Wednesday 11 April 2018

visuddhi magga ಸೀಲ ಅಧ್ಯಾಯ 1 ಸೀಲ ನಿದ್ದೇಸ (ಶೀಲದ ವಿವರಣೆ)

                                         ಭಾಗ-1                                           ಸೀಲ                                         ಅಧ್ಯಾಯ 1

ಸೀಲ ನಿದ್ದೇಸ(ಶೀಲದ ವಿವರಣೆ)

ನಿದಾನಾದಿ ಕಥಾ: ತಿಪಿಟಕಗಳಲ್ಲಿ ಒಂದಾದ ಸುತ್ತಪಿಟಕದಲ್ಲಿ, ಸುತ್ತಪಿಟಕದಲ್ಲಿ ಒಂದಾದ ಸಂಯುಕ್ತನಿಕಾಯದಲ್ಲಿ, ಸಂಯುಕ್ತನಿಕಾಯದ ದೇವತಾ ಸಂಯುಕ್ತದಲ್ಲಿ, ದೇವತಾ ಸಂಯುಕ್ತದ ಸತಿವಗ್ಗದಲ್ಲಿ ಮೂರನೆಯದೇ ಜಟಾಸುತ್ತ. ಅದರಲ್ಲಿ ಈ ಘಟನೆ ಬರುವುದು.
ಸೀಲೇ ಪತಿಟ್ಠಾಯ ನರೋ ಸಪಞ್ಞೋ, ಚಿತ್ತಂ ಪಞ್ಞಂ ಭಾವಯಂ |
ಅತಾಪೀ ನಿಪಕೋ ಭಿಕ್ಖು, ಸೋ ಇಮಂ ವಿಜಟಯೇ ಜಟನ್ತಿ ||
ಯಾವಾಗ ಜ್ಞಾನಿಯು ಶೀಲದಲ್ಲಿ ಸುಪ್ರತಿಷ್ಠಾಪನೆಯಾಗುವನೋ ಸಮಾಧಿ ಹಾಗು ಪಞ್ಞಾವನ್ನು ಅಭಿವೃದ್ಧಿಗೊಳಿಸುತ್ತಾನೋ ಅಂತಹ ಉತ್ಸಾಹಿ ಹಾಗು ಮೇಧಾವಿ ಭಿಕ್ಖುವು ಬಲೆಯ ತೊಡಕಾದ ಬಂಧನಗಳಿಂದ (ಜಟೆಗಳ) ಬಿಡುಗಡೆ ಪಡೆಯುತ್ತಾನೆ (ಸಂ.ನಿ. 1.1.3).
ಇದು ಭಗವಾನರಿಂದ ಉತ್ತರಿಸಲ್ಪಟ್ಟಿದೆ. ಆದರೆ ಏಕೆ ಉತ್ತರಿಸಲ್ಪಟ್ಟಿತು? ಭಗವಾನರು ಶ್ರಾವಸ್ತಿಯಲ್ಲಿ ವಿಹರಿಸುತ್ತಿರುವಾಗ, ಆ ರಾತ್ರಿ ದೇವತೆಯೊಂದು ತನ್ನ ಸಂದೇಹವನ್ನು ಹೀಗೆ ನಿವೇದಿಸಿತು:
ಅನ್ತೋ ಜಟಾ ಬಹಿ ಜಟಾ, ಜಟಾಯ ಜಟಿತಾ ಪಜಾ |
ತಂ ತಂ ಗೋತಮ ಪುಚ್ಛಾಮಿ, ಕೋ ಇಮಂ ವಿಜಟಯೇ ಜಟನ್ತಿ ||  (ಸ.ನಿ.1.13)
ಆಂತರ್ಯದಲ್ಲಿ ಜಟೆಗಳಿವೆ (ತೊಡಕಾದ ಬಂಧನಗಳು) ಬಾಹ್ಯದಲ್ಲಿಯೂ ಜಟೆಗಳಿವೆ. ಜೀವಿಗಳು ಈ ಜಟೆಗಳಿಂದ ಜಟಿಲಗೊಂಡಿರುವರು. ಪೂಜ್ಯ ಗೋತಮರಾದ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ, ಈ ಜಟಿಲವಾಗಿರುವ ಜಟೆಗಳಿಂದ ಬಿಡುಗಡೆ ಯಾರು ಪಡೆಯುತ್ತಾರೆ? ಆಗ ಭಗವಾನರು ಈ ಮೇಲಿನ ಗಾಥೆಯನ್ನು ನುಡಿದಿದ್ದರು.

ಈ ಗಾಥೆಗಳ ಸಂಕ್ಷಿಪ್ತ ವಿವರಣೆ

ಇಲ್ಲಿ ಆಂತರ್ಯದ ಜಟೆಯೆಂದರೆ ತೀವ್ರ ಬಯಕೆಗಳೇ ಆಗಿದೆ. ಹಾಗು ಬಾಹ್ಯ ಜಟೆಯೆಂದರೆ ಒಬ್ಬ ವ್ಯಕ್ತಿಗೆ ಇತರ ವ್ಯಕ್ತಿಗಳ ಮೇಲಿರುವ ಬಾಂಧವ್ಯದ ಬಂಧನಗಳೇ ಆಗಿವೆ. ಅದು ದ್ವೇಷವಾಗಿರಬಹುದು, ಕಾಮವಾಗಿರಬಹುದು, ಸ್ನೇಹವಾಗಿರಬಹುದು. ಭಕ್ತಿ ಗೌರವ ವಾತ್ಸಲ್ಯವೇ ಆಗಿರಬಹುದು. ಪ್ರತಿಯೊಬ್ಬರು ಪರರನ್ನು (ತನ್ನ ಹೊರತು ಎಲ್ಲರೂ) ಮನಸ್ಸಿಗೆ ಹಚ್ಚಿಕೊಂಡು ಅವರ ಮನಸ್ಸಿನಲ್ಲೆಲ್ಲಾ ಈ ವ್ಯಕ್ತಿಗಳ ಬಗ್ಗೆಯೇ ಯೋಚನೆಗಳಿರುತ್ತವೆ. ಹೇಗೆ ಬಂಬು ವೃಕ್ಷಗಳು ಇತರ ಬಂಬುಗಳಿಗೆ ಬಲಿಷ್ಠವಾಗಿ ಬಂಧಿತವಾಗಿರುವಂತೆ ಪ್ರಜೆಗಳೆಲ್ಲರೂ (ಜೀವಿಗಳೆಲ್ಲವೂ) ಹೀಗೆ ಮನಸ್ಸಿನ ಶಾಂತಿಗೆ ವಿರುದ್ಧವಾದ ಈ ಬಂಧನಗಳಲ್ಲಿ ಸಿಲುಕಿವೆ. ಇದರಿಂದಾಗಿ ಜನ್ಮ ಜನ್ಮಗಳಲ್ಲಿ ಅವರ ಹುಡುಕಾಟವನ್ನು ಅರಿತೋ, ಅರಿಯದೆಯೋ ಮಾಡುತ್ತಿರುತ್ತಾರೆ. ಈ ರೀತಿಯ ಜಟಿಲವಾದ ಬಂಧನಗಳನ್ನು ಛೇದಿಸುವ ಯಶಸ್ವಿ ಯಾರು? ಎಂದು ಆ ದೇವತೆಯು ಭಗವಾನರಲ್ಲಿ ಅತ್ಯಂತ ಕುತೂಹಲದಿಂದ ಉತ್ತರವನ್ನು ಯಾಚಿಸುತ್ತಾ, ಈ ಪ್ರಶ್ನೆಯನ್ನು ಕೇಳುತ್ತದೆ.
ದೇವತೆಗಳಿಗೆ ದೇವನಾಯಕನಾಗಿರುವ ಇಂದ್ರನಿಗಿಂತಲೂ, ಬ್ರಹ್ಮನಿಗಿಂತಲೂ ಶ್ರೇಷ್ಠರಾದ ದಶಬಲಧಾರಿಗಳಾದ ಸರ್ವಜ್ಞರಾದ, ಜ್ಞಾನಧಾರಿಗಳಾದ ನಾಲ್ಕು ವಿಧಗಳಲ್ಲೂ ಪೂರ್ಣ ಶ್ರದ್ಧೆಯಿಂದ ಕೂಡಿದ ಬುದ್ಧರು ಹೀಗೆ ಮೇಲಿನಂತೆ ಉತ್ತರಿಸುತ್ತಾರೆ.
ನನ್ನ (ಬುದ್ಧಘೋಷ) ಕಾರ್ಯಾಚರಣೆಯು ಈಗ ನಿಜ ಅರ್ಥದಲ್ಲಿ ಆರಂಭವಾಗಿದೆ, ಮಹಾನ್ ಋಷಿಗಳಿಂದ (ಬುದ್ಧ) ನುಡಿಯಲ್ಪಟ್ಟಿರುವಂತೆಯೇ ಶೀಲ ಇತ್ಯಾದಿಗಳನ್ನು ವಿಭಾಗಿಸಿ, ಜಿನ (ಪರಮ ವಿಜಯಿಗಳ) ಶಾಸನದಲ್ಲಿ ಯಾರು ಗೃಹರಹಿತರಾಗಿ ಬಿಕ್ಷುಗಳಾಗಿರುವರೋ ಮತ್ತು ಯಾರು ವಿಶುದ್ಧಿಯ ಆಕಾಂಕ್ಷಿಗಳೋ ಅದರ ಋಜು ಮಾರ್ಗದ ನಿಜ ಜ್ಞಾನವೂ ಇಲ್ಲವೋ, ವಿಶುದ್ಧಿಯೆಡೆ ಕೊಂಡೊಯ್ಯುವ ಈ ಯೋಗ್ಯವಾದಂತಹ ಅನ್ವೇಷಿಸಿದರೂ ದುರ್ಲಭವಾಗಿರುವ ಇದನ್ನು ಯಾರು ಶ್ರಮಿಸಿದರೂ ಪರಿಶುದ್ಧಿಯನ್ನು ಗಳಿಸದ ಅಂತಹವರಿಗೆ ಈ ವಿಶುದ್ಧಿಮಾರ್ಗವನ್ನು ಪ್ರಕಟಗೊಳಿಸುವೆ (ಅನುರಾಧಪುರದ) ಮಹಾ ವಿಹಾರದಲ್ಲಿರುವ, ಸಧಮ್ಮದಲ್ಲಿ ಶ್ರದ್ಧೆಯಿರುವ ಹಾಗು ವಿಶುದ್ಧಿಯ ಆಕಾಂಕ್ಷಿಗಳಾದ ಎಲ್ಲಾ ಸುಜನರೇ ಗಮನವಿಟ್ಟು ನನ್ನ ಸ್ಪಷ್ಟೀಕರಣವನ್ನು ಆಲಿಸಿ.
ಇಲ್ಲಿ ವಿಶುದ್ಧಿಯೆಂದರೆ ನಿಬ್ಬಾಣವೆಂದು ಅರ್ಥಮಾಡಿಕೊಳ್ಳಬೇಕು. ಅಂದರೆ ಎಲ್ಲಾ ಬಗೆಯ ಕಲೆಗಳಿಂದ ಮುಕ್ತವಾದ ಅಪ್ಪಟ ಪರಿಶುದ್ಧತೆ. ವಿಶುದ್ಧಿಯ ಮಾರ್ಗವೆಂದರೆ ಅಂತಹ ಪರಿಶುದ್ಧತೆಯೆಡೆಗೆ ಕೊಂಡೊಯ್ಯುವ ಮಾರ್ಗವಾಗಿದೆ.


ಕೆಲವೊಮ್ಮೆ ವಿಶುದ್ಧಿಮಾರ್ಗವು ಪಞ್ಞಾ ಮಾತ್ರವನ್ನೇ ಪ್ರತಿನಿಧಿಸುತ್ತದೆ. ಉದಾಹರಣೆಗೆ:
ಸರ್ವ ಸಂಖಾರಗಳು ಅನಿತ್ಯ ಎಂದು ಪ್ರಜೆಯಿಂದ ಅರಿತಾಗ
ಆತನು ದುಃಖಗಳಿಂದ ವಿಕಷರ್ಿತನಾಗುತ್ತಾನೆ, ಇದೇ ವಿಶುದ್ಧಿಯ ಮಾರ್ಗವಾಗಿದೆ (ಧ.ಪ. 277)
ಅಲ್ಲಲ್ಲಿ ಇದನ್ನು ಸಮಾಧಿ (ಝಾನ) ಮತ್ತು ಪ್ರಜ್ಞೆಗೂ ಬಳಸಿದ್ದಾರೆ. ಉದಾಹರಿಸುವುದಾದರೆ:
ಯಾರಲ್ಲಿ ಝಾನ ಮತ್ತು ಪಞ್ಞಾ ಇವೆಯೋ
ಆತನು ನಿಬ್ಬಾಣಕ್ಕೆ ಹತ್ತಿರದಲ್ಲಿರುತ್ತಾನೆ. (ಧ.ಪ. 372)
ಕೆಲವೊಮ್ಮೆ ಕಮ್ಮದ ಮೂಲಕವೆಂದೂ ಹೇಳಲಾಗಿದೆ :
ಕಮ್ಮದಿಂದ, ದರ್ಶನದಿಂದ ಮತ್ತು ಸತ್ಯಶೀಲತೆಯಿಂದ
ಶೀಲದಿಂದ, ಉದಾತ್ತ ಜೀವನದಿಂದಲೇ
ಮತ್ರ್ಯರು ಪರಿಶುದ್ಧರಾಗುವರೇ ವಿನಃ
ಐಶ್ವರ್ಯದಿಂದಾಗಲೀ ಗೋತ್ರದಿಂದಾಗಲೀ ಅಲ್ಲ. (ಮ.  262)
ಕೆಲವೊಮ್ಮೆ ಶೀಲದಿಂದಲೇ ಎಂದು ಹೀಗೆ ಉಲ್ಲೇಖಿಸಿದ್ದಾರೆ:
ಯಾರು ನಿರಂತರವಾಗಿ ಶೀಲ ಹೊಂದಿರುತ್ತಾನೋ
ಆತನು ಪಞ್ಞಾ ಮತ್ತು ಸಮಾಧಿ ಹೊಂದಿರುತ್ತಾನೆ.
ಅಂತಹವ ಜಾಗರೂಕನೂ ಹಾಗು ಶ್ರಮಶೀಲನೂ ಆಗಿರುತ್ತಾನೆ.
ಹಾಗಿರುವವನೇ ದುರ್ಲಭವಾದ ಪ್ರವಾಹವನ್ನು ದಾಟುತ್ತಾನೆ. (5. 53)
ಅಲ್ಲಲ್ಲಿ ಸ್ಮೃತಿಯ ಅನುಷ್ಠಾನದಿಂದಲೇ ಎಂದು ಹೀಗೆ ನುಡಿದಿದ್ದಾರೆ:

ಭಿಕ್ಷುಗಳೇ ಇದೊಂದೇ ಜೀವಿಗಳ ವಿಶುದ್ಧಿಗೆ ಇರುವ ಮಾರ್ಗವಾಗಿದೆ.... ನಿಬ್ಬಾಣ ಸಾಕ್ಷಾತ್ಕಾರಕ್ಕೆ ಕೊಂಡೊಯ್ಯುತ್ತದೆ. ಅದೇ ನಾಲ್ಕು ವಿಧದ ಸಮ್ಮಾಸ್ಮೃತಿಯ ಸ್ಥಾಪನೆಯಾಗಿದೆ.
ಇದೇರೀತಿಯಾಗಿ ಸಮ್ಮಾವ್ಯಾಯಾಮ ಮತ್ತು ಇತ್ಯಾದಿಗಳನ್ನು ಉಲ್ಲೇಖಿಸಿದ್ದಾರೆ. ಆದರೆ ಇದೆಲ್ಲಕ್ಕೂ ಉತ್ತರವೆಂದರೆ ಶೀಲ ಮತ್ತು ಇತರ ಎರಡರಿಂದ ಕಲಿಯಲ್ಪಟ್ಟಿದೆ. (ಅಂದರೆ ಒಂದಕ್ಕೊಂದು ಸಂಬಂಧವಿರುವುದರಿಂದಾಗಿ ಯಾವುದನ್ನೂ ಪೂರ್ಣವಾಗಿ ತ್ಯಜಿಸುವುದಾಗಲಿ ಹಾಗೆಯೇ ಕೇವಲ ಒಂದರಿಂದಲೇ ಸಾಧಿಸುವುದಾಗಲೀ ಸಾಧ್ಯವಿಲ್ಲ. ಒಂದು ಅತಿ ಗರಿಷ್ಠ ಪ್ರಮಾಣದಲ್ಲಿ ವೃದ್ಧಿಯಾಗಿದೆ ಎಂದರೆ ಉಳಿದವು ಸಹಾ ಬಹುಪಾಲು ವೃದ್ಧಿಯಾಗಿರುತ್ತವೆ).

ಗಾಥೆಯ ಸಂಕ್ಷಿಪ್ತ ವಿವರಣೆ:

ಯಾವಾಗ ಜ್ಞಾನಿಯು ಅಂದರೆ ಆತನು ಹುಟ್ಟಿನಿಂದಲೇ ತಿಹೇತುಕ ಪಟಿಸಂದಿಯುಕ್ತನಾಗಿ ಬುದ್ಧಿವಂತನಾಗಿರಬೇಕು. ಶೀಲದಲ್ಲಿ ಸುಪ್ರತಿಷ್ಠಿತನಾಗಿ ಅಂದರೆ ಆತನು ಶೀಲದಲ್ಲಿ ಪಾಲನೆಯುಳ್ಳವನಾಗಿ, ಶೀಲದಲ್ಲಿ ನಿಲ್ಲುವಂತವನಾಗಿ ಧಾಮರ್ಿಕ ಪ್ರವತ್ತಿಯವನಾಗಿರಬೇಕು.
ಸಮಾಧಿ ಮತ್ತು ಪಞ್ಞಾವನ್ನು ಅಭಿವೃದ್ಧಿಗೊಳಿಸುತ್ತಾನೋ ಅಂದರೆ ಈಗ ಸಮಾಧಿಯ ಹಂತಗಳನ್ನು ದಾಟುವಂತಹವನು ಹಾಗು ಹರಿತವಾದ ಪ್ರಜ್ಞಾಶೀಲತೆಯುಳ್ಳವನಾಗಿ ಸತ್ಯಗಳನ್ನು ಹಂತಹಂತವಾಗಿ ಸಾಕ್ಷಾತ್ಕರಿಸುವವನಾಗಿರಬೇಕು. ಹೀಗೆ ಸಮಾಧಿಯ ವೃದ್ಧಿಯಿಂದ ಅಲೋಭಿಯು, ಪ್ರಜ್ಞಾದ ವೃದ್ಧಿಯಿಂದ ಅಮೋಹಿಯು ಆಗುತ್ತಿರಬೇಕು.
ಅಂತಹ ಉತ್ಸಾಹಿ ಅಂದರೆ ಪರಿಶ್ರಮವನ್ನು ಆನಂದದಿಂದ ಮಾಡುವಂತಹವನ್ನು ಕಶ್ಮಲಗಳನ್ನು ಸುಟ್ಟುಹಾಕುವಂತಹ  ತೀವ್ರ ಶ್ರಮಶೀಲ ಮನೋಭಾವನೆಯುಳ್ಳವನೆಂದರ್ಥ.
ಮೇಧಾವಿ ಅಂದರೆ ಪ್ರಜ್ಞಾಶೀಲತೆಯನ್ನು ರಕ್ಷಿಸುವಂತಹವನು.
ಇಲ್ಲಿ ಮೂರುಬಾರಿ ಪ್ರಜ್ಞೆಗೆ ಸಂಬಂಧಿಸಿದಂತಹ ಶಬ್ದಗಳು ಬಂದಿವೆ. ಒಂದು ಜ್ಞಾನಿ, ಒಂದು ಪಞ್ಞಾಭಿವೃದ್ಧಿ, ಒಂದು ಮೇಧಾವಿ. ಅಂದರೆ ಪೂರ್ವದಲ್ಲೂ ಜ್ಞಾನಿ, ಸಾಧನೆಯಲ್ಲಿ ಪಞ್ಞಾ, ಗಳಿಸಿದ್ದನ್ನು ರಕ್ಷಿಸುವ ಮೇಧಾವಿ. ಹೀಗೆ ಇದರ ಪ್ರಾಮುಖ್ಯತೆಯ ಮೌಲ್ಯವನ್ನು ಅರಿಯಲೇಬೇಕಾಗಿದೆ.
ಭಿಕ್ಷುವು ಅಂದರೆ ಯಾರು ಜನ್ಮ ಜನ್ಮಾಂತರಗಳಲ್ಲಿ ಬರಲು ಭಯಪಡುತ್ತಾನೋ ಆತನೇ ಭಿಕ್ಷು.
ಬಲೆಯ ತೊಡಕಾದ ಬಂಧನಗಳು ಅಂದರೆ ತೀವ್ರ ಬಯಕೆಗಳು (ತೃಷ್ಣೆ) ವ್ಯಕ್ತಿತ್ವ ಹಾಗು ಅದರಿಂದ ಉಂಟಾಗುವ ಭವ.
ಬಿಡುಗಡೆಯಲ್ಲಿ ಅಂದರೆ ಇಲ್ಲಿ ಭಿಕ್ಖುವು ತನ್ನ ಹರಿತವಾದ ಪ್ರಜ್ಞೆಯ ಕತ್ತಿಯಿಂದ, ಸಮಧಿಯ ಕಲ್ಲಿನಿಂದ ಇನ್ನಷ್ಟು ಹರಿತಗೊಳಿಸಿ, ಉತ್ಸಾಹವೆಂಬ ಶೌರ್ಯದಿಂದ, ಪ್ರಯತ್ನದಿಂದ ಎಲ್ಲಾ ಬಲೆಗಳನ್ನು (ಕಲ್ಮಶಗಳನ್ನು) ಕತ್ತರಿಸಿ ಬಿಡುಗಡೆಯಾಗುವಲ್ಲಿ ಯಶಸ್ವಿಯಾಗುತ್ತಾನೆ ಎಂದರ್ಥವಾಗಿದೆ.
ತ್ರಿವಿಧ ಶಿಕ್ಷಣಗಳಾದ ಶೀಲ, ಸಮಾಧಿ ಮತ್ತು ಪಞ್ಞಾದ ವೈಶಿಷ್ಟ್ಯತೆಗಳ ವಗರ್ಿಕರಣ:
ಭಗವಾನರು ಹೀಗೆ ವಿಶುದ್ಧಿಮಗ್ಗವನ್ನು ಶೀಲ, ಸಮಾಧಿ ಮತ್ತು ಪಞ್ಞಾಗಳ ನಾಮದಿಂದ ವಗರ್ಿಕರಿಸಿದ್ದಾರೆ. ಈ ಮಧ್ಯಮ ಮಾರ್ಗವು ಅತಿರೇಕಗಳಿಂದ ಮುಕ್ತವಾಗಿದ್ದು, ಯಾವ ನಷ್ಟವೂ ನೀಡದೆ, ಸ್ಪಷ್ಷ ದರ್ಶನ ವಿಶುದ್ಧಿ ಅಭಿಜ್ಞಾ ಇತ್ಯಾದಿಗಳ ಲಾಭಗಳನ್ನು ನೀಡುವಂತಹದು ಆಗಿದೆ.

ತ್ರಿವಿದ್ಯೆಗಳ ಲಾಭ: ಶಾಸನದಲ್ಲಿ ಶೀಲವೇ ಮಾರ್ಗಕ್ಕೆ ಆದಿಯಾಗಿದೆ, ಪ್ರಾರಂಭವಾಗಿದೆ, ಕುಶಲಗಳಿಗೆ ಮೂಲವಾಗಿದೆ. ಶೀಲದಲ್ಲಿ ಪಶ್ಚಾತ್ತಾಪರಹಿತತೆಯಂತಹ ಲಾಭಗಳಿವೆ. ಶೀಲದಿಂದಾಗಿ ಮೂರು ದರ್ಶನವಾಗುತ್ತದೆ. ಅವೆಂದರೆ: ದಿವ್ಯದೃಷ್ಟಿ, ಪೂರ್ವಜನ್ಮ ಸ್ಮರಣೆ, ಆಸವಕ್ಷಯ ಜ್ಞಾನಗಳು ಸುಲಭವಾಗಿ ಲಭಿಸುತ್ತವೆ.

ಸಮಾಧಿಯು ಶಾಸನದ ಮಧ್ಯ ಭಾಗವಾಗಿದೆ. ಇದರಲ್ಲಿ ಅತೀಂದ್ರಿಯ ಅನುಭವಗಳಂತಹ ಲಾಭಗಳು ಇವೆ. ಸಮಧಿಯ ಕಾರಣದಿಂದ ಷಟ ಅಭಿಜ್ಞಾಗಳು ಸುಲಭವಾಗಿ ಸಿಗುತ್ತವೆ.
ಪ್ರಜ್ಞಾವು ಶಾಸನದ ಅಂತ್ಯಭಾಗವಾಗಿದೆ. ಇದರಲ್ಲಿ ಪರಮಶಾಂತತೆ, ಬಂಧನಮುಕ್ತ, ಜನ್ಮಾತೀತ ಇತ್ಯಾದಿಗಳ ಲಾಭಗಳಿವೆ. ಉದಾಹರಣೆಗೆ:
ಗಾಳಿಗೆ ನಡುಗದ ಮಹಾ ಹೆಬ್ಬಂಡೆಯಂತೆ
ಪ್ರಜ್ಞಾವಂತರು ಸ್ತುತಿ-ನಿಂದೆಗಳಿಗೆ
ಅತೀತರಾಗಿ ಅಚಲರಾಗಿರುತ್ತಾರೆ. (ಧ.ಪ.81)
ಪ್ರಜ್ಞಾಭಿವೃದ್ಧಿಯಿಂದಾಗಿ ನಾಲ್ಕು ವಿಧದ ಪಟಿಸಂಬುದಾ ಜ್ಞಾನ ಸುಲಭವಾಗಿ ಲಭಿಸುವುದು.
ತಪ್ಪಿಸಿಕೊಳ್ಳಬಹುದಾದುದು: ಶೀಲದಿಂದಲೇ ಅತಿರೇಕ ಮಾರ್ಗವಾದ ಭೋಗಾಭಿಲಾಷೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ಹಾಗೆಯೇ ಸಮಾಧಿಯಿಂದಲೇ ದೇಹದಂಡನೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ಮಧ್ಮಮ ಮಾರ್ಗದ ಸಂಸ್ಕರಣವು ಪಞ್ಞಾದಿಂದಲೇ ತೋರಿಸಲ್ಪಟ್ಟಿದೆ.
ಜಯಿಸುವಂತಹುದು: ಅಪಾಯಯುತವಾದ ದುರ್ಗತಿಗಳಿಂದ ಪಾರಾಗುವುದು ಶೀಲದ ಮಾರ್ಗದರ್ಶನದಿಂದಲೇ. ಹಾಗೆಯೇ ಇಂದ್ರಿಯ ಬಯಕೆಗಳ ಧಾತುಗಳನ್ನು ಜಯಿಸುವುದು ಸಮಾಧಿಯ ಸಹಾಯದಿಂದಲೇ ಆಗಿದೆ. ಅದರಂತೆಯೇ ಭವವನ್ನು ಜಯಿಸುವುದು ಪಞ್ಞಾದ ಮಾರ್ಗದರ್ಶನದಿಂದಲೇ ಆಗಿದೆ.
ನಿಮರ್ೂಲನೆ: ವಿರೋದಾತ್ಮಕ ಬದಲಾವಣೆಯಿಂದ ಆಸವಗಳ ಅಥವಾ ಕಶ್ಮಲಗಳ ತ್ಯಾಗವು ಶೀಲದ ನಿರೋಧದಿಂದಲೇ ಆಗುವುದು. ಹಾಗೆಯೇ ಆಸವಗಳ ದಮನವು ಸಮಾಧಿಯಿಂದ ಆಗುವುದು, ಆದರೆ ಪಞ್ಞಾದಿಂದಲೇ ಅವುಗಳು ಪೂರ್ಣವಾಗಿ ಕತ್ತರಿಸಲ್ಪಡುವುದು.
ತಡೆಹಾಕುವಿಕೆ: ಅತಿಕ್ರಮಿಸುವಂತಹ ಕಲ್ಮಶಗಳ ತಡೆಯು ಶೀಲದಿಂದಲೇ ಆಗುವುದು. ಕಲ್ಮಶಗಳಿಂದಾಗುವ ಭ್ರಾಂತಿಯ ತಡೆಯು ಸಮಾಧಿಯಾಗುವುದು. ಸುಪ್ತ ಪ್ರವೃತ್ತಿಗಳ (ಅನುಷಯ) ತಡೆಯು ಪಞ್ಞಾದಿಂದಲೇ ಆಗುವುದು.
ಶುದ್ಧತೆ: ಕಲ್ಮಶದಿಂದಾಗಿ ಆಗುವ ದುರ್ವರ್ತನೆಗಳ ಶುದ್ಧಿಯು ಶೀಲವಾಗುತ್ತದೆ. ಹಾಗೆಯೇ ತೃಷ್ಣೆಯಿಂದಾಗುವ ಕಶ್ಮಲಗಳ ಶುದ್ಧಿಯು ಸಮಾಧಿಯಿಂದ ಲಭಿಸುವುದು ಮತ್ತು ದೃಷ್ಟಿಕೋನಗಳಿಂದಾಗುವ ಕಲ್ಮಶಗಳ ಶುದ್ಧಿಯು ಪಞ್ಞಾದಿಂದಾಗುತ್ತವೆ.
ಪೂರ್ಣಸಂಪನ್ನತೆ: ಸೋತಪನ್ನರನ್ನು ಮತ್ತು ಸಕದಾಗಾಮಿಗಳನ್ನು ಶೀಲದಲ್ಲಿ ಪರಿಪೂರ್ಣರು ಎನ್ನಲಾಗುವುದು. ಅನಾಗಾಮಿಗಳನ್ನು ಸಮಾಧಿಯಲ್ಲಿ ಪರಿಪೂರ್ಣರು ಎನ್ನಲಾಗುವುದು ಮತ್ತು ಅರಹಂತರನ್ನು ಪ್ರಜ್ಞಾದಲ್ಲಿ ಪರಿಪೂರ್ಣರು ಎನ್ನಲಾಗುವುದು.

ಶೀಲ
ಶೀಲವೆಂದರೇನು ?


ಶೀಲವು ಸಂಕಲ್ಪದಿಂದ ಆರಂಭವಾಗುವ ಸ್ಥಿತಿಗಳಾಗಿದ್ದು; ನಾನು ಸ್ವಯಿಚ್ಛೆಯಿಂದ ಕೊಲ್ಲುವುದರಿಂದ ವಿರತನಾಗುತ್ತೇನೆ/ದೂರವಿರುತ್ತೇನೆ/ನಿವೃತ್ತನಾಗುತ್ತೇನೆ ಎಂದು ಸಂಕಲ್ಪಿಸಿ ಅದರಂತೆಯೇ ತನ್ನ ಕರ್ತವ್ಯಗನ್ನು ನಿರ್ವಹಿಸುತ್ತಾನೆ. 
ಆದ್ದರಿಂದ ಪಟಿಸಂಭಿದಾದಲ್ಲಿ ಇದಕ್ಕೆ ಈ ರೀತಿಯ ನಿರೂಪಣೆ ಮಾಡುತ್ತಾರೆ. ಏನೆಂದರೆ: ಇಚ್ಛಾಯುತವಾದುದು ಅಂದರೆ ಇಲ್ಲಿ ಶೀಲವೆಂದರೆ ಚೇತನಾ (ಇಚ್ಛೆ), ಚೇತನಾಶೀಲ ಅಂದರೆ ಇಚ್ಛಾಯುತ ಕಾರ್ಯ. ಅಂದರೆ ಶೀಲವು ಮನಃಪೂರ್ವಕ ಸಹವತರ್ಿ ಚೇತಸಿಕಾವಾಗಿದ್ದು, ಅದು ವೇದನಾ, ಸಞ್ಞಾ ಮತ್ತು ಸಂಖಾರಗಳೊಂದಿಗೆ ವಿಞ್ಞಾನದೊಂದಿಗೆ ಉದಯಿಸುವಂತಹುದು. ಹಾಗೆಯೇ ಶೀಲವೆಂದರೆ ನಿಗ್ರಹವೆಂದೂ ಹೇಳಲಾಗಿದೆ ಮತ್ತು ಶೀಲವೆಂದರೆ ಅನುಲ್ಲಂಘನೆ ಎಂದು ನಿರೂಪಿಸಲಾಗಿದೆ.

ಶೀಲವು ಇಚ್ಛೆಯಂತೆ:

 ಇಲ್ಲಿ ಪಾಲಿಸುವುದು ಪಂಚಶೀಲವೇ ಆಗಿರಲಿ ಅಥವಾ ಯಾವುದೇ ಶೀಲವಾಗಲಿ, ಉದಾಹರಣೆಗೆ: ನಾನು ಜೀವಿಗಳನ್ನು ಕೊಲ್ಲುವುದರಿಂದ ನಿವೃತ್ತನಾಗುತ್ತೇನೆ ಎಂದು ಸಂಕಲ್ಪಿಸಿ ಹಾಗೆಯೇ ಅದರಂತೆಯೇ ನಡೆದುಕೊಳ್ಳುತ್ತಾನೆ.
ಶೀಲವು ಚೇತಸಿಕಾದಂತೆ: ಇಲ್ಲಿ ಶೀಲವು ಮನಃಪೂರ್ವಕ ಸಹವತರ್ಿಯಾಗಿದ್ದು, ಅಂದರೆ ಮಾನಸಿಕ ವೃತ್ತಿಗಳಾಗಿದ್ದು, ಇಲ್ಲಿ ಭಾಗವಹಿಸುವ ಚೇತಸಿಕಾಗಳೆಂದರೆ ಮೂರು ವಿರತಿ ಚೇತಸಿಕಾಗಳು. ಅವೆಂದರೆ: ಸಮ್ಮಾವಾಚಾ, ಸಮ್ಮಾಕಮ್ಮಂತ ಮತ್ತು ಸಮ್ಮಾ ಅಜೀವ ಇವು ದುಶ್ಶೀಲತೆಯಲ್ಲಿರುವ ಆನಂದದಿಂದ ವಿಮುಖವಾಗುವುದರಿಂದ ವಿರತಿ ಚೇತಸಿಕಾ ಎನ್ನುವರು. ಹಾಗೆಯೇ ಸಬ್ಬ ಸಾಧಾರಣ ಚೇತಸಿಕಾದಲ್ಲಿ ಅಂದರೆ ಎಲ್ಲಾ ವರ್ಗದ ಚಿತ್ತಗಳಲ್ಲಿ ಇಚ್ಛೆ ಬರುವುದರಿಂದಲೂ ಇದನ್ನು ಚೇತಸಿಕಾ ಎಂದು ಪರಿಗಣಿಸುತ್ತಾನೆ.

ಶೀಲವು ನಿಗ್ರಹದಂತೆ:

 ಇಲ್ಲಿ ಶೀಲವೆಂದರೆ ನಿಗ್ರಹವೆಂದು ನಿಖರವಾಗಿ ನಿರೂಪಿಸಿದ್ದಾರೆ. ಇಲ್ಲಿ ನಿಗ್ರಹವೂ ಸಹಾ ಐದು ವಿಧವಾಗಿ ವಿಂಗಡಿಸಿದ್ದಾರೆ. ಅದು ಹೀಗಿದೆ:

ಪಾತಿಮೋಕ್ಖ ನಿಯಮಗಳಂತೆ ನಿಗ್ರಹ:

 ಇಲ್ಲಿ ಭಿಕ್ಖುವು ಸಂಘದ 227 ನಿಯಮಗಳನ್ನು ಸಂತೋಷದಿಂದ ಇಚ್ಛಾಪೂರ್ವಕವಾಗಿ ಆಚರಿಸುವಂತಹವನು ಆಗುತ್ತಾನೆ. ಆತನು ಈ ಪಾತಿಮೋಕ್ಖ ನಿಯಮಗಳಿಂದಾಗಿ ಸುಸಜ್ಜಿತನಾಗಿದ್ದಾನೆ. ಪೂರ್ಣವಾಗಿ ಸುಸಜ್ಜಿತನಾಗಿದ್ದಾನೆ. (ವಿಭಂಗ .......)

ಸಮ್ಮಾಸ್ಮೃತಿಯ ಮೂಲಕ ನಿಗ್ರಹ :

 ಇಲ್ಲಿ ಸಾಧಕನು ಕಾಯದಲ್ಲಿ (ಇಂದ್ರಿಯಗಳಲ್ಲಿ), ವೇದನೆಗಳಲ್ಲಿ, ಚಿತ್ತದಲ್ಲಿ ಹಾಗು ಚಿತ್ತ ವೃತ್ತಿಗಳಲ್ಲಿ ಅತ್ಯಂತ ಜಾಗರೂಕನಾಗಿರುತ್ತಾನೆ. ಉದಾ: ಆತನು ಕಣ್ಣಿನ ಇಂದ್ರಿಯವನ್ನು ರಕ್ಷಿಸುತ್ತಾನೆ, ಕಣ್ಣಿನ ಮೂಲಕ ಯಾವುದೇ ಪಾಪವಾಗದಂತೆ ಕಣ್ಣಿನ ಒಳಗೆ ಪಾಪವು ನುಸುಳದಂತೆ ರಕ್ಷಿಸುತ್ತಾನೆ.

ಜ್ಞಾನದ ಮೂಲಕ ನಿಗ್ರಹ : 

ಲೋಕಗಳಲ್ಲಿನ ತೃಷ್ಣೆ, ದಿಟ್ಟಿ, ಅವಿದ್ಯೆ ಮುಂತಾದ ಪ್ರವಾಹಗಳು ಸ್ಮೃತಿಯಿಂದಲೇ ನಿವಾರಿಸಬಹುದಾಗಿದೆ. ಆದರೆ ಅಜಿತನೇ, ಪಞ್ಞಾದಿಂದಲೇ ಅವು ಪುನಃ ಹುಟ್ಟದಂತಾಗುತ್ತದೆ. (ಸುತ್ತನಿಪಾತ 1.35) ಈ ಗಾಥೆಯಿಂದ ಹೀಗೆ ಜ್ಞಾನದ ಮೂಲಕ ನಿಗ್ರಹದ ಪ್ರಾಮುಖ್ಯತೆ ತಿಳಿಯುತ್ತದೆ.

ಸಹನೆಯ ಮೂಲಕ ನಿಗ್ರಹ

ಆತನು ಚಳಿ, ಬಿಸಿಲನ್ನು, ಹಸಿವು ನೀರಡಿಕೆಯನ್ನು ಕೀಟಗಳ ಸರಿಸೃಪಗಳ ಸ್ಪರ್ಶವನ್ನು ಸಹಿಸುತ್ತಲೇ ನಿಗ್ರಹಿಸುತ್ತಾನೆ. ಹೀಗೆ ಆತನು ಸಹನೆಯಿಂದ ನಿಗ್ರಹ ಮಾಡಬಲ್ಲವನಾಗುತ್ತಾನೆ.

ಪ್ರಯತ್ನಶೀಲತೆಯಿಂದ ನಿಗ್ರಹ

ಇದಕ್ಕೆ ಭಗವಾನರ ಈ ಗಾಥೆಯು ಪರಿಣಾಮಕಾರಿಯಾಗಿದೆ: ಯಾವಾಗ ಇಂದ್ರಿಯ ಬಯಕೆಯ ಅಥವಾ ಇನ್ನಿತರ ಅಕುಶಲ ಯೋಚನೆಯು ಉದಯಿಸುವುದೋ ಆಗ ಆತನು ಅದನ್ನು ಸಹಿಸುವುದಿಲ್ಲ, ತಕ್ಷಣ ಅವು ಇನ್ನಿಲ್ಲದಂತೆ ಮಾಡುತ್ತಾನೆ.
ಸಮ್ಯಕ್ ಜೀವನವೂ ಸಹಾ ಇದರಲ್ಲೇ ಅಡಕವಾಗುವುದು. ಈ ಐದು ವಿಧದ ನಿಗ್ರಹ ಮತ್ತು ವಿರತಿಯು ಉತ್ತಮ ಉಪಾಸಕ ಅಥವಾ ಭಿಕ್ಷುವಿನಲ್ಲಿ ಪಾಪಕ್ಕೆ ಭೀತನಾಗಿ ಹೀಗೆ ನಿಗ್ರಹಿಸುವುದರಿಂದಾಗಿ ಇದಕ್ಕೆ ಶೀಲವನ್ನು ನಿಗ್ರಹದಂತೆ ನಿರೂಪಿಸಿದ್ದಾರೆ.

ಶೀಲವು ಅನುಲ್ಲಂಘನೆಯಂತೆ:

 ಅಂದರೆ ಇಲ್ಲಿ ಶೀಲವಂತನು ತಾನು ಹಾಕಿಕೊಂಡಿರುವ ಶೀಲದ ಬೇಲಿಯನ್ನು ದಾಟುವುದಿಲ್ಲ, ನಿಯಮ ಅತಿಕ್ರಮಣ ಮಾಡುವುದಿಲ್ಲ, ನೀತಿಯನ್ನು ಉಲ್ಲಂಘನೆ ಮಾಡುವುದಿಲ್ಲ.

ಯಾವ ಅರ್ಥದಲ್ಲಿ ಶೀಲ

ಇಲ್ಲಿ ಸಂಯೋಜಿತವಾಗುವುದರಿಂದಾಗಿ (ಸೀಲಾನ) ಶೀಲ ಎನಿಸಿಕೊಳ್ಳುತ್ತದೆ. ಇಲ್ಲಿ ಯಾವುದು ಸಂಯೋಜಿತವಾಗುವುದು? ಇಲ್ಲಿ ಶಾರೀರಿಕ ಕಮ್ಮವಾಗಲಿ, ಪಾಪಿಕ ಕಮ್ಮವಾಗಲಿ, ಅಥವಾ ಮಾನಸಿಕ ಕ್ರಿಯೆಯಾಗಲಿ ಅವೆಲ್ಲಾ ಅಯೋಗ್ಯವಾಗಿ ಸಂಬಂಧಿಗಳಾಗಿರುವುದರಿಂದ, ಯೋಗ್ಯ ನಿರ್ವಹಣೆಯಾಗುವುದರಿಂದ (ಸಮಾಧಾನ ಎಂಬ ಅರ್ಥವೂ ಇರುವುದರಿಂದಾಗಿ) ಶೀಲದಿಂದಲೇ ಅವೆಲ್ಲಾ ಉಪದಾರಣವಾಗುವುದರಿಂದಾಗಿ ಹಾಗು ಕುಶಲ ಸ್ಥಿತಿಗಳಿಗೆ ಆಧಾರವಾಗಿ ಅಡಿಪಾಯವಾಗುವುದರಿಂದಾಗಿ ಶಿಲೆಯಂತೆ ಆಧಾರ ಅಡಿಪಾಯವಾಗುವುದರಿಂದಾಗಿ ಇವು ಶೀಲ ಎನಿಸಿಕೊಳ್ಳುತ್ತದೆ. ಯಾರಲ್ಲಿ ಶಬ್ದಾರ್ಥ ಶಾಸ್ತ್ರಜ್ಞ ಇರುವರೊ ಅವರು ಈ ಅರ್ಥವನ್ನು ಉಲ್ಲೇಖಿಸುತ್ತಾರೆ. ಆದರೂ ಇತರ ಆಚಾರ್ಯರು, ಶಿರ ಎಂಬ ಅರ್ಥದಲ್ಲಿ ಶೀಲವನ್ನು, ಶೀತಲ ಎಂಬ ಅರ್ಥದಲ್ಲೂ ಶೀಲವನ್ನು ನಿರೂಪಿಸಲು ಆರಂಭಿಸಿರುವರು.
ಶೀಲದ ಲಕ್ಷಣ, ಕ್ರಿಯೆ, ವ್ಯಕ್ತತೆ ಮತ್ತು ತತ್ಕ್ಷಣದ ಕಾರಣ

ಶೀಲದ ಲಕ್ಷಣ :

 ಶಾಂತತೆಯ ನಿಮರ್ಾಣವೇ ಇದರ ಲಕ್ಷಣವಾಗಿದೆ. ಹಾಗೆಯೇ ಮಾನವನ ಅಗೌರವವನ್ನು ಘನತೆಯಿಂದ ತೆಗೆಯುವುದು ಸಹಾ ಇದರ ಲಕ್ಷಣವಾಗಿದೆ.

ಶೀಲದ ಕ್ರಿಯೆ :

 ಇದರ ಕ್ರಿಯೆಯು ಎರಡು ಕಾರ್ಯದಿಂದ ಕೂಡಿದೆ. ಒಂದು ಪಾಪವಿರತಿ ಹಾಗು ಪಾಪರಹಿತತೆಯ ಸಾಧನೆ. ಅಲೌಕಿಕ ಆನಂದ ಸಹಾ ಇದರ ಕ್ರಿಯೆ ಆಗಿದೆ.

ಶೀಲದ ವ್ಯಕ್ತತೆ :

 ಕಾಯಪರಿಶುದ್ಧತೆ, ವಾಚಿಕ ಪರಿಶುದ್ಧತೆ ಮತ್ತು ಚಿತ್ತ ಪರಿಶುದ್ಧತೆಯಿಂದ ಶೀಲ ವ್ಯಕ್ತವಾಗುತ್ತದೆ ಮತ್ತು ಪಶ್ಚಾತ್ತಾಪರಹಿತತೆಯಿಂದಲೂ ಇದು ವ್ಯಕ್ತವಾಗುತ್ತದೆ.

ಶೀಲದ ತತ್ಕ್ಷಣದ ಕಾರಣ

ಶೀಲಕ್ಕೆ ತತ್ಕ್ಷಣದ ಕಾರಣ ಏನೆಂದರೆ ಪಾಪಲಜ್ಜೆ ಮತ್ತು ಪಾಪಭೀತಿಯಾಗಿದೆ.
ಸಾಧಾರಣ ಜನರು ಭಯದಿಂದ ಪಾಪ ಮಾಡುವುದಿಲ್ಲ. ಕಾನೂನಿನ, ಶಿಕ್ಷೆಯ ಭಯದಿಂದ ನಿಯಂತ್ರಣದಲ್ಲಿರುತ್ತಾರೆ. ಮತ್ತೆ ಕೆಲವರು ನರಕದ, ದುರ್ಗತಿಯ, ನೀಚ ಜನ್ಮದ ಮತ್ತು ದುಃಖಕರ ಸನ್ನಿವೇಶದ ಭಯಗಳಿಂದ ಪಾಪ ಮಾಡದೆ ಇರುತ್ತಾರೆ. ಆದರೆ ಶ್ರೇಷ್ಠ ಪುರುಷರು ಇದು ಪಾಪ, ಇದರಿಂದ ಪರರಿಗೆ ತೊಂದರೆ ಆಗುತ್ತದೆ. ಆದ್ದರಿಂದ ಇದನ್ನು ಮಾಡಬಾರದು ಎಂಬ ಪಾಪಲಜ್ಜೆಯಿಂದ ಪಾಪದಿಂದ ದೂರವಾಗುತ್ತಾರೆ.
ಪಾಪಲಜ್ಜೆ ಹಾಗು ಪಾಪಭೀತಿಯು ಇದ್ದರೆ ಮಾತ್ರ ಶೀಲವು ಉದಯಿಸುತ್ತದೆ ಹಾಗಲ್ಲದೆ ಪಾಪಲಜ್ಜೆ ಹಾಗು ಪಾಪಭೀತಿ ಇರದಿದ್ದರೆ ಶೀಲವೂ ಉದಯಿಸಲಾರದು, ಉಳಿಯಲಾರದು. ಹೀಗೆ ಶೀಲದ ತತ್ಕ್ಷಣದ ಕಾರಣ ಅರ್ಥಮಾಡಿಕೊಳ್ಳತಕ್ಕದ್ದು.
ಶೀಲದ ಮಹತ್ತರ ಲಾಭಗಳು:
ಶೀಲದ ಲಾಭಗಳೆಂದರೆ ಹಲವಾರು ವಿಶೇಷ ಗುಣಗಳನ್ನು ಸಂಪಾದಿಸುವುದು. ಅವುಗಳಲ್ಲಿ ಮೊದಲನೆಯದು ಪಶ್ಚಾತ್ತಾಪರಹಿತತೆ. ಇದಕ್ಕೆ ಸಂಬಂಧಿಸಿದಂತೆ ಭಗವಾನರು ಆನಂದರಿಗೆ ಹೀಗೆ ಹೇಳಿದ್ದರು: ಆನಂದ, ಶೀಲದ ಚಟುವಟಿಕೆಗಳು ಪಶ್ಚಾತ್ತಾಪರಹಿತತೆಯನ್ನು ಗುರಿಯಾಗಿ ಹೊಂದಿವೆ ಮತ್ತು ಪಶ್ಚಾತ್ತಾಪರಹಿತತೆಯೇ ಅದರ ಲಾಭವಾಗಿದೆ (ಅಂ.ನಿ.ತ.1). ಮತ್ತೆ ದೀಘನಿಕಾಯದ ( 86)ರಲ್ಲಿ ಶೀಲದ ಉದಾತ್ತತೆಯನ್ನು ಕೊಂಡಾಡಿದ್ದಾರೆ:
ಗೃಹಸ್ಥನೆ, ಶೀಲವನ್ನು ಪೂರ್ಣಗೊಳಿಸಿರುವವನಲ್ಲಿ ಈ ಐದು ಲಾಭಗಳಾಗುತ್ತವೆ. ಯಾವುವವು? ಗೃಹಸ್ಥನೇ, ಇಲ್ಲಿ ಯಾರು ಶೀಲವಂತನೋ, ಶೀಲವನ್ನು ಹೊಂದಿದ್ದಾನೆಯೋ ಆತನು ನಿಜ ಪರಿಶ್ರಮದಿಂದಾಗಿ ಅಪಾರ ಸೌಭಾಗ್ಯವನ್ನು ಪಡೆಯುತ್ತಾನೆ. ಇದು ಶೀಲವನ್ನು ಪೂರ್ಣಗೊಳಿಸಿರುವ ಶೀಲವಂತನ ಮೊದಲ ಲಾಭವಾಗಿದೆ. ಮತ್ತೆ ಯಾರು ಶೀಲವಂತನೋ, ಶೀಲವನ್ನು ಹೊಂದಿದ್ದಾನೆಯೋ ಆತನ ಪ್ರಖ್ಯಾತಿಯು ಎಲ್ಲೆಡೆ ಹರಡುತ್ತದೆ; ಇದು ಶೀಲವನ್ನು ಪೂರ್ಣಗೊಳಿಸಿರುವ ಶೀಲವಂತನ ಎರಡನೇ ಲಾಭವಾಗಿದೆ. ಯಾರು ಶೀಲವಂತನೋ, ಶೀಲವನ್ನು ಹೊಂದಿರುವನೋ ಅವನು ಕ್ಷತ್ರಿಯ ಸಭೆಗಳಿಗಾಗಲಿ ಅಥವಾ ಬ್ರಾಹ್ಮಣರ ಅಥವಾ ಗೃಹಸ್ಥರ ಅಥವಾ ಸಮಣರ ಸಭೆಗಳಿಗೆ ಯಾವುದೇ ಭಯವಿಲ್ಲದೆ ತಡವರಿಕೆಯಿಲ್ಲದೆ ಪ್ರವೇಶಿಸುತ್ತಾನೆ; ಇದು ಶೀಲವನ್ನು ಪೂರ್ಣಗೊಳಿಸಿರುವ ಶೀಲವಂತನ ಮೂರನೆಯ ಲಾಭವಾಗಿದೆ. ಮತ್ತೆ ಯಾರು ಶೀಲವಂತನೋ ಶೀಲವನ್ನು ಹೊಂದಿರುವನೋ ಆತನಿಗೆ ಮರಣ ಬಂದಾಗ ಯಾವುದೇರೀತಿಯ ಗೊಂದಲಗಳಿಲ್ಲದೆ ಮೃತ್ಯು ವಶನಾಗುತ್ತಾನೆ; ಇದು ಶೀಲವನ್ನು ಪೂರ್ಣಗೊಳಿಸಿರುವ ಶೀಲವಂತನ ನಾಲ್ಕನೆಯ ಲಾಭವಾಗಿದೆ. ಮತ್ತೆ ಯಾರು ಶೀಲವಂತನೋ, ಶೀಲವನ್ನು ಹೊಂದಿರುವನೋ ಅವನು ಸಾವಿನ ನಂತರ ಶರೀರದ ಭಗ್ನದ ನಂತರ ಸುಗತಿ ಲೋಕದಲ್ಲಿ ಜನಿಸುತ್ತಾನೆ; ಇದು ಶೀಲವನ್ನು ಪೂರ್ಣಗೊಳಿಸಿರುವ ಶೀಲವಂತನ ಐದನೆಯ ಲಾಭವಾಗಿದೆ. (ದೀ.ನಿ.86).
ಶೀಲದಿಂದ ಇನ್ನೂ ಹಲವಾರು ಲಾಭಗಳಿವೆ. ಪ್ರಿಯವಾಗಿ ಹಾಗು ಆವರಿಸಲ್ಪಡುವುದರ ಆರಂಭದಿಂದ ಹಿಡಿದು ಆಸವಗಳ ನಾಶದವರೆಗೂ ಲಾಭಗಳು ಇವೆ. ಒಂದೆಡೆ ಹೀಗೆ ಪ್ರಸ್ತಾಪಿಸಲಾಗಿದೆ: ಭಿಕ್ಖುವೇನಾದರೂ ಈ ರೀತಿ ಇಚ್ಛಿಸಿದರೆ ನಾನು ನನ್ನ ಸಹಚರರಿಗೆ ಪ್ರಿಯವಾಗಿರಲಿ, ಅವರಿಂದ ಗೌರವ, ಆದರ ಸಿಗುವಂತಾಗಲಿ. ನಾನು ಶೀಲಗಳನ್ನು ಪೂರ್ಣಗೊಳಿಸುವವನಾಗಲಿ (ಮ.1.33). ಹೀಗೆ ಪಶ್ಚಾತ್ತಾಪರಹಿತತೆಯಿಂದ ಆರಂಭವಾದ ಹಲವು ವಿಶೇಷತೆಗಳು ಹೀಗಿವೆ:
ಶೀಲವು ತರುವಂತಹ ಲಾಭಗಳಲ್ಲಿ ಯಾರಿಗಾದರೂ ಅದರ ಸ್ಥಾನವನ್ನು ಪರಿಮಿತಿಗೊಳಿಸುವ ಧೈರ್ಯವಿದೆಯೇ? ಯಾವುದೇ ಶೀಲವಿಲ್ಲದೆ ಕುಲಪುತ್ರರು ಶಾಸನದಲ್ಲಿ ಕಾಲಿಟ್ಟು ಉಳಿಯುವ ಹಾಗಿಲ್ಲ.
ಗಂಗೆಯಾಗಲಿ, ಯಮುನೆಯಾಗಲಿ, ಸರಭುವಾಗಲಿ ಅಥವಾ ಸರಸ್ವತಿಯೇ ಆಗಲಿ
ಹರಿಯುವ ಅಚಿರವತಿಯೇ ಆಗಲಿ, ಉದಾತ್ತ ಮಾಹಿಯೇ ಆಗಲಿ
ಈ ಜಗದಲ್ಲಿ ಪಾಪದ ಕಶ್ಮಲಗಳನ್ನು ತೊಳೆದುಹಾಕುವ ಸಾಮಥ್ಯವಿದೆಯೇ?
ಕೇವಲ ಶೀಲವೊಂದೇ ಜೀವಿಗಳ ಕಲ್ಮಶಗಳನ್ನು ತೊಳೆದುಹಾಕಬಲ್ಲದು.
ವರ್ಷ ಬೀಳುವ ದಿಕ್ಕಿನಿಂದ ಬೀಸುವ ತಂಗಾಳಿಯಾಗಲಿ,
ಸೋಮನಿವಾರಕ ಸಿರಿಗಂಧದ ಹಳದಿ ಲೇಪನವಾಗಲಿ
ಧರಿಸಿರುವ ಕಂಠಿಹಾರವೇ ಆಗಲಿ ಅಥವಾ ರತ್ನಗಳಾಗಲಿ
ತಂಪಾದ ಚಂದಿರನ ಶೀತಲ ಕಿರಣಗಳೇ ಆಗಲಿ
ಈ ಲೋಕದಲ್ಲಿ ಪ್ರಜೆಗಳ ಜ್ವರ (ಕ್ಲೇಷ)ವನ್ನು
ಶಾಂತವಾಗಿಯೂ ಹಾಗು ನೋವು ನಿವಾರಕ ಸಾಂತ್ವನವಾಗಿಯೂ ಮಾಡಬಲ್ಲದೆ ?
ಆದರೆ ಈ ಉದಾತ್ತವಾದ,
ಪರಮ ತಂಪಾದ ಸುರಕ್ಷಿತವಾದ ಶೀಲವು
ಈ ಜ್ವಾಲೆಗಳನ್ನು ಇನ್ನಿಲ್ಲದಂತೆ ಮಾಡುತ್ತದೆ.
ಯಾವುದದು ಆ ಸುಗಂಧ, ಶೀಲದ ಸುಗಂಧವನ್ನು ಮೀರಿಸುವಂತಹುದು ?
ಶೀಲಕ್ಕೆ ಮಿಗಿಲಾದ ಯಾವ ಆ ಸುಗಂಧ
ಬೀಸುವ ಗಾಳಿಗೆ ವಿರುದ್ಧವಾಗಿ ಹಬ್ಬುವಂತಹುದು?
ಶೀಲಕ್ಕೆ ಮಿಗಿಲಾದ ಸ್ಪರ್ಗಕ್ಕೆ ಏರಿಸುವ
ಸೋಪಾನ ಯಾವುದದು?
ನಿಬ್ಬಾಣಕ್ಕೆ ಶೀಲಕ್ಕಿಂತ ಇನ್ನೊಂದು ದ್ವಾರ ಯಾವುದು?
ರಾಜರುಗಳು ರತ್ನಾಭರಣ ಧರಿಸಿ ಪ್ರಕಾಶಿಸಬಹುದು,
ಆದರೆ ನಿಯಂತ್ರಿತನಾಗಿರುವ ಶೀಲವಂತನ ಸದ್ಗುಣಗಳಿಗೆ
ಸಮಾನವಾದ ತೇಜಸ್ಸುಳ್ಳ ಆಭರಣವಿದೆಯೇ?
ಶೀಲವಂತನಿಗಿಂತ ತೇಜಸ್ಸುಳ್ಳ ಪ್ರಕಾಶವಿದೆಯೆ?
ಸ್ವ-ನಿಂದನೆ ಅಥವಾ ನಿಂದನೆಗಳನ್ನು ಶೀಲವು
ಸಮೂಲವಾಗಿ ನಿನರ್ಾಮವನ್ನಾಶಿಸುವುದು
ಶೀಲದಿಂದಾಗಿ ಶೀಲವಂತನಿಗೆ
ಸುಕೀತರ್ಿಯ ಆನಂದ ಸದಾ ಸಿದ್ಧ.
ಈ ಪುಟ್ಟ ರೂಪುರೇಷೆಯಿಂದ ಶೀಲವೂ
ಎಂತಹ ಪುರಸ್ಕಾರ ತರಬಹುದೆಂದು ತಿಳಿಯಲ್ಪಡಿಸಿದೆ
ಮತ್ತು ಹೇಗೆ ಸಕಲ ಸದ್ಗುಣ ಮೂಲವು
ಪ್ರತಿ ತಪ್ಪನ್ನು ಅಪಹರಿಸುತ್ತದೆ ಎಂದು ತಿಳಿಸಲ್ಪಟ್ಟಿದೆ.

ಎಷ್ಟು ವಿಧದ ಶೀಲಗಳಿವೆ?

. 1. ಏಕವಿಧ ಶೀಲ: ಹೊಂದಿರುವಿಕೆ ಅಥವಾ ಸಂಯೋಜಕ ವೈಶಿಷ್ಟ್ಯತೆಯಿಂದಾಗಿ ಈ ಎಲ್ಲ ಶೀಲವೂ (ನಿಗ್ರಹದ) ಒಂದೇ ವಿಧದ್ದೆಂದು ಕರೆಯಬಹುದು.
. 2. ದ್ವಿವಿಧ ಶೀಲ : ಶೀಲವು ಎರಡು ವಿಧವೆಂದು ಹೇಳಬಹುದು. ಅವೆಂದರೆ: ಚಾರಿತ್ರ್ಯ (ಕುಶಲ) ಇಟ್ಟುಕೊಳ್ಳುವಂತಹುದು ಮತ್ತು ವಾರಿತ್ರ್ಯ: ತಡೆಯುವಂತಹುದು (ಅಕುಶಲ).
3. ಅದೇರೀತಿಯಾಗಿ ಸುಚಾರಿತ್ರ್ಯ ಮತ್ತು ಪರಿಶುದ್ಧ ಜೀವನದ ಆರಂಭ (ಆದಿ ಬ್ರಹ್ಮಚರ್ಯ).
4. ವಿರತಿ (ನಿಗ್ರಹಿಸುವಂತಹುದು) ಮತ್ತು ನಿಗ್ರಹಿಸಬಾರದಂತಹುದು (ಅವಿರತಿ).
5. ಅವಲಂಬನೆಯುತವಾದುದು ಮತ್ತು ನಿರವಲಂಬನೆಯುತವಾದುದು (ನಿರಪೇಕ್ಷ). (ಉದಾ: ದೇವಜನ್ಮ ಫಲಯಾಚನೆ.)
6. ಕಾಲಪರ್ಯಂತ (ತತ್ಕಾಲಿಕ) ಶೀಲ (ದಿನದ ಮಟ್ಟಿಗೆ/ತಿಂಗಳಮಟ್ಟಿಗೆ) ಮತ್ತು ಜೀವನಪರ್ಯಂತ ಶೀಲ ಪಾಲನೆ.
7. ಪರಿಮಿತ ಶೀಲ (ಲೌಕಿಕ ಅಪೇಕ್ಷೆಯಿಂದ ಪಾಲನೆ) ಮತ್ತು ಅಪರಿಮಿತ ಶೀಲ (ಪರಮಾರ್ಥ ಅಪೇಕ್ಷೆಯಿಂದ ಪಾಲನೆ.)
8. ಲೌಕಿಕ ಶೀಲ (ಮುಂದಿನ ಜನ್ಮದ ಲಾಭಕ್ಕಾಗಿ) ಮತ್ತು ಲೋಕೋತ್ತರ ಶೀಲ (ನಿಬ್ಬಾಣಕ್ಕಾಗಿ).
. ತ್ರಿವಿಧ ಶೀಲಗಳು :
9. ಹೀನ ಶೀಲ (ಕೀತರ್ಿಗಾಗಿ, ಮುಂದಿನ ಜನ್ಮಕ್ಕಾಗಿ) ಮಧ್ಮಮ ಶೀಲ (ಮುಂದಿನ ಜನ್ಮಕ್ಕಾಗಿ, ಸ್ವಹಿತಕ್ಕಾಗಿ) ಮತ್ತು ಉತ್ತಮ ಶೀಲ (ನಿಬ್ಬಾಣಕ್ಕಾಗಿ, ಸರ್ವರ ಹಿತಕ್ಕಾಗಿ).
10. ಸ್ವ-ಅಧಿಪತ್ಯ ಶೀಲ (ಸ್ವ-ಲಾಭಕ್ಕಾಗಿ) ಲೋಕಾಧಿಪತ್ಯಶೀಲ (ಶಿಕ್ಷಾ-ನಿಂದಾ ಭಯಕ್ಕಾಗಿ) ಮತ್ತು ದಮ್ಮಾಧಿಪತ್ಯ ಶೀಲ (ಧಮ್ಮ ಪಾಲನೆಗಾಗಿ).
11. ದೃಢಬದ್ಧ ಶೀಲ, ದೃಢಬದ್ದವಲ್ಲದ ಶೀಲ ಮತ್ತು ಪ್ರಶಾಂತ ಶೀಲ.
12. ವಿಶುದ್ಧ ಶೀಲ, ಅವಿಶುದ್ಧ ಶೀಲ ಮತ್ತು ಸಂದೇಹಾಸ್ಪದ ಶೀಲ.
13. ಶಿಕ್ಷಣ ನೀಡುವಂತಹ ಶೀಲ (ಸೇಖರ ಸೀಲ), ಶಿಕ್ಷಣ ನೀಡದಂತಹ ಶೀಲ (ಅರಹಂತರ ಶೀಲ) ಮತ್ತು ಇವೆರಡೂ ಅಲ್ಲದ ಶೀಲ.


. ಚತುವರ್ಿಧ ಶೀಲಗಳು

14. ಹಾನಭಾಗಿಯ (ಕ್ಷಯ ಶೀಲ) (ಚಟಗಳನ್ನು ಹೊಂದಿರುವಿಕೆ), ಸ್ಥಿತಿಭಾಗಿಯ (ಸ್ಥಿರ ಶೀಲ) (ಲಾಭಯುತ), ವಿಶೇಷ ಶೀಲ (ಸಮಾಧಿಯುತ ಶೀಲ) ಮತ್ತು ನಿಬ್ಭೇದಭಾಗಿಯ (ಕುಶಾಗ್ರಶೀಲ) (ವಿರಾಗಯುತ ಶೀಲ).
15. ಭಿಕ್ಷು ಶೀಲ, ಭಿಕ್ಷುಣಿ ಶೀಲ, ಅನುಪಮಪನ್ನ ಶೀಲ ಮತ್ತು ಗೃಹಸ್ಥ ಶೀಲ.
16. ಪ್ರಕೃತಿ ಶೀಲ (ಹಿಂದಿನ ಜನ್ಮ ಫಲದಂತೆ ಸ್ವಾಭಾವಿಕ ಶೀಲ), ಆಚಾರ ಶೀಲ (ಈಗಿನ ಶೀಲ), ಧಮ್ಮತಾಶೀಲ ಮತ್ತು ಪೂರ್ವ ಹೇತುಕ ಶೀಲ (ಹಿಂದಿನ ಕಮ್ಮಾನುಸಾರ ಕಾರಣದಿಂದ ಸ್ಥಾಪಿತಗೊಂಡ ಶೀಲ).
17. ಪಾತಿಮೋಕ್ಖ ಶೀಲ (227 ನಿಯಮದ ತ್ರಿಕರಣಪೂರ್ವಕ ಯೋಗ್ಯ ವರ್ತನೆ). ಇಂದ್ರಿಯ ಸಂಯಮ ಶೀಲ) ಅಜೀವಿಕಾಪರಿಶುದ್ಧ ಶೀಲ, ಅಗತ್ಯ ವಸ್ತುಗಳ ಬಳಕೆಯ ಶೀಲ, (ಆಹಾರ, ವಸ್ತ್ರ, ವಸತಿ ಮತ್ತು ಔಷಧಿ).
ಪಂಚವಿಧ ಶೀಲ
18. ಪರಿಮಿತ ಪರಿಶುದ್ಧ ಶೀಲ, ಅಪರಿಮಿತ ಪರಿಶುದ್ಧ ಶೀಲ, ಪರಿಪೂರ್ಣ ಪರಿಶುದ್ಧಿ ಶೀಲ, ಅಪರಾಮಷ್ಟ ಪರಿಶುದ್ಧಿ ಶೀಲ ಮತ್ತು ಶಾಂತ ಪರಿಶುದ್ಧಿ ಶೀಲ.
19. ಪರಿತ್ಯಾಗ, ನಿವೃತ್ತಿ, ಇಚ್ಛಾಯುತ, ಸಂಯಮ ಮತ್ತು ಅನುಲ್ಲಂಘನೆ.

ಅನುಪಮ ಭಿಕ್ಖು ಶೀಲ

ಕೊನೆಯ ನಾಲ್ಕು ವಿಧದ ಹಾಗು ಪಂಚವಿಧ ಶೀಲವು ನೇರವಾಗಿ ಭಿಕ್ಖು ಜೀವನಕ್ಕೆ ಸಂಬಂಧಪಟ್ಟಿರುವಂತಹುದಾಗಿದೆ.  ಅವರು ಇಲ್ಲಿ ಭಿಕ್ಖು ಜೀವನಕ್ಕೆ ಸಂಬಂಧಪಟ್ಟ ಎಲ್ಲಾ ನಿಯಮಗಳ ಪಾಲನೆ ಮಾಡುತ್ತಾರೆ. ಯಾರು ನಿಯಮಗಳ ರಕ್ಷಣೆ (ಪಾತಿ) ಮಾಡುವರೋ ಅವರು ಮೋಕ್ಖ (ಮೋಕ್ಷ)ವನ್ನು ಪಡೆಯುತ್ತಾರೆ. ಆದ್ದರಿಂದಾಗಿ ಇದನ್ನು ಪಾತಿಮೋಕ್ಖ ಶೀಲ ಎನ್ನುತ್ತಾರೆ. ಇಲ್ಲಿ ಅವರು ಯೋಗ್ಯವಾದ ಶಾರೀರಿಕ ಶೀಲ (ಸುವರ್ತನೆ) ಸುವಾಚ ಹೊಂದಿರುತ್ತಾರೆ. ಅವರು ಮಿಥ್ಯಾಜೀವನೋಪಾಯದಿಂದ ಜೀವಿಸುವುದಿಲ್ಲ ಅವರು ಯಾವುದೇ ಲೌಕಿಕ ವೃತ್ತಿಗಳನ್ನು ಮಾಡುವುದಿಲ್ಲ, ಜ್ಯೋತಿಷ್ಯ, ಪೌರೋಹಿತ್ಯ, ಕ್ರಯ, ವಿಕ್ರಯ ಇತ್ಯಾದಿ ಯಾವುದನ್ನೂ ಮಾಡುವುದಿಲ್ಲ. ಬಂಬುಗಳ ದಾನ ಪಡೆಯುವುದರಿಂದ, ಹೂಗಳ, ಹಣ್ಣುಗಳ ದಾನ ಪಡೆದು ಅದನ್ನು ಮಾರಾಟ ಇತ್ಯಾದಿ ಮಾಡುವುದಿಲ್ಲ.
ಅವರ ವಾಸಸ್ಥಳವು ಸಹಾ ವೇಶ್ಯಾಗೃಹದ ಸಮೀಪ ಅಥವಾ ವಿಧವೆಯ ಸಂಗಡ, ವೃದ್ಧ ನಾರಿಯರ ಸಂಗಡ, ನಪುಂಸಕರ ಸಂಗಡ ವಾಸಿವುದಿಲ್ಲ. ಅಷ್ಟೇ ಏಕೆ, ರಾಜೋಚಿತ ಶ್ರೀಮಂತಿಕೆಯ ಕಟ್ಟಡದಲ್ಲೂ ವಾಸಿಸುವುದಿಲ್ಲ. ಏಕೆಂದರೆ ಭಿಕ್ಷು ಜೀವನಕ್ಕೆ ಅಯೋಗ್ಯ ವಾಸಸ್ಥಳವಾಗಿದೆ.
ಹಿರಿಯ ಭಿಕ್ಷುಗಳೊಂದಿಗೆ ಗೌರವದಿಂದ ಇರುತ್ತಾರೆ, ಹಾಸ್ಯ, ವ್ಯಂಗ್ಯ, ಅಗೌರವ, ಅತಿ ವಾಚಾಳತನ ಅವರಲ್ಲಿ ಇರುವುದಿಲ್ಲ. ಸ್ತ್ರೀಯರೊಂದಿಗೆ ಗೌರವದಿಂದ, ಸಂಯಮದಿಂದ ಇರುತ್ತಾರೆ. ಮಕ್ಕಳೊಂದಿಗೂ ಅತಿ ಸಲುಗೆಯಿಂದ ಇರುವುದಿಲ್ಲ.
ಅವರು ತಮ್ಮ ಇಂದ್ರಿಯಗಳನ್ನು ರಕ್ಷಣೆ ಮಾಡುತ್ತಾ ಅತ್ಯಂತ ಜಾಗರೂಕವಾಗಿ ಜೀವಿಸುತ್ತಾರೆ. ಭಿಕ್ಷು ಮನೆಗಳಿಗೆ ಪ್ರವೇಶ ಮಾಡುವಾಗಾಗಲಿ, ಬೀದಿಗಳನ್ನು ಪ್ರವೇಶಿಸುವಾಗಾಗಲಿ ದೃಷ್ಟಿಯನ್ನು ಕೆಳಬಾಗಿಸುತ್ತ, ನೇಗಿಲಿನಷ್ಟು ಉದ್ದದವರೆಗೆ ಮಾತ್ರ ದೃಷ್ಟಿ ಹಾಯಿಸುತ್ತ, ಅತ್ಯಂತ ನಿಯಂತ್ರಣದಿಂದ, ನಿಗ್ರಹದಿಂದ, ಸಾಗುತ್ತಾರೆ. ಅವರು ಆನೆ, ಕುದುರೆ, ರಥ, ಸ್ತ್ರೀ, ಪುರುಷ ಇತ್ಯಾದಿಗಳನ್ನು ನೋಡುವುದಿಲ್ಲ. ಯಾವುದರಲ್ಲೂ ಚಂಚಲಿತರಾಗದೆ ಈ ಕಡೆ, ಆಕಡೆ, ಮೇಲೆ ದೃಷ್ಟಿ ಹಾಯಿಸದೆ ಜಾಗರೂಕರಾಗಿ ಚಲಿಸುತ್ತಾರೆ. ಸದಾಕಾಲ ಸ್ಮೃತಿಸಂಪನ್ನರಾಗಿರುತ್ತಾರೆ. ಅವರು ಸಣ್ಣ ತಪ್ಪುಗಳಿಗೂ ಅತಿ ಭೀತಿ ಪಡುವವರಾಗಿರುತ್ತಾರೆ. ಅವರು ಪಾತಿಮೋಕ್ಖದ ಅನುಸಾರವಾಗಿ ಪವಿತ್ರವಾಗಿ ಜೀವಿಸುತ್ತಾರೆ.
ಅವರು ಕಣ್ಣಿನಿಂದ ದೃಶ್ಯವನ್ನು ನೋಡುವಾಗ ಸಂಕೇತಗಳಾಗಲಿ ಅಥವಾ ವಿವರ ವಿಶೇಷಗಳಿಗಾಗಲಿ ಗಮನಹರಿಸುವುದಿಲ್ಲ. ಕಣ್ಣು ತೆರೆದಿದ್ದರೂ ಮನಸ್ಸು ಅಲ್ಲಿರದಿದ್ದರೆ, ಅವರು ನೋಡಲಾರರು. ಮನಸ್ಸಿದ್ದರೂ ಕುರುಡರು ದೃಶ್ಯ ನೋಡಲಾರರು. ಆದರೆ ಕಣ್ಣು ಇದ್ದು, ಮುಂದೆ ದೃಶ್ಯವಿದ್ದಾಗ ಮನಸ್ಸು ಅಲ್ಲಿದ್ದು ನೋಡಿದಾಗಲೇ ಅದರ ಬಗ್ಗೆ ಮಾಹಿತಿ, ಚಿಂತನೆ, ಚಾಂಚಲ್ಯ ಇತ್ಯಾದಿ ಎಲ್ಲಾ ಉದಯಿಸಬಹುದು. ಆದರೆ ಭಿಕ್ಖುಗಳು ಕಶ್ಮಲಗಳನ್ನು ವೃದ್ಧಿಸುವ ಯಾವುದೇ ದೃಶ್ಯವನ್ನು ನೋಡುವುದಿಲ್ಲ. ಕಣ್ಣುಗಳ ವೃದ್ಧಿಕಾರಿ ವಿಷಯಗಳ ಬಗ್ಗೆ ಕುತೂಹಲ ತಾಳಿ ಬಂಧನಕ್ಕೆ ಸಿಲುಕುವುದಿಲ್ಲ. ಇದಕ್ಕೆ ಉದಾಹರಣೆ ಚೇತಿಯ ಪಬ್ಬತದಲ್ಲಿ ವಾಸಿಸುತ್ತಿದ್ದ ತಿಸ್ಸ ಮಹಾಥೇರರು.
ತಿಸ್ಸ ಮಹಾಥೇರರು: ಒಮ್ಮೆ ಅವರು ಆಹಾರಕ್ಕಾಗಿ ಅನುರಾಧಪುರದಲ್ಲಿ ಸಾಗುತ್ತಿರುವಾಗ, ಗಂಡನೊಂದಿಗೆ ಜಗಳವಾಡಿಕೊಂಡು ಎದುರಿಗೆ ಬಂದ ಸ್ತ್ರೀಯೊಬ್ಬಳು ಇವರನ್ನು ಕಂಡು, ಏನನ್ನೊ ನೆನಯುತ್ತ ಹಲ್ಲು ಕಾಣಿಸುವಂತೆ ನಕ್ಕಳು. ಆಶ್ಚರ್ಯಗೊಂಡ ಥೇರರು ತಲೆಯೆತ್ತಿ ನೋಡಿದರು. ಅವರು ಸಂಯಮದಿಂದ ನೊಡಿದ್ದರಿಂದಾಗಿ ಕೇವಲ ಆಕೆಯ ಹಲ್ಲುಗಳು ಗೋಚರಿಸಿತು. ತಕ್ಷಣ ಅವರಲ್ಲಿ ಅಶುಭನಿಮಿತ್ತ ಜಾಗೃತಗೊಂಡು ಈ ಶರೀರವು ಅಸ್ತಿಪಂಜರವಲ್ಲದೆ ಮತ್ತೇನಲ್ಲ ಎಂಬ ಜ್ಞಾನ ಉದಯಿಸಿ ಅರಹಂತರಾದರು.
ಅವರು ಆಕೆಯ ಹಲ್ಲುಗಳಲ್ಲಿ ಮೂಳೆಗಳನ್ನು ಕಂಡರು, ಆ ನಿಮಿತ್ತದಲ್ಲೇ ಚಿತ್ತ ಏಕಾಗ್ಗತವಾಗಿ ನಿಂತ ನಿಲುವಿನಲ್ಲೇ ಥೇರರು ಅರಹಂತರಾದರು.
ಆನಂತರ ಆಕೆಯನ್ನು ಹುಡುಕಿಕೊಂಡು ಬಂದಂತಹ ಆಕೆಯ ಗಂಡನು ತನ್ನ ಪತ್ನಿಯ ಬಗ್ಗೆ ಅವರಲ್ಲಿ ವಿಚಾರಿದನು: ಅದಕ್ಕೆ ಥೇರರು ಉತ್ತರಿಸಿದ್ದು ಹೀಗೆ: ಹೀಗೆ ಸಾಗಿದ್ದು ಅದು ಸ್ತ್ರೀಯೋ, ಪುರುಷನೋ ನಾನು ಗಮನಿಸಲಿಲ್ಲ, ಆದರೆ ಈ ಹೆದ್ದಾರಿಯಲ್ಲಿ ಅಸ್ತಿಗಳ ರಾಶಿ ಹೊರಟಿದ್ದು ಮಾತ್ರ ಸತ್ಯ.
ಹೀಗೆ ಭಿಕ್ಷುಗಳು ತಮ್ಮ ಚಕ್ಷುವನ್ನು ನಿಯಂತ್ರಣದಲ್ಲಿಡುತ್ತಾರೆ. ಇದೇ ಬಗೆಯಲ್ಲಿ ಉಳಿದ ಇಂದ್ರಿಯಗಳನ್ನು ರಕ್ಷಿಸುತ್ತಾರೆ.
ಭಿಕ್ಷುಗಳ ಜೀವನೋಪಾಯ:
ಇಲ್ಲಿ ಭಿಕ್ಷುವು ಜೀವನೋಪಾಯದ ಕಾರಣಕ್ಕಾಗಿ, ಜೀವನೋಪಾಯದ ಉದ್ದೇಶಕ್ಕಾಗಿ ಕೆಟ್ಟ ಉದ್ದೇಶಗಳಿಂದ ಕೂಡಿರುವುದಿಲ್ಲ. ಅದಕ್ಕಾಗಿ ತಾನು ಧ್ಯಾನಸಿದ್ಧಿ ಪಡೆದಿರುವೆನೆಂದಾಗಲಿ, ಲೋಕೋತ್ತರ ಫಲಗಳನ್ನು ಪಡೆದಿರುವೆನೆಂದಾಗಲಿ ಸುಳ್ಳು ಹೇಳುವುದಿಲ್ಲ, ತನ್ನದಲ್ಲದ ಪರರಿಗಾಗಿ ಮೀಸಲಿಟ್ಟ ಆಹಾರವನ್ನಾಗಲಿ, ವಸ್ತ್ರವನ್ನಾಗಲಿ ಸ್ವೀಕರಿಸುವುದಿಲ್ಲ, ಹಾಗೆಯೇ ಔಷಧ ಹಾಗು ವಸತಿಯನ್ನು ಸ್ವೀಕರಿಸುವುದಿಲ್ಲ.
ಒಳಸಂಚು ನಡೆಸಲಾರ: ಭಿಕ್ಷುವು ತನ್ನ ಜೀವನೋಪಾಯಕ್ಕಾಗಿ ಅಥವಾ ಅವಶ್ಯಕ ವಸ್ತುಗಳಿಗಾಗಿ, ಅಂತಹ ಉದ್ದೇಶಕ್ಕೆಂದೇ ಉಪಾಸಕರೊಂದಿಗೆ ಸ್ನೇಹ ಬೆಳೆಸುವುದು ಮಾಡುವುದಿಲ್ಲ, ಒಳಸಂಚು ನಡೆಸುವುದಿಲ್ಲ. ಅಗತ್ಯವಿದ್ದರೂ ಬೇಕಾಗಿಯೇ ಕೀತರ್ಿಗೋಸ್ಕರ ನಿರಾಕರಿಸುವುದಿಲ್ಲ.
ಒತ್ತಾಯಿಸಲಾರ: ಮಾತನಾಡುತ್ತಾ, ಕೋರಿಕೆಗಳನ್ನು ವ್ಯಕ್ತಪಡಿಸುವುದಿಲ್ಲ, ಒತ್ತಾಯಿಸುವುದಿಲ್ಲ. ಸಲಹೆ ನೀಡುವುದಾಗಲಿ, ನಿರಂತರ ಸಲಹೆ ನೀಡುವುದಾಗಲಿ, ಅದಕ್ಕಾಗಿಯೆ ಹರಟೆ ಮಾಡುವುದಾಗಲಿ, ಹೊಗಳುವುದಾಗಲಿ, ಹಾಸ್ಯವಾಗಲಿ, ಮಾಡುವುದಿಲ್ಲ.
ಸಂಜ್ಞೆ ಮಾಡಲಾರ: ಇಲ್ಲಿ ಭಿಕ್ಖುವು ತನ್ನ ಪರಿಕರಗಳಿಗೋಸ್ಕರವಾಗಿ ಸಂಜ್ಞೆಗಳನ್ನಾಗಲಿ, ಸೂಚ್ಯಗಳನ್ನಾಗಲಿ, ಸುತ್ತಿ ಬಳಸಿ ಮಾತನಾಡುವುದಾಗಲಿ ಮಾಡಲಾರ.
ಕೀಳಾಗಿ ಕಾಣುವುದಿಲ್ಲ: ತನ್ನ ಜೀವನೋಪಾಯಕ್ಕಾಗಿ, ಸ್ವಾರ್ಥಕ್ಕಾಗಿ ಗೃಹಸ್ಥರ ಸಹಕಾರ ಸಿಗದಿದ್ದಾಗ ಅವರನ್ನು ನಿಂದಿಸುವುದಾಗಲಿ, ಕೀಳಾಗಿ ಕಾಣುವುದಾಗಲಿ, ವ್ಯಂಗ್ಯ ಮಾಡುವುದಾಗಲಿ, ಅವರ ಬಗ್ಗೆ ಚಾಡಿ ಹೇಳುವುದಾಗಲಿ, ಪರರ ವಿಷಯಗಳಲ್ಲಿ ಹರಟೆ ಮಾಡುವುದಾಗಲಿ ಮಾಡುವುದಿಲ್ಲ.
ಲೌಕಿಕ ಲಾಭಕ್ಕೆ ಸಂಚು: ಇಲ್ಲಿ ಭಿಕ್ಷುವು ಲೌಕಿಕ ಲಾಭಗಳ ಆಸಕ್ತಿ, ಯೋಚನೆ ಮಾಡಲಾರರು, ಅವನ್ನೇ ಹುಡುಕಲಾರರು, ಅವನ್ನು ಬಯಸಲಾರರು ಹಾಗು ಒತ್ತಾಯಿಸಲಾರರು. ತಾನು ಅಲ್ಪ ತೃಪ್ತನೆಂದು ಪರಿಕರಗಳನ್ನು ನಿರಾಕರಿಸಿ, ಅವರ ಮನಸ್ಸಿನಲ್ಲಿ ತಾನು ಶ್ರೇಷ್ಠ, ಅಲ್ಪತೃಪ್ತನೆಂದು ಬಿಂಬಿಸಿ, ಅವರೇ ಪುಣ್ಯ ಲಾಭಕ್ಕಾಗಿ ಒತ್ತಾಯಿಸಿ ನೀಡುವಂತೆ ಮಾಡಲಾರ. ಇದೇರೀತಿಯಾಗಿ ಚೀವರಗಳಿಗಾಗಲಿ, ವಸತಿಗಳಿಗಾಗಲಿ ಈ ರೀತಿಯ ಸಂಚು ಮಾಡಲಾರ. ಹೀಗೆ ಭಿಕ್ಖುವು ಜೀವನೋಪಾಯಕ್ಕಾಗಿ ಸಂಚು ರೂಪಿಸುವುದಿಲ್ಲ. ಮಾತನಾಡುವುದಾಗಲಿ, ಸೂಚ್ಯ ನೀಡುವುದಾಗಲಿ, ಕೀಳಾಗಿ ಕಾಣುವುದಾಗಲಿ, ಲಾಭಕ್ಕಾಗಿ ಒತ್ತಾಯಿಸುವುದಾಗಲಿ ಮಾಡದೆ ಸಮ್ಯಕ್ ಜೀವನದಲ್ಲಿರುತ್ತಾನೆ.
ಪ್ರತ್ಯಯ ಸನ್ಮಿಶ್ರಿತ ಶೀಲ:

ಪರಿಕರಗಳೊಂದಿಗೆ ಭಿಕ್ಖು ಶೀಲ:

ಭಿಕ್ಖುವು ಚೀವರನ್ನು ಪ್ರಾಜ್ಞನಂತೆ ಹೀಗೆ ಚಿಂತನೆ ಮಾಡಿ ಬಳಸುತ್ತಾನೆ: ಈ ಚೀವರವು ಚಳಿಯಿಂದ, ಬಿಸಿಲಿನಿಂದ, ಕೀಟಗಳಿಂದ, ಗಾಳಿಯಿಂದ, ಸುಡುವಿಕೆಯಿಂದ ಹಾಗು ಸರಿಸೃಪಗಳಿಂದ ರಕ್ಷಿಸಿಕೊಳ್ಳಲು ಹಾಗು ದೇಹವನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಮಾತ್ರ ಬಳಸುತ್ತಿದ್ದೇನೆ.
ಭಿಕ್ಷುವು ಆಹಾರವನ್ನು ಪ್ರಾಜ್ಞನಂತೆ ಹೀಗೆ ಚಿಂತನೆ ಮಾಡಿ ಬಳಸುತ್ತಾನೆ: ಈ ಆಹಾರವು ಮೋದಕ್ಕಾಗಿ ಅಲ್ಲ, ಸಂತೋಷಕ್ಕಾಗಿ ಅಲ್ಲ, ಕ್ರೀಡೆಗಾಗಿ ಅಲ್ಲ, ಸೋಗಿಗಾಗಿ ಅಲ್ಲ, ಉದ್ರೇಕಕ್ಕಾಗಿಯೂ ಅಲ್ಲ. ಕೇವಲ ಶರೀರದ ಸಹಿಷ್ಣುತೆಗೆ, ಹಸಿವೆಂಬ ವೇದನೆಯನ್ನು ಕೊನೆಗಾಣಿಸಲು ಮತ್ತು ಪರಿಶುದ್ಧ ಜೀವನದ ಸಹಾಯತೆಗಾಗಿಯು ಹಿಂದಿನ ವೇದನೆಗಳನ್ನು ನಿಲ್ಲಿಸಲು ಹಾಗು ಹೊಸ ವೇದನೆಗಳನ್ನು ತಡೆಯಲು, ಆರೋಗ್ಯಕರವಾಗಿರಲು ಮತ್ತು ನಿಂದಾತೀತ ಜೀವನ ಜೀವಿಸಿ ಸುಖಿಯಾಗಿರಲು ಮಾತ್ರವೇ ಆಗಿದೆ.
ಭಿಕ್ಷುವು ಹೀಗೆ ಪ್ರಾಜ್ಞನಂತೆ ಚಿಂತನೆ ಮಾಡುತ್ತಾ ವಸತಿಯನ್ನು ಬಳುಸತ್ತಾನೆ: ಈ ವಸತಿಸ್ಥಳವು (ವಿಶ್ರಾಂತಿ ಸ್ಥಳ) ಚಳಿಯಿಂದ ರಕ್ಷಿಸಿಕೊಳ್ಳಲು, ಬಿಸಿಲಿನಿಂದ ರಕ್ಷಿಸಿಕೊಳ್ಳಲು, ಕೀಟಗಳಿಂದ ರಕ್ಷಿಸಿಕೊಳ್ಳಲು, ಗಾಳಿಯಿಂದ, ಸುಡುವಿಕೆಯಿಂದ, ಸರಿಸೃಪಗಳಿಂದ ಪಾರಾಗಲು, ವಾತಾವರಣ ಮತ್ತು ಜೀವಿಗಳಿಂದ ರಕ್ಷಿಸಿಕೊಳ್ಳುವ ಉದ್ದೇಶದಿಂದ ಮಾತ್ರವೇ ಆಗಿದೆ.
ಭಿಕ್ಷುವು ಹೀಗೆ ಪ್ರಾಜ್ಞನಂತೆ ಚಿಂತನೆ ಮಾಡಿ ಔಷಧಿಗಳನ್ನು ಬಳಸುತ್ತಾನೆ: ಈ ಔಷಧಿಯು ಕೇವಲ ರೋಗ ನಿವಾರಣೆಗಾಗಿ ಮಾತ್ರವೇ. ಉಂಟಾಗಿರುವ ವೇದನೆಗಳನ್ನು ನಿಲ್ಲಿಸಲು ಹಾಗು ಹೊಸ ನೋವು, ರೋಗವನ್ನು ತಡೆಯಲು ಮತ್ತು ರೋಗದಿಂದ ಪೂರ್ಣವಾಗಿ ರಕ್ಷಣೆ ಪಡೆಯಲು ಮಾತ್ರವೇ ಆಗಿದೆ.
ಹೀಗೆ ಭಿಕ್ಷುವು ಪರಿಕರಗಳ ಬಗ್ಗೆ ಪ್ರಾಜ್ಞನಂತೆ ಚಿಂತನೆ ಮಾಡಿ ಪರಿಶೀಲಿಸಿ ಅದರಂತೆಯೇ ಜೀವಿಸುತ್ತಾನೆ: ಹೇಗೆ ಕೋಳಿಯು ತನ್ನ ಮೊಟ್ಟೆಗಳನ್ನು ಕಾಪಾಡುತ್ತದೆಯೋ ಅಥವಾ ಚಮರಿ ಮೃಗವು ತನ್ನ ಬಾಲವನ್ನು ರಕ್ಷಿಸುತ್ತದೆಯೋ ಅಥವಾ ಮುದ್ದಾದ ಮಗುವನ್ನು ಜೋಪಾನವಾಗಿ ನೋಡಿಕೊಳ್ಳುವಂತೆ ಅಥವಾ ಒಕ್ಕಣ್ಣನು ತನ್ನ ಏಕೈಕ ಕಣ್ಣನ್ನು ಕಾಪಾಡುವಂತೆ ನೀವು ಸಹಾ ನಿಮ್ಮ ಶೀಲವನ್ನು ಕಾಪಾಡಿಕೊಳ್ಳಲು ಸನ್ನದ್ಧರಾಗಿ, ಸದಾಕಾಲ ವಿವೇಚನೆ ಉಳ್ಳವರಾಗಿ, ಎಂದೆಂದಿಗೂ ಜಾಗ್ರತೆಯಿಂದ ಜೀವಿಸಿ.
ಯಾವಾಗ ನನ್ನಿಂದ ಶೀಲದ ಶಿಕ್ಷಣವು ಪೋಷಣೆಯಾಗುವುದೋ ನನ್ನ ಶಿಷ್ಯರು ತಮ್ಮ ಜೀವಕ್ಕಾಗಿಯು ಸಹಾ ಉಲ್ಲಂಘಿಸುವುದಿಲ್ಲ. (ಅಂ.ತ 201)
ಸಾವಿನಲ್ಲೂ ಸಾಧನೆ: ಇದಕ್ಕೆ ಸಾಕ್ಷಿಯೆಂಬಂತೆ ಒಬ್ಬ ಥೇರನನ್ನು ಮಹಾಚತ್ತಾನಿ ಅರಣ್ಯದಲ್ಲಿ ಬಂಧಿಸಿ ಮಲಗಿಸಿ ಹೊರಟುಹೋದರು. ಆ ಸ್ಥಿತಿಯಲ್ಲಿ ಏಳು ದಿನಗಳಿದ್ದರೂ ಆ ಥೇರನು ಬೇಸರಿಸಲಿಲ್ಲ, ಗೋಳಾಡಲಿಲ್ಲ, ಭೀತಿ, ಶೋಕಪಡಲಿಲ್ಲ. ಬದಲಾಗಿ ಆ ಸ್ಥಿತಿಯಲ್ಲೇ ಸಮಾಧಿ ಹಾಗು ಪಞ್ಞಾವನ್ನು ಅಭಿವೃದ್ಧಿಸಿ ಅನಾಗಾಮಿ ಫಲವನ್ನು ಪಡೆದನು. ನಂತರ ಮೃತ್ಯುವಶವಾಗಿ ಅರೂಪ ಬ್ರಹ್ಮಲೋಕದಲ್ಲಿ ಉದಯಿಸಿದನು.
ಇದೇರೀತಿ ಮತ್ತೊಬ್ಬ ಥೇರನನ್ನು ತಂಬಪನ್ನಿ ದ್ವೀಪದಲ್ಲಿ (ಶ್ರೀಲಂಕ) ಬಳ್ಳಿಗಳಿಂದ ಕಟ್ಟಿಹಾಕಿ ಮಲಗಿಸಿದಾಗ ಕಾಡ್ಗಿಚ್ಚು ಹತ್ತಿಕೊಂಡಿತು. ಅದೇ ಪರಮ ಸಾಹಸಿಯಾದ ಆ ಥೇರನು ಮೃತ್ಯುವಿನ ಬಗ್ಗೆ ಗಮನ ನೀಡದೆ ಪಞ್ಞಾಭಿವೃದ್ಧಿಯಲ್ಲಿ ತೊಡಗಿದನು. ಕೊನೆಗೆ ನಿಬ್ಬಾಣವನ್ನು ಸಾಕ್ಷಾತ್ಕರಿಸಿದನು. ನಂತರ ಹಾಗೆಯೇ ಪರಿನಿಬ್ಬಾನವನ್ನು ಪಡೆದನು. ನಂತರ ಅಲ್ಲಿಗೆ ಬಂದಂತಹ ದೀಘನಿಕಾಯದ ಆಚಾರ್ಯನಾದ ಅಭಯ ಥೇರನು ಅಲ್ಲಿ ಸ್ತೂಪ ಕಟ್ಟಿಸಿದನು.
ಪರಿಶುದ್ಧ ಶೀಲಗಳ ನಿಯಮಗಳನ್ನು ನಿರ್ವಹಿಸು,
ಲೋಕರಕ್ಷಣೆಗೆ ಶಾಸನದಿಂದ ಬಂದಿರುವ
ಶೀಲಗಳನ್ನು ಮುರಿಯುವ ಬದಲು
ಅಗತ್ಯವಾದರೆ ಜೀವವನ್ನು ತೊರೆ.

ಇಂದ್ರಿಯ ನಿಗ್ರಹ ಶೀಲ

ಹೇಗೆ ಪಾತಿಮೋಕ್ಖ ನಿಗ್ರಹವನ್ನು ಶ್ರದ್ಧೆಯಿಂದ ಪಾಲಿಸುವರೋ ಹಾಗೆಯೇ ಇಂದ್ರಿಯ ನಿಗ್ರಹ ಶೀಲವನ್ನು ಸಮ್ಯಕ್ ಸ್ಮೃತಿಯಿಂದ ನಿಗ್ರಹಿಸಬೇಕು. ಇಂದ್ರಿಯಗಳ ಮೂಲಕ ಲೋಭ ಇತ್ಯಾದಿ ಕಶ್ಮಲಗಳಿಗೆ ಹಾದಿ ಮಾಡಕೂಡದು. ಇದಕ್ಕೆ ಸಂಬಂಧಿಸಿದಂತೆ ಭಗವಾನರು ಅಗ್ನಿ ಪ್ರವಚನದಲ್ಲಿ ಹೀಗೆ ನುಡಿದಿದ್ದಾರೆ: ಓಹ್ ಭಿಕ್ಷುಗಳೇ, ಕಣ್ಣಿನ ಮೂಲಕ ಅಕುಶಲ ವಿಷಯಗಳ ಸಮೂಹವನ್ನು ತಂದುಕೊಂಡು (ಭವದಲ್ಲಿ ದುಃಖಪಡುವ) ಬದಲು ಕಾದ ಕಬ್ಬಿಣದ ಸೂಜಿಯಿಂದ ಕಣ್ಣನ್ನು ಚುಚ್ಚಿಕೊಳ್ಳುವುದು ಲೇಸು.
ರೂಪ, ಶಬ್ದ, ವಾಸನೆ, ರಸ (ರುಚಿ) ಮತ್ತು ಸ್ಪರ್ಶ ಇವುಗಳನ್ನು ಸಂಪಕರ್ಿಸುವ ಇಂದ್ರಿಯಗಳನ್ನು ರಕ್ಷಿಸಿರಿ. ಏಕೆಂದರೆ ಯಾವಾಗ ಇವುಗಳ ದ್ವಾರಗಳು ತೆರೆದಿಟ್ಟು, ಅರಕ್ಷಿತವಾಗಿರುತ್ತವೆಯೊ ಆಗ ಕಳ್ಳರು ಹಳ್ಳಿಗಳನ್ನು ಲೂಟಿ ಮಾಡುವಂತೆ (ಪುಣ್ಯವನ್ನು) ಕಳೆದುಕೊಳ್ಳುವಿರಿ.
ಹೇಗೆ ದುರ್ಬಲ ಛಾವಣಿಯ ಮನೆಯೊಳಕ್ಕೆ ಮಳೆಯ ನೀರು ನುಗ್ಗುವುದೋ ಹಾಗೆಯೇ ಅಭಿವೃದ್ಧಿ ಹೊಂದದ ಚಿತ್ತದಲ್ಲಿ ಲೋಭ ರಾಗಾದಿಗಳು ಸುಲಭವಾಗಿ ನುಗ್ಗುತ್ತವೆ (24.14)

ವಂಗೀಸ ಥೇರನ ನಿಗ್ರಹತೆ

ಇಲ್ಲಿ ವಂಗೀಸ ಥೇರನು ಅತಿ ಕ್ಷಿಪ್ರವಾಗಿ ಪರಿವರ್ತನೆ ಹೊಂದಿರುವುದು ವಿಶೇಷವಾಗಿದೆ. ಒಮ್ಮೆ ವಂಗೀಸ ಥೇರನು ಆಹಾರಕ್ಕಾಗಿ ಹೊರಗೆ ಹೊರಟಿದ್ದನು. ಆಗ ದಾರಿಯಲ್ಲಿ ಸುಂದರವಾದ ಸ್ತ್ರೀಯನ್ನು ಕಂಡು ಚಂಚಲಿತನಾದನು. ಅವನಲ್ಲಿ ಲೋಭವು ಪ್ರಬಲವಾಗುತ್ತಾ ಹೋಯಿತು. ತನ್ನನ್ನು ತಾನೇ ನಿಯಂತ್ರಿಸದೆ ಹೋದನು. ಆಗ ಪರಮಪೂಜ್ಯ ಆನಂದರಲ್ಲಿ ಹೀಗೆಂದನು:
ನಾನು ಕಾಮಾಗ್ನಿಯಿಂದ (ರಾಗಾಗ್ನಿ) ಆವರಿಸಲ್ಪಟ್ಟಿದ್ದೇನೆ. ನನ್ನ ಚಿತ್ತವೆಲ್ಲ ಈ ಅಗ್ನಿಯಿಂದಲೇ ಸುಡುತ್ತಿದೆ. ನನ್ನಲ್ಲಿ ದಯೆತೋರಿ ಗೋತಮ ಶಿಷ್ಯರೇ, ಒಳಿತಿಗಾಗಿ ಇದನ್ನು ಆರಿಸುವುದು ಹೇಗೆ? (5.1.188)
ಆಗ ಆನಂದರು ಹೀಗೆ ಉತ್ತರಿಸಿದರು:
ನೀನು ತಪ್ಪಾಗಿ ಗ್ರಹಿಸಿದ್ದೀಯ, ಆ ಅಗ್ನಿಯ ಜ್ವಾಲೆಗಳು ನಿನ್ನ ಚಿತ್ತವನ್ನು ಆವರಿಸಿವೆ. ಎಚ್ಚರ ! ಅಲ್ಲಿ ಯಾವುದೇ ಸುಂದರತೆಯ ಚಿಹ್ನೆ ಕಾಣಬೇಡ, ಆ ಸುಂದರ ಚಿಹ್ನೆಯೇ ನಿನ್ನನ್ನು ಕಾಮದೆಡೆಗೆ ಕರೆದೊಯ್ಯುವುದು. ಬದಲಾಗಿ ಅಲ್ಲಿ ಅಶುಭ ನಿಮಿತ್ತ (ಅಸಹ್ಯತೆಯ ಸಂಕೇತ) ಕಂಡು ಅಲ್ಲಿ ಚಿತ್ತ ಏಕಾಗ್ರತೆ ವಹಿಸಿ ಸಂಖಾರಗಳನ್ನು ಪರಕೀಯವೆಂದೇ ಭಾವಿಸಿ, ಅವು ದುಃಖ, ಆ ವ್ಯಕ್ತಿತ್ವ ನಿನ್ನದಲ್ಲ, ವ್ಯಕ್ತಿತ್ವವೇ ನಿನ್ನದಲ್ಲ. ಹೀಗಾದಾಗ ಮಾತ್ರವೇ ಮಹಾ ಕಾಮಾಗ್ನಿಯು ಸಹಾ ಇಲ್ಲದೆ ಆರಿಹೋಗುತ್ತದೆ, ಅವು ಮತ್ತೆ ಹುಟ್ಟದಂತೆ ಆಳಿಯುತ್ತದೆ. (5.1.180)
ಈ ಗಾಥೆಗಳಲ್ಲಿ ಮಹೋನ್ನತೆಯ ವಂಗೀತ ಥೇರನಿಗೆ ಅರಿವಾಗಿ ತಕ್ಷಣ ಅಶುಭದಲ್ಲಿ ಜಾಗ್ರತನಾಗಿ, ಅನತ್ತದಲ್ಲಿ ಜಾಗ್ರತನಾಗಿ ದುಃಖವೆಂದು ಅರಿವಾಗಿ ತಕ್ಷಣ ಅವುಗಳಿಂದ ವಿಮುಖನಾಗಿ ಪ್ರಶಾಂತನಾಗಿ ವಿಹಾರಕ್ಕೆ ಹಿಂತಿರುಗಿದನು.
ಚಿತ್ತಗುತ್ತ ಥೇರನ ಇಂದ್ರಿಯ ಸಂಯಮ
ಚಿತ್ತಗುತ್ತ ಥೇರನು ಕುರುಂಡಕದ ಮಹಾ ಗುಹೆಯಲ್ಲಿ 60ಕ್ಕಿಂತ ಹೆಚ್ಚು ವರ್ಷ ವಾಸಿಸುತ್ತಿದ್ದನು. ಅಲ್ಲಿಗೆ ಒಮ್ಮೆ ಮಹಾಮಿತ್ತ ಥೇರ ಮತ್ತು ಅವನ ಶಿಷ್ಯರು ಆಗಮಿಸಿದರು. ಅವನು ಆ ಗುಹೆಯಲ್ಲಿದ್ದ ಏಳು ಬುದ್ಧರ ಮಹಾಭಿನಿಷ್ಕ್ರಮಣದ ಚಿತ್ರಗಳು ಬಿಡಿಸಿದ್ದನ್ನು ಕಂಡು ಆ ಚಿತ್ರಗಳ ಕುರಿತು ಪ್ರಶಂಸೆ ಮಾಡತೊಗಡಿದನು. ಆಗಲೇ ಚಿತ್ತಗುತ್ತನಿಗೆ ಅಲ್ಲಿಂದ್ದಂಹ ಚಿತ್ರಗಳ ಬಗ್ಗೆ ಅರಿವಾಗಿ ಆಶ್ಚರ್ಯವಾಗಿ ಹೀಗೆಂದನು:
ನಾನು ಇಲ್ಲಿ ಅರವತ್ತು ವರ್ಷಕ್ಕಿಂತಲೂ ಹೆಚ್ಚು ವಾಸಿಸಿದ್ದೇನೆ. ಇಲ್ಲಿ ಚಿತ್ತಗಳು ಇದ್ದವೋ, ಇರಲಿಲ್ಲವೋ ಎಂಬುದು ತಿಳಿದಿರಲಿಲ್ಲ. ಆದರೆ ಇಂದು ಕಣ್ಣುಳ್ಳವರ ಸಹಾಯದಿಂದ ಇವನ್ನು ನೋಡಿದಂತಾಯಿತು ಎಂದನು. ಹೀಗೆ ಅವನು ಅಷ್ಟು ವರ್ಷವಿದ್ದರೂ ಸಹಾ ಗುಹೆಯಲ್ಲಿ ತಲೆಯೆತ್ತಿ ನೋಡಿರಲಿಲ್ಲ.
ಅವನ ಖ್ಯಾತಿ ತಿಳಿದ ರಾಜನು ಅವನನ್ನು ಭೇಟಿಯಾಗಲು ಇಚ್ಛಿಸಿದನು, ಅವನಿಂದ ದೀಕ್ಷೆ ಪಡೆದನು. ಹಾಗೆಯೇ ಆತನ ರಾಣಿಯು ದೀಕ್ಷೆ ಪಡೆದಳು. ರಾಜನೇ ಆಗಲಿ ಅಥವಾ ರಾಣಿಯೇ ಆಗಲಿ ಕಾಲಿಗೆ ಬಿದ್ದು ನಮಸ್ಕರಿಸುವಾಗ ಥೇರನು ರಾಜನೇ ಸುಖವಾಗಿರು ಎನ್ನುತ್ತಿದ್ದನು. ಅಲ್ಲಿ ಸ್ತ್ರೀ ಅಥವಾ ಪುರುಷ ಯಾರು ಎನ್ನುವುದರ ಬಗ್ಗೆ ಗ್ರಹಿಕೆ ಮಾಡುತ್ತಿರಲಿಲ್ಲ.
ಒಮ್ಮೆ ಗುಹೆಯಲ್ಲಿ ಧ್ಯಾನಸ್ಥನಾಗಿದ್ದಾಗ, ಆ ಗುಹೆಯ ಪಕ್ಕದಲ್ಲಿದ್ದ ನಾಗಕೇಸರ ವೃಕ್ಷದಲ್ಲಿ ದೇವತೆಯೊಂದು ಪಂಜು ಹಿಡಿದು ನಿಂತಿತು. ಆಗ ಅವನ ಧ್ಯಾನ ವಿಷಯವು ಸ್ಪಷ್ಟವಾಗಿ ಗೋಚರವಾಯಿತು. ಇದರಿಂದಾಗಿ ಆನಂದಿತನಾದ ಥೇರನು ಧ್ಯಾನಾವಸ್ಥೆಗಳನ್ನು ದಾಟಿ ಹಾಗೆಯೇ ಮಧ್ಯಮ ಝಾವದಲ್ಲಿ ಅರಹಂತನಾದನು. ಗಾಥೆ ಹೀಗಿದೆ :
ಸಾಧಕನು ಹಸಿದ ಕಣ್ಣಿನವನು ಆಗದಿರಲಿ,
ತೋಪಿನಲ್ಲಿರುವ ಕೋತಿಯಂತೆ ಅಡವಿಯಲ್ಲಿರುವ ಜಿಂಕೆಯಂತೆ
ಪುಟ್ಟ ಕಂದನಂತೆ ಸದಾ ಆತನ ಕಂಗಳು ಕೆಳಬಾಗಿರಲಿ.
ನೇಗಿಲಿನ ಉದ್ದವಷ್ಟೇ ದೂರ ದೃಷ್ಟಿಹಾಯಿಸಲಿ,
ಆಗ ಮಾತ್ರ ಆತನು ಕೋತಿಯಂತಹ ಚಿತ್ತದ
ಪ್ರಾಬಲ್ಯಕ್ಕೆ, ಚಾಂಚಲ್ಯಕ್ಕೆ ಸಿಲುಕಲಾರ.

ಮಹಾಮಿತ್ತ ಥೇರನ ಸತ್ಯಕ್ರಿಯೆ:

ಒಮ್ಮೆ ಮಹಾಮಿತ್ತ ಥೇರನ ತಾಯಿಯು ವಿಷಪೂರಿತ ಗಡ್ಡೆಯ ಕಾರಣದಿಂದಾಗಿ ಅನಾರೋಗ್ಯಪೀಡಿತಳಾದಳು. ಆಕೆ ಭಿಕ್ಖುಣಿಯಾದ ತನ್ನ ಮಗಳಿಗೆ ಹೀಗೆ ಹೇಳಿದಳು: ಮಗಳೇ, ನಿನ್ನ ಸೋದರನಿಗೆ ನನ್ನ ತೊಂದರೆಯನ್ನು ಹೇಳಿ ಔಷಧಿಯನ್ನು ತಾ. ಆಗ ಆ ಭಿಕ್ಖುಣಿಯು ಅದರಂತೆಯೇ ಮಾಡಿದಳು. ಆಗ ಥೇರನು ಹೀಗೆ ಹೇಳಿದನು: ನನಗೆ ಗಿಡಮೂಲಿಕೆಗಳಾಗಲಿ ಅದರಿಂದಾಗಿ ಯಾವ ರೋಗಕ್ಕೆ ಯಾವುದು ಮದ್ದೆಂದು ತಿಳಿದಿಲ್ಲ. ಆದರೆ ನಾನು ಪಬ್ಬಜ್ಜ ಸ್ವೀಕಾರ ಮಾಡಿದಾಗಿನಿಂದ ಸ್ತ್ರೀಯನ್ನು ಕಾಮುಕ ಮನಸ್ಸಿನಿಂದ ನೋಡಲಿಲ್ಲ. ಈ ಸತ್ಯವಚನದಿಂದಾಗಿ ನನ್ನ ತಾಯಿಯು ಸ್ವಸ್ಥಳಾಗಲಿ. ಹೋಗು ಸೋದರಿ, ಇದೇ ಸತ್ಯವಚನವನ್ನು ನುಡಿದು ಆಕೆಯ ಶರೀರವನ್ನು ಸವರು. ಆ ಭಿಕ್ಖುಣಿಯು ಅದರಂತೆಯೇ ಮಾಡಿದಾಗ ಆಕೆಯ ಶರೀರದ ಗಡ್ಡೆಯು ಇನ್ನಿಲ್ಲದಂತೆ ಆಯಿತು. ಆಕೆ ಪೂರ್ಣವಾಗಿ ಸ್ವಸ್ಥಳಾದಳು. ಆಕೆ ಮೇಲೆದ್ದು ಆನಂದದಿಂದ ಹೀಗೆ ಉದ್ಗಾರವನ್ನು ಮಾಡಿದಳು: ಬುದ್ಧ ಭಗವಾನರು ಬದುಕಿದ್ದರೆ ಖಂಡಿತವಾಗಿ ನನ್ನ ಮಗನ ತಲೆಯನ್ನು ಹೆಮ್ಮೆಯಿಂದ ತಟ್ಟುತ್ತಿದ್ದರಲ್ಲವೆ?
ಯಾವ ಉದಾತ್ತ ಕುಲಪುತ್ರರು ಶಾಸನದಲ್ಲಿ ಪ್ರವೇಶಿಸರುವರೋ
ಅವರೆಲ್ಲಾ ಮಹಾಮಿತ್ತನಂತೆ ಪೂರ್ಣವಾಗಿ ಇಂದ್ರಿಯ ನಿಗ್ರಹ ಸಾಧಿಸಲಿ.
ಹೇಗೆ ಇಂದ್ರಿಯ ನಿಗ್ರಹ ಶೀಲವನ್ನು ಸ್ಮೃತಿಯಿಂದ ಸಾಧಿಸುವರೋ ಹಾಗೆಯೇ ಜೀವನೋಪಾಯ ಪರಿಶುದ್ಧಿಯನ್ನು ಪ್ರಯತ್ನಶೀಲತೆ (ವೀರ್ಯ) ಯಿಂದ ಸಿದ್ಧಿಸುತ್ತಾರೆ. ತಪ್ಪು ಹುಡುಕಾಟ ತೊರೆದು ಯೋಗ್ಯ ಅನ್ವೇಷಣೆಯನ್ನೇ ಮಾಡುತ್ತಾರೆ.

ಸಾರಿಪುತ್ತರ ಉತ್ಕೃಷ್ಟ ಜೀವನೋಪಾಯ:

ಒಮ್ಮೆ ಸಾರಿಪುತ್ತರಿಗೆ ಅತಿಯಾದ ಹೊಟ್ಟೆನೋವು ಕಾಣಿಸಿಕೊಂಡಿತು. ಆಗ ಮಹಾಮೊಗ್ಗಲ್ಲಾನರು ಅವರ ಸೇವೆ ಮಾಡಲು ಹೊರಟರು. ಈ ಹಿಂದೆ ಗೃಹಸ್ಥ ಜೀವನದಲ್ಲಿದ್ದಾಗ ಹೇಗೆ ನಿವಾರಣೆಯಾಗುತ್ತಿತ್ತು ಎಂದು ಕೇಳಿದರು. ಅದಕ್ಕೆ ಅವರು ತಮ್ಮ ತಾಯಿಯು ನೀಡುತ್ತಿದ್ದಂತಹ ತುಪ್ಪ ಸಕ್ಕರೆಯನ್ನು ಒಳಗೊಂಡ ಅಕ್ಕಿಯ ಪಾಯಸದಿಂದಾಗಿ ಗುಣಮುಖವಾಗುತ್ತಿತ್ತು ಎಂದು ಉತ್ತರಿಸಿದರು. ಆಗ ಅವರ ಸಂಭಾಷಣೆಯನ್ನು ಅಲ್ಲಿ ಪಕ್ಕದ ವೃಕ್ಷದಲ್ಲಿ ವಾಸವಾಗಿದ್ದ ದೇವತೆಯು ಕೇಳಿಸಿಕೊಂಡಿತು. ಅದು ಸಾರಿಪುತ್ರಿಗೆ ಪಾಯಸ ದೊರಕುವಂತಹ ಉಪಾಯವೊಂದನ್ನು ಮಾಡಿತು. ಸಾರಿಪುತ್ತರಿಗೆ ಸಲಹುತ್ತಿದ್ದಂತಹ ಕುಟುಂಬದ ಹಿರಿಯ ಮಗನ ಶರೀರ ಸೇರಿಕೊಂಡು ಅಪಾರ ಕಿರುಕುಳ ನೀಡಿತು. ಆ ಮನೆಯವರನ್ನೆಲ್ಲಾ ಕರೆಸಿ ಇವೆಲ್ಲಾ ನಿಲ್ಲಿಸಬೇಕಾದರೆ ಸಾರಿಪುತ್ತ ಥೇರರಿಗೆ ತುಪ್ಪದಿಂದ ತಯಾರಿಸಿದ ಅಕ್ಕಿಯ ಪಾಯಸ ನೀಡಬೇಕೆಂದು, ಆಗ ಮಾತ್ರ ನಾನು ಈ ಶರೀರವನ್ನು ಬಿಟ್ಟುಹೋಗುತ್ತೇನೆ ಎಂದು ನುಡಿಯಿತು.
ಅದನ್ನು ಆಲಿಸಿದ ಅವರು ಹೀಗೆಂದರು: ಓಹ್ ಅದೇ ಆಸೆಯಾಗಿದ್ದರೆ ನೀನು ಹೇಳದಿದ್ದರೂ ನಾವು ಪ್ರತಿದಿನ ಇಂತಹ ವಿಶೇಷ ಆಹಾರವನ್ನೇ ನೀಡುವೆವು ಎಂದರು.
ಮಾರನೆಯ ದಿನ ಮೊಗ್ಗಲ್ಲಾನರು ಆಹಾರಕ್ಕಾಗಿ ಆ ಹಳ್ಳಿಗೆ ಹೋದಾಗ ಅವರು ಮೊಗ್ಗಲ್ಲಾನರಿಗೆ ಪಾಯಸದಿಂದ ಸತ್ಕರಿಸಿದರು. ಹಾಗು ಮತ್ತಷ್ಟು ಪಾಯಸ ನೀಡಿದರು. ಆಗ ಮಹಾಮೊಗ್ಗಲ್ಲಾನರು ಆ ಪಾಯಸವನ್ನು ತೆಗೆದುಕೊಂಡು ಸಾರಿಪುತ್ತರಿಗೆ ನೀಡಿದರು. ಆಗ ಸಾರಿಪುತ್ತರು ಹೀಗೆ ಹೇಳಿದರು:ಮಿತ್ರ, ಈ ಪಾಯಸವು ತುಂಬಾ ಚೆನ್ನಾಗಿರುವಂತಿದೆ, ಇದು ಹೇಗೆ ದೊರೆಯಿತು? ಮೊಗ್ಗಲ್ಲಾನರು ವಿವರಿಸಿದರು. ತಕ್ಷಣ ಸಾರಿಪುತ್ತರು ಆ ಪಾಯಸವನ್ನು ನಿರಾಕರಿಸಿ ಹೇಳಿದರು ಮಿತ್ರನೇ, ಈ ಪಾಯಸವನ್ನು ನಾನು ಬಳಸುವಂತಿಲ್ಲ, ಇದರಿಂದಾಗಿ ನನ್ನ ಜೀವನೋಪಾಯದ ಶೀಲ ಭಂಗವಾಗುವಂತಾಗುತ್ತದೆ. ನನ್ನ ಕರುಳು ಬೇಕಾದರೆ ಕಿತ್ತುಕೊಂಡು ನೆಲಕ್ಕೆ ಬೇಕಾದರೆ ಬೀಳಲಿ, ಆದರೆ ಸಂಜ್ಞೆಯಿಂದ (ಸೂಚ್ಯದಿಂದ) ದೊರೆತಂತಹ ಈ ಆಹಾರ ಬೇಡ ಎಂದು ಹೇಳಿ ಆ ಪಾಯಸವನ್ನು ಒಂದೆಡೆ ಬೋರಲಾಗಿ ಇಟ್ಟರು. ಹೇಗೆ ಆ ಪಾಯಸವು ನೆಲಕ್ಕೆ ಬಿತ್ತೋ, ತಕ್ಷಣ ಸಾರಿಪುತ್ತರಿಗೆ ಹೊಟ್ಟೆನೋವು ಗುಣಮುಖವಾಯಿತು, ಇನ್ನಿಲ್ಲದಂತೆ ಮಾಯವಾಯಿತು. ನಂತರದ 45 ವರ್ಷಗಳ ಕಾಲ ಅದು ಅವರಲ್ಲಿ ಮತ್ತೆ ಕಾಣಿಸಲಿಲ್ಲ.
ಆಗ ಅವರು ಈ ರೀತಿ ಉದ್ಗಾರ ಮಾಡಿದರು:
ನಾನೇನಾದರೂ ತಿನ್ನಲು ಇಚ್ಛಿಸಿದ್ದರೆ ನನ್ನ ಯೋಗ್ಯ ಜೀವನೋಪಾಯವು ಕಳಂಕಿತವಾಗುತ್ತಿತ್ತು. ಏಕೆಂದರೆ ಆ ಸೊಗಸಾದ ಸ್ವಾದಿಷ್ಟ ಪಾಯಸವು ಮಾತಿನ ಸೂಚ್ಯ ಪ್ರಭಾವದಿಂದ ದೊರಕಿತ್ತು. ಆದರೆ ನನ್ನ ಕರುಳು ಕಿತ್ತುಕೊಂಡು ಈಚೆ ಬೇಕಾದರೆ ಬಲಿ, ನನ್ನ ಜೀವವೂ ಗಂಡಾಂತರಕ್ಕೆ ಬೇಕಾದರೆ ಸಿಲುಕಲಿ, ನಾನು ಮಾತ್ರ ಸಮ್ಯಕ್ ಜೀವನಕ್ಕೆ ಕಲೆ ತರಲಾರೆ. ಮಿಥ್ಯ ಹುಡುಕಾಟಗಳನ್ನು ತೊರೆಯುವುದರಲ್ಲಿ ನನ್ನ ಹೃದಯ ತೃಪ್ತವಾಗಿದೆ ಹಾಗು ಬುದ್ಧರಿಂದ ಖಂಡನಾರ್ಹವಾಗಿ ನಿಂದಿತವಾಗಿರುವ ಎಲ್ಲವನ್ನು ನಾನು ಸ್ವೀಕರಿಸುವುದಿಲ್ಲ. (ಮಿಲಿ.370)
ಇಲ್ಲಿ ಎರಡುಬಾರಿ ಅವಲೋಕಿಸಬಹುದು 1. ಪರಿಕರಗಳನ್ನು ತೆಗೆದುಕೊಳ್ಳುವಾಗ 2. ಪರಿಕರಗಳನ್ನು ಬಳಸುವಾಗ.
ಪರಿಕರಗಳ ನಾಲ್ಕು ವಿಧದ ಬಳಕೆ:
ಇಲ್ಲಿ ಪರಿಕರಗಳನ್ನು ನಾಲ್ಕು ವಿಧದಲ್ಲಿ ಬಳಸುತ್ತಾರೆ. ಅದರಲ್ಲೇ ಅವರ ಹಂತವು ತಿಳಿದುಹೋಗುವುದು.
ಕಳ್ಳನ ರೀತಿ: ಇಲ್ಲಿ ಯಾವ ಭಿಕ್ಷುವು ಶೀಲವಂತನಾಗಿರುವುದಿಲ್ಲವೋ ಅವನು ಸದಾ ಜನರು ಶ್ರದ್ಧೆಯಿಂದ ನೀಡಿದ ಪರಿಕರಗಳನ್ನು ಬಳಸುತ್ತಿರುವನೋ ಅವನು ಸಂಘದ ಮಧ್ಯದಲ್ಲಿದ್ದರೂ ಸಹಾ ಕಳ್ಳನ ರೀತಿ ಬಳಕೆಯವನೆಂದು ಕರೆಯಲ್ಪಡುತ್ತಾನೆ.
ಸಾಲಗಾರನಂತೆ ಬಳಕೆ: ಇಲ್ಲಿ ಯಾರು ಲೋಕೋತ್ತರ ಫಲವಾಗಲಿ ಅಥವಾ ಮಾರ್ಗವಾಗಲಿ ಸಿದ್ಧಿಸಿಲ್ಲವೋ ಅವರು ಶೀಲವಂತರಾಗಿದ್ದರು ಅಥವಾ ಸಮಾಧಿ ಸಿದ್ಧಿಸಿದರೂ ಸರಿ ಸಾಲಗಾರರೆಂದು ಪರಿಗಣಿಸಲ್ಪಡುತ್ತಾರೆ. ಆದ್ದರಿಂದ ಲೋಕೋತ್ತರ ಫಲಗಳನ್ನು ಪಡೆದಾಗಲೇ ಈ ಹಂತದ ಬಳಕೆದಾರರ ಪಟ್ಟಿಯಿಂದ ಪಾರಾಗುತ್ತಾರೆ. ಅದಕ್ಕಾಗಿ ಅವರು ನಾಲ್ಕು ರೀತಿ ಪರಿಶುದ್ಧಿ ಅನುಸರಿಸುತ್ತಾರೆ. 1. ದೇಸನ ಶುದ್ಧಿ 2. ಸಂಯಮ ಶುದ್ಧಿ 3. ಶೋಧನ ಶುಧ್ಧಿ
4. ಅವಲೋಕನ ಶುದ್ಧಿ. ಅಂದರೆ ಧಮ್ಮದೇಸನ ಆಲಿಸಿ, ಅಥರ್ೈಸಿಕೊಂಡು ಹಲವಾರು ರೀತಿಯಲ್ಲಿ ಸಂಯಮ ತೊರಿಸಿ ಉತ್ತಮ ಜೀವನೋಪಾಯ ಶೋಧಿಸಿ, ಪುನಃ ಪುನಃ ಅವಲೋಕಿಸಿ ಪರಿಕರಗಳ ಬಳಕೆ ಮಾಡುತ್ತಾರೆ.
ಪಿತ್ರಾಜರ್ಿತ ಆಸ್ತಿಯಂತೆ ಬಳಕೆ: ಇಲ್ಲಿ ಯಾರೆಲ್ಲಾ ಅರಹಂತ ಮಾರ್ಗ, ಅನಾಗಾಮಿ, ಸಕದಾಗಾಮಿ ಮತ್ತು ಸೋತಾಪನ್ನರೋ ಹಾಗು ಆ ಎಲ್ಲಾ ಮಾರ್ಗದಲ್ಲಿರುವರೋ ಒಟ್ಟಾರೆ ಸೇಖರು ಇನ್ನೂ ಕಲಿಯಬೇಕಾದವರು ಇವರೆಲ್ಲ ಬುದ್ಧ ಭಗವಾನರಿಗೆ ಮಕ್ಕಳಂತೆ ಆಗಿದ್ದು, ದಾನ, ಆತಿಥ್ಯ, ಸತ್ಕಾರ ಇತ್ಯದಿಗಳಿಗೆ ಅರ್ಹರಾಗಿರುತ್ತಾರೆ. ಹೀಗಾಗಿ ಪಿತ್ರಾಜರ್ಿತ ಆಸ್ತಿಯಂತೆ ಅವರು ಪರಿಕರಗಳನ್ನು ಬಳಸಬಹುದಾಗಿದೆ.
ಯಜಮಾನನಂತೆ ಬಳಕೆ: ಅರಹಂತರು ಮಾತ್ರವೇ ಗುರಿ ತಲುಪಿರುವುದರಿಂದಾಗಿ ದಾನ, ಆತಿಥ್ಯಕ್ಕೆಲ್ಲ ಪೂರ್ಣ ಅರ್ಹರಾಗಿರುವುದರಿಂದ ಅವರು ಯಜಮಾನನಂತೆ ಬಳಕೆ ಮಾಡುತ್ತಾರೆ.

ಪಂಚವಿಧದ ಶೀಲಗಳು

ಪರಿಮಿತ ಪರಿಶುದ್ಧಿ ಶೀಲ: ಇಲ್ಲಿ ಇನ್ನೂ ಪೂರ್ಣವಾಗಿ ಸಂಘಕ್ಕೆ ಸೇರದವರ ಶಿಕ್ಷಣ ಶೀಲಗಳನ್ನು ಪರಿಮಿತ ಪರಿಶುದ್ಧಿ ಶೀಲ ಎನ್ನುವರು. ಉದಾ: ಪಂಚಶೀಲ, ಅಷ್ಟಶೀಲ ಮತ್ತು ದಶಶೀಲ.
ಅಪರಿಮಿತ ಪರಿಶುದ್ಧಿ ಶೀಲ: ಇಲ್ಲಿ ಪೂರ್ಣವಾಗಿ ಸಂಘಕ್ಕೆ ಸೇರಿ ಅಸಂಖ್ಯಾತ ಶಿಕ್ಷಣ ಶೀಲಗಳನ್ನು ಪಡೆದು ಪಾಲಿಸುವವರಾಗಿರುತ್ತಾರೆ. ಅವರ ಶೀಲಗಳ ಸಂಖ್ಯೆಯು ಕೋಟಿಗೂ ಮೀರಿರುತ್ತದೆ. ಇಲ್ಲಿ ಶೀಲಕ್ಕಾಗಿ ಐಶ್ವರ್ಯ ತ್ಯಾಗ, ಅಂಗಾಗ ತ್ಯಾಗ, ಜೀವ ತ್ಯಾಗ ಮಾಡಲು ಸಿದ್ಧರಾಗುತ್ತಾರೆ.
ಪರಿಪೂರ್ಣ ಪರಿಶುದ್ಧಿ ಶೀಲ: ಇಲ್ಲಿ ಭಿಕ್ಖುವು ಶಿಕ್ಷಣವನ್ನೆಲ್ಲಾ ನೆನಪಿನಲ್ಲಿರಿಸಿ, ತ್ಯಾಗದ ಜೀವನ ನಡೆಸುತ್ತಾ, ಸಮ್ಯಕ್ ಜೀವನೋಪಾಯ ಪಾಲಿಸುತ್ತಾ ಜೀವಿಸುತ್ತಾನೆ, ಆತನಲ್ಲಿ ಕೆಟ್ಟ ಯೋಚನೆಗಳೂ ಸಹಾ ಉಂಟಾಗುವುದಿಲ್ಲ. ಏಕೆಂದರೆ ಆತನು ಪರಿಪೂರ್ಣ ಪರಿಶುದ್ಧಿ ಪಾಲಿಸುತ್ತಿದ್ದಾನೆ. ಪರಿಶುದ್ಧ ನೀರಿನಲ್ಲಿ ಕಾಣುವ ರತ್ನದಂತೆ, ಅಪ್ಪಟ ಚಿನ್ನದಂತೆ, ಅರಹಂತನಾಗುವ ಎಲ್ಲಾ ಅರ್ಹತೆ ಪಡೆದಿರುತ್ತಾನೆ. ಇದಕ್ಕೆ ಉದಾಹರಣೆ ಶ್ರೇಷ್ಠ ಸಂಘರಕ್ಖಿತ ಥೇರ.

ಶ್ರೇಷ್ಠ ಸಂಘರಕ್ಖಿತ ಥೇರರ ಘನತೆ:

ಸಂಘರಕ್ಖಿತ ಥೇರರಿಗೆ 60ಕ್ಕಿಂತ ಹೆಚ್ಚು ವಯಸ್ಸಾಗಿ ಸಾವಿನ ಹಂತಕ್ಕೆ ಸಮೀಪವಾಗಿ ಹಾಸಿಗೆ ಹಿಡಿದಿದ್ದರು. ಭಿಕ್ಖು ಸಂಘವು ಅವರಿಗೆ ಯಾವುದಾದರೂ ಲೋಕೋತ್ತರ ಫಲ ಸಿಕ್ಕಿದೆಯೇ ಎಂದು ಪ್ರಶ್ನಿಸಿದರು. ಇವರು ಇಲ್ಲವೆಂದಾಗ, ಆ ಭಿಕ್ಕುಗಳು ಹೀಗೆಂದರು: ಪರಮ ಪೂಜ್ಯರೇ, ನೀವು ಪರಮಪಥ ತಲುಪಿರಬಹುದೆಂದು ಇಪ್ಪತ್ತು ಯೋಜನಕ್ಕಿಂತಲೂ ದೂರದಿಂದ ಜನರು ಬರುತ್ತಿದ್ದಾರೆ. ಅವರೆಲ್ಲಾ ನೀವು ನಿಬ್ಬಾಣ ಸಾಧಿಸಿದ್ದೀರಿ ಎಂತಲೇ ಭಾವಿಸಿದ್ದಾರೆ. ಹೀಗಾಗಿ ಸಾಮಾನ್ಯ ಮನುಷ್ಯನಂತೆ ಗತಿಸಿ ಹೋದರೆ ಇದು ಮಹಾ ನಿರಾಶಾದಾಯಕವಾದ ಸಂಗತಿ ಆಗುವುದು.
ಆಗ ಸಂಘರಕ್ಖಿತರು ಹೀಗೆ ನುಡಿದರು: ಮಿತ್ರರೇ, ಭವಿಷ್ಯದ ಬುದ್ಧರಾದ ಮೆತ್ತೆಯ್ಯನವರನ್ನು ದಶರ್ಿಸುವ ಆಸೆಯಿರುವುದರಿಂದಾಗಿ ನಾನು ಪಞ್ಞಾಭಿವೃದ್ಧಿಯ ಕಡೆಗೆ ಪ್ರಯತ್ನಿಸಲೇ ಇಲ್ಲ. ಆದರೆ ನೀವು ಹೀಗೆ ಹೇಳಿದ ನಂತರ ನಾನು ಆ ಆಸೆಯನ್ನು ತೊರೆದು ಲೋಕೋತ್ತರ ಫಲಗಳನ್ನು ಪಡೆಯುವೆ, ನನಗೆ ಸ್ವಲ್ಪ ಕುಳಿತುಕೊಳ್ಳುವಂತೆ ಸಹಾಯ ಮಾಡಿ.
ಆಗ ಆ ಭಿಕ್ಖುಗಳು ಅವರನ್ನು ನೇರವಾಗಿ ಕುಳಿತುಕೊಳ್ಳುವಂತೆ ಸಹಾಯ ಮಾಡಿ ಹೊರಟು ಹೋದರು. ಕೇವಲ ಒಂದು ಘಂಟೆಯ ಸಮಯದಲ್ಲೇ ಅವರು ಅರಹಂತತ್ವ ಪ್ರಾಪ್ತಿಮಾಡಿದರು. ತಾವು ಪ್ರಾಪ್ತಿ ಮಾಡಿರುವುದಾಗಿ ಸಂಜ್ಞೆಯಿಂದ ಸೂಚಿಸಿದರು.
ಆಗ ಭಿಕ್ಖುಗಳು ಹೀಗೆ ಪ್ರಶಂಸಿಸಿದರು: ಓಹ್! ಪರಮಪೂಜ್ಯರೇ, ನೀವು ನಿಜಕ್ಕೂ ಅತ್ಯಂತ ಕಷ್ಟಕರವಾದುದನ್ನು ಸಾಧಿಸಿರುವಿರಿ, ಅದೂ ಅತ್ಯಲ್ಪ ಅವಧಿಯಲ್ಲಿಯೇ! ಆಗ ಥೇರರು ಉತ್ತರಿಸಿದರು: ಮಿತ್ರರೆ, ಇದು ಕಷ್ಟವಲ್ಲ. ಇದಕ್ಕಿಂತ ಕಷ್ಟ ಇನ್ನೊಂದಿದೆ, ಅದೆಂದರೆ ಸಮ್ಯಕ್ಸ್ಮೃತಿ. ಅದನ್ನು ನಾನು ಮೊದಲೇ ಸಿದ್ಧಿಸಿದ್ದೇನೆ. ನನಗೆ ತಿಳಿಯದಂತೆ ಯಾವ ಕಾರ್ಯವಾಗಲಿ ಅಥವಾ ಮಾತಾಗಲಿ ಅಥವಾ ಯೋಚನೆಯಾಗಲಿ ಮಾಡಿಲ್ಲ. ನಾನು ಸದಾ ಎಚ್ಚರಿಕೆಯಲ್ಲಿ ತಲ್ಲೀನನಾಗಿರುತ್ತಿದ್ದೆನು. ಆದ್ದರಿಂದಲೇ ಅತ್ಯಲ್ಪ ಕಾಲದಲ್ಲಿಯೇ ಅರಹಂತತ್ವ ಸಿದ್ಧಿಯಾಗಿದೆ. ಇದೇ ತತ್ವವನ್ನು ಅನುಸರಿಸಿ ಅವರ ಸೋದರಳಿನು ಸಹಾ ತನ್ನ 50ನೇ ವಯಸ್ಸಿನಲ್ಲಿ ಅರಹಂತನಾದನು.

ಅಪರಾಮೃಷ್ಟ (ಅಂಟದ) ಪರಿಶುದ್ಧಿ ಶೀಲ:

ಇದನ್ನು ಅಂಟದ ಪರಿಶುದ್ಧಿ ಶೀಲವೆಂದು ಏಕೆ ಹೇಳುತ್ತಾರೆಂದರೆ, ಸೇಖರಂತೆ ಅವರು ಮಿಥ್ಯಾದೃಷ್ಟಿಗಳಿಗೆ ಅಂಟುವುದಿಲ್ಲ ಹಾಗು ಸಾಮಾನ್ಯ ಮನುಷ್ಯರ ಶೀಲದಂತೆ ಲೋಭಕ್ಕೂ ಅಂಟುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕೌಟುಂಬಿಯ ಪುತ್ತ ತಿಸ್ಸ ಥೇರನು ತನ್ನ ವಿರೋಧಿಗಳಿಗೆ ಹೀಗೆ ಹೇಳುತ್ತಾರೆ: ರಾಗದಿಂದ ಕೂಡಿದ, ಚಿತ್ತದೊಂದಿಗೆ ಮರಣಿಸುವುದೆಂದರೆ ನನಗೆ ಪರಮ ಅಸಹ್ಯ, ನಾಚಿಕೆ. ನಾಳಿನ ಸೂಯರ್ೊದಯಕ್ಕೆ ಮುಂಚೆ ನಾನು ಅರಹಂತತ್ವವನ್ನು ಹೊಂದದಿದ್ದರೆ ನನ್ನ ಎರಡು ಕಾಲುಗಳನ್ನು ಕತ್ತರಿಸಿ ಕೇಳಿದಂತಹ ನಿಮಗೆ ನೀಡುತ್ತೇನೆ.

ಸ್ವರ್ಗ ಬೇಡವೆಂದ ಭಿಕ್ಖು:

ಒಬ್ಬ ಹಿರಿಯ ಭಿಕ್ಖುವು ಕಮರ್ಾನುಸಾರವಾಗಿ ಅನಾರೋಗ್ಯ ಪೀಡಿತನಾಗಿ ತನ್ನ ಕೈಯಿಂದಲೂ ಆಹಾರ ಸೇವಿಸದಾದನು. ತನ್ನ ಮಲಮೂತ್ರದಲ್ಲೇ ಬಿದ್ದುಕೊಂಡಿದ್ದ ಆತನನ್ನು ಕಂಡು ಒಬ್ಬ ಭಿಕ್ಖುವು ಹೀಗೆಂದನು: ಓಹ್ ಜೀವನ ದುಃಖಕರ. ಅದನ್ನು ಆಲಿಸಿದ ಹಿರಿಯ ಭಿಕ್ಖುವು ಹೀಗೆಂದನು: ಸೋದರ, ನಾನು ಈಗಲೇ ಮರಣಿಸಿದರೂ ಸಹಾ, ನನ್ನ ಶೀಲಾಚರಣೆಯಿಂದಾಗಿ ನನಗೆ ಸ್ವರ್ಗ (ದೇವಲೋಕ) ಲಭಿಸುವುದು, ಅದರಲ್ಲಿ ಸಂದೇಹವೇ ಇಲ್ಲ. ಆದರೆ ಮತ್ತೆ ಸುಖಗಳ ಬಲೆಗೆ ಬಿದ್ದಂತೆ ಆಗುವುದು. ಅದು ನನಗೆ ಇಷ್ಟವಿಲ್ಲ, ನಾನು ನಿಲರ್ೊಭದ ಶೀಲದೊಂದಿಗೆಯೇ ಮರಣಿಸಲು ಇಚ್ಛಿಸುವೆನು. ನಂತರ ಆ ಹಿರಿಯ ಭಿಕ್ಖುವು ಆ ಸ್ಥಿತಿಯಲ್ಲಿಯೇ ರೋಗ, ದುಃಖದ ಚಿಂತನೆಯಿಂದ ಆರಂಭವಾದ ಸಾಧನೆಯು ಹಾಗೆಯೇ ಅರಹಂತತ್ವದಲ್ಲಿ ಅಂತ್ಯವಾಯಿತು. ನಂತರ ಈ ಗಾಥೆಗಳನ್ನು ಭಿಕ್ಷುಗಳಿಗೆ ನುಡಿದನು:
ಧೂಳಲ್ಲಿ, ಬಿಸಿಲಲ್ಲಿ ಬಿದ್ದಂತಹ ಹೂ ಸುಟ್ಟು ಹೋಗುವಂತೆ
ರೋಗದಿಂದ ನನ್ನ ಶರೀರವೂ ಸಹಾ ಎಷ್ಟೋ ದುಃಖವನ್ನು
ಕಷ್ಟವನ್ನು ಅನುಭವಿಸುತ್ತಾ ಶಿಥಿಲವಾಗುತ್ತಿದೆ.
ಲೋಕದಲ್ಲಿರುವವರು ಕುರೂಪವನ್ನು ಸುಂದರತೆ ಎನ್ನುವರು
ಅಸಹ್ಯವನ್ನು ಅಂದವೆನ್ನುವರು
ಅಂತಹವರಿಗೆ ಸತ್ಯ ಸ್ಪಷ್ಟವಾಗಿ ಗೋಚರಿಸದು.
ವ್ಯಾಧಿಗ್ರಸ್ಥ, ದುರ್ಗಂಧಮಯ, ಅಪವಿತ್ರವಾದ,
ಈ ಶರೀರವು ರೋಗಕ್ಕೆ ಯಾವಾಗ ಬೇಕಾದರೂ ಗುರಿಯಾಗುವುದು
ಅಂತಹ ಈ ಶರೀರಕ್ಕೆ ಧಿಕ್ಕಾರವಿರಲಿ, ಈ ವಿಷಯದಲ್ಲಿ ಮೋಹಿತರಾದ ಜನರು
ಸುಗತಿಯ ಮಾರ್ಗವನ್ನು ಕಳೆದುಕೊಳ್ಳುತ್ತಾರೆ.

ಶಾಂತ ಪರಿಶುದ್ಧಿ ಶೀಲ

ಇದು ಅರಹಂತರ ಶೀಲವಾಗಿದೆ. ಅವರ ಆಸವಗಳೆಲ್ಲವೂ ನಾಶವಾಗಿ ಪರಮ ಪರಿಶುದ್ಧರಾಗಿರುವುದರಿಂದಾಗಿ, ಪರಮ ಶಾಂತತೆಯ ನಿಬ್ಬಾಣವನ್ನು ಸಾಧಿಸುವುದರಿಂದಾಗಿ, ಎಲ್ಲಾ ಬಗೆಯ ಕ್ಷೊಭೆಗಳನ್ನು ಶಾಂತಗೊಳಿಸಿದ್ದರಿಂದಾಗಿ, ಇದನ್ನು ಶಾಂತ ಪರಿಶುದ್ಧಿ ಶೀಲ ಎನ್ನುವರು.
ಪಂಚವಿಧದ ಶೀಲದ ವಿಸ್ತಾರ ಸ್ವರೂಪ

ಪಂಚವಿಧದ ಶೀಲ ಹೀಗಿರುತ್ತದೆ :

1. ವರ್ಜನೆ (ತೊರೆಯುವಿಕೆ) ಶೀಲ
2. ಸಂಯಮ ಶೀಲ
3. ಚೇತನಾ (ಸಂಕಲ್ಪ/ಇಚ್ಛೆ) ಶೀಲ
4. ನಿಗ್ರಹ (ಹತೋಟಿ/ನಿಯಂತ್ರಣ) ಶೀಲ
5. ಅನುಲ್ಲಂಘನ ಶೀಲ (ಮಿತಿಯನ್ನು ದಾಟದಿರುವುದು)
ಇದು ಐದು ವಿಧವಾಗಿ ಕಂಡರೂ ಇದು ಹಂತ ಹಂತವಾಗಿ ಪ್ರಕ್ರಿಯೆ ಸಾಗಬಹುದು. ಒಬ್ಬ ಪ್ರಾಣಿ ಹತ್ಯೆ ಮಾಡುವುದನ್ನು ತೊರೆಯುತ್ತಾನೆ (ವರ್ಜನೆ ಶೀಲ). ನಂತರ ಪ್ರಾಣಿಹತ್ಯೆ ಮಾಡದೆ ಇರುತ್ತಾನೆ (ಸಂಯಮ ಶೀಲ). ಆ ದೃಢ ಇಚ್ಛೆಯಲ್ಲೇ ಇರುತ್ತಾನೆ (ಚೇತನಾ ಶೀಲ). ಹೀಗೆಯೇ ಹತೋಟಿಯಲ್ಲಿರುತ್ತಾನೆ (ನಿಗ್ರಹ ಶೀಲ). ಅವನು ಈ ಮಿತಿಯಲ್ಲೇ ಇದ್ದು ಎಂದಿಗೂ ಮಿತಿ ದಾಟದೆ, ಉಲ್ಲಂಘನೆ ಮಾಡದೆ ಇರುತ್ತಾನೆ (ಅನುಲ್ಲಂಘನ ಶೀಲ). ಇದೇರೀತಿ ಇತರ ಶೀಲಗಳಾದ ಕೊಡದೆ ಇರುವುದನ್ನು ಸ್ವೀಕರಿಸದಿರುವಿಕೆ, ಅಬ್ರಹ್ಮಚರ್ಯ, ಸುಳ್ಳು, ಚಾಡಿ, ನಿಂದೆ, ಹರಟೆ, ದುರಾಸೆ, ಹಗೆತನ, ಮಿಥ್ಯಾದೃಷ್ಟಿ ಇತ್ಯಾದಿಗಳನ್ನು ತೊರೆಯುತ್ತಾನೆ, ಸಂಯಮದಿಂದಿರುತ್ತಾನೆ, ಧೃಢ ಇಚ್ಛೆಯಿಂದ ಕೂಡಿದ್ದು, ನಿಗ್ರಹಿಸಿ, ಮಿತಿ ದಾಟದೆ ಇರುತ್ತಾನೆ.
ಹಾಗೆಯೇ ಆತನು ರಾಗವನ್ನು ವಜರ್ಿಸಿ ವಿರಾಗದಿಂದ ಕೂಡಿರುತ್ತಾನೆ. ದ್ವೇಷವನ್ನು ವಜರ್ಿಸಿ ಅದ್ವೇಷದಿಂದ ಕೂಡಿರುತ್ತಾನೆ. ಜಡತೆ, ಸೋಮಾರಿತನ ವಜರ್ಿಸಿ ಅಲೋಕಸಞ್ಞಾದಿಂದ ಕೂಡಿರುತ್ತಾನೆ. ಚಿಂತೆ, ಪಶ್ಚಾತ್ತಾಪ ವಜರ್ಿಸಿ, ವಿತಕ್ಕ ವಿಚಾರದಿಂದ ಕೂಡಿರುತ್ತಾನೆ. ಅಜ್ಞಾನ ವಜರ್ಿಸಿ ಜ್ಞಾನದಿಂದ ಕೂಡಿರುತ್ತಾನೆ.
ಅದೇರೀತಿಯಲ್ಲಿ ಪರನಿಂದನೆಯನ್ನು ತೊರೆದು ಪಂಚ ಧ್ಯಾನಾಂಗಗಳಿಂದ ಕೂಡಿ ಪ್ರಥಮ ಜ್ಞಾನ ಸಮಾಧಿ ತಲುಪುತ್ತಾನೆ. ವಿತಕ್ಕ ವಿಚಾರ ತೊರೆದು ಪಂಚ ಧ್ಯಾನಾಂಗಗಳಿಂದ ಕೂಡಿ ದ್ವಿತೀಯ ಜ್ಞಾನ ಸಮಾಧಿ ತಲುಪುತ್ತಾನೆ. ಪೀತಿ ಸುಖ ತೊರೆದು ಪಂಚ ಧ್ಯಾನಾಂಗಗಳಿಂದ ಕೂಡಿ ತೃತೀಯ ಜ್ಞಾನ ಸಮಾಧಿ ತಲುಪುತ್ತಾನೆ. ಸುಖವನ್ನು ತೊರೆದು ಪಂಚ ಧ್ಯಾನಾಂಗಗಳಿಂದ ಕೂಡಿ ಚತುರ್ಥ ಜ್ಞಾನ ಸಮಾಧಿ ತಲುಪುತ್ತಾನೆ. ಚತುರ್ಥ ಜ್ಞಾನ ತೊರೆದು ಆಕಾಸನಂಚಾಯತನ ತಲುಪುತ್ತಾನೆ. ಆಕಾಸನಂಚಾಯತನ ತೊರೆದು ವಿಞ್ಞಾನಂಚಾಯತನ ತಲುಪುತ್ತಾನೆ. ವಿಞ್ಞಾನಂಚಾಯತನ ತೊರೆದು ಅಕಿಂಚಾಯತನ ತಲುಪುತ್ತಾನೆ. ಅಕಿಂಚಾಯತನ ತೊರೆದು ನೇವಸಞ್ಞಾನಾಸಞ್ಞಾಯತನ ತಲುಪುತ್ತಾನೆ. ನೇವಸಞ್ಞಾನಾಸಞ್ಞಾಯತನ ತೊರೆದು ಸಞ್ಞಾವೇದನಾ ನಿರೋಧ ಜ್ಞಾನ ಸಮಾಧಿ ತಲುಪುತ್ತಾನೆ.
ಹಾಗೆಯೇ ಅಂತ್ಯದ ವೀಕ್ಷಣೆ ಮಾಡಿ ನಿತ್ಯಸಞ್ಞೆಯನ್ನು ದಾಟುತ್ತಾನೆ. ದುಃಖ ವೀಕ್ಷಣೆ ಪ್ರಬಲಗೊಳಿಸಿ ಸುಖ ಸಞ್ಞೆಯನ್ನು ದಾಟುತ್ತಾನೆ. ಅನತ್ತ ವೀಕ್ಷಣೆ ಪ್ರಬಲಗೊಳಿಸಿ ಆತ್ಮಸಞ್ಞೆಯನ್ನು ದಾಟುತ್ತಾನೆ. ವಿಕರ್ಷದ (ನಿಬ್ಬಿದಾ) ವೀಕ್ಷಣೆ ಪ್ರಬಲಗೊಳಿಸಿ ಆಕರ್ಷಣಾ ಸಞ್ಞೆಯನ್ನು ದಾಟುತ್ತಾನೆ. ವಿರಾಗ ವೀಕ್ಷಣೆ ಪ್ರಬಲಗೊಳಿಸಿ ರಾಗವನ್ನು ದಾಟುತ್ತಾನೆ. ನಿರೋಧ ವೀಕ್ಷಣೆ ಮಾಡಿ ಉದಯಿಸುವಿಕೆಯನ್ನು ದಾಟುತ್ತಾನೆ. ಪಟಿನಿಸಗ್ಗಾ (ತ್ಯಾಗ) ವೀಕ್ಷಣೆ ಮಾಡಿ ಹಿಡಿದಿರುವಿಕೆಯನ್ನು ಬಿಡುತ್ತಾನೆ. ಕ್ಷಯ ಜ್ಞಾನದಿಂದ ವೀಕ್ಷಣೆ ಮಾಡಿ ಸದೃಢವಾಗಿದೆ ಎಂಬ ಮಿಥ್ಯಾದೃಷ್ಟಿ ಬಿಡುತ್ತಾನೆ. ಮರೆಯಾಗುವಿಕೆಯ ಜ್ಞಾನದಿಂದ ಇರುವಿಕೆಯನ್ನು ಬಿಡುತ್ತಾನೆ. ಉದಯಿಸುತ್ತದೆ ಎಂಬ ಜ್ಞಾನದಿಂದ ಶಾಶ್ವತ.... ಬಿಡುತ್ತಾನೆ. ಸಂಕೇತಾತೀತ (ಅನಿಮಿತ್ತ) ಜ್ಞಾನದಿಂದ ನಿಮಿತ್ತ (ಸಂಕೇತ) ಬಿಡುತ್ತಾನೆ. ಅಪ್ಪಣಿಹಿತಾನುಪ್ಪಸನ (ಆಸೆರಹಿತತೆ) ಜ್ಞಾನದಿಂದ ಆಸೆಯನ್ನು ಬಿಡುತ್ತಾನೆ. ಸೂನ್ಯತಾನುಪ್ಪಸನ (ಶೂನ್ಯತೆ) ಜ್ಞಾನದಿಂದ ಶೂನ್ಯವನ್ನು ಬಿಡುತ್ತಾನೆ. ಅಭಿಪನ್ನಾ (ಅಂಟದ) ಜ್ಞಾನದಿಂದ ಅಂಟುವಿಕೆಯನ್ನು ಬಿಡುತ್ತಾನೆ. ಯಥಾಭೂತ ದರ್ಶನ ಜ್ಞಾನದಿಂದ ಸಂಶಯವನ್ನು ಬಿಡುತ್ತಾನೆ. ಆದಿನತಾನುಪ್ಪಸನ (ಅಪಾಯ) ಜ್ಞಾನದಿಂದ ನಂಬಿಕೆ ಬಿಡುತ್ತಾನೆ. ಪಟಿಸಂಖಾನುಪ್ಪಸನ್ನ (ಪರಿಶೀಲನೆ) ಜ್ಞಾನದಿಂದ ಅಪರಿಶೀಲನೆಯನ್ನು ಬಿಡುತ್ತಾನೆ. ವಿವಟ್ಟಾನುಪ್ಪಸ್ಸನ (ವಿಮುಖ) ಜ್ಞಾನದಿಂದ ಪರಿತ್ಯಜಿಸುತ್ತಾನೆ.
ಹಾಗೆಯೇ ಸೋತಪನ್ನನು ಸಕ್ಕಾಯದಿಟ್ಟಿ, ಶೀಲವ್ರತಗಳಿಗೆ ಅಂಟುವಿಕೆ ಮತ್ತು ಸಂದೇಹದಿಂದ ಮುಕ್ತನಾಗುತ್ತಾನೆ. ಸಕದಾಗಾಮಿಯು ಇವುಗಳ ಜೊತೆಗೆ ರಾಗ ಮತ್ತು ದ್ವೇಷಗಳನ್ನು ದುರ್ಬಲಗೊಳಿಸುತ್ತಾನೆ. ಅನಾಗಾಮಿಯು ಪೂರ್ಣವಾಗಿ ರಾಗ-ದ್ವೇಷದಿಂದ ಮುಕ್ತನಾಗುತ್ತಾನೆ. ಅರಹಂತರು ಮಿಕ್ಕ ಬಂಧನಗಳಾದ ರೂಪರಾಗ, ಅರೂಪರಾಗ, ಅವಿಶ್ರಾಂತಿ, ಅಹಂಕಾರ, ಅಜ್ಞಾನದಿಂದ ಮುಕ್ತರಾಗುತ್ತಾರೆ. ಈ ಹಂತದವರೆಗೂ ತೊರೆಯುವಿಕೆ, ಮಾಡದೆ ಇರುವಿಕೆ, ಸಂಕಲ್ಪ, ನಿಗ್ರಹ, ಅನುಲ್ಲಂಘನ ಶೀಲಗಳ ಪಾತ್ರ ಇದ್ದೇ ಇರುತ್ತದೆ.
ಶೀಲಗಳು ಚಿತ್ತದಲ್ಲಿ ಪಶ್ಚಾತ್ತಾಪವನ್ನುಂಟುಮಾಡುವುದಿಲ್ಲ. ಶೀಲಗಳು ಈ ಎಲ್ಲಾ ಸ್ಥಿತಿಗಳಿಗೆ ಕೊಂಡೊಯುತ್ತವೆ ಅವೆಂದರೆ: ಆನಂದದೆಡೆಗೆ, ಸುಖದೆಡೆಗೆ, ಪ್ರಶಾಂತತೆಯೆಡೆಗೆ, ಖ್ಯಾತಿಯೆಡೆಗೆ, ಅಭಿವೃದ್ಧಿಯೆಡೆಗೆ, ಸುಸಂಸ್ಕಾರದೆಡೆಗೆ, ಸುಂದರತೆಯೆಡೆಗೆ, ಸಮಾಧಿಯೆಡೆಗೆ, ಪೂರ್ಣತೆಯೆಡೆಗೆ, ವಿರಾಗದೆಡೆಗೆ, ಮರೆಯುವಿಕೆಯ ಜ್ಞಾನದೆಡೆಗೆ, ನಿರೋಧದೆಡೆಗೆ, ಶಾಂತಿಯೆಡೆಗೆ, ಅಭಿಜ್ಞಾದೆಡೆಗೆ, ಸಂಬೋಧಿಯೆಡೆಗೆ ಮತ್ತು ನಿಬ್ಬಾಣದೆಡೆಗೆ ಕರೆದೊಯ್ಯುತ್ತದೆ.
ಇದೇರೀತಿಯಲ್ಲಿ ಸಂಯಮಶೀಲ, ಚೇತನಶೀಲ, ನಿಗ್ರಹಶೀಲ ಮತ್ತು ಅನುಲ್ಲಂಘನಾ ಶೀಲವನ್ನು ಈ ಎಲ್ಲಾ ರೀತಿಯಲ್ಲಿ ಸಾಗುವುದನ್ನು ಚಿಂತನೆ ಮಾಡಬೇಕು.
ಇಲ್ಲಿಯವರೆಗೆ ಶೀಲ, ಯತಾರ್ಥದಲ್ಲಿ ಶೀಲ, ಶೀಲದ ಲಕ್ಷಣ, ಕ್ರಿಯೆ, ವ್ಯಕ್ತತೆ, ತತಕ್ಷಣದ ಕಾರಣ, ಮಹತ್ತರ ಲಾಭಗಳು, ಶೀಲಗಳ ವಿಧಗಳು ಇವೆಲ್ಲವೂ ವಿವರಿಸಲಾಗಿದೆ.

ಶೀಲದ ಮಾಲಿನ್ಯ

ಇಲ್ಲಿ ಶೀಲದ ಉಲ್ಲಂಘನೆಯೇ ಮಾಲಿನ್ಯ ಹಾಗು ಶೀಲಭಂಗವಾಗದಿರುವಿಕೆಯೇ ಅದರ ವಿಶುದ್ಧಿಯಾಗಿದೆ. ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು: ಈಗ ವಿಸ್ತ್ರತವಾಗಿ ಹೇಳುವುದಾದರೆ ಲಾಭಗಳಿಕೆಯ, ಕೀತರ್ಿಯ ಅಥವಾ ಕಾಮದ ಕಾರಣದಿಂದಾಗಿ ಶೀಲ ಉಲ್ಲಂಘನೆಯಾಗುವುದು. ಹಾಗೇ ಆಗದಿದ್ದರೆ ಶೀಲವಿಶುದ್ಧಿ ಎನಿಸುತ್ತದೆ. ಉದಾಹರಣೆಗೆ: ಭಿಕ್ಖುವು ತನ್ನ ಶೀಲವನ್ನು ಆರಂಭದಲ್ಲಿ ಅಥವಾ ಅಂತ್ಯದಲ್ಲಿ ಭಂಗ ಮಾಡಿದರೆ ಬಟ್ಟೆಯ ಅಂಚು ಹರಿದಂತೆ ಆತನ ಶೀಲವು ಭಂಗವಾಗಿ ಭಂಗಶೀಲ ಎನಿಸಿಕೊಳ್ಳುತ್ತದೆ. ಶೀಲವನ್ನು ಮಧ್ಯದಲ್ಲಿ ಭಂಗ ಮಾಡಿದರೆ ಆತನ ಶೀಲವು ಛಿದ್ರಶೀಲ ಎನಿಸಿಕೊಳ್ಳುತ್ತದೆ (ಬಟ್ಟೆಯ ಮಧ್ಯಭಾಗವು ರಂಧ್ರ ಮಾಡಿದಂತೆ). ಆತನು ಶೀಲವನ್ನು ಎರಡುಬಾರಿ, ಮೂರುಬಾರಿ, ನಾಲ್ಕುಬಾರಿ ಪುನರಾವತರ್ಿಸಿದರೆ ಆತನ ಶೀಲವನ್ನು ಕಳಂಕಿತ ಶೀಲ ಎನ್ನುತ್ತಾರೆ (ಹಸುವಿಗೆ ಕರಿಯ ಅಥವಾ ಕೆಂಪು ವರ್ಣದ ಮಚ್ಚೆಗಳಿರುವ ಹಾಗೆ). ಆತನು ಅನೇಕಬಾರಿ ಲೆಕ್ಕ ಸಿಗದಷ್ಟು ಬಾರಿ ಶೀಲ ಉಲ್ಲಂಘನೆ ಮಾಡಿದರೆ ಮಾಲಿನ್ಯ ಶೀಲವೆಂದು ಕರೆಯುತ್ತಾರೆ (ಹಸುವಿಗೆ ದೇಹದಲ್ಲೆಲ್ಲಾ ಮಚ್ಚೆಗಳಿರುವಂತೆ). ಹೀಗೆ ಒಟ್ಟಾರೆ ಭಂಗಶೀಲ, ಛಿದ್ರಶೀಲ, ಕಳಂಕಿತ ಶೀಲ, ಮಾಲಿನ್ಯ ಶೀಲ ಎಂಬ ನಾಲ್ಕು ವಿಧಗಳಿವೆ.

ಬ್ರಹ್ಮಚರ್ಯೆ: 

ಏಳು ಹಂತದ ಬ್ರಹ್ಮಚರ್ಯವನ್ನು ಭಗವಾನರು ತಿಳಿಸಿದ್ದಾರೆ. ಈ ಏಳು ಹಂತದಲ್ಲಿಯೂ ಕಾಮುಕತೆಗೆ ಸಿಲುಕದಿದ್ದರೆ ಮಾತ್ರ ಅವರ ಬ್ರಹ್ಮಚರ್ಯೆಯು ಪೂರ್ಣವಾಗಿರುತ್ತದೆ. ಇದನ್ನು ಕುರಿತು ಭಗವಾನರು ಹೀಗೆ ನುಡಿದಿದ್ದಾರೆ: ಇಲ್ಲಿ ಬ್ರಾಹ್ಮಣನು, ಋಷಿಯ ಅಥವಾ ಶ್ರಾವಕನು ತಾನು ಬ್ರಹ್ಮಚಾರಿಯೆಂದು ಘೋಷಿಸಬಹುದು. ಆತನು ಸ್ತ್ರೀಯೊಂದಿಗೆ ಮೈಥುನಾದಿಗಳನ್ನು ಮಾಡದಿರಬಹುದು, ಆದರೂ ಸಹಾ ಆತನು ಸ್ತ್ರೀಯರಿಂದ ಮರ್ದನ, ಕೈಚಳಕ, ಸ್ನಾನ, ಮೈ ಉಜ್ಜಿಸಿಕೊಳ್ಳುವುದು ಮಾಡಿದರೆ, ಅಂತಹುದನ್ನು ಒಪ್ಪಿದರೆ ಅಂತಹುದರಲ್ಲಿ ಆನಂದಿಸಿದರೆ ಅದು ಶೀಲಭಂಗವಾಗುತ್ತದೆ. ಛಿದ್ರಶೀಲ, ಕಳಂಕಿತ ಶೀಲ, ಮಾಲಿನ್ಯ ಶೀಲವಾಗುತ್ತದೆ. ಆತನದು ಶುದ್ಧ ಜೀವನವೆಂದು ಹೇಳಿಕೊಂಡರೂ ಅದು ಮಲಿನತೆಯಿಂದಲೇ ಕೂಡಿರುತ್ತದೆ.
ಇನ್ನೊಂದು ವರ್ಗದ ಬ್ರಾಹ್ಮಣರು, ಋಷಿಗಳು ಹಾಗು ಶ್ರಾವಕರು ಈ ಮೇಲಿನ ಕ್ರಿಯೆಯನ್ನು ಒಪ್ಪಲಾರರು. ಆದರೂ ಸಹಾ ಅವರು ಸ್ತ್ರೀಯರೊಂದಿಗೆ ಹಾಸ್ಯ, ಆಟ (ನಾಟಕ) ಮೋದಗಳಲ್ಲಿ ತೊಡಗುತ್ತಾರೆ. ಇದೂ ಸಹಾ ಬ್ರಹ್ಮಚರ್ಯೆಯ ಉಲ್ಲಂಘನೆಯೇ ಆಗಿದೆ.
ಇನ್ನೊಂದು ವರ್ಗದ ಬ್ರಾಹ್ಮಣರು, ಋಷಿಗಳು ಹಾಗು ಶ್ರಾವಕರಿದ್ದಾರೆ. ಅವರು ಈ ಮೇಲಿನ ಕಳಂಕವನ್ನು ಒಪ್ಪಲಾರರು. ಆದರೂ ಸಹ ಅವರು ಸ್ತ್ರೀಯರನ್ನು ನೋಡುವುದು, ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಮಾಡುತ್ತಾರೆ. ಇದು ಸಹಾ ಬ್ರಹ್ಮಚರ್ಯೆಯ ಉಲ್ಲಂಘನೆಯಾಗಿದೆ.
ಇನ್ನೊಂದು ವರ್ಗದ ಬ್ರಾಹ್ಮಣರು, ಋಷಿಗಳು ಹಾಗು ಶ್ರಾವಕರಿದ್ದಾರೆ. ಅವರು ಈ ಮೇಲಿನ ಕಳಂಕಗಳನ್ನು ಆಚರಿಸಲು ಒಪ್ಪಲಾರರು. ಆದರೂ ಸ್ತ್ರೀಯ ಧ್ವನಿಯನ್ನು ಆಲಿಸಲು ಅಪೇಕ್ಷಿಸುತ್ತಾರೆ, ಸ್ತ್ರೀಯ ಧ್ವನಿ, ಸ್ತ್ರೀಯ ನಗು, ಸ್ತ್ರೀಯ ಮಾತುಕತೆ, ಸ್ತ್ರೀಯ ಅಳು, ಸ್ತ್ರೀಯ ಹಾಡುಗಳು ಕೇಳಲು ಇಷ್ಟಪಟ್ಟು ಗೋಡೆಗೆ, ಪೊದೆಗಳಿಗೆ ಕಿವಿಗೊಡುತ್ತಾರೆ. ಇದೂ ಸಹಾ ಬ್ರಹ್ಮಚರ್ಯೆಯ ಉಲ್ಲಂಘನೆಯಾಗಿದೆ.
ಇನ್ನೊಂದು ವರ್ಗದ ಬ್ರಾಹ್ಮಣರು, ಋಷಿಗಳು ಹಾಗು ಶ್ರಾವಕರಿದ್ದಾರೆ. ಅವರು ಈ ಮೇಲಿನ ಕಳಂಕಗಳನ್ನು ಆಚರಿಸಲು ಒಪ್ಪಲಾರರು. ಆದರೂ ಸಹಾ ಮನಸ್ಸಿನಲ್ಲೇ ಸ್ತ್ರೀಯರೊಂದಿಗೆ ಹಿಂದೆ ಕಳೆದಂತಹ ಆಟಗಳು, ಮಾತುಕತೆ, ನಗು ಮುಂತಾದವನ್ನು ನೆನಪಿಸಿಕೊಂಡು ಆನಂದಿಸುತ್ತಾರೆ. ಇದೂ ಸಹ ಬ್ರಹ್ಮಚರ್ಯೆಯ ಉಲ್ಲಂಘನೆಯಾಗಿದೆ.
ಇನ್ನೊಂದು ವರ್ಗದ ಬ್ರಾಹ್ಮಣರು, ಋಷಿಗಳು ಹಾಗು ಶ್ರಾವಕರಿದ್ದಾರೆ. ಅವರು ಈ ಮೇಲಿನ ತಪ್ಪುಗಳನ್ನು ಮಾಡಲು ಒಪ್ಪಲಾರರು. ಆದರೂ ಸಹಾ ಅವರು ಗೃಹಸ್ಥರ, ಸ್ತ್ರೀಪುರುಷರ ಜೀವನವನ್ನು ಗಮನಿಸುತ್ತಿರುತ್ತಾರೆ. ಅವರು ಐದು ಬಗೆಯ ಇಂದ್ರಿಯಗಳಲ್ಲಿ ಆನಂದವಾಗಿರುವುದನ್ನು ನೋಡುವುದಕ್ಕೆ ತಪ್ಪು ಎಂದು ಭಾವಿಸದೆ ಅದರಲ್ಲಿ ತಲ್ಲೀನರಾಗುತ್ತಾರೆ. ಇದೂ ಸಹಾ ಬ್ರಹ್ಮಚರ್ಯೆಯ ಉಲ್ಲಂಘನೆಯಾಗಿದೆ.
ಇನ್ನೊಂದು ವರ್ಗದ ಬ್ರಾಹ್ಮಣರು, ಋಷಿಗಳು ಹಾಗು ಶ್ರಾವಕರಿದ್ದಾರೆ. ಅವರು ಈ ಮೇಲಿನ ಯಾವುದನ್ನೂ ಒಪ್ಪಲಾರರು. ಆದರೂ ಸಹಾ ಈ ಬ್ರಹ್ಮಚರ್ಯೆಯ ಫಲದಿಂದ, ಶೀಲಗಳ ಫಲದಿಂದಾಗಿ ದೇವ, ದೇವತೆಯಾಗಲು ಬಯಸುತ್ತಾರೆ. ಹೀಗಾಗಲು ಆನಂದಿಸಿ, ಸಂಕಲ್ಪಿಸಿ, ಸಂಸ್ಕಾರಗಳನ್ನು ಆಚರಿಸುತ್ತಾರೆ. ಇದು ಸಹಾ ಬ್ರಹ್ಮಚರ್ಯದ ಭಂಗವಾಗಿದೆ.
ಈ ಏಳು ಹಂತಗಳಲ್ಲೂ ಸಿಲುಕದವರೇ ಬ್ರಹ್ಮಚಾರಿಗಳು.

ಶೀಲವಿಶುದ್ಧಿ

ಬ್ರಹ್ಮಚರ್ಯ ಅಷ್ಟೇ ಅಲ್ಲದೆ, ತಾನು ಪಾಲಿಸುವ ಪ್ರತಿ ಶೀಲವನ್ನು ಉಲ್ಲಂಘಿಸಬಾರದು, ಮುರಿಯಬಾರದು. ಇತರ ಕಲ್ಮಶಗಳಾದ ಕೋಪ, ಶತೃತ್ವ, ಅವಿಧೇಯತೆ, ದೌರ್ಜನ್ಯ, ಅಸೂಯೆ, ಲೋಭ, ಮೋಸ, ಕಪಟತನ, ಹಠಮಾರಿತನ, ದುರಹಂಕಾರ, ಅಹಂಕಾರ, ಗರ್ವ, ಒಣಹೆಮ್ಮೆ, ಅಲಕ್ಷ್ಯ ಮುಂತಾದವುಗಳನ್ನು ಮತ್ತೆ ಹುಟ್ಟದಂತೆ ಮಾಡಬೇಕು. ಯಾವಾಗ ಶೀಲಗಳು ಲಾಭ, ಕಾಮ ಇತ್ಯಾದಿ ಉದ್ದೇಶಗಳಿಗೆ ಭಂಗವಾಗವುದಿಲ್ಲವೋ, ಛಿದ್ರವಾಗುವುದಿಲ್ಲವೋ, ಕಳಂಕಿತವಾಗುವುದಿಲ್ಲವೋ, ಮಲಿನವಾಗುವುದಿಲ್ಲವೋ ಆಗ ಅವು ಅಭಂಗ ಶೀಲವಾಗುತ್ತವೆ. ಅಂತಹ ಶೀಲವು ವಿಮುಕ್ತಿಯೆಡೆಗೆ ಕರೆದೊಯ್ಯುತ್ತದೆ, ಜ್ಞಾನಿಗಳಿಂದ ಪ್ರಶಂಸಿತವಾಗುತ್ತವೆ, ಅಂಟಿಕೊಳ್ಳುವಿಕೆಯಿಂದ ಅಂಟದ ಸ್ಥಿತಿಗೆ ಕರೆದೊಯ್ಯತ್ತವೆ, ಸಮಾಧಿಗೆ ಸಹಾಯ ಮಾಡುತ್ತವೆ. ಹೀಗೆ ಇವು ಶೀಲವಿಶುದ್ಧಿ ಎನಿಸಿಕೊಳ್ಳುತ್ತದೆ.
ಶೀಲವಿಶುದ್ಧಿಯು ಎರಡು ವಿಧವಾಗಿದೆ: 1. ಶೀಲದ ಸೋಲಿನಿಂದ ಇರುವ ಅಪಾಯವನ್ನು ಗಮನಿಸುತ್ತಾ ಶೀಲಪಾಲನೆ. 2. ಶೀಲದ ಪೂರ್ಣ ಲಾಭವನ್ನು ಗಮನಿಸುತ್ತಾ ಶೀಲಪಾಲನೆ.
ಶೀಲದ ಸೋಲಿನಿಂದ (ಭಂಗದಿಂದ) ಇರುವ ಅಪಾಯ:
* ದುಶ್ಶೀಲನು ದೇವತೆಗಳಿಂದ ಹಾಗು ಮಾನವರಿಂದ ಕೀಳಾಗಿ ಕಾಣಲ್ಪಡುತ್ತಾನೆ.
* ಸಹ ಸಾಧಕರಿಂದ ಶಿಕ್ಷಣ ಪಡೆಯಲಾರ.
* ಆತನನ್ನು ನಿಷೇಧಿಸಿದಾಗ ಹಾಗು ಶೀಲವಂತನನ್ನು ಹೊಗಳಿದಾಗ ಪಶ್ಚಾತ್ತಾಪಪಡುತ್ತಾನೆ.
* ಗೋಣಿಚೀಲದಂತೆ ಕುರೂಪಿಯಾಗಿ ಕಾಣುತ್ತಾನೆ.
* ಆತನ ಸಹವಾಸಿಗಳು ದುಃಖಕ್ಕೆ ಒಳಗಾಗುತ್ತಾರೆ.
* ಆತನು ಅನರ್ಹ, ಆತನಿಗೆ ನೀಡಿದ ದಾನಕ್ಕೆ ಮಹತ್ಫಲವಿಲ್ಲ.
* ಹಲವಾರು ವರ್ಷದ ಕೊಳಕು ಗುಂಡಿಯಂತೆ ಆತನ ಶುದ್ಧಿ ಕಷ್ಟಕರ.
* ಚಿತೆಯಿಲ್ಲದ ಮರದ ತುಂಡಿನಂತೆ ನಿಷ್ಫಲ.
* ಆತನು ಭಿಕ್ಖು ಹಾಗು ಉಪಾಸಕರಿಂದ ದೂರ.
* ದುಶ್ಶೀಲನು ಭಿಕ್ಖುವಾಗಿದ್ದರೂ ಹಸುಗಳ ಗುಂಪಿನಲ್ಲಿ ಹಿಂಬಾಲಿಸುವ ಕತ್ತೆಯಂತೆ.
* ಪ್ರತಿಯೊಬ್ಬರಿಗೂ ಶತ್ರುವಿನಂತೆ ಸದಾ ಭುಸುಗುಟ್ಟುತ್ತಿರುತ್ತಾನೆ.
* ಆತನಲ್ಲಿ ಕಲಿಕೆಯಂತಹ ಉತ್ತಮ ಗುಣಗಳಿದ್ದರೂ ಸಹಾ ಪಶುವಿನ ಶವದಂತೆ ವಾಸಕ್ಕೆ ಅಯೋಗ್ಯನಾಗಿರುತ್ತಾನೆ.
* ಸ್ಮಶಾನದ ಅಗ್ನಿಯಂತೆ ಗೌರವಕ್ಕೂ ಅನರ್ಹನಾಗುತ್ತಾನೆ.
* ಫಲಪ್ರಾಪ್ತಿ ಅಥವಾ ಸಮಾಧಿ ಪ್ರಾಪ್ತಿಗೆ ಅಸಮರ್ಥನಾಗುತ್ತಾನೆ.
* ಸುಖವಾಗಿರುವಂತೆ ಕಂಡರೂ ದುಃಖದಲ್ಲಿರುತ್ತಾನೆ.

ಭಿಕ್ಷುಗಳ ಶೀಲ ಉಲ್ಲಂಘನೆ ನರಕಸದೃಶ

ಭಿಕ್ಖುಗಳೇ, ನೀವು ಈ ಅಗ್ನಿರಾಶಿಯು ಉರಿಯುತ್ತಿರುವುದು ನೋಡುತ್ತಿರುವಿರಿ ಅಲ್ಲವೇ? ಹೌದು ಭಂತೆ.
ಭಿಕ್ಖುಗಳೇ, ಇದರ ಬಗ್ಗೆ ಹೇಗೆ ಯೋಚಿಸುವಿರಿ, ಇವುಗಳಲ್ಲಿ ಯಾವುದು ಉತ್ತಮ. ಅಂದರೆ ಒಬ್ಬನು ಅಗ್ನಿರಾಶಿಯನ್ನು ಆಲಂಗಿಸಿಕೊಳ್ಳುವುದು, ಅದರಲ್ಲಿ ಕುಳಿತುಕೊಳ್ಳುವುದು, ಅದರೊಂದಿಗೆ ಮಲಗುವುದು ಉತ್ತಮವೋ ಅಥವಾ ಕ್ಷತ್ರಿಯ ಕನ್ಯೆಯೊಂದಿಗೆ, ಬ್ರಾಹ್ಮಣ, ಗೃಹಸ್ಥರ ಕನ್ಯೆಯೊಂದಿಗೆ ಹಾಗೆ ಮಾಡುವುದು ಉತ್ತಮವೋ?
ಭಂತೆ, ಕನ್ಯೆಯೊಂದಿಗೆ ಹಾಗೆ ಮಾಡುವುದೇ ಉತ್ತಮ ಹೊರತು ಅಗ್ನಿರಾಶಿಯೊಂದಿಗೆ ಹಾಗೆ ಮಾಡಿದರೆ ಅಪಾರ ನೋವು ದುಃಖವಾಗುವುದು.
ಭಿಕ್ಖುಗಳೇ, ನಾನು ನಿಮಗೆ ಹೇಳುತ್ತಿದ್ದೇನೆ, ಘೋಷಿಸುತ್ತಿದ್ದೇನೆ ಇಲ್ಲಿ ಒಬ್ಬನು ಪಬ್ಬಜ್ಜ ಸ್ವೀಕರಿಸಿದರೂ ಸಹಾ ದುಶ್ಶೀಲನಾಗಿ, ಸಂದೇಹಾಸ್ಪದ ಚಾರಿತ್ರ್ಯದವನಾಗಿ, ರಹಸ್ಯದಲ್ಲಿ ಪಾಪ ಮಾಡುವವನಾಗಿ ಭಿಕ್ಖು ಅಲ್ಲದಿದ್ದರೂ ಭಿಕ್ಖು ಎಂದು ಘೋಷಿಸುವವನಾಗಿದ್ದು, ಪರಿಶುದ್ಧ ಜೀವನವನ್ನು ಆಚರಿಸದೆ, ಒಳಗೆ ಕೊಳೆತಂಥವನಾಗಿ, ಕಾಮುಕನಾಗಿ, ಪೂರ್ಣ ಭ್ರಷ್ಟನಾಗಿದ್ದಂತಹವನು, ಅಗ್ನಿರಾಶಿಯಲ್ಲಿ ಕುಳಿತರೆ, ಮಲಗಿದರೆ, ಆಲಂಗಿಸಿದರೆ ಆತನು ಮರಣಾಂತಿಕವಾದ ಉರಿಯನ್ನು, ನೋವುಗಳನ್ನು ಅನುಭವಿಸುತ್ತಾನೆ. ಆತನಿಗೆ ಸಾವು ಸಂಭವಿಸಿದರೆ ಮರಣದ ನಂತರ ದುರ್ಗತಿ ಸಿಗಬಹುದು, ನರಕವೂ ಸಿಗಬಹುದು. ಆದರೆ ಅದೇ ಭಿಕ್ಷುವು ಕ್ಷತ್ರಿಯ, ಬ್ರಾಹ್ಮಣ ಗೃಹಸ್ಥರ ಕನ್ಯೆಯೊಂದಿಗೆ ಮಲಗಿದಾಗ, ಕುಳಿತಾಗ, ಆಲಂಗಿಸಿಕೊಂಡಾಗ ಆತನಿಗೆ ಈ ಹಿಂಸೆಗಿಂತಲೂ ಹೆಚ್ಚಿನ ಹಾನಿಯು ಮರಣದ ನಂತರ ಸಿಗುವುದು. ಅವನು ದುರ್ಗತಿಯಲ್ಲಿ ನರಕದಲ್ಲಿ ಅತಿಯಾಗಿ ದುಃಖಕ್ಕೆ ಒಳಗಾಗುತ್ತಾನೆ.
ಹೀಗೆ ಭಗವಾನರು ಮೇಲಿನ ಸಾಮ್ಯತೆ ನೀಡಿ ಭಿಕ್ಖುವಿಗೆ ಐದು ಬಗೆಯ ಕಾಮಸುಖಗಳು ಅಗ್ನಿರಾಶಿಗಿಂತಲೂ ಭೀಕರವೆಂದು ತಿಳಿಸಿ, ಅದೇರೀತಿಯಾಗಿ ಇತರ ಸಾಮ್ಯತೆಗಳನ್ನು ಹೀಗೆ ನೀಡಿದ್ದಾರೆ.
ಭಿಕ್ಷುಗಳೇ, ಕುದುರೆಯ ಕೂದಲಿನಿಂದ ಹಗ್ಗವನ್ನು ಕಾಲಿಗೆ ಕಟ್ಟಿ ಅದನ್ನು ಬಿಗಿಯಾಗಿಸುತ್ತಾ ಹೋದಂತೆ ಅದು ಚರ್ಮವನ್ನು, ಒಳಚರ್ಮವನ್ನು, ಮಾಂಸವನ್ನು, ಸ್ನಾಯುವನ್ನು, ಮೂಳೆಗಳನ್ನು, ಅಸ್ಥಿಮಚ್ಚೆಯನ್ನು ಕತ್ತರಿಸಿಹಾಕುವುದು ಅದು ಉತ್ತಮವೋ ಅಥವಾ ಮಹಾ ಕ್ಷತ್ರಿಯರ, ಮಹಾ ಬ್ರಾಹ್ಮಣರ ಅಥವಾ ಮಹಾ ಗೃಹಸ್ಥರಿಂದ ದುಶ್ಶೀಲನಾಗಿಯೂ ವಂದಿಸಲ್ಪಡುವುದು ಉತ್ತಮವೋ?
ಹಾಗೇ ಇದರಲ್ಲಿ ಯಾವುದು ಉತ್ತಮ ಭಿಕ್ಷುಗಳೇ? ಹರಿತವಾದ ಈಟಿಗೆ ಎದೆಯೊಡ್ಡುವುದೋ? ಅಥವಾ ಕ್ಷತ್ರಿಯ, ಬ್ರಾಹ್ಮಣ, ಗೃಹಸ್ಥರಿಂದ ದುಶ್ಶೀಲನಾಗಿಯೂ ಗೌರವಯುತವಾಗಿ ವಂದಿಸಲ್ಪಡುವುದು ಉತ್ತಮವೋ?
ಭಿಕ್ಷುಗಳೇ, ಕೆಂಪಗೆ ಕಾದ ಕಬ್ಬಿಣದ ಹಾಳೆಗಿಂದ ಬಲವಂತವಾಗಿ ದೇಹವು ಸುತ್ತುವರಿಸ್ಪಡುವುದು ಉತ್ತಮವೋ ಅಥವಾ ದುಶ್ಶೀಲನಾಗಿ ಕ್ಷತ್ರಿಯರ, ಬ್ರಾಹ್ಮಣರ, ಗೃಹಸ್ಥರ ಚೀವರಾದಿಗಳನ್ನು ಸ್ವೀಕರಿಸುವುದು ಉತ್ತಮವೋ?
ಭಿಕ್ಷುಗಳೇ, ಕೆಂಪಗೆ ಕಾದ ಇಕ್ಕಳದಿಂದ ಬಾಯ್ತೆರೆದು ಅದರಲ್ಲಿ ಕೆಂಪಗೆ ಕಾದ ಕಬ್ಬಿಣದ ಚೆಂಡುಗಳನ್ನು ಬಾಯಿಯಲ್ಲಿ ಬಲವಂತವಾಗಿ ಹಾಕಲ್ಪಡುವುದು ಉತ್ತಮವೋ ಅಥವಾ ದುಶ್ಶೀಲನಾಗಿಯೂ ಪಿಂಡಪಾತವನ್ನು (ಆಹಾರವನ್ನು) ಸ್ವೀಕರಿಸುವುದು ಉತ್ತಮವೋ?
ಭಿಕ್ಷುಗಳೇ, ಬಲವಂತವಾಗಿ ಕೆಂಪಗೆ ಕಾಯ್ದ ಕಬ್ಬಿಣದ ಮಂಚದಲ್ಲಿ ಮಲಗುವುದೋ ಅಥವಾ ಮಹಾ ಕ್ಷತ್ರಿಯರಿಂದ, ಮಹಾ ಬ್ರಾಹ್ಮಣರಿಂದ, ಗೃಹಸ್ಥರಿಂದ ಹಾಸಿಗೆ ಪೀಠಗಳನ್ನು ದುಶ್ಶೀಲನಾಗಿಯೂ ಸ್ವೀಕರಿಸುವುದು ಉತ್ತಮವೋ?
ಮತ್ತೆ ಭಿಕ್ಷುಗಳೇ, ತಲೆಕೆಳಕಾಗಿ ಕಟ್ಟಲ್ಪಟ್ಟು ಕೆಂಪಗೆ ಕಾದ ಲೋಹದ ಹಂಡೆಯೊಳಕ್ಕೆ ಮುಳುಗಿಸಿ ಬೇಯಿಸಲ್ಪಡುವುದು ಉತ್ತಮವೋ ಅಥವಾ ದುಶ್ಶೀಲನಾಗಿ, ಕ್ಷತ್ರಿಯರು, ಬ್ರಾಹ್ಮಣರು, ಗೃಹಸ್ಥರು ನೀಡಿದ ವಾಸಸ್ಥಳದಲ್ಲಿ ವಾಸಿಸುವುದು ಉತ್ತಮವೋ?
ಭಗವಾನರು ಅದಕ್ಕೆಲ್ಲಾ ಉತ್ತರವಾಗಿ ಈ ಗಾಥೆಗಳನ್ನು ಹೀಗೆ ನುಡಿದರು:
ಅಗ್ನಿಯ ರಾಶಿಯ ಆಲಂಗನಕ್ಕಿಂತಲೂ ಭೀಕರವಾದ ಉರಿನೋವನ್ನು
ಇಂದ್ರಿಯ ಸುಖಗಳಲ್ಲಿ ತಲ್ಲೀನನಾದರೆ ಸಿಗುವುದು ಭಿನ್ನಶೀಲನಿಗೆ (ದುಶ್ಶೀಲನಿಗೆ)
ಇದು ಯಾವ ಸುಖವೋ.
ಕುದುರೆಯ ಕೂದಲಿನಿಂದ ತಯಾರಿಸಿದ
ಹಗ್ಗದಿಂದ ಕಾಲುಗಳನ್ನು ಕತ್ತರಿಸಲ್ಪಡುವುಕ್ಕಿಂತಲೂ
ಹೆಚ್ಚಿನ ನೋವನ್ನು ಅನರ್ಹನಾಗಿ ವಂದನೆ ಸ್ವೀಕಾರದಲ್ಲಿ ಆಗುವುದು
ದುಶ್ಶೀಲನಿಗೆ ಇದು ಯಾವ ಸುಖವೋ.
ಕಾದ ಕಬ್ಬಿಣದ ಹಾಳೆಗಳಿಗಿಂತಲೂ ಹೆಚ್ಚಿನ ಹಾನಿಯು
ಅನರ್ಹನಾಗಿಯೂ ಚೀವರಗಳನ್ನು ಸ್ವೀಕರಿಸಿ ಧರಿಸಿದರೆ
ಆಗುವುದು ದುಶ್ಶೀಲನಿಗೆ ಇದು ಯಾವ ಸುಖವೋ.
ಸುಡುತ್ತಿರುವ ಬೆಂಕಿಯ ಗೋಳಗಳಿಗಿಂತಲೂ
ಹೆಚ್ಚಿನ ಹಾನಿ ಅನರ್ಹನಾಗಿಯು ಆಹಾರದ ರುಚಿ ಸವಿಯುತ್ತಿರುವವನಿಗೆ
ಆಗುವುದು ದುಶ್ಶೀಲನಿಗೆ ಇದು ಯಾವ ಸುಖವೋ.
ಕೆಂಪಗೆ ಕಾದ ಉರಿಯುತ್ತಿರುವ ಕಬ್ಬಿಣದ ಹಾಸಿಗೆಯಲ್ಲಿ
ಮಲಗಿಸಲ್ಪಟ್ಟವರ ದುಃಖಕ್ಕಿಂತಲೂ ಅಧಿಕವಾದ ದುಃಖವು
ಅನರ್ಹನಾಗಿಯೂ ಹಾಸಿಗೆ ಪೀಠಗಳನ್ನು ಬಳಸುತ್ತಿರುವವನಿಗೆ
ಆಗುವುದು ದುಶ್ಶೀಲನಿಗೆ ಇದು ಯಾವ ಸುಖವೋ?
ತಲೆಕೆಳಕಾಗಿ ನೇತಾಡಿಸುತ್ತಾ ಉರಿಯುತ್ತಿರುವ
ಕಬ್ಬಿಣದ ಹಂಡೆಯಲ್ಲಿ ಬೇಯಿಸಲ್ಪಡುವುದಕ್ಕಿಂತ ಭೀಕರವಾದ ನೋವು ದುಃಖವು
ಅನರ್ಹನಾಗಿಯೂ ದಾನದ ವಾಸಸ್ಥಳದಲ್ಲಿ ನೆಲೆಸುವವನಿಗೆ
ಆಗುವುದು ದುಶ್ಶೀಲನಿಗೆ ಇದು ಯಾವ ಸುಖವೋ?
ಸರ್ವಲೋಕಗಳ ಶಾಸ್ತರು ಅಂತಹ ದುಶ್ಶೀಲನಿಗೆ ಹೀಗೆ ಖಂಡಿಸುವರು:
ಸಂದೇಹಾಸ್ಪದ ಚಟುವಟಿಕೆಯವನು, ಪೂರ್ಣ ಭ್ರಷ್ಟನು, ಕಾಮುಕನು
ದುಷ್ಟ ಸ್ವಭಾವಿಗಳು, ಆಂತರ್ಯದಲ್ಲಿ ಕೊಳೆತಂಥವರು ಎಂದು.
ಅಂತಹವನ ಜೀವಿತಕ್ಕೆ ಧಿಕ್ಕಾರವಿರಲಿ,
ಯಾರು ನಿಯಂತ್ರಣವಿಲ್ಲದವನೋ,
ಭಿಕ್ಖು ವೇಷಧಾರಿಯಾಗಿದ್ದು, ಹಾಗಿಲ್ಲವೋ;
ಅಂತಹವನು ಸ್ವಯಂ ತನ್ನ ಹಾನಿ ಅಗಾಧವಾಗಿ ಮಾಡಿಕೊಂಡಿದ್ದಾನೆ.
ಅವನು ಎಂತಹ ವ್ಯಕ್ತಿಯೇ ಆಗಿರಲಿ
ಶೀಲದಿಂದಲೇ ಆತನ ಗೌರವ
ಹೇಗೆ ಆತನು ಜೀವಿಸುತ್ತಿರುವನು ?!
ಮೇಲೆ ಚೆನ್ನಾಗಿದ್ದು ಸಹಾ ಉಲ್ಲಂಘನೆ ಮಾಡುವವನಾದರೆ
ಅವನಿಂದ ಶವದಂತೆ ಅಥವಾ ಸಗಣಿಯಂತೆ ದೂರವಿರಿ.
ದುಶ್ಶೀಲನು ಎಲ್ಲಾರೀತಿಯ ಭೀಕರತೆಗಳಿಂದ ಮುಕ್ತನಲ್ಲ,
ಆತನು ಮಾರ್ಗಫಲದಂತಹ ಪ್ರಾಪ್ತಿಗಳಿಂದ ಮೊದಲೇ ದೂರವಿದ್ದಾನೆ,
ಆತನಿಗೆ ಸುಗತಿಯ ದ್ವಾರಗಳು ಈಗಾಗಲೇ ಮುಚ್ಚಲ್ಪಟ್ಟಿದೆ
ಆತನು ನರಕದ ಹಾದಿಯಲ್ಲಿ ಚೆನ್ನಾಗಿ ನಡೆಯುತ್ತಿದ್ದಾನೆ.
ತನ್ನ ಕಾರ್ಯಗಳಿಂದಾಗಿ, ತನ್ನ ಶೀಲದ ಅಲಕ್ಷ್ಯದಿಂದಾಗಿ
ತೀವ್ರ ದೋಷಯುಕ್ತನಾಗಿರುವ ಆ ಶೀಲಭ್ರಷ್ಟನಿಗಿಂತ
ಹೆಚ್ಚಿನ ಪಾತ್ರರು ಕರುಣೆಗೆ ಇನ್ಯಾರು ?
ಶೀಲದ ಭಯದಿಂದಾಗಿ ಮುಂದೆ ಇರುವಂತಹ ಅಪಾಯಗಳನ್ನು ಹೀಗೆ ಪುನಃ ಅವಲೋಕಿಸಿ, ಶೀಲಭಂಗ ಆಗದಂತೆ ನೋಡಿಕೊಳ್ಳಿ; ಹಾಗೆಯೇ ಶೀಲದ ಮಹತ್ತರ ಲಾಭಗಳನ್ನು ಇವುಗಳಿಗೆ ವಿರುದ್ಧವಾಗಿ ಚಿಂತನೆ ಮಾಡಿ ಹೀಗೆ ಅರ್ಥಮಾಡಿಕೊಳ್ಳಿ.

ಶೀಲ ಪೂರ್ಣತೆಯ ಮಹತ್ತರತೆ

ಆತನ ಶೀಲವು ಪರಿಶುದ್ಧ
ಆತನು ಧರಿಸಿದಂತಹ ಚೀವರ ಹಾಗು ಪಿಂಡಪಾತ್ರೆ
ಆನಂದವನ್ನು ನೀಡುವುವು ಹಾಗು ನಂಬಿಕೆಯನ್ನು ವೃದ್ಧಿಸುವುವು;
ಆತನ ಪಬ್ಬಜ್ಜ ಸಫಲವಾಗುವುದು.
ಯಾವ ಭಿಕ್ಖುವು ಪರಿಶುದ್ಧನಾಗಿರುವನೋ,
ಆತನಿಗೆ ಸ್ವನಿಂದನಾ ಭಯ ಎಂದಿಗೂ ಇಲ್ಲ;
ನಿಜಕ್ಕೂ ಸೂರ್ಯನಲ್ಲಿ ಕತ್ತಲೆಯಿಲ್ಲ.
ಹೇಗೆ ಅಂತರಿಕ್ಷದಲ್ಲಿ ಚಂದಿರನು ಹೊಳೆಯುತ್ತಾನೋ
ಹಾಗೆಯೇ ಶೀಲದಿಂದಲೇ ಭಿಕ್ಖುವು ಪ್ರಕಾಶಗೊಳ್ಳುತ್ತಾನೆ;
ತಾನಿರುವ ತಾಪಸಿಕರ ತಾಣದಲ್ಲಿ ತೇಜಸ್ಸು ಮೂಡಿಸುತ್ತಾನೆ.
ಕೇವಲ ಶೀಲವಂತ ಭಿಕ್ಖುವಿನ ಗಂಧವೇ
ದೇವತೆಗಳಿಗೆ ಪ್ರಿಯವಾದರೆ
ಆತನ ಶೀಲದ ಗಂಧಕ್ಕೆ ಇನ್ನೇನನ್ನಬೇಕು?
ಜಗತ್ತಿನಲ್ಲಿರುವ ಎಲ್ಲಾ ಸುಗಂಧಗಳಿಗಿಂತ
ಪೂರ್ಣವೂ ಹಾಗು ಉತ್ಕೃಷ್ಟವಾದುವೆಂದರೆ
ಶೀಲ ಸುಗಂಧವೇ ಆಗಿದೆ; ಏಕೆಂದರೆ
ಇದು ಸರ್ವ ದಿಕ್ಕುಗಳಿಗೂ ವ್ಯಾಪಿಸುತ್ತದೆ.
ಶೀಲವಂತನ ಸುಕೃತ್ಯಗಳು ಅಲ್ಪವಾಗಿದ್ದರೂ
ಮಹಾ ಫಲಕಾರಿ, ಹೀಗಾಗಿಯೇ ಶೀಲವಂತ
ಗೌರವ ಹಾಗು ಖ್ಯಾತಿಗೆ ಪಾತ್ರನಾಗುತ್ತಾನೆ.
ಶೀಲವಂತನಿಗೆ ಅಲ್ಲಾಡಿಸುವಂತಹ
ಯಾವ ಆಸವಗಳು ಇಲ್ಲಿ ಈಗ ಇಲ್ಲ,
ಶೀಲವಂತನು ಮುಂದೆ ಬರುವಂತಹ
ದುಃಖಗಳ ಬೇರುಗಳನ್ನೇ ನಿಮರ್ುಲಗೊಳಿಸುತ್ತಾನೆ.
ಮಾನವರಲ್ಲಿನ ಸಂಪತ್ತಿ ಅಥವಾ ದೇವತೆಗಳ ಸಂಪದವಾಗಲಿ
ಸಮ್ಯಕ್ ಶೀಲವಂತನಿಗೆ ಇಚ್ಛಿಸಿದರೆ ಇವ್ಯಾವುದೂ ದುರ್ಲಭವಲ್ಲ.
ಯಾವಾಗ ಶೀಲವಂತಿಕೆ ಪೂರ್ಣವಾಗುವುದೋ
ಆತನ ಮನಸ್ಸು ನಿಬ್ಬಾಣದ ವಿನಃ ಬೇರಾವುದನ್ನೂ ಹುಡುಕಲಾರ;
ಏಕೆಂದರೆ ಅಲ್ಲೇ ಪರಮ ಶಾಂತಿ ಪಥವಿರುವುದು.
ಶೀಲಕ್ಕೆ ಅಂತಹ ಘನವಾದ ಧನ್ಯ ಫಲಗಳಿವೆ
ಇದರ ಎಲ್ಲ ರೂಪುಗಳನ್ನು ತೋರಿಸಲ್ಪಟ್ಟಿದೆ.
ಹೀಗಾಗಿ ಎಲ್ಲಾ ಲೋಕೋತ್ತರ ಸಂಪತ್ತುಗಳಿಗೆ
ಇದೇ ಮೂಲವೆಂದು ಪ್ರಾಜ್ಞನು ಚೆನ್ನಾಗಿ ತಿಳಿಯಲ್ಪಡಲಿ.
ಹೀಗೆ ಮನಃಪೂರ್ವಕವಾಗಿ ಯಾರು ಅರ್ಥ ಮಾಡಿಕೊಳ್ಳುತ್ತಾರೋ ಅವರು ಶೀಲದಲ್ಲಿ ಸೋಲಲು ನಡುಗುತ್ತಾರೆ. ಹಾಗು ಶೀಲ ಪರಿಪೂರ್ಣತೆಯೆಡೆಗೆ ತಲುಪುತ್ತಾರೆ. ಹೀಗಾಗಿ ಶೀಲವನ್ನು ಜೋಪಾನವಾಗಿ ಸ್ವಚ್ಛಗೊಳಿಸಲಿ, ಶೀಲ ಉಲ್ಲಂಘನೆಯ ಅಪಾಯ; ಶೀಲಪಾಲನೆಯ ಮಹತ್ವತೆ ಅರಿತು ಜೀವಿಸಲಿ.

ಸುಜನರ ಆನಂದಕ್ಕಾಗಿ ರಚಿಸಿರುವ ವಿಶುದ್ಧಿಮಗ್ಗದಲ್ಲಿರುವ
ಪ್ರಥಮ ಅಧ್ಯಾಯ ಶೀಲದ ವಿವರಣೆ ಇಲ್ಲಿಗೆ ಮುಗಿಯಿತು 

No comments:

Post a Comment