರೆ. ಆದ್ದರಿಂದ ಅವರನ್ನು ಸುಗತ ಎನ್ನುತ್ತಾರೆ.


5. ಲೋಕವಿಧರು: (ಲೋಕಗಳೆಲ್ಲವನ್ನು ಬಲ್ಲವರು):

ಅವರು ಲೋಕಗಳನ್ನು ಬಲ್ಲವರು. ಏಕೆಂದರೆ ಅವರು ಲೋಕಗಳನ್ನು ಎಲ್ಲಾ ವಿಧಗಳಿಂದ ಬಲ್ಲವರಾಗಿದ್ದಾರೆ. ಭಗವಾನರು ಅನುಭವಿಸಿದ್ದಾರೆ, ಲೋಕಗಳನ್ನು ಅತ್ಯಂತ ತೀಕ್ಷ್ಣವಾಗಿ ವೀಕ್ಷಿಸಿದ್ದಾರೆ. ಲೋಕಗಳ ಉದಯವನ್ನು, ಲೋಕಗಳ ನಿರೋಧವನ್ನು ನಿರೋಧದ ಉದ್ದೇಶವನ್ನು ಸಹಾ ಹೀಗೆ ಹೇಳಿದ್ದಾರೆ: ಭಿಕ್ಷುಗಳೇ, ಅಲ್ಲಿ ಲೋಕಗಳ ಅಂತ್ಯವಾಗುತ್ತದೆ. ಆಗ ಒಬ್ಬನು ಹುಟ್ಟಲಾರ ಅಥವಾ ವೃದ್ಧನಾಗಲಾರ ಅಥವಾ ತಲುಪಿದ್ದು ಪ್ರಯಾಣದಿಂದ ಎಂದು ನಾನು ಹೇಳಲಾರೆ. ಹಾಗೆಯೇ ಲೋಕಗಳ ಅಂತ್ಯಕ್ಕೆ ಹೋಗಿಯೇ ದುಃಖಗಳ ಅಂತ್ಯವೆಂದು ನಾನು ಹೇಳಲಾರೆ. ಬದಲಾಗಿ ಈ ಆರಡಿ ಉದ್ದದ ಶವವನ್ನು (ಶರೀರ) ಅದರ ಗ್ರಹಿಕೆಯನ್ನು, ಅದರ ಅರಿವನ್ನು ನೋಡಿಯೇ ಲೋಕವನ್ನು ಅರಿತರುವೆ. ಲೋಕದ ಉದಯ ಅರಿತಿರುವೆ. ಲೋಕದ ನಿರೋಧವನ್ನು ಅರಿತಿರುವೆ. ಲೋಕದ ನಿರೋಧವನ್ನು ಅರಿತಿರುವೆ. ಹಾಗೆಯೇ ಲೋಕಗಳ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗವನ್ನು ಅರಿತಿರುವೆ.  ಯಾರು ಲೋಕಗಳ ಅಂತ್ಯವನ್ನು ಕಂಡಿರುವನೋ ಅಂತಹವನು ಈ ಲೋಕಕ್ಕಾಗಲಿ ಅಥವಾ ಪರಲೋಕಕ್ಕಾಗಲಿ ಭರವಸೆ ಇಡದೆ ಶಾಂತತೆಯನ್ನು ಪ್ರಾಪ್ತಿಮಾಡಿ ನೆಲೆಸುತ್ತಾನೆ.
ಅವರು ತಮ್ಮ ದಿವ್ಯಚಕ್ಷುವಿನಿಂದ ಸರ್ವಲೋಕಗಳನ್ನು ಅರಿತಿದ್ದಾರೆ. ಸಶರೀರರಾಗಿ ಲೋಕಗಳನ್ನು ಸಂಚರಿಸಿದ್ದಾರೆ. ಪಾಪಿಗಳ ದುರ್ಗತಿ, ಶೀಲವಂತರ ಸುಗತಿ, ದಾನಿಗಳ ಸ್ವರ್ಗ, ಧ್ಯಾನಿಗಳ ಬ್ರಹ್ಮಲೋಕ, ಜ್ಞಾನಿಗಳ ನಿಬ್ಬಾಣ ಎಲ್ಲವನ್ನು ಕಾರಣ ಪರಿಹಾರ ಸಮೇತ ವಿವರಿಸಿದ್ದಾರೆ. ಆದ್ದರಿಂದ ಅಂತಹ ನಿಬ್ಬಾಣ ಮಾರ್ಗದಶರ್ಿಗೆ ಲೋಕವಿದೂ ಎನ್ನುತ್ತಾರೆ.
ಮೂರು ವಿಧದ ಲೋಕಗಳಿವೆ : 1. ಸಂಖಾರಗಳ ಲೋಕ, 2. ಜೀವಿಗಳ (ಸತ್ತ) ಲೋಕ, 3. ನೆಲೆಗಳಿರುವ (ಭೌತಿಕ/ಅವಕಾಶ) ಲೋಕ.

ಸಂಖಾರಗಳ ಲೋಕ:

1. 1 ಲೋಕ : ಎಲ್ಲಾ ಜೀವಿಗಳ ಅಸ್ತಿತ್ವವು ಆಹಾರದಿಂದಲೇ ಇದೆ.
2. 2 ಲೋಕ : ಭೌತಿಕತೆ ಮತ್ತು ಮಾನಸಿಕತೆ.
3. 3 ಲೋಕ : ಸುಖ, ದುಃಖ, ತಟಸ್ಥ.
4. 4 ಲೋಕ : ಭೌತಿಕ ಆಹಾರ, ವಿಞ್ಞಾನ, ಇಚ್ಛೆ, ಸ್ಪರ್ಶ (ನಾಲ್ಕು ಆಹಾರ)
5. 5 ಲೋಕ : ಪಂಚಖಂಧಗಳು.
6. 6 ಲೋಕ : ಆರು ಇಂದ್ರೀಯಗಳು.
7. 7 ಲೋಕ : ವಿಞ್ಞಾನದ ಏಳು ನಿಬ್ಬಾಣಗಳು.
8. 8 ಲೋಕ : ಅಷ್ಟಲೋಕ ಧಮ್ಮಗಳಾದ (ಸುಖ-ದುಃಖ, ಜಯ-ಪರಾಜಯ, ಲಾಭ-ನಷ್ಟ, ಸ್ತುತಿ-ನಿಂದೆ).
9. 9 ಲೋಕ : ಜೀವಿಗಳ ನವ ವಾಸಸ್ಥಾನಗಳು
10. 10 ಲೋಕ : ಹತ್ತು ಆಧಾರಗಳು.
11. 12 ಲೋಕ : ಹನ್ನೆರಡು ಆಧಾರಗಳು.
12. 18 ಲೋಕ : ಹದಿನೆಂಟು ಧಾತುಗಳು.

ಜೀವಿಗಳ (ಸತ್ತ) ಲೋಕ:

ಭಗವಾನರಿಗೆ ಎಲ್ಲಾ ಜೀವಿಗಳ ದೌರ್ಬಲ್ಯಗಳನ್ನು ಹಾಗು ಅಭ್ಯಾಸಗಳನ್ನು ತಿಳಿದಿದ್ದಾರೆ. ಜೀವಿಗಳ ಪ್ರಚನ್ನ ಪ್ರವೃತ್ತಿಗಳು, ಅವುಗಳ ಸ್ವಭಾವಗಳು, ಅವುಗಳು ಎಲ್ಲೆಲ್ಲಿ ಬಾಗಿವೆ, ಅವುಗಳ ಪ್ರತಿಭೆ, ಅವುಗಳ ಶಕ್ತಿ, ಯಾರಲ್ಲಿ ರಾಗ-ದ್ವೇಷಗಳ ಧೂಳು ಅಲ್ಪವಾಗಿವೆಯೋ, ಯಾರಲ್ಲಿ ಮೋಹಾವೃತಿಯಾಗಿದೆಯೋ, ಜೀವಿಗಳ ವರ್ತನೆ, ಜೀವಿಗಳ ಸಮರ್ಥತೆ-ಅಸಮರ್ಥತೆ, ಸುಲಭವಾಗಿ ಕಲಿತುಕೊಳ್ಳುವರು, ಕಷ್ಟಕರವಾಗಿ ಕಲಿತುಕೊಳ್ಳುವರು, ಜೀವಿಗಳ ಸ್ತರಗಳು ಇತ್ಯಾದಿ. ಭಗವಾನರು ಜೀವಿಗಳ ವಿಭಿನ್ನತೆ, ವೈವಿದ್ಯತೆ, ಸಾಮ್ಯತೆ, ಎಲ್ಲವನ್ನೂ ತಿಳಿದಿದ್ದಾರೆ.

ನೆಲೆಗಳಿರುವ (ಭೌತಿಕ) ಲೋಕ:

ಜೀವಿಗಳಿರುವ ಹಾಗೆ ಜೀವಿಗಳು ನೆಲೆಸಲು ಲೋಕಗಳು ಇರುತ್ತವೆ. (ಇದನ್ನು ಇಂದಿನ ಭಾಷೆಯಲ್ಲಿ ಹೇಳುವುದಾದರೆ: ಗ್ರಹಗಳು, ಉಪಗ್ರಹಗಳು, ಸೂರ್ಯ, ಗ್ಯಾಲೆಕ್ಸಿ, ಬ್ರಹ್ಮಾಂಡ ಇತ್ಯಾದಿಯಾಗಿ ಹೇಳಬಹುದಾಗಿದೆ.) ಜೊತೆಗೆ ತೇಜೋ ಲೋಕಗಳಾದ ತಾವತಿಂಸ ಇತ್ಯಾದಿ ದೇವಲೋಕಗಳು, ಅವೀಚಿಯಂತಹ ನರಕಗಳು, ವಿಶ್ವಗಳ ಮಧ್ಯೆ ಇರುವ ಲೋಕಾಂತರಿಯಾ (ಬ್ಲಾಕ್ ಹೋಲ್ಸ್) ಹೀಗೆ ಆಕಾಶಕಾಯಗಳು ಅನಂತವಾಗಿವೆ. ಹಾಗೆಯೇ ಧ್ಯಾನಿಗಳ ಬ್ರಹ್ಮಲೋಕ, ಅರೂಪ ಬ್ರಹ್ಮಲೋಕ ಇತ್ಯಾದಿಗಳನ್ನು ಭಗವಾನರು ತಮ್ಮ ತೀಕ್ಷ್ಣವಾದ ಅರಿವು ಹಾಗು ಸರ್ವಜ್ಞತಾ ಚಕ್ಷುವಿನಿಂದ ಅರಿತಿದ್ದಾರೆ, ಅನುಭವಿಸಿದ್ದಾರೆ ಹಾಗು ವಿವರವಾಗಿ ತಿಳಿದಿದ್ದಾರೆ. ಹೀಗಾಗಿ ಅವರನ್ನು ಲೋಕವಿದೂ, ಲೋಕಗಳೆಲ್ಲವನ್ನು ಅರಿತಿರುವವರು ಎನ್ನುತ್ತಾರೆ.

6. ಅನುತ್ತರೋ ಪುರಿಸದಮ್ಮ ಸಾರಥಿ:

ಅನುತ್ತರೋ ಎಂದರೆ ಸಾಟಿಯಿಲ್ಲದ, ಯಾರಿಗೂ ಹೋಲಿಸಲಾಗದ ಎಂದು ಅರ್ಥ. ಪುರಿಸ ಎಂದರೆ ಜೀವಿಗಳಲ್ಲಿ ಪುರುಷ (ವಿಶಾಲಾರ್ಥದಲ್ಲಿ ಎಲ್ಲಾ ಜೀವಿಗಳೆಂದು ಪರಿಗಣಿಸಲಾಗುತ್ತದೆ). ಪುರುಷರು ಧಮಿಸಿರುವುದಿಲ್ಲ ಆದರೆ ದಮಿಸಲ್ಪಡುವುದಕ್ಕೆ ಯೋಗ್ಯರಾಗಿರುತ್ತಾರೆ; ದಮ್ಮ ಎಂದರೆ (ದಮಿಸುವುದು); ಸಾರಥಿ ಎಂದರೆ ದಮಿಸುವವ ಅಥವಾ ನಾಯಕ ಎಂದರ್ಥ. ಅಂದರೆ ಒಟ್ಟಾರೆ ಜೀವಿಗಳನ್ನು ದಮಿಸುವಂತಹ ಹೋಲಿಸಲಾಗದಂತಹ ನಾಯಕ ಎಂದು ಅರ್ಥವಾಗಿದೆ.
ಭಗವಾನರಲ್ಲಿ ಅನೇಕಾನೇಕ ವಿಶಿಷ್ಟ ಸದ್ಗುಣಗಳಿವೆ. ಅವರನ್ನು ಯಾರಿಗೂ ಹೋಲಿಸಲಾಗದು. ಇಡೀ ಲೋಕದಲ್ಲಿ ಅವರನ್ನು ಶೀಲದಲ್ಲಾಗಲಿ, ಸಮಾಧಿಯಲ್ಲಾಗಲಿ, ಪ್ರಜ್ಞೆಯಲ್ಲಾಗಲಿ, ವಿಮುಕ್ತಿಯಲ್ಲಾಗಲಿ, ವಿಮುಕ್ತಿ ವಿದ್ಯೆಯಲ್ಲಾಗಲಿ (ಜ್ಞಾನ ದರ್ಶನ), ಕೊನೇಪಕ್ಷ ಅವರ ದಿವ್ಯವಾದ ಶರೀರದಲ್ಲೂ ಅವರಿಗೆ ಸಾಟಿಯಿಲ್ಲ). ಇಡೀ ಲೋಕಗಳಲ್ಲಿ ಯಾರೂ ಸಹಾ ಅವರಿಗೆ ಸಮಾನರು ಇಲ್ಲವಾಗಿದ್ದಾರೆ. ಅವರಂತೆ ಇನ್ನೊಬ್ಬರಿಲ್ಲ ಇನ್ನು ಅವರನ್ನು ಮೀರಿಸುವುದು ಇರಲಿ, ಅವರ ಸಮಕಾಲೀನರಲ್ಲಿ ಮಹಾವಾಗ್ಮಿ ಸಚ್ಚಕ, ಉಪಾಲಿ ಇತ್ಯಾದಿ ಬ್ರಾಹ್ಮಣರಾದಂತಹ ಅಂಬಟ್ಟ, ಪೊಕ್ಕಸಾರತಿ, ಸೊಣದಂಡ, ಕೂಟದಂಡ ಅಂಗೂಲಿಮಾಲ ಇತ್ಯಾದಿ ಡಕಾಯಿತರನ್ನು, ಯಕ್ಷರಾದಂತಹ ಆಳವಕ, ಸೂಚಿಲೋಮ ಇತ್ಯಾದಿ. ದೇವತೆಗಳ ಸಹಿತ ಇಂದ್ರನಾದ ಸಕ್ಕ, ಹಾಗು ಅಸಂಖ್ಯಾತ ಬ್ರಹ್ಮರನ್ನು ಭಗವಾನರು ತಮ್ಮ ಜ್ಞಾನದಿಂದ ದಮಿಸಿದ್ದರು.
ದಮಿಸುವ ವಿಷಯದಲ್ಲಿ ಭಗವಾನರು ಹೀಗೆ ಹೇಳಿದ್ದಾರೆ: ಕೇಸಿ, ನಾನು ಜನರನ್ನು ಹಲವೊಮ್ಮೆ ಸಭ್ಯವಾಗಿ ದಮಿಸುತ್ತೇನೆ ಹಾಗು ಹಲವೊಮ್ಮೆ ಒರಟಾಗಿ ದಮಿಸುತ್ತೇನೆ ಮತ್ತು ಹಲವೊಮ್ಮೆ ಸಭ್ಯವಾಗಿಯು ಹಾಗು ಒರಟಾಗಿಯೂ ದಮಿಸುತ್ತೇನೆ.
ದಮಿಸಿರುವವರನ್ನು ಸಹಾ, ಇನ್ನಷ್ಟು ಪರಿಶುದ್ಧವಾಗುವ ರೀತಿ ದಮಿಸುತ್ತಿದ್ದರು. ಹಾಗೆಯೇ ಸೋತಾಪನ್ನರಿಂದ ಅರಹಂತರಾಗುವ ನಿಟ್ಟಿನಲ್ಲಿ ಬೋಧಿಸುತ್ತಿದ್ದರು.
ಭಗವಾನರು ಒಂದೇ ಬೋಧನೆಯಲ್ಲಿ ಹಲವರನ್ನು ಅಷ್ಠ ವಿಮೋಕ್ಖ ಸ್ಥಿತಿ ಪ್ರಾಪ್ತಿಯಾಗುವ ರೀತಿಯಲ್ಲಿ ಪರಿಣಾತ್ಮಕವಾಗಿ ಬೋಧಿಸುತ್ತಿದ್ದರು.
ಬುದ್ಧರನ್ನು ಯಾರೊಂದಿಗೂ ಹೋಲಿಸಲು ಅಸಾಧ್ಯ. ಏಕೆಂದರೆ ಶೀಲದಲ್ಲಾಗಲೀ, ಸಮಾಧಿಯಲ್ಲಾಗಲೀ, ಪ್ರಜ್ಞೆಯಲ್ಲಾಗಲೀ, ಅಭಿಜ್ಞಾದಲ್ಲಾಗಲೀ, ಸತ್ಯನಿಷ್ಟತೆಯಲ್ಲಾಗಲೀ, ಮಹಾಕರುಣೆಯಲ್ಲಾಗಲೀ, ವಿಮುಕ್ತಿಯಲ್ಲಾಗಲೀ ಯಾವುದರಲ್ಲೇ ಆಗಲಿ ಯಾರೂ ಅವರ ಸಮಾನ ಇಲ್ಲ. ಕೇವಲ ಮತ್ತೊಬ್ಬ ಬುದ್ಧರು ಮಾತ್ರ ಬುದ್ಧರಿಗೆ ಸಮಾನರು. ಅನ್ಯ ಯಾವ ಮಾನವ, ದೇವ, ಬ್ರಹ್ಮ, ಯಾರೇ ಆಗಲಿ, ಬುದ್ಧರಂತಹ ಪರಿಶುದ್ಧರು ಪರಿಪೂರ್ಣರು ಇಲ್ಲ.
ಆದ್ದರಿಂದ ಅವರಿಗೆ ಅನುತ್ತರರು ಎನ್ನುತ್ತೇವೆ. ಬುದ್ಧರು ತಮ್ಮ ಸುಬೋಧನೆಯಿಂದ ಮಾನವರಿಗೆ ದಮಿಸುತ್ತಿದ್ದರು. (ನಿಗ್ರಹಿಸುತ್ತಿದ್ದರು, ಶಾಂತಗೊಳಿಸುತ್ತಿದ್ದರು). ಧಮಿಸಲ್ಪಟ್ಟವರು ಇನ್ನಷ್ಟು ಧಮಿಸಿ ಪೂರ್ಣ ಶಾಂತರಾಗಿ ವಿಕಾರರಹಿತರಾಗುತ್ತಿದ್ದರು. ಅವರ ಬೋಧನೆ ಕೇಳುತ್ತಿದ್ದಂತೆಯೇ ಅವರ ರಾಗ, ದ್ವೇಷ, ಮೋಹಗಳು, ಕಳಚಿ ಬೀಳುತ್ತಿದ್ದವು. ಆದ್ದರಿಂದ ಅವರನ್ನು ಅನುತ್ತರ ಪುರಿಸದಮ್ಮ ಸಾರಥಿ ಎಂದು ಕರೆಯುತ್ತಾರೆ.

7. ಸತ್ಥಾದೇವ ಮನುಸ್ಸಾನಂ:

ಭಗವಾನರು ಇಲ್ಲಿ ಈಗಲೇ ಲಾಭವಾಗುವ ಬೋಧನೆ ಮಾಡುತ್ತಿದ್ದರು. ಹಾಗೆಯೇ ಮುಂದಿನ ಜನ್ಮದಲ್ಲೂ ಒಳ್ಳೆಯದಾಗುವ ರೀತಿ ಬೋಧನೆ ಮಾಡುತ್ತಿದ್ದರು. ಅಷ್ಟೇ ಅಲ್ಲ, ಅಂತಿಮ ಗುರಿಯಾದ ನಿಬ್ಬಾಣ ಸಿಗುವಂತಹ ರೀತಿಯಲ್ಲಿ ಅವರು ಬೋಧನೆ ಮಾಡುತ್ತಿದ್ದರು. ಹೀಗೆ ವರ್ತಮಾನ ಹಾಗು ಭವಿಷ್ಯದಲ್ಲಿ ಮತ್ತು ಪರಮಾರ್ಥವಾದ ನಿಬ್ಬಾಣ ಗಳಿಸುವಿಕೆಯಲ್ಲೂ ಲಾಭವಾಗುವಂತಹ ಬೋಧನೆ ನೀಡುತ್ತಿದ್ದುದರಿಂದಾಗಿ ಅವರನ್ನು ಶಾಸ್ತರು ಎನ್ನುತ್ತಾರೆ.
ಸತ್ಥಾರ್ ಎನ್ನುವ ಪದಕ್ಕೆ ನಿದ್ದೆಸದಲ್ಲಿ ಹೀಗೂ ಇದೆ: ಯಾತ್ರಿಕರ ಅಥವಾ ವರ್ತಕರ ತಂಡಕ್ಕೆ ನಾಯಕನೆಂದು. ಏಕೆಂದರೆ ಯಾತ್ರಿಕರ ಅಥವಾ ವರ್ತಕರ ತಂಡದ ನಾಯಕನು ಮರುಭೂಮಿಯಲ್ಲಿ ಅಥವಾ ದಟ್ಟ ಕಾಡಿನಲ್ಲಿ ಅಥವಾ ಕ್ರೂರ ಮೃಗಗಳ ನಡುವೆಯ ತಾಣದಲ್ಲಿ ಅಥವಾ ಆಹಾರವಿಲ್ಲದ ಸ್ಥಳಗಳಲ್ಲಿ ಸಿಲುಕಿಕೊಳ್ಳಬಹುದು. ಆದರೆ ಆಗ ನಾಯಕನಾದವನು ತನ್ನ ಜೊತೆಗಿನ ಎಲ್ಲಾ ಪ್ರಯಾಣಿಕರನ್ನು ಸುರಕ್ಷಾಯುತ ಸ್ಥಳಕ್ಕೆ ಕರೆದೊಯ್ಯುತ್ತೇನೆ. ಅವರು ರಕ್ಷಣೆ ಹಾಗು ನೆಲ ಸಿಗುವ ಕ್ಷೇಮಯುತ ಸ್ಥಾನಕ್ಕೆ ಕರೆದೊಯ್ಯುತ್ತಾನೆ. ಅವರಂತೆಯೇ ಭಗವಾನರು ಸಹಾ ತಮ್ಮ ಶಿಷ್ಯಂದಿರನ್ನು ಅಪಾಯ ಲೋಕಗಳಲ್ಲಿ ಸಿಲುಕದಂತೆ ಕಾಪಾಡುತ್ತಿದ್ದಾರೆ. ಹಾಗೆಯೇ ಸುಗತಿ ಅಥವಾ ಬ್ರಹ್ಮಲೋಕ ಸಿಗುವಂತೆ, ಅರ್ಹರಿಗೆ, ಮುಕ್ತಿ ಆಕಾಂಕ್ಷಿಗಳಿಗೆ ನಿಬ್ಬಾಣದಂತಹ ಸವರ್ೊತ್ತಮ ಕ್ಷೇಮ ಸ್ಥಿತಿಯು ಸಿಗುವಂತೆ ಶ್ರಮಿಸಿದ್ದಾರೆ. ಪ್ರಾಣಿಗಳಿಗೂ ಸಹಾ ಮುಂದೆ ಉನ್ನತ ಸ್ಥಿತಿಗಳು ಸಿಗುವಂತೆ ಅವರು ಶ್ರಮಿಸುತ್ತಿದ್ದರು.
ಇದಕ್ಕೆ ಉದಾಹರಣೆ ಒಮ್ಮೆ ಭಗವಾನರು ಚಂಪಾನಗರದ ಗಗ್ಗರ ಸರೋವರದ ಬಳಿ ಭಿಕ್ಷುಗಳಿಗೆ ಧಮ್ಮಬೋಧನೆ ಮಾಡುತ್ತಿದ್ದರು. ಆಗ ಮಂಡೂಕವೊಂದು (ಕಪ್ಪೆ) ಭಗವಾನರ ಅಷ್ಟ ವೈಶಿಷ್ಟ್ಯತೆಯುಳ್ಳ ಧ್ವನಿಯನ್ನು ಆಲಿಸುತ್ತಾ ಅದನ್ನೇ ಮನದಲ್ಲಿ ಪುನರಾವತರ್ಿತಗೊಳಿಸುತ್ತಿತ್ತು. ಆ ಧ್ವನಿಯನ್ನು ಆನಂದಿಸುತ್ತಾ, ಆ ಧ್ವನಿಯನ್ನು ಅತ್ಯಂತ ಸ್ಪಷ್ಟವಾಗಿ ಮನಸ್ಸಿನಲ್ಲಿ ಮುದ್ರೆಯನ್ನು ಹಾಕುತ್ತಿತ್ತು. ಅದೇ ಸಮಯದಲ್ಲಿ ಹಸು ಕಾಯುವವನೊಬ್ಬನು ಅರಿವಿಲ್ಲದೆ ಆ ಕಪ್ಪೆಯ ತಲೆಯ ಮೇಲೆ ಕೋಲನ್ನು ಊರಿದನು. ಅದೇ ಕ್ಷಣದಲ್ಲಿ ಆ ಕಪ್ಪೆಯು ಸತ್ತು ತಾವತಿಂಸ ದೇವಲೋಕದಲ್ಲಿ ಉದಯಿಸಿತು. ಅತ್ಯಂತ ಸುಖಮಯವಾದ ಉನ್ನತಕರ ದೇವತೆಯಾಗಿ ಜನ್ಮ ಪಡೆದ ಆ ಜೀವಿಯು ಹೀಗೆ ಚಿಂತನೆ ಮಾಡಿತು: ನಾನು ಇಲ್ಲಿ ಹೇಗೆ ಯಾವ ಪುಣ್ಯ ಬಲದಿಂದಾಗಿ ಜನ್ಮಿಸಿದ್ದೇನೆ? ತಕ್ಷಣ ಆ ಕಪ್ಪೆಗೆ ಎಲ್ಲವೂ ಸ್ಪಷ್ಟವಾಗಿ ಅರ್ಥವಾಯಿತು. ಅದು ಭಗವಾನರಲ್ಲಿಗೆ ಬಂದು ಭಗವಾನರ ಪಾದತಲದಲ್ಲಿ ಮಸ್ತಕವನ್ನಿಟ್ಟು ಪೂಜಿಸಿತು. ಆಗ ಭಗವಾನರು ಹೀಗೆ ಪ್ರಶ್ನಿಸಿದರು:
ನನ್ನ ಪಾದಕ್ಕೆ ಪೂಜಿಸುತ್ತಿರುವವರ್ಯಾರು ?
ಈ ಬಗೆಯ ಪ್ರಭೆ ಮತ್ತು ಯಶಸ್ಸನ್ನು ಹೊಂದಿ ಪ್ರಕಾಶಿಸುತ್ತಿರುವವರ್ಯಾರು ?
ಈ ಬಗೆಯ ಸೌಂದರ್ಯ ಯಾರದ್ದು ?
ಭಗವಾನ್, ನನ್ನ ಹಿಂದಿನ ಅವಸ್ಥೆಯಲ್ಲಿ ಮಂಡೂಕನಾಗಿದ್ದೆನು.
ಕೊಳವೊಂದರಲ್ಲಿ ದನಗಾಹಿಯಿಂದ ಸತ್ತರೂ
ತಮ್ಮ ಧಮ್ಮ ಬೋಧನೆಯ ಧ್ವನಿಯಿಂದ ಈ ಸ್ಥಿತಿಯು ಲಭಿಸಿದೆ.
(ಇನ್ನು ಅರ್ಥವಾಗಿದ್ದರೆ ಯಾವ ಸ್ಥಿತಿ ಪಡೆಯುತ್ತಿದ್ದೆನೋ.)
ಆಗ ಭಗವಾನರು ಆ ದೇವತೆಗೆ ಧಮ್ಮ ಬೋಧಿಸಿದರು. ಆ ಧಮ್ಮವನ್ನು ಆಲಿಸಿದ 84000 ಜೀವಿಗಳು ಧಮ್ಮವರಿತಂತಹ ಫಲ ಪಡೆದರು. ಆ ದೇವತೆಯು ಸಹಾ ಸೋತಪತ್ತಿ ಫಲ ಪಡೆಯಿತು. ಆನಂದಿತವಾಗಿ ವಂದಿಸಿ, ಅದೃಶ್ಯವಾಯಿತು.
ಅವರು ನಿಬ್ಬಾಣದ ದಾತರು, ಶ್ರೇಷ್ಠ ಧರ್ಮದ ಜ್ಞಾತರು, ಶ್ರೇಷ್ಠ ಆರ್ಯ ಅಷ್ಟಾಂಗ ಮಾರ್ಗದ ನಿದರ್ೆಶಕರು, ಲೋಕೋತ್ತರ ಮಾರ್ಗದ ಮಾರ್ಗದಶರ್ಿಗಳು ಸರ್ವವನ್ನು ತಾವೇ ಅರಿತಂತಹವರು. ಅವರಂತಹ ಶಾಸ್ತ ಬೇರಿಲ್ಲ. ಅವರಂತಹ ಮಹಾನ್ ಆಚಾರ್ಯರು ಬೇರಿಲ್ಲ. ಏಕೆಂದರೆ ಅವರು ಮಹಾ ಅನುಕಂಪ ಸಂಪನ್ನರು, ಮೃದುಭಾಷೆಯವರು, ಸುಮಧುರ ಕಂಠಸ್ಥರು ಬೇರೆ ಇಲ್ಲ. ಯಾರಿಗೆ ಯಾವ ಬೋಧನೆ ಯಾವ ರೀತಿಯಲ್ಲಿ ಎಷ್ಟು ಹೇಳಿದರೆ ಅದು ಫಲಕಾರಿ ಎಂದು ಸ್ಪಷ್ಟವಾಗಿ ತಿಳಿದಿದ್ದರು. ಅದರಂತೆಯೇ ಅವರು ಮುಕ್ತಗೊಳಿಸುತ್ತಿದ್ದರು. ಅವರು ಅಸಮಾನ್ಯ ಭವವೈದ್ಯರು ಆಗಿದ್ದರು. ಸರ್ವಲೋಕಗಳ ಬಗ್ಗೆ ಮತ್ತು ಲೋಕೋತ್ತರದ ಬಗ್ಗೆ ಶ್ರೇಷ್ಠ ಪರಿಣಿತರಾಗಿದ್ದರು. ಅವರು ಸತ್ಯವನ್ನು ಗುರಿ ಗಮನವಿರಿಸಿ ಪರರಿಗೆ, ಪ್ರಿಯವಾಗಿ ಒಪ್ಪುವಂತೆ ಸರಿಯದ ಕಾಲದಲ್ಲಿ ಹಿತವಾಗುವಂತೆ ಬೋಧಿಸುತ್ತಿದ್ದರು.
ಅವರು ಮಹಾನ್, ಸಾಂತ್ವನಕಾರರು ಆಗಿದ್ದರು. ಕಿಸಾಗೋತಮಿ, ಪಟಚಾರ, ಮುಂತಾದ ದುಃಖಿತರಿಗೆ ನಿತ್ಯಶಾಂತಿಯನ್ನು ಪ್ರಸಾದಿಸಿದರು. ಅವರು ಪ್ರಾಣಿ ಬಲಿಗೆ ತಡೆಯುಂಟುಮಾಡಿ ತನ್ನಂತೆ ಪರರು ಎಂದು ತೋರಿಸಿದವರು. ಅವರು ಮದ್ಯಪಾನ ಅತಿ ಅನರ್ಥಕಾರಿ ಎಂದು ಜಗತ್ತಿಗೆ ಮೊದಲು ತಿಳಿಸಿದರು. ದಲಿತರಿಗೆ, ಸ್ಥಾನಮಾನ ಕೊಟ್ಟ ಪ್ರಥಮರು. ಸ್ತ್ರೀಯರು ಅತ್ಯುನ್ನತ ಜ್ಞಾನ ಪಡೆಯಬಲ್ಲರು ಎಂದು ತೋರಿದವರು. ಕ್ರೂರ ಡಕಾಯಿತ ಅಂಗಲಿಮಾಲಾನನ್ನು ಕರುಣಭರಿತ ಸಂತನನ್ನಾಗಿ ಮಾಡಿದವರು. ನರ್ತಕಿ ಅಮ್ರಪಾಲಿಗೆ ಶಾಂತತೆಯನ್ನು ನೀಡಿದವರು. ಈ ರೀತಿ ಸರ್ವರಿಗೂ ಅವರು ಮಹಾನ್ ಧರ್ಮಮಿತ್ರರಾಗಿದ್ದರು. ಅಷ್ಟೇ ಅಲ್ಲ, ರೋಗಿ ತಿಸ್ಸಗೆ ಸೇವೆ ಮಾಡಿದರು. ಬಡ ರಜ್ಜುಮಾಲಾ ಮತ್ತು ಸೋಪಕರಂತಹವರಿಗೆ ಮೇಲೆತ್ತಿದವರು. ನೀರಿಗಾಗಿ ರಕ್ತ ಚೆಲ್ಲುತ್ತಿದ್ದ ಎರಡು ರಾಜ್ಯಗಳನ್ನು ಒಂದುಗೂಡಿಸಿದರು ಮತ್ತು ಐಕ್ಯತೆಯನ್ನು ಉಂಟುಮಾಡಿದರು. ದುರ್ಬಲರನ್ನು ಬಲಷ್ಠರನ್ನಾಗಿ ಮಾಡಿದರು. ದುಶ್ಶೀಲರಿಗೆ ಶೀಲವಂತನಾಗಿ ಮಾಡಿದರು. ದಡ್ಡರಿಗೆ ಜ್ಞಾನ ದೀಪ್ತಿ ನೀಡಿದರು. ರಹಸ್ಯ ಅನ್ವೇಷಕರಿಗೆ ಸಂಶಯ ಪರಿಹಾರ ಮಾಡಿದರು. ಭೋಗಿಗಳಿಗೆ, ತ್ಯಾಗಿಗಳನ್ನಾಗಿಸಿದರು. ಮದವೆತ್ತ ಆನೆಗೆ ಶಾಂತಗೊಳಿಸಿದರು. ಅಳವಕನೆಂಬ ನರಭಕ್ಷಕನಿಗೆ ಸಾಧು ಮಾಡಿದರು. ವಿದ್ವಾಂಸರಿಗೆ ಜ್ಞಾನ ದರ್ಶನ ನೀಡಿದರು. ವರ್ಣವ್ಯವಸ್ಥೆಯನ್ನು ನಿಲ್ಲಿಸಿದರು. ಹೀಗೆ ಸರ್ವರಿಗೂ ಭೇದಭಾವವಿಲ್ಲದೆ ಮೈತ್ರಿಯಿಂದ ಕೂಡಿ, ತಮ್ಮ ಜ್ಞಾನವನ್ನು ಸರ್ವರಿಗೂ ನೀಡಿದ್ದಾರೆ. ಹಾಗೆಯೇ ಅರ್ಥಶಾಸ್ತ್ರ ಮತ್ತು ರಾಜಕೀಯದಲ್ಲೂ ಹಿತಸಲಹೆ ನೀಡಿದ್ದಾರೆ.
ಆದ್ದರಿಂದ ಅವರನ್ನು ಅನುಪಮ ಶಾಸ್ತ ಎನ್ನುತ್ತಾರೆ. ಮಾನವ ಮಾತ್ರರಿಗೆ ಅಲ್ಲದೆ ರಾತ್ರಿ ವೇಳೆಗೆ ಬರುತ್ತಿದ್ದ ದೇವಗಣಕ್ಕೂ ಅವರು ಬೋಧಿಸಿದ್ದಾರೆ. ಆದ್ದರಿಂದ ಅವರನ್ನು ಶಾಸ್ತ ದೇವಮನುಸ್ಸಾನಂ ಎನ್ನುತ್ತಾರೆ.

8. ಬುದ್ಧೋ:

ವಿಮುಕ್ತಿ ಫಲವನ್ನು ಒಳಗೊಂಡ ಜ್ಞಾನದಿಂದ ಅವರು ಬುದ್ಧರಾಗಿದ್ದಾರೆ. ಅವರ ಅಗಾಧ ಜ್ಞಾನಸಂಪತ್ತು ಸ್ವತಃ ಅವರಿಂದಲೇ ಸಂಶೋಧಿಸಲ್ಪಟ್ಟಿದೆ; ಆದ್ದರಿಂದ ಅವರನ್ನು ಬುದ್ಧರೆನ್ನುತ್ತಾರೆ.
ನಾಲ್ಕು ಆರ್ಯ ಸತ್ಯಗಳನ್ನು ಸ್ವತಃ ತಾವಾಗಿಯೇ ಸಂಶೋಧಿಸಿದ್ದಾರೆ. ಆದ್ದರಿಂದ ಅವರಿಗೆ ಬುದ್ಧರೆನ್ನುತ್ತಾರೆ. ಹೀಗೆ ಸ್ವತಃ ಜ್ಞಾನೋದಯ ಪಡೆದ ಅವರಿಂದ ಪರರು ಜ್ಞಾನೋದಯ ಪಡೆಯುವಂತಾಗಿದ್ದಾರೆ. ಈ ರೀತಿಯ ಇನ್ನಿತರ ಕಾರಣದಿಂದಾಗಿ ಅವರನ್ನು ಬುದ್ಧರೆನ್ನುತ್ತಾರೆ. ಸತ್ಯಗಳನ್ನು ಅವರು ಅನ್ವೇಷಿಸಿದ್ದರಿಂದಾಗಿ (ಬುಜ್ಜಿತರ್) ಅವರು ಬುದ್ಧರಾಗಿದ್ದಾರೆ. ಇಡೀ ಪೀಳಿಗೆಗೆ ಅವರು ಜಾಗೃತಗೊಳಿಸುವುದರಿಂದಾಗಿ (ಬೋಧಿಕರ್) ಅವರು ಬುದ್ಧ. ಹೀಗೆಂದು ನಿದ್ದೆಸ ಹಾಗು ಪಟಿಸಂಬಿದದಲ್ಲಿ ವಿವರಿಸಲಾಗಿದೆ.
ಯಾವ ಜ್ಞಾನದಿಂದ ವಿಶುದ್ಧಿಯು, ವಿಮುಕ್ತಿಯು ಲಭಿಸುವುದೋ ಪರರಿಗೆ ಜಾಗ್ರತೆಯುಂಟಾಗಿ ಸರ್ವಹಿತಕಾರಿಯಾಗುವುದೋ ಅಂತಹ ಆರ್ಯಸತ್ಯಗಳನ್ನು ತಾವಾಗಿಯೇ ಸಂಶೋಧಿಸಿ, ಸಿದ್ಧಿಸಿ, ಜಾಗೃತವಾಗಿ ಜ್ಞಾತರಾದವರೇ ಬುದ್ಧರು. ಅವರ ಬೋಧನೆಯು ಸರಳವಾಗಿತ್ತು.
ಕೇವಲ ಒಂದು ವಿಷಯ ಮಾತ್ರ ನಾನು ಬೋಧಿಸುವೆ, ಅದೆಂದರೆ: ದುಃಖಕ್ಕೆ ಕಾರಣ, ಮತ್ತು ದುಃಖ ನಿರೋಧ ಮಾರ್ಗ.
ಯಾವ ಪಾಪವನ್ನು ಮಾಡದಿರುವುದು, ಕುಶಲವನ್ನು ಮಾಡುವುದು, ಮತ್ತು ಚಿತ್ತವನ್ನು ಪರಿಶುದ್ಧಗೊಳಿಸುವುದು ಇದೇ ಬುದ್ಧರ ಶಾಸನವಾಗಿತ್ತು. ಜಗತ್ತಿಗೆ ಮೊದಲಬಾರಿಗೆ ಸ್ವಾವಲಂಬನೆ ಪಾಠ ತಿಳಿಸಿದವರು ಅವರೇ. ನಿಮಗೆ ನೀವೇ ಶರಣಾಗತರಾಗಿ ಅನ್ಯಶರಣು ಬೇಡ ಎಂದು ಹೇಳಿದರು.
ಅವರ ಅಂತಿಮ ನುಡಿಯು ಈ ರೀತಿಯದ್ದಾಗಿತ್ತು ಸಂಸ್ಕಾರಗಳೆಲ್ಲವೂ ಕ್ಷೀಣಿಸುತ್ತದೆ, ಎಚ್ಚರಿಕೆಯಿಂದ ನಿಮ್ಮ ನಿಬ್ಬಾಣ ಸಂಪಾದಿಸಿ ಹೀಗೆ ಸರ್ವ ಸದ್ಗುಣಗಳಿಗೆ ಆದರ್ಶರಾಗಿ ಬುದ್ಧರು ಇದ್ದರು.

9. ಭಗವಾನರು:

ಭಗವಾನರು ಎಂಬ ಪದ ಪದಗಳಲ್ಲೇ ಶ್ರೇಷ್ಠವಾದುದು,
ಉತ್ಕೃಷ್ಟವಾದುದು, ಭಕ್ತಿಗೆ ಅರ್ಹವಾದುದು.
ಆದ್ದರಿಂದಲೇ ಭಗವಾನರು ಎಂದೇ ಬಳಕೆಯಲ್ಲಿದೆ.
ಭಗವಾನರು ಭಕ್ತವತ್ಸಲರು, ಸರ್ವರ ದುಃಖ ವಿಮುಕ್ತಿಗಾಗಿ
ಪುನಃ ಪುನಃ ಬಂದಿದ್ದವರು,
ಸರ್ವರ ದುಃಖದಲ್ಲಿ ಭಾಗಿಯಾದವರು
ಸರ್ವರಿಗೂ ಭಾಗ್ಯವನ್ನೇ ನೀಡಿದವರು.
ಸತ್ಯಗಳನ್ನು ಭಾಗಿಸಿ, ವಿಭಾಗಿಸಿ, ವಿಶ್ಲೇಷಿಸಿ (ಪ್ರತಿಬಾಗಿಸಿರುವರು) ಅರಿತವರು.
ದುಃಖಕ್ಕೆ ಕಾರಣವಾದ ಭವವನ್ನು ಭಂಗಿಸಿದವರು
ಆದ್ದರಿಂದಲೇ ಭಗವಂತರೆನ್ನುತ್ತಾರೆ.
ಹೀಗಾಗಿಯೇ ಭಗವಾನರು ಎಂದು ಕರೆಯುತ್ತಾರೆ.
ಅವರು ಭಾಗ್ಯವಾನರು, ಭಾರ್ಗವರು (ನಿಮರ್ೂಲ ಮಾಡುವವರು)
ಭಾಗ್ಯಗಳನ್ನು ಹಂಚುವವರು, ಪ್ರತಿವಿಭಾಗಿಸಿದ ಸತ್ಯಗಳ ಅಧಿಪತಿಯೂ
ಆಗಾಗ್ಗೆ ಬರುವವರು, ಭವ ತ್ಯಾಗ ಮಾಡಿದವರು
ಆದ್ದರಿಂದಲೇ ಅವರು ಭಗವಾನರು.
ಅವರು ರಾಗ, ದ್ವೇಷ ಹಾಗು ಮೋಹಗಳನ್ನು
ನಿಮರ್ೂಲಗೊಳಿಸಿದ ಆಸವಮುಕ್ತರೂ
ಎಲ್ಲೆಲ್ಲಿಯೂ ಅಕುಶಲಸ್ಥಿತಿ ಇಲ್ಲದಂತೆ ಮಾಡಿದವರು
ಆದ್ದರಿಂದಲೇ ಅವರು ಭಗವಾನರು.
ಅವರು ಭಾಗ್ಯವಂತರು, ಏಕೆಂದರೆ,
ಚಿತ್ತಗಳ ಹಾಗು ಇಂದ್ರಿಯಗಳ ಅಧಿಪತ್ಯ ಹೊಂದಿದವರು,
ಲೋಕೋತ್ತರ ಧಮ್ಮದ ಜ್ಞಾತರು
ಎಲ್ಲೆಡೆ ಕೀತರ್ಿ ಭವ್ಯತೆ ಪಡೆದಂತಹವರು
ಸದಾ ಪರಹಿತ ಬಯಸಿದವರು ಹಾಗು ಪರರಿಗೆ ಶ್ರಮಿಸಿದವರು
ಆದ್ದರಿಂದ ಅವರೇ ಭಗವಾನರು.
ಸರ್ವವನ್ನು ವಿಶ್ಲೇಷಿಸಿ, ವಿಭಾಗಿಸಿ
ಖಂದ, ಆಯತನ, ಧಾತು, ಇಂದ್ರಿಯ, ಸತ್ಯ ಹಾಗು
ಪಟಿಚ್ಚ ಸಮುಪ್ಪಾದ ಅರಿತವರು
ನಾಲ್ಕು ಆರ್ಯಸತ್ಯಗಳ ಸಂಶೋಧಕರೂ ಅಮರತ್ವದ ಪ್ರಸಾದಕರೂ
ಹೀಗೆ ಪ್ರಕಟಿಸುವವರೇ ಭಗವಾನರು.
ಭವಗಳನ್ನು ತಿರಸ್ಕರಿಸಿದವರು, ಭವಾತೀತರೂ
ಭಾವರಹಿತರು, ಬಂಧನಗಳ ಮುಕ್ತರೇ ಭಗವಾನರು.
ಈ ಎಲ್ಲಾ ಬಗೆಯಲ್ಲೂ ಪೂಜ್ಯರ್ಹರಾಗಿ, ಭಕ್ತಿಗೆ ಅರ್ಹರಾಗಿರುವ ಬುದ್ಧರಿಗೆ ಭಗವಾನರು ಎನ್ನುತ್ತಾರೆ. ಏಕೆಂದರೆ ಭಗವಾ ಇದು ಪದಗಳಲ್ಲಿ ಶ್ರೇಷ್ಠವಾದದ್ದು, ಅತಿ ಸುಮಧುರವಾದದ್ದು.
ಏಕೆಂದರೆ ಲೋಕದಲ್ಲಾಗಲೀ, ಪರಲೋಕದಲ್ಲಾಗಲೀ ಎಷ್ಟು ಬಗೆಯ ಧನಗಳು ಇವೆಯೋ, ಅಥವಾ ಸ್ವರ್ಗದಲ್ಲಿ ಉತ್ಕೃಷ್ಟ ರತ್ನಗಳೇ ಆಗಲೀ, ಅಥವಾ ಯಾವ ಜೀವಿಯಾಗಲೀ ಯಾವುದು ಬುದ್ಧರ ಸಮಾನವಿಲ್ಲ. ಇದು ಬುದ್ಧರಲ್ಲಿರುವ ಉತ್ತಮ ರತ್ನವಾಗಿದೆ. ಈ ಸತ್ಯವಚನದಿಂದ ಕಲ್ಯಾಣವಾಗಲಿ.
ಅವರು ರಾಗ, ದ್ವೇಷ ಮೋಹಗಳನ್ನು ಭಂಗಿಸಿದವರು. ಸರ್ವಭಾಗ್ಯವನ್ನು ನೀಡುವಂತಹವರು. ದುಃಖದಲ್ಲಿ ಭಾಗಿಯಾಗಿ ಸುಖದ ಭಾಗ ಹಂಚಿದವರು. ಸತ್ಯಗಳನ್ನು ಭಾಗಿಸಿ, ಪ್ರತಿ ಭಾಗಿಸಿ, ವಗರ್ಿಕರಿಸಿ ವಿಭಜಿಸಿದವರು. ಭವದ ಅಂತ್ಯ ಮಾಡಿದವರು, ಭಕ್ತಿಗೆ ಅರ್ಹರು. ಆದ್ದರಿಂದ ಅವರು ಭಗವಾನ್ ಆಗಿದ್ದಾರೆ.
ಈ ರೀತಿಯಾಗಿ ಧ್ಯಾನಿಸುತ್ತಿದ್ದಾಗ ಸಾಧಕರಲ್ಲಿ ಪಂಚನಿವಾರಣಗಳು ಕ್ಷೀಣಿಸಿ, ಧ್ಯಾನದ ಅಂಗಗಳು ಸ್ಥಿರವಾಗಿ ಸಮಾಧಿ ಪಡೆಯುತ್ತಾರೆ.
ಈ ಅನುಸ್ಸತಿಯಿಂದ ಸಾಮಿಪ್ಯ (ಉಪಚರ) ಸಮಾಧಿ ದೊರೆಯುತ್ತದೆ.

ಬುದ್ಧಾನುಸತಿ ಧ್ಯಾನದಿಂದ ಲಾಭಗಳು :

1. ಭಕ್ತಿ (ಶ್ರದ್ಧೆ) ಹೆಚ್ಚಾಗಿ ಜಾಗ್ರತೆ, ಅರಿವು ಮತ್ತು ಪುಣ್ಯ ಪಡೆಯುತ್ತಾರೆ.
2. ಆನಂದದಿಂದ ತುಂಬಿ ಚಿಂತೆ, ಭಯದಿಂದ ಪಾರಾಗುತ್ತಾರೆ.
3. ಕಷ್ಟ ನೋವುಗಳನ್ನು ಸಹಿಸುತ್ತಾರೆ.
4. ಬುದ್ಧರ ಸನಿಹಾ ಭಾವದಿಂದ ದೇಹದಲ್ಲಿ ಕೆಲವು ಗುಣಗಳು ನೆಲಸಿ ಗೌರವಕ್ಕೆ ಅರ್ಹರಾಗುತ್ತಾರೆ.
5. ದೇವತೆಗಳು ಆಕಷರ್ಿತವಾಗುತ್ತಾರೆ.
6. ಸೋತಪನ್ನನಾಗುತ್ತಾನೆ ಮತ್ತು ಸುಗತಿ ಪಡೆಯುತ್ತಾರೆ.
ಒಬ್ಬ ಭಕ್ತ ಹೀಗೆ ಹೇಳುತ್ತಾನೆ ನಾನು ಬುದ್ಧರಿಗೆ ಅರಿತಷ್ಟು ಅವರನ್ನು ಪ್ರೀತಿಸುವೆ. ಪೂಜಿಸುವೆ, ಅವರನ್ನು ಪ್ರೀತಿಸಿ ಪೂಜಿಸಿದಷ್ಟು ಅವರನ್ನು ಇನ್ನೂ ಚೆನ್ನಾಗಿ ಅರಿಯುವೆ.
ಧಮ್ಮಪದದ ಈ ಗಾಥೆ ಭಕ್ತರಿಗೆ ಸ್ಫೂತರ್ಿ ನಡುತ್ತದೆ.
ಯಾರು ಪೂಜ್ಯರ್ಹರಾದ ಬುದ್ಧರನ್ನು... ಪೂಜಿಸುವವರು ಅವರು ಗಳಿಸಿದ ಪುಣ್ಯವನ್ನು ಯಾರಿಂದಲೂ ಅಳಿಯಲು ಸಾಧ್ಯವಿಲ್ಲ.
ಯಾರು ನಿಜಕ್ಕೂ ಪ್ರಜ್ಞಾವಂತನೋ
ಆತನ ನಿರಂತರ ಕಾರ್ಯವೇ ಬುದ್ಧನುಸ್ಸತಿಯಲ್ಲಿ ತೊಡಗುವುದು
ಭಗವಾನರು ಅಂತಹ ಮಹಾಮಹಿಮರು.

 ಠ0ಠ  ಠ0ಠ  ಠ0ಠ

2. ಧಮ್ಮಾನುಸ್ಸತಿ


ಯಾವ ಭಿಕ್ಷುವು ಧಮ್ಮದಲ್ಲಿ ನೆಲೆಸಿರುವನೋ,
ಯಾರು ಧಮ್ಮದಲ್ಲಿ ರತ (ಆನಂದ)ನಾಗಿರುವನೋ, ಯಾರು
ಧಮ್ಮದ ಅನುಚಿಂತನೆ (ಧ್ಯಾನ)ದಲ್ಲಿರುವನೋ
ಧಮ್ಮವನ್ನೇ ಅನುಸ್ಮೃತಿ (ಎಚ್ಚರದ ನೆನಪು) ಮಾಡುತಿಹನೋ
ಅಂತಹವನು ಸ್ವಧಮ್ಮದಿಂದ ಎಂದಿಗೂ ಜಾರಿಬೀಳುವುದಿಲ್ಲ. - ಧಮ್ಮಪದ 364
ವಿಶುದ್ಧಿಯ, ವಿಮುಕ್ತಿಯ, ದುಃಖ ನಿರೋಧದ ಯಾವ ನಿಯಮಗಳನ್ನು ಭಗವಾನರು ಸ್ವಸಂಶೋಧಿಸಿ, ಅದನ್ನು ಜಗದ ಹಿತಕ್ಕೆ ಬೋಧಿಸಿದರೋ, ಆ ಆರ್ಯ ಸತ್ಯಗಳೇ ಧಮ್ಮ ಎನಿಸಿಕೊಳ್ಳುತ್ತದೆ. ಇವುಗಳ ಚಿಂತನೆಯನ್ನು ಗಂಭೀರವಾಗಿ ವಿಶ್ಲೇಷಿಸುತ್ತಾ ವಿವರವಾಗಿ ಧ್ಯಾನದಲ್ಲಿ ಅರಿಯುವುದೇ ಧಮ್ಮಾನುಸತಿಯಾಗಿದೆ. ಯಾರು ಧಮ್ಮಾನುಸತಿಯನ್ನು ಅಭಿವೃದ್ಧಿಗೊಳಿಸಬೇಕೆಂದಿರುವರೋ ಅವರು ನಿರ್ಜನ ನಿಶಬ್ದ ವಾತಾವರಣದಲ್ಲಿ ಪದ್ಮಾಸನದಲ್ಲಿ ಆಸೀನರಾಗಿ ಧಮ್ಮದ ಮಹೋನ್ನತ ಗುಣಗಳನ್ನು ಸ್ಪಷ್ಟವಾಗಿ, ವಿವರವಾಗಿ, ವಿಶ್ಲೇಷಿಸುತ್ತಾ ಹೀಗೆ ಅರಿಯುತ್ತಾರೆ ಮತ್ತು ಧ್ಯಾನಿಸುತ್ತಾರೆ.

ಭಗವಾನ್ ಬುದ್ಧರ ಧಮ್ಮವು ಹೀಗಿದೆ :

1. ಸ್ವಾಖ್ಖಾತೋ ಭಗವತ ಧಮ್ಮೋ : ಭಗವಾನರ ಧಮ್ಮವು ಸವಿವರವಾಗಿ ಬೋಧಿಸಲ್ಪಟ್ಟಿದೆ.
2. ಸಂದಿಟ್ಠಿಕೋ : ಸತ್ಯವು ನೇರವಾಗಿ ಇಲ್ಲೇ ಈಗಲೇ ದೃಷ್ಟಿಸಲ್ಪಡುತ್ತದೆ.
3. ಅಕಾಲಿಕೋ : ಕಾಲವಿಳಂಬವಿಲ್ಲದೆ ಫಲಕಾರಿಯಾಗಿದೆ ಮತ್ತು ಸರ್ವಕಾಲಿಕವಾಗಿದೆ.
4. ಏಹಿಪಸ್ಸಿಕೋ : ಬನ್ನಿ ಪರೀಕ್ಷಿಸಿ, ಸ್ವೀಕರಿಸಿ ಎಂದು ಧೈರ್ಯವಾಗಿ ಆಹ್ವಾನಿಸುತ್ತದೆ.
5. ಓಪನಯಿಕೋ : ಉನ್ನತಿಯಡೆ, ಪರಿಶುದ್ಧದೆಡೆಗೆ ಸಾಗಿಸುವುದಂತಹುದು.
6. ಪಚ್ಚತ್ತಂ ವೇದಿತಬ್ಬೂ ವಿಞ್ಞೊಹಿ ತಿ : ಜ್ಞಾನಿಗಳಿಂದ ನೇರವಾಗಿ ಗ್ರಹಿಸುವಂತಹುದು.

1) ಸ್ವಾಖಾತೋ ಭಗವತಾ ಧಮ್ಮೋ : 

ಭಗವಾನರ ಧಮ್ಮವು ಆದಿಯಲ್ಲಿ ಮಂಗಳಕರ. ಹೇಗೆಂದರೆ ಕೇಳಿದ ಕ್ಷಣದಿಂದಲೇ ಸಂಶಯಗಳು ಪರಿಹರಿಸಲ್ಪಟ್ಟು ಜ್ಞಾನದ ಅರಿವಾಗಿ ಮೋಹವು ಕ್ಷೀಣಿಸುತ್ತದೆ. ಸಂಕೋಲೆಗಳು ಕತ್ತರಿಸಲ್ಪಟ್ಟು ಶೀಲದಲ್ಲಿ ಪ್ರತಿಷ್ಠಾಪಿತರಾಗುತ್ತಾರೆ. ಹಾಗೆಯೇ ಧಮ್ಮವು ಮಧ್ಯದಲ್ಲಿ ಮಂಗಳಕರ ಹೇಗೆಂದರೆ ತ್ಯಾಗದಲ್ಲಿ ಮತ್ತು ಧ್ಯಾನದಲ್ಲಿ ತಲ್ಲೀನರಾಗಿ ಶ್ರೇಷ್ಠ ಸಮಾಧಿ ಸುಖ ಪಡೆಯುತ್ತಾ, ಸಮಥ ವಿಪಶ್ಶನ ಸಾಧಿಸುತ್ತಾ ಲೋಕೋತ್ತರ ಮಾರ್ಗದಲ್ಲಿ ಪ್ರತಿಷ್ಠಾಪಿತರಾಗುತ್ತಾರೆ. ಭಗವಾನರ ಧಮ್ಮವು ಅಂತ್ಯದಲ್ಲಿಯೂ ಮಂಗಳಕರ ಹೇಗೆಂದರೆ ಮಾರ್ಗಫಲ ಮತ್ತು ಮಹೋನ್ನತ ನಿಬ್ಬಾಣವನ್ನು ಸಾಕ್ಷಾತ್ಕರಿಸುತ್ತಾರೆ, ಸಾಧಿಸುತ್ತಾರೆ. ಈ ರೀತಿಯಲ್ಲಿ ಭಗವಾನರು ಮಂಗಳಕರವಾದ ಧಮ್ಮವನ್ನು ವಿವರವಾಗಿ ಪರಿಣಾತ್ಮಕವಾಗಿ ಬೊಧಿಸಿದ್ದಾರೆ. ಭಗವಾನರ ಮತ್ತೊಂದು ವಿಶೇಷತೆ ಎಂದರೆ ಅವರು ಎಂದೂ ಅನಾವಶ್ಯಕ ವಿಷಯಗಳನ್ನು ಹೇಳಿ ಸಮಯ ವ್ಯರ್ಥ ಮಾಡಲಿಲ್ಲ. ಗೊಂದಲವುಂಟುಮಾಡಲಿಲ್ಲ. ಗುರಿಗೆ ಸಂಬಂಧವಿಲ್ಲದ ಯಾವುದನ್ನು ಹೇಳಿಲ್ಲ. ಅವರು ಪರಿಶುದ್ಧವಾದ, ಮುಕ್ತ ಪರಿಪೂರ್ಣವಾದ ಧಮ್ಮವನ್ನು ವ್ಯಕ್ತಿಗೆ ಅನುಗುಣವಾಗಿ ತಿಳಿಸಿದರು.

2) ಸಂದಿಟ್ಠಕೋ : 

ಭಗವಾನರು ಧಮ್ಮವು ಅತ್ಯಂತ ಶ್ರೇಷ್ಠಕರವಾಗಿ, ಸತ್ವಭರಿತವಾಗಿರುವುದರಿಂದಲೇ ಅಲ್ಲೇ ಇಲ್ಲೇ ಮತ್ತು ಈಗಲೇ ಪ್ರಕಾಶಮಾನವಾಗಿ ಕಾಣುತ್ತದೆ. ಮೋಹದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಪ್ರಕಾಶದಿಂದ ಜಗತ್ತನ್ನು ತನ್ನನ್ನು ಅದು ಹೇಗಿದೆಯೋ ಹಾಗೆಯೇ ವಸ್ತುಸ್ಥಿತಿಯನ್ನು ತೋರಿಸುತ್ತದೆ. ಸಾಧಾರಣ ಸತ್ಯ ವಿಶ್ಲೇಶಿಸುವುದಾದರೆ ರಾಗ ದ್ವೇಷ ಮತ್ತು ಮೋಹದಿಂದ ಕೂಡಿರುವವನು ತಾನು ನೋವನ್ನು ಅನುಭವಿಸುತ್ತಾನೆ. ಪರರಿಗೂ ನೋವನ್ನು ನೀಡುತ್ತಾನೆ. ಒಂದುವೇಳೆ ಆತನು ರಾಗ ದ್ವೇಷ ಮೋಹಗಳನ್ನು ವಜರ್ಿಸಿ ತನ್ನ ಮತ್ತು ಪರರ ಕೆಡಕು ಯೋಚಿಸುವುದನ್ನು ಮಾಡುವುದನ್ನು ಮತ್ತು ಯೋಚಿಸುವುದನ್ನು ನಿಲ್ಲಿಸಿದರೆ ನೋವುರಹಿತನಾಗಿ ಭಾವೋದ್ರೇಕವಿಹೀನನಾಗಿ ಪ್ರಶಾಂತತೆಯಲ್ಲಿ ನೆಲೆಸುತ್ತಾನೆ. ಈ ರೀತಿಯಾಗಿ ಇಲ್ಲೇ ಈಗಲೇ ಸತ್ಯತೆಯನ್ನು ಕಾಣಬಹುದಾಗಿದೆ. ಅದೇರೀತಿ ಪರಮಾರ್ಥ ಸತ್ಯದಲ್ಲಿ ಹೇಳುವುದಾದರೆ ಅನಾಸಕ್ತನಾಗಿ, ಧ್ಯಾನದ ಹಂತಗಳು, ಮಾರ್ಗಫಲ ಕೊನೆಗೆ ನಿಬ್ಬಾಣ ಸಾಕ್ಷಾತ್ಕಾರ ದಿಟ್ಟಿಸುವಂತೆ ಧಮ್ಮ ಸಹಾಯಕಾರಿ ಆಗಿದೆ. ಆದ್ದರಿಂದ ಸಂದಿಟ್ಟಿಕೋ (ಸರಿಯಾಗಿ ದೃಷ್ಠಿಸಿಕೋ) ಎಂದು ಹೇಳುತ್ತಾರೆ. ಹೇಗೆ ಸಾಗರದಲ್ಲಿ ಮಹಾರತ್ನಗಳನ್ನು ಮುತ್ತುಗಳನ್ನು ನೋಡಬಹುದೋ ಹಾಗೆಯೇ ಇನ್ನಿತರ ಅಮೂಲ್ಯ ವಸ್ತುಗಳನ್ನು ಕಾಣಬಹುದೋ ಹಾಗೆಯೇ ಧಮ್ಮದಲ್ಲಿ ಅನೇಕ ಅತ್ಯಮೂಲ್ಯ ಮೌಲ್ಯಾತೀತ ವಿಷಯಗಳನ್ನು ದೃಷ್ಠಿಸಬಹುದಾಗಿದೆ. ಹೇಗೆಂದರೆ 4 ಸತಿಪಟ್ಠಾನಗಳು 4 ಸಮ್ಮಪದಾನಗಳು, 4 ಇದ್ದಿಪಾದಗಳು, 5 ಬಲಗಳು, 5 ಇಂದ್ರಿಯಗಳು, 7 ಬೋಧಿ ಅಂಗಗಳು ಮತ್ತು ಆರ್ಯ ಅಷ್ಠಾಂಗಿಕ ಮಾರ್ಗ ಇತ್ಯಾದಿಗಳನ್ನು ನಾವು ಕಾಣಬಹುದಾಗಿದೆ. ಇದು ಧಮ್ಮದಲ್ಲಿರುವ ಅದ್ಭುತವಾದ ಮತ್ತು ಅಮೋಘವಾದ ಗುಣವಾಗಿದೆ.

3) ಅಕಾಲಿಕೋ : 

ಇದರ ಅರ್ಥ ಏನೆಂದರೆ ನಿಧಾನವಿಲ್ಲದೆ ಈಗಲೇ ಫಲ ನೀಡುವಂತಹುದು ಅದಕ್ಕಾಗಿ ಕಾಲ ಕಾಯಬೇಕಿಲ್ಲ. ಇದರ ಫಲ ಈಗಲೇ ಸಿಗುತ್ತದೆ. ಉದಾ: ಹೇಳುವುದಾದರೆ ಶೀಲದಿಂದ ಕೀತರ್ಿ ಸಿಗುತ್ತದೆ. ಜ್ಞಾನದಿಂದ ಸಂಕೋಲೆಗಳು ಕತ್ತರಿಸುತ್ತದೆ. ಉದಾಹರಣೆಗೆ ಸಾರಿಪುತ್ರರಿಗೆ ಕೇವಲ 1 ವಾಕ್ಯ ಕೇಳಿದೊಡನೆಯೆ ಸೋತಪನ್ನ ಸ್ಥಿತಿ ಲಭಿಸಿತು. ಮೊಗ್ಗಲಾನವರಿಗೆ 2 ವಾಕ್ಯ ಕೇಳಿದಾಗ ಸೋತಪನ್ನ ಸ್ಥಿತಿ ಲಭಿಸಿತು. ಬಹಳಷ್ಟು ಜನರಿಗೆ ಸೋತಪನ್ನ ಸ್ಥಿತಿ ಒಂದು ಗಾಥೆಯಿಂದಲೆ ಸಿಕ್ಕಿದೆ. ಅತ್ಯುನ್ನತ ಸಾಮಥ್ರ್ಯವುಳ್ಳವರಿಗೆ ಒಂದು ಸುತ್ತ ಕೇಳುತ್ತಿದ್ದಂತೆಯೇ ಸಂಕೋಲೆಗಳು ಕಳಚಿ ಅರಹಂತರಾಗಿದ್ದಾರೆ. ಭಗವಾನರೇ ಹೇಳಿರುವ ಹಾಗೆ 7 ವರ್ಷ ಅಕ್ಷರಶಃ ಪಾಲಿಸಿದರೆ ಅವರು ಅರಹಂತರು ಅಥವಾ ಅನಾಗಾಮಿಗಳಾಗುತ್ತಾರೆ. ಆದರೆ ಅಂತಹ ದೃಢ ನಿಧರ್ಾರದಿಂದ ಕಠಿಣ ಪರಿಶ್ರಮ ಪಡುವವರು ಅತಿ ವಿರಳರಾಗಿದ್ದಾರೆ. ಬುದ್ಧರಲ್ಲಿ ಮುಕ್ತಿ ಎನ್ನುವುದು ಸಾವಿನ ನಂತರ ಸಿಗುವುದು ಅಲ್ಲ,್ಲ ಇಲ್ಲೆ ಈಗಲೇ ಸಾಧಿಸುವುದಂತಹುದು ಎಂದು ಅಕಾಲಿಕೋ ಪದ ಸ್ಪಷ್ಟಪಡಿಸುತ್ತದೆ. ಇದರ ಇನ್ನೊಂದು ಅರ್ಥವು ಏನೆಂದರೆ ಸಾರ್ವಕಾಲಿಕವಾದದ್ದು. ಒಂದು ಕಾಲಕ್ಕೆ ಸೀಮಿತವಲ್ಲದ್ದು, ಒಬ್ಬ ವ್ಯಕ್ತಿಗೆ ಸೀಮಿತವಲ್ಲದ್ದು, ಭಗವಾನರ ಬೋಧನೆ ವ್ಯಕ್ತಿಗೆ ದೇಶಕ್ಕೆ ಮತ್ತು ಕಾಲಕ್ಕೆ ಮೀರಿದ್ದು ಏಕೆಂದರೆ ಅದು ಕೇವಲ ತರ್ಕವಲ್ಲ, ಸಿದ್ಧಾಂತವಲ್ಲ, ಅದು ಸತ್ಯವಾಗಿದೆ.

4) ಏಹಿಪಸ್ಸಿಕೋ :

ಬನ್ನಿ (ಎಹಿ) ಮತ್ತು ದಶರ್ಿಸಿ (ಪಸ್ಸಿ) ಈ ಧಮ್ಮವನ್ನು ಎಂದು ಸರ್ವರನ್ನು ಪರೀಕ್ಷಿಸಲು ಆಹ್ವಾನಿಸುತ್ತದೆ. ಏಕೆಂದರೆ ಪರೀಕ್ಷಿಸಲು ಸ್ವೀಕರಿಸಲು ಮತ್ತು ಸಾಧಿಸಿ ಸಿದ್ಧಿಸಲು ಅರ್ಹವಾಗಿದೆ ಈ ಧರ್ಮ.
ನಕಲಿ ಚಿನ್ನವನ್ನು ಯಾರು ಪರೀಕ್ಷಿಸಲು ಆಹ್ವಾನಿಸುವುದಿಲ್ಲ. ಹಾಗೆಯೇ ಮಿಶ್ರ ಚಿನ್ನವುಳ್ಳವರೂ ಸಹ. ಆದರೆ ನಿಜವಾದ ಚಿನ್ನ ಹೊಂದಿರುವಾತ ಧೈರ್ಯದಿಂದ ಆಹ್ವಾನಿಸುತ್ತಾರೆ. ಚಿನ್ನವನ್ನು ಹೊಡೆದು, ಉಜ್ಜಿ, ಸುಟ್ಟು ಪರೀಕ್ಷಿಸುತ್ತಾರೆ. ಹಾಗೆಯೇ ನನ್ನ ಬೋಧನೆಯನ್ನು ಕೇವಲ ನಂಬಬೇಡಿ, ಬನ್ನಿ ಪರೀಕ್ಷಿಸಿ ಫಲಭರಿತವಾಗಿದ್ದರೆ ಸ್ವೀಕರಿಸಿ ಎಂದು ಬುದ್ಧರು ಹೇಳುತ್ತಾರೆ. ಕಾಲಾಮರ ಹತ್ತಿರದಲ್ಲಂತು ವಿಶಾಲ ಮನಸ್ಕನು ಪಕ್ಷಪಾತಿಯಾಗಿರುವುದಿಲ್ಲ. ಪಕ್ಷಪಾತಿಯರು ಸತ್ಯ ಸ್ವೀಕೃತನಲ್ಲ ಎಂಬಂತೆ ಸಂಪ್ರದಾಯವಾಗಲಿ, ಧರ್ಮಗ್ರಂಥಗಳಲ್ಲಿದೆ ಎಂದಾಗಲಿ, ಪೂಜ್ಯ ಗುರುವಿನಿಂದ ಬಂದಿದೆ ಎಂದಾಗಲಿ, ತನ್ನ ದೃಷ್ಟಿಗೆ ಸಹಮತ ಎಂದಾಗಲಿ, ಬರಿ ಹಾಗೆಂದು ತೋರುತ್ತದೆ ಎಂದಾಗಲಿ ಏನನ್ನು ಸ್ವೀಕರಿಸದಿರಿ. ನಿಮಗೆ ನೀವೇ ಪರೀಕ್ಷಿಸಿದಾಗ ಇವು ಒಳಿತು (ತನಗೆ ಮತ್ತು ಪರರಿಗೆ), ನಿಂದಾತೀತವಾದುದು ಜ್ಞಾನಿಗಳಿಂದ ಪ್ರಶಂಸಾರ್ಹವಾದುದು. ಇವನ್ನು ಆಚರಿಸಿದಾಗ ಈಗಲೂ ಮುಂದೆಯೂ, ತನಗೂ ಪರರಿಗೂ ಸುಖ ನಿಶ್ಚಯವೆನಿಸಿದಾಗ ಅದನ್ನು ಸ್ವೀಕರಿಸಿ, ಅನುಸರಿಸಿ ಎಂದು ಹೇಳಿದ್ದಾರೆ.
ಧಮ್ಮವನ್ನು ಅಥರ್ೈಸಿಕೊಂಡಾಗ ಅದರ ಉದ್ದೇಶ, ಮಾರ್ಗ, ಫಲ, ಏನೆಲ್ಲಾ ತರ್ಕ ಮತ್ತು ಅನುಭವದ ಮೂಲಕ ಶೋಧಿಸಿದಾಗ ಲೋಕಕ್ಕೆ ಬೆಳಕಾಗಲು ಅರ್ಹವಾದದ್ದು ಈ ಧಮ್ಮ ಎಂದು ಅರಿವಾಗುತ್ತದೆ. ಹಾಗೆಯೇ ಧಮ್ಮವು ಈ ರೀತಿ ಪ್ರಧಾನ ಲಕ್ಷಣಗಳಿಂದ ಕೂಡಿದೆ ಎಂದು ಅರಿವಾಗುತ್ತದೆ. ಅವು ಯಾವುದೆಂದರೆ :
(1) ಧಮ್ಮವು ಇಂದ್ರಿಯ ಭೋಗಕ್ಕಲ್ಲ ಹಾಗೆಯೇ ದೇಹದಂಡನೆಕಾರಿಯೂ ಅಲ್ಲ. (2) ಶಾಶ್ವತವಾದವು ಅಲ್ಲ ಹಾಗೆಯೇ ನಾಶವಾದವು ಅಲ್ಲ. (3) ಸಂಶಯವಾದವು ಅಲ್ಲ ಹಾಗೆಯೇ ಮೌಢ್ಯತೆಯಿಂದ (ಎಲ್ಲವನ್ನೂ) ಒಪ್ಪುವಂತಹುದು ಅಲ್ಲ (4) ಧಮ್ಮವು ನಿರಾಶವಾದವು ಅಲ್ಲ ಹಾಗೆಯೇ ಭೌತಿಕತೆಯ ಆಶಾವಾದವು ಅಲ್ಲ ಬದಲಾಗಿ ವಾಸ್ತವವಾದವಾಗಿದೆ. (5) ಧಮ್ಮವು ಗುಂಪುಗಳಲ್ಲಿ ಜಗದಲ್ಲಿ ಆನಂದಿಸುವವರಿಗಲ್ಲ ಬದಲಾಗಿ ಸ್ವಕೇಂದ್ರೀಕೃತವಾಗಿ ಸ್ವವಿಶ್ಲೇಷಿಸುವಂತಹುದು. (6) ಪೂರ್ಣವಾಗಿ ಇಹವಾದವು ಅಲ್ಲ ಹಾಗೆಯೇ ಪೂರ್ಣವಾಗಿ ಪರವಾದವೂ ಅಲ್ಲ (7) ಧಮ್ಮವು ಧರ್ಮಗಳಲ್ಲಿ ಧಾಮರ್ಿಕವಾದದ್ದು (8) ತತ್ವಗಳಲ್ಲೆ ಪರಮ ಪ್ರಾಯೋಗಿಕ ತತ್ವಶಾಸ್ತ್ರವಾಗಿದೆ (9) ಇದೊಂದು ಜ್ಞಾನದ, ಪರಿಶುದ್ಧತೆಯ ಅದ್ವಿತೀಯ ಮಹಾನ್ ಮಾರ್ಗವಾಗಿದೆ ಎಂದೆಲ್ಲಾ ಪರೀಕ್ಷಿಸಿದಾಗ ಅರಿವಾಗುತ್ತದೆ.

5) ಓಪನಯಿಕೋ : 

ಈ ಧಮ್ಮ ಊದ್ರ್ವಗಾಮಿಯಾಗಿದೆ. ಅಂದರೆ ನಿಬ್ಬಾಣಕ್ಕೆ ಕೇಂದ್ರೀಕೃತವಾದ ನಿಬ್ಬಾಣ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಲೋಕೋತ್ತರ ಮಾರ್ಗ ಮತ್ತು ಫಲಗಳು ದೊರೆತು ನಿಬ್ಬಾಣ ಸಾಧಿಸುತ್ತಾರೆ.
ಭಗವಾನರ ಧಮ್ಮವು ಯಾವುದೇ ರಹಸ್ಯವಿಲ್ಲದಂತೆ ತೆರೆದ ನೇರ ಮಾರ್ಗವಾಗಿದೆ. ಧಮ್ಮದ ಉದ್ದೇಶ ಸಂಪೂರ್ಣ ದುಃಖ ನಿರೋಧವಾಗಿದೆ. ಧಮ್ಮಾನಂದವು ಮಿಕ್ಕ ಸರ್ವ ಆನಂದಕ್ಕಿಂತ ಶ್ರೇಷ್ಠವಾಗಿದೆ. ಈ ಮಾರ್ಗದ ಅನೇಕ ವೈಶಿಷ್ಟ್ಯತೆಗಳು ಇವೆ. ಹೇಳುವುದಾದರೆ ಅತಿರೇಕವಿಲ್ಲದ ಮಾರ್ಗವಿದು. ಸಮತೋಲನದ ಮಾರ್ಗವಿದು, ಭೋಗವಿಲ್ಲದ ಮಾರ್ಗವಿದು, ದ್ವೇಷ ಒಡಕು ಇಲ್ಲದ ಮಾರ್ಗವಿದು, ಮೂಡತೆ, ಗೊಂದಲ, ಭ್ರಮೆಯಿಲ್ಲದ ಮಾರ್ಗವಿದು. ಚಿತ್ತವಿಕಾಸದ ಮಾರ್ಗವಿದು, ಶೀಲವಿಶುದ್ಧಿಯ ಮಾರ್ಗವಿದು ಹಾಗೆಯೇ ಪ್ರಜ್ಞಾ ಪೂರ್ಣತೆಯ ಮಾರ್ಗವಾಗಿದೆ. ಇದು ಲೌಕಿಕ ಲಾಭದೆಡೆಗೆ ಕೊಂಡೊಯ್ಯುವ ಮಾರ್ಗವಲ್ಲ, ಅಮರತ್ವದ (ನಿಬ್ಬಾಣ) ಹಾದಿಯೆಡೆಗೆ ಸಾಗಿಸುವ ಮಹಾನ್ ಮಾರ್ಗವಾಗಿದೆ.
ಜಗತ್ತಿನ ಸರ್ವ ಔಷಧಿಗಳಿಗಿಂತ ವಿಭಿನ್ನವಾದ ಮಿಗಿಲಾದ ಸಾಟಿಯಿಲ್ಲದ ಧಮ್ಮ ಔಷಧಿಯು ಇದಾಗಿದೆ. ಆದ್ದರಿಂದ ಭಿಕ್ಷುಗಳೇ, ಇದನ್ನು ಸೇವಿಸಿ ಆದ್ದರಿಂದ ಇದನ್ನು ಓಪನಯಿಕೊ ಎನ್ನುತ್ತಾರೆ.

6) ಪಚ್ಚತ್ತಮ ವೇದಿತಬ್ಭೋ ವಿಞ್ಞಾಹಿತಿ :

ಅಂದರೆ ಜ್ಞಾನಿಯಾದ ಪ್ರತಿಯೊಬ್ಬರಿಂದ ಅರಿಯಬಹುದಾದ ಧಮ್ಮವಾಗಿದೆ. ಅಂದರೆ ಭಗವಾನರ ಧಮ್ಮವು ಅತ್ಯಂತ ಗಂಭೀರವಾಗಿದೆ. ಅದನ್ನು ಪ್ರತಿಯೊಬ್ಬರು ಅಥರ್ೈಸಿಕೊಳ್ಳಲಾಗುವುದಿಲ್ಲ. ಯಾರು ರಾಗ ದ್ವೇಷ ಮೋಹಗಳಿಂದ ಅದ್ದಿ ಹೋಗಿರುವರೋ ಅವರಿಂದ ಅರಿಯಲಾಗುವುದಿಲ್ಲ. ಯಾರಲ್ಲಿ ರಾಗ, ದ್ವೇಷ ಮೋಹಗಳು ಕಡಿಮೆಯಿರುವುದೋ, ಯಾರು ಪ್ರಜ್ಞಾಶೀಲರೋ ನಿಷ್ಪಕ್ಷಪಾತವಾಗಿ ವಿಶ್ಲೇಷಿಸುವಂತಹವರಾಗಿರುವರೋ ಅವರು ಧಮ್ಮವನ್ನು ಕಾಣುತ್ತಾರೆ.
ಈ ಧಮ್ಮವು ಅಲ್ಪ ಇಚ್ಚುಕರಿಗೆ, ಮಹಾ ಲೋಭಿಗಳಿಗೆಲ್ಲ ಈ ಧಮ್ಮವು ಸಂತೃಪ್ತರಿಗೆ, ಅತೃಪ್ತರಿಗಲ್ಲ. ಈ ಧಮ್ಮವು ಏಕಾಂತ ಪ್ರಿಯರಿಗೆ, ಸಾಮಾಜಿಕತೆಯಲ್ಲಿ ಆನಂದಿಸುವವರಿಗಲ್ಲ. ಈ ಧಮ್ಮವು ಪ್ರಯತ್ನಶೀಲರಿಗೆ, ಸೋಮಾರಿಗಳಿಗಲ್ಲ. ಈ ಧಮ್ಮವು ಸ್ಮೃತಿವಂತರಿಗೆ, ಗೊಂದಲವುಳ್ಳ ಅಲಕ್ಷಿಗಳಿಗಲ್ಲ. ಈ ಧಮ್ಮವು ಶಾಂತಪ್ರಿಯರಿಗೆ ಭಾವವೇಶಿಗಳಿಗಲ್ಲ. ಈ ಧಮ್ಮವು ಜ್ಞಾನಿಗಳಿಗೆ, ಮೋಹಿಗಳಿಗಲ್ಲ. ಈ ಧಮ್ಮವು ನಿಖರತೆಯನ್ನು ಶುದ್ಧತೆಯನ್ನು ಪೂರ್ಣತೆಯನ್ನು ಬಯಸುವವರಿಗೆ, ಚದುರಿದ ಚಿತ್ತದಲ್ಲಿ ನಲಿಯುವ ಚಂಚಲಿಗರಿಗಲ್ಲ.
ಈ ರೀತಿ ಸಾಧಕರು ಧಮ್ಮಾನುಪಥದಲ್ಲಿ ತೊಡಗಿದ ನಿವರಣಗಳಿಂದ ರಹಿತನಾಗಿ, ಧ್ಯಾನಗಳಿಂದ ಕೂಡಿ ಸಮಾಧಿಸ್ಥನಾಗುತ್ತಾನೆ. ಈ ರೀತಿ ಧಮ್ಮಾ ಚಿಂತತೆಯಲ್ಲಿರುವಾಗ ಯಾರು ಧಮ್ಮದ ಮೇಲೆ ಅಪಾರ ಶ್ರದ್ಧಾ ಭಕ್ತಿಯಿಂದ ಹೀಗೆ ತುಂಬಿಕೊಳ್ಳುತ್ತಾನೆ. ಈ ರೀತಿ ಶ್ರೇಷ್ಠತ್ವ ತೋರಿಸಿದ ಬೋಧಿಸಿದ ಸ್ಫೂತರ್ಿ ತುಂಬಿಸಿದ, ಈ ರೀತಿ ಘನತೆಯಿಂದ ಕೂಡಿದ, ಶ್ರೇಷ್ಠ ಆಚರಣೆಯಿಂದ ಕೂಡಿ, ಶ್ರೇಷ್ಠತ್ವ ಪ್ರಾಪ್ತಿ ಮಾಡಿದ, ಶ್ರೇಷ್ಠಚಿತ್ತದಿಂದ ಕೂಡಿದ, ಮಹಾ ಪರಮ ಬೋಧಿ ಜ್ಞಾನದಿಂದ ಕೂಡಿದ, ಮತ್ತೊಬ್ಬರನ್ನು ನಾನು ಕಾಣೆ ಎಂದು ಭಕ್ತಿಯಿಂದ ಆನಂದಿಸುತ್ತಾನೆ. ಭಯ ಚಿಂತೆಗಳಿಂದ ಮುಕ್ತನಾಗುತ್ತಾನೆ. ಅಪಾರ ಸಹನೆಯುಳ್ಳವನಾಗಿ ಭವಿಷ್ಯಕ್ಕೆ ಸಿದ್ಧನಾಗುತ್ತಾನೆ. ಧಮ್ಮದಲ್ಲೆ ಆನಂದಿತವಾಗಿ ಸದಾ ಧಮ್ಮಾನಂದನಾಗುತ್ತಾನೆ. ಬಹುಬೇಗ ನೇರ ಸಮ್ಮ ದೃಷ್ಟಿಯುಳ್ಳವನಾಗುತ್ತಾನೆ. ಮುಕ್ತಿ ಪಥದಲ್ಲಿ ತೀವ್ರತೆಯಿಂದ ಚಲಿಸುವವನಾಗುತ್ತಾನೆ.
ಯಾರು ಧಮ್ಮದ ಆನಂದ ಸುಖವನ್ನು ಸೇವಿಸಿರುವರೋ ಅವರು ಉಪಶಾಂತ ಚಿತ್ತವನ್ನು ಹೊಂದಿ ಸುಖಿಸುವರು. ಆರ್ಯ (ಬುದ್ಧ)ರಿಂದ ಬೋಧಿತವಾದ ಧಮ್ಮದಲ್ಲೇ ಪಂಡಿತರು (ಜ್ಞಾನಿ) ಸದಾ ರಮಿಸುವರು.
ಈ ಅನುಸ್ಸತಿಯಿಂದಾಗಿ ಸಾಮಿಪ್ಯ (ಉಪಚರ) ಸಮಾಧಿ ದೊರೆಯುತ್ತದೆ ಮತ್ತು ಸೋತಪನ್ನರೂ ಆಗುವರು.
ಇದರ ಫಲವನ್ನು ಈಗಲೇ ಅಥವಾ 5 ದಿನ, 7 ದಿನ ಅಥವಾ ಹೆಚ್ಚೆಂದರೆ
ಈ ಧಮ್ಮವು ಜ್ಞಾನಿಗಳಿಗೆ, ಆದರೆ ಇದು ಮುರ್ಖರ ಕ್ಷೇತ್ರವಲ್ಲ.
ಈ ಧಮ್ಮವು ಬಹು ಚೆನ್ನಾಗಿ ವಿವರಿಸಲ್ಪಟ್ಟಿದೆ, ಏಕೆ? ಏಕೆಂದರೆ ಇದು ಇಲ್ಲಿಯೇ ಈಗಲೇ ಕಾಣುತ್ತದೆ. ಇದು ಇಲ್ಲಿಯೇ ಈಗಲೇ ಏಕೆ ಕಾಣುತ್ತದೆ ಎಂದರೆ ಇದು ಕಾಲವಿಳಂಬವಿಲ್ಲದೆ ತಕ್ಷಣ ಫಲ ನೀಡಿದೆ. ಏತಕ್ಕಾಗಿ ಇದು ಕಾಲವಿಳಂಬವಾಗಿಲ್ಲ ಎಂಬುದಕ್ಕೆ ಉತ್ತರವೇ ಬನ್ನಿ ಪರೀಕ್ಷಿಸಿ ಎಂದು ಆಹ್ವಾನಿಸಿರುವುದು ಮತ್ತು ಯಾವುದು ಪರೀಕ್ಷಿಸಲು ಆಹ್ವಾನಿಸಲಾಗಿದೆಯೋ ಅದು ಊಧ್ರ್ವ (ನಿಬ್ಬಾಣ) ಗಾಮಿಯಾಗಿದೆ.
ಎಲ್ಲಿಯವರೆಗೆ ಹೀಗೆ ಒಬ್ಬನು ಧಮ್ಮದ ಸದ್ಗುಣಗಳನ್ನು ಹೀಗೆ ಧ್ಯಾನಿಸುತ್ತಾನೋ ಆಗ ಆ ಸಂದರ್ಭದಲ್ಲಿ ಆತನ ಮನಸ್ಸು ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಕೂಡಿರಲಾರದು. ಧಮ್ಮದ ಸ್ಫೂತರ್ಿಯಿಂದ ಆತನ ಮನಸ್ಸು ಆಗ ಋಜುವಾಗಿ ನೇರವಾಗಿರುತ್ತದೆ.
ಯಾವಾಗ ಒಬ್ಬನು ನಿಜಕ್ಕೂ ಪ್ರಾಜ್ಞನಾಗಿರುತ್ತಾನೋ
ಆತನ ನಿರಂತರ ಕಾರ್ಯ ನಿಜಕ್ಕೂ ಧಮ್ಮಾನುಸ್ಸತಿಯಾಗಿರುತ್ತದೆ.
ಆತನು ಅಂತಹ ಬೃಹತ್ ಪ್ರಚನ್ನತೆಗೆ ಧನ್ಯತೆ ಪಡೆದಿರುತ್ತಾನೆ.

***********************************************************

3. ಸಂಘಾನುಸ್ಸತಿ


ಬುದ್ಧ ಭಗವಾನರ ಶಿಷ್ಯರುಗಳಾದಂತಹ ಯಾರು
ಹಗಲು ಮತ್ತು ರಾತ್ರಿ ನಿರಂತರವಾಗಿ ಸಂಘಾನುಸತಿ
(ಸಂಘದ ಸದ್ಗುಣಗಳ ಕುರಿತು ಧ್ಯಾನ) ಅಭ್ಯಾಸ
ಮಾಡುವರೋ ಅವರುಗಳು ಸದಾ ಎಚ್ಚೆತ್ತ ಸುಖದಲ್ಲಿ ಇರುವರು.
ಇದು ಸಂಘಾನುಸತಿಯ ಮಹೋನ್ನತೆಯನ್ನು ತಿಳಿಸುವಂತಹ ಗಾಥೆಯಾಗಿದೆ. ಸಂಘಾನುಸತಿಯನ್ನು ಆಚರಣೆ ಮಾಡುತ್ತಿರುವವರು ಅನೇಕ ಲಾಭಗಳನ್ನು ಪಡೆಯುತ್ತಾರೆ. ಮೊದಲಿಗೆ ಸಂಘವೆಂದರೆ ಬುದ್ಧ ಭಗವಾನರ ಶಿಷ್ಯರ ಸಮೂಹ. ಅಂದರೆ ಆಚರಣೆಯಿಂದ ಕೂಡಿದ ಸಂಘ. ಇಲ್ಲಿ ಭಿಕ್ಷುಗಳು ಅಥವಾ ಉಪಾಸಕರು ಅರಹಂತ ಗುರಿಗೆ ಬದ್ಧರಾಗಿ ಶೀಲ, ಸಮಾಧಿ ಮತ್ತು ಪ್ರಜ್ಞಾವನ್ನು ಪೂರ್ಣಗೊಳಿಸುತ್ತಾರೆ. ಅಂತಹವರಲ್ಲಿ ಕೆಲವರು ಅರಹಂತರು, ಕೆಲವರು ಅನಾಗಾಮಿ, ಕೆಲವರು ಸಕದಾಗಾಮಿ ಮತ್ತು ಕೆಲವರು ಸೋತಪನ್ನರಾಗುತ್ತಾರೆ. ಉಳಿದವರು ಈ ನಾಲ್ಕು ಹಂತಗಳ ಮಾರ್ಗದಲ್ಲಿ ಕ್ರಮಿಸುತ್ತಾರೆ. ಈ ಸಮೂಹಕ್ಕೆ ಸಂಘ ಎನ್ನುವರು. ಇವರಲ್ಲಿ ಸೋತಪನ್ನ ಕನಿಷ್ಠ ಮೂರು ಬಂಧನ ಕತ್ತರಿಸಿರುತ್ತಾರೆ. ಅರಹಂತರು ಎಲ್ಲಾ ಬಂಧನಗಳನ್ನು ಕತ್ತರಿಸಿರುತ್ತಾರೆ. ಅರಹಂತರಿಗೆ ಮರುಜನ್ಮವೇ ಇಲ್ಲ. ಸೋತಪನ್ನಾಗೆ ಏಳು ಜನ್ಮ ಮಾತ್ರ ಇರುತ್ತದೆ. ಉಳಿದವರಿಗೆ ಒಂದು ಜನ್ಮ ಮಾತ್ರ ಇರುತ್ತದೆ.
ಯಾರು ಸಂಘಾನುಸತಿ ಭಾವನ ಸಿದ್ಧಿಸಲು ಸಿದ್ಧರಿರುವರೋ ಅವರು ನಿಶಬ್ದ, ನಿರ್ಜನ ಪ್ರದೇಶದಲ್ಲಿದ್ದು ಪದ್ಮಾಸನಲ್ಲಿ ಆಸೀನರಾಗಿ, ಅಕುಶಲ ಯೋಚನೆಗಳನ್ನು ದೊರಕಿಸಿ ಸಂಘದ ಮಹೋನ್ನತ ಗುಣಗಳನ್ನು ಈ ರೀತಿ ಧ್ಯಾನಿಸುತ್ತಾರೆ.
ಸುಪಟಿಪನ್ನೊ ಭಗವತೋ ಸಾವಕಸಂಘೋ
ಉಜುಪಟಿಪನ್ನೊ ಭಗವತೋ ಸಾವಕಸಂಘೋ
ಞಾಯ ಪಟಿಪನ್ನೋ ಭಗವತೋ ಸಾವಕಸಂಘೋ
ಸಾಮಿಚಿ ಪಟಿಪನ್ನೋ ಭಗವತೋ ಸಾವಕಸಂಘೋ
ಆಹುನೆಯ್ಯೋ, ಪಾಹುನೆಯ್ಯೋ, ದಕ್ಷಿನೆಯ್ಯೋ
ಅಂಜಲಿಕರಣಯ್ಯೋ, ಅನುತ್ತರಂ ಪುಣ್ಯಕ್ಖೇತ್ತಂ ಲೋಕಸ್ಸಾತಿ
ಇದರ ಅರ್ಥ ಹೀಗಿದೆ :
ಭಗವಾನರ ಶ್ರಾವಕ ಸಂಘವು ಒಳ್ಳೆಯ ದಾರಿಯಲ್ಲಿ ಹೋಗುತ್ತಿದೆ
ಭಗವಾನರ ಶ್ರಾವಕ ಸಂಘವು ಋಜುವಿನ (ನೇರವಾದ) ದಾರಿಯಲ್ಲಿ. ಹೋಗುತ್ತಿದೆ.
ಭಗವಾನರ ಶ್ರಾವಕ ಸಂಘವು ನ್ಯಾಯವಾದ (ನಿಜ/ಸತ್ಯ) ದಾರಿಯಲ್ಲಿ ಹೋಗುತ್ತಿದೆ.
ಭಗವಾನರ ಶ್ರಾವಕ ಸಂಘವು ಸಮಂಜಸವಾದ ದಾರಿಯಲ್ಲಿ ಹೋಗುತ್ತಿದೆ.
ನಾಲ್ಕು ವ್ಯಕ್ತಿಗಳ ಜೋಡಿಗಳಿಂದ ಮತ್ತು ಅಷ್ಟ ವ್ಯಕ್ತಿಗಳಿಂದ ಕೂಡಿರುವುದೇ ಭಗವಾನರ ಶ್ರಾವಕ ಸಂಘವಾಗಿದೆ. ಈ ಪವಿತ್ರವಾದ ಸಂಘವು ದಾನಕ್ಕೆ ಅರ್ಹವಾಗಿದೆ, ಆತಿಥ್ಯಕ್ಕೆ ಅರ್ಹವಾಗಿದೆ, ದಕ್ಷಣೆಗೆ (ಸಮರ್ಪಣೆ) ಅರ್ಹವಾಗಿದೆ. ಅಂಜಲಿಬದ್ಧರಾಗಿ ಅನುತ್ತರವಾದ ಪುಣ್ಯಕ್ಷೇತ್ರವಾಗಿದೆ.
ಇಲ್ಲಿ ಭಗವಾನರ ಸಂಘವು ಒಳ್ಳೆಯ ದಾರಿಯಲ್ಲಿ, ಋಜುವಿನ ದಾರಿಯಲ್ಲಿ ನ್ಯಾಯ (ಸತ್ಯ)ವಾದ ದಾರಿಯಲ್ಲಿ ಮತ್ತು ಸಮಂಜಸವಾದ ದಾರಿಯಲ್ಲಿ ಹೋಗುತ್ತಿದೆ ಎಂತಿದೆ.
ಇಲ್ಲಿ ಒಳ್ಳೆಯ ಅಂದರೆ ಸಮ್ಮ ಪಟಪದ ಅಂದರೆ ಯೋಗ್ಯವಾದ ಧಮ್ಮದ ಹಾದಿಯಲ್ಲಿಹರು ಅಂದರೆ ಧಮ್ಮ ಮತ್ತು ವಿನಯದ ಹಾದಿಯಲ್ಲಿದ್ದಾರೆ. ಆದ್ದರಿಂದ ಅವರಿಗೆ ಸಪಟಿಪನ್ನೊ ಅಂದರೆ ಸಾಧನೆಯಲ್ಲಿ, ಸುಹಾದಿಯಲ್ಲಿ ಹೋಗುವವರು ಎನ್ನುತ್ತಾರೆ.
ಋಜುವಿನ ಹಾದಿ ಎಂದರೆ ಶೀಲದ ಹಾಗು ಮಧ್ಯಮವರ್ಗದ ಅತಿರೇಕವಿಲ್ಲದ ನೇರವಾದ ಹಾದಿಯಲ್ಲಿಹರು ಎಂದರ್ಥ. ನ್ಯಾಯವಾದ (ಸತ್ಯದ) ಹಾದಿಯಲ್ಲಿಹರು ಎಂದರೆ ನಿಬ್ಬಾಣದ ಕಡೆ ನಿಜವಾಗಿಯೂ ಕೊಂಡೊಯ್ಯುವ ಹಾದಿಯಲ್ಲಿದಾರೆ ಎಂದು ಅರ್ಥವಾಗಿದೆ. ಸಮಂಜಸ ಮಾರ್ಗದಲ್ಲಿ ಹೋಗುವವರು ಎಂದರೆ ಯೋಗ್ಯವಾದ ವ್ಯಕ್ತಿಗಳಿಂದ ಕೂಡಿರುವಂತಹ ಮಾರ್ಗವಾಗಿದೆ.
ಶ್ರಾವಕ ಎಂದರೆ ಕೇಳುವವರು ಅಂದರೆ ಬುದ್ಧರ ಬೋಧನೆಯಂತೆ ಕೇಳಿ ನಡೆಯುವವರು ಎಂದು ಅರ್ಥ.
ನಾಲ್ಕು ವ್ಯಕ್ತಿಗಳ ಜೋಡಿ ಎಂದರೆ ಅಥವಾ ಅಷ್ಟ ವ್ಯಕ್ತಿಗಳೆಂದರೆ :
ಅರಹಂತರಾಗಿರುವವರು ಮತ್ತು ಆ ಮಾರ್ಗದಲ್ಲಿ ಇರುವವರು
ಅನಾಗಾಮಿ ಮತ್ತು ಆ ಮಾರ್ಗದಲ್ಲಿ ಇರುವವರು
ಸಕದಾಗಾಮಿ ಮತ್ತು ಆ ಮಾರ್ಗದಲ್ಲಿ ಇರುವವರು
ಸೋತಪನ್ನ ಮತ್ತು ಆ ಮಾರ್ಗದಲ್ಲಿ ಇರುವವರು
ಈ ರೀತಿ ಇರುವವರು ಲೋಭ, ದ್ವೇಷ, ಮೋಹದಿಂದ ಮುಕ್ತರಾಗಿರುತ್ತಾರೆ. ಹಾಗು ಜನ್ಮದಿಂದಲೇ ಮುಕ್ತರಾಗಿರುತ್ತಾರೆ. ಅಂತಹವರಿಗೆ ಮಾಡುವ ಗೌರವ ಅದರಲ್ಲೂ ಅಂಜಲಿಬದ್ಧರಾಗಿ (ಕಣ್ಣೀರಿನಿಂದ ತುಂಬಿದ ಭಕ್ತಿಯಿಂದ, ಹೃದಯದಿಂದ ತುಂಬಿದ ಅಪಾರ ಭಕ್ತಿಯಿಂದ) ವಂದಿಸುವುದು ಸಹಾ ಪುಣ್ಯಕಾರ್ಯವಾಗಿದೆ. ಇನ್ನೂ ಅವರಿಗೆ ದಾನ, ಸಮರ್ಪಣೆ ಹಾಗು ಅತಿಥ್ಯ ನೀಡುವುದು ನಿಜಕ್ಕೂ ಪುಣ್ಯಕಾರ್ಯವಾಗಿದೆ.
ಅದಕ್ಕೆ ಸಂಬಂಧಿಸಿದಂತೆ ಒಂದು ಗಾಥೆಯಿದೆ.
ಯಾರು ಪೂಜ್ಯಾರ್ಹರಾದವರನ್ನು, ಬುದ್ಧರನ್ನು ಅಥವಾ ಅವರ ಶ್ರಾವಕರನ್ನು ಪೂಜಿಸುವರೋ, ಪ್ರಪಂಚದ ತಡೆಗಳನ್ನು ದಾಟಿ ಶೋಕ ಸಂಕಟಗಳಿಂದ ಪಾರಾದ, ಮುಕ್ತರಾದ, ಶಾಂತ ಸ್ವರೂಪಿಗಳನ್ನು, ಭಯವಿಲ್ಲದವರನ್ನು ಯಾರು ಪೂಜಿಸುವರೋ ಅವರು ಗಳಿಸಿದ ಪುಣ್ಯವನ್ನು ಯಾವುದರಿಂದಲೂ ಅಳೆಯಲು ಸಾಧ್ಯವಿಲ್ಲ.
ಹೀಗಾಗಿ ಅವರು ಲೋಕದಲ್ಲಿ ಅನುತ್ತರ ಪುಣ್ಯಕ್ಷೇತ್ರವಾಗಿದ್ದಾರೆ.
ಹೀಗೆ ಆತನು ಸಂಘದ ಸದ್ಗುಣಗಳನ್ನು ಧ್ಯಾನಿಸಿದಾಗ, ಆತನಲ್ಲಿ ಪಂಚನಿವರಣಗಳು ನಶಿಸುತ್ತದೆ. ಧ್ಯಾನಂಗಗಳು ಕೂಡಿ ಉಪಚರ ಸಮಾಧಿ ಪ್ರಾಪ್ತಿಯಾಗುತ್ತದೆ.

ಆತನಿಗೆ ಈ ಕೆಳಕಂಡ ಲಾಭಗಳಾಗುತ್ತದೆ :

1. ಆತನು ಗೌರವ, ನೀಡುವವನು ಆಗುತ್ತಾನೆ.
2. ಶ್ರದ್ಧೆಯು ಹೆಚ್ಚಾಗುತ್ತದೆ ಮತ್ತು ದಾನಿಯು ಆಗುತ್ತಾನೆ.
3. ಆನಂದ ಮತ್ತು ಸುಖವನ್ನು ಗಳಿಸುತ್ತಾನೆ.
4. ಭಯವನ್ನು ಗೆಲ್ಲುತ್ತಾನೆ.
5. ಅಪಾಯಗಳಿಂದ ಪಾರಾಗುತ್ತಾನೆ.
6. ನೋವುಗಳ ಸಹನಾಶೀಲತೆ ವೃದ್ಧಿಯಾಗುತ್ತದೆ.
7. ಆತನು ಸಂಘದ ಜೊತೆ ವಾಸ ಮಾಡಿರುವಂತೆ ಅನುಭವವಾಗುತ್ತದೆ.
8. ಪಾಪಲಜ್ಜೆ, ಪಾಪಭಯ, ಹಾಗು ಶೀಲವು ವೃದ್ಧಿಯಾಗುತ್ತದೆ.
9. ಸುಗತಿ ಪ್ರಾಪ್ತಿಯಾಗುತ್ತದೆ.
ಇದು ಸಂಘಾನುಸತಿಯಾಗಿದೆ
ಯಾವಾಗ ಮಾನವನು ನಿಜಕ್ಕೂ ಪ್ರಾಜ್ಞನಾಗುವನೋ ಆತನ ನಿರಂತರ ಚಟುವಟಿಕೆ ಖಂಡಿತವಾಗಿಯೂ ಸಂಘಾನುಸ್ಸತಿಯಾಗಿದೆ. ಅಂತಹ ಮಹಾ ಪ್ರಾಜ್ಞತೆಯಿಂದ ಧನ್ಯನಾಗುತ್ತಾನೆ.

************************************************************************

4. ಶೀಲಾನುಸ್ಸತಿ

ಶ್ರೀಗಂಧ ತಗರಗಳ ಸುಗಂಧವು ಅಲ್ಪಮಾತ್ರದ್ದು, ಆದರೆ ಶೀಲವಂತನ ಗುಣಗಂಧವು (ಅತ್ಯಂತ ಶ್ರೇಷ್ಠವಾದುದು) ಉತ್ತಮೋತ್ತಮವಾದುದು. ಅದು ದೇವತೆಗಳಲ್ಲೂ ಹರಡಿ ಹಬ್ಬುವಂಥದ್ದು.
ಇದೇರೀತಿ ಹಲವಾರು ಗಾಥೆಗಳನ್ನು, ಸುತ್ತಗಳನ್ನು, ಶೀಲದ ಬಗ್ಗೆ ನಾವು ಓದುತ್ತೇವೆ. ಶೀಲದ ಮಹತ್ವ ಅಂತಹುದು. ಶೀಲವಂತರು ಮಾತ್ರ ಮಾನವರಾಗಿದ್ದಾರೆ. ಉಳಿದವರು ಮಾನವ ಶರೀರಧಾರಿಗಳು ಮಾತ್ರ ಅಷ್ಟೆ.
ಬೌದ್ಧ ಧ್ಯಾನಗಳು ಅತ್ಯಂತ ಶ್ರೇಷ್ಟಕರ. ಏಕೆಂದರೆ ಇವು ಏಕಾಗ್ರತೆ ಮತ್ತು ಶಾಂತಿಯನ್ನಷ್ಟೇ ನೀಡುವುದಿಲ್ಲ. ಇವು ಸದ್ಗುಣಗಳನ್ನು ನಿಮರ್ಾಣ ಮಾಡುತ್ತವೆ.
ಉದಾಹರಣೆಗೆ :
ಶೀಲಾನುಸ್ಸತಿಯಿಂದ ಮಾನವ ಶೀಲವಂತನಾಗುತ್ತಾನೆ.
ತ್ಯಾಗನುಸತಿಯಿಂದ ಮಾನವ ದಾನಿಯಾಗುತ್ತಾನೆ.
ಅಶುಭಾ ಧ್ಯಾನದಿಂದ ಮಾನವ ವಿರಾಗಿಯಾಗುತ್ತಾನೆ.
ಮೆತ್ತಾ ಧ್ಯಾನದಿಂದ ಮಾನವ ನಿಸ್ವಾರ್ಥ ಪ್ರೀತಿಯುಳ್ಳವನಾಗುತ್ತಾನೆ.
ಕರುಣಾ ಧ್ಯಾನದಿಂದ ಅನುಕಂಪವುಳ್ಳವನಾಗುತ್ತಾನೆ.
ಮುದಿತಾ ಧ್ಯಾನದಿಂದ ಅನಸೂಯಪರನಾಗುತ್ತಾನೆ.
ಉಪೇಕ್ಷಾ ಧ್ಯಾನದಿಂದ ಸಮಚಿತ್ತತೆವುಳ್ಳವನಾಗುತ್ತಾನೆ.
ವಿಪಶ್ಶನ ಧ್ಯಾನದಿಂದ ನಿಜವಾದ ಜ್ಞಾನಿಯಾಗುತ್ತಾನೆ ಮತ್ತು ವಿಮುಕ್ತನಾಗುತ್ತಾನೆ.
ಶೀಲನುಸ್ಸತಿಯು ಮಾನವನನ್ನು ಸುಶೀಲನನ್ನಾಗಿಯು, ಶಿಸ್ತುಬದ್ಧನಾಗಿಯು ಮಾಡುತ್ತದೆ.
ಇಲ್ಲಿ ಸಾಧಕನು ನಿಶ್ಶಬ್ದ, ನಿರ್ಜನ ವಾತಾವರಣದಲ್ಲಿ, ಪದ್ಮಾಸನಬದ್ಧನಾಗಿ ತನ್ನ ಶೀಲಗಳನ್ನು ಧ್ಯಾನಿಸುತ್ತಾನೆ. ನನ್ನಲ್ಲಿ ಯಾವ ಯಾವ ಶೀಲಗಳು ಇರಬೇಕಿತ್ತು? ಯಾವ ಯಾವ ಶೀಲಗಳಿವೆ. ನಾನು ಯಾವ ಶೀಲಗಳನ್ನು ಅಭಿವೃದ್ಧಿಗೊಳಿಸದ್ದೇನೆ? ಕಷ್ಟಪಟ್ಟು ಯಾವ ಶೀಲಗಳನ್ನು ನಾನು ಸ್ಥಾಪಿಸಿರುವೆನು. ಈ ಜನ್ಮದಲ್ಲಿ ನಾನು ಯಾವ ಶೀಲಗಳನ್ನು ಸಹಜವಾಗಿ ಪಡೆದಿರುವೆನು? ಯಾವ ಶೀಲಗಳು ಇನ್ನೂ ಸ್ಥಾಪಿಸಬೇಕಾಗಿದೆ? ನಾನು ಎಷ್ಟು ಕ್ಷಿಪ್ರವಾಗಿ ಈ ಶೀಲಗಳನ್ನು ಸಾಧಿಸಬಲ್ಲೆ? ಶೀಲಗಳಿಗೋಸ್ಕರ ನಾನು ಏನೆಲ್ಲವನ್ನು ತ್ಯಾಗ ಮಾಡಿದೆ. ಶೀಲಗಳಿಗೋಸ್ಕರ ನಾನು ಎಷ್ಟು ಸಂಕಷ್ಟಗಳನ್ನು ಅನುಭವಿಸಿದೆ. ಅಂತಹ ಸಂದರ್ಭದಲ್ಲಿ ನಾನು ಆ ಶೀಲವನ್ನು ಮುರಿದಿಲ್ಲ. ಇಂತಹ ಸಂದರ್ಭದಲ್ಲಿ ನಾನು ಈ ಶೀಲವನ್ನು ಮಲಿನವಾಗಲು ಬಿಡಲಿಲ್ಲ. ಈ ರೀತಿಯಾಗಿ ನಾನು ನಿಜಕ್ಕೂ ಧನ್ಯ ! ಧನ್ಯನೇ ಸರಿ ಎಂದೆಲ್ಲಾ ಚಿಂತಿಸುತ್ತಾನೆ.
ನಾನು ಶೀಲಗಳನ್ನು ಅಭಂಗವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಅಛಿದ್ರವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಕಲೆರಹಿತವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಅಮಲಿನವಾಗಿ ಪಾಲಿಸಿದ್ದೇನೆ
ನಾನು ಶೀಲಗಳನ್ನು ಅಖಂಡವಾಗಿ ಪಾಲಿಸಿದ್ದೇನೆ ಎಂದು ಆನಂದಿಸುತ್ತಾನೆ.
ಶೀಲಗಳನ್ನು ಅಛಿದ್ರವಾಗಿ ಪಾಲಿಸುವುದೆಂದರೆ ಸಣ್ಣ ತಪ್ಪುಗಳನ್ನು ಮಾಡದಿರುವುದು, ಮಧ್ಯದಲ್ಲಿ ತಪ್ಪು ಮಾಡದಿರುವುದು.
ಶೀಲಗಳನ್ನು ಕಲೆರಹಿತ, ಮಲಿನರಹಿತ ಪಾಲಿಸುವುದು ಎಂದರೆ ಮನಸ್ಸಿನಲ್ಲೂ ರಾಗ, ದ್ವೇಷ, ಲೋಭ, ಮೋಹಗಳನ್ನು ನುಸುಳಲು ಅವಕಾಶ ನೀಡದೆ ಪಾಲಿಸುವುದು.
ಸ್ವತಂತ್ರವಾಗಿ ಶೀಲಗಳನ್ನು ಪಾಲಿಸುವುದೆಂದರೆ, ಸ್ವಯಿಚ್ಛೆಯಿಂದ ನಾನು, ನನ್ನದು ಎಂದು ಅಹಂಕಾರ ಮತ್ತು ಮಮಕಾರ ಇಲ್ಲದೆ, ಲೋಭವಿಲ್ಲದೆ, ಯಾವುದೇ ವಿರೋಧಭಾಸವಿಲ್ಲದೆ, ಯಾವುದೇ ಮಿಥ್ಯಾ ದೃಷ್ಟಿಯಿಲ್ಲದೆ ಪಾಲಿಸುವುದು.
ಆತನು ಅತ್ಯಂತ ಸಣ್ಣ ತಪ್ಪನ್ನು ಸಹಾ ಮಾಡದೆ, ನಿರಂತರ ಅಖಂಡಶೀಲ ಪಾಲಿಸುತ್ತಾನೆ, ಅಂತಹ ಸಣ್ಣ ತಪ್ಪಿಗೂ ಹೆದರುತ್ತಾನೆ. ಜ್ಞಾನಿಗಳ ಪ್ರಶಂಸೆಗೆ ಪಾತ್ರನಾಗುತ್ತಾನೆ).
ಆತನ ಶೀಲವು, ಧ್ಯಾನಕ್ಕೂ ಸಹಕಾರಿಯಾಗುತ್ತದೆ. ಅಂದರೆ ನಿವರಣಗಳ ನಾಶವು ಆಗಿರುತ್ತದೆ.
ಈ ರೀತಿಯಾಗಿ ಶೀಲಗಳನ್ನು ಧ್ಯಾನಿಸುತ್ತಾ ಆತನು ಆನಂದದಿಂದ, ಸುಖದಿಂದ ಕೂಡಿ, ಪಂಚನಿವರಣಗಳಿಂದ ಮುಕ್ತವಾಗಿ ಉಪಚರ ಸಮಾಧಿಯನ್ನು ಪಡೆಯುತ್ತಾನೆ.

ಆತನು ಈ ಲಾಭಗಳನ್ನು ಪಡೆಯುತ್ತಾನೆ.

1. ಆತನು ಶಿಕ್ಷಣವನ್ನು (ಶೀಲ ಶಿಕ್ಷಣ, ಶಿಸ್ತು) ಗೌರವಿಸುತ್ತಾನೆ.
2. ಸಹಶೀಲವಂತರ ಜೊತೆ ವಾಸಿಸುತ್ತಾನೆ.
3. ಯೋಗ್ಯ ವಿಷಯದಲ್ಲಿ ಆತನ ಯತ್ನಶೀಲತೆ ಸ್ವಾಗತನೀಯವಾಗುತ್ತದೆ.
4. ಆತನು ಸ್ವನಿಂದನ ಭಯದಿಂದ ಪಾರಾಗುತ್ತಾನೆ, ಪರಲೋಕದ ಭಯದಿಂದ ಮುಕ್ತ.
5. ಸಣ್ಣ ತಪ್ಪಿನಲ್ಲೂ ಭಯ ಕಾಣುವವನು ಆಗುತ್ತಾನೆ.
6. ಶ್ರದ್ಧೆಯಿಂದ, ಶೀಲದಿಂದ ಕೂಡಿರುತ್ತಾನೆ.
7. ಸುಖ, ಆನಂದವನ್ನು ಪಡೆಯುತ್ತಾನೆ.
8. ಸುಗತಿಯನ್ನು ಪ್ರಾಪ್ತಿ ಮಾಡುತ್ತಾನೆ.
ನಿಜವಾದ ಜ್ಞಾನಿಯು ಶೀಲಾನುಸ್ಸತಿಯಲ್ಲಿ ಆನಂದಿಸುತ್ತಾನೆ.
ಅಂತಹ ಬೃಹತ್ ಪ್ರಚ್ಚನ್ನಶಾಲಿಯು ಧನ್ಯನೇ ಸರಿ.
ಇದು ಶೀಲಾನುಸ್ಸತಿಯಾಗಿದೆ.
 ****************************************************************************

5. ತ್ಯಾಗನುಸ್ಸತಿ


ಹೇಗೆ ಪುಷ್ಪರಾಶಿಗಳಿಂದ ಅನೇಕ ಬಗೆಯ ಮಾಲೆಗಳನ್ನು ರಚಿಸಬಹುದೋ ಹಾಗೆಯೇ ಜನ್ಮಿಸಿ-ಮೃತ್ಯುವಪ್ಪುವ ಮನುಜನು ಸಹಾ ಕುಶಲ ಕಾರ್ಯಗಳನ್ನು ಬಹುವಾಗಿ ಮಾಡಬಹುದು
ದಾನ ಗುಣವನು ಪ್ರೋತ್ಸಾಹಿಸುವಂತಹ ಧಮ್ಮಪದದ ಗಾಥೆಯಿದು. ಬುದ್ಧ ಭಗವಾನರು ಲೋಕವನ್ನು ನಾಲ್ಕು ಗುಣಗಳು ಕಾಪಾಡುತ್ತದೆ ಎನ್ನುತ್ತಾರೆ. ಅವೆಂದರೆ: ಸುವಾಚ, ಶೀಲ, ಸಮದಶರ್ಿತ್ವ ಮತ್ತು ದಾನ.
ನಿಜಕ್ಕೂ ದಾನ ಗುಣವು ಪರಮೋತ್ತರವಾದುದು. ಈ ದಾನಿಯು ತನ್ನ ದಾನಗಳಿಂದ ಸಂತೃಪ್ತನಾಗಿ ಅವುಗಳನ್ನು ಪುನರ್ ಅವಲೋಕಿಸುತ್ತಾನೆ. ಮತ್ತೆ ಮತ್ತೆ ಚಿಂತಿಸುತ್ತಾನೆ, ಆನಂದಿಸುತ್ತಾನೆ.  ದೃಢವಾದ ಏಕಾಗ್ರತೆ ಪಡೆದು ಪಂಚ ನಿವರಣಗಳಿಂದ ಮುಕ್ತನಾಗುತ್ತಾನೆ. ಉಪಚರ ಸಮಾಧಿ ಪಡೆಯುತ್ತಾನೆ.
ತ್ಯಾಗಾನುಸ್ಸತಿಯು ಕೇವಲ ದಾನಿ ಮಾಡುವಂತಹುದು. ಅಂದರೆ ಮೊದಲು ದಾನ ನೀಡುವವನು ಆಗಿ ನಂತರ ದಾನದ ಬಗ್ಗೆ ಧ್ಯಾನ ಮಾಡಬೇಕಾಗುತ್ತದೆ. ಆ ಪುನರ್ ಅವಲೋಕನ ಮತ್ತು ಭವಿಷ್ಯದ ಲಾಭ ಅರಿತು ವರ್ತಮಾನದಲ್ಲಿ ಕ್ಲೇಷಮುಕ್ತನಾಗಿ ಸದಾ ಆನಂದದ ರಸದಲ್ಲೇ ಜೀವಿಸುವ ಸುಮಧುರ ಚಿಂತನೆಯೇ ತ್ಯಾಗನುಸ್ಸತಿಯಾಗಿದೆ.
ಯಾರು ತ್ಯಾಗಾನುಸ್ಸತಿ ಮಾಡಲು ಸಿದ್ಧರಾಗಿರುವವರೋ ಅವರು ನಿರ್ಜನ, ನಿಶ್ಶಬ್ದ ವಾತಾವರಣದಲ್ಲಿ, ಪದ್ಮಾಸನಬದ್ಧನಾಗಿ ಕುಳಿತು ಹಿಂದೆ ತಾನು ಮಾಡಿರುವ ದಾನಗಳನ್ನು ನೆನೆಯುತ್ತ ಆನಂದಿತನಾಗುತ್ತಾನೆ, ಅವುಗಳನ್ನು ಗಾಢವಾಗಿ, ಏಕಾಗ್ರವಾಗಿ ನೆನೆಯುತ ಆನಂದವನ್ನು ವೃದ್ಧಿಸುತ್ತಾನೆ. ನಿಜಕ್ಕೂ ದಾನವು ಪ್ರಶಂಸನೀಯ! ದೇವತೆಗಳ ಬಳಿ ತಲುಪಿಸುವಂತಹ, ಪುರುಷೋತ್ತಮನನ್ನಾಗಿ ಮಾಡುವಂತಹ, ನನ್ನದೆನ್ನುವ ತೃಷ್ಣೆಯನ್ನು ನಾಶಮಾಡುವ, ನಾನು ಎಂಬ ಅಹಂಕಾರನ್ನು ಸ್ತಬ್ದಗೊಳಿಸುವಂತಹ ಈ ಜಗತ್ತೆ ಶ್ರೇಷ್ಠ, ಸುಖಕರ, ಈ ಇಂದ್ರೀಯ ಭೋಗಗಳು ಸುಖ ಮತ್ತು ಈ ಐಶ್ವರ್ಯವೇ ಸರ್ವಸ್ವ ಎಂಬ ಮಿಥ್ಯತೆಯನ್ನು ಮೌಢ್ಯತೆಯನ್ನು ನಾಶಮಾಡುವ ದಾನಗುಣ ನಿಜಕ್ಕೂ ಶ್ರೇಷ್ಠ ಹಾಗು ಶ್ರೇಯಸ್ಕರವಾದುದು. ನಾನು ಪ್ರತಿನಿತ್ಯ ದಾನ ಮಾಡುತ್ತಿರುವೆ, ಮುಂದೆಯು ಮಾಡುವೆನು. ನನ್ನ ಬಳಿ ಬರಿಗೈಯಿಂದ ಯಾರು ಹೋಗಬಾರದು. ನಾನು ಹಿಂದೆಯು ಸ್ವಾರ್ಥವನ್ನು ದಮಿಸಿದ್ದೇನೆ ಹಾಗು ನನ್ನದೆನ್ನುವ ಐಶ್ವರ್ಯ, ಹಣ, ಆಹಾರ, ಬಟ್ಟೆ, ವಸತಿ, ಔಷಧ, ಎಲ್ಲವನ್ನೂ ನೀಡಿದ್ದೇನೆ.
ನಾನು ಹಲವಾರು ಜನರಿಗೆ, ಪ್ರಾಣಿಗಳಿಗೆ ಅಭಯ ನೀಡುವೆನು. ನನ್ನ ಶರೀರವನ್ನು ಸಹ ನಾನು ಶಿಬಿಯಂತೆ ದಾನ ಮಾಡುವೆ, ನಾನು ವಸ್ಸಂತರ ಬೋಧಿಸತ್ವರಂತೆ ನನ್ನ ಸರ್ವಸ್ವ ಧಾನಗೈಯುವೆ. ಅನಾಥ ಪಿಂಡಕರಂತೆ ಸಂಘಕ್ಕೆ ಆಧಾರನಾಗಿರುವೆ, ಅನಾಥ ಬಂಧುವಾಗುವೆ.
ನಾನು ಆಮಿಷದಾನ ಮಾಡಿರುವೆ.
ನಾನು ಅಭಯದಾನ ಮಾಡಿರುವೆ, ಮುಂದೆಯೂ ಮಾಡುವೆ
ನಾನು ಧಮ್ಮದಾನ ಮಾಡಿರುವೆ, ಮುಂದೆಯೂ ಮಾಡುವೆ
ನಾನು ಧಾನಾಧಿಪತಿ ಆಗುವೆ.
ನನ್ನನ್ನು ಕೇಳುವ, ಕೇಳದೆಯಿರುವ ಎಲ್ಲರನ್ನು ಸಹಾಯ ಮಾಡುವೆ, ಮಾಡಿರುವೆ, ಯಾರು ಭಿಕ್ಷುಗಳಿಗೆ, ಬಡವರಿಗೆ ಆಹಾರ ಪ್ರತಿದಿನ ದಾನ ನೀಡುವರೋ ಅವರು ಮಾನವರಾಗಿ ಅಥವಾ ದೇವತೆಗಳಾಗಿ ಹುಟ್ಟುವರು. ಹೀಗಾಗಿ ನಾನು ಅತ್ಯಂತ ಧನ್ಯನಾಗಿರುವೆ. ನಾನು ಲೋಭಮುಕ್ತನಾಗಿರುವೆ. ದಾನಿಯು ಸರ್ವಜನ ಪ್ರಿಯನಾಗುವನು.
ನಾನು ಲೋಭವಿಲ್ಲದೆ, ದ್ವೇಷವಿಲ್ಲದೆ, ಮೋಹವಿಲ್ಲದೆ ದಾನ ಮಾಡಿರುವೆ. ನಾನು ಲೋಭರಹಿತರಿಗೆ, ದ್ವೇಷರಹಿತರಿಗೆ, ಮೋಹರಹಿತರಿಗೆ ದಾನ ಮಾಡಿರುವೆ. ನನಗೆ ಇದು ಅತ್ಯಂತ ಲಾಭಕಾರಿಯಾಗಿದೆ. ನಾನು ನಿಜಕ್ಕೂ ಧನ್ಯ !
ನಾನು ನಿಜಕ್ಕೂ ಧನ್ಯ ಎಂದು ಗಾಢವಾಗಿ ಆನಂದಿಸುತ್ತಾ ಚಿಂತಿಸುತ್ತಾನೆ. ಹಾಗು ಉಪಚರ ಸಮಾಧಿ ಹೊಂದುತ್ತಾನೆ.

ತ್ಯಾಗಾನುಸತಿಯ ಲಾಭಗಳು :

1. ಪರಮಾನಂದ ಪಡೆಯುತ್ತಾನೆ.
2. ಸ್ವಾರ್ಥರಹಿತನಾಗುತ್ತಾನೆ.
3. ಸರ್ವಜನಪ್ರಿಯನಾಗುತ್ತಾನೆ.
4. ಪರರಿಗೆ ಹೆದರುವುದಿಲ್ಲ.
5. ಮೆತ್ತಾ ಮುದಿತಾ ಮತ್ತು ಕರುಣ ಧ್ಯಾನ ಗಳಿಸುತ್ತಾನೆ.
6. ಧ್ಯಾನ ಗಳಿಸುತ್ತಾನೆ.
7. ಸುಗತಿ ಪ್ರಾಪ್ತಿಯಾಗುತ್ತದೆ.
ಈಗ ಮಾನವ ನಿಜಕ್ಕೂ ಜ್ಞಾನಿಯಾಗಿದ್ದರೆ, ಆತನ ನಿರಂತರ ಕೆಲಸವು ತ್ಯಾಗಾನುಸ್ಸತಿಯಾಗಿದೆ. ನಿಜಕ್ಕೂ ಅಂತಹ ಬೃಹತ್ ಗುಣಶಾಲಿಗಳು ಧನ್ಯರೇ ಸರಿ!)
ಇದು ತ್ಯಾಗಾನುಸ್ಸತಿಯಾಗಿದೆ.
 *********************************************************************************

6. ದೇವತಾನುಸ್ಸತಿ

ಸತ್ಯವನ್ನೇ ನುಡಿ, ಕೋಪಿಸಿಕೊಳ್ಳಬೇಡ, ಯಾಚಕರಿಗೆ ಸ್ವಲ್ಪವಾದರೂ ದಾನಮಾಡು, ಈ ಮೂರು ಕ್ರಮಗಳಿಂದ ಒಬ್ಬನು ದೇವತೆಗಳ ಹತ್ತಿರ ಹೋಗುವನು - ಧಮ್ಮಪದ 224
ದೇವತೆಗಳ ಬಳಿ ಹೋಗಬಲ್ಲ ಹಾಗು ಅದಕ್ಕೆ ಬೇಕಾದ ಗುಣಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಹೇಳಿದೆ. ಮಾನವರು ಶ್ರದ್ಧೆ, ಶೀಲ, ದಾನ, ಕಲಿಕೆ ಮತ್ತು ಪ್ರಜ್ಞಾದಿಂದ ಈ ಪುಣ್ಯಗಳಿಂದ ದೇವತೆಗಳಾಗುವರು. ಇಲ್ಲಿ ಸಾಧಕ ಆ ಸದ್ಗುಣಗಳನ್ನು ತನ್ನಲ್ಲಿ ವೃದ್ಧಿಸುತ್ತಾ, ನೆನೆಯುತ್ತಾ ದೇವತೆಗಳನ್ನು ನೆನೆಯುತ್ತಾನೆ. ಹಂತ ಹಂತದಲ್ಲಿರುವ ಆ ದೇವತೆಗಳನ್ನು ನೆನೆಯುತ್ತಾನೆ. ಏಕಾಗ್ರತೆ ಹೊಂದುತ್ತಾನೆ. ಇದೇ ದೇವತಾನುಸ್ಸತಿಯಾಗಿದೆ.
ಇಲ್ಲಿ ಸಾಧಕನು ತೊಂದರೆಯಾಗದಂತಹ, ನಿರ್ಜನ, ನಿಶ್ಶಬ್ದ ವಾತಾವರಣದಲ್ಲಿ ಪದ್ಮಾಸನದಲ್ಲಿ ಕುಳಿತು, ಅಕುಶಲ ಯೋಚನೆಗಳನ್ನು ದೂರೀಕರಿಸಿ ಈ ರೀತಿ ಚಿಂತಿಸುತ್ತಾನೆ ಚತುರ್ ಮಹಾರಾಜಿಕ ದೇವತೆಗಳಿದ್ದಾರೆ, ತಾವತಿಂಸ ದೇವತೆಗಳಿದ್ದಾರೆ, ತುಸಿತಾ ದೇವತೆಗಳಿದ್ದಾರೆ, ನಿಮರ್ಾಣರತಿ ದೇವತೆಗಳಿದ್ದಾರೆ, ಪರನಿಮರ್ಾಣರತಿ ದೇವತೆಗಳಿದ್ದಾರೆ, ಬ್ರಹ್ಮ ದೇವತೆಗಳಿದ್ದಾರೆ ಮತ್ತು ಬೇರೆಯ ರೀತಿಯ ದೇವತೆಗಳಿದ್ದಾರೆ. ಇವರೆಲ್ಲರ ಬಳಿ ಶ್ರದ್ಧೆ, ಶೀಲ, ಧ್ಯಾನ, ಕಲಿಯುವಿಕೆ, ಪ್ರಜ್ಞಾ ಗುಣವು ಇದ್ದು ಈಗ ಅವುಗಳ ಫಲದಿಂದ ದೇವತೆಗಳಾಗಿದ್ದಾರೆ. ನನ್ನಲ್ಲೂ ಸಹಾ ಆ ಗುಣಗಳಿವೆ. ನಾನು ಆ ಗುಣಗಳನ್ನು ವೃದ್ಧಿಸುವೆ.
ಹೀಗೆ ಆತನು ಚಿಂತಿಸುತ್ತಾ ರಾಗ, ದ್ವೇಷ ಮತ್ತು ಮೋಹಗಳಿಂದ ದೂರವಾಗುತ್ತಾನೆ. ಆತನ ಮನಸ್ಸು ಉನ್ನತವಾಗಿ ಧಮ್ಮವನ್ನು ಅರಿಯುತ್ತಾನೆ, ಆನಂದಿತನಾಗುತ್ತಾನೆ, ಸುಖದಿಂದ ಕೂಡಿರುತ್ತಾನೆ, ಶಾಂತನಾಗುತ್ತಾನೆ. ಏಕಾಗ್ರತೆಯನ್ನು ಪಡೆಯುತ್ತಾನೆ ಹಾಗು ಉಪಚಾರ ಸಮಾಧಿ ಪಡೆಯುತ್ತಾನೆ.

ಲಾಭಗಳು:

1. ಭಿಕ್ಷುವು ದೇವತೆಗಳಿಗೆ ಪ್ರಿಯನಾಗುತ್ತಾನೆ. ಅವರಿಂದ ರಕ್ಷಣೆ ಪಡೆಯುತ್ತಾನೆ.
2. ಶ್ರದ್ಧೆಯುಳ್ಳವನಾಗುತ್ತಾನೆ.
3. ಆನಂದ, ಶಾಂತತೆ ವೃದ್ಧಿಯಾಗುವುದು.
4. ಸುಗತಿ ಪ್ರಾಪ್ತಿ ಮಾಡಿಕೊಳ್ಳುತ್ತಾನೆ.
ಈ ಮಾನವ ನಿಜಕ್ಕೂ ಪ್ರಜ್ಞಾನಾದರೆ, ನಿರಂತರ ದೇವತಾನುಸ್ಸತಿ ಮಾಡಲಿ ಅಂತಹುದರಿಂದ ಧನ್ಯವಾಗಲಿ.
ಇದು ದೇವತಾನುಸ್ಸತಿಯಾಗಿದೆ
ಶ್ರದ್ಧೆ, ಶೀಲ, ಕಲಿಯುವಿಕೆ ಹಾಗು ಪ್ರಜ್ಞೆ
ಪರಿಣ್ಣಕ ಕಥಾ/ಸಮಾನ್ಯ (ಅಧ್ಯಾಯದ ಅನುಬಂಧ)
ಅಂತಹ ಸಂದರ್ಭದಲ್ಲಿ ಭಗವಾನರಲ್ಲಿ ಸ್ಫೂತರ್ಿಗೊಂಡು ಆತನ ಮನಸ್ಸು ಋಜುವಾಗಿ, ನೇರವಾಗಿರುತ್ತದೆ. ಹೀಗೆ ಹೇಳಿದ ಭಗವಾನರು ನಂತರ ಹೀಗೆ ಮುಂದುವರಿಸಿದರು: ಮಹಾನಾಮ, ಯಾವಾಗ ಅಂತಹ ಉದಾತ್ತ ಶಿಷ್ಯನ ಚಿತ್ತವು ನೇರವಾಗಿ ಋಜುತ್ವದಲ್ಲಿರುವುದೋ, ಆಗ ಆತನಿಗೆ ಅರ್ಥವೂ ಸ್ಫೂತರ್ಿ ನೀಡುತ್ತದೆ, ಧಮ್ಮವು ಸ್ಫೂತರ್ಿ ನೀಡುತ್ತದೆ ಮತ್ತು ಧಮ್ಮಪಾಲನೆಯು ಆನಂದ ನೀಡುತ್ತದೆ. ಯಾವಾಗ ಆತನು ಆನಂದಿತನಾಗುತ್ತಾನೋ ಆತನಲ್ಲಿ ಸುಖವೂ ಹುಟ್ಟುತ್ತದೆ. (ಅಂಗುತ್ತರನಿಕಾಯ  ........).
ಯಾವಾಗ ದೇವತಾನುಸ್ಸತಿಯಲ್ಲಿ ತೊಡಗುತ್ತಾನೋ ಆಗ ದೇವತೆಗಳಿಂದ ಸ್ಫೂತರ್ಿ ಪಡೆಯುತ್ತಾನೆ.... ಸುಖವೂ ಹುಟ್ಟುತ್ತದೆ.
ಈ ಆರು ಅನುಸ್ಸತಿಗಳು ಕೇವಲ ಉದಾತ್ತ ಶಿಷ್ಯರಲ್ಲಿಯೇ ಯಶಸ್ವಿಯಾಗುತ್ತದೆ. ಅವರು ಶೀಲದಲ್ಲಿ ಅಖಂಡರಾಗಿ, ದಾನದಲ್ಲಿ ಸ್ವಾರ್ಥರಹಿತರಾಗಿ, ದೇವತೆಗಳ ಬಗ್ಗೆ ಶ್ರದ್ಧಾವಂತರಾಗಿರುತ್ತಾರೆ.
ಮಹಾನಾಮ ಸುತ್ತದಲ್ಲಿ ಇದರ ಬಗ್ಗೆ ವಿವರವಾದ ಉಲ್ಲೇಖವಿದೆ. ಹಾಗೆಯೇ ಗೆಥ ಸುತ್ತದಲ್ಲಿಯು ಆರ್ಯ ಶ್ರಾವಕರು ಅನುಸ್ಮೃತಿಗಳ ಮೂಲಕವಾಗಿಯೇ ಚಿತ್ತಶುದ್ಧಿಗೊಳಿಸುವನೆಂದು ಹೀಗೆ ಹೇಳಲಾಗಿದೆ: ಭಿಕ್ಖುಗಳೇ, ಇಲ್ಲಿ ಆರ್ಯ ಶಿಷ್ಯನು ಬುದ್ಧರನ್ನು ಕುರಿತು ಹೀಗೆ ಚಿಂತನೆ ಮಾಡುವನು: ಭಗವಾನರು ಅರಹಂತರು... ಆತನ ಮನಸ್ಸು ಆ ಸಂದರ್ಭದಲ್ಲಿ ಸ್ಥಿರವಾಗಿರುತ್ತದೆ, ಸತ್ಪಥದಲ್ಲಿರುತ್ತದೆ ಹಾಗು ಆತನ ಮನಸ್ಸು ಎಲ್ಲಾಬಗೆಯ ಆಸೆಗಳಿಂದ ಮುಕ್ತವಾಗಿರುತ್ತದೆ. ಹಲವಾರು ಜೀವಿಗಳು ಈ ಹಂತದಲ್ಲಿ ಶುದ್ಧಿಯನ್ನು ಹೊಂದುತ್ತವೆ.
ಸಂಬಾಧೂಕಾಪ ಸುತ್ತದಲ್ಲಿ ಮಹಾಕಚ್ಚಾನರು ಹೀಗೆ ಬೋಧಿಸಿದ್ದಾರೆ: ಇದು ಅದ್ಭುತ ಮಿತ್ರರೇ, ಇದು ಆಶ್ಚರ್ಯಕರ. ಏನೆಂದರೆ, ಜನಜಂಗುಳಿಯಲ್ಲಿನ ಗೃಹಸ್ಥರು ಸಹಾ ತೆರೆದ ಆಕಾಶದ ಸಾಕ್ಷಾತ್ಕಾರ ಪಡೆಯುವಿಕೆಯನ್ನು ಭಗವಾನರು ಹೀಗೆ ಸಂಶೋಧಿಸಿದ್ದಾರೆ. ಜೀವಿಗಳ ಪರಿಶುದ್ಧಿಗಾಗಿ, ದುಃಖ ವಿಲಾಪಗಳ ದಾಟುವಿಕೆಗಾಗಿ, ನೋವು-ಶೋಕಗಳ ಕೊನೆಗಾಗಿ, ನಿಬ್ಬಾಣದ ಸಾಕ್ಷಾತ್ಕಾರಕ್ಕಾಗಿ ಆರು ಸ್ಮೃತಿಗಳನ್ನು ನೀಡಿದ್ದಾರೆ. ಅವು ಯಾವುವೆಂದರೆ: ಬುದ್ಧಾನುಸತಿ.... ದೇವತಾನುಸ್ಸತಿ... ಹಲವಾರು ಜೀವಿಗಳು ಈ ವಿಧವಾಗಿಯು ಪರಿಶುದ್ಧರಾಗುತ್ತಾರೆ.
ಅಷ್ಟೇ ಅಲ್ಲ, ಉಪೋಸತ ಸುತ್ತದಲ್ಲಿಯೂ, ಈ ಅನುಸ್ಸತಿಗಳ ಬಗ್ಗೆ ಹೀಗೆ ನುಡಿದಿದ್ದಾರೆ: ವಿಶಾಖಾ, ಆರ್ಯರ ರೀತಿಯಲ್ಲಿ ಉಪೋಸಥವು ಹೇಗಿರುತ್ತದೆ? ಅದು ಮಾನಸಿಕ ಅಪೂರ್ಣತೆಗಳನ್ನು ಕ್ರಮವಾಗಿ ಸ್ತಬ್ಧಗೊಳಿಸುವಂತಿರುತ್ತದೆ. ಅವು ಹೇಗೆಂದರೆ, ಇಲ್ಲಿ ಆರ್ಯ ಶಿಷ್ಯನು ಹೀಗೆ ಅನುಸ್ಸತಿಗಳನ್ನು ಮಾಡುತ್ತಾನೆ....
ಹಾಗೆಯೇ ಅಂಗುತ್ತರನಿಕಾಯದ 11ನೇ ಗ್ರಂಥದಲ್ಲಿಯೂ ಹೀಗಿದೆ: ಭಂತೆ, ನಾವು ಯಾವ ವಿಧವಾಗಿ, ಯಾರು ಹಲವಾರು ಮಾರ್ಗಗಳಲ್ಲಿ ನೆಲಸುವರೋ ಹಾಗೆ ವಿಹರಿಸುವುದು?
ಮಹಾನಾಮ, ಯಾರು ಶ್ರದ್ಧಾವಂತನೊ, ಆತನು ಯಶಸ್ವಿಯಾಗಿರುತ್ತಾನೆ ಹೊರತು ಅಶ್ರದ್ಧಾವಂತನಲ್ಲ. ಹಾಗೆಯೇ ಯಾರು ವಿರಿಯಾವಂತನೋ, ಸ್ಮೃತಿವಂತನೋ, ಯಾರು ಸಮಾಧಿವಂತನೋ, ಯಾರು ಪ್ರಜ್ಞಾಜೀವಿಯೋ ಅವರುಗಳು ಯಶಸ್ವಿಗಳಾಗಿರುತ್ತಾರೆ ಹೊರತು ಹೀನವೀರ್ಯರು, ಸ್ಮೃತಿಹೀನರೂ, ಸಮಾಧಿರಹಿತರೂ, ಅಪ್ರಾಜ್ಞರು ಅಲ್ಲ. ಹೇಗೆ ಐದು ವಿಷಯಗಳಲ್ಲಿ ಸ್ಥಾಪನೆಯಾಗಿರುವವರು, ಆರು ಅನುಸ್ಸತಿಗಳನ್ನು ಅಭ್ಯಸಿಸಬೇಕು ಅವೇ ಬುದ್ಧಾನುಸ್ಸತಿ... ದೇವತಾನುಸ್ಸತಿ.
ಯಾರು ಅನುಸ್ಸತಿಗಳಲ್ಲಿ ತಲ್ಲೀನರೋ ಅವರ ನಿವರಣಗಳು ತೊರೆದುಹೋಗುತ್ತವೆ. ಆನಂದವು ಪ್ರವಾಹದಂತೆ ಹರಿದಾಡುತ್ತದೆ. ಅಲ್ಲಿಯೇ ಒಳನೋಟವನ್ನು ಜಾಗೃತಿಗೊಳಿಸಿದರೆ ಆತನು ಅರಹಂತನೂ ಆಗಬಲ್ಲನು. ಹೇಗೆಂದರೆ ಥೇರ ಪುಸ್ಸದೇವ ಪಡೆದಂತೆ.
ಥೇರ ಪುಸ್ಸದೇವನು ಮಾರನ ಶಕ್ತಿಯಿಂದ ಸೃಷ್ಟಿಯಾದ ಬುದ್ಧಾಕೃತಿಯನ್ನು ನೋಡಿದನು. ಆಗ ಆತನು ಹೀಗೆ ಚಿಂತನೆ ಮಾಡಿದನು: ಈ ಮಾರನ ಸೃಷ್ಠಿಯಾದ ಈ ಭಗವಾನರ ರೂಪವು ಅದೆಷ್ಟು ಸುಂದರವಾಗಿದೆ. ಮಾರನಲ್ಲಿ ಲೋಭ, ದ್ವೇಷ ಹಾಗು ಮೋಹವಿದ್ದು ಇಷ್ಟು ಸುಂದರವಾಗಿದೆ. ಇನ್ನು ಸಾಕ್ಷಾತ್ ಭಗವಾನರು ಹೇಗೆ ಕಾಣಬಹುದು? ಭಗವಾನರಂತು ಲೋಭರಹಿತರು, ದ್ವೇಷರಹಿತರು ಹಾಗು ಮೋಹರಹಿತರಾಗಿದ್ದಾರೆ. ಅವರು ಇನ್ನೆಷ್ಟು ಸುಂದರವಾಗಿ ಶಾಂತವಾಗಿ ಕಾಣಬಲ್ಲರು... ಹೀಗೆಯೇ ಆತನು ಭಗವಾನರ ನೈಜಾಕೃತಿಯಲ್ಲಿ ಚಿತ್ತವನ್ನು ನೆಲೆಸಿ, ಆನಂದದಿಂದ ತುಂಬಿಹೋಗಿ ಹಾಗೆಯೇ ಮುಂದುವರೆಯುತ್ತಾ ಅರಹಂತತ್ವ ಪ್ರಾಪ್ತಿಮಾಡಿದನು.

ಸಜ್ಜನರ ಆನಂದಕ್ಕಾಗಿ, ವಿಶುದ್ಧಿ ಮಾರ್ಗದ ಸಮಾಧಿಯ ವಿಕಾಸದ
7ನೇಯ ಅಧ್ಯಾಯವಾದ ಆರು ಅನುಸ್ಸತಿಗಳ ನಿದರ್ೆಶವು ಇಲ್ಲಿಗೆ ಮುಗಿಯಿತು 

No comments:

Post a Comment