Thursday 12 April 2018

visuddhi magga ವಿಶುದ್ಧಿಮಾರ್ಗದ ಸಮಾಧಿ ಭಾಗದ ಅಧ್ಯಾಯ 9 ಬ್ರಹ್ಮವಿಹಾರ ನಿದ್ದೇಸ

ಅಧ್ಯಾಯ 9

ಬ್ರಹ್ಮವಿಹಾರ ನಿದ್ದೇಸ

1. ಮೆತ್ತ (ಮೈತ್ರಿ)


ಬ್ರಹ್ಮ ಎಂದರೆ ಶ್ರೇಷ್ಠ ಎಂದರ್ಥ. ಅತ್ಯುತ್ತಮ ಎಂದೂ ಅರ್ಥವಿದೆ. ವಿಹಾರ ಎಂದರೆ ವಿಹರಿಸುವುದು, ನೆಲೆಸುವುದು ಮತ್ತು ಬ್ರಹ್ಮ ದೇವತೆಗಳ ಮನಸ್ಸು. ಇದೇ ರೀತಿಯಲ್ಲಿ ವತರ್ಿಸುವುದರಿಂದ ಇದನ್ನು ಬ್ರಹ್ಮವಿಹಾರ ಎನ್ನುತ್ತಾರೆ.
ಇವು ನಿಜವಾಗಿ ಮನುಷ್ಯನನ್ನು ಮಾನವನನ್ನಾಗಿ ಮಾಡುತ್ತದೆ ಅಷ್ಟೇ ಅಲ್ಲದೆ, ಅವನನ್ನು ಬ್ರಹ್ಮತ್ವಕ್ಕೆ ಕರೆದೊಯ್ಯುತ್ತದೆ. ಇವನ್ನು ಸೀಮಾತೀತವಾದುದು ಮತ್ತು ಅಳೆಯಲಾಗದಂತಹುದು ಎನ್ನುತ್ತಾರೆ. ಇವು ನಾಲ್ಕು ಇರುವುದರಿಂದ 4 ಬ್ರಹ್ಮವಿಹಾರ ಎನ್ನುತ್ತಾರೆ.
1. ಮೆತ್ತಾ  2. ಕರುಣಾ  3. ಮುದಿತಾ   4. ಉಪೇಕ್ಖಾ.
ಇದು ನಿಜಮಿತ್ರನ ಲಕ್ಷಣ ಹೊಂದಿರುವುದರಿಂದ ಇದನ್ನು ಮೆತ್ತ ಎನ್ನುತ್ತಾರೆ. ಮೃದುತೆ ಹೊಂದಿರುವುದರಿಂದ ಮೆತ್ತಾ ಎನ್ನುತ್ತಾರೆ.
ಮೆತ್ತಾದ ಲಕ್ಷಣ ಏನೆಂದರೆ ಪರಹಿತ, ಪರಸುಖ ಕಾಮನ, ಅಂದರೆ ಸರ್ವರ ಹಿತ ಬಯಸುವಿಕೆಯಾಗಿದೆ. ಇದರ ಕ್ರಿಯೆ ಏನೆಂದರೆ ಸರ್ವರ ಕ್ಷೇಮವನ್ನು ಆಯ್ಕೆ ಮಾಡುವುದು. ಇದರ ತತ್ಕ್ಷಣದ ಕಾರಣ ಪ್ರಿಯರಾದವರನ್ನು ನೋಡುವುದು. ಇದರ ಶತ್ರು ದ್ವೇಷವಾಗಿದೆ, ಅದನ್ನು ಜಯಿಸಿದಾಗಲೇ ಮೆತ್ತ ಭಾವನದಲ್ಲಿ ವಿಜಯಿಯಾಗುತ್ತದೆ. ಮೆತ್ತಾದ ಪರೋಕ್ಷ ಶತ್ರು ಪ್ರೇಮ ಮತ್ತು ವಾತ್ಸಲ್ಯವಾಗಿದೆ. ಈ ಪರೋಕ್ಷ ಶತ್ರುವಿನಿಂದ ಸೋಲುವ ಸಾಧ್ಯತೆಯು ಇರುತ್ತದೆ. ಮೆತ್ತಾ ಧ್ಯಾನವು ಜಯಶಾಲಿಯಾಗಬೇಕಾದರೆ ಮೊದಲು ದ್ವೇಷವನ್ನು, ಕ್ರೋಧವನ್ನು ಜಯಿಸಬೇಕು.

ದ್ವೇಷ ಜಯಕ್ಕೆ ಸಹಾಯಕಾರಿ ಗಾಥೆಗಳು :

1. ಸಹನೆಗಿಂತ ಮಿಗಿಲಾದ ಶಿಸ್ತಿನ ನಿಯಮವಿಲ್ಲ, ಸಹನೆಯು ತಪಗಳಲ್ಲೇ ಶ್ರೇಷ್ಠವಾದುದು. ಸಹನೆಗಿಂತ ಮಿಗಿಲಾದ ಶ್ರೇಷ್ಠತ್ವ ಇನ್ನೊಂದಿಲ್ಲ. ಯಾರ ಬಲವು ಸಹನೆಯೋ ಆತನೇ ಶ್ರೇಷ್ಠ (ಬ್ರಾಹ್ಮಣ) ಎಂದೆಲ್ಲಾ ಸಹನೆಯ ಬಗ್ಗೆ ಮೌಲ್ಯ ಅರಿತು ಸಹನಶೀಲರಾಗುವುದು.
2. ಬುದ್ಧರ ವಾಣಿಯನ್ನು ನೆನೆಯುತ್ತಾ ಸಾಧಕರೇ, ನಿಮ್ಮನ್ನು ಡಕಾಯಿತರು ಗರಗಸದಿಂದ ತುಂಡು ತುಂಡಾಗಿ ಕತ್ತರಿಸಿದರೂ, ಯಾರ ಮನಸ್ಸು ದ್ವೇಷದಿಂದ ಕೂಡಿಲ್ಲವೊ, ಆತನು ಮಾತ್ರ ನನ್ನ ಬೋಧನೆ ಪಾಲಿಸುತ್ತಿದ್ದಾನೆ ಮತ್ತು ನೀವೇನಾದರೂ ಈಗ ಕೋಪ ಹೊಂದಿದ್ದೇ ಆದರೆ, ನೀವು ನನ್ನ ಬೋಧನೆ ಅನುಸರಿಸುತ್ತಿಲ್ಲ. ಕೋಪಿಯನ್ನು ಕೋಪದಿಂದ ಜಯಿಸಲು ಹೋದರೆ ನೀವೇ ಪರಮ ನೀಚರಾಗುವಿರಿ ಮತ್ತು ಜಯಿಸಲು ಕಠಿಣವಾದ ನಿಜ ಯುದ್ಧದಲ್ಲಿ ಸೋಲುವಿರಿ. ನಿಮ್ಮ ಶತ್ರು ಆನಂದ ತಾಳುವ ಕಾರ್ಯ ಮಾಡುತ್ತಿದ್ದೀರಿ. ನೀವು ಮರದ ತುಂಡಿನ ಸಮಾನರಾಗುವಿರಿ.
3. ನಾವು ಪರರಿಗೆ ಏನನ್ನು ಇಚ್ಛಿಸುತ್ತೇವೆಯೋ ಅವೆಲ್ಲಾ ನಮಗೆ ಮರಳಿ ದೊರೆಯುತ್ತವೆ. ಚಂಡಿನಂತೆ ಪುಟಿಯುತ್ತವೆ. ಪರರಿಗೆ ಕೆಟ್ಟದ್ದನ್ನು ಇಚ್ಛಿಸಿದರೆ ನಮಗೆ ಕೆಟ್ಟದಾಗುತ್ತದೆ. ಎಂದು ಕರ್ಮ ನಿಯಮ ಅರಿಯುವುದು.
4. ಮಾನವರಲ್ಲಿ ಏನಾದರೂ ಒಂದು ಒಳ್ಳೆಯ ಗುಣ ಇದ್ದೇ ಇರುತ್ತದೆ. ಅದನ್ನು ನೆನೆಯುತ್ತಾ ಮೈತ್ರಿಯನ್ನು ತೋರಿ.
5. ಏನೂ ಒಳ್ಳೆಯ ಗುಣವಿಲ್ಲದಿದ್ದರೆ ಆತನ ಮುಂದಿನ ಗತಿ ಅತ್ಯಂತ ಭೀಕರ ಎಂಬುದು ತಿಳಿದು ಆತನಲ್ಲಿ ಮೈತ್ರಿಯನ್ನು ತೋರಿ.
6. ಈ ಕೋಪದಿಂದ ನಮ್ಮ ಸದ್ಗುಣದ ಬೇರುಗಳೆಲ್ಲಾ ಅಲ್ಲಾಡುತ್ತವೆ. ಅಲ್ಪಕ್ಕಾಗಿ ಅಪಾರ ಪುಣ್ಯ ಸಂಪತ್ತು ಕಳೆಯಲು ನಾವು ಮೂರ್ಖರಾಗಬೇಕೆ?
7. ಪರರು ನೀಚ ಕೃತ್ಯ ಮಾಡುತ್ತಿದ್ದಾರೆ. ಅವರಂತೆ ನೀವು ವತರ್ಿಸಿ ಆತನ ಹಿಂಬಾಲಕ ಅಥವಾ ತದ್ರೂಪಿ ಆಗಲು ಬಯಸುವಿರಾ?
8. ಯಾವ ಕೋಪದ ಕಾರಣ ಪರರು ನೀಚರಾಗುತ್ತಾರೋ ಅಂತಹ ಕೋಪವನ್ನು ನವು ದಮನಿಸಬಾರದೇಕೆ?
9. ಅವರು ಮಾಡಿದ ಕರ್ಮಕ್ಕೆ ಅವರಿಗೆ ಫಲ ದೊರೆಯುತ್ತದೆ.  ನೀವೇನಾದರೂ ಮಧ್ಯೆ ಪ್ರವೇಶಿಸಿದರೆ ನೀವು ಕರ್ಮ ಫಲದಲ್ಲಿ ಭಾಗಿಯಾಗುತ್ತೀರಿ.
10. ದ್ವೇಷಿಯು ಸದ್ಗುಣವನ್ನು ಹಿಡಿಯಲಾರ. ಆತನಿಗೆ ಸತ್ಯ ನೋಡುವ ಬಯಕೆಯು ಇಲ್ಲ. ಯಾವಾಗ ದ್ವೇಷವು ಮಾನವನ ಮನಸ್ಸನ್ನು ಆವರಿಸುವುದೋ ಆಗ ಬಲಿಷ್ಠವಾದ ಕತ್ತಲೆಯು, ಅಜ್ಞಾನವು ಆಳ್ವಿಕೆ ನಡೆಸುತ್ತದೆ.
11. ಅತ್ಯಂತ ಕಡುಕಷ್ಟದ ಪರಿಸ್ಥಿತಿಯಲ್ಲೂ ಬೋಧಿಸತ್ವರು ಕೋಪಿಸಲಿಲ್ಲ, ಹಿಂಸಿಸಲಿಲ್ಲ. ಆದರ್ಶವಾಗಿ ಅವರನ್ನು ಮುಂದಿಟ್ಟು ನಾನು ಮೈತ್ರಿ ಪಾಲಿಸುವೆ.
12. ಯಾರು ದ್ವೇಷಿಯನ್ನು ದ್ವೇಷದಿಂದ ಪರಿವರ್ತನೆ ಮಾಡುವನೋ ಆತ ಮೊದಲನೆಯವನಿಗಿಂತ ನೀಚ. ಯಾರು ದ್ವೇಷಿಗೆ ದ್ವೇಷ ತೋರುವುದಿಲ್ಲವೋ ಆತ ಕಠಿಣವಾದ ಯುದ್ಧದಲ್ಲಿ ಜಯಶಾಲಿಯಾಗಿದ್ದಾನೆ.
13. ಪ್ರತಿಯೊಬ್ಬರು ಒಂದಲ್ಲ ಒಂದು ಜನ್ಮದಲ್ಲಿ ನಮಗೆ ತಂದೆ-ತಾಯಿಯರು, ಸೋದರ ಸೋದರಿಯರು ಹಾಗು ಮಕ್ಕಳಾಗಿದ್ದಾರೆ. ಆದ್ದರಿಂದ ಯಾರ ಮೇಲೆ ಕೋಪಿಸಲಿ.
14. ಯಾವ ಮಾನವ ಯತಾರ್ಥವನ್ನು ನೋಡುತ್ತಾನೋ, ಆತನು ದ್ವೇಷವನ್ನು ದಮಿಸುತ್ತಾನೆ. ಆದ್ದರಿಂದ ನೀವು ಎಲ್ಲಾ ಕುಶಲಕರ್ಮ ಮಾಡುತ್ತಾ ಇರಿ. ಅದರಿಂದಾಗಿ ನೀವು ಪಶ್ಚಾತ್ತಾಪ ಪಡುವುದಿಲ್ಲ.
15. ಯಾರಿಗೆ ನಾನು ಕೋಪಿಸಲಿ, ಕೈಗೆ, ಕಾಲಿಗೆ, ಕಣ್ಣಿಗೆ, ನಾಲಿಗೆಗೆ, ಆತನ ಇಚ್ಛೆಗೆ, ಆತನ ಕೋಪಕ್ಕೆ? ಯಾರೊಂದಿಗೆ ನಾನು ಕೋಪಿಸಲಿ, ಬಿಡದೇಹವು ಅವನಲ್ಲ, ಪೂರ್ಣ ದೇಹವೂ ಅವನಲ್ಲ.
16. ಕೋಪದಿಂದ ದ್ವೇಷವು ನಾಶವಾಗಲಾರದು. ಅಕ್ರೋಧದಿಂದ ಮಾತ್ರ ನಾಶವಾಗುತ್ತದೆ. ಇದೇ ಸನಾತನ ನಿಯಮವಾಗಿದೆ.
ಇತ್ಯಾದಿ ಗಾಥೆಗಳೊಂದಿಗೆ ಹೀಗೆಯೇ ಕೋಪವನ್ನು ಧಮಿಸಿ ಸಹನೆಯನ್ನು ಸ್ಥಾಪಿಸಬೇಕು.
ಮೈತ್ರಿ ಧ್ಯಾನವು ಕೆಲವರ ಮೇಲೆ ಮಾಡಬಾರದು. ಅವರೆಂದರೆ : 1. ಪುರುಷರಾಗಿದ್ದರೆ ಸ್ತ್ರೀಯ ಮೇಲೆ, ಸ್ತ್ರೀಯಾಗಿದ್ದರೆ ಪುರುಷನ ಮೆಲೆ 2. ಸತ್ತಿರುವವರ ಮೇಲೆ. ಏಕೆಂದರೆ:
1. ವಿರುದ್ಧ ಲಿಂಗದವರ ಮೇಲೆ ಮಾಡಿದರೆ ಅವರಲ್ಲಿ ಕಾಮವು ಉದಯಿಸಬಹುದು, ಪ್ರೇಮವು ಉದಯಿಸಬಹುದು ಆಗ ಅದು ಮೈತ್ರಿಧ್ಯಾನ ಅನಿಸುವುದಿಲ್ಲ. ಆದ್ದರಿಂದ ಸ್ತ್ರೀಯ ಮೇಲೆ ಅಥವಾ ಸ್ತ್ರೀಯು ಪುರುಷನ ಮೇಲೆ ಮಾಡಬಾರದು. 2. ಇನ್ನು ಸತ್ತಿರುವವರ ಮೇಲೆ ಮಾಡಿದರೆ ಅವರ ಅಸ್ತಿತ್ವವು ಬದಲಾಗಿರುತ್ತದೆ. ಅದು ಗುರಿಯನ್ನು ತಲುಪದು, ಅದರಿಂದ ಧ್ಯಾನವು ಸಿದ್ಧಿಯಾಗದು.
ಮತ್ತು ಮೈತ್ರಿಯನ್ನು ಮೊದಲು ನಿಮ್ಮ ಮೇಲೆಯೇ ಪ್ರಸರಿಸಬೇಕು. ಹೇಗೆಂದರೆ ನಿಮ್ಮ ದೀಪ ಉರಿದಾಗ ಮಾತ್ರ ನೀವು ಪರರ ದೀಪಗಳನ್ನು ಉರಿಸುವಿರಿ. ಭಗವಾನರು ತಮ್ಮ ದಿವ್ಯದೃಷ್ಟಿಯಲ್ಲಿ ಜೀವಿಗಳಲ್ಲೆಲ್ಲಾ ವೀಕ್ಷಿಸಿ ಈ ರೀತಿ ಹೇಳುತ್ತಾರೆ:
ನಾನು ನನ್ನ ಮನಸ್ಸಿನಿಂದ ಎಲ್ಲಾ ದಿಕ್ಕುಗಳಲ್ಲಿಯೂ ಹೋಗಿದ್ದೇನೆ. ಆದರೆ ನನಗೆ ನನಗಿಂತ ಪ್ರಿಯರು ನನಗೆ ಯಾರು ಕಾಣಲಿಲ್ಲ. ಹಾಗೆಯೇ ಪರಜೀವಿಗಳು ಸಹಾ ತಮ್ಮನ್ನೇ ಹೆಚ್ಚು ಪ್ರೀತಿಸುತ್ತವೆ. ಯಾರು ನಿಜವಾಗಿ ತಮ್ಮನ್ನು ಪ್ರೀತಿಸುವರೊ ಅವರು ಪರರಲ್ಲಿಯೂ ತಮ್ಮನ್ನೇ ಕಂಡು ಯಾರನ್ನೂ ಹಿಂಸಿಸುವುದಿಲ್ಲ ಆದ್ದರಿಂದ ತಮ್ಮ ಮೇಲೆಯೇ ಮೊದಲು ಮೈತ್ರಿ ಪ್ರಸರಿಸಬೇಕು.

ಮೆತ್ತಾ ಧ್ಯಾನ :




ಮೊದಲು ಕನ್ನಡಿಯಲ್ಲಿ ಅಥವಾ ಕೊಳದಲ್ಲಿ ತನ್ನ ಪ್ರಶಾಂತ ಮುಖವನ್ನು ನೋಡಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಂತರ ಆತನು ಏಕಾಂತದಲ್ಲಿ ನಿರ್ಜನ ನಿಶ್ಶಬ್ದ ವಾತಾವರಣದಲ್ಲಿ ಪದ್ಮಾಸನದಲ್ಲಿ ಕುಳಿತು, ಅಕುಶಲವಾದ ಮತ್ತು ಆಸೆಗಳಿಂದ ಕೂಡಿದ ಹಾಗು ದ್ವೇಷದಿಂದ ಕೂಡಿದ ಎಲ್ಲಾರೀತಿಯ ಯೋಚನೆಗಳಿಂದ ಮುಕ್ತನಾಗಬೇಕು. ನಂತರ ತನ್ನ ಮುಖವನ್ನು ಪ್ರಶಾಂತ ಮುಖವನ್ನು ನೆನಪಿಸಿಕೊಳ್ಳಬೇಕು. ಹಾಗೆಯೇ ಆ ನಗುಮುಖವನ್ನು ನೆನೆಸಿಕೊಳ್ಳುತ್ತಾ ನಾನು ಸುಖಿಯಾಗಿರಲಿ, ನಾನು ದುಃಖದಿಂದ ಮುಕ್ತನಾಗಲಿ, ನಾನು ದ್ವೇಷದಿಂದ ಮುಕ್ತನಾಗಲಿ, ನಾನು ಹಿಂಸಾ ಭಾವನೆಯಿಂದ ಮುಕ್ತನಾಗಲಿ, ನಾನು ನೋವುಗಳಿಂದ ಮುಕ್ತನಾಗಲಿ, ನಾನು ಸದಾ ಸುಖಿಯಾಗಿರಲಿ ಎಂದು ಸ್ವಹಾರೈಕೆ ಮಾಡಿಕೊಳ್ಳಬೇಕು. ಇದನ್ನೇ ನಿರಂತರ ಕೆಲಕಾಲ ಅಥವಾ 20 ರಿಂದ 25 ಸಲ ಕನಿಷ್ಠಪಕ್ಷ ಹೇಳಿಕೊಳ್ಳಬೇಕು. ಇದು ಜಪದ ರೀತಿ ಇರಬಾರದು, ಅತ್ಯಂತ ನೈಜವಾಗಿ, ಹೃತ್ಫೂರ್ವಕವಾಗಿ, ಆನಂದವಾಗಿ ಮಾಡಬೇಕು.
ನಂತರ ಪೂಜ್ಯರಾದವರನ್ನು ಆಯ್ಕೆ ಮಾಡಬೇಕು ಅಥವಾ ಗುರುಗಳನ್ನು ಅಥವಾ ಭಿಕ್ಷುಗಳನ್ನು ಆಯ್ಕೆ ಮಾಡಿಕೊಂಡು ಅವರ ನಿರ್ಮಲವಾದ, ಮುಗ್ಧವಾದ, ಆನಂದಭರಿತ ಮುಖವನ್ನು ಸ್ಪಷ್ಟ ನೆನಪು ಮಾಡುತ್ತಾ, ಈ ಪೂಜ್ಯರು ಸುಖಿಯಾಗಿರಲಿ ಮತ್ತು ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗಲಿ, ಹಾಗು ಎಲ್ಲಾ ರೀತಿಯ ಚಿತ್ತ ಕ್ಲೇಷಗಳಿಂದ ಮುಕ್ತರಾಗಲಿ ಎಂದು ಹೃತ್ಪೂರ್ವಕವಾಗಿ ನಿರಂತರ ಹಾರೈಸಬೇಕು.
ಅನಂತರ ತಂದೆ ನಂತರ ತಾಯಿಯನ್ನು ಆಯ್ಕೆ ಮಾಡಿಕೊಂಡು ಅವರ ಸಂತೋಷದ ಅಥವಾ ಆನಂದದ ಮುಖವನ್ನು ನೆನೆಯುತ್ತಾ ಈ ನನ್ನ ತಂದೆ ಅಥವಾ ತಾಯಿಯು ಸದಾ ಸುಖಿಯಾಗಿರಲಿ ಹಾಗು ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗಲಿ, ಎಲ್ಲಾ ರೀತಿಯ ದ್ವೇಷದಿಂದ ಮುಕ್ತರಾಗಲಿ, ಅವರ ಮನಸ್ಸು ಆನಂದದಿಂದ ಇರಲಿ ಎಂದು ಹೃತ್ಫೂರ್ವಕವಾಗಿ ನಿರಂತರ ಹಾರೈಸಬೆಕು.
ನಂತರ ಕುಟುಂಬದ ಸದಸ್ಯರನ್ನು ಅಥವಾ ಮಿತ್ರರನ್ನು ಒಬ್ಬೊಬ್ಬರಾಗಿ ನೆನೆಯುತ್ತ ಇವರು ಸದಾ ಸುಖಿಗಳಾಗಿರಲಿ ಹಾಗು ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗಲಿ, ಇವರು ದ್ವೇಷದಿಂದ ಮುಕ್ತರಾಗಲಿ, ಹಾಗು ಕ್ಲೇಷಗಳಿಂದ ಮುಕ್ತರಾಗಲಿ ಎಂದು ಹಾರೈಸಬೇಕು.
ನಂತರ ಅತ್ಯಂತ ಪ್ರೀತಿಪಾತ್ರರನ್ನು ನೆನೆಯುತ್ತ ಇವರು ಸದಾ ಸುಖಿಯಾಗಿರಲಿ ಮತ್ತು ಇವರ ಮನವು ಆನಂದದಿಂದ ತುಂಬಿರಲಿ, ಎಲ್ಲಾ ರೀತಿಯ ದುಃಖಗಳಿಂದ ಮುಕ್ತರಾಗಲಿ. ಇವರು ದ್ವೇಷದಿಂದ ಮುಕ್ತರಾಗಲಿ ಎಂದು ಹಾರೈಸಬೇಕು.
ನಂತರ ಪರಿಚಯವುಳ್ಳವರನ್ನು ನೆನೆಯುತ್ತಾ ಹೀಗೆಯೇ ಹಾರೈಸಬೇಕು.
ನಂತರ ನಮ್ಮ ಮೇಲೆ ದ್ವೇಷವಿರುವ ಅಥವಾ ನಾವು ದ್ವೇಷಿಸುವಂತಹ ವ್ಯಕ್ತಿಗಳನ್ನು ನೆನೆಯುತ್ತಾ ಹೀಗೆಯೇ ಹಾರೈಸಬೇಕು. ದ್ವೇಷಿಯನ್ನು ಸಹಾ ಅತ್ಯಂತ ಹೃತ್ಫೂರ್ವಕವಾಗಿ ಹಾರೈಸುತ್ತಾ ಆತನ ಮೇಲಿನ ದ್ವೇಷವನ್ನು ವಿಶೇಷವಾಗಿ ನಾಶಮಾಡಬೇಕು.
ಕೆಲವೊಮ್ಮೆ ಕಷ್ಟವಾದರೆ ಅತ್ಯಂತ ಪ್ರೀತಿಪಾತ್ರರನ್ನು ನೆನೆಯುತ್ತಾ ಮೈತ್ರಿ ಪ್ರಸಾರ ಮಾಡಿ ನಂತರ ಅದೇ ರೀತಿಯಾದ ಸಿಹಿ ಮನಸ್ಸಿನಿಂದ, ಮೃದು ಮನಸ್ಸಿನಿಂದ ದ್ವೇಷಿಯ ಮೇಲೆ ಮೈತ್ರಿಧ್ಯಾನ ಮಾಡಬೆಕು.
ಈ ರೀತಿಯಾಗಿ ಆತನು ಸರ್ವರ ಮೇಲೂ ಸಮಾನವಾಗಿ, ಪೂರ್ಣವಾಗಿ, ಪರಿಶುದ್ಧವಾಗಿ ಅದೇರೀತಿಯ ಮಧುರ ಮೌನದಿಂದ ಕೂಡಿರುವವನಾಗಿ ಎಲ್ಲರಲ್ಲೂ ತನನ್ನೇ ಕಾಣುತ್ತಾನೆ. ಅಥವಾ ತನ್ನ ಪ್ರೀತಿ ಪಾತ್ರರನ್ನು ಕಾಣುತ್ತಾನೆ. ಯಾರಲ್ಲೂ ಕೋಪವಿಲ್ಲ, ಎಲ್ಲರ ಕ್ಷೇಮವನ್ನೇ ಹಾರೈಸುತ್ತಾರೆ. ಒಂದುವೇಳೆ ನಿಮ್ಮಲ್ಲಿ ಕೋಪವಿದೆ ಎಂದರೆ ನೀವು ಶಾಶ್ವತವಾಗಿ ಕೋಪವಿಲ್ಲದಂತೆ ಮಾಡಿಕೊಳ್ಳಬೇಕು.
ನಂತರ ಸರ್ವಜೀವಿಗಳ ಮೇಲೆ ಮಾಡಬೇಕು ಎಲ್ಲಾ ಜೀವಿಗಳು ಸುಖಿಯಾಗಿರಲಿ, ಸುಖಯುತ ಮನಸ್ಸಿನಿಂದ ಕೂಡಿರಲಿ, ಅವು ಎಲ್ಲಾ ವಿಧವಾದ ದುಃಖಗಳಿಂದ ಮುಕ್ತರಾಗಲಿ, ಅವು ಎಲ್ಲಾ ವಿಧವಾದ ದ್ವೇಷದಿಂದ ಮುಕ್ತರಾಗಲಿ ಎಂದು ಹಾರೈಸಬೇಕು.

2ನೇಯ ಪಯರ್ಾಯ ವಿಧಾನ : 

ಮೆತ್ತಾ ಸುಖದಲ್ಲಿ ಈ ರೀತಿಯ ಧ್ಯಾನ ಕ್ರಮವಿದೆ. ಇಲ್ಲಿ ನೀವು ಈ ರೀತಿಯಲ್ಲಿ ಧ್ಯಾನ ಮಾಡಬೇಕು. ಹಾಗು ಇದೇರೀತಿ ನಿರಂತರ ಹಾರೈಕೆ ಮಾಡಬೇಕು.
ಎಲ್ಲಾ ಜೀವಿಗಳು ಸುಖಿಯಾಗಿರಲಿ ಮತ್ತು ಕ್ಷೇಮವಾಗಿರಲಿ ಹಾಗು ಅವರ ಮನಗಳು ಸುಖದಿಂದ ಸದಾ ತುಂಬಿರಲಿ.
ಯಾವೆಲ್ಲಾ ಜೀವಿಗಳು ಇವೆಯೋ ಅವು ದುರ್ಬಲವಾಗಿರಲಿ ಅಥವಾ ಬಲಿಷ್ಠವಾಗಿರಲಿ, ಕಿರಿದಾಗಿರಲಿ ಅಥವಾ ದಪ್ಪವಾಗಿರಲಿ ಅಥವಾ ತೆಳುವಾಗಿರಲಿ ಅಥವಾ ಶ್ರೇಷ್ಠವಾಗಿರಲಿ, ಚಿಕ್ಕದಾಗಿರಲಿ ಅಥವಾ ಮಧ್ಯಮ ಪ್ರಮಾಣದವು ಆಗಿರಲಿ.
ಗೋಚರವಾಗಿರಲಿ ಅಥವಾ ಅದೃಶ್ಯವಾಗಿರಲಿ, ಹತ್ತಿರ ಜೀವಿಗಳಾಗಲಿ ದೂರದ ಜೀವಿಗಳಾಗಲಿ, ಹುಟ್ಟಿರುವ ಜೀವಿಗಳಾಗಲಿ ಅಥವಾ ಮುಂದೆ ಹುಟ್ಟುವ ಜೀವಿಗಳಾಗಲಿ ಅವೆಲ್ಲಾ ಜೀವಿಗಳ ಹೃದಯ (ಮನಸ್ಸು) ಸುಖದಿಂದ, ಆನಂದದಿಂದ ತುಂಬಿರಲಿ.
ಒಬ್ಬನು ಮತ್ತೊಬ್ಬನನ್ನು ಹಿಂಸಿಸದಿರಲಿ, ಇನ್ನೊಬ್ಬನನ್ನು ಯಾವ ಕಾರಣಕ್ಕೂ ಕೀಳಾಗಿ ಕಾಣದಿರಲಿ (ಅಸಹ್ಯ ಪಡದಿರಲಿ), ಎಂದಿಗೂ ದ್ವೇಷದಿಂದ ಮತ್ತು ಕೋಪದಿಂದ ಇರದಿರಲಿ. ಯಾರೂ ಪರರ ನೋವನ್ನು ಬಯಸದಿರಲಿ. ಹೇಗೆ ತಾಯಿಯು ತನ್ನ ಏಕಮಾತ್ರ ಪುತ್ರನನ್ನು ತನ್ನ ಎಲ್ಲಾ ಶಕ್ತಿಮೀರಿ ರಕ್ಷಿಸುವಳೋ (ಪ್ರಾಣ ಕೊಟ್ಟಾದರೂ) ಅದೇರೀತಿಯಲ್ಲಿ ಅಸೀಮ ಮೈತ್ರಿಯಿಂದ ಸರ್ವಜೀವಿಗಳ ಮೇಲೆ ಮೈತ್ರಿ ಪ್ರಸರಿಸಲಿ.
ಹೀಗೆ ಒಬ್ಬನು ಇಡೀ ವಿಶ್ವಕ್ಕೆ (ಬ್ರಹ್ಮಾಂಡಕ್ಕೆ) ತಡೆಯಿಲ್ಲದೆ, ಸರ್ವರನ್ನು ಹಾರೈಸುವ ಮನಸ್ಸಿನಿಂದ ಕೂಡಿರಲಿ, ಮೇಲೆ ಹಾರೈಸಲಿ, ಕೆಳಗೆ ಹಾರೈಸಲಿ, ಸುತ್ತಲು ಹಾರೈಸಲಿ ಅವರು ದ್ವೇಷವಿಲ್ಲದೆ, ಕೋಪವಿಲ್ಲದೆ ಮತ್ತು ಶೋಕವಿಲ್ಲದೆ ಎಲ್ಲಾ ದಿಕ್ಕುಗಳಲ್ಲೂ ಪ್ರಸರಿಸಲಿ.
ಸಾಧಕನು ಈ ರೀತಿಯಾದ ಚಿತ್ತದಿಂದ ಆತನು ನಿಂತಿರಲಿ, ನಡೆಯುತ್ತಿರಲಿ, ಕುಳಿತಿರಲಿ ಅಥವ ಮಲಗಿರಲಿ ಆತನು ಸದಾ ಈ ರೀತಿಯ ಚಿತ್ತದಿಂದಲೇ ಕೂಡಿರಲಿ. ಎಲ್ಲಿಯವರೆಗೆ ಆತ ಜಾಗ್ರತನೋ, ಅಲ್ಲಿಯವರೆಗೆ ಹೀಗೆಯೇ ಸಾಧನೆ ಮಾಡುವುದಕ್ಕೆ ಅವರು ಬ್ರಹ್ಮವಿಹಾರ ಎನ್ನುತ್ತಾರೆ.

3ನೇಯ ಪಯರ್ಾಯ ವಿಧಾನ :

ಇಲ್ಲಿ ಆತನು ಈ ರೀತಿ ಮೈತ್ರಿಯನ್ನು ಧ್ಯಾನಿಸುತ್ತಾನೆ.
1. ಎಲ್ಲಾ ಜೀವಿಗಳು ದ್ವೇಷದಿಂದ, ಶೋಕದಿಂದ, ನೋವಿನಿಂದ ಮುಕ್ತರಾಗಲಿ ಹಾಗು ಸದಾ ಸುಖದಿಂದ ಇರುವಂತಾಗಲಿ.
2. ಉಸಿರಾಡುವಂತಹ ಎಲ್ಲಾ ಜೀವಿಗಳು ದ್ವೇಷದಿಂದ, ಶೋಕದಿಂದ, ನೋವಿನಿಂದ ಮುಕ್ತರಾಗಲಿ ಹಾಗು ಸದಾ ಸುಖದಿಂದ ಇರುವಂತಾಗಲಿ.
3. ಎಲ್ಲಾ ಪ್ರಾಣಿಗಳು ದ್ವೇಷದಿಂದ, ಶೋಕದಿಂದ, ನೋವಿನಿಂದ ಮುಕ್ತರಾಗಲಿ ಹಾಗು ಸದಾ ಸುಖದಿಂದ ಇರುವಂತಾಗಲಿ.
4. ಎಲ್ಲಾ ವ್ಯಕ್ತಿಗಳು ದ್ವೇಷದಿಂದ, ಶೋಕದಿಂದ, ನೋವಿನಿಂದ ಮುಕ್ತರಾಗಲಿ ಹಾಗು ಸದಾ ಸುಖದಿಂದ ಇರುವಂತಾಗಲಿ.
5. ಯಾವುವೆಲ್ಲಾ ತಾನು ಎಂಬ ಭಾವನೆ ಹೊಂದಿವೆಯೋ ಅವೆಲ್ಲಾ ಜೀವಿಗಳು ದ್ವೇಷದಿಂದ, ಶೋಕದಿಂದ, ನೋವಿನಿಂದ ಮುಕ್ತರಾಗಲಿ ಹಾಗು ಸದಾ ಸುಖದಿಂದ ಇರುವಂತಾಗಲಿ.

4ನೇಯ ಪಯರ್ಾಯ ವಿಧಾನ :

ಇಲ್ಲಿ ಆತನು ಈ ರೀತಿ ಮೈತ್ರಿಯನ್ನು ಧ್ಯಾನಸುತ್ತಾರೆ.
1. ಎಲ್ಲಾ ಸ್ತ್ರೀಯರು ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
2. ಎಲ್ಲಾ ಪುರುಷರು ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
3. ಎಲ್ಲಾ ಆರ್ಯರು (ಶ್ರೇಷ್ಠರು) ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
4. ಎಲ್ಲಾ ಅನಾರ್ಯರು (ಶ್ರೇಷ್ಠರಲ್ಲದಂತಹ) ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
5. ಎಲ್ಲಾ ದೇವತೆಗಳು ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
6. ಎಲ್ಲಾ ಮಾನವರು ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.
7. ಎಲ್ಲಾ ದುರ್ಗತಿಯ ಜೀವಿಗಳು ದ್ವೇಷದಿಂದ, ರೋಗದಿಂದ, ಶೋಕದಿಂದ, ಮುಕ್ತರಾಗಿ ಸದಾ ಸುಖಿಯಾಗಿರಲಿ.

5ನೇಯ ಪಯರ್ಾಯ ವಿಧಾನ :

ಇಲ್ಲಿ ಆತನು ಈ ರೀತಿ ಮೈತ್ರಿಯನ್ನು ಧ್ಯಾನಿಸುತ್ತಾನೆ :
1. ಪೂರ್ವ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
2. ಪಶ್ಚಿಮ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
3. ಉತ್ತರ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
4. ದಕ್ಷಿಣ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
5. ಊದ್ರ್ವ ದಿಕ್ಕಿನಲ್ಲಿರುವ (ಮೇಲೆ) ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.
6. ಅಧೋ ದಿಕ್ಕಿನಲ್ಲಿರುವ (ಕೆಳಗೆ) ಎಲ್ಲಾ ಜೀವಿಗಳು, ದುಃಖದಿಂದ, ನೋವಿನಿಂದ, ದ್ವೇಷದಿಂದ ಮುಕ್ತರಾಗಿ, ಸದಾ ಸುಖಿಯಾಗಿರಲಿ.

6ನೇಯ ಮಿಶ್ರಣ ವಿಧಾನ ಇಲ್ಲಿ ಹೀಗೆ ಧ್ಯಾನಿಸುತ್ತಾನೆ.

ಪೂರ್ವ ದಿಕ್ಕಿನಲ್ಲಿರುವ ಎಲ್ಲಾ ಆರ್ಯರು ದುಃಖದಿಂದ ಮುಕ್ತರಾಗಿ ಸದಾ ಸುಖಿಯಾಗಿರಲಿ
ಪಶ್ಚಿಮ ದಿಕ್ಕಿನಲ್ಲಿರುವ ಎಲ್ಲಾ ದೇವತೆಗಳು ದುಃಖದಿಂದ ಮುಕ್ತರಾಗಿ ಸದಾ ಸುಖಿಯಾಗಿರಲಿ
ಉತ್ತರ ದಿಕ್ಕಿನಲ್ಲಿರುವ ಎಲ್ಲಾ ಮಾನವರು ದುಃಖದಿಂದ ಮುಕ್ತರಾಗಿ ಸದಾ ಸುಖಿಯಾಗಿರಲಿ
ಹೀಗೆಯೇ ಎಲ್ಲಾ ದಿಕ್ಕುಗಳು ಮತ್ತು 4ನೆಯ ವಿಧಾನದ 7 ಗುಂಪುಗಳನ್ನು ಮಿಶ್ರಣ ಮಾಡಿ ಧ್ಯಾನಿಸಬೆಕು.
ಈ ರೀತಿಯಲ್ಲಿ ಆತನು ಮೈತ್ರಿಭರಿತನಾಗಿ ಪ್ರತಿ ದಿಕ್ಕುಗಳಲ್ಲಿ ಮೈತ್ರಿ ಪ್ರಸರಿಸುತ್ತಾ, ಹಾರೈಸುತ್ತಾ ವಿಹರಿಸುವನು. ಎಲ್ಲೆಲ್ಲೂ ಸಮನಾಗಿ, ಸರ್ವಜೀವಿಗಳ ಮೇಲೆ ಇಡೀ ಬ್ರಹ್ಮಾಂಡದ ಮೇಲೆ ಮೈತ್ರಿಚಿತ್ತದವನಾಗಿ, ಅಳತೆಯಿಲ್ಲದ ರೀತಿ ಪ್ರಸರಿಸಿ, ಅಸೀಮವಾಗಿ, ಯಾವುದೇ ರೀತಿ ಶತ್ರುತ್ವವಿಲ್ಲದೆ, ಯಾವುದೇ ರೀತಿಯ ಶೋಕವಿಲ್ಲದೆ ನೆಲಸುತ್ತಾನೆ. ಎಲ್ಲಾ ಜೀವಿಗಳ ಮೇಲೆ, ಎಲ್ಲಾ ಪ್ರಾಣಿಗಳ ಮೇಲೆ, ಎಲ್ಲಾ ಕೀಟಗಳ ಮೇಲೆ, ನಾನು, ನನ್ನದು ಎಂದು ಭಾವಿಸುವ ಎಲ್ಲಾ ಜೀವಿಗಳ ಎಲ್ಲರ ಮೇಲೆ ಯಾವುದೇ ರೀತಿಯ ಬೇಧಭಾವವಿಲ್ಲದ ಸಮನಾಗಿ ಮೈತ್ರಿಧ್ಯಾನ ಮಾಡಿದಾಗ ಆತನಿಗೆ ಪ್ರಥಮ ಧ್ಯಾನ ಲಭಿಸುತ್ತದೆ.
ಆತನು ನಾಲ್ಕು ರೀತಿಯಲ್ಲಿ ಪ್ರಥಮ ಸಮಾಧಿ ಪಡೆಯಬಹುದು.
1. ಎಲ್ಲಾ ಜೀವಿಗಳೂ ದ್ವೇಷದಿಂದ ಮುಕ್ತರಾಗಲಿ
2. ಎಲ್ಲಾ ಜೀವಿಗಳೂ ಶೋಕದಿಂದ ಮುಕ್ತರಾಗಲಿ
3. ಎಲ್ಲಾ ಜೀವಿಗಳೂ ನೋವಿನಿಂದ ಮುಕ್ತರಾಗಲಿ
4. ಎಲ್ಲಾ ಜೀವಿಗಳೂ ಸದಾ ಸುಖಿಯಾಗಿ ಇರುವಂತಾಗಲಿ.
ಈ ರೀತಿಯಲ್ಲಿ ಒಂದೊಂದೇ ವಾಕ್ಯದಲ್ಲೂ ಸಮಾಧಿಗಳಿಸಬಹುದು. ಮಿಶ್ರಣ ವಿಧಾನದಲ್ಲಿ ಆತನು 528 ರೀತಿಯಲ್ಲಿ ಮೈತ್ರಿಧ್ಯಾನ ಆಚರಿಸಿ ಧ್ಯಾನ ಲಾಭಗಳನ್ನು ಪಡೆಯಬಹುದು.
ಹಾಗೆಯೇ ಮುಂದುವರೆದು ತೃತೀಯ ಧ್ಯಾನದ ಹಂತಗಳನ್ನು ಮುಟ್ಟಬಹುದು. ಶುಭ ವಿಮೋಕ್ಷಗಳಲ್ಲಿ ಮೈತ್ರಿ ಧ್ಯಾನವು ಶ್ರೇಷ್ಠವಾದುದು ಎನ್ನುತ್ತಾರೆ.
ಹೀಗೆ ಓ ಭಿಕ್ಷುಗಳೇ ಈ ರೀತಿ ಮೈತ್ರಿ ಧ್ಯಾನದಿಂದ ಚಿತ್ತವಿಮುಕ್ತಿ ಪಡೆಯುತ್ತ, ಅಭಿವೃದ್ಧಿಗೊಳಿಸುತ್ತಾ ಬೆಳವಣಿಗೆ ಮಾಡುತ್ತಾ, ಈ ಮೈತ್ರಿ ಧ್ಯಾನವನ್ನೇ ವಾಹನದಂತೆ ಬಳಸುತ್ತಾ (ಅಂದರೆ ಧ್ಯಾನದಲ್ಲಿ ಅತ್ಯಂತ ಹಿಡಿತವಿಟ್ಟಿರುವ) ಚೆನ್ನಾಗಿ ಸ್ಥಾಫಿಸಿ ಮತ್ತು ದೃಢವಾಗಿ ಪ್ರತಿಷ್ಠಾಪಿಸಿ (ಅಂದರೆ ಯಾವುದರಿಂದಲೂ ಅಲ್ಲಾಡುವ) ಶ್ರೇಷ್ಠತ್ವವನ್ನು ಪಡೆಯುತ್ತಾ, ಪರಿಪೂರ್ಣತೆಯನ್ನು ಸಾಧಿಸಿದಾಗ ಆತನು ಹನ್ನೊಂದು ಲಾಭಗಳನ್ನು ಪಡೆಯುತ್ತಾನೆ.

ಮೈತ್ರಿಯ ಧ್ಯಾನದಿಂದ ಸಿಗುವಂತಹ 11 ಮಹತ್ತರ ಲಾಭಗಳು :

1. ಆತನು ಸುಖವಾಗಿ ನಿದ್ರಿಸುತ್ತಾನೆ : ಹೇಗೆಂದರೆ ಧ್ಯಾನದಲ್ಲಿ ಪ್ರವೇಶಿಸುವಂತೆ ಹಾಗು ಕ್ಷಿಪ್ರವಾಗಿ ನಿದ್ರಾ ಸ್ಥಿತಿಯಲ್ಲಿರುತ್ತಾನೆ.
2. ಆತನು ಸುಖವಾಗಿ ಎಚ್ಚೆತ್ತುಕೊಳ್ಳುತ್ತಾನೆ : ಕಮಲವು ಅರಳುವಂತೆ ಯಾವುದೇ ರೀತಿ ಬಾಧೆಯಿಲ್ಲದೆ ಎಚ್ಚರಗೊಳ್ಳುತ್ತಾನೆ.
3. ಆತನು ಯಾವುದೇ ರೀತಿ ಕೆಟ್ಟ ಸ್ವಪ್ನಗಳನ್ನು ಕಾಣುವುದಿಲ್ಲ : ಡಕಾಯಿತರು, ಪ್ರಾಣಿಗಳು, ನಷ್ಟದ ಇನ್ನಿತರೆ ಯಾವುದೇ ಚಿಂತಕೃತ, ಭಯಯುತ, ಕೋಪವುಳ್ಳ, ರಾಗವುಳ್ಳ ಯಾವುದೇ ಸ್ವಪ್ನಗಳನ್ನು ಕಾಣುವುದಿಲ್ಲ. ಬದಲಾಗಿ ಸದಾ ಪವಿತ್ರತೆಯ ಶುಭ ಸ್ವಪ್ನಗಳನ್ನು ಕಾಣುತ್ತಾನೆ. ಹೇಗೆಂದರೆ ಪೂಜಿಸುವಂತಹ, ದಾನ ನೀಡುತ್ತಿರುವಂತಹ, ಮೈತ್ರಿಯುತ ಸನ್ನಿವೇಶ, ಸ್ತೂಪಗಳು, ಚೈತ್ಯಗಳು, ಇನ್ನಿತರ ಶುದ್ಧ ಸ್ವಪ್ನಗಳನ್ನು ಕಾಣುತ್ತಾನೆ.
4. ಮಾನವರಿಗೆ ಪ್ರಿಯನಾಗುತ್ತಾನೆ : ಅತ್ಯಂತ ಜನಪ್ರಿಯನಾಗುತ್ತಾನೆ, ಜನರು ಆತನನ್ನು ಆಭರಣದಂತೆ, ಕಿರೀಟದಂತೆ ಇಷ್ಟಪಡುತ್ತಾರೆ.
5. ಮನುಷ್ಯರಲ್ಲದವರಿಗೂ ಪ್ರಿಯನಾಗುತ್ತಾನೆ : ಮನುಷ್ಯರಲ್ಲದ ಜೀವಿಗಳಾದ, ಪ್ರಾಣಿಗಳು, ಪ್ರೇತಗಳು, ಅಸುರರಿಗೂ ಇಷ್ಟವಾಗುತ್ತಾನೆ. ಏಕೆಂದರೆ ಆತನಲ್ಲಿ ದ್ವೇಷವಿರುವುದಿಲ್ಲ ಹಾಗು ಹಾರೈಕೆಯಿಂದ ಕೂಡಿರುತ್ತಾನೆ.
6. ದೇವತೆಗಳು ರಕ್ಷಿಸುತ್ತಾರೆ : ದೇವತೆಗಳು ಸಹಾ ಆತನಿಗೆ ಪ್ರೀತಿಸಿ, ತಂದೆಯಂತೆ, ತಾಯಿಯಂತೆ ಕಾಪಾಡುವರು.
7. ಬೆಂಕಿ, ವಿಷ, ಶಸ್ತ್ರಗಳು ಆತನ ಮೇಲೆ ಯವುದೇ ಪರಿಣಾಮ ಬೀರುವುದಿಲ್ಲ. ಉದಾ: ಬುದ್ಧರು ನಾಲಾಗಿರಿ ಆನೆಯಿಂದ ಪಾರಾಗಿದ್ದು, ಸಾಮಾವತಿಯು ಬಾಣದಿಂದ ಪಾರಾಗಿದ್ದು, ಉತ್ತರಳಿಗೆ ಬಿಸಿ ಎಣ್ಣೆಯು ಸಹಾ ಏನೂ ಮಾಡಲಿಲ್ಲ.
8. ಆತನ ಮನಸ್ಸು ಅತ್ಯಂತ ವೇಗದಲ್ಲಿ ಏಕಾಗ್ರತೆ ಪಡೆಯತ್ತದೆ; ಆತ ಸುಲಭವಾಗಿ ಧ್ಯಾನದಲ್ಲಿ ಪ್ರವೇಶಿಸಬಲ್ಲ.
9. ಆತನ ಮುಖಾರವಿಂದವು ಅತ್ಯಂತ ತೇಜಸ್ಸಿನಿಂದ ಕೂಡಿರುತ್ತದೆ. ಮೈತ್ರಿವಂತನು ಅತ್ಯಂತ ಮುಗ್ಧವಾಗಿ, ಸುಂದರವಾಗಿ ಕಾಣುತ್ತಾನೆ.
10. ಯಾವುದೇ ಧ್ವಂದ್ವವಿಲ್ಲದೆ ಸಾಯುತ್ತಾನೆ : ಆತನು ಪಶ್ಚಾತ್ತಾಪವಿಲ್ಲದೆ, ನೋವಿಲ್ಲದೆ, ಶಾಂತವಾಗಿ, ಮೋಹವಿಲ್ಲದೆ, ಭಯವಿಲ್ಲದೆ, ಸಂಶಯವಿಲ್ಲದೆ, ನಿದ್ರಿಸುವಂತೆ ಮೃತ್ಯು ಪಡೆಯುತ್ತಾನೆ.
11. ಬ್ರಹ್ಮಲೋಕ ಪ್ರಾಪ್ತಿ : ಒಂದುವೇಳೆ ಆತನು ಅರಹಂತನಾಗದಿದ್ದರೆ, ಅಥವಾ ಯಾವುದೇ ಆರ್ಯ ಸ್ಥಿತಿಯನ್ನು ಮುಟ್ಟದಿದ್ದರೂ ಸಹಾ ಬ್ರಹ್ಮಲೋಕ ಪ್ರಾಪ್ತಿ ಮಾಡುತ್ತಾನೆ.
ಈ ರೀತಿಯಲ್ಲಿ ಮೈತ್ರಿ ಧ್ಯಾನವು ಇಲ್ಲಿಗೆ ಮುಗಿಯಿತು.

ಯಾವಾಗ ನಾವು ದ್ವೇಷಿಸುವವನ ಬಗ್ಗೆ ಮನಸ್ಸು ಮೈತ್ರಿಯುತವಾಗಿ ಪರಿವತರ್ಿತವಾಗುವುದೋ ಆಗ ಆತನಿಗೆ ಆಗುವ ವ್ಯಕ್ತಿಯ ಮೇಲೆಯೇ ಧ್ಯಾನ ಮಾಡಲು ಕಷ್ಟವಿರುವುದಿಲ್ಲ. ಆಗ ಆತನು ಪ್ರಿಯವಾದವರ ಮೇಲೆ ಅತ್ಯಂತ ಪ್ರಿಯರಾದವರ ಮೇಲೆ, ತಟಸ್ಥರ (ಪರಾಜಯಸ್ಥರ) ಮೇಲೆಯು ಸಮಾನವಾದ ಮೈತ್ರಿಯನ್ನು ಮಾಡಲು ಶಕ್ಯನಾಗುತ್ತಾನೆ.
ಉದಾಹರಣೆಗೆ: ನಾವು ಅತ್ಯಂತ ಪ್ರಿಯರಾದವರು, ಪ್ರಿಯರಾದವರು, ತಟಸ್ಥರು ಹಾಗು ಶತ್ರುಗಳು ಒಂದೇ ಸ್ಥಳದಲ್ಲಿ ಇರುತ್ತೇವೆ, ಆಗ ಡಕಾಯಿತರು ಬಂದು ಹೀಗೆ ಆಜ್ಞಾಪಿಸುತ್ತಾರೆ ಭಂತೆ, ನಮಗೆ ಇವರನ್ನು ನೀಡಿ. ಆಗ ಅವರು ಏಕೆ? ಎಂದು ಪ್ರಶ್ನಿಸಿದಾಗ, ನಾವು ಅವರನ್ನು ಕೊಂದು ರಕ್ತವನ್ನು ಪೂಜೆಗೆ ಅಪರ್ಿಸುವೆವು. ಆಗ ಏನಾದರೂ ಇವರನ್ನು ತೆಗೆದುಕೊಂಡು ಹೋಗಿ ಅಥವಾ ಅವರನ್ನು ತೆಗೆದುಕೊಂಡು ಹೋಗಿ ಅಥವಾ ನನ್ನನ್ನೇ ತೆಗೆದುಕೊಂಡು ಹೋಗಿ, ಅವರನ್ನು ಬಿಡಿ ಎಂದು ಯಾವರೀತಿ ಹೇಳುವರೂ ಸಹಾ. ಅಥವಾ ಹಾಗೆ ಯೋಚಿಸಿದರೂ ಸಹಾ ಆತನ ತಡೆಗಳು ಕತ್ತರಿಸಿಹೋಗಿಲ್ಲ ಎಂದರ್ಥ. ಏಕೆಂದರೆ ಮೈತ್ರಿಯೆಂದರೆ ಸರ್ವರ ಸುಖಹಿತಭಾವವಾಗಿದೆ. ಯಾರನ್ನು ಬಿಡುವ ಹಾಗಿಲ್ಲ. ಪರರನ್ನು ಅಥವಾ ತನ್ನನ್ನು ಸಹಾ. ಎಲ್ಲರಿಗೂ ಸಮಾನವಾಗಿ, ಗಾಢವಾಗಿ, ನಿರ್ಮಲವಾಗಿ ಹಾರೈಸುವ ಮನವಿರಬೇಕು.
ಈ ರೀತಿಯ ಭೇದಭಾವದ ತಡೆಗಳಿಂದ ಮುಕ್ತನಾದಾಗಲೇ ಆತನಿಗೆ ನಿಮಿತ್ತ ಹಾಗು ಸಮಾಧಿಯು ಸಿಗುವುದು. ಕಸಿಣದಲ್ಲೇ ವಿವರಿಸಿರುವಂತೆಯೇ ಆತನ ಪ್ರಕ್ರಿಯೆ ಸಾಗುತ್ತದೆ. ನಂತರ ಆತನಿಗೆ ಪ್ರಥಮ ಧ್ಯಾನವು ಸಿಗುವುದು. ನಂತರ ಹಗೆಯೇ ತೃತೀಯ ಸಮಾದಿಯು ಸಿಗುವುದು.
ಇಲ್ಲಿಗೆ ಮೆತ್ತಾ ಭಾವನೆಯ ವಿತರಣೆ ಮುಗಿಯಿತು.

******************************************************************************

ಕರುಣಾ ಧ್ಯಾನ

ಈ ಶರೀರದ ಮಾಂಸ, ರಕ್ತ ಮತ್ತು ನನ್ನ ಸರ್ವಸ್ವವೆಲ್ಲವೂ ಜಗತ್ತಿನ ಹಿತಕ್ಕಾಗಿ ಮತ್ತು ಜಗತ್ತಿನ ಕ್ಷೇಮಕ್ಕಾಗಿಯೇ ಇದೆ - ಶ್ರೀ ಸಂಘ ಬೋಧಿ

ಇಂದು ಈ ಜಗತ್ತಿಗೆ ಅತ್ಯಂತ ಕರುಣಾಭರಿತ ಸ್ತ್ರೀಯರು ಮತ್ತು ಪುರುಷರು ಬೇಕಾಗಿದ್ದಾರೆ. ಅವರು ಇಲ್ಲಿರುವ ಕ್ರೌರ್ಯ ಮತ್ತು ಹಿಂಸೆಯನ್ನು ಹಾಗು ದುಃಖವನ್ನು ಈ ಭೂಮಿಯಿಂದಲೇ ತೆಗೆದುಹಾಕಬೇಕಾಗಿದೆ - ಪರಮ ಪೂಜ್ಯ ನಾರದ ಥೇರ






ಬುದ್ಧ ಭಗವಾನರು ಪ್ರತಿದಿನವೂ ಕೇವಲ ಒಂದು ಗಂಟೆ ಮಾತ್ರ ನಿದ್ರಿಸುತ್ತಿದ್ದರು. ಅದು 3 ರಿಂದ 4 ಗಂಟೆಯವರೆಗೆ ನಂತರ ಅವರು 4 ರಿಂದ 5ರತನಕ ನಿಬ್ಬಾಣದ ಸುಖದಲ್ಲಿ ತಲ್ಲೀನರಾಗುತ್ತಿದ್ದರು. ನಂತರ 5 ರಿಂದ 6ರತನಕ ಮಹಾ ಕರುಣಾ ಸಮಾಪತ್ತಿಯಲ್ಲಿದ್ದು ಸರ್ವಜೀವಿಗಳ ದುಃಖ ವಿಮುಕ್ತತೆಗೆ ಧ್ಯಾನಿಸುತ್ತಿದ್ದರು. ತಮ್ಮ ಬುದ್ಧ ಚಕ್ಷುವಿನಿಂದ ಯಾರ್ಯಾರಿಗೆ ಸಹಾಯ ಮಾಡಬಹುದೆಂದು ಅರಿತು ಅವರಿಗೆ ಸಹಾಯ ಮಾಡುತ್ತಿದ್ದರು.
ಶ್ರೇಷ್ಠ ಭಿಕ್ಷುಗಳಾದ, ಸಾರಿಪುತ್ರರು, ಮೊಗ್ಗಾಲಾನರು, ಕಶ್ಯಪರು ಇನ್ನು ಮುಂತಾದವರು ರಾಜ ಮಹಾರಾಜರು ಬುದ್ಧರಲ್ಲಿಗೆ ಹುಡುಕಿಕೊಂಡು ಬರುತ್ತಿದ್ದರು. ಆದರೆ ಬುದ್ಧ ಭಗವಾನರು ತಮ್ಮ ಕರುಣೆಯಿಂದ ಪಾಪಿಗಳಾದ ಅಂಗುಲಿಮಾಲಾ, ಅಳವಕ, ಡಕಾಯಿತರು, ದುಃಖಿತರು, ಬೇಟೆಗಾರರು, ಕಷ್ಟದಲ್ಲಿದ್ದ ಇನ್ನಿತರರ ಬಳಿಗೆ ತಾವೇ ಹೋಗಿ ಅವರನ್ನು ಸರಿಪಡಿಸುತ್ತಿದ್ದರು. ಅವರ ಕರುಣೆ ಅನುಪಮವಾಗಿತ್ತು.
ಬೋಧಿಸತ್ತ ಮುಂದೆ ಬುದ್ಧರಾಗಿದ್ದು ಈ ಕರುಣಾ ಬಲದಿಂದಲೇ. ಈ ರೀತಿ ಕರುಣೆಯಿಂದ ಮಾನವ ಬ್ರಹ್ಮನೂ ಅಗಬಲ್ಲ, ಹಾಗೆಯೇ ಬುದ್ಧರೂ ಆಗಬಲ್ಲ. ಅಂತಹ ಅಗಾಧಶಕ್ತಿ, ಕರುಣೆಗೆ ಇದೆ. ಕರುಣೆಯ ಪರಿಪೂರ್ಣತೆಯನ್ನು ಬುದ್ಧರು ಹೊಂದಿರುವದರಿಂದಾಗಿ ಅವರನ್ನು ಮಹಾ ಕಾರುಣಿಕನಾಥ ಎನ್ನುತ್ತಾರೆ. ನಿವೇನಾದರು ಬುದ್ಧರ ಬೋಧನೆಯಿಂದ ಕರುಣೆಯನ್ನು ತೆಗೆದರೆ ಅಥವಾ ವಿರಾಗವನ್ನು ತೆಗೆದರೆ ಅಥವಾ ಪ್ರಜ್ಞಾವನ್ನು ತೆಗೆದರೆ ನೀವು ಬೌದ್ಧ ಧರ್ಮದ ಹೃದಯವನ್ನೇ ಅಥವಾ ಪ್ರಾಣವನ್ನೇ ತೆಗೆದಂತಾಗುತ್ತದೆ. ಸಕಲ ಸದ್ಗುಣಗಳಿಗೆ ಕರುಣೆಯೇ ಆಧಾರ. ಅಷ್ಟೇ ಏಕೆ, ಬೌದ್ಧತ್ವದ ಗುರಿ ಇಟ್ಟಿರುವ ಬೋಧಿಸತ್ತರಿಗಂತೂ ಕರುಣೆಯೇ ಸರ್ವಸ್ವವಾಗಿರುತ್ತದೆ. ಕರುಣೆಯಿಲ್ಲದೆ ಪರಿಪೂರ್ಣತೆಯೇ ಇಲ್ಲ.
ಲೋಕದಲ್ಲಿ ಜೀವಗಳಾಗಲಿ ಅಥವಾ ಮಾನವರಾಗಲಿ ದುಃಖದಲ್ಲಿದ್ದಾಗ, ನೋವಿನಲ್ಲಿದ್ದಾಗ, ಭೀತಿಯಲ್ಲಿದ್ದಾಗ, ಕಷ್ಟದಲ್ಲಿದ್ದಾಗ ಅವರನ್ನು ಕಂಡು ಅಥವಾ ಅವರ ಬಗ್ಗೆ ಕೇಳಿ ಹೃದಯವು ಕಂಪಿಸಿದರೆ ಅವರ ದುಃಖ ವಿಮುಕ್ತಿ ಬಯಸಿದರೆ, ಆ ಭಾವವೇ ಕರುಣೆಯಾಗಿ, ಇದರ ಸಮಾನಾರ್ಥಕ ಪದಗಳೆಂದರೆ ಅನುಕಂಪ, ಮಮತೆ, ಮರುಕ, ದಯೆ ಇತ್ಯಾದಿ. ಇದರ ಪ್ರಧಾನ ಲಕ್ಷಣವೇನೆಂದರೆ ಪರರ ದುಃಖವು ಇಲ್ಲದಂತಾಗಲಿ ಎಂದು ಬಯಸುವುದು. ಇದರ ನೇರ ಶತ್ರುವು ಹಿಂಸಾಭಾವನೆಯಾದರೆ ಆದರೆ ಪರೋಕ್ಷ ಶತ್ರು. ದೋಮನಸ್ಸು (ದುಃಖಿತ ಮನಸ್ಸು) ಆಗಿದೆ.
ಪರರ ದುಃಖವನ್ನು ಕಂಡು ಸತ್ಪುರುಷರ ಹೃದಯವು (ಕಂಪನ) ಕಂಪಿತವಾಗಿ, ದುಃಖವಿಮುಕ್ತಿಗೆ ಚಾಲನೆಯಾಗಿ (ಕರೋತಿ) ಈ ರೀತಿಯಾಗಿ ಇದನ್ನು ಕರುಣೆ ಅಥವಾ ಅನುಕಂಪ ಎನ್ನುತ್ತಾರೆ. ಪರರ ದುಃಖ ವಿಮುಕ್ತಿಗೆ ಶ್ರಮಿಸುವುದರಿಂದ (ಕಿರಿಯಾತಿ) ಇದನ್ನು ಕರುಣಾ ಎನ್ನುತ್ತಾರೆ. ಪರರ ದುಃಖವನ್ನು ಸಹಿಸದೆ ಇರುವುದೇ ಇದರ ಕ್ರಿಯೆಯಾಗಿದೆ. ಕರುಣೆಯು ಕಾರ್ಯರಹಿತತೆಯಿಂದ ವ್ಯಕ್ತವಾಗುತ್ತದೆ. ಇದರ ತತ್ಕ್ಷಣದ ಕಾರಣವೇನೆಂದರೆ ಪರ ದುಃಖಿತರನ್ನು ನೋಡುವುದು ಅಥವಾ ಕೇಳುವುದು ಅಥವಾ ಅದರ ಬಗ್ಗೆ ಚಿಂತಿಸುವುದು. ಕ್ರೂರತ್ವ ಅಂತ್ಯವಾದಾಗ ಕರುಣೆಯು ಜಯಿಸುತ್ತದೆ. ಶೋಕವು ಕರುಣೆಯಲ್ಲ, ಶೋಕವು ಕರುಣೆಯಂತೆ ಕಾಣುತ್ತದೆ ಅಷ್ಟೇ. ಕರುಣೆಯ ಪೂರ್ಣತೆಗಾಗಿ ಶೋಕವನ್ನು ಗೆಲ್ಲುವುದು ಅತ್ಯಗತ್ಯವಾಗಿದೆ. ಕರುಣೆಯೆಂದರೆ ಗೋಳಾಡುವುದಲ್ಲ. ಅವರ ದುಃಖ ವಿಮುಕ್ತಿಯನ್ನು ಪ್ರಬಲವಾಗಿ ಬಯಸುವುದು ಮತ್ತು ಅದಕ್ಕೆ ಕ್ರಿಯೆಯಲ್ಲಿ ಆಚರಣೆಗೆ ತುರುವುದು. ನಿಯಂತ್ರಣದಿಂದ ಕರುಣೆ ಇರುತ್ತದೆ ಹೊರತು ಬೇಕಾದಂತೆ ನಿಯಂತ್ರಣ ತಪ್ಪುವುದಲ್ಲ. ಕರುಣೆಯು ಪ್ರಜ್ಞಾದ ಸಂಗಡ ಇರುತ್ತದೆ. ಪ್ರಜ್ಞಾದಿಂದ ಪರರ ದುಃಖ ಅರಿವಾಗುತ್ತದೆ. ಕರುಣೆಯಿಂದಾಗಿ ಅದನ್ನು ನಿವಾರಿಸಲು ಪ್ರಯತ್ನಿಸುತ್ತೇವೆ. ಪ್ರಜ್ಞಾದಿಂದ ಯೋಗ್ಯ ಪರಿಹಾರ ಸಿಗುತ್ತದೆ. ಕರುಣೆಯಿಂದ ಅದನ್ನು ಆಚರಣೆಯಲ್ಲಿ ಪರಿಹರಿಸುತ್ತೇವೆ. ಪ್ರಜ್ಞಾರಹಿತ ಕರುಣೆ ಅಪಾಯಕಾರಿ, ಕರುಣಾರಹಿತ ಪ್ರಜ್ಞಾವು ಅಪೂರ್ಣ.

ಕರುಣಾಧ್ಯಾನ ವಿಧಾನ :

ಇಲ್ಲಿ ಸಾಧಕನು ನಿಶ್ಶಬ್ದ ನಿರ್ಜನ ವಾತಾವರಣದಲ್ಲಿ ಪದ್ಮಾಸನದಲ್ಲಿದ್ದು ಬೆನ್ನನ್ನು ನೇರವಾಗಿಟ್ಟುಕೊಂಡು ಅಕುಶಲ ಯೋಚನೆಗಳೆಲ್ಲವನ್ನೂ ದ್ವೇಷದ, ಹಿಂಸೆಯ ಇನ್ನಿತರ ಎಲ್ಲಾ ಪಾಪಯುತ ಯೋಚನೆಗಳಿಂದ ಮುಕ್ತವಾಗಿ ನಂತರ ತಾನು ದಾರಿಯಲ್ಲಿ, ಅಥವಾ ವಾಯು ವಿಹಾರದ ಸ್ಥಳದಲ್ಲಿ ಕಂಡಂತಹ ದುಃಖಿತರನ್ನು, ಶೋಕ ಪೀಡಿತರನ್ನು ಭಯ ಪೀಡಿತರನ್ನು, ರೋಗಿಗಳನ್ನು, ಮಾನಸಿಕ ಅಸ್ವಸ್ಥರನ್ನು, ಭಿಕ್ಷುಕರನ್ನು, ನೋವಿನಿಂದ ಕೂಡಿದವರನ್ನು, ಅಳುತ್ತಿರುವವರನ್ನು, ಒಬ್ಬೊಬ್ಬರಾಗಿ ನೆನೆಯುತ್ತಾನೆ. ಹಾಗಿ ಈ ರೀತಿ ಹಾರೈಸುತ್ತಾನೆ ಓಹ್! ಈತನು ದುಃಖದಿಂದ ಮುಕ್ತನಾಗಲಿ ಹಾಗು ಹಿಂಸಾ ಭಾವನೆಯಿಂದ ಮುಕ್ತನಾಗಲಿ ಅಥವಾ ಈತನು ರೋಗದಿಂದ ಮುಕ್ತನಾಗಲಿ ಹಾಗು ಭಯದಿಂದ ಮುಕ್ತನಾಗಲಿ ಅಥವಾ ಈತನು ನೋವಿನಿಂದ ಮುಕ್ತನಾಗಲಿ ಮತ್ತು ಎಲ್ಲಾ ದುಃಖಗಳಿಂದ ಮುಕ್ತನಾಗಲಿ, ಇವರು ನಷ್ಟದಿಂದ ಮುಕ್ತರಾಗಲಿ ಹಾಗು ಎಲ್ಲಾ ರೀತಿಯ ಶೋಕಗಳಿಂದ ಮುಕ್ತರಾಗಲಿ. ಈ ರೀತಿಯಾಗಿ ಒಬ್ಬರನ್ನು ತೆಗೆದುಕೊಂಡು ಅದರ ಬಗ್ಗೆ ಅವರ ದುಃಖ ನಿವಾರಣೆಯಾಗಲಿ ಎಂದು ಪ್ರಬಲವಾಗಿ ಹಾರೈಸಬೇಕು. ಇವರು ಎಲ್ಲಾ ದುಃಖಗಳಿಂದ ಮುಕ್ತರಾಗಲಿ ಹಾಗು ದುಃಖಕ್ಕೆ ಕಾರಣವಾದಂತಹ ಜನ್ಮದಿಂದ ಮುಕ್ತರಾಗಲಿ ಈ ವ್ಯಕ್ತಿಯು ಹಿಂಸಾ ಭಾವನೆಯಿಂದ ಮುಕ್ತರಾಗಲಿ ಈ ರೀತಿ ಧ್ಯಾನಿಸಬೇಕು.
ನಂತರ ಪ್ರಿಯರಾದವರನ್ನು ನೆನಪಿಗೆ ತಂದು ಓಹ್! ಅವರು ತಮ್ಮ ರೋಗದಿಂದ ಮುಕ್ತರಾಗಲಿ, ಅವರು ತಮ್ಮ ಎಲ್ಲಾ ದುಃಖ ದೌಭರ್ಾಗ್ಯಗಳಿಂದ ಮುಕ್ತರಾಗಲಿ ಎಂದು ಹಾರೈಸಬೆಕು.
ನಂತರ ಪಾಪಿಗಳನ್ನು ಮತ್ತು ದ್ರೋಹಿಗಳನ್ನು ನೆನಪಿಗೆ ತಂದು ಓಹ್! ಈತನು ತನ್ನ ದ್ವೇಷಗಳೆಲ್ಲದರಿಂದ, ತನ್ನ ಹಿಂಸಾಬೋಧನೆಯಿಂದ ಪೂರ್ಣವಾಗಿ ವಿಮುಕ್ತನಾಗಲಿ. ಈತನು ತನ್ನೆಲ್ಲಾ ದುಃಖಗಳಿಂದ ಮುಕ್ತನಾಗಲಿ, ಎಲ್ಲಾ ರೀತಿಯ ನೋವುಗಳಿಂದ ಮುಕ್ತನಾಗಲಿ. ಈತ ಜನ್ಮದಿಂದಲೇ ಮುಕ್ತನಾಗಲಿ. ನಂತರ ಹೀಗೆಯೇ ಪರಿಚಯಸ್ಥರ ಮೇಲೆ ಮಾಡಿ.
ನಂತರ ಕೊನೆಗೆ ತನ್ನಮೇಲೆ ನಾನು ನನ್ನ ಎಲ್ಲಾ ದುಃಖಗಳಿಂದ ಮುಕ್ತನಾಗಲಿ, ನಾನು ಪರರ ದುಃಖವನ್ನು ನಿವಾರಿಸುವಂತಾಗಲಿ ಎಂದು ಹಾರೈಸಬೇಕು. ಈ ರೀತಿಯಾಗಿ ಯಾರಲ್ಲೂ ಬೇಧಭಾವವಿಲ್ಲದೆ ಸರ್ವರಲ್ಲೂ ಸಮಾನವಾಗಿ ಕರುಣೆಯನ್ನು ಪ್ರಸರಿಸಿ. ಕೊನೆಗೆ
ಸರ್ವಜೀವಿಗಳು ದುಃಖದಿಂದ ಮುಕ್ತರಾಗಲಿ
ಸರ್ವಜೀವಿಗಳು ಶೋಕದಿಂದ ಮುಕ್ತರಾಗಲಿ
ಸರ್ವಜೀವಿಗಳು ನೋವಿನಿಂದ ಮುಕ್ತರಾಗಲಿ
ಸರ್ವಜೀವಿಗಳು ರೋಗದಿಂದ ಮುಕ್ತರಾಗಲಿ
ಸರ್ವಜೀವಿಗಳು ದುಃಸ್ಥಿತಿಗಳಿಂದ ಮುಕ್ತರಾಗಲಿ
ಸರ್ವಜೀವಿಗಳು ದೌಭರ್ಾಗ್ಯಗಳಿಂದ ಮುಕ್ತರಾಗಲಿ
ಎಂದು ಹಾರೈಸುವುದು. ಮೆತ್ತಾ ಧ್ಯಾನದಂತೆ ಪಯರ್ಾಯ ವಿಧಾನಗಳನ್ನು ಅನುಸರಿಸುವುದು. ಆದರೆ ಮೊದಲಿಗೆ ದುಃಖಿತರ ಮೇಲೆಯೇ ಮಾಡಬೇಕು.
ಇಲ್ಲಿಗೆ ಕರುಣಾ ಧ್ಯಾನ ಮುಗಿಯಿತು.
*********************************************************************************

ಮುದಿತಾ ಧ್ಯಾನ


ಮುದಿತಾ ಧ್ಯಾನವನ್ನು, ಆನಂದ ಧ್ಯಾನವೆಂತಲೂ, ಕರೆಯುತ್ತಾರೆ. ಇದು ಮೋದದಿಂದ (ಆನಂದದಿಂದ) ಕೂಡಿರುವುದರಿಂದ ಅಥವಾ ಆನಂದವಾಗುವ ಕಾರ್ಯವನ್ನು ಮಾಡುವುದರಿಂದ (ಮೋದನೆ) ಇದನ್ನು ಮುದಿತಾ ಎನ್ನುತ್ತಾರೆ (ಆನಂದ)
ಇದರ ಪ್ರಧಾನ ಲಕ್ಷಣವೆಂದರೆ ಪರರ ಉನ್ನತಿಯಲ್ಲಿ ಆನಂದಿಸುವುದು. ಇದರ ಕ್ರಿಯೆ ಏನೆಂದರೆ ಅಸೂಯೆ ತಾಳದೆ ಇರುವುದು. ಇದು ಬೇಸರವನ್ನು ಮತ್ತು ಅಸೂಯೆಯನ್ನು ತೆಗೆಯುವುದರಿಂದಾಗಿ ವ್ಯಕ್ತವಾಗುತ್ತದೆ. ಇದರ ತತ್ಕ್ಷಣದ ಕಾರಣ ಏನೆಂದರೆ ಉನ್ನತ ಜನರ ಯಶಸ್ಸನ್ನು ಕಾಣುವುದು ಮತ್ತು ಕೇಳುವುದು ಹಾಗು ಯೋಚಿಸುವುದಾಗಿದೆ. ಇದರ ಸಿದ್ಧಿಯ ಯಶಸ್ಸು ಅಸೂಯೆ ಮತ್ತು ಬೇಸರವನ್ನು ನಾಶಮಾಡುವುದರಲ್ಲಿದೆ. ಆದರೆ ಪ್ರಾಪಂಚಿಕ ಸಂತೋಷ, ಹಾಸ್ಯ, ಮೋಜು ಇದರ ಪರೋಕ್ಷ ಶತ್ರುವಾಗಿದೆ. ಅದನ್ನು ನಿವಾರಿಸಿದಾಗ ಇದು ಜಯವನ್ನು ಕಾಣುತ್ತದೆ.
ಈ ಧ್ಯಾನವನ್ನು ಆನಂದದ ಸ್ಥಿತಿ ಸ್ಥಾಪಿಸಲು ಹಾಗು ಅಸೂಯೆಯನ್ನು ಅಂತ್ಯ ಮಾಡಲು ಧ್ಯಾನಿಸುತ್ತಾರೆ. ಮೆತ್ತಾ ಕರುಣಾದ ಸಿದ್ಧಿಯು ಸುಲಭ. ಆದರೆ ಮುದಿತಾ ಸ್ಥಾಪನೆಗೆ ಅಪಾರ ಇಚ್ಛಾಶಕ್ತಿ ಮತ್ತು ಶ್ರಮದ ಅಗತ್ಯವಿದೆ. ಏಕೆಂದರೆ ಮಾನವನಲ್ಲಿ ಸ್ವಾರ್ಥದಿಂದ ಕೇವಲ ತಾನು, ತನ್ನ ಕುಟುಂಬ, ತನ್ನವರು ಈ ಸೀಮೆಯನ್ನು ಇರಲು ಇಚ್ಛಿಸುತ್ತಾರೆ. ಈ ಪರಿಧಿ ದಾಟಲು ಇಚ್ಛಿಸುವುದೇ ಇಲ್ಲ. ನಾವು ಇಂದು ಎಲ್ಲಾ ಕ್ಷೇತ್ರದಲ್ಲೂ ಅಸೂಯೆ ಕಾಣುತ್ತೇವೆ. ವಿದ್ಯಾಭ್ಯಾಸ, ಕ್ರೀಡಾರಂಗ, ವೃತ್ತಿರಂಗ, ವ್ಯಾಪಾರ, ರಾಜಕೀಯ, ಭಾಷೆ, ದೇಶ ಮಟ್ಟದಲ್ಲಿ ಅಷ್ಟೇ ಏಕೆ, ಧರ್ಮಗಳಲ್ಲಿ ಸಹಾ ಒಬ್ಬರ ಉನ್ನತಿ ಇನ್ನೊಬ್ಬರು ಸಹಿಸಲಾರರು. (ಸಾಕ್ರಟೀಸ್, ಕ್ರಿಸ್ತ, ಗಾಂಧಿ ಇವರೆಲ್ಲಾ ಬಲಿಯಾಗಿದ್ದು, ಅಸೂಯೆಯಿಂದಲೇ ಅಲ್ಲವೇ). ಅಸೂಯೆಯು ಅತ್ಯಂತ ಹೇಯವಾದಿ ಗುಣವಾಗಿದೆ. ಇದು ಮಾನವನನ್ನು ಸಂಕುಚಿತನನ್ನಾಗಿ ಮಾಡುತ್ತದೆ. ಅವನಗೆ ನಿಜವಾದ ಯಶಸ್ಸಿನ ರುಚಿ ಅನುಭವಿಸಲು ಬಿಡುವುದಿಲ್ಲ. ಆತನಿಗೆ ದಿವ್ಯವಾದ ಶ್ರೇಷ್ಠವಾದ ಆನಂದದ ಸವಿಯು ಸೇವಿಸದಂತೆ ಮಾಡುತ್ತದೆ. ಇನ್ನೊಬ್ಬರನ್ನು ಅಸೂಯೆಯಿಂದ ಕಾಣುತ್ತಾ ತಾವೇ ತಮ್ಮ ಕ್ಷೇತ್ರದಲ್ಲಿ ಕುಸಿಯುತ್ತಿರುತ್ತಾರೆ. ನಿಜವಾದ ಉನ್ನತಗಾಮಿಯು ಪರರನ್ನು ನ್ಯಾಯವಾದ ರೀತಿಯಲ್ಲಿ, ಇನ್ನಷ್ಟು ಪರಿಶ್ರಮದಿಂದ, ಸೃಜನಶೀಲತೆಯಿಂದ ಪರರನ್ನು ದಾಟಿ ಅಭಿವೃದ್ಧಿ ಹೊಂದುತ್ತಾನೆಯೇ ಹೊರತು ಪರರ ಪ್ರತಿಭೆಗಳನ್ನು ಚಿವುಟಿ, ಅವರಿಗೆ ಅಡ್ಡಿಯುಂಟು ಮಾಡಿ ಕೃತಿಮತೆಯ ಯಶಸ್ಸಿನಲ್ಲಿ ಆನಂದಿಸಲಾರ.
ಅಸೂಯೆ ನಾಶದ ಮಾರ್ಗವಾಗಿರುವ ಮುದಿತಾದ (ಅಭಿನಂದನಾ ಆನಂದ) ಧ್ಯಾನವಿಧಾನ ಹೀಗಿದೆ :
ಇಲ್ಲಿ ಸಾಧಕನು ನಿರ್ಜನ ನಿಶ್ಶಬ್ದ ವಾತಾವರಣದಲ್ಲಿ, ಪದ್ಮಾಸನದಲ್ಲಿ ಕುಳಿತು, ಪಾಪಯುತವಾದ ಅಕುಶಲವಾದ ಎಲ್ಲಾ ರೀತಿಯ ಯೋಚನೆಗಳಿಂದ ಮುಕ್ತನಾಗುತ್ತಾನೆ. ನಂತರ ಆತನು ತನಗೆ ಅತ್ಯಂತ ಪ್ರೀತಿ ಪಾತ್ರರನ್ನು ನೆನಪಿಸಿಕೊಳ್ಳುತ್ತಾನೆ. ಅತ್ಯಂತ ಪ್ರೀತಿ ಪಾತ್ರರೆಂದರೆ, ದಿನೇ ದಿನೇ ಉನ್ನತಿ ಹೊಂದುತ್ತಿರುವ ಮಗುವು ಆಗಬಹುದು ಅಥವಾ ಯಾರನ್ನು ನಾವು ನೋಡಿ ಮೊದಲು ಆನಂದಿತರಾಗಿ ನಕ್ಕು ನಂತರ ಮಾತನಾಡಿಸುತ್ತೇವೆಯೋ ಅಂತಹವರನ್ನು ನೆನೆಯುತ್ತಾ ಓಹ್ ಇವರು ಇನ್ನೂ ಸುಖಿಯಾಗಿರಲಿ, ಇನ್ನೂ ಉನ್ನತಿ ಹೊಂದಲಿ ಎಂದು ಹಾರೈಸುತ್ತಾ ಆನಂದ ಭಾವ ತಾಳಬೇಕು. ಅಥವಾ ಇವನು ಹಿಂದೆ ಉನ್ನತಿ ಹೊಂದಿದ್ದನು, ಹೀಗೆಯೇ ಈಗಲೂ ಮತ್ತು ಮುಂದೆಯು ಉನ್ನತಿ ಹೊಂದಲಿ ಎಂದು ಅಥವಾ ಈತನು ಮುಂದೆಯಾದರೂ ಇನ್ನೂ ಸುಖಿಯಾಗಿರಲಿ, ಇನ್ನೂ ಉನ್ನತಿ ಹೊಂದಲಿ.
ಓಹ್ ಆತನ ಮುಂದೆ ಅತ್ಯಂತ ಶ್ರೀಮಂತನಾಗಲಿ ಎಂದೂ
ಓಹ್ ಆತ ಮುಂದೆ ಅತ್ಯಂತ ಆರೋಗ್ಯವಂತ/ಸುಂದರನಾಗಲಿ
ಈ ಕ್ಷೇತ್ರದಲ್ಲಿ ಯಶಸ್ವಿಯಾಗಲಿ/ಅಗ್ರನಾಗಲಿ
ಓಹ್ ಆತ ಮುಂದೆ ಅತ್ಯಂತ ಬಲಿಷ್ಠನಾಗಲಿ
ಓಹ್ ಆತ ಮುಂದೆ ಅತ್ಯಂತ ಶೀಲವಂತನಾಗಲಿ
ಓಹ್ ಆತ ಮುಂದೆ ಅತ್ಯಂತ ಸಮಾಧಿವಂತನಾಗಲಿ
ಓಹ್ ಆತ ಮುಂದೆ ಅತ್ಯಂತ ಪ್ರಜ್ಞಾವಂತನಾಗಲಿ
ಓಹ್ ಆತ ಮುಂದೆ ಅತ್ಯಂತ ಹೃದಯವಂತನಾಗಲಿ
ಓಹ್ ಆತ ಮುಂದೆ ಅತ್ಯಂತ ವಿಮುಕ್ತನಾಗಲಿ
ಓಹ್ ಆತ ಮುಂದೆ ಅತ್ಯಂತ ಸುಖಿಯಾಗಿಯೇ ಇರಲಿ
ಓಹ್ ಆತ ಮುಂದೆ ಸದಾ ಅಭಿವೃದ್ಧಿಶೀಲನಾಗಲಿ
ಈ ರೀತಿ ಮುದಿತಾ ಧ್ಯಾನ ಮಾಡುತ್ತಾ, ನಂತರ ಆತನು ಪ್ರಿಯರಾದವರನ್ನು, ನಂತರ, ತಟಸ್ಥ ವ್ಯಕ್ತಿಗಳನ್ನು, ನಂತರ ದ್ವೇಷಿಸುವವರನ್ನು, ನಂತರ ಅಸೂಯೆಪಡುವವರನ್ನು, ನಂತರ ತನ್ನ ಮೆಲೆ ಪ್ರಸರಿಸಲಿ, ನಂತರ ಸರ್ವ ಜೀವಿಗಳ ಮೆಲೆ ಪ್ರಸರಿಸಲಿ, ಸರ್ವದಿಕ್ಕುಗಳಲ್ಲಿ ಪ್ರಸರಿಸಲಿ, ಮೆತ್ತಾ ಧ್ಯಾನದಂತೆ ಬೇಧಭಾವವಿಲ್ಲದೆ ಸರ್ವರ ಮೇಲೆ ಪ್ರಸರಿಸುವುದರಿಂದಾಗಿ ನಿವರಣಗಳಿಂದ ಮುಕ್ತನಾಗುತ್ತಾರೆ. ನಂತರ ಹಾಗೆಯೇ ತ್ರಿತೀಯ ಧ್ಯಾನದವರೆಗೂ ಆತನು ತಲುಪುತ್ತಾನೆ. ಅಲ್ಲಿಂದ ಆತನು ನೇರವಾಗಿ ವಿನ್ಯಾನನಂಚ ಯಾತನ ಸ್ಥಿತಿಗೆ ತಲುಪಬಹುದು ಅದಕ್ಕೆ ಈ ಧ್ಯಾನ ಶ್ರೇಷ್ಠವಾದ ಆಧಾರವಾಗಿದೆ.
ಮುದಿತಾ ಧ್ಯಾನದ ಲಾಭಗಳು ಮೆತ್ತಾ ಧ್ಯಾನದಂತೆಯೆ ಅಗಿರುತ್ತದೆ.
ಇಲ್ಲಿಗೆ ಮುದಿತಾ ಧ್ಯಾನವು ಮುಗಿಯಿತು.

*********************************************************************************

ಉಪೇಖ್ಖಾ (ಉಪೇಕ್ಷಾ) ಧ್ಯಾನ


ಮಾನವ ಶಾಂತಿ ಅಪೇಕ್ಷೆಯಿಂದಲೇ ಪ್ರಾರಂಭದಲ್ಲಿ ಧರ್ಮದ ಬಳಿಗೆ ಬರುತ್ತಾನೆ. ಜೀವನದಲ್ಲಿ ಈ ಶಾಂತಿಯು ಸಮಚಿತ್ತತೆಯಿಂದ ಲಭಿಸುತ್ತದೆ. ಜೀವನದಲ್ಲಿ ಲಾಭ, ನಷ್ಟ, ಜಯ, ಪರಾಜಯ, ನಿಂದೆ, ಸ್ತುತಿ, ಸುಖ-ದುಃಖಗಳು ಬರುತ್ತವೆ, ಇರುತ್ತವೆ. ಹಾಗೆಯೇ ಸಮಚಿತ್ತತೆಯನ್ನು ಲೋಭ, ದ್ವೇಷ, ಭಯ, ಚಿಂತೆಗಳು ಸಹಾ ಕದಡುತ್ತದೆ. ಈ ಎಲ್ಲಾ ಕ್ಲೇಶಗಳನ್ನು ಸುಖ-ದುಃಖಗಳನ್ನು ಮೀರಿದ ಸ್ಥಿತಿಯೇ ಸಮಚಿತ್ತತೆ ಆಗಿದೆ. ಇದು ಪಾಲಿಸಲು ಅತ್ಯಂತ ಕಠಿಣವು, ಅಷ್ಟೇ ಪ್ರಾಧಾನ್ಯತೆವುಳ್ಳದ್ದು ಆಗಿದೆ.
ಸಮಚಿತ್ತತೆಯಿಂದ ಕೂಡಿದವನು ಅಭಯನು, ಅಶೋಕನು, ಅದ್ವೇಷಿಯು ಹಾಗೆಯೇ ಅಲೋಭಿಯು ಮತ್ತು ಅಮೋಹಿಯು ಆಗಿರುತ್ತಾನೆ. ಅದರಿಂದಾಗಿ ಇದು ಮಹತ್ತರವಾದ ಗುಣವಾಗಿದೆ. ಮಾನವನಿಗೆ ಸದಾ ಪ್ರಿಯ ಮತ್ತು ಅಪ್ರಿಯ ಬಯಕೆಗಳಿರುತ್ತದೆ. ಅದರಲ್ಲು ಪ್ರಿಯ ವ್ಯಕ್ತಿಗಳು ಮತ್ತು ಅಪ್ರಿಯ ವ್ಯಕ್ತಿಗಳು ಎಂಬ ಬಂಧನವಿದ್ದು, ಇದರಿಂದಾಗಿ ಆತನು ಪ್ರಿಯ ವ್ಯಕ್ತಿಗಳ ವಿಯೋಗದಿಂದ ದುಃಖಿತನಾಗುತ್ತಾನೆ. ಹಾಗೆಯೇ ಅಪ್ರಿಯ ವ್ಯಕ್ತಿಗಳ ಸಮಾಗಮದಿಂದ ಭಯ ಅಥವಾ ದ್ವೇಷವುಳ್ಳವನು ಆಗುತ್ತಾನೆ. ಯಾವಾಗ ಆತನಲ್ಲಿ ಈ ಪ್ರಿಯ ವ್ಯಕ್ತಿಗಳು ಮತ್ತು ಅಪ್ರಿಯ ವ್ಯಕ್ತಿಗಳು ಎಂಬ ಬಾಂಧವ್ಯ ಸಮಚಿತ್ತತೆಯಿಂದಾಗಿ ಅಳಿದು ಹೋಗುತ್ತದೋ ಸರ್ವರನ್ನು ಶಾಂತವಾಗಿ ಕಾಣುತ್ತಾನೆ. ವ್ಯಕ್ತಿಗಳ ಬಂಧನದಿಂದ ಮುಕ್ತನಾಗುತ್ತಾನೆ. ಸರ್ವರನ್ನು ಸಮಭಾವದಿಂದ ಕಾಣುತ್ತಾನೆ. ನ್ಯಾಯಪರತೆ ಹೊಂದುತ್ತಾನೆ. ಆಸಕ್ತಿಯನ್ನು ವಜರ್ಿಸಿ ನೋಡುವುದರಿಂದ (ಉಪೇಖ್ಖತ್ತಿ) ಮತ್ತು ತಟಸ್ಥತೆ ಹೊಂದಿರುವುದರಿಂದಾಗಿ ಇದನ್ನು ಉಪೇಖ್ಖಾ ಎನ್ನುತ್ತಾರೆ.
ಉಪೇಖ್ಖಾದ ಲಕ್ಷಣವೇನೆಂದರೆ ಜೀವಿಗಳ ಬಗ್ಗೆ ತಟಸ್ಥತೆ. ಇದರ ಕಾರ್ಯ ಏನೆಂದರೆ ಎಲ್ಲಾ ಜೀವಿಗಳನ್ನು ಸಮಭಾವದಿಂದ ನೋಡುವುದು. ಇದು ರಾಗ ಮತ್ತು ದ್ವೇಷಗಳು (ಪ್ರಿಯ ಮತ್ತು ಅಪ್ರಿಯ ಬಯಕೆಗಳು) ಶಾಂತವಾಗುವುದರಿಂದ ವ್ಯಕ್ತವಾಗುತ್ತದೆ. ಇದರ ತತ್ಕ್ಷಣದ ಕಾರಣ ಏನೆಂದರೆ ಜೀವಿಗಳ ಸುಖದುಃಖಕ್ಕೆ ಆ ಜೀವಿಗಳೇ ಕಾರಣ ಎಂದು ಸ್ಪಷ್ಟವಾಗಿ ಅರಿಯುವುದು. ಉಪೇಖ್ಖಾವು ಅಪ್ರಿಯ ಮತ್ತು ಪ್ರಿಯ ಯೋಚನೆಗಳು ಸ್ತಬ್ದವಾದಾಗ ಜಯಶಾಲಿಯಾಗುತ್ತದೆ. ಆದರೆ ಅಲಕ್ಷಬಾರದ ಪ್ರಾಪಂಚಿಕ ವಿಷಯಗಳಲ್ಲಿ ಉಪೇಕ್ಷೆ ತಾಳಿದಾಗ ಸೋಲುತ್ತದೆ.

ಉಪೇಖ್ಖಾ ಧ್ಯಾನ ವಿಧಾನ :

ಯಾರು ಬ್ರಹ್ಮವಿಹಾರದ ಉಪೇಖ್ಖಾ ಧ್ಯಾನದಲ್ಲಿ ತಲ್ಲೀನನಾಗಲು ಬಯಸುವನೋ ಆತನು ಮೊದಲು ಮೆತ್ತಾದಲ್ಲಿ ಆಗಲಿ, ಅಥವಾ ಕರುಣಾದಲ್ಲಿ ಆಗಲಿ ಅಥವಾ ಮುದಿತಾದಲ್ಲಿ ಆಗಲಿ ತೃತೀಯ ಸಮಾಧಿ ಪಡೆದಿರಬೇಕು. ಅನಂತರ ಆತನು ತೃತೀಯ ಸಮಾಧಿಯಿಂದ ನಿರ್ಗಮಿಸಿ ಅದರ ಪುನರ್ ಅವಲೋಕನ ಮಾಡಬೇಕು. ಹಾಗೆ ಮಾಡಿದಾಗ ಆತನಿಗೆ ಜೀವಿಗಳಿಗೆ ಅಂಟುವಿಕೆ ದುಃಖದ ರೀತಿ ಭಾಸವಾಗುತ್ತದೆ. ಹಾಗು ಆನಂದಕ್ಕಿಂತ, ಸುಖಕ್ಕಿಂತ, ಆನಂದ ಮೀರಿದ, ಸುಖವನ್ನು ಮೀರಿದ ಸಮಚಿತ್ತತೆಯು ಇಷ್ಟವಾಗುತ್ತದೆ. ಆಗ ಆತನು ಸಮಚಿತ್ತತೆಯಿಂದ ಕೂಡಿದ ಮನದಿಂದ ತಟಸ್ಥ ವ್ಯಕ್ತಿಯ ಬಗ್ಗೆ ಕೇಂದ್ರೀಕೃತಗೊಳ್ಳುತ್ತಾನೆ. ಬಹುಕಾಲ ಹೀಗೆ ಇದ್ದು ನಂತರ ಆತನು ಪ್ರಿಯ ವ್ಯಕ್ತಿಯ ಬಗ್ಗೆ ಸಮಚಿತ್ತತೆಯಿಂದ ಕೂಡಿ ಬಹುಕಾಲ ನೆಲೆಸುತ್ತಾನೆ. ನಂತರ ದ್ವೇಷಿಸುವವನನ್ನು ನೆನಪು ಮಾಡುತ್ತಾ ಆತನ ಬಗ್ಗೆಯು ಸಮಚಿತ್ತತೆಯನ್ನು ಪ್ರಸಾರ ಮಾಡುತ್ತಾನೆ. ನಂತರ ಎಲ್ಲಾ ಜೀವಿಗಳ ಮೇಲೆ ಸಮಚಿತ್ತತೆ ಪ್ರಸರಿಸುತ್ತಾನೆ. ಹಾಗೆಯೇ ಪೂರ್ವ ದಿಕ್ಕಿನಲ್ಲಿರುವ ಎಲ್ಲಾ ಜೀವಿಗಳ ಬಗ್ಗೆ ಸಮಚಿತ್ತತೆ ಪ್ರಸರಿಸುತ್ತಾನೆ. ನಂತರ ಪಶ್ಚಿಮ, ಉತ್ತರ, ದಕ್ಷಿಣ ಊದ್ರ್ವ, ಅದೋ ಹೀಗೆ ಎಲ್ಲಾ ಜೀವಿಗಳ ಮೇಲೆ ಸಮಭಾವದಿಂದ, ಸಮಚಿತ್ತತೆಯಿಂದ ಸಮಚಿತ್ತತೆಯನ್ನು ಪ್ರಸರಿಸುತ್ತಾನೆ.
ದಿಕ್ಕಿನ ಮೂಲಕ ಆತನು ಸಮಚಿತ್ತತೆಯನ್ನು ಹೇಗೆ ಪ್ರಸರಿಸುತ್ತಾನೆ ಎಂದರೆ ಮೊದಲು 1 ಅಥವಾ 2 ಮನೆಗಳು, ನಂತರ 15 ಮನೆಗಳು, ಹಾಗೆಯೇ ಒಂದು ಬೀದಿ, ಅರ್ಧ ಹಳ್ಳಿ, ಜಿಲ್ಲೆ, ರಾಜ್ಯ, ದೇಶ, ಖಂಡ, ಪೃಥ್ವಿ, ಸೌರವ್ಯೂಹ ಹಾಗೆಯೇ ಇಡೀ ಬ್ರಹ್ಮಾಂಡವನ್ನು ಆತನು ಸಮಚಿತ್ತತೆಯಿಂದ ಪ್ರಸರಿಸುತ್ತಾನೆ. ಚತುರ್ಥ ಧ್ಯಾನ ಪ್ರಾಪ್ತಿಯಾಗಿ ನಂತರ ಆತನು ಅದರ ಸಹಾಯದಿಂದ ನೇರವಾಗಿ ಅಕಿಂಚಾಯಾತನ ಅರೂಪ ಸಮಾಧಿ ಪಡೆಯುತ್ತಾನೆ.

ಬುದ್ಧ ಘೋಷರವರ ಪ್ರಕಾರ ನಾಲ್ಕು ಬ್ರಹ್ಮವಿಹಾರಗಳು ಪೂರ್ಣತೆಯಿಂದ ದಶಪಾರಮಿಗಳು ಪೂರ್ಣವಾಗುತ್ತದೆ.

ಬ್ರಹ್ಮವಿಹಾರದ ಲಕ್ಷಣಾಧಿಗಳು:

ಮೆತ್ತಾ: ಮೆತ್ತಾದ ಲಕ್ಷಣವೇನೆಂದರೆ ಜೀವಿಗಳ ಕ್ಷೇಮಾಭಿವೃದ್ಧಿಯನ್ನು ಉತ್ತೇಜಿಸುವುದು. ಮೆತ್ತಾದ ಕ್ರಿಯೆ ಏನೆಂದರೆ ಕ್ಷೇಮಕ್ಕಾಗಿಯೇ ಆದ್ಯತೆ ನೀಡುವುದು. ಇದು ವ್ಯಕ್ತವಾಗುವುದು ಕೆರಳಿಕೆಯಿಂದ ಮುಕ್ತರಾದಾಗಲೇ. ಹಾಗು ಇದಕ್ಕೆ ತತ್ಕ್ಷಣದ ಕಾರಣವೇನೆಂದರೆ ಜೀವಿಗಳಲ್ಲಿ ಪ್ರೀತಿಪಾತ್ರತೆ ಗಮನಿಸಿದಾಗ ಅಥವಾ ನೆನೆದಾಗಲು ಉಂಟಾಗುವುದು. ಮೆತ್ತಾವು ಯಶಸ್ವಿಯಾಗುವುದು. ದ್ವೇಷವು ವಜ್ರ್ಯವಾದಾಗಲೇ ಹಾಗು ಸ್ವಾರ್ಥಯುತ ಪ್ರೇಮ ಅಥವಾ ವಾತ್ಸಲ್ಯ ನುಸುಳಿದಾಗ ಇದಕ್ಕೆ ಸೋಲು ಉಂಟಾಗುತ್ತದೆ.
ಕರುಣೆ: ಕರುಣೆಯ ಲಕ್ಷಣವೇನೆಂದರೆ ದುಃಖವನ್ನು ಶಮನಗೊಳಿಸುವುದನ್ನು ಉತ್ತೇಜನ ಮಾಡುವುದು. ಇದರ ಕ್ರಿಯೆಯೇನೆಂದರೆ ಪರರ ದುಃಖಗಳನ್ನು ಸಹಿಸದೆ ಇರುವುದು. ಇದು ಕ್ರೌರ್ಯ ನಶಿಸಿದಾಗ ವ್ಯಕ್ತವಾಗುವುದು. ದುಃಖಿತರನ್ನು ಕಾಣುವುದೇ ತತ್ಕ್ಷಣದ ಕಾರಣವಾಗಿದೆ. ಇದು ಕ್ರೌರ್ಯ ನಶಿಸಿದಾಗ ಯಶಸ್ವಿಯಾಗುವುದು. ಶೋಕದಲ್ಲಿದ್ದರೆ ಸೋಲುವುದು.
ಮುದಿತಾ: ಮುದಿತಾದ ಲಕ್ಷಣವೇನೆಂದರೆ ಪರರ ಯಶಸ್ಸನ್ನು ಆನಂದಿಸುವುದು. ಇದರ ಕ್ರಿಯೆ ಏನೆಂದರೆ ಅಸೂಯೆಯನ್ನು ದಮಿಸುವುದು. ಇದು ವ್ಯಕ್ತವಾಗುವುದು ಅಸೂಯೆಯ ನಾಶವಾದಾಗಲೇ. ಇದರ ತತ್ಕ್ಷಣದ ಕಾರ್ಯ ಜೀವಿಗಳ ಯಶಸ್ಸು ಕಾಣುವುದು. ಇದು ಯಶಸ್ಸು ಪಡೆಯುವುದು ಅಸೂಯೆಯು ನಶಿಸಿದಾಗಲೇ. ಆದರೆ ಸೋಲುವುದು ಮೋಜು ಅಥವಾ ನಲಿವಿನಿಂದ.
ಉಪೇಕ್ಖಾ: ಉಪೇಕ್ಖಾದ (ಉಪೇಕ್ಷೆ) ಲಕ್ಷಣವೇನೆಂದರೆ ಜೀವಿಗಳ ಬಗೆಗಿನ ತಟಸ್ಥತೆಯನ್ನು ಉತ್ತೇಜಿಸುವುದು. ಇದರ ಕ್ರಿಯೆಯೇನೆಂದರೆ ಜೀವಿಗಳಲ್ಲಿ ಸಮಾನ ಮನೋಭಾವದಿಂದ ನೋಡುವುದು. ಇದು ವ್ಯಕ್ತವಾಗುವುದು ಅಸಮಾಧಾನ ಹಾಗು ಸಮ್ಮತಿಗಳನ್ನು ಶಾಂತಗೊಳಿಸಿದಾಗಲೇ. ಇದರ ತತ್ಕ್ಷಣದ ಕಾರ್ಯವೇನೆಂದರೆ ಜೀವಿಗಳಲ್ಲಿ ತಮ್ಮ ಕರ್ಮಗಳಿಗೆ ತಾವೇ ಹೊಣೆಗಾರರು, ಪಾಲುದಾರರು ಎಂದು ನೋಡುವುದರಿಂದಾಗಿ, ಇದು ಯಶಸ್ವಿಯಾಗುವುದು ಪಕ್ಷಾತೀತ ಅಥವಾ ರಾಗ-ದ್ವೇಷಗಳು ಮೀರಿದಾಗಲೇ (ಸಮ್ಮತಿ ಮತ್ತು ಅಸಮಾಧಾನ) ಹಾಗು ಸಮಚಿತ್ತತೆ ಸಾಧಿಸಿದಾಗಲೇ. ಆದರೆ ಸೋಲುವುದು ಪ್ರಜ್ಞಾರಹಿತ ತಟಸ್ಥೆ ತೋರಿದಾಗ ಮಾತ್ರವೇ.
ಬ್ರಹ್ಮವಿಹಾರದ ಉದ್ದೇಶ: ಬ್ರಹ್ಮವಿಹಾರದ ಸಾಮಾನ್ಯ ಉದ್ದೇಶವೇನೆಂದರೆ, ಅತ್ಯುತೃಷ್ಟವಾದುದರಲ್ಲಿ, ದಿವ್ಯವಾದುದರಲ್ಲಿ, ಅಂತಹ ಆನಂದ ಹಾಗು ಪ್ರಜ್ಞಾಯುತ ಸ್ಥಿತಿಗಳಲ್ಲಿ ನೆಲೆಸಿ ವಿಹರಿಸುವುದಾಗಿದೆ. ಪ್ರತ್ಯೇಕವಾಗಿ ಹೇಳುವುದಾದರೆ ಮೆತ್ತಾ ಧ್ಯಾನದ ಉದ್ದೇಶವು ದ್ವೇಷವನ್ನು ಅಳಿಸಿಹಾಕುವುದು. ಕರುಣಾ ಧ್ಯಾನದ ಉದ್ದೇಶವು ಕ್ರೌರ್ಯವನ್ನು ಅಳಿಸಿಹಾಕುವುದು. ಮುದಿತಾ ಧ್ಯಾನದ ಉದ್ದೇಶವು ಅಸೂಯೆಯನ್ನು ಅಳಿಸಿಹಾಕುವುದು. ಉಪೇಕ್ಖಾ ಧ್ಯಾನದ ಉದ್ದೇಶವು ರಾಗ-ದ್ವೇಷವನ್ನು ಅಳಿಸಿಹಾಕುವುದು.
ಪ್ರಕ್ರಿಯೆ: ಧ್ಯಾನ ಮಾಡಬೇಕೆನ್ನುವ ಇಚ್ಛೆಯಿಂದ ಈ ಪ್ರಕ್ರಿಯೆ (ಧ್ಯಾನ) ಆರಂಭವಾಗುವುದು, ಅಡ್ಡಿಗಳ (ನಿವರಣ) ನಿವಾರಣೆಯಿಂದ ಮದ್ಯಮಾವಸ್ಥೆ ತಲುಪುವುದು, ಸಮಾಧಿಪ್ರಾಪ್ತಿಯಿಂದ ಅಂತ್ಯವಾಗುವುದು.
ಈ ಬ್ರಹ್ಮವಿಹಾರದ ಧ್ಯಾನಗಳ ಧ್ಯಾನವಸ್ತು ಒಂದು ಜೀವಿಯಾಗಬಹುದು ಅಥವಾ ಹಲವಾರು ಜೀವಿಗಳಾಗಬಹುದು. ಈ ಧ್ಯಾನದಲ್ಲಿ ಕಸಿಣದಂತೆ ಪತಿಭಾಗ ನಿಮಿತ್ತದ ವಿಸ್ತರಣೆಯಿಲ್ಲ. ಬದಲಾಗಿ ಮೈತ್ರಿಯ (ಇತ್ಯಾದಿ) ಪ್ರಸರಣೆ ವಿಸ್ತಾರವಾಗುತ್ತಾ ಹೋಗುತ್ತದೆ. ಹೇಗೆಂದರೆ ಒಬ್ಬ ವೃತ್ತಿಯಿಂದ, ಊರು, ದೇಶ, ವಿಶ್ವ, ಬ್ರಹ್ಮಾಂಡ ಹೀಗೆಯೇ ಸಾಗುತ್ತದೆ.
ಬ್ರಹ್ಮವಿಹಾರದಿಂದ ಬುದ್ಧತ್ವ:
ಮಹಾಬೋಧಿಸತ್ವರು ಜೀವಿಗಳ ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡಿ, ಜೀವಿಗಳ ದುಃಖ ಇಷ್ಟಪಡುವುದಿಲ್ಲ. ಅವರು ಜೀವಿಗಳಲ್ಲಿ ಭೇದಭಾವ ಇಡದೆ ಎಲ್ಲಾ ಜೀವಿಗಳಿಗೂ ದಾನ, ಸಹಾಯ ಮಾಡುತ್ತಲೇ ಇರುತ್ತಾರೆ. ಅದೇ ಅವರ ಆನಂದಕ್ಕೆ ಪ್ರಧಾನಮೂಲವಾಗಿರುತ್ತದೆ. ಅವರಲ್ಲಿ ಇದನ್ನು ಈತನಿಗೆ ನೀಡಬೇಕು, ಈತನಿಗೆ ನೀಡಬಾರದು ಎಂಬ ಭೇದಭಾವವಿರುವುದಿಲ್ಲ. ಹಾಗೆಯೇ ಜೀವಿಗಳಿಗೆ ಹಿಂಸೆ ತಡೆಯುವುದಕ್ಕೋಸ್ಕರವಾಗಿ ಅವರು ಶೀಲಗಳನ್ನು ಅಭ್ಯಾಸ ಮಾಡುತ್ತಿರುತ್ತಾರೆ. ಹಾಗೆಯೇ ಜೀವಿಗಳ ಹಿತಕ್ಕಾಗಿ ಹಾಗು ಶೀಲಗಳನ್ನು ಪೂರ್ಣಗೊಳಿಸಲು ತ್ಯಾಗವನ್ನು ಅಭ್ಯಾಸಿಸುತ್ತಾರೆ. ಜೀವಿಗಳಿಗೆ ಯಾವುದು ಒಳಿತು ಹಾಗು ಕೆಡಕು ಎಂಬುದರ ಬಗ್ಗೆ ಗೊಂದಲ ಉಂಟಾಗದಿರಲು ಅವರು ಪ್ರಜ್ಞಾವನ್ನು ಪರಿಶುದ್ಧಗೊಳಿಸುತ್ತಾರೆ. ಅವರ ಹೃದಯದಲ್ಲಿ ಜೀವಿಗಳ ಬಗ್ಗೆ ಅಪಾರವಾದ ಕಾಳಜಿಯಿದ್ದು ಅದಕ್ಕಾಗಿ ಅವರು ನಿರಂತರವಾಗಿ ಪ್ರಯತ್ನಶೀಲತೆಯನ್ನು ಚಾಲನೆ ನೀಡುತ್ತಾ ಮಹತ್ತರವಾದ ಸಾಹಸಗಳನ್ನು ಮಾಡುತ್ತಾರೆ. ಹಾಗೆಯೇ ಅವರು ಜೀವಿಗಳ ಹಲವಾರು ಬಗೆಯ ಪಾಪಗಳನ್ನು, ತಪ್ಪುಗಳನ್ನು, ಕ್ಷಮಯುತವಾಗಿ ಸಹಿಸುತ್ತಾರೆ. ನಾವು ನಿನಗೆ ಇದನ್ನು ನೀಡುವೆವು, ನಿನಗಾಗಿ ಇದನ್ನು ಮಾಡುವೆವು ಎಂದು ನುಡಿದ ಆತನಿಗೆ ವಚನಭಂಗ ಮಾಡುವುದಿಲ್ಲ. ಸತ್ಯಸಂಧತೆಯಿಂದಲೇ ಕೂಡಿರುತ್ತಾರೆ. ಅವರು ಪರಹಿತ ಪರಸುಖಕಾಮನೆಯಲ್ಲಿ ಅಚಲವಾಗಿ ದೃಢನಿಧರ್ಾರದಿಂದಲೇ ಕೂಡಿರುತ್ತಾರೆ. ಅವರು ಅಚಲ ಮೆತ್ತಾವನ್ನು ತಮ್ಮ ಮುಂದೆಯೇ ಇರುವಂತೆ ನೋಡಿಕೊಳ್ಳುತ್ತಾರೆ. ಅದರ ಸಮಚಿತ್ತತೆಯನ್ನು ಸಾಧಿಸಿರುವುದರಿಂದಾಗಿ ಯಾವುದೇ  ನಿರೀಕ್ಷಣೆಗಳಾಗಲಿ, ಪಾರಿತೋಷಕಗಳಾಗಲಿ ಇಟ್ಟಿರುವುದಿಲ್ಲ. ಈ ರೀತಿಯಾಗಿ ದಶಪಾರಮಿಗಳನ್ನು ಪರಿಪೂರ್ಣಗೊಳಿಸಿರುತ್ತಾರೆ. ಹೀಗಾಗಿ ಬ್ರಹ್ಮವಿಹಾರವು ಎಲ್ಲಾ ಸದ್ಗುಣ ಸ್ಥಿತಿಗಳನ್ನು ಪೂರ್ಣಗೊಳಿಸುತ್ತದೆ. ಹೇಳುವುದಾದರೆ, ದಶಬಲಗಳು, ನಾಲ್ಕುರೀತಿಯ ಅಭಯಗಳು, ಆರುಬಗೆಯ ಅಭಿಜ್ಞಾಗಳು ಮತ್ತು ಸಮ್ಮಾಸಂಬುದ್ಧರ 18 ಸ್ಥಿತಿಗಳು ಇವೆಲ್ಕಕ್ಕೂ ಬ್ರಹ್ಮವಿಹಾರವೇ ಆಧಾರವಾಗಿದೆ. ಹೀಗಾಗಿ ದಾನದಿಂದ ಆರಂಭಿಸಿ ಎಲ್ಲಾ ಸದ್ಗುಣ ಪಾರಮಿಗಳೆಲ್ಲವನ್ನು ಅವರು ಪರಿಪೂರ್ಣಗೊಳಿಸುತ್ತಾರೆ.

ಸಜ್ಜನರ ಆನಂದಕ್ಕಾಗಿ ರಚಿಸಲ್ಪಟ್ಟಿರುವ ವಿಶುದ್ಧಿಮಾರ್ಗದ ಸಮಾಧಿ ಭಾಗದ
9ನೇ ಅಧ್ಯಾಯವಾದ ಬ್ರಹ್ಮವಿಹಾರ ನಿದ್ದೇಸ ಮುಗಿಯಿತು 

No comments:

Post a Comment